ಹಿಮಾಚಲೋ

ಕಾಲಾಟಾಪ್‌ನ ಹಾದಿಯುದ್ದಕ್ಕೂ ಹಿಮ ಹರಡಿತ್ತು. ರಸ್ತೆಯ ಮೇಲಿನ ಹಿಮವನ್ನೆಲ್ಲ ಜೆಸಿಬಿ ರಸ್ತೆಯ ಇಕ್ಕೆಲಗಳಿಗೆ ಎಸೆದಿತ್ತು. ಅಲ್ಲಿಂದಲೇ ಹಿಮ ಎರಚಾಟ ಶುರುವಾಯ್ತು. ಅರ್ಧದಿಂದ ಕಾಡಿನ ಹಾದಿ. ಎಲ್ಲೆಡೆ ಓಕ್ ಹಾಗೂ ಪೈನ್ ಮರಗಳು. ಅದರಲ್ಲಿಯೂನೇತಾಡುವ ಐಸ್ ಕ್ರಿಸ್ಟಲ್ಸ್ ಚಾಕುವಿನಂತೆ ಚೂಪಾಗಿ ಹಿಂದಿಯ ಯಾವುದೋ ಚಿತ್ರವನ್ನು ನೆನಪಿಗೆ ತಂದಿತು...
ನನ್ನ ಪ್ರಥಮ ಚಾರಣದ ಪಯಣ ಆರಂಭವಾದದ್ದು ಹೋದ ವರ್ಷವಾದರೂ ಮೊನ್ನೆ ಎನ್ನಬಹುದಾದ ಡಿಸೆಂಬರ್‌ನಲ್ಲಿ, ಅದೂ ಹಿಮಾಚಲ್ ಪ್ರದೇಶದ ಬಾನಿಕೇಟ್‌ನ ಕೊರೆಯುವ ಚಳಿಯಲ್ಲಿ. ಅದು ಈ ಚಾರಣದ ಚರಣದ ಸಾಲುಗಳಷ್ಟೇ. ಅದರ ಪಲ್ಲವಿ ನನ್ನೊಳಗೆ ಗುನುಗುನುಗಲಾರಂಭಿಸಿ ಅದಾಗಲೇ ಆರು ತಿಂಗಳುಗಳೇ ಕಳೆದಿದ್ದವು. ಅದು ಯೂಥ್ ಹಾಸ್ಟೆಲ್‌ನಿಂದ ಆಯೋಜಿತ ಡಾಲ್‌ಹೌಸಿ ಟ್ರಕ್ಕಿಂಗ್ ಬಗ್ಗೆ ಮಾಧುರಿಯಿಂದ ಮಿಂಚಂಚೆ ಬಂದ ಕ್ಷಣ. ಹಿಂದೂ ಮುಂದೂ ಯೋಚಿಸದೆ 'ಐ ಆಮ್ ಇನ್' ಎಂದು ರಿಪ್ಲೈ ಮಾಡಿದ್ದೆ. ಹತ್ತು ದಿನಗಳ ಕಾಲ ಹೆತ್ತೂರು, ಹೊತ್ತೂರು ಮರೆತು ಗೆಳೆಯರೊಂದಿಗೆ ಚಂಬಾ ಕಣಿವೆಯ ಹತ್ತು ಹಲವು ಏರಿಳಿತಗಳನ್ನು ಹತ್ತಿಳಿಯುವ ಹೊತ್ತಿಗಾಗಿ ಮನ ಕಾತರದಿಂದ ಕನವರಿಸತೊಡಗಿತ್ತು.
ಕೊನೆಗೂ ಆ ದಿನ ಬಂದೇ ಬಿಟ್ಟಿತ್ತು. ಬ್ಯಾಗಿನಲ್ಲಿದ್ದದ್ದು 2 ಜತೆ ಜೀನ್ಸ್, ಥರ್ಮಲ್ಸ್, ಸ್ವೆಟರ್, ಒಂದು ಜರ್ಕಿನ್, ಊಟದ ಡಬ್ಬಿ, ನೋವು ನಿವಾರಕ ಮಾತ್ರೆಗಳು ಮತ್ತು ಅಮೃತಾಂಜನ್ ಮಾತ್ರ. ಚಾರಣದಲ್ಲಿ ನಮ್ಮ ಹೆಣದ ಜತೆಗೆ ನಮ್ಮ ಅಗತ್ಯಗಳನ್ನೂ ಬೇತಾಳದಂತೆ ಬೆನ್ನಿಗೆ ಹೊತ್ತು ತಿರುಗಬೇಕಾದ್ದರಿಂದ ಕನಿಷ್ಠ ವಸ್ತುಗಳು ನಮ್ಮ ಆದ್ಯತೆಯಾಗಿತ್ತು.
ಅಂತೂ ಮಾದೇಶ, ಚಂದು, ಕಿಡ್, ಜೆಂಟಲ್‌ಮ್ಯಾನ್, ಮಾಧುರಿಯೊಂದಿಗೆ ವಿಮಾನದ ಕಬಂಧ ಬಾಹುಗಳ ನಡುವೆ ಬಿರಿದು ನಿಂತ ಹೊಟ್ಟೆಯನ್ನು ಹೊಕ್ಕಾಯಿತು. ದಿಲ್ಲಿಯಲ್ಲಿಳಿದು ರಾತ್ರಿ ಅಮೃತ್‌ಸರ್‌ಗೆ ರೈಲು ಹತ್ತಿದೆವು. ಕಣ್ಬಿಡುವಾಗ ಮೊಬೈಲಿನಲ್ಲಿ 'ವೆಲ್‌ಕಮ್ ಟು ಪಂಜಾಬ್ ನೆಟ್‌ವರ್ಕ್' ಸಂದೇಶವಿತ್ತು. ಅಮೃತಸರದ ರೇಲ್ವೆ ಸ್ಟೇಶನ್ನಿನ ಬೋರ್ಡ್ 9 ಡಿಗ್ರಿ ಸೆಲ್ಷಿಯಸ್ ತೋರಿಸುತ್ತಿತ್ತು. ಈ ಚಳಿಗೇ ದವಡೆಹಲ್ಲುಗಳು ಇನ್ನೇನು ಉದುರಿ ಬೀಳುವುದೆಂಬ ಮಟ್ಟಿಗೆ ಕೊರೆಯಲಾರಂಭಿಸಿದ್ದವು. ಕೈಕಾಲು ನಡುಗುತ್ತಿತ್ತು. ಹಿ.ಪ್ರ. ದಲ್ಲಿ ಮೈನಸ್ ಡಿಗ್ರಿಯಲ್ಲಿ ಬದುಕುಳಿಯುತ್ತೇನಾ ಎಂಬ ಅನುಮಾನ ಕಾಡತೊಡಗಿತು.
ಅಂತೂ ಡಾಲ್‌ಹೌಸಿಯ ಹಿಮದ ಮೇಲೆ ಹೆಜ್ಜೆಗುರುತು ಮೂಡಿಸುವ ಸಲುವಾಗಿ, ಇನ್ನೂ ಪಕ್ಕಾ ಯೋಚಿಸಿದರೆ ನಡೆಯುವುದಕ್ಕೋಸ್ಕರ ಒಂದೇ ದಿನದಲ್ಲಿ ವಿಮಾನ, ಕಾರು, ಬಸ್ಸು, ರಿಕ್ಷಾ, ರೈಲು ಎಲ್ಲವನ್ನೂ ಹತ್ತಿ ಇಳಿದಿದ್ದೆವು!
ಮರುದಿನ ಬೆಳಗ್ಗೆ ಏಳುವಾಗಲೇ ಮತ್ತೇಳು ಸ್ನೇಹಿತರು ನಮ್ಮನ್ನು ಕೂಡಿಕೊಂಡಿದ್ದರು. ಬೆಳ್‌ಬೆಳಗ್ಗೆಯೇ ಟಿಟಿ ಮಾಡಿಕೊಂಡು ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯ ಬಾನಿಕೇಟ್‌ನಲ್ಲಿದ್ದ ಚಾರಣದ ಬೇಸ್‌ಕ್ಯಾಂಪ್‌ನತ್ತ ಸವಾರಿ ಹೊರಟಿತು. ಹಿಂದೆ ರಾಜಕುಮಾರಿ ಚಂಪಾವತಿಯ ಕೋರಿಕೆಯ ಮೇರೆಗೆ ರಾಜ ತನ್ನ ಆಡಳಿತ ರಾಜಧಾನಿಯಾಗಿ ಚಂಬಾವನ್ನು ಮಾಡಿಕೊಂಡಿದ್ದರಿಂದ ಊರಿಗೆ 'ಚಂಪಾ' ಎಂಬ ಹೆಸರು ಬಂತು. ಕಾಲಕ್ರಮೇಣ ಇದು ಚಂಬಾ ಆಯಿತೆನ್ನುತ್ತದೆ ಇತಿಹಾಸ. ದಾರಿಯುದ್ದಕ್ಕೂ ಟೀ ಕುಡಿದು ದೇಹ ಬೆಚ್ಚಗಾಗಿಸಿಕೊಳ್ಳುವ ಪ್ರಯತ್ನ ನಡೆದೇ ಇತ್ತು. ಜತೆಗೆ 'ವಾವ್, ಅಲ್ನೋಡು, ಈ ಕಡೆ ನೋಡು, ಸೂಪರ್, ಆಸಮ್' ವರ್ಣನೆಗಳು ಒಬ್ಬರಲ್ಲಾ ಒಬ್ಬರ ಬಾಯಿಂದ ಹೊಮ್ಮುತ್ತಲೇ ಇತ್ತು. ಕಣಿವೆ- ಬೆಟ್ಟಗಳ ನಡುವೆ ಹಾವಿನಂತೆ ತೆಳ್ಳಗೆ ಬಳಕುತ್ತಾ ಹರಿದ ಟಾರು ರಸ್ತೆ ಸುತ್ತಿದಷ್ಟೂ ಎಲ್ಲೆಡೆ ಬೆಟ್ಟ, ಆಕಾಶ, ಕಣಿವೆ, ಹೊಳೆ... ನಿಂತಲ್ಲಿಯೇ ನಿಂತಿದ್ದಿವೇನೋ ಎಂಬ ಅನುಮಾನ ಹುಟ್ಟುತ್ತಿತ್ತು. ಇಂಥ ಪ್ರದೇಶವನ್ನೂ ಜನ ವಾಸಯೋಗ್ಯ ಮಾಡಿಕೊಂಡಿದ್ದಾರಲ್ಲಾ, ಇದು ಅವರ ಕವಿಹೃದಯವೇ ಎಂಬ ಪ್ರಶ್ನೆ ಒಮ್ಮೆ ಇಣುಕಿ ಅದಕ್ಕೆ ಉತ್ತರವನ್ನು ಸ್ಥಳೀಯರ ಮುಖದಲ್ಲೆಲ್ಲ ಹುಡುಕಿದೆ. ನನ್ನದು ಅಧಿಕ ಪ್ರಸಂಗವೆಂದಿತು ಮನ.
ಬೇಸ್‌ಕ್ಯಾಂಪ್‌ಗೆ ಹೋಗಿ ರಿಜಿಸ್ಟರ್ ಮಾಡಿಕೊಂಡೆವು. ನಮ್ಮ ಮೆಡಿಕಲ್ ಸರ್ಟಿಫಿಕೇಟ್, ಐಡಿ ಕಾರ್ಡ್ ನೋಡಿದ ಮೇಲೆ ಹುಡುಗಿಯರಿಗೇ ಒಂದು ಪ್ರತ್ಯೇಕ ಕೊಠಡಿ ನೀಡಿದರು. ಅದಾಗಲೇ ಚೆನ್ನೈ, ಒರಿಸ್ಸಾ, ಹೈದರಾಬಾದ್, ಮುಂಬೈನ ಆಂಟಿಯೂ ಸೇರಿದಂತೆ 3 ಹುಡುಗಿಯರು ರೂಂನಲ್ಲಿ ಸ್ಲೀಪಿಂಗ್ ಬ್ಯಾಗ್ ಒಳಗೆ ತೂರಿಕೊಂಡು ಪರಸ್ಪರ ಸಂಭಾಷಣೆಯಲ್ಲಿ ತೊಡಗಿದ್ದ ದೃಶ್ಯ ಆಮೆಗಳು ಚಿಪ್ಪಿನಿಂದ ಮುಖ ಹೊರ ಹಾಕಿರುವಂತೆ ಕಾಣುತ್ತಿತ್ತು. ಆರು ಜನ ಮಲಗಬಹುದಾಗಿದ್ದ ಕೋಣೆಯಲ್ಲಿ 8 ಜನ ಮಲಗಬೇಕಾಗಿ ಬಂದಿದ್ದು ಚಳಿಗೆ ಬಹುಶಃ ಅವಶ್ಯಕತೆಯೇನೋ ಎನಿಸಿತ್ತು. ಮನೆಯಿಂದ ತೆಗೆದುಕೊಂಡು ಹೋಗಿದ್ದ ಊಟದ ಡಬ್ಬಿಯಲ್ಲಿ ಬಿಸಿಬಿಸಿ ಪರೋಟ, ಸಲಾಡ್, ದಾಲ್ ಅನ್ನ ಮಿಕ್ಸ್ ಮಾಡಿ ಸವಿದವು. ಸಂಜೆ ಶಿಬಿರಾರ್ಥಿಗಳೆಲ್ಲ ಸಮಾವೇಶಗೊಂಡೆವು. ಯೂಥ್ ಹಾಸ್ಟೆಲ್‌ನ ಮುಖ್ಯಸ್ಥರೊಬ್ಬರ ಸಮಕ್ಷಮದಲ್ಲಿ ಎಲ್ಲರೂ ಪರಿಚಯ ಮಾಡಿಕೊಂಡೆವು. ಬಂದ 53 ಜನರಲ್ಲಿ ಶೇ. 90 ಸಾಫ್ಟ್‌ವೇರ್ ತಲೆಗಳು. ನಾವು ಕರ್ನಾಟಕದಿಂದ 18 ಜನರಿದ್ದೆವು. ಹಾಗಾಗಿ ಎಲ್ಲರೂ ಒಗ್ಗೂಡಿ 'ಜೈ ಭಾರತ ಜನನಿಯ.. 'ವನ್ನು ಒಬ್ಬೊಬ್ಬರು ಒಂದೊಂದು ರಾಗದಲ್ಲಿ ಹಾಡಿ ಅಪಶೃತಿಯಲ್ಲೂ ನಾಡಪ್ರೇಮ ಜಾಹೀರುಗೊಳಿಸಿದೆವು. ಟ್ರೆಕ್ಕಿಂಗ್ ಬಂದವರಲ್ಲೇ ಇಬ್ಬರನ್ನು ಗುಂಪಿನ ಲೀಡರ್‌ಗಳಾಗಿ ಆಯ್ಕೆಮಾಡಿದರು. ಪ್ರಕೃತಿಯ ಮಡಿಲಿಗೆ ಪ್ಲಾಸ್ಟಿಕ್ ಪಿಶಾಚಿಯನ್ನು ಹಾಕದಿದ್ದಂತೆ ನೋಡಿಕೊಳ್ಳಲು ಮತ್ತೊಬ್ಬರು ನಿಯೋಜಿತರಾದರು. ಜತೆಗೆ ಕಿಡ್ ಅನ್ನು ಪ್ರತಿಸಂಜೆ ನಡೆಯುವ ಕ್ಯಾಂಪ್ ಫೈರ್‌ಗೆ ನಿರೂಪಕಿಯಾಗಿ ಆಯ್ಕೆ ಮಾಡಿದರು. ಚಾರಣದ ಸಮಯದಲ್ಲಿರಬೇಕಾದ ಕೆಲವು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ನೀಡಿದರು. ಮೊದಲನೆಯ ಸಲಹೆಗೇ ಎಲ್ಲರೂ ಹೌಹಾರಿದೆವು. ಚಾರಣ ಮುಗಿಯುವವರೆಗೆ 6 ದಿನಗಳ ಕಾಲ ಯಾರೂ ಸ್ನಾನ ಮಾಡಕೂಡದು ಎಂದಾಗಿತ್ತು! ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅದು ಅವಶ್ಯಕವಾಗಿತ್ತು. ಉಳಿದಂತೆ ಕಾಡುಪ್ರಾಣಿಗಳಿಗೆ ತೊಂದರೆ ಕೊಡಬೇಡಿ, ಮೆಡಿಸಿನ್ಸ್ ಇಟ್ಟುಕೊಳ್ಳಿ, ಆದಷ್ಟು ಕಡಿಮೆ ಲಗೇಜ್ ಇರಲಿ ಇತ್ಯಾದಿ.
ರೂಂಗೆ ಹೋಗುತ್ತಿದ್ದಂತೆ ವಾರದ ಕೊನೆಯ ಸ್ನಾನವೆಂದು ಎಲ್ಲರೂ ಸ್ನಾನ ಮಾಡಿದೆವು. ಚಳಿಗೆ ಮರಗಟ್ಟಿದ ಮೈಗೆ ಬಿಸಿನೀರು ಹಾಕಿದರೂ ಉರಿಉರಿ. ಮೈಮೇಲೆ ಥರ್ಮಲ್ಸ್ ಸೇರಿದಂತೆ ಸ್ವೆಟರ್ ಮೇಲೆ ಸ್ವೆಟರ್, ಜರ್ಕಿನ್ ಎಂದು ಏಳು ಲೇಯರ್‌ಗಳು ದಪ್ಪಗೆ ಕುಳಿತವು. ಸಾಕ್ಸ್, ಗ್ಲೌಸ್, ಟೋಪಿ ಎಂದು ಕೊನೆಗೆ ಕಣ್ಣು ಮೂಗು ಮಾತ್ರ ಹೊರಗುಳಿದದ್ದು!
ಆದರೂ ಕೈಕಾಲು ಬೆರಳುಗಳು ಮರಗಟ್ಟಿಕೊಂಡೇ ಇದ್ದವು. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಟೀ, 7ಕ್ಕೆ ತಿಂಡಿ, 7.30ಕ್ಕೆ ಪ್ಯಾಕ್ ಲಂಚ್, 8ಕ್ಕೆ ಹೊರಡುವುದು ಹಾಸ್ಟೆಲ್‌ನ ನಿಯಮ. ಉಳಿದಂತೆ ನಮ್ಮ ಪಾಡಿಗೆ ನಾವು. ಯಾವುದೇ ಸ್ವಾತಂತ್ರ್ಯಕ್ಕೆ ಯೂಥ್ ಹಾಸ್ಟೆಲ್ ಅಡ್ಡ ಬರುತ್ತಿರಲಿಲ್ಲ. ಹೇಗೆ ಮಲಗಿದ್ದೆವೋ ಅದೇ ವೇಶದಲ್ಲಿ ಹಲ್ಲುಜ್ಜಿಕೊಂಡು ಚಾರಣ ಹೊರಡುತ್ತಿದ್ದೆವು. ವಾತಾವರಣದಲ್ಲಿ ಹ್ಯುಮಿಡಿಟಿ ಇದ್ದಿದ್ದರಿಂದ ಚಳಿಗೆ ಮೈ ಒಡೆಯುತ್ತಿರಲಿಲ್ಲ. ಪ್ರತಿಯೊಬ್ಬರ ಕೈಗೂ ಹಣ್ಣು, ಮಿಠಾಯಿ ಕೊಟ್ಟು ಚಾರಣಕ್ಕೆ ಹಸಿರು ನಿಶಾನೆ ತೋರಿದರು. ಎಲ್ಲರಲ್ಲೂ ಏನೋ ಅದ್ಭುತ ಸಾಹಸಕ್ಕೆ ಹೊರಟವರಂತೆ ಅದಮ್ಯ ಉತ್ಸಾಹ. ಹಿಪ್ ಹಿಪ್ ಹುರ್ರೇ ಸುತ್ತಲೂ ಮೊಳಗಿತು. ಮೊದಲ ದಿನ ಐದು ಕಿ.ಮೀ. ದೂರವಿದ್ದ ಡಾಲ್‌ಹೌಸಿ ತಲುಪಿದೆವು. ದಾರಿಯುದ್ದಕ್ಕೂ ದೂರದಲ್ಲಿ ಹಿಮದ ಬೆಟ್ಟಗಳು ಕೈಲಾಸದಂತೆ ಕೈಚಾಚಿ ಕರೆಯುತ್ತಿದ್ದವು. ಅವನ್ನೇ ಏರುತ್ತೇವೆಂಬ ಅರಿವಿಲ್ಲದೆ ಕ್ಯಾಮೆರಾ ಹಿಡಿದವರೆಲ್ಲ ಇಲ್ಲಿಂದಲೇ ಅದನ್ನು ಫೋಟೋದಲ್ಲಿ ಸೆರೆಹಿಡಿಯಲು ಎಲ್ಲ ಆ್ಯಂಗಲ್‌ಗಳಲ್ಲೂ ಕುಳಿತು ನಿಂತರು.
ಇಷ್ಟರಲ್ಲಾಗಲೇ ನಮ್ಮ ಗುಂಪಿನಲ್ಲಿ 'ಮಾಧುರಿ ಫ್ಯಾನ್ ಕ್ಲಬ್' ಉದ್ಘಾಟನೆಯಾಗಿತ್ತು. 'ವಾಟ್ ಈವನ್ ರಜನೀಕಾಂತ್ ಕೆನಾಟ್ ಡು, ಮಾಧುರಿ ಕ್ಯಾನ್' ಎಂಬ ಮಟ್ಟಿಗೆ ನಾವು ನಮ್ಮ ಕಲ್ಪನೆಯನ್ನು ಹರಿಬಿಟ್ಟಿದ್ದೆವು. ಚತ್ತೀಸ್‌ಘಡ್‌ನಿಂದ ಬಂದ ಏಳೆಂಟು ಮಂದಿ ಅಂಕಲ್‌ಗಳ ಗುಂಪು ತಮ್ಮನ್ನು 'ಜಯರಾಂ ಗ್ರೂಪ್' ಎಂದು ಹೇಳಿಕೊಂಡು ದಾರಿಯುದ್ದಕ್ಕೂ 'ಜೈರಾಂ' ಘೋಷವಾಕ್ಯ ಮೊಳಗಿಸುತ್ತಿದ್ದರೆ, ನಾವು 'ಮಾಧುರಿಜೀ ಕೀ ಜೈ' ಎಂದು ನಡೆಯುತ್ತಿದ್ದೆವು. ಜತೆಗೆ ಶಿವಣ್ಣ ಅಭಿಮಾನಿಗಳೂ ಗುಂಪಿನಲ್ಲಿದ್ದುದರಿಂದ ಶಿವಣ್ಣನಿಗೂ ಜೈ ಕೇಳಿಬರುತ್ತಿತ್ತು. ಈ ಅರೆಚಾಟ, ಕಿರುಚಾಟಗಳು ನಮ್ಮ ನಡೆದ ದಣಿವನ್ನು ಮರೆಸುತ್ತಿದ್ದವಲ್ಲದೆ ಮತ್ತಷ್ಟು ಇಂಧನ ನೀಡುತ್ತಿದ್ದವು. ಮಾಧುರಿ ಮಾತ್ರ ಮುಜುಗರದಿಂದ 'ಸುಮ್ನಿರಿ ಪ್ಲೀಸ್' ಎಂದು ಗೋಗರೆಯುತ್ತಿದ್ದಳು. ನಮ್ಮ ಈ ಫ್ಯಾನ್ ಕ್ಲಬ್ ಎಷ್ಟು ಫೇಮಸ್ ಆಯ್ತೆಂದರೆ ತಮಿಳು, ತೆಲುಗು, ಬೆಂಗಾಲಿ... ಭಾಷೆಗಳ ಹಂಗು ತೊರೆದು ಎಲ್ಲರೂ ಮೆಂಬರ್ ಎಂದು ಹೇಳಿಕೊಂಡು ಮಾಧುರಿಗೆ ಜೈಕಾರ ಹಾಕತೊಡಗಿದರು!
ಆ ದಿನ ಚಾರಣ ಬೇಗ ಮುಗಿಯಿತು. ಸಮೀಪದ ಗಾಂಧಿನಗರ್ ಮಾರ್ಕೆಟ್‌ಗೆ ಹೋಗಿ ಒಂದಷ್ಟು ಸುತ್ತಾಡಿ ಅಲ್ಲಿನ ಸ್ಪೆಶಲ್ ಮೋಮೋಸ್ ತಿಂದೆವು. ನಂತರ ಹಾಸ್ಟೆಲ್‌ಗೆ ಹೋಗಿ ಒಂದಿಷ್ಟು ಹೊತ್ತು ಅಮ್ಮಾಟೆ, ಪಂಕಜ ಹಾಡುಗಳಿಗೆ ಕುಣಿದು ಪ್ರತಿನಿತ್ಯದ ಗೆಟ್ ಟುಗೆದರ್‌ಗೆ ಹೋದೆವು. ದಮ್ ಶರಾಡ್ ಆಡಿ ಮುಗಿಸಿ ಕ್ರಿಸ್‌ಮಸ್ ಪ್ರಯುಕ್ತ ತಂದಿದ್ದ ಕೇಕ್ ಕತ್ತರಿಸಲು ನಿಂತೆವು. ಕ್ರಿಶ್ಚಿಯನ್ಸ್ ಯಾರಾದರೂ ಇದ್ದರೆ ಮುಂದೆ ಬಂದು ಕೇಕ್ ಕತ್ತರಿಸಲು ಕೇಳಿದರು. ನಮ್ಮೊಂದಿಗಿದ್ದ ತ್ರಿಶಾಂತ್(3ಡಿ)ನನ್ನು 'ತ್ರಿಶಾಂತ್ ಆ್ಯಂಟನಿ' ಎಂದು ನಿಂತಲ್ಲೇ ನಾಮಕರಣ ಮಾಡಿ ಮುಂದೆ ತಳ್ಳಿದ ಎಚ್‌ಡಿ. ಮರುದಿನವಾಗಲೇ ಅವನು ತ್ರಿಶಾಂತ್ ಮೊಹಮ್ಮದ್ ಆ್ಯಂಟನಿಯಾಗಿದ್ದ!
ಮರುದಿನ ಬೆಳಗ್ಗೆ ಏಳುವಾಗ ಮೂಗಿನಲ್ಲಿ ರಕ್ತ ಬರುತ್ತಿತ್ತು. ವಾತಾವರಣಕ್ಕೆ ಹೊಂದಿಕೊಳ್ಳುವಾಗ ಇದು ಸಾಮಾನ್ಯ ಎಂದರು. ಹೊರಟು ನಿಂತದ್ದು ಕಾಲಾಟಾಪ್‌ಗೆ. ಡಿಸೆಂಬರ್‌ನಲ್ಲಂತೂ ಇದು ಪೂರ್ಣ ಹಿಮದಿಂದ ಆವೃತವಾಗಿ ಬೇರೊಂದು ಲೋಕವೇ ಸೃಷ್ಟಿಯಾಗಿರುತ್ತದೆ. ಸಮುದ್ರ ಮಟ್ಟದಿಂದ 8,000 ಅಡಿ ಎತ್ತರದಲ್ಲಿದ್ದ ಈ ಸ್ಥಳಕ್ಕೆ ಹೋಗಲು 12 ಕಿ.ಮೀ. ನಡೆಯಬೇಕಿತ್ತು. ಮಧ್ಯಾಹ್ನ 2ರೊಳಗೆ ಅಲ್ಲಿ ಸೇರಬೇಕೆಂಬ ಆದೇಶವಿತ್ತು. ಏಕೆಂದರೆ ಹವಾಮಾನ ತುಂಬಾ ಕೆಟ್ಟದಿದ್ದು ಯಾವುದೇ ಕ್ಷಣದಲ್ಲೂ ದಿಢೀರ್ ಕತ್ತಲಾಗುವ ಸಂಭವವಿತ್ತು. ಜತೆಗೆ ಹಿಮ ಮಳೆಯಾಗುವ ಸಾಧ್ಯತೆಯೂ ಇತ್ತು. ನಾವೆಲ್ಲರೂ ಹಿಮಮಳೆಯಾಗಲಿ ಎಂದು ಒಳಗೊಳಗೇ ಹಾರೈಸುತ್ತಿದ್ದೆವು. ದಾರಿಯುದ್ದಕೂ ಫೋಟೋ, ಮಾತು, ಟೀ, ಜತೆಗೆ ಸ್ಥಳೀಯರನ್ನು ಮಾತನಾಡಿಸಿದೆವು. ಜನರೆಲ್ಲ ಬಡವರು ಹಾಗೂ ಕಷ್ಟ ಸಹಿಷ್ಣುಗಳಾಗಿ ಕಾಣಿಸುತ್ತಿದ್ದರು. ಆದರೆ ಈ ರಾಜ್ಯ ನಮ್ಮ ದೇಶಕ್ಕೆ ಅತಿ ಹೆಚ್ಚು ಆರ್ಥಿಕ ಕೊಡುಗೆ ನೀಡುತ್ತಿರುವ 4ನೇ ರಾಜ್ಯ. ಇಡೀ ರಾಜ್ಯದ ಮುಖ್ಯ ಆರ್ಥಿಕ ಮೂಲ ಜಲವಿದ್ಯುತ್, ಕೃಷಿ ಹಾಗೂ ಪ್ರವಾಸೋದ್ಯಮ. ಟೀ ಅಂಗಡಿಯಲ್ಲೂ ಸ್ವೆಟರ್, ಮಫ್ಲರ್ ಇತ್ಯಾದಿ ದೊರಕುತ್ತಿತ್ತು. ಎಲ್ಲೆಡೆ ರೋಟಿ, ಪರೋಟ ಹೋಟೆಲ್‌ಗಳು ಬಿಟ್ಟರೆ ಉಣ್ಣೆ ಬಟ್ಟೆ ಅಂಗಡಿ ಮಳಿಗೆಗಳು. ಬಹುತೇಕ ಎಲ್ಲರ ಮನೆ 'ಗುಡ್ಡದ ಮೇಲೊಂದು ಮನೆಯ ಮಾಡಿ..' ಎಂಬಂತೆ. ಹೀಗಾಗಿ ಮೆಟ್ಟಿಲು ಕೃಷಿಯಾಗಿ ಆಲೂ, ಮೂಲಂಗಿ, ಬಾರ್ಲಿ, ಬತ್ತ, ಶುಂಠಿ, ಆಲಿವ್ ಇತ್ಯಾದಿ ಬೆಳೆಯುತ್ತಾರೆ. ಸಣ್ಣ ಪದಾರ್ಥಕ್ಕೂ ಬೆಟ್ಟವಿಳಿಯಬೇಕಾದ ಸ್ಥಿತಿ. ಈ ಹತ್ತಿಳಿಯುವ ಸಂದರ್ಭದಲ್ಲಿ ಸ್ವೆಟರ್ ನೇಯುವ ಮಹಿಳೆಯರು. ಇದಲ್ಲದೇ ಸರಕು ಸಾಮಾನು ಸಾಗಿಸಲು ಕತ್ತೆಯನ್ನು ಬಳಸುತ್ತಾರೆ. ಅಷ್ಟೆತ್ತರದ ಹಳ್ಳಿಯ ಗುಡ್ಡದ ತುದಿಯಲ್ಲೂ ಶಾಲೆಗಳು. ಹೊರಗೇ ಕುಳಿತು ಕಲಿಯುವ ಮಕ್ಕಳು. ಕೊರೆವ ಚಳಿಯಲ್ಲಿ ಬೆಟ್ಟ ಹತ್ತಿ ಹೋಗುವ ಮಕ್ಕಳ ಪಾಡು ಅವರಿಗೇ ಗೊತ್ತು.
ಕಾಲಾಟಾಪ್‌ನ ಹಾದಿಯುದ್ದಕ್ಕೂ ಹಿಮ ಹರಡಿತ್ತು. ರಸ್ತೆಯ ಮೇಲಿನ ಹಿಮವನ್ನೆಲ್ಲ ಜೆಸಿಬಿ ರಸ್ತೆಯ ಇಕ್ಕೆಲಗಳಿಗೆ ಎಸೆದಿತ್ತು. ಅಲ್ಲಿಂದಲೇ ಹಿಮ ಎರಚಾಟ ಶುರುವಾಯ್ತು. ಎಲ್ಲೆಡೆ ಓಕ್ ಹಾಗೂ ಪೈನ್ ಮರಗಳು. ಅದರಲ್ಲಿಯೂ ನೇತಾಡುವ ಐಸ್ ಕ್ರಿಸ್ಟಲ್ಸ್ ಚಾಕುವಿನಂತೆ ಚೂಪಾಗಿ ಹಿಂದಿಯ ಯಾವುದೋ ಚಿತ್ರವನ್ನು ನೆನಪಿಗೆ ತಂದಿತು. ಚಿತ್ರದಲ್ಲಿ ಸಾಕ್ಷಿ ಸಿಗಬಾರದೆಂದು ಒಬ್ಬ ಐಸ್ ಚಾಕುವಿನಿಂದ ಕೊಲೆ ಮಾಡಲು ಪ್ರಯತ್ನಿಸುತ್ತಿರುತ್ತಾನೆ. ನಾವು ಈ ಐಸ್ ಪೀಸ್‌ಗಳನ್ನು ಕಟಕಟನೆ ಕಡಿದು ತಿಂದೆವು. ಎಷ್ಟೇ ಕಡಿಮೆ ಉಷ್ಣಾಂಶವಿದ್ದರೂ ನಡೆಯುತ್ತಾ ನಡೆಯುತ್ತಾ ದೇಹ ಬಿಸಿಯಾಗುತ್ತಿದ್ದುದರಿಂದ ಟೋಪಿ, ಗ್ಲೌಸ್, ಸ್ವೆಟರ್ ಒಂದೊಂದನ್ನೇ ಕಳಚುವಂತಾಗುತ್ತಿತ್ತು. ಹಾಗೆಂದು ಐದು ನಿಮಿಷ ಕುಳಿತರೆ ಮತ್ತೆ ಅಟಕಾಯಿಸಿಕೊಳ್ಳುವ ಚಳಿ! ಕಾಲಾಟಾಪ್‌ನಲ್ಲಿ ನಮಗೆ ಕೊಟ್ಟಿದ್ದ ಮನೆ ಹಿಮವನ್ನೇ ಹೊದ್ದು ತಣ್ಣಗೆ ಕುಳಿತಿತ್ತು. ಸ್ವಲ್ಪ ಕಾಲ ಆಟವಾಡಿ ಮಲಗಿದೆವು. ಇಲ್ಲಿ ಪಾತ್ರೆ ತೊಳೆಯಲು 3 ಕಿ.ಮೀ. ದೂರದಿಂದ ಹೊತ್ತು ತಂದಿದ್ದ ಒಂದು ಸಿಂಟೆಕ್ಸ್ ಬಿಸಿನೀರು ಹೊರತಾಗಿ ಯಾವುದಕ್ಕೂ ನೀರಿರಲಿಲ್ಲ. ಹೀಗಾಗಿ ಬೆಳಗ್ಗೆ ಐದು ಗಂಟೆಯ ಕತ್ತಲಲ್ಲೇ ಎದ್ದು ಬಯಲು ಶೌಚಾಲಯದಲ್ಲಿ 1, 2, 3, 4 ಮುಗಿಸಿ ಹಿಮವನ್ನೇ ಮುಚ್ಚಿ ಹಾಕಿದರು. ಹಿಂದಿನ ದಿನ ಹಿಮದಲ್ಲಾಡಿದ್ದು ನೆನೆದು ವ್ಯಾಕ್ ಎನಿಸಿತು. ಅದು ಬೇರೆ ಜಾಗವೇ ಆದರೂ ಪ್ರತಿದಿನ ಇಲ್ಲಿಗೊಂದು ಬ್ಯಾಚ್ ಬಂದೇ ಬರುತ್ತದೆ.
ಅಂದು ಕಾಜಿಯಾರ್‌ಗೆ ಹೊರಟು ನಿಂತೆವು. ಭಾರತದ ಸ್ವಿಜ್ಜರ್ಲೆಲೆಂಡ್ ಎಂದೇ ಕರೆಸಿಕೊಳ್ಳುವ ಈ ಸ್ಥಳಕ್ಕೆ ಹೋಗಲು ಮತ್ತೆ 12 ಕಿ.ಮೀ. ಪಯಣ. ಇದು ನಮ್ಮ ಚಾರಣದಲ್ಲೇ ಅತಿ ಕಠಿಣ ಹಾದಿ. ಬೃಹತ್ ಬ್ಯಾಗುಗಳನ್ನು ಹೊತ್ತು ಏಕಕಾಲಕ್ಕೆ ಒಬ್ಬರು ಮಾತ್ರ ಸಾಗಬಹುದಾದ ನಡೆಯಲಾಗದೇ ಓಡಬೇಕಾದಂಥ ಇಳಿಜಾರಿನಲ್ಲಿ ದೇಹವನ್ನು ಬ್ಯಾಲೆನ್ಸ್ ಮಾಡುವುದೇ ಒಂದು ಸವಾಲು. ಇದರ ಲಾಭ ಪಡೆದುಕೊಳ್ಳುವ ಸ್ಥಳೀಯ ಮಕ್ಕಳು. ಬ್ಯಾಗುಗಳನ್ನು ಹೊರುತ್ತೇವೆಂದು, ಪೂರ್ತಿ ದಾರಿಗೆ 400 ಕೇಳಿ ದುಂಬಾಲು ಬಿದ್ದರು. ಕನ್ನಡದ ಹಳೇ ಚಿತ್ರಗೀತೆಗಳು ಕಾಜಿಯಾರ್ ಕಾಡುಗಳಲ್ಲಿ ಪ್ರತಿಧ್ವನಿಸಿದವು. ಗುಡ್ಡದ ಬುಡ ತಲುಪುವಾಗ ಅರ್ಧ ದಾರಿ ಮುಗಿದಿತ್ತು. ಭೂತದ ಚಿತ್ರಗಳಲ್ಲಿ ಜೋರಾಗಿ ಗಾಳಿ ಬೀಸುವಂತೆ ಸದ್ದು ಹರಿದು ಬಂದು ಹಿಂದೆಯೇ ಮೈಮೇಲೆ ಬಿದ್ದ ಹನಿಗಳು ಹಿಮಮಳೆ ಎಂದು ಯಾರೋ ಹೇಳಿದರು. ಈ ಹಾದಿಯಲ್ಲಿ ಜಲಪಾತಕ್ಕೆ ಸ್ಟ್ಯಾಚ್ಯೂ ಕೊಟ್ಟಂತೆ ನಿಂತ ಹಿಮರಾಶಿ ಹಲವೆಡೆ ಕಂಡವು. ಗುಡ್ಡದ ಬುಡದಲ್ಲಿ ತಣ್ಣಗೆ ನಾದ ಹೊಮ್ಮಿಸಿಕೊಂಡು ಹರಿಯುವ ಬಳುಕುವ ಬಂಗಾರಿ ಬರಸೆಳೆದಳು. ಹಾಗೆಂದು ಶೂ ತೆಗೆದು ನೀರಿಗಿಳಿದರೆ ಕಾಲು ಕೊರೆದು ಹೋಯ್ತು!
ಕಟ್ಟಿಕೊಂಡು ಬಂದ ತಿಂಡಿಯನ್ನು ತಿಂದು ಹರಿಯುವ ನೀರನ್ನೇ ಬಾಟಲಿಗೆ ತುಂಬಿಸಿಕೊಂಡು ಮುಂದೆ ನಡೆದೆವು. ಇದಂತೂ ಇನ್ನೂ ಕಷ್ಟದ ಹಾದಿ. 70-80 ಡಿಗ್ರಿ ಕೋನದಲ್ಲೆಲ್ಲಾ ಹತ್ತಬೇಕಿತ್ತು. ಬೆಂಗಳೂರಿನಿಂದ ಕೊಂಡೊಯ್ದಿದ್ದ ಗ್ಲುಕೋಸ್, ಡ್ರೈಫ್ರೂಟ್ಸ್ ತಿಂದೆವು. 50 ಅಡಿಗೂ ಕುಳಿತು ವಿಶ್ರಮಿಸಿ ಉಸಿರನ್ನು ಕಂಟ್ರೋಲಿಗೆ ತಂದುಕೊಂಡು ಮುನ್ನಡೆದೆವು. ಕೊನೆಗೊಮ್ಮೆ ರಸ್ತೆ ಕಣ್ಣಿಗೆ ಬಿದ್ದಾಗ ನಿಟ್ಟುಸಿರುಬಿಟ್ಟೆವು. ಅಲ್ಲಿಂದ ಕ್ಯಾಂಪ್‌ಗೆ ಹೋಗಿ ರಿಪೋರ್ಟ್ ಮಾಡಿಕೊಳ್ಳುವ ಮೊದಲೇ ಸಿಗುವ ಫೀಲ್ಡ್‌ಗೆ ಲಗ್ಗೆ ಇಟ್ಟೆವು. ಇಲ್ಲಿ ಕುದುರೆ ಸವಾರಿ, ಸ್ಥಳೀಯ ಉಡುಪು ತೊಡಲು ಅವಕಾಶ, ಹೋಟೆಲ್‌ಗಳು ಎಲ್ಲವೂ ಇತ್ತು. ಎರಡು ಗಂಟೆ ಸುತ್ತಾಡಿ, ಕತ್ತಲಾಗುವ ವೇಳೆಗೆ ಕ್ಯಾಂಪ್ ಲೀಡರ್ರೇ ನಮ್ಮನ್ನು ಹುಡುಕಿಕೊಂಡು ಬಂದರು. ಹಾಸ್ಟೆಲ್‌ಗೆ ಬಂದು ರಿಪೋರ್ಟ್ ಮಾಡಿಕೊಳ್ಳಲಾಗುತ್ತಿರಲಿಲ್ಲವೇ ಎಂದು ಹಿಂದಿಯಲ್ಲಿ ಹಿಗ್ಗಾಮುಗ್ಗಾ ಬೈದರು. ನಮ್ಮ ಗುಂಪಿನಲ್ಲಿ ಯಾರಿಗೂ ನೆಟ್ಟಗೆ ಹಿಂದಿ ಬರುತ್ತಿರಲಿಲ್ಲ. ಆದರೆ ಎಲ್ಲರೂ ತಮ್ಮದು ಅದ್ಭುತ ಹಿಂದಿ ಎಂಬ ಭ್ರಮೆಯಲ್ಲೇ ಇದ್ದೆವು. ತಪ್ಪಾಯ್ತು ಸರ್, ನಮ್ಮದೇ ತಪ್ಪು ಎಂದು ಹೇಳಬೇಕಾಗಿತ್ತು. ಅದನ್ನು ಜಂಟಲ್‌ಮ್ಯಾನ್ ಅತಿ ವಿನಯದಿಂದ ನೈಂಟಿ ಡಿಗ್ರಿ ಬಾಗಿ 'ಆಪ್ ಕಿ ಗಲ್‌ತೀ ಹೈ' ಎಂದ. ಬಯ್ಯುತ್ತಿದ್ದವರಿಗೆ ನಗು ಉಕ್ಕಿ ಬಂತು.
ಇಷ್ಟರಲ್ಲಾಗಲೇ ಗೆಳೆಯರೊಂದಿಗಿದ್ದರೆ ದೇಹ ದಣಿವರಿಯದು ಎಂಬುದು ಪಕ್ಕಾ ಆಗಿತ್ತು. ಏಕೆಂದರೆ ಬೆಂಗಳೂರಿನಲ್ಲಿದ್ದರೆ ಸ್ವಲ್ಪ ನಡೆಯುವಲ್ಲೇ ಎರಡು ಜ್ಯೂಸ್ ಬೇಕಾಗುತ್ತದೆ. ಮರುಬೆಳಗ್ಗೆ 'ಮಂಗಳ'ಕ್ಕೆ ಹೊರಟು ನಿಂತೆವು. ದಾರಿ ಎಂದರೆ ನಿಜವಾಗಿಯೂ ಮಂಗಳ ಗ್ರಹಕ್ಕೇ ತಲುಪಿಸಿ ಬಿಡುವುದೇನೋ ಎಂಬಂತಿತ್ತು. ಪೂರ್ತಿ ಬೆಟ್ಟಗುಡ್ಡಗಳ ಬೈತಲೆಯಲ್ಲೇ ನಡೆದದ್ದು. ಫೋಟೋಗ್ರಫಿಗಂತೂ ಹೇಳಿ ಮಾಡಿಸಿದ ಹಾದಿ. ನಿಧಾನವಾಗಿ ಸಂಚರಿಸುತ್ತಾ ಸಂಜೆ ಕ್ಯಾಂಪ್ ತಲುಪಿದೆವು. ಇದು ನಮ್ಮ ಚಾರಣದ ಕಡೆಯ ದಿನ. ಅಲ್ಲಿಂದ ಚಂಬಾಕ್ಕೆ ಕಾರಿನಲ್ಲಿ ಹೋದೆವು. ಮ್ಯೂಸಿಯಂ ನೋಡಿ, ಸ್ಥಳೀಯ ತಿನಿಸುಗಳನ್ನು ಸವಿದು, ಪ್ರಖ್ಯಾತ ಚಂಬಾ ಚಪ್ಪಲಿ ಕೊಂಡೆವು. ಸಿಟ್ಟಿನ ಭರದಲ್ಲಿ ಯಾರಿಗಾದರೂ ಎತ್ತಿ ಬೀಸಿದರೆ ಒಂದೇ ಏಟಿಗೆ ವ್ಯಕ್ತಿ ಖಲಾಸ್. ಕಲ್ಲನ್ನು ಕೊರೆದು ಮಾಡಿದಂತಿದೆ ಈ ಚರ್ಮದ ಚಪ್ಪಲಿ. ಹಿಂದಿರುಗುವಾಗ ಚಂಬಾ ಪಟ್ಟಣ ದೇವರ ದೀಪಾವಳಿಯಂತೆ ಕಾಣುತ್ತಿತ್ತು. ಸಂಪೂರ್ಣ ಬೆಳಕು ಬಿಡುವ ಹೊತ್ತಿಗೆ ಬೇಸ್‌ಕ್ಯಾಂಪ್‌ನಲ್ಲಿದ್ದೆವು. ಮಧ್ಯಾಹ್ನನಂತರ ದಿಲ್ಲಿಯತ್ತ.
ಇಷ್ಟು ದಿನಗಳಲ್ಲಿ ಚಾರಣಕ್ಕೆ ಬಂದ ಯಾರಲ್ಲಿಯೂ ಸಂಕುಚಿತ ಮನೋಭಾವ ಕಾಣಲಿಲ್ಲ. ಇಲ್ಲಗಳು ಮತ್ತು ಇಷ್ಟವಿಲ್ಲಗಳಿಗೂ ಬೇಜಾರಿಲ್ಲದೆ ಹೊಂದಿಕೊಂಡು ಹೋಗುವ ಸ್ವಭಾವ. ಪ್ರಕೃತಿ ಪ್ರೀತಿ, ತಿಳಿದುಕೊಳ್ಳುವ ಆಸಕ್ತಿ ಹಾಗೂ ಕ್ರೀಡಾ ಮನೋಭಾವ. ಇಂಥವರ ಸಂಗ ಸುತ್ತುವುದೇ ಚಾರಣದ ಸಕಾರಾತ್ಮಕ ಅಂಶ. <
= ರೇಶ್ಮಾರಾವ್ ಸೊನ್ಲೆ
reshmaraksha.rao7@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


