ಸಾಪ್ತಾಹಿಕಪ್ರಭ

ಮುಳ್ಳಿನ ಕಿರೀಟ ಓಮರ್ ಅಬ್ದುಲ್ಲಾ

ಮುಳ್ಳಿನ ಕಿರೀಟ ಓಮರ್ ಅಬ್ದುಲ್ಲಾ
Published On :

ಆಡಳಿತ ಸೂತ್ರಗಳ ಆಟದಲ್ಲಿ, ಇಡೀ ದೇಶದಲ್ಲಿ ಅತಿ ಕಷ್ಟ ಕೊಡುವ ರಾಜ್ಯವೆಂದರೆ ಜಮ್ಮು-ಕಾಶ್ಮೀರ. ಅಲ್ಲಿನ ಮುಖ್ಯಮಂತ್ರಿಯ ಸ್ಥಾನಕ್ಕೇರುವುದೆಂದರೆ, ಮುಳ್ಳಿನ ಕಿರೀಟವನ್ನು ಧರಿಸಿದಂತೆಯೇ. ಅದನ್ನು ಮೂರು ತಲೆ ಮಾರುಗಳಿಂದಲೂ ಶ್ರೀನಗರದ ಅಬ್ದುಲ್ಲಾ ಕುಟುಂಬ ಧರಿಸಿದೆ. ಇತರರೂ ಧರಿಸಿದ್ದರು.
1950ರ ದಶಕದಲ್ಲಿ ಷೇಕ್ ಅಬ್ದುಲ್ಲಾ, ಅನಂತರ ಅವರ ಪುತ್ರ ಫರೂಕ್ ಅಬ್ದುಲ್ಲಾ, ಅನಂತರ ಅವರ ಪುತ್ರ ಓಮರ್ ಅಬ್ದುಲ್ಲಾ ಅಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಎಲ್ಲರೂ ಪಕ್ಷಾಂತರದ ಹಣೆಪಟ್ಟಿಯನ್ನು ಅಂಟಿಸಿಕೊಂಡಿದ್ದಾರೆ.
ಕಾಶ್ಮೀರದ ಆಡಳಿತವೆಂದರೆ, ಜನಕಲ್ಯಾಣ, ಕಾಯಿದೆ ಪಾಲನೆ ಹಾಗೂ ಅಭಿವೃದ್ಧಿಯ ಸಾಧನೆಯ ಪಥದಲ್ಲಿ ಸಾಗುವುದರ ಜತೆಯಲ್ಲೇ ಉಗ್ರಗಾಮಿಗಳ ಹಿಂಸಾಚಾರವನ್ನೂ ಎದುರಿಸಬೇಕು. ಅನೇಕ ಸಂದರ್ಭಗಳಲ್ಲಿ ಭಾವನಾತ್ಮಕ ಆಂದೋಲನಗಳನ್ನೂ ನಿಭಾಯಿಸಬೇಕು.
ಸರ್ಕಾರಕ್ಕೆ ವಸ್ತುಶಃ ಸ್ವಂತ ಸಂಪನ್ಮೂಲವೇ ಇಲ್ಲ ಎನ್ನಬಹುದಾದ ರಾಜ್ಯ ಅದು. ಕೇಂದ್ರದ ನೆರವೇ ಕಾಶ್ಮೀರದ ಮೂಲ ಬಂಡವಾಳ. ಅಲ್ಲಿ ಭಾರತೀಯ ಸೇನೆ ಹಾಗೂ ಇತರ ಭದ್ರತಾ ಪಡೆಗಳದ್ದೇ ಕಾಯಿದೆಯ ಪಾಲನೆಯಲ್ಲೂ ಕಾರುಬಾರು. ಗಡಿರಕ್ಷಣೆಯೂ ಅವರ ಹೊಣೆಯೇ.
ಸ್ಥಳೀಯ ಪೊಲೀಸ್ ಪಡೆಗಳೂ ಇವೆ. ಕೆಲವು ಸಂದರ್ಭಗಳಲ್ಲಿ ಮಿಲಿಟರಿ ಪಡೆಗಳು ಹಾಗೂ ಸ್ಥಳೀಯ ಪೊಲೀಸರ ನಡುವೆ ಸಣ್ಣಪುಟ್ಟ ಕಾರಣಗಳಿಗಾಗಿ ಜಗಳ ನಡೆಯುವುದೂ ಸಾಮಾನ್ಯವೇ. ಜಮ್ಮು-ಕಾಶ್ಮೀರ ರಾಜ್ಯದಲ್ಲಿ ಜಮ್ಮು ಹಾಗೂ ಲಡಾಖ್ ಪ್ರದೇಶಗಳಲ್ಲಿ ಆಡಳಿತದ ಗುರುತಿದ್ದರೂ, ಕಾಶ್ಮೀರ ಕಣಿವೆಯಲ್ಲಿ, ವಾಸ್ತವದಲ್ಲಿ ಯಾವುದಕ್ಕೂ ಯಾರೂ ಜವಾಬ್ದಾರರಲ್ಲ ಎನ್ನುವ ಸ್ಥಿತಿ ಇದೆ. ಅಲ್ಲಿ ಸರ್ಕಾರ ಇದೆ. ಅದೂ ಜನತಾಂತ್ರಿಕ ವ್ಯವಸ್ಥೆಯಲ್ಲೇ ಕೆಲಸ ಮಾಡುತ್ತಿದೆ ಎನ್ನುವುದೇ ಪವಾಡ ಸದೃಶ್ಯವಾದ ವಿಷಯ.
ಸಾಮಾನ್ಯ ದಿನಗಳಲ್ಲೇ ಕಾಶ್ಮೀರ ಕಣಿವೆಯ ಪ್ರದೇಶದಲ್ಲಿ ಯಾವಾಗ ಏನಾಗುತ್ತೋ ಎಂದು ಹೇಳುವುದು ಕಷ್ಟ. ಈಗ ಅದು ಇನ್ನಷ್ಟು ಕಷ್ಟವಾಗಿದೆ, ಪೂಂಚ್‌ನ ಗಡಿಯ ಸಮೀಪದ ನಿಯಂತ್ರಣ ರೇಖೆಯ ಆಜೂಬಾಜೂ ಸೀಮೆಯಲ್ಲಿ ಸ್ವಲ್ಪ ಸಂಘರ್ಷವಾದರೂ, ಅದಕ್ಕೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಆಯಾಮ ಬರುವುದು ತೀರಾ ಸಹಜ.
ಈಗ ಅಲ್ಲೇ ನಡೆದ ಭಾರತದ ಯೋಧರ ಹತ್ಯೆ ಹಾಗೂ ರುಂಡ ಛೇದದ ಹಿನ್ನೆಲೆಯಲ್ಲಿ ದೇಶದ ಎಲ್ಲ ಕಡೆ ಹಬ್ಬಿರುವ ಆಕ್ರೋಶಕ್ಕೆ ಸಂಬಂಧಿಸಿದಂತೆ, ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅಸಹಾಯಕ. ಅವರು ಏನನ್ನೂ ಮಾಡುವ ಸ್ಥಿತಿಯಲ್ಲಿ ಇಲ್ಲ.
ದೇಶದ ಇತರ ಭಾಗಗಳಲ್ಲಿ ಜನರ ಆಕ್ರೋಶದ ಪ್ರದರ್ಶನ ನಡೆಯುತ್ತಿದ್ದರೂ, ಕಾಶ್ಮೀರದಲ್ಲಿ ಜನರು ಸಭೆ ಸೇರುವುದೇ ಕಷ್ಟ ಎನ್ನುವ ಸ್ಥಿತಿ.
ಭಾರತೀಯ ಯೋಧರ ಹತ್ಯೆಯ ಪರಿಣಾಮದ ಪ್ರಕ್ಷುಬ್ಧ ವಾತಾವರಣದ ಜತೆಯಲ್ಲೇ ಉಗ್ರಗಾಮಿಗಳು ಚುನಾಯಿತ ಪಂಚಾಯಿತಿಗಳ ಪಂಚ, ಸರಪಂಚರಿಗೆ ಪ್ರಾಣ ಭೀತಿಯಲ್ಲೇ ಓಡಾಡಬೇಕಾದ ಪರಿಸ್ಥಿತಿಯನ್ನು ನಿರ್ಮಿಸಿದ್ದಾರೆ.
ಈಗಾಗಲೇ ಕೆಲವು ಹತ್ಯೆಗಳೂ ಆಗಿವೆ. ಉಗ್ರರ ಬೆದರಿಕೆಗೆ ಹೆದರಿ ಅರವತ್ತು ಸರಪಂಚರು ರಾಜಿನಾಮೆ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಸುಮಾರು 33,000 ಪಂಚ-ಸರಪಂಚರಿಗೆ ರಕ್ಷಣೆ ಕೊಡುವುದು ಕಷ್ಟದ ವಿಚಾರವೇ.
ಇಂಥ ಸ್ಥಿತಿಯಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಓಮರ್ ಅಬ್ದುಲ್ಲಾ ಅವರಿಗೆ ದೇಶದ ಜನರೆಲ್ಲರ ಸಹಾನುಭೂತಿ ಬೇಕು. ಅವರ ಕೈಲಿ ಈಗ ಕಾಶ್ಮೀರದ ಯಾವ ಸಮಸ್ಯೆಯನ್ನೂ ಬಗೆಹರಿಸುವುದು ಸಾಧ್ಯವಿಲ್ಲ ಎನ್ನುವುದು ಗೊತ್ತಿದ್ದರೂ, ಆ ಮಾತನ್ನು ಗಟ್ಟಿಯಾಗಿ ಹೇಳುವಂತಿಲ್ಲ. ಅವರೂ ಬಹಿರಂಗವಾಗಿ ಒಪ್ಪುವಂತಿಲ್ಲ.
ಆದರೂ ಅಲ್ಲಿ ಜನಜೀವನ ವಾಹಿನಿ ನಿರಂತರವಾಗಿ ಹರಿದಿದೆ. ಸರ್ಕಾರದ ವ್ಯವಸ್ಥೆಯ ಚೌಕಟ್ಟೂ ಇದೆ. ಆದರೆ ಸರ್ಕಾರದ ತಿರುಳೇ ಇಲ್ಲ. ಈ ಸ್ಥಿತಿಯಲ್ಲೇ ಚುನಾವಣೆ ನಡೆಯಬೇಕು, ಹಿಂದೆ ನಡೆದಿವೆ. ಅದು ಎಷ್ಟರ ಮಟ್ಟಿಗೆ ಪ್ರಾತಿನಿಧಿಕ ಎನ್ನುವ ವಿಚಾರ ಬೇರೆ.
ಓಮರ್ ಅಬ್ದುಲ್ಲಾ ಹುಟ್ಟಿದ್ದು 1970ರ ಮಾರ್ಚ್‌ನಲ್ಲಿ, ಅವರ ಇಂಗ್ಲಿಷ್ ತಾಯಿಯ ತವರು ಮನೆಯಲ್ಲಿ- ಅದಿರುವುದು ಎಸ್ಸೆಕ್ಸ್ ಸೀಮೆಯ ರೋಡ್ ಫೋರ್ಡ್‌ನಲ್ಲಿ. ಆದರೆ ಅವರ ಕಾಲೇಜು ಶಿಕ್ಷಣ ನಡೆದಿದ್ದು ಮುಂಬೈನಲ್ಲಿ ಮದುವೆಯಾಗಿದೆ. ಇಬ್ಬರು ಗಂಡು ಮಕ್ಕಳಿದ್ದಾರೆ, ಓಮರ್ ತಂಗಿ ಸಾರಾ, ಈಗಿನ ಕೇಂದ್ರ ಸಚಿವ ಸಚಿನ್ ಪೈಲಟ್‌ರ ಪತ್ನಿ.
ಓಮರ್ ಅಬ್ದುಲ್ಲಾ ತಮ್ಮ 29ನೇ ವಯಸ್ಸಿನಲ್ಲೇ ಲೋಕಸಭೆಗೆ ಆರಿಸಿ ಬಂದಿದ್ದರು. ಅವರು ಕಾಂಗ್ರೆಸ್ಸಿನಲ್ಲಿದ್ದಾಗಲೂ ಪ್ರತಿಷ್ಠೆ ಇತ್ತು. ಮುಂದೆ ಅಧಿಕಾರದ ಚಕ್ರದ ಉರುಳಲ್ಲಿ ಸಿಕ್ಕಿ ಬಿದ್ದು ವಾಜಪೇಯಿ ಸರ್ಕಾರದಲ್ಲಿ ವಿದೇಶಾಂಗ ಸಚಿವಾಲಯದಲ್ಲಿ ಸಹಾಯಕ ಮಂತ್ರಿಯಾದರು.
ಆ ಹುದ್ದೆಯನ್ನು ಬಿಟ್ಟು ತಮ್ಮ ಪಕ್ಷವಾದ ನ್ಯಾಷನಲ್ ಕಾನ್‌ಫೆರೆನ್ಸ್ ಸಂಘಟನೆಯನ್ನು ಬಲಪಡಿಸಲು ಕಾಶ್ಮೀರಕ್ಕೆ ಹೋದರು. ಅಲ್ಲಿ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದರು. ಅನಂತರ ಸೋತು ಮನೆಯಲ್ಲೇ ಇರಬೇಕಾಯಿತು. ಮತ್ತೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿದ್ದಾರೆ.
ಈಗ ಅವರದ್ದು ಕಾಂಗ್ರೆಸ್ ಜತೆಯ ಸಮ್ಮಿಶ್ರ ಸರ್ಕಾರ. ಆದರೂ ಅಲ್ಲಿನ ಜನರು, ಬಹುತೇಕ ಭಾರತೀಯರು ಆ ಸರ್ಕಾರವನ್ನು ಭಾರತ ಸರ್ಕಾರದ ಒಂದು ಬಾಹು ಎಂದೇ ಭಾವಿಸಿರುವಂತಿದೆ.
ಓಮರ್ ಅಬ್ದುಲ್ಲಾ ಉತ್ತಮವಾದ ಭಾಷಣಕಾರ. ಸೊಗಸಾದ ಇಂಗ್ಲಿಷ್‌ನಲ್ಲಿ ಪಟಪಟನೆ ಮಾತಾಡುತ್ತಾರೆ. ಖಚಿತವಾದ ಮಾತು, ಅವರ ಭಾಷಣದ ಶೈಲಿ. ಏನು ಹೇಳಬೇಕಾದರೂ ಸ್ಪಷ್ಟವಾಗಿ ಹೇಳುತ್ತಾರೆ.
ಅನೇಕ ಬಗೆಯ ವಾದ-ವಿವಾದಗಳಲ್ಲಿ ರಾಜಕೀಯವಾಗಿ ಸಿಕ್ಕಿ ಬಿದ್ದಿದ್ದೂ ಉಂಟು. ಆದರೆ ಭ್ರಷ್ಟಾಚಾರದ ಆರೋಪಗಳಿಂದ ದೂರವಾಗಿದ್ದಾರೆ. ಒಮ್ಮೆ ಓಮರ್ ಅಬ್ದುಲ್ಲಾ ಅವರನ್ನು ಕೊಲ್ಲುವ ಪ್ರಯತ್ನವೂ ನಡೆದಿತ್ತು.
ಅವರಿಗಿನ್ನೂ 42 ವಯಸ್ಸು. ರಾಜಕೀಯದಲ್ಲಿ ದೀರ್ಘ ಪಯಣದ ಹಾದಿ ಅವರ ಮುಂದಿದೆ. ಕಲ್ಲು-ಮುಳ್ಳುಗಳ ಹಾದಿ ಅದು. ಕಾಶ್ಮೀರದಲ್ಲಿ ಸೆಕ್ಯುಲರ್ ಸಿದ್ಧಾಂತವನ್ನು ಎತ್ತಿ ಹಿಡಿದಿರುವ ವ್ಯಕ್ತಿ. ಆದರೆ ಅದು ಅಲ್ಲಿಯ ವಾತಾವರಣದಲ್ಲಿ ಕಡುಕಷ್ಟ.
ಒಮ್ಮೆ ಓಮರ್ ಅಬ್ದುಲ್ಲಾ, ಖಾಸಗಿ ಭೇಟಿಯೊಂದರ ಸಮಯದಲ್ಲಿ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರ್ರಫ್ ಅವರನ್ನು ಪಾಕ್ ಆಕ್ರಮಿತ ಕಾಶ್ಮೀರದ ಪ್ರದೇಶದಲ್ಲಿ ಭೇಟಿಯಾಗಿದ್ದೇ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು. ಅದನ್ನು ಅವರು ಚಾಕಚಕ್ಯತೆಯಿಂದ ನಿಭಾಯಿಸಿಕೊಂಡರು.
ಈಚಿನ ದಿನಗಳಲ್ಲಿ ಅವರನ್ನು ಒಳಗೊಂಡ ಯಾವ ರೀತಿಯ ವಿವಾದವೂ ಹೆಚ್ಚಾಗಿ ಪ್ರಚಾರದಲ್ಲಿಲ್ಲ, ಕಾಶ್ಮೀರದ ರಾಜಕೀಯವನ್ನು ಚೆನ್ನಾಗಿ ತಿಳಿದಿರುವ ಓಮರ್ ಅಬ್ದುಲ್ಲಾ ಅವರಿಗೆ ಇದುವರೆಗೆ ಎಲ್ಲ ವಿಚಾರಗಳಲ್ಲೂ ಕೇಂದ್ರ ಸರ್ಕಾರದ ಸಂಪೂರ್ಣವಾದ ಬೆಂಬಲ ಸಿಕ್ಕಿದೆ. ಆ ಬೆಂಬಲವಿರುವವರೆಗೂ ಅವರು ಭದ್ರ.
=ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.