ವ್ಯತ್ಯಾಸ ಗುರುತಿಸಿ!

ನುಡಿಸಿರಿ ಮತ್ತು ಸಾಹಿತ್ಯ ಸಮ್ಮೇಳನ
ನಾನು ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ನಡೆಸುವ 'ಆಳ್ವಾಸ್ ನುಡಿಸಿರಿ' ನೋಡುತ್ತಾ ಬಂದಿದ್ದೇನೆ. ವಿದ್ಯಾರ್ಥಿನಿಯಾಗಿದ್ದಾಗ ಕನ್ನಡ ಸಾಹಿತ್ಯದ ಬಗ್ಗೆ ತಿಳಿದುಕೊಳ್ಳುವ ಉಮೇದಿಯಲ್ಲಿ ನುಡಿಸಿರಿಯನ್ನು ಆಸ್ವಾದಿಸಿದ್ದೇನೆ. ಅಲ್ಲದೆ ಮುಂದೆ ಅದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಎರಡು ವರ್ಷ ನುಡಿಸಿರಿಯಲ್ಲಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ ಅನುಭವ ನನ್ನದಾಗಿದೆ. ಈ ಎಲ್ಲ ಪೀಠಿಕೆ ಯಾಕೆಂದರೆ ಇತ್ತೀಚೆಗೆ ಬಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನವನ್ನು ನೋಡಿ ಬಂದೆ. ಒಂದು ಖಾಸಗಿ ಸಂಸ್ಥೆ ಸರಕಾರದಿಂದ ಇಲ್ಲವೇ, ಇತರ ಯಾವುದೇ ಅನುದಾನ ಪಡೆಯದೆ ಸ್ವಂತದ ಖರ್ಚಿನಿಂದ ನಡೆಸುವ ಸಾಹಿತ್ಯ ಸೇವೆಗೂ, ಸರಕಾರ ಸೋಗಿಗೋಸ್ಕರ ನಡೆಸುವ ಕಾಟಾಚಾರದ ಸಾಹಿತ್ಯ ಸೇವೆಗೂ ಇರುವ ಅಜಗಜಾಂತರ ವ್ಯತ್ಯಾಸ ನನ್ನ ಕಣ್ಣ ಮುಂದೆ ಕುಣಿಯುತ್ತಿದೆ.
ವಿಷಯದ ಆಯ್ಕೆ
ನುಡಿಸಿರಿ ಸಮ್ಮೇಳನ ಒಟ್ಟಾರೆ ದಿಕ್ಕುದೆಸೆಯಿಲ್ಲದೆ ಸಾಗಬಾರದು. ಅದಕ್ಕೊಂದು ಪರಿಪೂರ್ಣ ಚೌಕಟ್ಟು ಇರಬೇಕೆಂಬ ನೆಲೆಯಿಂದ ಆರಂಭದಲ್ಲಿ ಸಮ್ಮೇಳನ ಒಂದು ಪರಿಕಲ್ಪನೆಯನ್ನು ಇಟ್ಟುಕೊಳ್ಳುತ್ತದೆ.
ಆ ಪರಿಕಲ್ಪನೆಯೂ ಸಾಹಿತ್ಯ ಪ್ರಾಧಿಕಾರದಲ್ಲಿ ನಡೆಯುವಂತೆ ನಾಲ್ಕು ಜನರಿಂದ ತೀರ್ಮಾನವಾಗುವುದಲ್ಲ. ಸುಮಾರು ನಾಲ್ಕು ತಿಂಗಳ ಮೊದಲೇ ಕನ್ನಡದ ಪ್ರಸಿದ್ಧ ಹಿರಿಯ, ಕಿರಿಯ ಸಾಹಿತಿಗಳನ್ನು ಕರೆದು ಆಡಳಿತ ಮಂಡಳಿಯು ಸಮಾಲೋಚನಾ ಸಭೆಯನ್ನು ಏರ್ಪಡಿಸುತ್ತದೆ. ಅಲ್ಲಿ ವಿವಿಧ ಅಭಿಪ್ರಾಯ, ವಿಷಯದ ಆಯ್ಕೆ, ಚರ್ಚೆ ನಡೆಯುತ್ತದೆ. ಸಭೆಯಲ್ಲಿ ಬಂದ ಅಷ್ಟೂ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಇಲ್ಲಿಯತನಕ ಅತ್ಯಂತ ಉತ್ತಮವಾದ, ಉಪಯುಕ್ತ ಎನಿಸುವ ವಿಷಯವನ್ನು ಆಡಳಿತ ಮಂಡಳಿ ತೀರ್ಮಾನಿಸುತ್ತದೆ. ಅಲ್ಲಿ ನಿಜವಾದ ಸಾಹಿತ್ಯಾಸಕ್ತರು, ಚಿಂತಕರಿಂದ ವಿಷಯದ ನಿಶ್ಚಿತ ಪರಿಕಲ್ಪನೆ ತೀರ್ಮಾನವಾಗುತ್ತದೆ. ಆ ಪರಿಕಲ್ಪನೆಗೆ ಹೊಂದುವಂತೆ ಮೂರು ದಿನಗಳು ನಡೆಯುವ ನುಡಿಸಿರಿಯ ಗೋಷ್ಠಿಗಳನ್ನು ಸಿದ್ಧಪಡಿಸಲಾಗುತ್ತದೆ. ಆ ಗೋಷ್ಠಿಯನ್ನು ನಿರ್ವಹಿಸುವ ಭಾಷಣಕಾರರ ಆಯ್ಕೆಯಲ್ಲೂ ಯಾವುದೇ ಜಾತಿ, ಮತ, ಧರ್ಮ, ಪ್ರದೇಶದ ಲಾಬಿಯಿಲ್ಲ. ಏನಿದ್ದರೂ ಗೋಷ್ಠಿಯ ಪರಿಕಲ್ಪನೆಯಲ್ಲಿ ತಜ್ಞ ಎನಿಸುವ ವ್ಯಕ್ತಿಯಾಗಿರಬೇಕು ಎಂಬುದೊಂದೇ ಮಾನದಂಡ. ಹೀಗೆ ಮಾಡುವುದರಿಂದ ಒಂದು ವಿಷಯದ ಬಗ್ಗೆ ಸಮಗ್ರ ಚರ್ಚೆ ಸಾಧ್ಯ. ಸಾಹಿತ್ಯಾಸಕ್ತರಿಗೆ, ವಿದ್ಯಾರ್ಥಿಗಳಿಗೆ ಕುಳಿತು ಕೇಳುವ, ಜ್ಞಾನ ಪಡೆಯುವ ಮಾರ್ಗವಾಗುತ್ತದೆ.
ಅಧ್ಯಕ್ಷರ ಉಪಲಬ್ಧತೆ
ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವುದೆಂದರೆ ಅತ್ಯಂತ ಪ್ರತಿಷ್ಠಿತ ಸಂಗತಿ. ಅದು ನುಡಿಸಿರಿಯೇ ಇರಬಹುದು, ಅಖಿಲ ಭಾರತ ಮಟ್ಟದ್ದೇ ಇರಬಹುದು, ರಾಜ್ಯಮಟ್ಟದ್ದೇ ಇರಬಹುದು. ಆದರೆ ಅಧ್ಯಕ್ಷರು ಮೂರೂ ದಿನ ನಡೆಯುವ ಕಾರ್ಯಕ್ರಮದಲ್ಲಿ ಎಷ್ಟರಮಟ್ಟಿಗೆ ಭಾಗವಹಿಸುತ್ತಾರೆ ಎಂಬುದು ಮುಖ್ಯ. ಅಧ್ಯಕ್ಷರೇ ಸಮ್ಮೇಳನದ ವಿಶೇಷ ಆಕರ್ಷಣೆ. ಆದ್ದರಿಂದ ಅವರು ಅದಷ್ಟರ ಮಟ್ಟಿಗೆ ಮುಖ್ಯ ವೇದಿಕೆಯಲ್ಲಿ ಗೋಷ್ಠಿಯ ವೇಳೆ ಉಪಸ್ಥಿತರಿರುವುದು ಮುಖ್ಯ. ಕೇವಲ 'ಅಧ್ಯಕ್ಷರ ಭಾಷಣ, ಅಧ್ಯಕ್ಷರ ಜತೆ ಸಮಾಲೋಚನೆ' ಇಷ್ಟಕ್ಕೇ ಸೀಮಿತವಾಗಬಾರದು.
ಆಳ್ವಾಸ್ ನುಡಿಸಿರಿಯಲ್ಲಿ ಅಧ್ಯಕ್ಷರಾದವರಿಗೆ ಬಹಳ ದೊಡ್ಡ ಜವಾಬ್ದಾರಿ. ಅಷ್ಟೇ ಮರ್ಯಾದೆಯ ಸಂಗತಿ. ಮೂರು ದಿನ ಸಮ್ಮೇಳನದಲ್ಲಿ ನಡೆಯುವ ಗೋಷ್ಠಿಗಳನ್ನು ಕೇಳುವ ಮತ್ತು ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದವರಿಗೆ ಅಧ್ಯಕ್ಷರ ಪಟ್ಟ ದೊರೆಯುತ್ತದೆ. ನುಡಿಸಿರಿಯ ಗೋಷ್ಠಿಯಲ್ಲಿ ವಿಷಯದ ಬಗ್ಗೆ ಸರಿಯಾದ ತಯಾರಿಯಿಲ್ಲದೆ ಮಾತನಾಡಿದ ಭಾಷಣಕಾರರನ್ನು ಅಧ್ಯಕ್ಷರು ತರಾಟೆಗೆ ತೆಗೆದುಕೊಂಡಂಥ ಪ್ರಸಂಗಗಳೂ ನಡೆದಿವೆ. ಇದೂ ಅಧ್ಯಕ್ಷನಾದವನ ಜವಾಬ್ದಾರಿ ಎಂಬುದನ್ನು ಆಳ್ವಾಸ್ ನುಡಿಸಿರಿಯ ವೇದಿಕೆ ಎತ್ತಿಹಿಡಿದಿದೆ.
ವಿಶೇಷ ಆಹ್ವಾನಿತರು
ಸಮ್ಮೇಳನ ಎಂದ ತಕ್ಷಣ ನಮ್ಮ ಕಣ್ಣಿಗೆ ಬೀಳುವವರು ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ಸಾಹಿತಿಗಳು ಮತ್ತು ಜಿಲ್ಲಾ ಪದಾಧಿಕಾರಿಗಳು ಹಾಗೂ ಉದ್ಘಾಟನೆ, ಸಮಾರೋಪದ ಸಂದರ್ಭದಲ್ಲಿ ಆಹ್ವಾನಿತ ರಾಜಕಾರಣಿಗಳು. ನೆಚ್ಚಿನ, ಮೆಚ್ಚಿನ ಸಾಹಿತಿಗಳನ್ನು ನೋಡಬೇಕು, ಮಾತನಾಡಿಸಬೇಕು ಎಂದು ಬಂದ ವಿದ್ಯಾರ್ಥಿಗಳಿಗೆ, ಅಭಿಮಾನಿಗಳಿಗೆ ನಿರಾಸೆ ಖಂಡಿತ. ಆದರೆ ನುಡಿಸಿರಿಯಲ್ಲಿ ಇದಕ್ಕೂ ಒಂದು ವೇದಿಕೆ ಇದೆ. ಆದರೆ ಆ ವೇದಿಕೆ ಸಮ್ಮೇಳನದ ವೇದಿಕೆಯ ಬದಲಾಗಿ ಪ್ರೇಕ್ಷಕವರ್ಗದಲ್ಲೇ ಮುಂಭಾಗದ ಕುರ್ಚಿಗಳು. ಅವರೇ ವಿಶೇಷ ಆಹ್ವಾನಿತರು. ರಾಜ್ಯದಲ್ಲಿರುವ ಹೆಸರಾಂತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಮೊದಲೇ ಪತ್ರದ ಮೂಲಕ ಸಂಪರ್ಕಿಸಿ ನುಡಿಸಿರಿಗೆ ಬರುವಂತೆ ಆಹ್ವಾನಿಸಲಾಗುತ್ತದೆ. ಹಾಗೆ ಪತ್ರಕ್ಕೆ ಪ್ರತಿಕ್ರಿಯಿಸಿ ಅದೆಷ್ಟೋ ಹಿರಿಯ, ಕಿರಿಯ ಹೆಸರಾಂತ ಸಾಹಿತಿಗಳು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುತ್ತದೆ. ಇವರಿಗೆ ನೀಡುವುದು 3 ದಿನದ ವಸತಿ ಮತ್ತು ಊಟ, ಉಪಚಾರದ ವ್ಯವಸ್ಥೆ ಮಾತ್ರ. ಕನ್ನಡ ಸಾಹಿತ್ಯ ಪರಿಷತ್‌ಗೆ ಪ್ರಯಾಣ ಭತ್ಯೆಯನ್ನು ನೀಡಿಯೂ ಸಾಹಿತಿಗಳನ್ನು ಕರೆಸಿಕೊಳ್ಳಬಹುದು. ಆದರೆ ಗೋಷ್ಠಿಗಳಲ್ಲಿ ಪಾಲ್ಗೊಳ್ಳುವ ವ್ಯಕ್ತಿಗಳಿಗೆ ಆಮಂತ್ರಣ ಪತ್ರಿಕೆ ದೊರೆಯುವುದಿಲ್ಲ. ಇನ್ನು ಸಮ್ಮೇಳನದಲ್ಲಿ ಇವರ ಮುಖದರ್ಶನವಾಗಬೇಕೆಂದು ಬಯಸುವುದು ತಪ್ಪಾಗಬಹುದೇನೋ? ಮುಖ್ಯವಾಗಿ ಬೇಕಾಗಿರುವುದು ಬರುವಂಥ ಅತಿಥಿಗಳಿಗೆ ಸೌಜನ್ಯಪೂರಕವಾದ ಕರೆ, ಊಟ, ವಸತಿ ವ್ಯವಸ್ಥೆ.
ಕವಿಗೋಷ್ಠಿ
ಇತ್ತೀಚಿನ ದಿನಗಳಲ್ಲಿ ಗದ್ಯ ಪ್ರಕಾರಗಳೇ ಹೆಚ್ಚಾಗಿ ಸೃಷ್ಟಿಯಾಗುವುದು. ಕವಿ, ಕವಿತೆ, ಕಾವ್ಯ ರಚನೆಗಳೆಲ್ಲ ಕ್ಲಿಷ್ಟದ ಸಂಗತಿ ಎಂದಾಗಿದೆ. ಆದರೆ ನಾಡಿನಲ್ಲಿ ಈಗಲೂ ಸಾಕಷ್ಟು ಉದಯೋನ್ಮುಖ ಹಾಗೂ ಹೆಸರಾಂತ ಕವಿಗಳಿದ್ದಾರೆ. ಆದರೆ ಸಾಹಿತ್ಯ ಸಮ್ಮೇಳನದಲ್ಲಿ ವೈಫಲ್ಯತೆ ಕಾಣುವುದು ಅಂಥ ಕವಿಗಳ ಆಯ್ಕೆಯಲ್ಲಿ. ಆಯ್ಕೆ ಸಮಿತಿಯಲ್ಲಿರುವ ಸದಸ್ಯರು ಇವತ್ತಿನ ಅಂತರ್ಜಾಲ ವ್ಯವಸ್ಥೆಯಿಂದ ದೂರ ಇರುವರೆ? ಎಂಬುದು ನನ್ನ ಪ್ರಶ್ನೆ. ಯಾಕೆಂದರೆ ಅದೆಷ್ಟೋ ಬ್ಲಾಗ್, ವೆಬ್‌ಸೈಟ್‌ಗಳಲ್ಲಿ ಬರೆಯುವ ಕವಿ, ಸಾಹಿತಿಗಳಿದ್ದಾರೆ. ಸಾಪ್ತಾಹಿಕ, ಮಾಸಿಕ ಪತ್ರಿಕೆಗಳಲ್ಲಿ ಕವನ ಪ್ರಕಟಗೊಂಡ ಕವಿಗಳಿದ್ದಾರೆ. ಅಂಥ ಪ್ರತಿಭಾವಂತರನ್ನು ಆಯ್ಕೆ ಮಾಡುವುದು ಪ್ರಾಧಿಕಾರದ ಮಂಡಳಿಗೆ ಕಷ್ಟವೇ? ಸಮ್ಮೇಳನದ ವೇದಿಕೆಯಲ್ಲಿ 50, 60 ಕವಿಗಳು ಎಲ್ಲೂ ತಮ್ಮ ಕವನ ಪ್ರಕಟಗೊಳಿಸದೇ ಇರುವ, ಒಂದು ಕವನ ಬರೆದರೂ ಕವಿ ಎಂದು ವೇದಿಕೆಯಲ್ಲಿ ಕವನ ವಾಚಿಸುವ ಕವಿಗಳಿದ್ದಾರೆ. ಅದನ್ನು ವಾಚನದ ಬದಲು ವರದಿಯಂತೆ ಓದುವ ಕ್ರಮ ಕಾಣುತ್ತೇವೆ.
ಆದರೆ ಆಳ್ವಾಸ್ ನುಡಿಸಿರಿಯಲ್ಲಿರುವ ವಿಶಿಷ್ಟ ಕಾರ್ಯಕ್ರಮವೆಂದರೆ 'ಕವಿಸಮಯ ಮತ್ತು ಕಥಾ ಸಮಯ'. 20 ನಿಮಿಷಗಳ ಅವಧಿಯಲ್ಲಿ ಚುಟುಕಾಗಿ ಕವಿ ಪರಿಚಯ, ಆ ಕವಿ ತಾವು ವಾಚಿಸಲಿರುವ ಕವನದ ಸ್ಫೂರ್ತಿ ಮತ್ತು ವಿಶೇಷತೆಯ ಬಗ್ಗೆ ಮಾತು, ಕೊನೆಗೆ ತಾವು ವಾಚಿಸಿದ ಕವನಕ್ಕೆ ಹೃದಯಸ್ಪರ್ಶಿಯಾಗಿ ಹಾಡುವ ಗಾಯಕರ ತಂಡ. ನಿಜವಾಗಿಯೂ ಇದೊಂದು ಅದ್ಭುತ ಎನಿಸುವ, ಪ್ರೇಕ್ಷಕರನ್ನು ಅಷ್ಟು ಸಮಯ ತಲ್ಲೀನರಾಗುವಂತೆ ಮಾಡುವ ಕಾರ್ಯಕ್ರಮ. ಅಲ್ಲದೆ ನಿರಂತರ 2 ತಾಸುಗಳಿಗೂ ಹೆಚ್ಚು ಕಾಲ ನಡೆಯುವ ಗೋಷ್ಠಿಯ ನಂತರ ಬರುವ ಕಾರ್ಯಕ್ರಮವಾದ್ದರಿಂದ, ಗಂಭೀರವಾದ ಭಾಷಣವನ್ನು ಅರಗಿಸಿಕೊಂಡಾದ ಮೇಲೆ ಬರುವುದರಿಂದ ಮನಸ್ಸಿಗೆ ಆಹ್ಲಾದಕರ, ಹೃದಯಕ್ಕೆ ಮುದ ನೀಡುವಂತೆ ಮಾಡುತ್ತದೆ. ಇಲ್ಲಿ ಕವಿ, ಕವನದ ಪ್ರಮಾಣಕ್ಕಿಂತ, ಮೌಲ್ಯ ಮುಖ್ಯ. 50, 60 ಕವನ ವಾಚಿಸಿ ತೆರಳುವ ಬದಲು ಒಂದು ಕವನ ವಾಚಿಸಿ ಹಾಡುವುದು ಅದರ ಮಹತ್ವವನ್ನು ತಿಳಿಸುತ್ತದೆ.
ಸಮಯಪಾಲನೆ, ಶಿಸ್ತು
ಯಾವುದೇ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಬೇಕಿರುವುದು ಮುಖ್ಯವಾಗಿ ಸಮಯಪಾಲನೆ ಮತ್ತು ಶಿಸ್ತು. ನುಡಿಸಿರಿಯಲ್ಲಿ ಅಧ್ಯಕ್ಷರು, ಭಾಷಣಕಾರರು, ನಿರೂಪಣೆಯವರು ಯಾರೇ ಇರಲಿ ತಮಗೆ ನೀಡಿರುವ ಅವಧಿಗಿಂತ ಹೆಚ್ಚು ಸಮಯ ಎಳೆಯುವಂತಿಲ್ಲ. ಕೆಂಪು ಬೆಳಕಿನ ಸಂಕೇತ ಬರುತ್ತದೆ. ನಂತರ ಚೀಟಿ. ಅಲ್ಲದೇ ಕಾರ್ಯಕ್ರಮದುದ್ದಕ್ಕೂ ಕಾಣುವುದು ಶಿಸ್ತು. ಪ್ರತಿಯೊಬ್ಬ ಸಂಪನ್ಮೂಲ ವ್ಯಕ್ತಿಗೂ, ಒಬ್ಬ ಉಪನ್ಯಾಸಕ ಹಾಗೂ ಒಬ್ಬ ವಿದ್ಯಾರ್ಥಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಾರೆ. ಆದ್ದರಿಂದ ಅವರವರ ಜವಾಬ್ದಾರಿಯನ್ನು ನಿರ್ವಹಿಸಿದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ.
ಇನ್ನು ಒಒಡಿ ವ್ಯವಸ್ಥೆಯೂ ಅಷ್ಟೇ, ಮುಂಗಡವಾಗಿ ಬೇರೆ ಬೇರೆ ಹಂತದ ಶಿಕ್ಷಣ ಇಲಾಖೆಗೆ ಪತ್ರದ ಮೂಲಕ ಸಂಪರ್ಕಿಸಲಾಗುವುದು. ಅವರ ಪ್ರತಿಕ್ರಿಯೆ ಪತ್ರದಲ್ಲಿ ಬರುವ ಶಿಕ್ಷಕರ ಹೆಸರು, ವಿಳಾಸವನ್ನು ಸಂಗ್ರಹಿಸಿದ ಪಟ್ಟಿ ನುಡಿಸಿರಿಯ ನೋಂದಣಿ ಕಚೇರಿಯಲ್ಲಿರುತ್ತದೆ. ಅವರು ಕಾರ್ಯಕ್ರಮದ ದಿನ ಬಂದಂತೆ ಅವರ ಮಾಹಿತಿ ಪಡೆದು ನೆರಳಚ್ಚು ಪ್ರತಿ ಮಾಡಿಸಲಾಗುತ್ತದೆ. ಕಾರ್ಯಕ್ರಮದ ಅಂತಿಮ ದಿನ ಎಲ್ಲ ಪ್ರಾಧ್ಯಾಪಕರರಿಗೆ ಒಒಡಿ ಹಾಗೂ ಹೆಸರು ನೋಂದಾಯಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಗುತ್ತದೆ. ಇಂಥ ಅಚ್ಚುಕಟ್ಟುತನವನ್ನು ಪರಿಷತ್ತಿನವರು ನೋಡಿ ಕಲಿತರೆ ಉತ್ತಮ.
ಸನ್ಮಾನದಲ್ಲೂ ಅಷ್ಟೇ!
ಅ.ಭಾ.ಸಾ.ಸ.ದಲ್ಲಿ ಕಾಣುವುದು ಉದ್ದಕ್ಕೂ ಸನ್ಮಾನ. ಸನ್ಮಾನಿತರು ಜಿಲ್ಲಾ ಕೇಂದ್ರಗಳ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರಾಗಿರುವವರು, ಉಳಿದಂತೆ ಅವರ ಸಾಧನೆ ಏನು ಎಂಬುದೇ ತಿಳಿದಿಲ್ಲ. ಆದರೆ ನುಡಿಸಿರಿಯಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಜನರಿಗೆ ಸನ್ಮಾನ ಮಾಡಲಾಗುವುದು. ಅದರಲ್ಲೂ ಕೆಲವರಿಗೆ ಮಾತ್ರ ವೇದಿಕೆಯಲ್ಲಿ ಮಾತನಾಡುವ ಅವಕಾಶ ನೀಡಲಾಗುತ್ತದೆ.
ಅಷ್ಟಕ್ಕೂ ಮುಂದೆ ಬರುವುದು 'ವಿಶ್ವ ನುಡಿಸಿರಿ'. ಆಳ್ವಾಸ್ ನುಡಿಸಿರಿ ಆರಂಭವಾಗಿ ಹತ್ತು ವರ್ಷ. ಅದಕ್ಕೆ ಜಿಲ್ಲಾಮಟ್ಟದಲ್ಲಿ ಸಮಿತಿ ರಚಿಸಿ ತಮ್ಮ ಪೂರ್ವತಯಾರಿಯನ್ನು ಈಗಾಗಲೇ ಆರಂಭಿಸಿಯಾಗಿದೆ.
-ಸಿಂಧುಶ್ರೀ ಭಟ್
sindhukatagal@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


