ರಂಗಭೂಮಿ ಒದ್ದಾಡಲಿಕತ್ತದ (ರಂಗ ಬಿರಂಗಿ)

ಅಂಕಣ ಮಾಡ್ಯಾರ
ಆಲ್ ದಿ ಬೆಸ್ಟ್, ರಾಶಿಚಕ್ರ, ಸಹಿ ರೀ ಸಹಿ, ಒಂದಾಟ ಭಟ್ಟರದು... ಮುಂತಾದ ನಗೆನಾಟಕಗಳನ್ನು ನಿರ್ದೇಶಿಸಿ, ನಟಿಸಿ ಕನ್ನಡ ನೋಡುಗರನ್ನು ನಗಿಸಿದ; ಐಡಿಯಾ ಮಾಡ್ಯಾರ, ರಾಮ ಶಾಮ ಭಾಮ ಚಿತ್ರದ ಮೂಲಕ ಉತ್ತಮ ಸಿನಿಮಾ ನಿರ್ದೇಶಕ, ಸಂಭಾಷಣೆಗಾರರಾಗಿಯೂ ನೆಲೆನಿಂತ ಯಶವಂತ ಸರದೇಶಪಾಂಡೆ ಈಗ ಅಂಕಣದ ಮೂಲಕ ನಿಮ್ಮನ್ನು ತಲುಪಲು ಐಡಿಯಾ ಮಾಡ್ಯಾರ. ಅವರ ರಂಗಬಿರಂಗಿ ಅಂಕಣ ಕನ್ನಡ ರಂಗಭೂಮಿಯ ಸ್ವಾರಸ್ಯಕರ ಕಥನಗಳು, ಚಿಂತನೆಗಳೊಂದಿಗೆ ನಿಮ್ಮ ಮುಂದೆ ಬರಲಿದೆ.
ಕರ್ನಾಟಕದಾಗ ನಾಟಕ ಮಾಡವರನ್ನ ಮಾತಾಡಿಸಿ ನೋಡ್ರಿ, ಭಾಳಾ ಭಯಂಕರ ಗೋಳಿನ ಕಥೆಗಳು ಕೇಳಲಿಕ್ಕೆ ಸಿಗತಾವ. 'ಎಂಥ ಚಂದ ನಾಟಕ ಆಡಿದರೂ ಉಪಯೋಗ ಇಲ್ಲರಿ, ಯಾಕಂದರ ನೋಡಾಕ ಜನಾನ ಬರುದಿಲ್ಲ' ಅಂತ ಒಬ್ಬರು ಹೇಳಿದರೆ... 'ಕಲಾವಿದರು ಎಲ್ಲಿ ಅದಾರ ಹೇಳ್ರಿ... ಎಲ್ಲರೂ ಟೀವ್ಯಾಗ ಮಿಂಚಬೇಕು ಅಂತಾರ, ಅದರಾಗ ಹೆಣ್ಣು ಪಾರ್ಟಿಗಂತೂ ಹುಡುಕಿ ಹುಡುಕಿ ಸಾಕಾಗಿ ಹೋಗೇತಿ... ಕಲಾವಿದರ ಇಲ್ಲರಿ' ಅಂತ ಇನ್ನೊಬ್ಬರ ಗೋಳು. ನಾವೆಲ್ಲ ಕ್ಲಾಸಿಕ್ ನಾಟಕಾನ ಆಡೋಣ ಅಂತೇವಿ. ಆದರ ವ್ಯವಸ್ಥಾ ಎಲ್ಲಿ ಐತಿ ಹೇಳ್ರಿ? ಒಂದ ಒಂದು ಸುಸಜ್ಜಿತ ರಂಗಮಂದಿರ ಇಲ್ಲ. ಜಿಲ್ಲಾ ರಂಗಮಂದಿರದಾಗ ಲೈಟ ಇದ್ದರ ಮೈಕ ಇಲ್ಲ, ಎರಡೂ ಇದ್ದರ ಕರೆಂಟ ಇಲ್ಲ. ಇದ್ದ ಜನರೇಟರ್ ಚಾಲು ಇಲ್ಲ, ಒಟ್ಟಿನ್ಯಾಗ ಏನೇನು ಸರಿ ಇಲ್ಲರಿ; ಇದು ಮಗದೊಬ್ಬನ ಗೋಳು. ಇಲ್ಲ ದೊಡ್ಡ ನಗರದಾಗ ನಾಲ್ಕಾರು ರಂಗಮಂದಿರಗಳು ಇದ್ದರೂ ಅವುಗಳ ಬಾಡಿಗಿ ಕೊಟ್ಟು ಪೂರೈಸೋದು ಅಸಾಧ್ಯರೀ... ನೋಡ್ರಿ 800ರಿಂದ 1000 ಆಸನದ ರಂಗಮಂದಿರಗಳು ಅವ, ಹದಿನೈದರಿಂದ ಅರವತ್ತು ಸಾವಿರ ರೂಪಾಯಿ ಬಾಡಗಿ ಹೇಳತಾರ. ಒಂದ ಸಂಜೆಗೆ ಒಂದು ನಾಟಕ ಪ್ರದರ್ಶನ ಏನಿಲ್ಲಾಂದ್ರೂ 20ರಿಂದ 30 ಸಾವಿರ ಖರ್ಚು ಅದ, ಲೆಕ್ಕ ಹಾಕ್ರೆಲಾ, ಬಾಡಗಿ, ಪ್ರದರ್ಶನ ಖರ್ಚು, ಪ್ರಚಾರ- ಚಹಾವಾಣಿ ಎಲ್ಲಾ ಕೂಡಿದರ ಬರೋಬ್ಬರಿ ಒಂದು ಲಕ್ಷ ರೂಪಾಯಿ ಬೇಕರಿ, ಅಂದರ ಪ್ರತಿಯೊಬ್ಬ ಪ್ರೇಕ್ಷಕ ಕಡಿಮಿ ಕಡಿಮಿ ಅಂದರ ನೂರು ರೂಪಾಯಿ ಕೊಡಬೇಕರಿ. ಹಾಲ್ ಫುಲ್ ಆಗಬೇಕರಿ. ಅಂದರ ಎಲ್ಲ ಅಲ್ಲಿಂದ ಅಲ್ಲಿಗೆ ಆಕೈತ್ರಿ, ಇಲ್ಲಂದರ ಒಂದ ಪ್ರದರ್ಶನದಾಗ 50- 60 ಸಾವಿರ ಮೈಮೇಲ ಬರತೈತಿ... ಇದು ಪಕ್ಕಾ ವ್ಯವಹಾರಸ್ಥ ರಂಗಕರ್ಮಿಯ ಲೆಕ್ಕಾಚಾರ.
ಕರ್ನಾಟಕದಾಗ ನಾಟಕ ಕಲಾವಿದರ ಇಲ್ಲದ, ಪ್ರೇಕ್ಷಕರಿಲ್ಲದ, ಸರಿಯಾದ ವ್ಯವಸ್ಥಾ ಇಲ್ಲದ ಒದ್ದಾಡಲಿಕತ್ತಿದ್ದು ಇಂದು ನಿನ್ನೆಯ ಕಥೆಯಲ್ಲ, ಭಾಳ ವರ್ಷಗಳಿಂದ ಈ ಸಮಸ್ಯಾ ಅದ. ಆದರ ಅಂಥ ಸಮಸ್ಯಾದ ಜೋಡಿನ ಕನ್ನಡ ರಂಗಭೂಮಿ ತನ್ನದ ಸ್ಟೇಜ್‌ನ್ಯಾಗ ಹೆಜ್ಜೆ ಮ್ಯಾಲ ಹೆಜ್ಜೆ ಇಟಗೋಂತ ಮುಂದ ಹೊಂಟದ ಅನ್ನೋ ಫೀಲಿಂಗ್ ಕೊಡತದ. ಯಾಕಂದರ ಕರ್ನಾಟಕದಾಗ ನಾಟಕ ನಿಂತಹೋಗಿಲ್ಲ. ಅಲ್ಲಿ ಇಲ್ಲಿ ಪ್ರದರ್ಶನಗಳು ಆಕ್ಕೋತನ ಇರತಾವ. 15ಕ್ಕೂ ಹೆಚ್ಚು ವೃತ್ತಿ ನಾಟಕ ಕಂಪನಿಗಳು ಪ್ರತಿದಿನ ನಾಟಕ ಆಡತಾವ. ವಾರಾಂತ್ಯದಾಗ ದಿನಕ್ಕ ಎರಡು ಮೂರು ಪ್ರದರ್ಶನ ಮಾಡ್ತಾವ. ಅಲ್ಲದ ನೀನಾಸಂ ತಿರುಗಾಟ, ಕಿನ್ನರ ಮೇಳ, ರಂಗಾಯಣ, ಸಾಣೇಹಳ್ಳಿ ಶಿವಸಂಚಾರ ಮತ್ತಿತರ ಕೆಲವು ಸಂಸ್ಥಾಗಳು ವರ್ಷಕ್ಕೆ ನೂರರಿಂದ ನೂರಾಐವತ್ತು ಪ್ರಯೋಗಗಳನ್ನ ಮಾಡ್ತಾವ. ಈ ಎಲ್ಲ ರಂಗ ಪ್ರಯತ್ನಗಳು ಪ್ರೇಕ್ಷಕರನ್ನ ಸೃಷ್ಟಿಸಿಲ್ಲ ಏನು? ಈ ಸಂಸ್ಥಾದೊಳಗಿನ ಕಲಾವಿದರು ಬೆಳಕಿಗೆ ಬಂದಿಲ್ಲ ಏನು? ಕಳೆದ 10 ವರ್ಷದಾಗ ಕನ್ನಡ ರಂಗಭೂಮಿಯ ಒಬ್ಬ ನಟ ಅಥವಾ ಒಬ್ಬ ನಟಿ ರಾಜ್ಯ ಮಟ್ಟದಾಗ ಗುರುತಿಸಿಕೊಂಡರೇನು? ನೂರು ರುಪಾಯಿ ಟಿಕೇಟ ಇಟ್ಟು ನಾಟಕಗಳು ಹೌಸ್‌ಫುಲ್ ಆಗಿ ಇನ್ನೊಂದು ಪ್ರಯೋಗ ಮಾಡಲಿಕ್ಕ ರೊಕ್ಕ ಘಳಿಸಿಕೊಟ್ಟಾವೇನು? ಈ ಎಲ್ಲ ಪ್ರಶ್ನೆಗಳಿಗೆ ಇಲ್ಲ ಅಂತ ಉತ್ತರ ಸಿಗತದ. ಯಾಕಂದರ ಯಾವುದೇ ಊರಾಗ ರಂಗಪ್ರಯೋಗ ನಡೀಲಿ ಅದ ಅದ ಪ್ರೇಕ್ಷಕರು ಇರತಾರ. ದಶಕಗಳಿಂದ ಆ ಸಂಖ್ಯಾ ಅಷ್ಟೇ ಅದ. ಅದು ವೃದ್ಧಿಯಾಗುವಕ್ಕಾಗಿ ಆಕರ್ಷಕ ರಂಗಪ್ರಯೋಗಗಳನ್ನ ಮಾಡುವ ಅವಶ್ಯಕತಾ ಅದ. ಅಷ್ಟೇ ಅಲ್ಲ ಪ್ರದರ್ಶನಗಳು ಯೋಗ್ಯ ಪ್ರಚಾರ ಮತ್ತು ಪ್ರಸ್ತುತಿಯ ಪ್ರಯತ್ನ ಆಗಬೇಕದ. ರಂಗ ಪ್ರಿಯರು ರಂಗಾಸಕ್ತರನ್ನು ಮೀರಿ ಕನ್ನಡ ನಾಟಕಗಳು ಬೆಳೆದು ಜನಸಾಮಾನ್ಯರನ್ನ ತಲುಪಿದಾಗ ಮಾತ್ರ ಹೊಸ ಹೊಸ ಪ್ರೇಕ್ಷಕರನ್ನ ರಂಗಮಂದಿರಗಳಿಗೆ ಕರೆತರಲು ಸಾಧ್ಯ ಅದ, ಇಲ್ಲಂದ್ರ ಇಲ್ಲ. ಇನ್ನೊಂದು ಏನೆಂದರ ಶಾಲಾ-ಕಾಲೇಜುಗಳಲ್ಲಿ ರಂಗ ಚಟುವಟಿಕೆ ಹೆಚ್ಚು ಕಡಿಮೆ ನಿಂತು ಹೋದಂಗ ಆಗೇದ, ಅಲ್ಲಿ ಇಲ್ಲಿ ಕೆಲವು ಕಾಲೇಜುಗಳು ಸ್ಪರ್ಧೆ, ರಂಗ ಕಾರ್ಯಾಗಾರ ನಡೆಸ್ತಾವ (ಅದು ಯಾವುದೋ ಗ್ರಾಂಟ್ ಇರತದ ಅಂತ). ಆದರ ವಿಶಾಲ ಕರ್ನಾಟಕದ ರಂಗಭೂಮಿಯ ಬೆಳವಣಿಗೆಗೆ ಇದೇನೇನು ಸಾಕಾಗುದಿಲ್ಲ. ಅದಕ್ಕಾಗಿ ಸಂಸ್ಕೃತಿ ಇಲಾಖೆ, ಇಲ್ಲ ನಾಟಕ ಅಕಾಡೆಮಿ, ಇಲ್ಲ ಒಂದು ಯೋಗ್ಯ ಸಾಂಸ್ಕೃತಿಕ ಸಂಸ್ಥೆ ಒಂದು ಸಮಗ್ರ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಬೇಕದ.
-ಯಶವಂತ ಸರದೇಶಪಾಂಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


