ಯಾಜ್ಞಸೇನಿಯ ಸ್ವಗತ (ವ್ಯಂಜನ)
'ಪ್ರತಿ ಜೀವಿಯೂ ಮೂರು ಗುಣಗಳಿಂದ ಬಿಗಿಯಲ್ಪಟ್ಟಿದೆಯೆನ್ನುತ್ತಾರೆ- ಸತ್ತ್ವ, ರಜ, ತಮ. ತಮಸ್ಸು ಸಂಬಂಧದ ಸೃಷ್ಟಿಗೆ ಕಾರಣ. ರಜಸ್ಸಿನಿಂದ ಹಂಬಲ ಮತ್ತು ವ್ಯಾಮೋಹ. ಸತ್ತ್ವದಿಂದ ಶುದ್ಧಿ. ರಜ, ತಮಗಳು ಕಬ್ಬಿಣದ ಬೇಡಿಗಳಾದರೆ, ಸತ್ತ್ವ ಚಿನ್ನದ ಸಂಕೋಲೆ. ಹಿಮಾಲಯದ ಮೂಲಕ ಸ್ವರ್ಗ ಏರುವುದು ಸಾತ್ವಿಕ ಇರಬಹುದು, ಆದರೆ ನನಗದು ಕಾಲಿಗೆ ಬಿಗಿದ ಚಿನ್ನದ ಸಂಕೋಲೆಯಂತೆಯೇ ಭಾಸ. ಇದೂ ಒಂದು ಬಂಧನವೇ. ರಾಜ್ಯ ಗೆಲ್ಲುವ ಬಯಕೆ ಕಬ್ಬಿಣದ ಸಂಕೋಲೆಯಾದರೆ, ಸ್ವರ್ಗ ಪಡೆಯುವ ಹಂಬಲ ಸುವರ್ಣದ ಬೇಡಿಯಾಗದಿರದೆ?
ಬಂಧದಿಂದ ಯಾರಿಗಿದೆ ಬಿಡುಗಡೆ? ನನ್ನ ಪತಿಗಳಿಗೆ? ಸಂಬಂಧಗಳಿಗೆ ಬಿಗಿದುಕೊಂಡವರು ನಾಕವನ್ನು ಪಡೆದಾರೆ?
ಸಂಬಂಧ ವ್ಯಕ್ತಿಯನ್ನು ಕುರುಡಾಗಿಸುತ್ತದೆ. ಆದರೆ ಮುಂದುವರಿಯಲು, ಫಲಿತ ಪಡೆಯಲು ಯಾವುದಾದರೊಂದು ಬಂಧ ವ್ಯಕ್ತಿಯೊಳಗೆ ಬೇಕೇ ಬೇಕಲ್ಲ.
ಹಾಗೆ, ಕುರುಡನಂತೆ, ಯಾವುದು ಸರಿ ಯಾವುದು ತಪ್ಪೆಂದು ವಿಚಾರಿಸದೆ ಆತ(ಧರ್ಮರಾಯ) ದಾರಿಯಲ್ಲಿ ನಡೆದಿದ್ದ. ನಮ್ಮಂತೆಯೇ.
ನಡೆಯುತ್ತಿರುವಂತೆ ನಾನು ಮನದೊಳಗೇ ಮಥನಿಸಿಕೊಂಡೆ: ಈ ಜನ್ಮದಲ್ಲಿ ನಾನೇನು ಪಡೆದೆ? ಏನು ಕಳಕೊಂಡೆ? ಯಾಕಿಲ್ಲಿಗೆ ಬಂದೆ? ನನ್ನಿಂದೇನಾಯಿತು? ಏನಾಗಬೇಕಾಗಿತ್ತು?
ಊಟ, ನಿದ್ದೆ, ಮೈಥುನ, ರಾಜವೈಭವ... ಎಲ್ಲವೂ ಈ ಬದುಕಿನಲ್ಲಿ ನಂಗೆ ಸಿಕ್ಕಿತು. ಆದರೂ ಏನೋ ಕೊರತೆಯ ಭಾವ. ಏನು ಬೇಕಾಗಿತ್ತು? ನನ್ನ ಜೀವನದಲ್ಲಿ ಅದ್ಯಾಕೆ ಅಷ್ಟೊಂದು ಶೋಕ, ನೋವು, ಯಾತನೆ? ಯುಧಿಷ್ಠಿರನನ್ನು ಗಂಡನಾಗಿ ಪಡೆದ ಯಾವುದೇ ಹೆಣ್ಣು ಹಾಗೆ ಬಳಲಲೇಬೇಕಾಗಿತ್ತು...
ಅದನ್ನು ಯೋಚಿಸುತ್ತಿರುವಂತೆ, ನನ್ನ ಕಾಲುಗಳು ಹಿಮಾಲಯದ ಹುಡಿ ಧೂಳಿನ ನೆಲದಲ್ಲಿ ಕುಸಿದವು...
ನನ್ನ ಐವರೂ ಗಂಡಂದಿರು, ನನ್ನ ಐದು ಅರಿವುಗಳಂತೆ ಜೀವನಪೂರ್ತಿ ನಾನು ಆದರಿಸಿದವರು, ಜೀವನದಾಚೆಗೂ ನನ್ನ ಸಂಗಾತಿಗಳೆಂದು ನಾನು ಕನವರಿಸಿದವರು... ತಿರುಗಿ ನೋಡಲೂ ಇಲ್ಲ. ಅವರು ಸ್ವರ್ಗದ ದಾರಿಯಲ್ಲಿ ನೇರ ಮುನ್ನಡೆದಿದ್ದರು. ಸಾವಿನ ದ್ವಾರದಲ್ಲಿ ನಾನು ಒಂಟಿಯಾಗಿದ್ದೆ...'
ಮೊನ್ನೆ ಮೊನ್ನೆ ತಮ್ಮ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಒರಿಯಾ ಲೇಖಕಿ ಪ್ರತಿಭಾ ರಾಯ್ ಅವರ 'ಯಾಜ್ಞಸೇನಿ' ಕಾದಂಬರಿಯ ಆಯ್ದ ಸಾಲುಗಳಿವು. ಇವರ ಕೃತಿಗಳನ್ನು ಯಾರಾದರೂ ಕನ್ನಡಕ್ಕೆ ತಂದರೆ ಚೆನ್ನಾಗಿರುತ್ತದೆ.
ಜೋಗುಳ ಹಾಡು
ಮಸಾಲೆ ತೋಪುಗಳಿಂದ,
ಭತ್ತದ ಗದ್ದೆಗಳಿಂದ,
ತಾವರೆ ತೊರೆ ಮೇಲಿಂದ
ತಂದಿಹೆ ನಿನಗಾಗಿ, ಇಬ್ಬನಿ ತಬ್ಬಿರುವ
ಮುದ್ದಿನ ಪುಟ್ಟನೆ ಕನಸೊಂದ
ಮುಚ್ಚಿಕೊ ಕಣ್ಣುಗಳ,
ಕಾಡಿನ ಮಿಂಚುಹುಳ
ಕುಣಿವುದು ಕಿನ್ನರ ನೆಲದಲ್ಲಿ
ಹೂಗಳ ಸಾಗರದಿಂದ,
ಕದ್ದಿರುವೆನು ನಿನಗಾಗಿ
ಮುದ್ದಿನ ಪುಟ್ಟನೆ ಕನಸೊಂದ
ಮುದ್ದಿನ ಕಣ್ಣುಗಳೇ,
ಸುಂದರ ರಾತ್ರಿಯಲಿ
ಚಿನ್ನದ ಬೆಳಕಿನಲಿ,
ಹೊಳೆಯಲಿ ಸುತ್ತಲ ತಾರೆಗಳು
ಮೆತ್ತಗೆ ಮುತ್ತಿಡುವೆ,
ನಿನಗೇ ತಂದಿರುವೆ
ಮುದ್ದಿನ ಪುಟ್ಟನೆ ಕನಸೊಂದ
- ಸರೋಜಿನಿ ನಾಯ್ಡು
= ಕೇರ
harishkera@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

