ಪತ್ರ ಅನರ್ಥ
ಹಿಂದಿನ ಕಾಲದಲ್ಲಿ ದೂರದೂರುಗಳಲ್ಲಿರುವ ಇಬ್ಬರು ಪರಸ್ಪರ ಕುಶಲ ಕೇಳಬೇಕಾದರೆ, ಪತ್ರ ಬರೆದು ದೂತರ ಕೈಯಲ್ಲೋ ಪಾರಿವಾಳಗಳ ಕಾಲಲ್ಲೋ ಇಟ್ಟು ಕಳಿಸಬೇಕಿತ್ತು. ಅಂತಹದೊಂದು ಪುರಾತನ ಕಾಲದಲ್ಲಿ ಬದುಕಿದ್ದ ಇಬ್ಬರು ರಾಜರ ಕತೆ ಇದು.
ಒಬ್ಬ ರಾಜ ತನ್ನ ಪಕ್ಕದ ರಾಜ್ಯದ ದೊರೆಗೆ ಒಮ್ಮೆ ಒಂದು ಪತ್ರ ಕಳಿಸಿದ. ಪಕ್ಕದ ರಾಜ್ಯದ ದೊರೆ ಅದನ್ನು ತೆರೆದು ಓದಲಾಗಿ ಅದರಲ್ಲಿ ಹೀಗೆ ಬರೆದಿತ್ತು: ಈ ಪತ್ರವು ಸಿಕ್ಕಿದ ಕೂಡಲೇ ಒಂದು ಪಾರಿವಾಳದ ತತ್ತಿಯಷ್ಟು ದೊಡ್ಡ ನೀಲವಜ್ರವನ್ನು ಕಳಿಸುವುದು ಅಥವಾ...
ಬರೆಯುವಾಗ ಶಾಯಿ ಮುಗಿಯಿತೋ ಅಥವಾ ಬರೆಯುವ ಹಾಳೆಯೇ ಮುಗಿಯಿತೋ ಅಂತೂ ವಾಕ್ಯ ಅಲ್ಲಿಗೆ ನಿಂತಿತ್ತು. ಪತ್ರ ಓದಿದ ದೊರೆ ಇದಕ್ಕೆ ಸರಿಯಾದ ಮಾರುತ್ತರ ಬರೆದು ಕಳಿಸಿ ಮುಯ್ಯಿ ತೀರಿಸುತ್ತೇನೆ ಅಂತ ನಿರ್ಧರಿಸಿ, 'ನೀನು ಹೇಳುವ ಅಂತಹ ವಜ್ರ ನಮ್ಮಲ್ಲಿದ್ದು ಅದನ್ನೇನಾದರೂ ನೀನು ಕೇಳಿದ್ದರೆ...' ಅಂತ ಬರೆದು ಅದೇ ದೂತನ ಕೈಯಲ್ಲಿ ವಾಪಸು ಕಳಿಸಿದ.
ಆ ರಾಜನಿಗೆ ಈ ದೊರೆಯ ಉತ್ತರ ಓದಿ ಮೈಯೆಲ್ಲ ಉರಿಯಿತು. ಅದೇ ಉಸಿರಲ್ಲೆ ಯುದ್ಧ ಘೋಷಣೆ ಮಾಡಿಯೇ ಬಿಟ್ಟ. ಎರಡೂ ರಾಜ್ಯಗಳು ಮದ್ದಾನೆಗಳಂತೆ ಸೆಣಸಿದವು. ಯುದ್ಧದ ಮೊದಲ ಸಾಲಲ್ಲಿ ಹೋರಾಡುತ್ತಿದ್ದ ಯಾವ ಸೈನಿಕನಿಗೂ ಈ ಯುದ್ಧದ ಮೂಲ ಏನು ಎನ್ನುವುದು ಗೊತ್ತಿರಲಿಲ್ಲ. ಎರಡೂ ಕಡೆ ಶಂಖ ಊದಿದರು, ಕಾದಾಟ ಶುರುವಾಯಿತು ಅನ್ನುವುದು ಮಾತ್ರ ಗೊತ್ತಿತ್ತು. ವಾರಗಟ್ಟಲೆ ನಡೆದ ಭೀಕರ ಕದನದಲ್ಲಿ ನೂರಾರು ಸೈನಿಕರು, ಕುದುರೆಗಳು, ಆನೆಗಳು ಸಾವಿಗೀಡಾದರು.
ದುರಂತ ನೋಡಿ ಸುಮ್ಮನಿರಲಾಗದ ಯೋಗಿಯೊಬ್ಬ ಕೊನೆಗೂ ಈ ಯುದ್ಧಭೂಮಿಗೆ ಬಂದು ಎರಡೂ ರಾಜರನ್ನು ಸಂಧಾನಕ್ಕೆ ಕರೆದ. ಯೋಗಿಯ ಮೇಲಿನ ಭಯಭಕ್ತಿಯಿಂದ ಇಬ್ಬರೂ ಹೋಗಿ ತಲೆತಗ್ಗಿಸಿ ನಿಂತರು.
'ಹೀಗೆ ಮನುಷ್ಯರೇ ಅಲ್ಲವೆನ್ನುವ ರೀತಿ ಹೊಡೆದಾಡುತ್ತಿದ್ದೀರಲ್ಲಾ, ಯಾವ ಕಾರಣಕ್ಕಾಗಿ ಈ ಮಾರಣಹೋಮ?' ಅಂತ ಕೇಳಿದ ಯೋಗಿ.
ಈ ರಾಜ್ಯದ ದೊರೆ ಹೇಳಿದ: ಪಾರಿವಾಳದ ಮೊಟ್ಟೆಯಷ್ಟು ದೊಡ್ಡ ವಜ್ರವನ್ನು ಕಳಿಸು ಅಥವಾ... ಅಂತ ಧಮಕಿ ಹಾಕಿದ್ದಾನೆ ಆ ರಾಜ. ಅದಕ್ಕೇ ಈ ಯುದ್ಧ.
ಆ ರಾಜ ನಕ್ಕ. 'ಅದು ಧಮಕಿಯೇ? ಪಾರಿವಾಳದ ಮೊಟ್ಟೆಯಷ್ಟು ದೊಡ್ಡ ವಜ್ರವಿದ್ದರೆ ಕಳಿಸು ಅಥವಾ ಇನ್ನಾವುದೇ ವಜ್ರವಾದರೂ ನಡೆದೀತು. ವಜ್ರಗಳೆಂದರೆ ನನಗೆ ಇಷ್ಟ ಎಂದಷ್ಟೇ ನಾನು ಹೇಳಿದ್ದು. ಅದಿರಲಿ, ಅಂತಹ ವಜ್ರ ನಮ್ಮ ಬಳಿ ಏನಾದರೂ ಇದ್ದು ಅದನ್ನೇ ನೀನು ಕೇಳಿದ್ದಾದರೆ ಅಂತ ನೀನೂ ಧಮಕಿ ಹಾಕಿದ್ದೀಯಲ್ಲ, ಅದರರ್ಥ ಏನು?'
ಈಗ ನಗುವ ಸರದಿ ಈ ದೊರೆಯದಾಗಿತ್ತು. 'ಅಯ್ಯೋ, ಅಷ್ಟೂ ತಿಳಿಯದೆ? ಅಂತಹ ವಜ್ರ ನಮ್ಮ ಬಳಿ ಇಲ್ಲ, ಇದ್ದಿದ್ದರೆ ಸಂತೋಷದಿಂದ ಕಳಿಸುತ್ತಿದ್ದೆ ಎಂದೇ ನಾನು ಬರೆದ ಪತ್ರದ ಅರ್ಥ' ಇಂತಹ ಕ್ಷುದ್ರ ವಿಷಯವನ್ನು ಮುಂದಿಟ್ಟುಕೊಂಡು ನರಿನಾಯಿಗಳಂತೆ ಕಾದಾಡುತ್ತಿದ್ದ ದೊರೆಗಳನ್ನು ನೋಡಿ ಯೋಗಿಗೆ ರೇಗಿ ಹೋಯಿತು. ತಕ್ಷಣವೇ ಯುದ್ಧ ನಿಲ್ಲಿಸಲು ಆದೇಶಿಸಿದ. ಹೀಗೆ, ಒಬ್ಬ ಸಂತನಿಂದಾಗಿ ಸಾವಿರಾರು ಸೈನಿಕರು ಸಾಯುವುದು ತಪ್ಪಿತು.
ಅಂದ ಹಾಗೆ, ಒಂದು ವಾಕ್ಯ ಮುಗಿಯಿತು ಅಂತ ಸೂಚಿಸಲು ನಾವಿಡುವ ಪೂರ್ಣವಿರಾಮವನ್ನು ಕಂಡು ಹಿಡಿದವನು ಈ ಅನಾಮಧೇಯ ಯೋಗಿಯೇ ಅಂತ ಸಂಶೋಧಕರು ಹೇಳುತ್ತಾರೆ.
- ರೋಹಿತ್ ಚಕ್ರತೀರ್ಥ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

