ಸಾಪ್ತಾಹಿಕಪ್ರಭ

ಪ್ರೀತಿಯೊಂದಿಗೆ ನೈಜ ಪರಿವ್ರಾಜಕಿಯಾಗಿ... (ಇದ್ದಡ)

ಪ್ರೀತಿಯೊಂದಿಗೆ ನೈಜ ಪರಿವ್ರಾಜಕಿಯಾಗಿ... (ಇದ್ದಡ)
Published On :

ಸಮಸ್ತ ಸಂಬಂಧಗಳಲ್ಲಿ ನಾನು ಪ್ರತಿಫಲನಗೊಳ್ಳಬೇಕು. ಮಗಳಾಗಿ, ಅಕ್ಕ-ತಂಗಿಯಾಗಿ, ಹೆಂಡತಿಯಾಗಿ, ತಾಯಿಯಾಗಿ, ಅಜ್ಜಿಯಾಗಿ ಎಲ್ಲರೂ ಇರುತ್ತಾರೆ. ಇಂಥ ಸಹಜವನ್ನೂ ದಾಟಿ ಹೃದ್ಯ ಭಾವನೆಗಳ ಅನೂಹ್ಯ ಸಂಬಂಧವೊಂದು ಟಿಸಿಲೊಡೆದರೆ, ಅದಕ್ಕೆ ಕಾಂಡವಾಗಿ ನಾನು ನಿಂತರೆ, ಅದನ್ನೇಕೆ ಸಹಿಸಲಾಗದು? ನನ್ನದೇನೂ ಸಮರ್ಥನೆಯೆಂದಲ್ಲ, ಆದರೂ ಅದನ್ನು ನಾನು ಒಪ್ಪಿಕೊಂಡಿದ್ದು ಹೇಗೆಂದು ಹೇಳಲೇಬೇಕಲ್ಲ. ಅಂಥ ಪ್ರತಿಫಲದಲ್ಲೇ ಅಲ್ಲವೇ ಸಹಜವಾಗಿ ನಮ್ಮ ಇತಿಮಿತಿಗಳ ದರ್ಶನವಾಗುವುದು? ಅಂತಃಶ್ಚೇತನವನ್ನು ಅದರ ಆಂತರಿಕ ರಚನೆಗಳನ್ನು ಪುನರ್ ನಿರ್ಮಿಸಿಕೊಳ್ಳಲು ಇದು ಸಹಕಾರಿ. ಎಲ್ಲ ಸಂಬಂಧಗಳೂ ಸರ್ವ ಸಮ್ಮತ ಮಿತಿಯಲ್ಲೇ ಏಕೆ ವ್ಯಾಖ್ಯಾನಕ್ಕೊಳಪಡಬೇಕು? ಅದನ್ನು ಮೀರಿದ ಭಾವತರಂಗಗಳಲ್ಲಿ ಅಭಿವ್ಯಕ್ತಿಗೊಳ್ಳುವ ಆಕಾರರಹಿತ ಸಂವೇದನೆಗಳಿಗೆ ಈ ಸಮಾಜದಲ್ಲಿ ಬೆಲೆಯೇ ಇಲ್ಲವೇ? ಎಷ್ಟೋ ಭಾರಿ ಯೋಚಿಸಿದ್ದಿದೆ, ವ್ಯಕ್ತಿಯನ್ನು ಪರಿಶುದ್ಧಗೊಳಿಸಲು ಹವಣಿಸುವ ಭಾವ ಕೇಂದ್ರಿತ ಸಂಬಂಧಗಳಿಗೆ ಸಿದ್ಧ ವ್ಯವಸ್ಥೆ ಅಡ್ಡಿ ಬರುವುದೇಕೋ? ವ್ಯಕ್ತಿತ್ವದ ಸಮಗ್ರ ಪರಿಧಿಯೊಳಗೆ ಭಾವನೆಗಳಿಗೆ ಸೂಕ್ತ ಸ್ಥಾನಮಾನಗಳು ಸಿಗದಿದ್ದಾಗ ಹೊಯ್ದಾಟ ಸಹಜ. ಜೀವನದ ಮೂಲಭೂತ ಆಯ್ಕೆ ಇಂಥ ಭಾವನೆಗಳಿಂದಲೇ ನಡೆಯುವಂಥದ್ದು. ಹೀಗೆ ಆಯ್ಕೆಗೆ ಸಿಕ್ಕವನನ್ನು ನಾನು ಏನೆಂದು ಗುರುತಿಸಲಿ ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಲೇ ಇದೆ. ಅದು ಬಹುಶಃ ನನ್ನದೇ, ನನ್ನೊಳಗೇ ಹುಟ್ಟಿದ ಜಿಜ್ಞಾಸೆ ಅಲ್ಲವೇ ಅಲ್ಲ. ಏಕೆಂದರೆ ಅವನು ನನಗೆ ಏನೆಂಬುದು ಸ್ಪಷ್ಟವಾಗಿ ಗೊತ್ತು. ಅವನು ಉಟ್ಟ ಬಟ್ಟೆ, ಏರಿದ್ದ ಸ್ಥಳ, ಅವನಿದ್ದ ಸ್ಥಾನ- ಮಾನ ಎಲ್ಲದರ ಅರಿವೂ ಇತ್ತು. ಹಾಗಿದ್ದರೂ... ಎಲ್ಲ ಸಂಬಂಧಗಳಿಗೂ ಹೆಸರು ಇರಲೇಬೇಕೇನು ಅಥವಾ ಎಲ್ಲವೂ ಪದಗಳ ಸವಕಲು ಹಂದರದಲ್ಲಿ ವ್ಯಾಖ್ಯಾನಕ್ಕೆ ಸಿಲುಕಬಲ್ಲದೇ?
ನನಗೆ ಗೊತ್ತು, ಆತ್ಮಬಲದೊಂದಿಗೆ ಮುನ್ನಡಿ ಇಡುವ ಯಾವುದೇ ವ್ಯಕ್ತಿ ಭಾವನೆಗಳನ್ನು, ಅದರೊಂದಿಗೆ ಗಟ್ಟಿಗೊಳ್ಳುವ ಸಂಬಂಧಗಳನ್ನು ನಿರಾಕರಿಸಲಾರ. ನಾನು ಮತ್ತವನು ಕೂಡ ಅದಕ್ಕೆ ಹೊರತಾಗಲು ಸಾಧ್ಯವೇ ಇಲ್ಲ. ಹೀಗಿರುವಾಗ ನನ್ನ ಅವನೊಟ್ಟಿಗಿನ ಸಂಬಂಧವನ್ನು ಹೀಗೆಯೇ ಎಂದು ಹೇಗಾದರೂ ನಾನು ಬಣ್ಣಿಸಲಿ? ಅಷ್ಟಕ್ಕೂ ತೀರಾ ವೈಯಕ್ತಿಕ ನೆಲೆಯಲ್ಲಿ ಮೊಳೆತಿರುವ ಇಂಥ ಸಂಬಂಧಕ್ಕೆ ನಾನು ಉತ್ತರದಾಯಿ ಆಗಲೇಬೇಕೇನು? ಅವನು ನನಗೆ ಎಲ್ಲವೂ. ಯಾರೋ ಏನೋ ಎಂಬುದು ಬೇರೆಯವರ ಅಭಿಪ್ರಾಯವಿರಬಹುದು. ಆದರೆ ಜನ್ಮಾಂತರದಲ್ಲಿ, ಆನಂತರದ ಬದುಕಿಗೂ ಅವನೇ ಸಂಗಾತಿಯಾಗಿ ನಿಲಬಲ್ಲವನೆಂಬ ನಂಬಿಕೆಯಡಿಯಲ್ಲಿ ಇವತ್ತಿನ ಸುಖ, ದುಃಖಗಳನ್ನು ಹಂಚಿಕೊಳ್ಳಲು ಮುಂದಾದವಳು ನಾನು. ಸೃಜನಶೀಲ ವಿರೋಧಿ ಆಕ್ರಮಣಶೀಲತೆಗೆ ಮನಸ್ಸೆಂದೂ ಎಡೆ ಮಾಡಿಕೊಟ್ಟಿಲ್ಲ. ಹಾಗೊಮ್ಮೆ ಇದ್ದಿದ್ದರೆ ಎಲ್ಲವನ್ನೂ ಧಿಕ್ಕರಿಸಿ, ಅಲ್ಲೆಲ್ಲೋ ಬೆಟ್ಟದ ತುದಿಗೆ ಓಡಿ ಹೋಗಿ ನಿಂತು ಅವನ ಹೆಸರನ್ನು ಗಟ್ಟಿಯಾಗಿ ಕಿರುಚಿ ಹೇಳುತ್ತಿದ್ದೆ. ಅವನೊಂದಿಗೆ ನನ್ನದು ಆತ್ಮಾನುಭೂತಿ. ಅದು ಆತ್ಮಸಖ್ಯ. ಅಂತಃಕರಣದ ವಿಕಾಸದ ಕ್ಷಣದಲ್ಲಿ ಗೋಚರಿಸಿದ ಬಂಧವದು. ಬದುಕಿನ ಬಲೆಯ ಜಡಕಿನಲ್ಲಿ ನಾನೇ ನಾನಾಗಿ ಸಿಲುಕಿ ಪರಿತಪಿಸುತ್ತಿರುವಾಗಲೇ ಪುಟ್ಟದೊಂದು ನೆರವಿನ ಕೈಯ್ಯಾಗಿ ಬಂದು ಸೆಳೆಕೊಂಡವನು ಅವನು. ಅಲ್ಲಿಂದ ಮತ್ತೆ ನೋವಿನ ನೆನಪೂ ಕಾಡದಂತೆ ಆಗಸದಲ್ಲಿ ವಿಹಾರಕ್ಕೆ ನೆಗೆಸಿಕೊಂಡು ಹೋಗುತ್ತಿದ್ದಾನೆ. ಈವರೆಗೆ ಎಷ್ಟು ಎತ್ತರಕ್ಕೆ ಹಾರಿದ್ದೇವೆಂದರೆ ಬಹುಶಃ ಅದು ಊಹೆಗೂ ನಿಲುಕಲಾರದ್ದು. ನಮ್ಮನ್ನು ನಾವು ನಿರ್ದಿಷ್ಟ ಮಿತಿಯೊಳಗೆ ಕಟ್ಟಿಕೊಳ್ಳುವ ಬದಲು ಹೊಸಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳೋಣ. ಅದರಲ್ಲಿ ತಪ್ಪೇನಿದೆ? ಪ್ರತಿದಿನದ ಅರುಣೋದಯಕ್ಕೆ ಮೈಯೊಡ್ಡಿ ಹೊಂಗಿರಣಗಳನ್ನು ತೂರಿಸಿಕೊಳ್ಳುವುದು ಅಪರಾಧವೇ? ಅಂಥ ಕಿರಣಗಳು ಭೂಮಿಯನ್ನು ತಲುಪುವವರೆಗೆ ಕಾಯುವ ಬದಲು ಆಗಸದಲ್ಲೇ ಅದನ್ನು ಬಾಚಿಕೊಳ್ಳುವ ಹವಣಿಕೆ ಅಕ್ರಮವಾದೀತೇನು? ಸಂಬಂಧಗಳ ಮೂಸೆಯೊಳಗೆ ಅಡಗಿದ್ದ ಹೃದಯ ಅಂಥ ಕಾವಿಗೆ ಬೆಂದು ಇನ್ನಷ್ಟು, ಮತ್ತಷ್ಟು ಪಕ್ವವಾದೀತು. ಸಂಕೀರ್ಣ ಯೋಚನೆಗಳ ಮನಸುಗಳ ನಡುವೆ ಭಾವನೆಗಳ ಜಿಪುಣತನ ತೋರದೆ ಉದಾರವಾದಿಯಾದರೆ ಮಾತ್ರ ಕನಸಿನ ಮಹಲು ತಲೆ ಎತ್ತಲು ಸಾಧ್ಯ. ಅತ್ತ ರೆಕ್ಕೆ ಬಿಚ್ಚಿ ಹಾರುವ ಹಂಬಲ ನನ್ನದು. ಅದಕ್ಕೆ ಇಂಬು ಕೊಟ್ಟವನವನು. ಬೊಗಸೆಯಲ್ಲಿ ತುಂಬಿ ತುಂಬಿ ಪ್ರೀತಿಯನ್ನು ಹನಿಸುತ್ತಿದ್ದಾಗ, ಒಳಗಿನ ಚಪಲಗಳನ್ನು  ಮುಚ್ಚಿಟ್ಟು ಬಾಯಾರಿಕೆಯಲ್ಲೇ ಬಳಲುವುದು ಪಾತಿವ್ರತ್ಯವಾದೀತೇನು ಅಥವಾ ಅದನ್ನು ವೈರಾಗ್ಯವೆಂದು ಕರೆಯುತ್ತಾರೇನು?
ಪ್ರೀತಿ ಅರಳುವುದು ವೈಯಕ್ತಿಕ ಸ್ವಾತಂತ್ರ್ಯದ ಹೊಂಗಿರಣಗಳ ನಡುವೆ ಮಾತ್ರ. ಬಲವಂತದ ಯಾವುದೇ ಶಿಸ್ತಿನಿಂದಲೂ ಅದರ ವಿಕಸನ ಅಸಾಧ್ಯ. ಬಹಿರಂಗದಲ್ಲಿ ಅತ್ಯಂತ ಶಿಸ್ತಿನ ಮನುಷ್ಯನಾಗಿ ತೋರುವ ಯಾವುದೇ ವ್ಯಕ್ತಿಯಲ್ಲಿ ಆಂತರಂಗಿಕ ತೊಳಲಾಟಗಳಿರಬಹುದು. ಅದು ಒಂದು ರೀತಿಯಲ್ಲಿ ಮಾನಸಿಕ ಅಸ್ತವ್ಯಸ್ಥತೆಯೇ. ಅದನ್ನು ಹತ್ತಿಕ್ಕಿದಷ್ಟೂ ಬೇರೆಲ್ಲೋ ಧುತ್ತನೆ ಸ್ಫೋಟವಾಗಿ ಬಿಡಬಹುದಾದ ಅಪಾಯಗಳಿವೆ. ಮಾನಸಿಕ ವಿಪ್ಲವಗಳಿಗೆ ಬಲವಂತದ ವೈರಾಗ್ಯ ಖಂಡಿತಾ ಪರಿಹಾರ ದೊರಕಿಸಿಕೊಡದು. ಅಂಥ ವಿಪ್ಲವಗಳು ಅಂತರಂಗದಲ್ಲಿ ಹುಡುಕಿಕೊಂಡು ಹಠಮಾರಿಯಾಗುತ್ತ ಸಾಗುತ್ತದೆ. ಇದನ್ನೇ ಮಹತ್ವಾಕಾಂಕ್ಷೆಯೆಂದು ನಾವು ಪರಿಭಾವಿಸುತ್ತೇವೆ. ಸಾಧನೆ, ತಪಸ್ಸು ಎಂದೆಲ್ಲ ಬಣ್ಣ ಕಟ್ಟಿ ಹೇಳುತ್ತೇವೆ. ನನ್ನ ದೃಷ್ಟಿಯಲ್ಲಿ ಅದೊಂದು ಪಲಾಯನ. ವ್ಯಕ್ತಿಗತ ಸುಖಾಕಾಂಕ್ಷೆಗಳೇ ಇಲ್ಲದ ಮನಸ್ಸುಗಳಾದರೆ ಒಪ್ಪಬಹುದು. ಅದಿಲ್ಲದಿದ್ದರೆ ದೈಹಿಕ ಸುಖದ ನಿರಾಕರಣೆಯಷ್ಟೇ ಖಂಡಿತಾ ವೈರಾಗ್ಯವಲ್ಲ. ಬ್ರಹ್ಮಚರ್ಯ ಅದಾಗುವುದೂ ಇಲ್ಲ. ಪ್ರೇಮಾರಾಧನೆಯ ಮೆಟ್ಟಿಲಾಗಿ, ಸಮಾಧಿಯ ಸಿದ್ಧಿಯ ತಂತ್ರವಾಗಿ ಸಂಯೋಗವನ್ನು ಬಳಸುವುದು ಗೊತ್ತಿಲ್ಲದ ಅಜ್ಞಾನಕ್ಕೆ ಏನೇನೋ ನೆಪವನ್ನು ಹೇಳುತ್ತಿದ್ದಾರೆ. ಹೋಗಲಿಬಿಡಿ, ಕೊನೆಗೂ ಅವನಿಗೆ ನನ್ನ ಪ್ರತಿಪಾದನೆಯ ಸತ್ಯ ದರ್ಶನವಾಗಿದೆ. ಪರಿವರ್ತನೆಯೆಂಬುದು ವ್ಯವಸ್ಥೆಯಲ್ಲಿ ಬರಬೇಕಾದುದಲ್ಲ. ಇಡೀ ವ್ಯವಸ್ಥೆಯನ್ನೇ ಬದಲಿಸಿಬಿಡುತ್ತೇನೆಂಬುದು ಮೂರ್ಖತನ. ಬದಲಾವಣೆ ಅಂತರಂಗದಲ್ಲಿ ಕಾಣಿಸಿಕೊಳ್ಳಬೇಕಾದ್ದು. ಅದನ್ನೊಪ್ಪಿ ಕಾವಿ ಕಳಚಿ, ಪೀಠದಿಂದಿಳಿದು ಅವನು ನನ್ನೊಡನೆ ನಡೆದು ಬಂದು ಬಿಟ್ಟಿದ್ದಾನೆ. ನಾವೇನೂ ಕ್ರಾಂತಿಕಾರಿಗಳಲ್ಲವೇ ಅಲ್ಲ. ಹಿಡಿ ಪ್ರೀತಿಯ ಹಂಚುತ್ತಾ ನೈಜ ಪರಿವ್ರಾಜಕರಾಗಿ ಪಯಣಿಸುತ್ತಿದ್ದೇವೆ... ಅನಂತದೆಡೆಗೆ.

-  ರಾಧಾ ಸೋಚನಿ
abhyagatha@yahoo.co.in


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.