ಸಾಪ್ತಾಹಿಕಪ್ರಭ

ಒಳಸುಳಿಯ ತಳದಲ್ಲಿ

Published On :

ಏಕಾಂತ ಪೂಜೆ ಆಗಬೇಕು ಅಂತ ಹೇಳಿದಾಗ ಸನ್ಯಾಸಿಗಳ ಕಟ್ಟುನಿಟ್ಟಿನ ವರ್ತನೆಗೆ ಮಾರುಹೋಗಿ ಅತ್ತೆಯವರು ದೂಸರಾ ಮಾತಾಡದೇ ಒಪ್ಪಿಗೆ ಕೊಟ್ಟಿದ್ದರು. ಮತ್ತೆ ಪನ್ನೀರಿನ ಸ್ನಾನದ ಒದ್ದೆ ಬಟ್ಟೆಯಲ್ಲಿ ಪೂಜೆ. ಅತ್ತೆ ಮತ್ತು ನಮ್ಮ ಯಜಮಾನರಿಗೆ ಹೊರಗಡೆ ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ ಪೂಜಾಗ್ರಹದ ಬಾಗಿಲನ್ನು ಆ ಸನ್ಯಾಸಿ ಭದ್ರಪಡಿಸಿದರು.
'ಕಾಮನ ಮಕ್ಕಳೋ... ಕಳಬಡ್ಡಿ ಮಕ್ಕಳೋ ಧಿಮ್ಸೋಲ್...'
ಹೋಳಿ ಹುಣ್ಣಿಮೆಯ ಹಣಮಿನ ಮಕ್ಕಳ 'ಧಿಮ್ಸೋಲ್...' ಸದ್ದು ದೂರದಲ್ಲೆಲ್ಲೋ ಕೇಳಿಸುತ್ತಿತ್ತು. ಹೋಳಿ ಹಬ್ಬದ ಕಾಮದಹನದ ಪ್ರಕ್ರಿಯೆಯಾದ ಕಾಮದಹನದ ತಯಾರಿ ನಡೆಯುತ್ತಿರುವಾಗಲೇ ಹುಣ್ಣಿಮೆಯ ತಂಗಾಳಿಯ ತೀಡುವಿಕೆಯಲ್ಲಿ ಚಂದಿರ ಆಕಾಶದಲ್ಲಿ ಕುಳಿತೇ ಸದ್ದಿಲ್ಲದೇ ಭೂಮಿಯಲ್ಲಿನ ಜೀವರಾಶಿಗಳ ಒಡಲಲ್ಲಿ ಕಾಮದ ಬೀಜ ಬಿತ್ತುತ್ತಿದ್ದ. ಭದ್ರೆ ಬಿಸಿಲುಮಚ್ಚಿನಲ್ಲಿ ನಿಂತು ದೂರದ ದಿಗಂತದಲ್ಲಿ ದೃಷ್ಟಿ ನೆಟ್ಟಿದ್ದಳು. ಹಾಲಿನಂಥ ಬೆಳದಿಂಗಳು ಕೂಡಾ ಅಲ್ಲಲ್ಲಿ ಕತ್ತಲಿನ ಓರೆಕೋರೆಗಳನ್ನು ಬೆಳಗಿಸದೇ ಸೋತು ಹಾಗೇ ಉಳಿಸಿತ್ತು. ಅವಳ ಮನಸ್ಸು ಅದೇ ಹದಿನೈದು ದಿನಗಳ ಹಿಂದೆ ಅರಮನೆಯಲ್ಲಿ ನಡೆದ ಘಟನೆಯನ್ನೇ ಮೆಲುಕು ಹಾಕುತ್ತಿತ್ತು. ಸರಿಸುಮಾರು ಮಧ್ಯರಾತ್ರಿ ಕಳೆದಿರಬಹುದು. ಅರಮನೆಯ ಕಡೆ ನೋಡಿದಳು. ಅಂತಃಪುರದ ಶಯನಗೃಹದಲ್ಲಿ ಇನ್ನೂ ದೀಪ ಉರಿಯುತ್ತಲೇ ಇತ್ತು.
ಚಿತ್ರವೀರ್ಯ, ವಿಚಿತ್ರವೀರ್ಯರು ಮರಣಹೊಂದಿದ ನಂತರ ಅರಮನೆ ಸಂಭ್ರಮ ಎಂದರೆ ಏನೆಂಬುದನ್ನೇ ಮರೆತಿತ್ತು. ಒಂದು ತರಹ ಸೂತಕದ ಛಾಯೆ ಅರಮನೆಯನ್ನು ಆವರಿಸಿ ಅಂಬಿಕೆ ಅಂಬಾಲಿಕೆಯರು ಶಯನಗೃಹ ಬಿಟ್ಟು ಆಚೆ ಬರದಾದಾಗ ಪ್ರಜೆಗಳು ಕೊರಗುತ್ತಿದ್ದರು, ಹಸ್ತಿನಾವತಿಗೆ ಈ ಗತಿ ಬಂತೆ? ಕುರುಕುಲ ಕುಡಿಯಿಲ್ಲದೇ ನಾಶವಾಗುವ ಸ್ಥಿತಿ ಬಂತೆ? ಎಂದು. ರಾಜಮಾತೆ ಸತ್ಯವತಿ ತನ್ನ ಮಕ್ಕಳ ಭವಿತವ್ಯದ ಬಗ್ಗೆ ಚಿಂತಿಸಿ ಭೀಷ್ಮನಿಂದ ಪ್ರತಿಜ್ಞೆ ಮಾಡಿಸಿ ತಪ್ಪು ಮಾಡಿದೆನೇ? ಎಂದು ಆತ್ಮವಿಮರ್ಶೆ ಮಾಡಿಕೊಳ್ಳುವುದರೊಂದಿಗೆ ಅವಕಾಶವಾದದ ಅಡಿಯಲ್ಲಿ ಸಾಧ್ಯವಾದರೆ ಭೀಷ್ಮನನ್ನೇ ಉಪಯೋಗಿಸಿಕೊಳ್ಳಬೇಕು ಎಂಬ ನಿಲುವಿಗೆ ಬಂದಿದ್ದಳು. ತೋಳ್ಬಲ, ಬುದ್ಧಿ ಎರಡನ್ನೂ ಹೊಂದಿ ರಾಜಕಾರಣದ ಉಪಯೋಗಕ್ಕೆ ಬರದವನಾಗಿ ಅವಳಿಗೆ ಭೀಷ್ಮ ಕಂಡಿದ್ದ. ಆದರೂ ಒತ್ತಾಯಿಸಿದ್ದಳು.
'ನೀನು ಗೆದ್ದು ತಂದ ಹೆಣ್ಣುಗಳಲ್ಲವೇ ಅವರು..? ನಿನ್ನ ಹೆಂಡಿರಾಗಬೇಕಾಗಿದ್ದವರು. ನನ್ನ ಮಾತಿಗೆ ಬೆಲೆಕೊಟ್ಟು ಬ್ರಹ್ಮಚರ್ಯದ ಪ್ರತಿಜ್ಞೆ ಮಾಡಿದೆ. ಈಗ ನಾನೇ ಹೇಳುತ್ತಿದ್ದೇನೆ ರಾಜಮಾತೆಯಾಗಿ. ರಾಜ ಪುರೋಹಿತರನ್ನು ಕೇಳುತ್ತೇನೆ. ಮರುಮದುವೆಗೆ ಶಾಸ್ತ್ರದಲ್ಲಿ ಅವಕಾಶವುಂಟೇ? ಎಂದು. ಇನ್ನು ಅಂಬಿಕೆ ಅಂಬಾಲಿಕೆಯರಿಗೆ ಒತ್ತಾಯಿಸುವ ಆಗತ್ಯವಂತೂ ಖಂಡಿತಾ ಇಲ್ಲ. ಅವರು ನನ್ನ ಮಾತನ್ನು ಮೀರುವುದಿಲ್ಲ ಎಂಬ ನಂಬಿಕೆ ನನಗಿದೆ. ಇದಕ್ಕೆ ನಿನ್ನ ಉತ್ತರವೇನು..?'
ಭೀಷ್ಮ ಅಚಲನಾಗಿದ್ದ. ಮತ್ತೆ ಸತ್ಯವತಿಯೇ ಮಾತಿಗೆ ಮುಂದಾದರು.
'ನೀನಿರುವವರೆಗೂ ರಾಜ್ಯದಲ್ಲಿ ಅರಾಜಕತೆ ತಲೆದೋರದು ನಿಜ. ಆದರೆ ನಿನ್ನ ನಂತರದ ಬಗ್ಗೆ ಯೋಚನೆ ಮಾಡು. ಈ ರಾಜ್ಯ ವಾರಸುದಾರರಿಲ್ಲದೇ ಅನಾಥವಾಗುತ್ತದೆ'. ಪಕ್ಕದಲ್ಲಿ ಕೊಠಡಿಯಲ್ಲಿ ಕೆಲಸ ಮಾಡುತ್ತಿದ್ದ ಭದ್ರೆಗೆ ಇದು ಸೋಜಿಗವೆನ್ನಿಸಿತ್ತು. ತನ್ನ ಜೊತೆಗೆ ತನ್ನಂತೆಯೇ ದಾಸಿಯಾಗಿ ಕೆಲಸಮಾಡುವ ಚಿತ್ರಲೇಖಳನ್ನು ಪಿಸುಮಾತಿನಲ್ಲೇ ಕೇಳಿದ್ದಳು. 'ಅಲ್ಲ ಕಣೇ, ರಾಜಮಾತೆಯವರು ಹೇಳಿದ್ದು ಸರೀನಾ..? ರಾಜವಂಶ ಇಲ್ಲದಲ್ಲಿ ರಾಜ್ಯ ಅನಾಥವಾಗುತ್ತದೆ ಅಂತ. ರಾಜ್ಯ ಅನಾಥವಾಗದ ಹಾಗೆ ಕೋಟಿಗಟ್ಟಲೆ ಪ್ರಜೆಗಳಿಲ್ಲವಾ...?' ಚಿತ್ರಲೇಖಾ ಕಿಸಕ್ಕನೆ ನಕ್ಕಿದ್ದಳು. 'ಪ್ರಜೆಗಳಿದ್ದರೆ ರಾಜರಿದ್ದ ಹಾಗೆ ಅಂದುಕೊಂಡೆಯಾ? ಮಂಕು ದಿನ್ನೆ...'.
ರಾಜಮಾತೆಯ ಮಾತಿಗೆ ಭೀಷ್ಮರು ಗುಡುಗಿದ್ದರು.
'ಶಾಸ್ತ್ರದಲ್ಲಿ ಬೇರೆ ಯಾವುದಕ್ಕಾದ್ರೂ ಅವಕಾಶವಿದೆಯೇ ಎಂದು ವಿಚಾರಿಸಿ. ನನ್ನ ಬ್ರಹ್ಮಚರ್ಯ ಕೆಡಿಸುವುದರ ಹೊರತಾಗಿದ್ದಾದರೆ ಸರಿ. ಅದ್ಯಾವುದಿದ್ದರೂ ಅದಕ್ಕೆ ನನ್ನ ಸಹಮತ ಇದೆ. ಸಹಮತವೇನು ನಾನೇ ನಿಂತು ಅದನ್ನು ನೆರವೇರಿಸುತ್ತೇನೆ'.
'ಬೇರೆ ಯಾವುದಿದೆ ಹೇಳು ಭೀಷ್ಮಾ... ಮರು ಮದುವೆಯೊಂದನ್ನು ಬಿಟ್ಟು. ಈ ಕುಲದಲ್ಲಿ ಇನ್ಯಾರಿದ್ದಾರೆ ಈ ರಾಜವಂಶ ಬೆಳೆಸುವ ಕಾಯಕದಲ್ಲಿ ತೊಡಗಿಸುವುದಕ್ಕೆ ನಿನ್ನ ಹೊರತಾಗಿ..'.
'ದಯವಿಟ್ಟು ಈ ವಿಷಯದಲ್ಲಿ ನನ್ನನ್ನು ಹೊರತುಪಡಿಸಿ ರಾಜಮಾತೆ. ಈ ಭೀಷ್ಮ ಎಂದಿದ್ದರೂ ತನ್ನ ಪ್ರತಿಜ್ಞೆಯ ನೆರಳು ಎಂಬುದು ತಮಗೆ ನೆನಪಿದೆ ಎಂದುಕೊಂಡಿದ್ದೇನೆ..' ಮಾತು ಮುಗಿಸುವ ಮುನ್ನ ರಾಜಮಾತೆ ತಲೆಹಾಕಿದ್ದರು.
'ರಾಜವಂಶವನ್ನು ರಾಜವಂಶದವರು ಬೆಳೆಸಬೇಕೇ ಹೊರತಾಗಿ, ಕೋಟೆಯ ಬುರುಜಿನ ಕಾವಲುಗಾರನನ್ನು ಕರೆಸಿ ಈ ಕೆಲಸ ಮಾಡಿಸಲು ಸಾಧ್ಯವೇ..? ಅದೂ ಚಿತ್ರವೀರ್ಯ, ವಿಚಿತ್ರವೀರ್ಯರು ಬದುಕಿದ್ದ ಕಾಲವಾಗಿದ್ದಲ್ಲಿ  ವಿಷಯವೇ ಬೇರೆ ಆಗಿರುತ್ತಿತ್ತು. ಆದರೆ ಈಗ ಅದು ಅಸಾಧ್ಯದ ಮಾತು. ಅಂಬಿಕೆ, ಅಂಬಾಲಿಕೆಯರು ವಿಧವೆಯರಾಗಿದ್ದಾರೆ...' ಈ ಯಾವ ಮಾತನ್ನು ಕೇಳುವುದಕ್ಕೂ ಭೀಷ್ಮರು ಅಲ್ಲಿರಲಿಲ್ಲ.
=
'ಕಾಮನ ಮಕ್ಕಳೋ... ಕಳಬಡ್ಡಿ ಮಕ್ಕಳೋ ಧಿಮ್ಸೋಲ್...'
ಹೌದು, ಹಣಮಿನ ಮಕ್ಕಳು ಹತ್ತಿರದ ಬೀದಿಗೆ ಬಂದಿದ್ದಾರೆ. ಅವರ ಬಗ್ಗೆಯೂ ಭದ್ರೆಯ ಮುಖದಲ್ಲಿ ಒಂಥರಾ ಕುಹಕವೆ... ಕೊನೆಗೂ ಸುಟ್ಟು ಹಾಕುವ ಕಾಮನಿಗೆ ಎಂಥ ಮೆರವಣಿಗೆ. ಅಷ್ಟಕ್ಕೂ ಸುಟ್ಟುಹಾಕುತ್ತಾರ ಅವನನ್ನು? ತಲೆ ಎತ್ತಿ ಆಕಾಶ ನೋಡಿದಳು. ಚಂದ್ರ ತುಂಬು ನಗೆ ನಕ್ಕಿದ್ದ. ವಕ್ರ ನಗೆ ನಗಲು ಇಂದು ಹುಣ್ಣಿಮೆಯಲ್ಲವೇ..? ಬಿದಿಗೆಯಾಗಿದ್ದರೆ ವಕ್ರ ನಗೆ ನಗುತ್ತಿದ್ದನೋ ಏನೋ.. ಭೂಮಿಯಿಂದ ದೂರವೇ ಇದ್ದ ಅವನಿಗೂ ಭೂಮಿಯಲ್ಲಿದ್ದ ನಮ್ಮ ಹಾಗೆಯೇ ಅಮವಾಸ್ಯೆ ಹುಣ್ಣಿಮೆಗಳ ಕಟ್ಟುಪಾಡುಗಳೇ..!!?
ಕೋಟೆಯ ಬುರುಜಿನ ಮೇಲಿನಿಂದ ಪಹರೆಯ ಮೊದಲ ಜಾವದ ಕಾವಲಿನವನ ಕೂಗು 'ಎಚ್ಚರಾ...! ಎಚ್ಚರಾ...!'.
ಒಮ್ಮೆ ಕಾವಲಿನ ಬುರುಜಿನ ಕಡೆಗೆತಿರುಗಿ ನೋಡಿದಳು ಭದ್ರೆ ಮತ್ತೆ ಯೋಚನೆಯ ಆಳಕ್ಕೆ ಇಳಿಯತೊಡಗಿದಳು. ಆಂದು ಅರಮನೆಗೆ ವ್ಯಾಸರ ಜೊತೆಗೆ ಬಂದ ಅವರ ಶಿಷ್ಯ, ಅವನ ಹೆಸರೇನೋ ತಿಳಿಯದು. ಚಿತ್ರಲೇಖೆ ಹೇಳಿದ ಹಾಗೆ ಚಿರಂತನ ಅಂತೆ. ಅವನೂ ಅದ್ಯಾವುದೋ ನೆರೆಯ ರಾಜವಂಶದವನೇ ಇರಬೇಕು ಭೋಗ ಭಾಗ್ಯಗಳನ್ನೆಲ್ಲಾ ತೊರೆದು ವ್ಯಾಸರ ಶಿಷ್ಯನಾಗಿದ್ದಾನಂತೆ ಎಂದೂ ಅವಳೇ ಹೇಳಿದ್ದಳು. ಅದೇನೇ ಇರಲಿ. ಹೇಗಿದ್ದಾನೆ ಅವನು..? ಕಟ್ಟುಮಸ್ತಾದ ದೇಹ, ಆಜಾನು ಬಾಹು. ವ್ಯಾಸರಂಥ ವ್ಯಾಸರನ್ನೂ ಒಂದು ಕ್ಷಣ ಮರೆಮಾಡುವಂಥ ವ್ಯಕ್ತಿತ್ವ... ಮನಸ್ಸು ಒಮ್ಮೆ ಅಲುಗಾಡಿತ್ತು. ನಿಯೋಗದ ರೂಪದಲ್ಲಾದರೂ ಒಂದು ಸಂತಾನ ಇವನಿಂದ ಲಭಿಸುವಂತಿದ್ದರೆ. ಸಂತಾನ ಇರಲಿ ಆ ನೆಪದಲ್ಲಾದರೂ ಇವನ ಜೊತೆ ಕೆಲವು ಕ್ಷಣ ಕಳೆಯುವಂತಿದ್ದರೆ..!
ಕಾಕತಾಳೀಯವೆಂಬಂತೆ ಅತ್ತೆಯೂ ಇದೇ ವಿಚಾರ ಪ್ರಸ್ತಾಪ ಮಾಡಿದ್ದರು. 'ಅಲ್ಲವೇನೇ ಭದ್ರಾ... ಆ ವ್ಯಾಸರ ಶಿಷ್ಯ ಎಷ್ಟು ಚೆನ್ನಾಗಿದ್ದಾನೆ. ಹೇಗೂ ನಮ್ಮ ಮನೆಯಲ್ಲೂ ಮಗು ತೊಟ್ಟಿಲು ಎನ್ನುವುದು ಕನಸಿನ ಮಾತಾಗುತ್ತಿದೆ... ನನ್ನ ಮಗನಿಂದ ಅದು ಸಾಧ್ಯವಿಲ್ಲ ಎನ್ನುವುದನ್ನು ನಿನಗಿಂತಲೂ ನಾನು ಚೆನ್ನಾಗಿ ಬಲ್ಲೆ...'
ಅತ್ತೆಯ ಮುಖ ದಿಟ್ಟಿಸಿದಳು. ಹೌದು..! ರಾಜಮಾತೆ ಸತ್ಯವತಿಯವರನ್ನೇ ಕಂಡಂತೆ ಅನ್ನಿಸಿತ್ತು. ಒಪ್ಪಿಗೆಯ ನಿಟ್ಟಿನಲ್ಲೂ ಯೋಚಿಸದೇ ತಾವೇ ಖುದ್ದಾಗಿ ರಾಜಧಾನಿಯ ಹೊರಭಾಗದಲ್ಲಿ ಬೀಡುಬಿಟ್ಟಿದ್ದ ವ್ಯಾಸರ ಶಿಬಿರಕ್ಕೆ ಹೋಗಿ ವ್ಯಾಸರ ಹತ್ತಿರ ತಮಗೊಂದು ಸಂತಾನ ಪ್ರಾಪ್ತಿ ತಮ್ಮ ಶಿಷ್ಯನಿಂದ ಆಗಬೇಕು ಎಂದು ಬೇಡಿದಳೋ ಅಥವಾ ಚಿರಂತನರ ಹತ್ತಿರವೇ ತಾವೇ ಖುದ್ದಾಗಿ ವ್ಯವಹಾರ ಖುದುರಿಸಿದರೋ ಅಂತೂ ಮುಂದಿನ ಹುಣ್ಣಿಮೆಯಂದು ಯಾರಿಗೂ ಗೊತ್ತಾಗದ ಹಾಗೆ ಬರಲು ಒಪ್ಪಿದ್ದಾರೆ ಎಂಬ ವಿಷಯವನ್ನು ತಿಳಿಸಿದ್ದರು. ಯಾಕೋ ರಾಜ್ಯವನ್ನೇ ಈ ನಿಯೋಗದ ನೆರಳು ಆವರಿಸುತ್ತಿದೆಯೇ...? ಭದ್ರಾ ಕ್ಷಣ ಕಾಲ ಕಂಪಿಸಿದಳು. ಮನೆಯಲ್ಲಿ ಅದರ ಸಿದ್ಧತೆ ಕೂಡಾ ನಡೆದಿತ್ತು. ಆದರೆ, ಈ ವಿಷಯ ಯಾರಿಗೂ ತಿಳಿಯಕೂಡದು. ಮಹಾರಾಜರ ವಂಶಕ್ಕಾದರೆ ವಂಶ ಬೆಳೆಸಲು ಶಾಸ್ತ್ರದಲ್ಲಿ ನಿಯೋಗಕ್ಕೆ ಅವಕಾಶ ಇದೆ. ಸಾಮಾನ್ಯ ಜನರಿಗೆ ಇದೆಯೋ ಇಲ್ಲವೋ ತಿಳಿಯದು. ಈ ಬಗ್ಗೆ ಎಲ್ಲದರೂ ಬಾಯಿ ಬಿಟ್ಟೀಯ ಮತ್ತೆ... ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದರು. ನಿಯೋಗಕ್ಕಾಗಿ ಹೊಸಮಂಚ, ಹಾಸಿಗೆ ಮತ್ತು ಹುಟ್ಟುವ ಮಗುವಿಗಾಗಿ ತೊಟ್ಟಿಲನ್ನೂ ತಂದಾಗಿತ್ತು. ಊಟದ ಸಮಯದಲ್ಲಿ ಭದ್ರೆ ಗಂಡನ ಮುಖ ನೋಡಿದ್ದಳು. ಅವನಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಇವೆಲ್ಲವನ್ನೂ ಅವನು ಮನೆಯಲ್ಲಿ ನಡೆಯುವ ಯಾವುದೋ ಸಮಾರಂಭದ ಸಿದ್ಧತೆಯ ರೀತಿಯಲ್ಲಿ ತಾನೂ ಭಾಗಿಯಾಗಿಯೇ ಮಾಡುತ್ತಿದ್ದ. ಕೊಟ್ಟಿಗೆಯಲ್ಲಿ ಬೀಜಕ್ಕಾಗಿಯೇ ಸಾಕಿದ ಗಂಗೆ ಹಸುವನ್ನು ಫಲಿತಗೊಳಿಸಲಾರದೇ ಹೊಲ ಉಳುವ ಹೊಸ ಜವಾಬ್ದಾರಿ ಹೊತ್ತು ದಿನವೆಲ್ಲಾ ದುಡಿದು ರಾತ್ರಿ ತಿಂದ ಊಟವನ್ನು ಅರೆಗಣ್ಣು ತೆರೆದು ಮೆಲುಕು ಹಾಕುತ್ತಿದ ಹೋರಿಯ ಕಣ್ಣಿನ ಮ್ಲಾನತೆ ಅವನಲ್ಲಿ ಕಾಣಿಸುತ್ತಿತ್ತು. ಅಂತೂ ಇಷ್ಟು ಸುಲಭದಲ್ಲಿ ಪುರುಷ ತನ್ನ ದೌರ್ಬಲ್ಯವನ್ನು ಒಪ್ಪಿಕೊಳ್ಳುತ್ತಾನೆಯೇ..? ಪ್ರಶ್ನೆ ಎದುರಾದರೂ ಅನಿವಾರ್ಯತೆಯ ಸುಳಿ ಏನನ್ನಾದರೂ ಯಾರನ್ನಾದರೂ ತನ್ನ ತೆಕ್ಕೆಯಲ್ಲಿ ಎಳೆದು ಮುರಿದು ಮುದ್ದೆ ಮಾಡುತ್ತದೆ ಎನ್ನುವುದು ಭದ್ರೆಗೆ ಸ್ಪಷ್ಟವಾಗುತ್ತಿತ್ತು. ಒಟ್ಟಿಗೆ ಮನೆಯಲ್ಲಿ ಹೊಸಮಗುವಿನ ಸ್ವಾಗತಕ್ಕೆ ಸಿದ್ಧತೆ.
ಭದ್ರೆ ತಲೆ ಎತ್ತಿ ಚಂದಿರನನ್ನು ನೋಡಿದಳು. ಯಾರೂ ಇಲ್ಲದ್ದರ ಅವಕಾಶವನ್ನೇ ಸದುಪಯೋಗಪಡಿಸಿಕೊಂಡವನಂತೆ ಚಂದ್ರ ತನ್ನ ತಣ್ಣನೆಯ ಕಿರಣಗಳ ಕಚಗುಳಿಯಿಡುತ್ತಿದ್ದ. ಅವನ ಜೊತೆಗೆ ತಂಗಾಳಿಯೂ ಜೊತೆಗಾರನಾಗಿತ್ತು. ಚಿರಂತನನ ಸಾಂಗತ್ಯದ ಕಲ್ಪನೆ ಭದ್ರೆಯಲ್ಲಿ. ಹರವಾದ ರೋಮಭರಿತ ಎದೆಯ ಮೇಲೆ ತಲೆಯನಿಟ್ಟು, ಅವನ ತೋಳ ತೆಕ್ಕೆಯಲ್ಲಿ, ಬಿಗಿದ ಅಪ್ಪುಗೆಯಲ್ಲಿ, ಉಸಿರಿಗೆ ಉಸಿರು ಬೆರೆಸಿ...!
'ಎಚ್ಚರಾ...! ಎಚ್ಚರಾ...!' ಕೋಟೆಯ ಬುರುಜಿನ ಮೇಲಿನಿಂದ ಪಹರೆಯ ಎರಡನೇ ಜಾವದ ಕಾವಲಿನವನ ಕೂಗು. ತಟ್ಟನೆ ಇಹಕ್ಕೆ ಬಂದಳು. ಈ ಎಚ್ಚರಿಕೆ ನನಗೇ ಇರಬಹುದೇ...? ಸಣ್ಣಗೆ ಮೈ ಬೆವರತೊಡಗಿತು.
=
'ಕಾಮನೋ ಮಕ್ಕಳೋ... ಕಳಬಡ್ಡಿ ಮಕ್ಕಳೋ ಧಿಮ್ಸೋಲ್..'
ಹೌದು ಹಣಮಿನ ಕಾಮನ ಮಕ್ಕಳು ಈಗ ಪಕ್ಕದ ರಸ್ತೆಯಲ್ಲೇ ಇದ್ದಾರೆ. ನಮ್ಮ ಮನೆಯ ಹತ್ತಿರಕ್ಕೆ ಬರಲು ಇನ್ನೂ ಸ್ವಲ್ಪ ಹೊತ್ತಾಗಬಹುದು. ಅತ್ತೆ ಎಚ್ಚರವಿದ್ದರೆ ಸರಿ ಇಲ್ಲದಿದ್ದರೆ ನಾನೇ ಹೋಗಿ ವಂತಿಗೆ ಕೊಟ್ಟರಾಯ್ತು. ಎಂದುಕೊಳ್ಳುತ್ತಲೇ ನಿನ್ನೆಯ ಆಳಕ್ಕೆ ನಿಧಾನವಾಗಿ ಇಳಿಯತೊಡಗಿದಳು.
'ಇದೇನೂ ಹೊಸತಲ್ಲ ಭದ್ರಾ... ನಿನ್ನ ಮಾವನ ಕತೆಯೂ ಹೀಗೇ... ಆದರೆ ನನ್ನ ಅತ್ತೆ ನನ್ನ ಥರ ಇರಲಿಲ್ಲ ನೋಡು. ಮಡಿ ಮೈಲಿಗೆ ಪಾತಿವ್ರತ್ಯ ಅಂತೆಲ್ಲಾ ಅವರದೇ ಯೋಚನೆ ಕಟ್ಟುಪಾಡುಗಳು. ನನ್ನ ಮೇಲೂ ಹದ್ದಿನ ಕಣ್ಣಿಟ್ಟಿದರು. ಒಮ್ಮೆ ಪುತ್ರಕಾಮೇಷ್ಠಿಯಂಥದ್ದೇ ಒಂದು ಪೂಜೆ. ಅದು ಪುತ್ರಕಾಮೇಷ್ಠಿ ಇರಲಿಕ್ಕಿಲ್ಲ ಬಿಡು. ಪುತ್ರಕಾಮೇಷ್ಠಿ ಮಾಡಿಸುವುದಕ್ಕೆ ನಾವೇನು ರಾಜರೆ..? ಅದಕ್ಕಂತ ಒಬ್ಬರು ಗುರುಗಳು ಬಂದಿದ್ದರು. ಗುರುಗಳು ಎನ್ನುವುದಕ್ಕಿಂತ ಸನ್ಯಾಸಿ ಎಂದರೆ ಸರಿಯೋ ಎನೋ..? ಆಳೆತ್ತರದ ದೇಹ, ಆಜಾನುಬಾಹು.. ನನ್ನ ಅತ್ತೆಗೋ ಹಾಗೂ ಅನುಮಾನವೇ..? ಆದರೆ, ಮಂತ್ರಜಲದಿಂದ ಅಗ್ನಿ ತಯಾರಿಸಿ ಪೂಜೆ ಆರಂಭಿಸಿದ್ದನ್ನು ಕಂಡು ಅವನ ಪಾದಕ್ಕೆರಗಿದ್ದರು. ನನಗೂ ಆಶ್ಚರ್ಯ 'ಜಲದಿಂದ ಅಗ್ನಿ...' ಕಮಕ್ ಕಿಮಕ್ ಎನ್ನದೆ ಪೂಜೆಗೆ ತಯಾರಾಗಿದ್ದೆ. ಮೂರು ನಾಲ್ಕು ದಿನದ ಪೂಜೆ. ನಮ್ಮ ಯಜಮಾನರಿಗೆ ಅಂಥ ಕಟ್ಟುನಿಟ್ಟಿರಲಿಲ್ಲ. ಬೆಳಗ್ಗೆ ಒಂದು ಸ್ನಾನ, ಅರ್ಧ ಗಂಟೆ ಪೂಜೆ, ಪ್ರಸಾದ. ಆದರೆ ನನಗೆ ಮಾತ್ರ ದಿನಕ್ಕೆ ಐದು ಬಾರಿ ಸ್ನಾನ, ಅದೂ ತಣ್ಣೀರಿನಲ್ಲಿ ಹೂ ದಳಗಳನ್ನು ಪನ್ನೀರನ್ನೂ ಸೇರಿಸಿ, ಆಮೇಲೆ ಪೂಜೆ ಸಂತಾನ ಲಕ್ಷ್ಮಿಗೆ, ಸಂತಾನ ಗೌರಿಗೆ. ಕೊನೆಯ ದಿನ ಸಿದ್ಧಿಯ ದಿನ, ಏಕಾಂತ ಪೂಜೆ ಆಗಬೇಕು ಅಂತ ಹೇಳಿದಾಗ ಸನ್ಯಾಸಿಗಳ ಕಟ್ಟುನಿಟ್ಟಿನ ವರ್ತನೆಗೆ ಮಾರುಹೋಗಿ ಅತ್ತೆಯವರು ದೂಸರಾ ಮಾತಾಡದೇ ಒಪ್ಪಿಗೆ ಕೊಟ್ಟಿದ್ದರು. ಮತ್ತೆ ಪನ್ನೀರಿನ ಸ್ನಾನದ ಒದ್ದೆ ಬಟ್ಟೆಯಲ್ಲಿ ಪೂಜೆ. ಅತ್ತೆ ಮತ್ತು ನಮ್ಮ ಯಜಮಾನರಿಗೆ ಹೊರಗಡೆ ಕಣ್ಣು ಮುಚ್ಚಿ ಪ್ರಾರ್ಥಿಸಲು ಹೇಳಿ ಪೂಜಾಗ್ರಹದ ಬಾಗಿಲನ್ನು ಆ ಸನ್ಯಾಸಿ ಭದ್ರಪಡಿಸಿದರು. ಒದ್ದೆ ಬಟ್ಟೆ, ಹುಣ್ಣಿಮೆಯ ರಾತ್ರಿಯ ಚಳಿ, ಧೂಪದ ಹೊಗೆ.. ದೇವರಂಥ ದೇವರನ್ನೂ ಮಬ್ಬಾಗಿಸಿದ್ದವು. ಆ ಸನ್ಯಾಸಿ ನನ್ನ ಹತ್ತಿರ ಬಂದು ಆಕ್ರಮಿಸತೊಡಗಿದರು. ಬೇಡ ಎನ್ನಲು ಆಗದ ಸ್ಥಿತಿ. 'ದೇವರ ಕೋಣೆ...' ಎಂದಿದ್ದೆ. 'ಅದಕ್ಕೇನಂತೆ ಇದೂ ಜೀವ ಸೃಷ್ಟಿ, ಬ್ರಹ್ಮನ ಕೆಲಸ..' ಎಂದು ನಕ್ಕಿದ್ದರು. ಒಟ್ಟಿಗೆ ಆಕ್ರಮಣಕಾರಿ ಪುರುಷತ್ವ, ಎಚ್ಚರಗೊಂಡ ಸ್ತ್ರೀ ಸಹಜ ಬಯಕೆ, ಎರಡೂ ಸೇರಿ ಒಂದು ಮಗುವನ್ನು ಕೊಟ್ಟಿತು. ಆಶ್ಚರ್ಯದ ಸಂಗತಿಯೆಂದರೆ ಅಂಥ ಸಂತಾನ ನಿನ್ನ ಗಂಡ ಯಾಕೆ ನಪುಂಸಕನಾದ..? ಎನ್ನುವುದು. ಒಟ್ಟಿಗೆ ಯಾರ ಶಾಪವೋ ಏನೋ..? ಅರಮನೆಯ ಆದಿಯಾಗಿ ರಾಜ್ಯಕ್ಕೇ ಒಂದು ತರಹದ ಪುರುಷತ್ವದ ಕೊರತೆಯ ಅನುಭವ. ಹಾಗಂತ ಹೆಣ್ಣುಗಳೆಲ್ಲಾ ಬಂಜೆಯಾಗುವುದರಲ್ಲಿ ಅರ್ಥವಿದೆಯಾ ನೀನೆ ಹೇಳು..? ಬೀಜ ದೋಷಕ್ಕೆ ಭೂಮಿ ಎಂದೂ ಕಾರಣಳಾಗಲಾರಳು..! ಬೂರುಗದ ಹತ್ತಿಯ ಹಾರಿ ಬಂದ ಬೀಜದಿಂದಲಾದರೂ ಮತ್ತೆ ಗಿಡ ಹುಟ್ಟಿಸಿ ಒಡಲಲ್ಲಿ ತುಂಬಿಕೊಳ್ಳುತ್ತಾಳೆ ಅಲ್ಲವಾ..?' ಆತ್ತೆ ಹಿರಿತನ ಹಮ್ಮು ಬಿಮ್ಮುಗಳನ್ನು ಬಿಟ್ಟು ಬರೀ ಹೆಣ್ಣಾಗಿ ತೆರೆದುಕೊಂಡ ಅನುಭವ ಭದ್ರೆಗೆ. 'ಹೌದು... ವಕ್ರತೆ ಎನ್ನುವುದು ಎಂದೂ ಪೂರ್ಣತೆಗೆ ಕುಂದಾಗಬಾರದು ಅಲ್ಲವೇ...!'
=
'ಕಾಮನ ಮಕ್ಕಳೋ... ಕಳ್ಳ ಬಡ್ಡಿಮಕ್ಕಳೋ... ಧಿಮ್ಸೋಲ್...'
ಪಕ್ಕದಲ್ಲೇ ಕೂಗಿದಂತೆ... ಬಿಸಿಲು ಮಚ್ಚಿನಲ್ಲಿ ಇಣುಕಿ ನೋಡಿದಳು. ಪಂಜುಗಳನ್ನು ಹಿಡಿದ ಹಣಮಿನ ಮಕ್ಕಳ ದಂಡು ಈ ಬೀದಿಗೆ ಬಂದಿತ್ತು. ಅವರ ಹಿಂದೆ ನಾಲ್ಕಾರು ಗಾಡಿಗಳು. ಅದರಲ್ಲಿ ತುಂಬಿದ ಹಳೆಯ ಪೀಠೋಪಕರಣಗಳು, ಮನೆಯ ವಸ್ತುಗಳು, ಮರದ ದಿಮ್ಮಿ... ಎಲ್ಲವೂ ಹಳೆಯವು ಉಪಯೋಗಕ್ಕೆ ಬಾರದವು. ಕಾಮನ ದಹನಕ್ಕೆ ಕಾಮನೆಯ ಆಚೆಯ ವಸ್ತುಗಳೇ..? ಯೋಚನೆಯ ನಡುವೆ ಮನಯೆದುರಿನ ಮೈದಾನದ ಕಡೆ ಭದ್ರೆಯ ದ್ರಷ್ಟಿ ಹರಿದಿತ್ತು. ಇನ್ನೇನು ಭದ್ರೆಯ ಮನೆಯೇ ಬೀದಿಯ ಕೊನೆಯ ಮನೆ. ಹಾಗೆ ವಂತಿಗೆಗೂ ಕೂಡಾ... ಇವರ ಮನೆಯಿಂದ ಮೆರವಣಿಗೆ ನೇರ ಎದುರಿನ ಮೈದಾನಕ್ಕೆ. ನಂತರ ಕಾಮದಹನ. ಥಟ್ಟನೆ ಕಿವಿಗೊಟ್ಟಳು. ಹೌದು ದಿಮ್ಸಾಲಿನ ಹಾಡಿನ ನಡುವೆ ಕೆಲವು ಅಶ್ಲೀಲ ಪದಗಳೂ ಇದೆಯಲ್ಲಾ... ಕಾಮನ ಹಬ್ಬದಲ್ಲಿ ಇದು ಸರ್ವೇಸಾಮಾನ್ಯ... ಅಷ್ಟಕ್ಕೂ ಯಾವುದು ಶ್ಲೀಲ ಯಾವುದು ಅಶ್ಲೀಲ..? ಹುಟ್ಟೇ ಅಶ್ಲೀಲವಲ್ಲವೆಂದು ಒಪ್ಪಿಕೊಳ್ಳುವ ಘಟನೆಯಾದರೆ ಅದರ ಮೂಲವಾಗುವ ಅಂಶಗಳು ಅಶ್ಲೀಲ ಹೇಗೆ..? ಪ್ರಶ್ನೆಗಳ ಗೋಜಲಿನಲ್ಲಿರುವಾಗಲೇ ಹೆಗಲ ಮೇಲೆ ಯಾರೋ ಕೈ ಹಾಕಿದ್ದರು.
'ಇದೇನು ಮಹಾರಾಣಿಯವರು ಅರ್ಧರಾತ್ರಿಯಲ್ಲಿ... ಬಿಸಿಲು ಮಚ್ಚಿನಲ್ಲಿ...?' ತಿರುಗಿ ನೋಡಿದರೆ ಚಿತ್ರಲೇಖ.
'ಯಾಕೆ...? ನಿದ್ರೆ ಬಂದಿಲ್ಲವಾ...?' ಮತ್ತೆ ಪ್ರಶ್ನೆ...
'ಇಲ್ಲಾ... ಕಣೆ, ಹಣಮಿನ ಮಕ್ಕಳ ಕಾಮನ ಮೆರವಣಿಗೆ ನೋಡುತ್ತಾ ನಿಂತೆ... ಇನ್ನೇನು ನಮ್ಮ ಬೀದಿಗೆ ಬಂದಿದ್ದಾರೆ. ನಮ್ಮ ಮನೆಗೆ ಬರುವುದನ್ನೇ ಕಾಯುತ್ತಾ ನಿಂತಿದ್ದೇನೆ ವಂತಿಗೆ ಕೊಟ್ಟು ಮಲಗುವಾ ಅಂತ... ಅದು ಸರಿ ನೀನೇನು ಇಲ್ಲಿ. ನಿನಗೂ ನಿದ್ರೆ ಬಂದಿಲ್ಲವಾ ಹೇಗೆ?'
'ಹೌದು.. ನಿದ್ದೆ ಹೇಗೆ ಬರ್ತದೆ ಹೇಳು? ಹುಣ್ಣಿಮೆಯ ತಂಗಾಳಿ. ಯಜಮಾನರಿಗೆ ಇಂದು ಕೋಟೆಕಾವಲಿನ ರಾತ್ರಿ ಪಾಳಿ... ಈ ಕಾಮನ ಮೆರವಣಿಗೆಯ ಧಿಮ್ಸೋಲ್ ಬೇರೆ... ಅಂದಹಾಗೆ ನಿಮ್ಮ ಯಜಮಾನರು..?'
'ಅವರೋ ಇಂದು ಪಕ್ಕದ ರಾಜ್ಯಕ್ಕೆ ಓಲೆ ಮುಟ್ಟಿಸಲು ಹೋಗಿದ್ದಾರೆ..'
'ಯಜಮಾನರಿಲ್ಲದ ಹಾಸಿಗೆಯಲ್ಲಿ ನಿದ್ದೆ ಹೇಗೆ ಬಂದೀತು... ಅಲ್ವೇನೇ..?' ತುಂಟ ನಗೆ ನಕ್ಕು ಭದ್ರೆಯ ಪಕ್ಕೆಗೆ ಮೃದುವಾಗಿ ತಿವಿದಿದ್ದಳು ಚಿತ್ರಲೇಖ. ಥಟ್ಟನೆ ಕೇಳಿದ್ದಳು ಭದ್ರೆ, 'ಚಿತ್ರಾ.. ಈ ನಿಯೋಗ ಅಂದರೆ ಏನೇ..?'
'ನಮಗ್ಯಾಕೆ ಅದು? ಅವೆಲ್ಲಾ ಅರಮನೆಯ ವಿಷಯ.. ದೊಡ್ಡವರ ಮಾತು..'
'ಅದು ಬಿಡೆ... ನಿಯೋಗ ಅಂದರೇನು..?'
'ನನಗೂ ಸರಿಯಾಗಿ ಗೊತ್ತಿಲ್ಲ.. ಅದೇನೋ ಸಂತಾನವನ್ನೇ ದೃಷ್ಟಿಯಾಗಿಟ್ಟುಕೊಂಡು ನಡೆಸುವ...'
'ಸರಿ ಬಿಡು ಕಾಮಕ್ಕೆ ಅಲ್ಲಿ ಎಡೆಯಿಲ್ಲ ಅಂದಂತಾಯ್ತು... ಕಾಮವೇ ಇಲ್ಲದ ಸೇರುವಿಕೆ ಸಾಧ್ಯವೇನೆ..?'
'ನನಗೂ ಅದೇ ಸಂಶಯ...'
'ಮತ್ತೆ ನನಗೂ ನಿನಗೂ ಇಬ್ಬರಿಗೂ ಮಕ್ಕಳಿಲ್ಲ... ನಾವ್ಯಾಕೆ ನಿಯೋಗಕ್ಕೆ ಒಳಗಾಗಬಾರದು..?'
'ಛೀ ಏನೇ... ನಿನ್ನ ಮಾತು..!? ನಿಯೋಗಕ್ಕೆ ಗಂಡನಿರಬಾರದಂತೆ ಕಣೇ.. ಅದೇನೇ ಇರಲಿ ಇವೆಲ್ಲಾ ರಾಜಮನೆತನಕ್ಕೆ ಸರಿ ಅಂತ ಆಗಲೇ ಹೇಳಿದೆನಲ್ಲಾ'
'ಮಗುವನ್ನು ಕೊಡಲಾರದ ಗಂಡ ಇದ್ದರೂ...',
'ಸಾಕು ಸುಮ್ಮನಿರು ಭದ್ರೆ... ಮದುವೆಯ ಅಗ್ನಿ ಸಾಕ್ಷಿಯಲ್ಲಿ ಸಪ್ತಪದಿಯಲ್ಲಿ ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ ನಾತಿಚರಾಮಿ..'ಯನ್ನು ಬೀಜಮಂತ್ರವಾಗಿ ತೆಗೆದುಕೊಂಡರೆ, ಗಂಡ ಹೆಂಡಿರ ಬಂಧ ಏಳೇಳು ಜನ್ಮದ್ದು ಎಂದು ನಂಬುವುದಾದರೆ, ಮದುವೆಗಳು ಸ್ವರ್ಗದಲ್ಲಿ ನಿರ್ಧರಿಸಲ್ಪಡುತ್ತವೆ ಎಂದು ನಂಬುವುದಾದರೆ ಗಂಡ ಸತ್ತ ಕ್ಷಣ ನಮ್ಮ ಮತ್ತು ಅವನ ಸಂಬಂಧ ಮುಗಿಯುತ್ತದೆಯೇ..? ಆದೂ ಅಲ್ಲದೆ, ಈ ದಾಂಪತ್ಯದ ಬದುಕಿನಲ್ಲಿ ಲೈಂಗಿಕತೆ ಮತ್ತು ಸಂತಾನವೇ ಅತಿ ಮುಖ್ಯ ಗುರಿಯೇ..? ಈ ಪ್ರಶ್ನೆಗಳ ಅಡಿಯಲ್ಲಿ ಸಂತಾನ ಹೊಂದಲು ಇರುವ ಈ ಪರ್ಯಾಯ ಮಾರ್ಗಗಳಿಗೆ ಅರ್ಥ ನಾವೇ ಹುಡುಕಿಕೊಳ್ಳಬೇಕು...'
'ಅಂದರೆ ಇದು ಅನೈತಿಕ ಎಂದೇ ನಿನ್ನ ಭಾವನೆ. ಅನೈತಿಕವಾದರೆ ಧರ್ಮಸಮ್ಮತ ಹೇಗೆ ನೀನೇ ಹೇಳು..?'
'ಅನೈತಿಕವೋ ನೈತಿಕವೋ ನನಗೆ ತಿಳಿಯದು. ಅಲ್ಲದೆ ಅದಕ್ಕೆ ಉತ್ತರ ಕೊಡಬೇಕಾದವರು ಅದಕ್ಕೆ ಒಳಗಾದವರು, ಅಲ್ಲದೇ ಧರ್ಮ ಸಮ್ಮತ ಎನ್ನುವುದಕ್ಕೆ ಈ ಧರ್ಮ ಎನ್ನುವುದೇ ನೀರಿನಂತೆ ತನ್ನದೇ ಆದ ಆಕಾರ ಇಲ್ಲದ್ದು ಮತ್ತು ಪ್ರಭಾವಶಾಲಿಗಳ ಪ್ರಭಾವಕ್ಕೆ ಒಳಗಾಗುವಂಥದ್ದಾಗಿರುವಾಗ, ಧರ್ಮಸಮ್ಮತ ಎನ್ನುವುದು ಅರ್ಥವಿಲ್ಲದ ಶಬ್ದ ಎಂದು ನನ್ನ ಅನಿಸಿಕೆ. ಅದರ ನಡುವೆ ಭಾವನೆಗಳೂ ಬದುಕಿನಲ್ಲಿ ಬದುಕುತ್ತವೆ ನೆನಪಿರಲಿ..'
'ಮುಂದಿನ ಪೀಳಿಗೆ...?'
'ಭೂಮಿ ಆಳುವುದಕ್ಕೆ ನಮ್ಮ ಸಂತಾನವೇ ಆಗಬೇಕೇನೆ..? ತಾಯಿಯಾಗುವುದಾದರೆ ಜಗತ್ತಿನ ಜೀವರಾಶಿಗಳಿಗೆಲ್ಲಾ ಆಗಬಹುದು. ತಾಯ್ತನ ಒಂದು ಮನಸ್ಥಿತಿ ಯಾಕಾಗಬಾರದು. ನಮ್ಮ ಮಕ್ಕಳಿಗಷ್ಟೇ ನಾವು ತಾಯಿಯಾಗುವುದು ಬರೀ ದೈಹಿಕ ತಾಯ್ತನ ಮಾತ್ರ... ಅಂದು ನೀನೇ ಹೇಳಿದ್ದೆಯಲ್ಲಾ ರಾಜಮಾತೆಯ ಮಾತು ಕೇಳಿ. ರಾಜ್ಯ ಅನಾಥವಾಗುವುದಕ್ಕೆ ಕೋಟಿ ಕೋಟಿ ಪ್ರಜೆಗಳಿಲ್ಲವೇ ಅಂತ. ಅದು ಸತ್ಯ ಕಣೇ.. ಈ ಸತ್ಯ ರಾಜಮನೆತನಕ್ಕೆ ಅರ್ಥವಾಗದೇ ಇರುವುದೇ ದೊಡ್ದ ದುರಂತ...!'
ಭದ್ರೆ ಮೌನವಾದಳು. ಅವಳಲ್ಲಿ ನಿರ್ಧಾರಗಳು ಗಟ್ಟಿಯಾಗುತ್ತಿರುವುದು ಎದ್ದು ಕಾಣಿಸುತ್ತಿತ್ತು.
'ಧಿಮ್ಸೋಲ್...' ಹಣಮಿನ ಮಕ್ಕಳು ಮನೆ ಮುಂದೆ ನಿಂತಿದ್ದರು. ಅವರ ಕುಣಿತ ಕೇಕೆಗಳಿಗೆ ಮಿತಿಯೇ ಇರಲಿಲ್ಲ. ಸುಡಲೆಂದೇ ಸಿದ್ಧವಾದ ಕಾಮನ ಮೂರ್ತಿ ಅವರ ಕೈಯಲ್ಲಿದೆ. ಅತ್ತೆ ವಂತಿಗೆ ಹಣ ಕೊಡುತ್ತಿದ್ದರು. ಭದ್ರೆ ಬಿಸಿಲು ಮಚ್ಚಿನಿಂದ ದಡದಡನೆ ಕೆಳಗಿಳಿದು ಬಂದಳು. ಆವೇಶ ಬಂದವಳಂತೆ ಶಯನಗೃಹಕ್ಕೆ ಬಂದವಳೇ ಹೊಸ ಮಂಚವನ್ನು ಧಡಾರನೆ ತುಳಿದಳು. ಅವಳ ಆವೇಶದ ತುಳಿತಕ್ಕೆ ಮಂಚದಂಥ ಮಂಚವೂ ತುಂಡಾಗಿತ್ತು. ತುಂಡಾದ ಮಂಚ, ತೊಟ್ಟಿಲುಗಳನ್ನು ಎತ್ತಿ ತಂದವಳೇ ಹಣಮಿನ ಮಕ್ಕಳ ಕಾಮನ ಬೆಂಕಿಯ ಕಸದ ರಾಶಿಗೆ ದೊಪ್ಪೆಂದು ಎಸೆದಳು. ಕಾಮನ ಬೆಂಕಿಗೆ ಪೊಗದಸ್ತಾದ ಕಸ ಸಿಕ್ಕ ಖುಶಿಯಲ್ಲಿ ಹಣಮಿನ ಮಕ್ಕಳು ಕುಣಿಯುತ್ತಲೇ ಮೈದಾನದತ್ತ ಹೆಜ್ಜೆ ಹಾಕಿದರು.
ಮತ್ತೆ ಬಿಸಿಲು ಮಚ್ಚಿಗೆ ಬಂದು ನಿಂತ ಭದ್ರೆ ನಿರ್ವಣ್ಣಳಾಗಿ ಎದುರಿನ ಮೈದಾನದಲ್ಲಿನ ಕಾಮದಹನದಲ್ಲೇ ಕಣ್ಣು ಕೀಲಿಸಿದ್ದಳು. ಚಿತ್ರಲೇಖ ಭದ್ರೆಯ ನಡವಳಿಕೆ ಅರ್ಥೈಸಿಕೊಳ್ಳಲಾರದೇ ಮೌನಕ್ಕೆ ಶರಣಾಗಿದ್ದಳು. ಕಾಮದಹನದ ಅಗ್ನಿ ತೊಟ್ಟಿಲು ಮಂಚಗಳ ಆಹಾರದಲ್ಲಿ ಮುಗಿಲಿಗೆ ನಾಲಗೆ ಚಾಚಿದ್ದ. ಹಣಮಿನ ಮಕ್ಕಳ ಕೂಗಾಟ ಕಿರುಚಾಟ ಅಶ್ಲೀಲ ಪದಗಳ ಅವ್ಯಾಹತ 'ಧಿಮ್ ಸೋಲ್‌' ನಡುವೆ ಕಾಮ ನಿಧಾನವಾಗಿ ದಹನವಾಗುತ್ತಿದ್ದರೆ ಅತ್ತ ಹಸ್ತಿನಾವತಿಯ ಅಂತಃಪುರದಲ್ಲಿ ಅಂಬಿಕೆ ಅಂಬಾಲಿಕೆಯರು ನಿಯೋಗದಿಂದ ಫಲಿತವಾದ ಭ್ರೂಣಗಳನ್ನು ಹೊಟ್ಟೆಯಲ್ಲಿ ಹೊತ್ತು ಅವು ನೀಡುವ ಹೊಸ ಅನುಭವದಿಂದಲೋ ಅಥವಾ ವ್ಯಾಸರ ಜೊತೆಗಿನ ನಿಯೋಗದ ಕ್ಷಣಗಳ ಮರುಕಳಿಕೆಯಿಂದಲೋ ನಿದ್ದೆಯಿಲ್ಲದೇ ಹಾಸಿಗೆಯಲ್ಲಿ ಒದ್ದಾಡುತ್ತಿದ್ದುದು ಇನ್ನೂ ಅಂತಃಪುರದಲ್ಲಿ ಆರದ ಬೆಳಕಿನಲ್ಲಿ ಕಿಟಕಿಗೆ ಹೊಂದಿಸಿದ ತೆಳುಪರದೆಯಲ್ಲಿ ನೆರಳಾಗಿಯಾದರೂ ನಿಚ್ಚಳವಾಗಿ ಕಾಣಿಸುತ್ತಿತು.
ಇದನ್ನು ನೋಡಿದ ಭದ್ರೆ, ಚಿತ್ರಲೇಖಾ ಪರಸ್ಪರ ಮುಖ ನೋಡಿಕೊಂಡು ನಕ್ಕರು.

= ಮಂಜುನಾಥ ನಾಯ್ಕ್
manjunathanaikblr@yahoo.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.