ವಿವೇಕ ವಿಜಯ

ತಾಳಮದ್ದಳೆಯ ಹೊಸ ಪ್ರಯೋಗ
ಬಯಲಾಟದಲ್ಲಿ ಹೊಸ ಪ್ರಸಂಗಗಳ ಪ್ರಯೋಗ ಸಾಮಾನ್ಯ. ಆದರೆ ತಾಳಮದ್ದಳೆಗಳಲ್ಲಿ ಇಂಥ ಪ್ರಯೋಗ ತೀರಾ ವಿರಳ. ಸ್ವಾಮಿ ವಿವೇಕಾನಂದರ ಜೀವನದ ಪ್ರಮುಖ ಮೂರು ಮಜಲುಗಳನ್ನು ಆಧರಿಸಿದ ವಿವೇಕಾನಂದರ ಅಧ್ಯಾತ್ಮಿಕ ತಳಮಳ ತಾಳಮದ್ದಳೆಯಾಗಿ ಇತ್ತೀಚೆಗೆ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಏರ್ಪಟ್ಟಿತ್ತು.
'ವಿವೇಕ ವಿಜಯ' ಪ್ರಸಂಗವನ್ನು ರಂಗಕ್ಕೆ ತಂದ ಮಂಗಳೂರು ಲ್ಯಾಂಡ್ ಲಿಂಕ್ಸ್‌ನ ಯುಗಾದಿ ಸಂಸ್ಕೃತಿ ಸಮಿತಿ ಪ್ರಯತ್ನ ಸಾರ್ಥಕ. ಇಂತಹ ಮೌಲಿಕ-ಸಕಾಲಿಕ ಕಾರ್ಯಕ್ರಮವನ್ನು ಆಯೋಜಿಸಿದ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ಸಮಿತಿಯ ಕಾರ್ಯ ಅಭಿನಂದನೀಯ.
ಪಾತ್ರದಲ್ಲಿ ರಾಮಕೃಷ್ಣ ಪರಮಹಂಸರಾಗುವ ಮೊದಲು ಗದಾಧರನಾಗಿ ನಾರಾಯಣ ಯಾಜಿ, ತಾಯಿ ಕಾಳಿಯಲ್ಲಿ ತನ್ನ ದ್ವಂದ್ವ ದೇಹ ಮತ್ತು ಆತ್ಮ ಭಾವಗಳ ನಡುವಿನ ತುಮುಲಗಳನ್ನು ಸೂಕ್ಷ್ಮವಾಗಿ ತೆರೆದಿಟ್ಟರು.
ರವಿ ಅಲೆವೂರಾಯ, ಶಾರದಾ ದೇವಿಯ ಪಾತ್ರವನ್ನು ಸಮಯೋಚಿತವಾಗಿ ನಿಭಾಯಿಸಿದರು. ಆದಿಮಾಯೆ ಮತ್ತು ವಿಶ್ವಮಾನವ ಸಂದೇಶವನ್ನು ಜೋಡಿಸುವ ಕಲ್ಪನೆ ಸುಂದರವಾಗಿತ್ತು. ನರೇಂದ್ರನಾಗಿ ಡಾ. ಪ್ರಭಾಕರ ಜೋಶಿ ತಮ್ಮ ಪಾತ್ರಕ್ಕೆ ಕಳೆ ತಂದರು.
ಬೆಸ್ತನಾಗಿ ವೇಣುಗೋಪಾಲ, ಪಾತ್ರಕ್ಕೆ ತಕ್ಕ ಲಘು ಹಾಗೂ ಮೂದಲಿಕೆಯ ಮಾತುಗಳನ್ನಾಡಿ ಯಶಸ್ವಿ ಎನ್ನಿಸಿಕೊಂಡರು. ನರೇಂದ್ರ ನಂತರದ ವಿವೇಕಾನಂದನಾಗಿ ಪಾತ್ರಕ್ಕೆ ಜೀವ ತುಂಬಿದವರು, ಕುಂಬಳೆ ಸುಂದರ ರಾಯರು. ಮಾಯನಗರಿ(ಚಿಕಾಗೋ)ಯ ಭಾಷಣ ಚಪ್ಪಾಳೆ ಹೊಡೆಯುವಂತಿತ್ತು. ಪರಮ ಗುರುವಿನ ಕೆಣಕು ಪ್ರಶ್ನೆಗಳಿಗೆ ನೀಡಿದ ಸಂಯಮದ ಉತ್ತರ ವಿವೇಕಾನಂದರ ಎತ್ತರಕ್ಕೆ ಯೋಗ್ಯವಾಗಿತ್ತು. ಸನಾತನ ಧರ್ಮದ ತಿರುಳಿಗೆ ವಿಶ್ವ ಖ್ಯಾತಿ ಸಲ್ಲತಕ್ಕದ್ದೆಂದು ಪ್ರತಿಪಾದಿಸಿದ ಸ್ವಾಮಿಯೆದುರು, ತನ್ನ ಭಿನ್ನಮತೀಯ ಅಭಿಪ್ರಾಯಗಳನ್ನು ತಿರುಗೇಟು ನೀಡಿದ ನಾರಾಯಣ ಕಂಜರ್ಪಣೆ, ಅಳಸಿಂಗ ಪೆರುಮಾಳರಾಗಿ ಜಗದೀಶ ಬಲ್ಲಾಳರು ಪಾತ್ರ ನಿರ್ವಹಿಸಿದರು. ಈ ಪ್ರಸಂಗದಲ್ಲಿ ಸತ್ಯ ನೆಲ್ಲಿತ್ತಾಯ ಮತ್ತು ಮಧುಸೂಧನ ಅಲೆವೂರಾಯರ ಮದ್ದಳೆ ಚಂಡೆ ಭಾಗವತಿಕೆಗೆ ಪೂರಕವಾಗಿತ್ತು. ಭಾಗವತರಾಗಿ ಶ್ರೀಕೃಷ್ಣ ಭಟ್ ತಮ್ಮ ಉದಯೋನ್ಮುಖ ಪ್ರತಿಭೆ ಪ್ರದರ್ಶಿಸಿದರು.
- ಡಾ ಜೇ. ನಾ. ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


