ಶಿಷ್ಯ ಕಲಿಸಿದ ಪಾಠ
ಬಹಳ ವರ್ಷ ಹಿಂದೆ ದಕ್ಷಿಣ ಭಾರತದಲ್ಲಿ ಸುರಪುರ ಎಂಬ ಊರಿನಲ್ಲಿ ಅಪ್ರಮೇಯನೆಂಬ ಗುರುವಿದ್ದ. ಆತನ ಆಶ್ರಮದಲ್ಲಿ ಎಲ್ಲ ವಿಷಯಗಳ ಜೊತೆ ಧ್ಯಾನದ ಉಪಯುಕ್ತತೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿತ್ತು. ಮನಸ್ಸಿನ ಏಕಾಗ್ರತೆಗೆ, ಚಾಂಚಲ್ಯ ನಿವಾರಣೆಗೆ ತದೇಕ ಚಿತ್ತದಿಂದ ಧ್ಯಾನಿಸುವುದಕ್ಕಿಂತ ಮದ್ದಿಲ್ಲ ಎಂದು ಅಪ್ರಮೇಯ ಒತ್ತಿ ಹೇಳುತ್ತಿದ್ದ. ಬೇಸಿಗೆಯ ಬಿಡುವಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ತಂತಮ್ಮ ಊರುಗಳಿಗೆ ಹೋಗಿದ್ದರು. ಅಪ್ರಮೇಯ ಮತ್ತು ಅವನ ಆಪ್ತ ಶಿಷ್ಯ ಪುರುಷೋತ್ತಮ ಮಾತ್ರ ಆಶ್ರಮದಲ್ಲಿದ್ದರು. ಅದೊಂದು ದಿನ ಬೆಳಿಗ್ಗೆ ಸುಮಾರು ಹತ್ತೂವರೆ ಗಂಟೆಯ ಸಮಯ. ಗುರು ಅಪ್ರಮೇಯ ಸಭಾಂಗಣದಲ್ಲಿ ಕುಳಿತು ಧ್ಯಾನಸ್ಥನಾಗಿದ್ದ. ಅದೇ ಸಮಯದಲ್ಲಿ ಪುರುಷೋತ್ತಮ ತನ್ನಷ್ಟಕ್ಕೆ ತಾನು ತನ್ನ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುತ್ತಿದ್ದ. ಪುಸ್ತಕಗಳನ್ನು ಓರಣವಾಗಿಡುವುದು, ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಮುಂತಾಗಿ ಕಾರ್ಯಮಗ್ನನಾಗಿದ್ದ. ಪೊರಕೆ ಹಿಡಿದು ಸಭಾಂಗಣದಲ್ಲಿ ಅವನು ಅಡ್ಡಾಡುವಾಗ ಆಕಸ್ಮಿಕವಾಗಿ ಅವನಿಗರಿವಿಲ್ಲದೆಯ ಒಂದು ಪ್ರಮಾದ ನಡೆದುಹೋಗಿತ್ತು. ಪೊರಕೆಯಿಂದ ಸೂರಿನ ಇಲ್ಲಣವನ್ನು ಸ್ವಚ್ಛಗೊಳಿಸುವಾಗ ಅದರ ತುದಿ ಅಪ್ರಮೇಯನ ತಲೆಗೆ ಸೋಂಕಿತ್ತು!
'ಛೆ! ಪುರುಷೋತ್ತಮ, ಎಂತಹ ತಪ್ಪು ಮಾಡಿದೆಯಲ್ಲ, ಯಾರೂ ಹೀಗೆ ನನಗೆ ಅಪಮಾನಿಸಿರಲಿಲ್ಲ. ನಾನೇನು ತಪ್ಪು ಎಸಗಿದೆ ಅಂತ ನೀನು ಹೀಗೆ ಮಾಡಬೇಕಿತ್ತು ಶಿಷ್ಯ. ಛೆ! ಹಿಂದೆ ಯಾರೂ ಎಸಗದ ಅಚಾತುರ್ಯ ನಿನ್ನಿಂದ ಇವೊತ್ತು ಆಗಿ ಹೋಗಿದೆ' ಅಂತ ಅಪ್ರಮೇಯ ಪೇಚಾಡಿದ. ಪುರುಷೋತ್ತಮನೂ ನೊಂದು ಹೋಗಿದ್ದ.
'ಗುರುವರ್ಯರೆ, ನಾನು ಬೇಕೆಂದು ಮಾಡಿದ ಪ್ರಮಾದವಲ್ಲ ಇದು. ಕ್ಷಮಿಸಿರಿ ದಯಮಾಡಿ' ಎಂದು ಅವನು ಕೈಜೋಡಿಸಿದ. 'ಸಾಕು ಸುಮ್ಮನಿರು. ನಿನ್ನ ಉದ್ದೇಶವೇನಿತ್ತು ಅಂತ ಅರ್ಥಮಾಡಿಕೊಳ್ಳದ ಬೆಪ್ಪನಲ್ಲ ನಾನು'
'ಗುರುಗಳೆ, ಆಯಿತು ನಾನು ಬೇಕೆಂದೇ ಪೊರಕೆಯನ್ನು ನಿಮ್ಮ ಶಿರಕ್ಕೆ ಸೋಂಕಿಸಿದೆ ಎಂತಲೇ ಇಟ್ಟುಕೊಳ್ಳೋಣ. ನಿಮ್ಮ ಪ್ರಮಾದವನ್ನು ನೀವು ಒಪ್ಪಿಕೊಂಡಂತಾಯಿತಲ್ಲ!'
'ಏನು ನನ್ನ ಪ್ರಮಾದ? ನೀನು ಏನು ಹೇಳುತ್ತಿರುವೆ ಎಂಬ ಕಲ್ಪನೆ ನಿನಗಿದೆಯೆ?' ಎಂದು ಅಪ್ರಮೇಯ ಸಿಟ್ಟಿನಿಂದ.
'ಗುರುಗಳೆ ಇದೆ ಖಂಡಿತ ಪ್ರಜ್ಞಾಪೂರ್ವಕವಾಗಿಯೆ ನಾನು ಮಾತನಾಡುತ್ತಿದ್ದೇನೆ. ಧ್ಯಾನಿಸುವುದು ಹೇಗೆ ಎಂದು ಹಲವು ಬಾರಿ ನಮಗೆ ಹೇಳಿಕೊಟ್ಟಿರುವಿರಿ ತಾನೆ? ಏಕಾಗ್ರತೆ ಬಹಳ ಮುಖ್ಯ ಅಂತ ಒತ್ತಿ ಒತ್ತಿ ಹೇಳಿದಿರಿ. ಆದರೆ ನೀವು ಧ್ಯಾನಮಗ್ನರಾಗಿದ್ದಾಗ ನಾನು ಪೊರಕೆ ತಗುಲಿಸಿದ್ದು ನಿಮಗೆ ಗೊತ್ತಾಗಿದ್ದಾದರೂ ಹೇಗೆ ಗುರುವರ್ಯರೆ?'
ಪುರುಷೋತ್ತಮ ಹಾಗೆ ಪ್ರಶ್ನಿಸಿದಾಗ ಅಪ್ರಮೇಯ ತಬ್ಬಿಬ್ಬುಗೊಂಡ.
'ಹೌದಲ್ಲವೆ? ನನ್ನನ್ನು ಕ್ಷಮಿಸು, ಪೂರ್ಣವಾಗಿ ನನಗೇನೆ ಧ್ಯಾನದ ಕ್ರಮ ಅರಿವಾಗಿಲ್ಲ...' ಎಂದವನೆ ಶಿಷ್ಯನನ್ನು ಬಾಚಿ ತಬ್ಬಿದ. <
= ಬಿಂಡಿಗನವಿಲೆ ಭಗವಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

