ಸಾಪ್ತಾಹಿಕಪ್ರಭ

ಕಣವಿ ಕವಿತೆ

Published On :

'ಮನುಷ್ಯ ಬದುಕ ಬಯಸಿದರೆ ಈ ಭೂಮಿಯ ಮೇಲೆಯೇ ಬದುಕಬೇಕು...' ಎಂದು ಕವಿತೆ ಆರಂಭಿಸುವ ಹಿರಿಯ ಕವಿ ಚೆನ್ನವೀರ ಕಣವಿಯವರು 'ಏನೇ ಇರಲಿ, ಭೂಮಿ ಸತ್ಯ, ಸ್ವರ್ಗ ಮಿಥ್ಯ. ವಾಸ್ತವದ ಭೂಮಿ, ಕಾಲ್ಪನಿಕದ ಸ್ವರ್ಗದ ನಡುವೆ ಮನುಷ್ಯ ಹುಟ್ಟಿ ಬಂದಿಹನಲ್ಲ, ಎಂಥಾ ಸುದೈವಿ!' ಎಂದು 'ಭೂಮಿ- ಬದುಕು' ಕವಿತೆಯನ್ನು ಮುಗಿಸುತ್ತಾರೆ. ಇದೊಂದು ಜೀವನಪರವಾದ ಕವಿತೆ ಎಂದು ಬೇರೆ ಹೇಳಬೇಕಾಗಿಲ್ಲ. ಮಾಗಿದ ಜೀವದ ಮಾಗಿದ ಚಿಂತನೆಯ ಫಲ ಈ ಕವಿತೆ. 'ಭೂಮಿ- ಬದುಕು' ಸಂಕಲನದ ಮೂಲಕ ಕಣವಿಯವರು ಮತ್ತೊಮ್ಮೆ ಸಹೃದಯರ ಮುಂದೆ ಬಂದಿದ್ದಾರೆ. ಇದರಲ್ಲಿ ಒಟ್ಟೂ 27 ಕವಿತೆಗಳಿವೆ. ಇವುಗಳಲ್ಲಿ 15 ಸುನೀತಗಳು. ಕನ್ನಡದಲ್ಲಿ ಸುನೀತಗಳನ್ನು ಹೆಚ್ಚು ಪ್ರಚಾರಕ್ಕೆ ತಂದವರಲ್ಲಿ, ತಮ್ಮ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡಿಕೊಂಡವರಲ್ಲಿ ಕಣವಿಯವರು ಪ್ರಮುಖರು. ಇದರಲ್ಲಿ ಹದಿನಾಲ್ಕು ವ್ಯಕ್ತಿಚಿತ್ರಗಳಿವೆ. ಆಯಾ ವ್ಯಕ್ತಿಗಳ ಬದುಕಿನ ವಿವಿಧ ಘಟ್ಟಗಳಲ್ಲಿ ನಡೆದ ಸನ್ಮಾನ ಸಂದರ್ಭದಲ್ಲಿಯೋ ಅಥವಾ ಅವರ ಅಭಿನಂದನ ಗ್ರಂಥಗಳಿಗೋ ಬರೆದ ಕವಿತೆಗಳು ಇವು. ವ್ಯಕ್ತಿಗಳನ್ನು ಅವರ ವಿಶೇಷತೆಗಳೊಂದಿಗೆ ಅಕ್ಷರಗಳಲ್ಲಿ ಕಣವಿಯವರು ಕೆತ್ತಿದ್ದಾರೆ. ಸುನೀಲ ಗಂಗೋಪಾಧ್ಯಾಯರ ಎರಡು ಬಂಗಾಳಿ ಕವಿತೆಗಳ ಅನುವಾದವೂ ಇಲ್ಲಿದೆ. ಕನ್ನಡ ಜನತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಪ್ರತಿಕ್ರಿಯಿಸುವ ಕಣವಿ ಇನ್ನೂ ಬರೆಯುತ್ತಿದ್ದಾರೆ ಎಂಬುದೇ ಸಂತೋಷದ ಸಂಗತಿ.
ಪ್ರ: ಸಪ್ನ ಬುಕ್ ಹೌಸ್, ಬೆಂಗಳೂರು. ಪುಟಗಳು 49. ಬೆಲೆ ರು. 30.

ರಾಮಜನ್ಮಭೂಮಿ ಸುತ್ತಮುತ್ತ
ಹಿಂದೂ ವಿದ್ವಾಂಸರಾದ ಡಾ. ಕೆ.ಎಸ್. ನಾರಾಯಣಾಚಾರ್ಯ ಅವರು 'ಶ್ರೀರಾಮಜನ್ಮಭೂಮಿ ತೀರ್ಪು- ಹಿಂದು ಇಂದು ಮುಂದು ಸುತ್ತ' ಕೃತಿಯಲ್ಲಿ ಬಾಬ್ರಿ ಮಸೀದಿ ವಿವಾದ ಕುರಿತು ವಿವರವಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ. ಬಾಬರನು ಈ ದೇಶಕ್ಕೆ ಹೇಗೆ ಬಂದ, ನೆಹರು ಅವರು ಬಾಬರನ ಅಭಿಮಾನಿಯಾಗಿದ್ದು ಹೇಗೆ, ಏಕೆ? ಅದು ಏಕೆ ತಪ್ಪು? ಇಂದಿರಾ ಗಾಂಧಿಯವರು ಅಫ್ಘಾನಿಸ್ತಾನಕ್ಕೆ ಹೋದಾಗ ಬಾಬರನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದು, ಬಾಬರನ ಅಭಿಮಾನಿ ನೆಹರೂ ವಂಶಸ್ಥರ ಕೈಗೆ ದೇಶದ ಆಡಳಿತ ಹೋಗಿದ್ದರಿಂದಲೇ ಬಾಬ್ರಿ ಮಸೀದಿ ವಿವಾದವಾಗಿ ಉಳಿದು ಬಂತು ಎಂಬ ವಿಚಾರಗಳನ್ನೆಲ್ಲ ಹೇಳಿದ್ದಾರೆ. ಕೃತಿಯಲ್ಲಿ ಒಂದು ಕಡೆ ಅವರು, 'ಮ. ಗಾಂಧಿಯವರನ್ನು ಬೇರೇತಕ್ಕಾಗಿಯೂ ಕ್ಷಮಿಸಬಹುದು. ಆದರೆ ಭಾರತದ ಮೇಲೆ ನೆಹ್ರೂ ಪರಂಪರೆಯ ಆಳುಗರನ್ನು ಹೇರಿದ್ದು ಅಕ್ಷಮ್ಯ! ಗೋಡ್ಸೆ ಏನಾದರೂ ಮಾಡಿರಲಿ, ಗಾಂಧಿಯವರ ಭಾರತೀಯ ವಿಚಾರವನ್ನು ಕೊಂದವರು ನೆಹ್ರೂ ಎಂದರೆ ಈಗಲಾದರೂ ನಂಬುತ್ತೀರಾ?' ಎಂದು ಬರೆದಿದ್ದಾರೆ. 'ಮೆಕ್ಕಾದಲ್ಲೇ ಪ್ರವಾದಿಗಳು ನಮಾಜು ಮಾಡಿದ್ದ ಮಶೀದೆ ಒಡೆದು ರಸ್ತೆ ವಿಸ್ತರಿಸಲಾಗಿದೆ. ಅಂದರೆ ಮಶೀದೆಯ ಸ್ಥಳಾಂತರ ಶರಿಯಾಗೆ ಸಮ್ಮತ' ಎಂಬ ಮಾತನ್ನೂ ನಾರಾಯಣಾಚಾರ್ಯರು ಬರೆದಿದ್ದಾರೆ. ಹಲವು ಕಡೆಯಿಂದ ದಾಖಲೆಗಳನ್ನು ಸಂಗ್ರಹಿಸಿ ಬರೆದಿರುವ ಈ ಕೃತಿಯನ್ನು ಅಭ್ಯಾಸಕ್ಕಾಗಿ ಓದಬೇಕು.
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ. ಪುಟಗಳು 96, ಬೆಲೆ ರು. 80.

ಆರೋಗ್ಯವೇ ಭಾಗ್ಯ
ಕಾಲು ಶತಮಾನದಿಂದ ಆಯುರ್ವೇದ ವೈದ್ಯ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ.ವಸುಂಧರಾ ಭೂಪತಿಯವರು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಲೇಖನಗಳನ್ನು ಪ್ರಕಟಿಸಿದ್ದಾರೆ. ಹಿಂದೆಂದಿಗಿಂತಲೂ ಇಂದು ಆರೋಗ್ಯದ ಬಗ್ಗೆ ಜನರಿಗೆ ಕಾಳಜಿ ಹೆಚ್ಚಾಗಿದೆ. ಜನರ ಸರಾಸರಿ ಆಯುಷ್ಯವೂ ಹೆಚ್ಚಿದೆ. ವೈದ್ಯ ವಿಜ್ಞಾನದ ಹೊಸ ಆವಿಷ್ಕಾರಗಳು ಒಂದು ರೀತಿಯಲ್ಲಿ ಇದಕ್ಕೆ ಕಾರಣವಾದರೂ ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಲೇಖನಗಳನ್ನು ಸಮೂಹ ಮಾಧ್ಯಮಗಳಲ್ಲಿ ಪ್ರಕಟಿಸುತ್ತಿರುವ ವಸುಂಧರಾ ಭೂಪತಿಯಂಥವರು ಇನ್ನೊಂದು ಕಾರಣ. ನಮ್ಮ ಅವಸರದ ಜೀವನ ಶೈಲಿ ಅನೇಕ ಕಾಯಿಲೆಗಳಿಗೆ ಕಾರಣವಾಗಿದೆ. ಅವನ್ನು ಸ್ವಲ್ಪ ಬದಲಾಯಿಸಿಕೊಳ್ಳುವುದರಿಂದ, ನಾವು ಸೇವಿಸುವ ಆಹಾರದಲ್ಲಿ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳುವುದರಿಂದ ರೋಗವನ್ನು ದೂರ ಇಡಬಹುದು. ಜೊತೆಗೆ ಆಯುರ್ವೇದ, ಮನೆ ಔಷಧಗಳು, ಪ್ರಕೃತಿ ಚಿಕಿತ್ಸೆಗಳು ನಮ್ಮ ಆರೋಗ್ಯ ವೃದ್ಧಿಗೆ ನೆರವಾಗುತ್ತವೆ. ಇದರಲ್ಲಿ ಇಪ್ಪತ್ತಾರು ಲೇಖನಗಳಿವೆ. ಅತ್ಯಂತ ಸರಳವಾಗಿ ಅವರು ತಮ್ಮ ವಿಚಾರಗಳನ್ನು ಇಲ್ಲಿ ಮಂಡಿಸಿದ್ದಾರೆ. ಔಷಧಿಯ ಉಪಯೋಗ, ರಕ್ತ ಭಂಡಾರ, ನೇತ್ರ ಭಂಡಾರದ ಬಗೆಗೂ ಉಪಯುಕ್ತ ಮಾಹಿತಿಗಳಿವೆ.  ಆರಂಭದಲ್ಲಿಯೇ ಆರೋಗ್ಯದಾಯಕ ಮತ್ತು ಸಂತೋಷದಾಯಕ ಜೀವನಕ್ಕೆ 36 ಸೂತ್ರಗಳನ್ನು ಅವರು ನೀಡಿದ್ದಾರೆ.
ಪ್ರ: ದಿವ್ಯಚಂದ್ರ ಪ್ರಕಾಶನ, ಬೆಂಗಳೂರು. ಪುಟಗಳು 232, ಬೆಲೆ ರು. 125.

ದುಃಖದ ರುಚಿ
ಇಂಗ್ಲಿಷ್ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿರುವ ಡಾ.ಸಿ.ನಾಗಣ್ಣ ಅವರ ಲೇಖನಗಳ ಬೃಹತ್ ಸಂಪುಟ 'ದುಃಖದ ರುಚಿ' ಹೆಸರಿನಲ್ಲಿ ಬಂದಿದೆ. ಇದರಲ್ಲಿರುವ 58 ಲೇಖನಗಳಲ್ಲಿ ಕೆಲವು ವಿಮರ್ಶೆಗಳು,  ಕೆಲವು ಆಲೋಚನೆಗಳು, ಒಂದೆರಡು ಸಂದರ್ಶನಗಳು, ಕೆಲವು ಆಫ್ರಿಕದ ಕವಿತೆಗಳ ಅನುವಾದಗಳು ಇವೆ. ಒಂದು ರೀತಿಯಲ್ಲಿ ಇದು ಅವರ ಸಮಗ್ರ ಬರೆಹಗಳ ಸಂಕಲನ. ಇದರಲ್ಲಿ ಕುವೆಂಪು ಕೃತಿಗಳ ಕುರಿತು ಏಳು ಲೇಖನಗಳಿವೆ. ನಾಗಣ್ಣನವರ ಅಧ್ಯಯನದ ವ್ಯಾಪ್ತಿ ಎಷ್ಟು ವಿಶಾಲವಾಗಿದೆ ಎಂದರೆ ಹಂಪನಾ, ಕಂಬಾರ, ವೀಚಿ, ತೀನಂಶ್ರೀ, ಸೇಡಿಯಾಪು, ದೇಜಗೌ ಮೊದಲಾದ ಹಳೆಯ ತಲೆಮಾರಿನ ಸಾಹಿತಿಗಳ ಜೊತೆ ಹೊಸ ತಲೆಮಾರಿನ ಜಿ.ಕೆ.ರವೀಂದ್ರಕುಮಾರ್, ಲತಾ ರಾಜಶೇಖರ್ ಇದ್ದಾರೆ. ಇವರಲ್ಲದೆ ವಿದೇಶದ ಸಾಹಿತಿಗಳಾದ ಟಾಲ್‌ಸ್ಟಾಯ್, ಎಮಿಲಿ ಡಿಕನ್ಸನ್, ಏಟ್ಸ್ ಮೊದಲಾದವರೂ ಇದ್ದಾರೆ. ಆಫ್ರಿಕದ ಸಾಹಿತ್ಯದ ಬಗ್ಗೆ ವಿಶೇಷ ಒಲವು ಹೊಂದಿರುವ ಲೇಖಕರು ಅಲ್ಲಿಯ ಪ್ರಮುಖ ಸಾಹಿತಿಗಳ ಬಗ್ಗೆ ಬರೆದಿದ್ದಾರೆ. ಒಂಬತ್ತು ಆಫ್ರಿಕನ್ ಕವಿತೆಗಳ ಅನುವಾದವಿದೆ. ಜಾಗತೀಕರಣದ ಹಿನ್ನೆಲೆಯಲ್ಲಿ ಗಾಂಧೀಜಿ ಪ್ರಸ್ತುತತೆ, ಜಾತೀಕರಣ: ಬದಲಾಗುತ್ತಿರುವ ಇಂಗ್ಲಿಷ್ ಭಾಷೆ ಎಂಬ ಲೇಖನಗಳು ಗಮನ ಸೆಳೆಯುತ್ತವೆ. ಓದುಗರಿಗೆ ಹಲವು ವಿಷಯಗಳು ಒಂದೆಡೆ ಸಿಗುತ್ತವೆ. ಈ ಕೃತಿಗೆ 'ದುಃಖದ ರುಚಿ' ಎಂಬ ಹೆಸರನ್ನು ಏಕೆ ಇಟ್ಟರು ಎಂಬುದು ಗೊತ್ತಾಗುತ್ತಿಲ್ಲ.
ಪ್ರ: ರೂಪ ಪ್ರಕಾಶನ, ಮೈಸೂರು. ಪುಟಗಳು 620, ಬೆಲೆ ರು. 350.

- ಡಾ. ವಾಸುದೇವ ಶೆಟ್ಟಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.