ರಂಗಶತಕ

ಜನ್ಮ ತಾಳಿದ ಒಂದು ವರ್ಷದಲ್ಲಿಯೇ ಶಿವಮೊಗ್ಗ ರಂಗಾಯಣ ಅನೇಕ ಸಾಧನೆಗಳನ್ನು ಮಾಡಿದೆ. ಅವುಗಳಲ್ಲಿ ಗಮನಾರ್ಹವಾದುದು ಎಂದರೆ, 3000 ಮಕ್ಕಳನ್ನು ತೊಡಗಿಸಿಕೊಂಡು ಮಾಡಿರುವ 'ರಂಗಶತಕ' ಎಂಬ ರಂಗಚಳುವಳಿ. ಇದಕ್ಕೆ ತೆಗೆದುಕೊಂಡಿರುವ ಅವಧಿ ಕೇವಲ ಒಂದು ತಿಂಗಳಿನದ್ದು ಎಂಬುದೂ ವಿಶೇಷವೇ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಭಾಗಿತ್ವದೊಡನೆ 'ರಂಗಶತಕ' ಎಂಬ ವಿನೂತನ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ತನ್ನ ವ್ಯಾಪ್ತಿಗೆ ಬರುವ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ವಿವಿಧ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ, ನೀನಾಸಂ, ಸಾಣೇಹಳ್ಳಿ ರಂಗಶಾಲೆ, ಕುಂದಾಪುರ ರಂಗ ಶಿಕ್ಷಣ ಸಂಸ್ಥೆ ಮುಂತಾದ ಕಡೆಗಳಲ್ಲಿ ತಯಾರಾದ ನುರಿತ ನಿರ್ದೇಶಕರನ್ನು ನಿಯೋಜಿಸಲಾಯಿತು. ಕುವೆಂಪು, ಕೆ.ವಿ. ಸುಬ್ಬಣ್ಣ, ಬಿ.ವಿ. ಕಾರಂತ, ನಾ. ಡಿಸೋಜ, ಗಜಾನನ ಶರ್ಮ, ವೈದೇಹಿ, ಡಾ.ಸಿದ್ಧಲಿಂಗಯ್ಯ, ಎಚ್.ಎಸ್. ವೆಂಕಟೇಶಮೂರ್ತಿ, ಚಂದ್ರಶೇಖರ ಕಂಬಾರ, ನಟರಾಜ ಹೊನ್ನವಳ್ಳಿ ಮುಂತಾದವರ ಮಕ್ಕಳ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ನೂರು ನಾಟಕಗಳನ್ನು ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಹಾಗೂ ಪೋಷಕರು ನೋಡಿ ಪುಳಕಗೊಂಡರು. ಇದರಲ್ಲಿ ಬಹುಪಾಲು ಮಂದಿ ಗ್ರಾಮೀಣ ಪ್ರೇಕ್ಷಕರೇ ಎನ್ನುವುದು ಮತ್ತೊಂದು ಹೆಗ್ಗಳಿಕೆ.
ಎಲೆಕ್ಟ್ರಾನಿಕ್ ಮಾಧ್ಯಮಗಳ ದಾಳಿ, ಭ್ರಷ್ಟಗೊಳ್ಳುತ್ತಿರುವ ವ್ಯವಸ್ಥೆ, ಅಳಿಸಿ ಹೋಗುತ್ತಿರುವ ಹಳೆ ತತ್ತ್ವಗಳು ಹಾಗೂ ಹೊಸದರ್ಶನದ ಹೊಳಪಿರದ ತಳಮಳದ ಬದುಕಿನ ಈ ದಿನಗಳಲ್ಲಿ ಮುಂದಿನ ಭವಿಷ್ಯವಾದ ಮಕ್ಕಳಿಗೆ ಆರೋಗ್ಯಪೂರ್ಣ ಚಿಂತನೆ, ಆದರ್ಶಗಳನ್ನು ಪರಿಚಯಿಸುವ ಸದುದ್ದೇಶ ಈ ರಂಗಶತಕದ್ದು. ಮಕ್ಕಳಲ್ಲಿ ರಂಗಾಸಕ್ತಿ ಮೂಡಿಸುವುದರ ಜತೆಗೆ, ಅವರನ್ನು ಮಾನಸಿಕ ಹಾಗೂ ದೈಹಿಕವಾಗಿ ಗಟ್ಟಿಗೊಳಿಸಿ, ಅವರ ವ್ಯಕ್ತಿತ್ವವನ್ನು ಅರಳಿಸುವ ಉದ್ದೇಶ ಹೊಂದಿದ್ದ ಈ ಆಂದೋಲನದ ಗುರಿ, ಮಕ್ಕಳು ನಮ್ಮ ಮಣ್ಣಿನ ಸಂಸ್ಕೃತಿಯನ್ನು ಪ್ರೀತಿಸಿ, ಜಾತ್ಯತೀತ ಸಹಬಾಳ್ವೆ ನಡೆಸಲು ಪ್ರೇರೇಪಿಸುವುದೇ ಆಗಿತ್ತು. ಜಂಗಮತೆಯನ್ನು ಎತ್ತಿ ಹಿಡಿವ ರಂಗಭೂಮಿಯ ಪರಿಚಯವನ್ನು ಮಾಡಿಕೊಡುವುದರ ಜತೆಗೆ ನಾಡಿನ ಹಿರಿಯ ಚೇತನಗಳು ಸಾರಿರುವ ಜೀವನ ಮೌಲ್ಯಗಳನ್ನು ಸಮಾಜಕ್ಕೆ ತಲು ಪಿಸುವ ಪ್ರಯತ್ನ ಮಾಡಿದ ರಂಗಶತಕದ ಧ್ಯೇಯ ವಾಕ್ಯ 'ಮಕ್ಕಳಿಂದ, ಮಕ್ಕಳಿಗಾಗಿ, ನಾಟಕ'.
ಯಾವ ಸಿಬ್ಬಂದಿಯೂ ಇರದ, ಕಲಾವಿದರೂ ನೇಮಕವಾಗದ ಶಿವಮೊಗ್ಗ ರಂಗಾಯಣ, ರಂಗಕಲಾವಿದರ ಒಗ್ಗಟ್ಟು ಹಾಗೂ ಬದ್ಧತೆಗಳಿಂದ ಅತ್ಯಂತ ಪರಿಣಾಮಕಾರಿಯಾಗಿ 'ರಂಗಶತಕ' ಸಾಧಿಸಿದೆ ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನ.ಸತ್ಯ.
ಸೃಜನಶೀಲ ಅಭಿವ್ಯಕ್ತಿಗಳ ಮೂಲಕವೂ ಶತಕ ಬಾರಿಸಿ, ಲಕ್ಷಾಂತರ ಮನಸ್ಸುಗಳನ್ನು ಅರಳಿಸಿ, ಅರಿವಿನ ದೀಪ ಬೆಳಗಿಸಬಹುದೆಂದು ತೋರಿಸಿಕೊಟ್ಟ ಶಿವಮೊಗ್ಗ ರಂಗಾಯಣದ ಈ ಸಾಧನೆ, ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲೊಂದು ಮಹತ್ವದ ಮೈಲಿಗಲ್ಲು. ಇದನ್ನು ಸಾಕಾರಗೊಳಿಸಿದ, ಶಿವಮೊಗ್ಗ ರಂಗಾಯಣದ ನಿರ್ದೇಶಕ ಹೊ.ನ. ಸತ್ಯ ಮತ್ತವರ ತಂಡ, ಸಹಭಾಗಿತ್ವ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ, ಪಾಲ್ಗೊಂಡ ಶಿಕ್ಷಣ ಸಂಸ್ಥೆಗಳು ಹಾಗೂ ಭಾಗಿಯಾದ ಮಕ್ಕಳು ಇವರೆಲ್ಲರೂ ಅಭಿನಂದನಾರ್ಹರು.
- ಎಚ್.ಎಸ್. ನವೀನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


