ಸಾಪ್ತಾಹಿಕಪ್ರಭ

ಬುಕ್ ಶಾಪ್

Published On :

ಪ್ರಸನ್ನ ನಾಟಕ
ರಂಗ ನಿರ್ದೇಶಕ ಪ್ರಸನ್ನ ಅವರು ಬರೆದು ಈಗಾಗಲೆ ರಂಗದ ಮೇಲೆ ಪ್ರಯೋಗವಾಗಿರುವ ಎರಡು ನಾಟಕಗಳು 'ಆಚಾರ್ಯ ಪ್ರಹಸನ' ಮತ್ತು 'ಏನ್ ಹುಚ್ಚೂರೀ..' ಪುಸ್ತಕ ರೂಪದಲ್ಲಿ ಈಗ ಬಂದಿದೆ. ಇದು ನಟರ ನಾಟಕಗಳು ಎಂದು ಲೇಖಕರೇ ಹೇಳಿಕೊಂಡಿದ್ದಾರೆ. ನಟರ ಅಭಿನಯ ಸಾಮರ್ಥ್ಯವನ್ನು ರಂಗದ ಯಶಸ್ಸು ಅವಲಂಬಿಸಿದೆ. ಇವೆರಡೂ ನಾಟಕಗಳ ಪ್ರೇರಣೆ ಇರುವುದು ಫ್ರೆಂಚ್ ನಾಟಕಕಾರ ಮೊಲಿಯರ್‌ನಲ್ಲಿ. ಆತನ 'ಲೆ ತಾರ್‌ತೂಫ್‌' ನಾಟಕವು 'ಆಚಾರ್ಯ ಪ್ರಹಸನ' ಮತ್ತು 'ಬೂರ್ಜ್ವಾ ದಿ ಜಂಟಲ್‌ಮನ್‌' ನಾಟಕವು 'ಏನ್ ಹುಚ್ಚೂರಿ' ಉದ್ಭವಕ್ಕೆ ಕಾರಣವಾಗಿವೆ. ಇವುಗಳನ್ನು ಅಭಿನಯಿಸಬೇಕಾದರೆ ನಟರ ತಂತ್ರಗಾರಿಕೆ ಮತ್ತು ಅನುಭವಗಳೆರಡೂ ಗಟ್ಟಿಮುಟ್ಟಾಗಿರಬೇಕಾಗುತ್ತದೆ ಎಂದು ಲೇಖಕರು ಹೇಳಿದ್ದಾರೆ. ಮಧ್ಯಮವರ್ಗದ ಸಾಂಪ್ರದಾಯಿಕ ಕುಟುಂಬವೊಂದು ವಿಶ್ವಾಸಘಾತದಿಂದ ಹೇಗೆ ಹೃದಯಗಳನ್ನು ಛಿದ್ರಮಾಡಿಕೊಳ್ಳುತ್ತದೆ ಎಂಬುದನ್ನು 'ಆಚಾರ್ಯ ಪ್ರಹಸನ' ಹೇಳುತ್ತದೆ. ನಾಟಕಗಳು ಸಮಾಜದ ಆಷಾಢಭೂತಿಗಳನ್ನು ಬಯಲಿಗೆಳೆಯಬೇಕು ಎಂಬ ಸಂದೇಶವನ್ನು ಇದು ಹೇಳುತ್ತದೆ. 'ಏನ್ ಹುಚ್ಚೂರೀ..' ನಾಟಕವು 'ಮೇಲರಿಮೆ ಕೀಳರಿಮೆ ಇವುಗಳಿಂದ ತುಂಬಿಹೋಗಿದೆ ನಮ್ಮ ಬದುಕು! ... ಬದುಕು ಸರಳವಾಗಿದ್ರೇನೆ ಚೆಂದ' ಎಂಬ ಸಂದೇಶವನ್ನು ಹೇಳುತ್ತದೆ.
ಕೃತಿ: ಆಚಾರ್ಯ ಪ್ರಹಸನ ಮತ್ತು ಏನ್ ಹುಚ್ಚೂರೀ...
ಪ್ರಕಾರ: ನಾಟಕ, ಪ್ರ: ಮನೋಹರ ಗ್ರಂಥಮಾಲೆ, ಧಾರವಾಡ. ಪುಟಗಳು 156, ಬೆಲೆ ರು. 120.
ಏಕೆ ಓದಬೇಕು?: ಪ್ರಸನ್ನರ ಲೇಖನ ಸಾಮರ್ಥ್ಯ ಅರಿಯಲು

'ಅಗ್ನಿ' ಪರೀಕ್ಷೆ
ಪತ್ರಕರ್ತ ಅಗ್ನಿ ಶ್ರೀಧರ ಅವರ ಅಂಕಣ ಬರೆಹಗಳ ಸಂಕಲನ 'ಕಾಡುವ ಸಾಧಕರು, ಕಾಡುವ ಸಂಗತಿಗಳು' ಈಗ ಪ್ರಕಟವಾಗಿದೆ. 2003ರಿಂದ 2006ರ ವರೆಗೆ 'ಅಗ್ನಿ' ಪತ್ರಿಕೆಗೆ ಬರೆದ ಅಂಕಣಗಳು ಇವು. ಲೇಖಕರನ್ನು ಕಾಡಿದ ಹಲವಾರು ವಿಚಾರಗಳು ಇಲ್ಲಿ ಮಥನಕ್ಕೆ ಒಳಗಾಗಿವೆ. ಅದೇ ರೀತಿ ತಾವು ಪ್ರಭಾವಿತರಾದ ಹಲವು ವ್ಯಕ್ತಿಗಳನ್ನೂ ಅವರ ವಿಶೇಷ ಗುಣಗಳೊಂದಿಗೆ ಇಲ್ಲಿ ದಾಖಲಿಸಿದ್ದಾರೆ. ಮೊದಲನೆ ಭಾಗದಲ್ಲಿ 'ಕಾಡುವ ಸಾಧಕರು' ಇದ್ದರೆ ಎರಡನೆಯ ಭಾಗದಲ್ಲಿ 'ಕಾಡುವ ಸಂಗತಿಗಳು' ಇವೆ. ತಿರುಗಣಿ ನೃತ್ಯ ಎಂದರೇನು, ಟಿಮೋತಿ ಲೀರಿ ಯಾರು, ಪಾಸ್ಟರ್‌ನಾಕ್‌ನ 'ಲಾರ', ಅನಂತಮೂರ್ತಿ, ದಾಸ್ತೋವಸ್ಕಿ, ನಂಜುಂಡಸ್ವಾಮಿಯವರ ಪತ್ನಿ ಹೀಗೆ ಹಲವರ ಬಗ್ಗೆ ಅತ್ಯಂತ ಸರಳವಾದ ಭಾಷೆಯಲ್ಲಿ ಶ್ರೀಧರ ಬರೆದಿದ್ದಾರೆ.
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರ ಬಗ್ಗೆ ಬರೆದದ್ದು: 'ಸಾಹಿತ್ಯ, ಸಾಮಾಜಿಕ ಸಮಸ್ಯೆಗಳು ಮತ್ತು ರಾಜಕೀಯ ವಾತಾವರಣದ ಬಗ್ಗೆ ಖಚಿತ ನಿಲುವನ್ನಿಟ್ಟುಕೊಂಡಿರುವ ಮತ್ತು ಮುಕ್ತವಾಗಿ ಎಲ್ಲರೊಡನೆ ಸಂವಾದಿಸಲು ಸಿದ್ಧರಿರುವ ವಿಶ್ವೇಶ್ವರ ಭಟ್ಟರ ಜತೆ ಅರ್ಥಪೂರ್ಣ ಸಂಬಂಧವನ್ನು ನಮ್ಮ ಪ್ರಗತಿಪರರು ರೂಪಿಸಿಕೊಳ್ಳಬೇಕಿದೆ.
ಅಂದಹಾಗೆ ವೈಯಕ್ತಿಕ ನೆಲೆಯಿಂದ ಒಂದು ಸಂಗತಿಯನ್ನು ಹೇಳುವುದಾದರೆ, ನಾವು ಅವರನ್ನು ಟೀಕಿಸಿದಷ್ಟು ಯಾರೂ ಟೀಕಿಸಿರಲಾರರು. ಆದರೂ ವಾತಾವರಣವನ್ನು ರೋಗಗ್ರಸ್ತಗೊಳಿಸದೆ ಸ್ನೇಹಮಯಗೊಳಿಸುವಲ್ಲಿ ಅವರು ತೋರಿಸಿದ ಕಾಳಜಿ ನನ್ನಲ್ಲಿ ಅಪಾರ ಅಭಿಮಾನವನ್ನುಂಟುಮಾಡಿದೆ.' ಕೃತಿಯಲ್ಲಿ ಕಂಡ ಒಂದು ಕೊರತೆ ಎಂದರೆ ಯಾವ ಲೇಖನದಲ್ಲೂ ಅದನ್ನು ಬರೆದ ದಿನಾಂಕವನ್ನು ನಮೂದಿಸಿಲ್ಲ.
ಕೃತಿ: ಕಾಡುವ ಸಾಧಕರು, ಕಾಡುವ ಸಂಗತಿಗಳು.
ಪ್ರಕಾರ: ಅಂಕಣ ಬರೆಹ
ಪ್ರ: ಅಂಕಿತ ಪುಸ್ತಕ, ಬೆಂಗಳೂರು. ಪುಟಗಳು 160, ಬೆಲೆ ರು. 120.
ಏಕೆ ಓದಬೇಕು?: ಲೇಖಕರು ಪ್ರಭಾವಿತರಾದ ಹಲವು ವ್ಯಕ್ತಿಗಳ ಬಗ್ಗೆ ಅಪರೂಪದ ಮಾಹಿತಿ.

ಬೊಮ್ಮನಹಳ್ಳಿ ಜ್ಯೋತಿ ಗೀತ
ದಾಂಪತ್ಯವನ್ನು ಬೇಂದ್ರೆಯವರು ಸಖೀಗೀತವೆಂದು ಕರೆದಿದ್ದಾರೆ. ಡಿವಿಜಿಯವರು ದಂಪತಿ ಸಂಸಾರವೆನ್ನುವ ಬಂಡಿಯನ್ನು ಎಳೆಯುವ ಜೋಡಿ ಎತ್ತುಗಳು ಎಂದಿದ್ದಾರೆ. ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ ಎಂದು ನರಸಿಂಹಸ್ವಾಮಿಯವರು ಹಾಡಿದ್ದಾರೆ. ಮುದ್ದಣ ಮನೋರಮೆಯರೆಂಬ ಅಪರೂಪದ ದಂಪತಿ ಮಾದರಿಯಾಗಿದ್ದಾರೆ. ಇವೆಲ್ಲ ದಾಂಪತ್ಯದ ಅನ್ಯೋನ್ಯತೆಯನ್ನು ಸಾರುವ ರೂಪಕಗಳು. ಉತ್ತಮ ದಂಪತಿ ಸಖ ಮತ್ತು ಸಖಿ. ಹೀಗೆ ಸಖ ಸಖಿಯರಾಗಿ ಬದುಕಿ ಆದರ್ಶವಾಗಿರುವ 65 ಜೋಡಿಯ ಪರಿಚಯವನ್ನು ಜ್ಯೋತಿ ಬೊಮ್ಮನಹಳ್ಳಿಯವರು ತಮ್ಮ 'ಸಖೀಗೀತ'ದಲ್ಲಿ ಮಾಡಿದ್ದಾರೆ. ಇದು ಅಂಕಣ ಬರೆಹಗಳ ಗುಚ್ಛ. ವರನಟ ಡಾ. ರಾಜಕುಮಾರ್ ಪಾರ್ವತಮ್ಮ ದಂಪತಿಯಿಂದ ಮೊದಲ್ಗೊಂಡು ಕಾ.ತ. ಚಿಕ್ಕಣ್ಣ- ಜಯಲಕ್ಷ್ಮಿವರೆಗೆ ಇದರ ಬೀಸು ಇದೆ. ಪ್ರತಿ ಲೇಖನಕ್ಕೂ ಅರ್ಥಪೂರ್ಣ ಶೀರ್ಷಿಕೆ ಇದೆ. 'ಹಾಡಿನ ಸಕ್ಕರೆಗೆ ಭಾವದ ಅಕ್ಕರೆ' ಇದು ಶಿವಮೊಗ್ಗ ಸುಬ್ಬಣನವರ ಬಗ್ಗೆ ಬರೆದ ಲೇಖನದ ಶೀರ್ಷಿಕೆ. ಸಂಸಾರದಲ್ಲಿ ಸರಿಗಮ- ಸಂಗೀತಾ ಕಟ್ಟಿ ಬಗ್ಗೆ, ಹಂಪನಾ- ಕಂಪನಾ- ಇದು ಯಾರ ಬಗೆಗೆಂದು ಹೇಳುವುದು ಬೇಕಾಗಿಲ್ಲ, ಪ್ರಮೀಳೆಯ ಸುಂದರಕಾಂಡ- ನಟ ಸುಂದರರಾಜ್ ಬಗ್ಗೆ, ರಾಗದ ಮೂಲಕ ಅನುರಾಗ- ಹಂಸಲೇಖ ಬಗ್ಗೆ. ದಾಂಪತ್ಯವೆನ್ನುವುದು ಅತ್ಯಂತ ಖಾಸಗಿಯಾದ ವಿಚಾರ. ಅಂಥ ವಿಚಾರಗಳನ್ನು ಜ್ಯೋತಿಯವರು ಖಾಸಗಿತನಕ್ಕೆ ಧಕ್ಕೆ ಬರದಂತೆ  ಅತ್ಯಂತ ನವಿರಾಗಿ ವರ್ಣಿಸಿದ್ದಾರೆ. ಸಖೀಗೀತ ಕುಟುಂಬಗಳ ಕಥನವಾಗಿದೆ.
ಕೃತಿ: ಸಖೀಗೀತ.
ಪ್ರಕಾರ: ಅಂಕಣ ಬರೆಹ
ಪ್ರ: ಸಿರಿವರ ಪ್ರಕಾಶನ, ಬೆಂಗಳೂರು. ಪುಟಗಳು 156, ಬೆಲೆ ರು. 200.
ಏಕೆ ಓದಬೇಕು?: ದಾಂಪತ್ಯದ ನೆಲೆ ಬೆಲೆ ಅರಿಯಲು

ಆಕಾಶದಿಂದತ್ತತ್ತ
ಸಮಕಾಲೀನ ಪತ್ರಕರ್ತರಲ್ಲಿ ಹೃದಯ ಕರಗುವಂತೆ, ಕಣ್ಣು ತೇವವಾಗುವಂತೆ ಬರೆಯುವ ಸಾಮರ್ಥ್ಯವಿರುವ ಕೆಲವೇ ಕೆಲವರಲ್ಲಿ ಎ.ಆರ್. ಮಣಿಕಾಂತ್ ಅವರೂ ಒಬ್ಬರು. 'ಅಪ್ಪ ಅಂದ್ರೆ ಆಕಾಶ' ಎಂಬ ಅವರ ಲೇಖನಗಳ ಹೊಸ ಸಂಕಲನ ಈ ಮೇಲಿನ ಹೇಳಿಕೆಯನ್ನು ಸಮರ್ಥಿಸುತ್ತದೆ. ಈ ಮೊದಲು ಅವರು ಬರೆದ 'ಅಮ್ಮ ಹೇಳಿದ ಎಂಟು ಸುಳ್ಳುಗಳು' ಪುಸ್ತಕ ಮಾರಾಟ ಕ್ಷೇತ್ರದಲ್ಲಿ ಒಂದು ದಾಖಲೆಯನ್ನು ಸ್ಥಾಪಿಸಿತ್ತು. ಈ ಕೃತಿ ಅದರ ಎರಡನೆಯ ಭಾಗದಂತಿದೆ.
ಈ ಕೃತಿಯಲ್ಲಿರುವ 30 ಲೇಖನಗಳಲ್ಲಿ ಹೆಚ್ಚಿನವು ಸಕ್ಸಸ್ ಸ್ಟೋರಿಗಳು. ಇಲ್ಲಿರುವವರು ಸೋಲು ಎಂಬ ಪದವನ್ನು ತಮ್ಮ ನಿಘಂಟುವಿನಿಂದ ತೆಗೆದುಹಾಕಿದವರು. ಸ್ವಂತ ಪರಿಶ್ರಮದಿಂದ ಯಶಸ್ಸಿನ ಏಣಿ ಏರಿ ಶಿಖರ ತಲುಪಿದವರು. ಇವರ ಬದುಕು ಇತರರಿಗೆ ಮಾದರಿ.
ಇಲ್ಲಿಯ ಒಂದು ಲೇಖನ, 'ಎಮ್ಮೆ ಕಾಯುತ್ತಿದ್ದ ಹುಡುಗ ಎಂ.ಎ. ಮಾಡಿದವರನ್ನೇ ಮೀರಿಸಿದ'. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೋತಿಗುಡ್ಡ ಎಂಬ ಹಳ್ಳಿಯ ರಮೇಶ್ ಬಲ್ಲಿದ್ 16 ವರ್ಷದವರೆಗೂ ಅಕ್ಷರ ಜ್ಞಾನವನ್ನೇ ಹೊಂದಿರಲಿಲ್ಲ. ಈಗ ಪ್ರೊಫೆಸರುಗಳೂ ಬೆರಗಾಗುವಂತೆ ಇಂಗ್ಲಿಷ್ ಓದುತ್ತಾನೆ. ಮಾತನಾಡುತ್ತಾನೆ. ಸಿಎನ್‌ಎನ್-ಐಬಿಎನ್ ಚಾನೆಲ್‌ನಿಂದ ರಿಯಲ್ ಹೀರೋ ಎಂದು ಕರೆಸಿಕೊಂಡಿದ್ದಾನೆ. ಇದು ಹೇಗೆ ಸಾಧ್ಯವಾಯಿತು? ಸಾಧಿಸಬೇಕೆಂಬ ಛಲ ಮತ್ತು ಸಕಾಲದಲ್ಲಿ ಒದಗಿದ ನೆರವಿನ ಹಸ್ತ.
ಅದೇ ರೀತಿ ಮೂರು ಮಕ್ಕಳನ್ನು ಹಾಗೂ ಬಂಧುಗಳನ್ನು ಸುನಾಮಿಯಲ್ಲಿ ಕಳೆದುಕೊಂಡ ಪರಮೇಶ್ವರನ್- ಚೂಡಾಮಣಿ ದಂಪತಿ ಆ ದುಃಖದಲ್ಲಿ ಕೊರಗುತ್ತ ಕುಳಿತುಕೊಳ್ಳದೆ ಅನಾಥ ಮಕ್ಕಳನ್ನು ಪೋಷಿಸಲು ಕೈಗೊಂಡ ನಿರ್ಧಾರದ ಕ್ಷಣ ಅವಿಸ್ಮರಣೀಯ. ದುಃಖದಲ್ಲಿ ತಾವೇ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದ ಅವರು ಅದೇ ಸುನಾಮಿಯಲ್ಲಿ ಅನಾಥರಾದ 30 ಮಕ್ಕಳನ್ನು ಕರೆತಂದು ಸಾಕುತ್ತಾರೆ. ಇವರ ಸಾಧನೆಯನ್ನು ಕಂಡು ಸಿಎನ್‌ಎನ್-ಐಬಿಎನ್ ಚಾನೆಲ್ 2012ನೆ ಸಾಲಿನ ರಿಯಲ್ ಹೀರೋಸ್ ಪ್ರಶಸ್ತಿ ನೀಡಿ ಗೌರವಿಸಿದೆ.
ಮಿಸ್ ಇಂಡಿಯಾ ಪೂಜಾ ಚೋಪ್ರಾ ಹುಟ್ಟಿದಾಗ ಅಪ್ಪನಿಂದ ಅನಿಷ್ಟ ಅನ್ನಿಸಿಕೊಂಡು, ಅಮ್ಮನನ್ನು ಆತ ತ್ಯಜಿಸುವುದಕ್ಕೆ ಕಾರಣಳಾಗಿದ್ದಳು. ಆದರೆ ಅವಳು ಯಾವ ಕಠಿಣ ಪರಿಶ್ರಮದ ದಾರಿಯನ್ನು ತುಳಿದು ಮಿಸ್ ಇಂಡಿಯಾ ಆದಳು ಎಂಬುದನ್ನು ಮಣಿಕಾಂತ್ ಬರೆದುದನ್ನು ಓದಿದಾಗ ಕಣ್ಣು ತೇವವಾಗದೆ ಇರದು. ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆಯನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದಿರುವ ಮಧುರೈನ ಜಿಲ್ಲಾಧಿಕಾರಿ ಸಗಾಯಂ ಬಗ್ಗೆ ಬರೆದಿರುವುದು ಸಾಂದರ್ಭಿಕವೂ ಇತರರಿಗೆ ಮಾದರಿಯೂ ಆಗಿದೆ.
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಸಂಬಂಧಗಳ ಎಳೆಗಳು ತೆಳುವಾಗುತ್ತ ಹೋಗಿವೆ. ಹೆತ್ತವರನ್ನು ಕೂಡ ನಿರ್ಲಕ್ಷಿಸುವ ಮಕ್ಕಳಿದ್ದಾರೆ. ಜನ್ಮ ಕೊಟ್ಟ ತಾಯಿ, ಬದುಕು ಕೊಟ್ಟ ಅಪ್ಪ ಇಬ್ಬರನ್ನೂ ಮರೆಯುತ್ತಾರೆ. ಅಂಥವರಿಗೆ ಜ್ಞಾನೋದಯವಾಗಿಸಲು ಬರೆದ ಲೇಖನ 'ಅಪ್ಪ ಅಂದ್ರೆ ಆಕಾಶ'. ಇಲ್ಲಿಯ ಅಪ್ಪ ಯಾಕಾಗಿ ಇಷ್ಟವಾಗಬೇಕು ಎಂದರೆ, ಆತ ಮಕ್ಕಳಿಗೆ ವಿದ್ಯೆ ಕಲಿಸಿದ, ಬುದ್ಧಿವಂತರನ್ನಾಗಿಸಿದ, ಪ್ರಾಮಾಣಿಕತೆಯ ಬದುಕನ್ನು ಬದುಕಿ ಆದರ್ಶ ವ್ಯಕ್ತಿಯಾದ, ಮಕ್ಕಳಿಗೆ ಸಾಲದ ಹೊರೆ ಹೊರಿಸಲಿಲ್ಲ, ಬೇರೆಯವರ ಶಾಪ ತಗುಲದಂತೆ ಬದುಕಿದ. ಇದಕ್ಕಿಂತ ಹೆಚ್ಚಿನದು ಇನ್ನೇನು ಬೇಕು ಅಪ್ಪನಿಂದ? ನಿಜ ಹೇಳಬೇಕೆಂದರೆ ಅಪ್ಪ ಎಂಬುದು ಆಕಾರವಲ್ಲ, ಅದು ಎಲ್ಲವನ್ನೂ ಒಳಗೊಂಡ ಆಕಾಶ ಎಂದು ಮಣಿಕಾಂತ್ ಬರೆದಾಗ ಅಹುದಹುದೆನಲೇ ಬೇಕು.
ಮೊದಲ ಲೇಖನ 'ಪ್ರಾರ್ಥನೆ'ಯಲ್ಲಿ ಮಕ್ಕಳನ್ನು ಕಡೆಗಣಿಸುವ ಪೋಷಕರಿಗೆ ಎಚ್ಚರಿಕೆಯ ಉಪದೇಶವಿದೆ. ಇಪ್ಪತ್ತು ವರ್ಷಗಳ ಹಿಂದೆ ಊಟಕ್ಕೆ ಕಷ್ಟಪಡುತ್ತಿದ್ದ ರಮೇಶ್‌ಬಾಬು ರೋಲ್ಸ್‌ರಾಯ್ ಮರ್ಸಿಡೀಸ್ ಬೆಂಜ್ ಸೇರಿದಂತೆ 164 ಕಾರುಗಳನ್ನು ಹೊಂದಿರುವುದು, ಬೇಕರಿಯಲ್ಲಿ ಕ್ಲೀನರ್ ಆಗಿದ್ದ ಹುಡುಗ ಇಂದು 150 ಕೋಟಿ ರುಪಾಯಿಯ ವಹಿವಾಟು ನಡೆಸುತ್ತಿರುವುದು ಓದಿದಾಗ ಎದೆ ತುಂಬಿಬರುತ್ತದೆ.
ಇಲ್ಲಿಯ ದೃಷ್ಟಾಂತಗಳ ಮೂಲಕ ದೇಶ ಕಟ್ಟುವುದಕ್ಕೆ ಕೇವಲ ಬುದ್ಧಿವಂತರಷ್ಟೇ ಅಲ್ಲ ಹೃದಯವಂತರೂ ಬೇಕು ಎಂಬುದನ್ನು ಹೇಳಲು ಮಣಿಕಾಂತ್ ಪ್ರಯತ್ನಿಸಿದ್ದಾರೆ. ಕೈ ಚೆಲ್ಲಿ ಕತ್ತಲೆಗೆ ಮುಖಮಾಡುವವರ ಎದುರು ಭರವಸೆಯ ಹಣತೆಗಳನ್ನು ಈ ಮೂಲಕ ಹಚ್ಚಿದ್ದಾರೆ.
ಮಣಿಕಾಂತ್ ಅವರಿಗೆ ಆಪ್ತವಾದ ಶೈಲಿ ಸಿದ್ಧಿಸಿದೆ. ಯಾವುದೇ ವಸ್ತು ಸಿಕ್ಕರೂ ಅದನ್ನು ಹೃದ್ಯವಾಗಿ ಅವರು ಹೇಳಬಲ್ಲರು. ನಮ್ಮ ಗುರುಗಳಾದ ಎಂ.ಎಂ. ಕಲಬುರ್ಗಿಯವರು ಆಗಾಗ ಒಂದು ಮಾತನ್ನು ಹೇಳುತ್ತಿದ್ದರು; ಕೂದಲಿದ್ದಾಕಿ ಹೇಗೆಬೇಕೋ ಹಾಗೆ ತುರುಬು ಕಟ್ಟುತ್ತಾಳೆ ಎಂದು. ಮಣಿಕಾಂತ್ ಅವರ ಪ್ರತಿಭೆ ಅಂಥ ಸುಕೇಶಿನಿಯ ಹಾಗೆ.
ಕೃತಿ: ಅಪ್ಪ ಅಂದ್ರೆ ಆಕಾಶ
ಪ್ರಕಾರ: ಪ್ರಬಂಧ
ಪ್ರ: ನೀಲಿಮಾ ಪ್ರಕಾಶನ, ಕೆಂಗೇರಿ, ಬೆಂಗಳೂರು. ಪುಟಗಳು 176, ಬೆಲೆ ರು. 100.
ಏಕೆ ಓದಬೇಕು?: ಬದುಕಿಗೆ ಪ್ರೇರಣೆ ಪಡೆಯಲು

ಕಣವಿ ಕಣ್ಣಲ್ಲಿ ಬೇಂದ್ರೆ
ವರಕವಿಯ ಬಗ್ಗೆ ಹಿರಿಯ ಕವಿ ಬರೆದಿರುವ ಟಿಪ್ಪಣಿಗಳು 'ಬೇಂದ್ರೆ ಕಾವ್ಯದ ಕುಹುಕ್ಕೂಹೂ' ಕೃತಿಯಲ್ಲಿ ಸಂಕಲನಗೊಂಡಿವೆ. ಇಲ್ಲಿ ಬೇಂದ್ರೆಯವರನ್ನು ಶೋಧಿಸುತ್ತ ಕವಿ ಚೆನ್ನವೀರ ಕಣವಿಯವರು ತಮ್ಮನ್ನು ಶೋಧಿಸಿಕೊಳ್ಳುತ್ತಾರೆ. ಕವಿಗೆ ಕವಿ ಒಲಿದ ಪರಿ ಇಲ್ಲಿ ಅನನ್ಯ. 'ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ' ಎಂದ ಬೇಂದ್ರೆಯವರ ಕಾವ್ಯಲೋಕದೊಳಗೆ ಪ್ರವೇಶಿಸಿದ ಕಣವಿಯವರು ಬೇಂದ್ರೆಯವರ ಕಾವ್ಯ ಮತ್ತು ವ್ಯಕ್ತಿತ್ವದ ಬಗ್ಗೆ ಕೆಲವೊಂದು ಸುಳುಹು-ಹೊಳಹುಗಳನ್ನು ನೀಡಿದ್ದಾರೆ. ಬೇಂದ್ರೆ ಕಾವ್ಯ ಒಂದು ಶತಮಾನದಿಂದ ಕನ್ನಡ ಕಾವ್ಯಲೋಕವನ್ನು ಪ್ರಭಾವಿಸುತ್ತ ಬಂದಿದೆ. ಬಾರೋ ಸಾಧನಕೇರಿಗೆ ಎಂದು ಕರೆಯುತ್ತ ಕಾವ್ಯದ ವಿವಿಧ ಭಂಗಿಗಳನ್ನು ಅನಾವರಣಗೊಳಿಸುವ ಬೇಂದ್ರೆಯವರ ಮಾಂತ್ರಿಕತೆಯನ್ನು ಕಣವಿ ಇಲ್ಲಿ ಅನುಭವಿಸಿ ಹೇಳಿದ್ದಾರೆ. ಬೇಂದ್ರೆಯವರನ್ನು ಅತಿ ಹತ್ತಿರದಿಂದ ನೋಡಿ ಒಡನಾಡಿರುವ ಕಣವಿಯವರು, 'ಬೇಂದ್ರೆ ಕವಿತೆಗಳು ಕಾವ್ಯಗುಣದಲ್ಲಿ ಒಂದು ಉನ್ನತ ಮಟ್ಟವನ್ನ ಬಿಟ್ಟು ಕೆಳಗಿಳಿಯುವುದಿಲ್ಲ. ವಸ್ತು ಎಷ್ಟೇ ಸಾಮಾನ್ಯವೆನಿಸಿದರೂ ಅದು ತನ್ನ ವಿಶೇಷತೆಯನ್ನು ಬಿಟ್ಟುಕೊಡದೆ, ಭಾವ ಸಂಪತ್ತನ್ನು ಗಳಿಸಿಕೊಂಡೇ ಬರುತ್ತದೆ' ಎಂದು ಹೇಳಿದ್ದಾರೆ. ಬೇಂದ್ರೆ ಕಾವ್ಯದ ನಾದ ಸಂಪತ್ತು, ಕಾವ್ಯದ ವಿಭಿನ್ನ ನೆಲೆಗಳು, ಕಾವ್ಯಭಾಷೆ, ಪ್ರತಿಮಾಯೋಜನೆ, ಬೇಂದ್ರೆಯವರ ಕಾವ್ಯ ಪದ್ಧತಿಯ ಬಗ್ಗೆ ಕಣವಿ ಇಲ್ಲಿ ವಿವರಿಸಿದ್ದಾರೆ.
ಕೃತಿ: ಬೇಂದ್ರೆ ಕಾವ್ಯದ ಕುಹುಕ್ಕುಹೂ.
ಪ್ರಕಾರ: ವಿಮರ್ಶೆ
ಪ್ರ: ಪ್ರಸಾರಾಂಗ, ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಧಾರವಾಡ.
ಪುಟಗಳು 100, ಬೆಲೆ ರು. 60.
ಏಕೆ ಓದಬೇಕು?: ಬೇಂದ್ರೆ ಕಾವ್ಯದ ಅಂತರಂಗ ಅರಿಯಲು

ಸೃಜನೇತರ ಕಂಬಾರ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರ ಬಗ್ಗೆ ಈಗಾಗಲೆ ಹಲವಾರು ವಿಮರ್ಶಾತ್ಮಕ ಕೃತಿಗಳು ಬಂದಿವೆ. ಅವೆಲ್ಲ ಹೆಚ್ಚಾಗಿ ಅವರ ಕಾವ್ಯ, ನಾಟಕ, ಕಾದಂಬರಿಗಳನ್ನು ವಿಮರ್ಶಿಸಿದ್ದು, ಇದೀಗ ಡಾ. ವೀರೇಶ ಬಡಿಗೇರ ಅವರು ಕಂಬಾರರ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಂಪಾದನೆ, ಶಿಕ್ಷಣ, ಜಾನಪದ ಕೃತಿಗಳ ಕುರಿತು ವಿವೇಚನೆ ನಡೆಸಿ 'ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು' ಕೃತಿಯನ್ನು ರಚಿಸಿದ್ದಾರೆ. ಕಂಬಾರರೆಂದರೆ ನಿರಂತರ ಪ್ರವಹಿಸುವ ಒರತೆಯಂತೆ. ಒಂದಲ್ಲ ಒಂದು ಕಾರಣಕ್ಕೆ ಅವರು ತಮ್ಮದೇ ರೀತಿಯಲ್ಲಿ ಸಮಕಾಲೀನ ಕ್ರಿಯೆಗಳಿಗೆ ಪ್ರತಿಕ್ರಿಯಿಸುತ್ತ ಬಂದವರು. ಜನಪದ ಸಂಸ್ಕೃತಿಯಲ್ಲಿ ಬೆರೆತಿರುವ ಜೀವನಮೌಲ್ಯ, ನಂಬಿಕೆ, ನಡವಳಿಕೆಗಳನ್ನು ಕಂಬಾರರು ಹೆಚ್ಚು ಆಸ್ಥೆಯಿಂದ ಇದಿರುಗೊಂಡವರು. ಕನ್ನಡವಷ್ಟೇ ಅಲ್ಲದೆ ಭಾರತೀಯ ಸಾಹಿತ್ಯ ಸಂಸ್ಕೃತಿಗೆ ಸಂಬಂಧಿಸಿದಂತೆ ಅವರು ಎತ್ತುವ ಸೂಕ್ಷ್ಮ ಪ್ರಶ್ನೆಗಳು, ಮಾಡುವ ಅರ್ಥಪೂರ್ಣ ಸಂವಾದಗಳು ಗಂಭೀರ ಅಧ್ಯಯನಕ್ಕೆ ದಾರಿಮಾಡಿಕೊಡುತ್ತವೆ. ಪಾಶ್ಚಾತ್ಯ ಅಧ್ಯಯನದ ಮಾದರಿಗಳು, ಬದುಕಿನ ಕ್ರಮಗಳು, ಭಾರತೀಯ ಸಾಹಿತ್ಯ ಸಂಸ್ಕೃತಿಗಳನ್ನು ಬರಡುಗೊಳಿಸಿದ ಬಗ್ಗೆ ಅವರು ಎತ್ತುವ ಅಭ್ಯಾಸಪೂರ್ಣ ಚರ್ಚೆಗಳು ಹೊಸ ತಲೆಮಾರಿನ ಲೇಖಕರಿಗೆ, ಸಂಶೋಧಕರಿಗೆ ಬಹುಮುಖ್ಯ ಚಿಂತನಾದ್ರವ್ಯಗಳಾಗಬಲ್ಲವು ಎಂಬ ಮಾತನ್ನು ಬಡಿಗೇರ ಇಲ್ಲಿ ಹೇಳಿದ್ದಾರೆ. ಅವರು ಎತ್ತಿರುವ ಹಲವು ಪ್ರಶ್ನೆಗಳು ಸಾಹಿತ್ಯಕ ವಾಗ್ವಾದಕ್ಕೆ ದಾರಿಮಾಡಿಕೊಡುತ್ತವೆ.
ಕೃತಿ: ಕನ್ನಡ ಸಾಹಿತ್ಯ ಪರಂಪರೆ ಮತ್ತು ಕಂಬಾರರು.
ಪ್ರಕಾರ: ಚಿಂತನ ಪ್ರಬಂಧ
ಪ್ರ: ಅಂಕಿತ ಪುಸ್ತಕ, ಬೆಂಗಳೂರು.
ಪುಟಗಳು 112, ಬೆಲೆ ರು. 95.

ಬಳಕೆದಾರನೇ ಬಹದ್ದೂರ
ಜಾಗತೀಕರಣದ ಪರಿಣಾಮವಾಗಿ ಕೊಳ್ಳುಬಾಕ ಸಂಸ್ಕೃತಿಯೊಂದು ತಲೆಎತ್ತಿರುವಾಗ ಅದರಿಂದಾಗುವ ಅಪಾಯಗಳ ಬಗ್ಗೆ ಗ್ರಾಹಕರನ್ನು ಎಚ್ಚರಿಸುವ ಕೆಲಸವನ್ನು ಎಚ್. ಶಾಂತಾರಾಮ ಐತಾಳರು ತಮ್ಮ 'ಬಳಕೆದಾರನ ಬತ್ತಳಿಕೆಯಿಂದ...' ಎಂಬ ಕೃತಿಯಲ್ಲಿ ಮಾಡಿದ್ದಾರೆ. ಬಳಕೆದಾರ ಅಸಹಾಯಕನಲ್ಲ. ಆತನಿಗೂ ಹಕ್ಕುಗಳಿವೆ. ಆ ಹಕ್ಕುಗಳಿಗೆ ಚ್ಯುತಿ ಬಂದಲ್ಲಿ ಸೂಕ್ತ ವೇದಿಕೆಯಲ್ಲಿ ಆತ ಅದನ್ನು ಪ್ರಶ್ನಿಸಿ ನ್ಯಾಯವನ್ನು ಪಡೆಯಬಹುದು ಎಂಬ ವಿಚಾರಗಳನ್ನು ಇಲ್ಲಿ ತಿಳಿಸಿಕೊಡಲಾಗಿದೆ. ಭಾರತದಲ್ಲಿ ಗ್ರಾಹಕ ರಕ್ಷಣೆಗೆ ಹಲವಾರು ಕಾನೂನುಗಳಿವೆ. ಆದರೆ ಅದರ ಅರಿವು ಬಳಕೆದಾರರಲ್ಲಿ ಇಲ್ಲ. ಗ್ರಾಹಕ ಚಳವಳಿಯ ಮುಂಚೂಣಿಯಲ್ಲಿದ್ದವರು ಹಲವು ಹೋರಾಟಗಳನ್ನು ಮಾಡಿ ಹಲವು ಹಳೆಯ ಕಾನೂನುಗಳಿಗೆ ಸೂಕ್ತ ತಿದ್ದುಪಡಿಗಳು ಬರುವಂತೆ ಮಾಡಿದ್ದಾರೆ. ಈ ಕೃತಿಯಲ್ಲಿ ಮೂರು ಭಾಗಗಳಲ್ಲಿ ಒಟ್ಟೂ 46 ಲೇಖನಗಳಿವೆ. ನೀರು ಹಾಗೂ ಹಸಿರು ಹೇಗೆ ಒಂದಕ್ಕೊಂದು ಪೂರಕ, ಕೆರೆಗಳ ರಕ್ಷಣೆ ಹೇಗೆ, ಮಹಾಪೂರಗಳನ್ನು ಎದುರಿಸುವುದು ಹೇಗೆ, ಕಡಿಮೆ ನೀರಿನಿಂದ ಅಧಿಕ ಬೆಳೆ ತೆಗೆಯುವುದು ಹೇಗೆ, ಹಲವು ಉತ್ಪನ್ನಗಳ ಬಗೆಬಗೆಯ ಜಾಹೀರಾತುಗಳು ವಂಚಿಸುವ ಪರಿ.. ಹೀಗೆ ವಿಸ್ತಾರವಾಗಿ ವಿವರಿಸಿದ್ದಾರೆ. ಲೇಖನಗಳ ಹಿಂದಿರುವ ಐತಾಳರ ಕಾಳಜಿ ಅತ್ಯಂತ ಮಹತ್ವದ್ದು. ಗ್ರಾಹಕ ಶಿಕ್ಷಣಕ್ಕೆ ಇದೊಂದು ಅಪರೂಪದ ಕೃತಿ.
ಕೃತಿ: ಬಳಕೆದಾರನ ಬತ್ತಳಿಕೆಯಿಂದ....
ಪ್ರಕಾರ: ಗ್ರಾಹಕ ಸಂಬಂಧಿ ಚಿಂತನ ಬರೆಹ
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು.
ಪುಟಗಳು 196, ಬೆಲೆ ರು. 150.

ಸ್ಟೀಫನ್ ಹಾಕಿಂಗ್
ಸ್ಟೀಫನ್ ಹಾಕಿಂಗ್ ವೈಯಕ್ತಿಕವಾಗಿ ಮನುಕುಲದ ಒಂದು ಅದ್ಭುತ. ಹಾಗೆಯೇ ವಿಜ್ಞಾನ ಕ್ಷೇತ್ರದ ಮಹಾನ್ ಪ್ರತಿಭೆ. ತಮ್ಮ 21ನೆ ವಯಸ್ಸಿಗೇ ಅವರಿಗೆ ಅಮಿಯೋ ಟ್ರಾಫಿಕ್ ಲೇಟರಲ್ ಕ್ಲೆರೋಸಿಸ್ ಎಂಬ ರೋಗ ಅಂಟಿಕೊಂಡಿತು. ಅದಕ್ಕೆ ಚಿಕಿತ್ಸೆಯೇ ಇರಲಿಲ್ಲ. ವಿಕಲಾಂಗ ಹಾಕಿಂಗ್ ತಮ್ಮ ವ್ಹೀಲ್‌ಚೇರ್‌ಗೆ ಅಂಟಿಕೊಂಡು ಬದುಕಬೇಕಾದ ಅನಿವಾರ್ಯತೆಗೆ ಒಳಗಾದವರು. ಸಾಮಾನ್ಯರಾದರೆ ಬದುಕಿನ ಪ್ರೀತಿಯನ್ನೇ ಕಳೆದುಕೊಂಡು ಮೂಲೆ ಹಿಡಿದುಬಿಡುತ್ತಿದ್ದರು. ಆದರೆ ಹಾಕಿಂಗ್ ತನ್ನ ಪ್ರತಿಕೂಲ ದೈಹಿಕ ಸಾಮರ್ಥ್ಯದ ಹೊರತಾಗಿಯೂ ವಿಶ್ವ ರಹಸ್ಯದ ಬಗ್ಗೆ ಕುತೂಹಲವನ್ನು ಉಳಿಸಿಕೊಂಡರು. ಬಿಗ್ ಬ್ಯಾಂಗ್ ಮತ್ತು ಕ್ವಾಂಟಂ ಸಿದ್ಧಾಂತವನ್ನು ಮಂಡಿಸಿದರು. ಕಪ್ಪುರಂಧ್ರಗಳ ಕುರಿತ ಆವರೆಗಿನ ಸಿದ್ಧಾಂತಗಳನ್ನು ಅವರು ಮರುಶೋಧನೆಗೆ ಒಳಪಡಿಸಿದರು. ಹಾಕಿಂಗ್ ಅವರ ಶೋಧನೆಗಳ ಪರಿಣಾಮ ಏನೇ ಇರಲಿ, ಆದರೆ ಅವರು ತಮ್ಮ ಬದುಕನ್ನು ಸ್ವೀಕರಿಸಿದ ರೀತಿ ಮಾತ್ರ ಇತರರಿಗೆ ಪ್ರೇರಣೆಯನ್ನು ನೀಡುವಂಥದ್ದು. ಹಾಕಿಂಗ್ ಅವರ ಬದುಕು ಮತ್ತು ಸಂಶೋಧನೆಯ ಬಗ್ಗೆ ಮಹಾಬಲೇಶ್ವರ ಕಾಟ್ರಹಳ್ಳಿಯವರು 'ಖಗೋಳ ವಿಜ್ಞಾನದ 'ಹಾಕ್‌' ಸ್ಟೀಫನ್ ಹಾಕಿಂಗ್‌' ಕೃತಿಯಲ್ಲಿ ಬರೆದಿರುವರು. ಸಹಜ ಕನ್ನಡಕ್ಕಿಂತ ಸ್ವಲ್ಪ ಭಿನ್ನವಾದ ಭಾಷೆ ಇಲ್ಲಿಯದು. ಇನ್ನೂ ಸರಳವಾಗಿ ಇದನ್ನು ಬರೆಯಬಹುದಿತ್ತು.
ಕೃತಿ: ಸ್ಟೀಫನ್ ಹಾಕಿಂಗ್.
ಪ್ರಕಾರ: ಖಭೌತವಿಜ್ಞಾನ
ಪ್ರ: ಅಪೂರ್ವ ಪ್ರಕಾಶನ, ಉತ್ತಂಗಿ, ಹೂವಿನ ಹಡಗಲಿ ತಾ.
ಪುಟಗಳು 120, ಬೆಲೆ ರು. 150.
ಏಕೆ ಓದಬೇಕು?: ಖಗೋಳ ರಹಸ್ಯ ಅರಿಯಲು

ಗಿಲ್ಗಮೆಶ್ ಎಂಬ ಅಸಾಮಾನ್ಯ

ಜಾಗತಿಕ ಸಾಹಿತ್ಯವನ್ನು ಅರಿಯಬೇಕೆಂದರೆ ಮೂಲ ಕೃತಿಯನ್ನು ಓದಬೇಕು. ಆದರೆ ಎಲ್ಲ ಭಾಷೆಗಳೂ ನಮಗೆ ಗೊತ್ತಿರುವುದಿಲ್ಲವಾದ ಕಾರಣ ನಾವು ಅನುವಾದಗಳ ಮೂಲಕ ಅವನ್ನು ಅರಿಬಹುದು. ಅದು ತೌಲನಿಕ ಅಧ್ಯಯನಕ್ಕೆ ದಾರಿಯಾಗುತ್ತದೆ. ಪ್ರಸ್ತುತ ಡಾ. ಬಸವರಾಜ ನಾಯ್ಕರ್ ಅವರು ಸುಮೇರಿಯಾದ ಜನಪದ ಮಹಾಕಾವ್ಯ 'ಗಿಲ್ಗಮೆಶ್‌'ಅನ್ನು ಕನ್ನಡಕ್ಕೆ ನೀಡಿರುವರು. ಇಲಿಯಡ್ ಮತ್ತು ಒಡೆಸ್ಸಿಗಳಿಗಿಂತ ಬಹು ಪುರಾತನವಾದ ಈ ಕಾವ್ಯ ಗಾತ್ರದಲ್ಲಿ ಚಿಕ್ಕದು. ಎನ್.ಕೆ. ಸ್ಯಾಂಡರ್ಸ್ ಅವರ ಆವೃತ್ತಿಯನ್ನು ಡಾ. ನಾಯ್ಕರ್ ಇಲ್ಲಿ ಅನುಸರಿಸಿದ್ದಾರೆ. ಮೆಸೊಪೊಟೇಮಿಯಾದ ಉರುಕ್ಕು ರಾಜ್ಯದ ದೊರೆ ಅಪಾರ ಶಕ್ತಿವಂತನಾದ ಗಿಲ್ಗಮೆಶ್ ತನ್ನ ರಾಜ್ಯದಲ್ಲಿಯ ಯಾವ ಸುಂದರಿಯನ್ನೂ ಭೋಗಿಸದೆ ಬಿಟ್ಟವನಲ್ಲ. ಮಾನವನ ದುರ್ದಮ್ಯವಾದ ಸಾಹಸ ಬದುಕಿನುದ್ದಕ್ಕೂ ಆತ ನಂಬಿಕೊಂಡು ಬಂದ ರೀತಿ. ಮನುಷ್ಯನಿಗೆ ತಾರುಣ್ಯವನ್ನು ಮರಳಿ ಕೊಡುವ ಸಸ್ಯವನ್ನು ಸಮುದ್ರ ತಳದಿಂದ ಆತ ತರುತ್ತಾನೆ. ಉರುಕ್ಕುವಿಗೆ ಮರಳಿದ ಬಳಿಕ ತಾನು ಅದನ್ನು ಸೇವಿಸಬೇಕು ಎಂದುಕೊಳ್ಳುತ್ತಾನೆ. ಆದರೆ ಒಂದು ಹಾವು ಅದನ್ನು ಅವನಿಂದ ಕಿತ್ತುಕೊಳ್ಳುತ್ತದೆ. ಹಾವು ಪೊರೆಬಿಟ್ಟು ಮತ್ತೆ ಯವ್ವನವನ್ನು ಸಾಧಿಸಿಕೊಳ್ಳುತ್ತದೆ. ಮಾನವ ಪ್ರಯತ್ನ ಮತ್ತು ದೈವದ ನಿಯಂತ್ರಣದ ಕಥೆ ಇದು. ಜಗತ್ತಿನ ಯಾವ ಭಾಗಕ್ಕೆ ಹೋದರೂ ಮನುಷ್ಯನ ಚಿಂತನೆಗಳು, ಬದುಕಿನ ಆಶಯಗಳು ಒಂದೇ ರೀತಿಯಾಗಿರುತ್ತವೆ ಎಂಬುದನ್ನು ಈ ಕೃತಿಯ ಮೂಲಕ ಅರಿಯಬಹುದು.
ಕೃತಿ: ಗಿಲ್ಗಮೆಶ್ ಮಹಾಕಾವ್ಯ
ಪ್ರಕಾರ: ಕಾವ್ಯ; ಪರಿಚಯ
ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್, ಬೆಂಗಳೂರು.
ಪುಟಗಳು 132, ಬೆಲೆ ರು. 100.
ಏಕೆ ಓದಬೇಕು?: ಪಾಶ್ಚಾತ್ಯ ಕಾವ್ಯದ ತೌಲನಿಕ ಅರಿವಿಗೆ

ಭಾವನೆಗಳ ದೀಪೋತ್ಸವ
ಹರಿದಷ್ಟೂ ಪಾತ್ರವಿದೆ/ ತಳೆದಷ್ಟೂ ಆಳವಿದೆ/ ಹರಿವ ನೀರಿದಕೆ- ಎಂಬ ಸಾಲುಗಳನ್ನು ಮಲೆನಾಡಿನಲ್ಲಿ ಹುಟ್ಟಿದವರಷ್ಟೇ ಬರೆಯಬಲ್ಲರು. ಮಂಜುನಾಥ ಬಾಳೇಹಳ್ಳಿ ಹೀಗೆ ಮಲೆನಾಡಿನಲ್ಲಿ ಹುಟ್ಟಿದವರು, ಬಾಲ್ಯದ ದಟ್ಟ ಅನುಭವಗಳನ್ನು ಇನ್ನೂ ಉಳಿಸಿಕೊಂಡವರು. ಹೀಗಾಗಿ ಅವರ 'ಕಾರ್ತೀಕ' ಸಂಕಲನದಲ್ಲಿ ಭಾವನೆಗಳ ದೀಪೋತ್ಸವ ನಡೆದಿದೆ. ಕಾರ್ತೀಕ ನಮ್ಮ ಸಂಸ್ಕೃತಿ ಪರಂಪರೆಯ ಸಂಕೇತವಾಗಿತ್ತು. ಅದು ಹೇಗೆ ಬದಲಾಗುತ್ತ ಬಂತು ಎಂಬುದನ್ನು ಹೇಳುವ ರೀತಿ ನೋಡಿ: ಎಣ್ಣೆ ಹಣತೆಯ ಬದಲು ಮೇಣಬತ್ತಿಗಳುರಿದು ವಿದ್ಯುದಾಲಂಕಾರವಾಯ್ತು, ಒಳಗುಳಿದ ಕಿಚ್ಚನುರಿಸಲು ಒಲೆಗಳು ಬೇರೆಯಾಯ್ತು, ಊರು ಕೇರಿಗಳಾಗಿ ಪೇಟೆ ಹತ್ತಿರವಾಯ್ತು- ಇದರ ಪರಿಣಾಮ ಏನು?- ಕತ್ತಲು ನಗುತ್ತಿದೆ, ಅದು ಕಾರ್ತೀಕದ ದಿನ. ಕವಿ ಮಂಜುನಾಥ ಕೇವಲ ನಿಸರ್ಗದ ವರ್ಣನೆ ಮಾಡಿ ಕೈಚೆಲ್ಲಿ ಕುಳಿತಿಲ್ಲ. ನಿಸರ್ಗದ ಬದಲಾವಣೆಗಳನ್ನು ಸಮಾಜದ ಬದಲಾವಣೆಗೆ ವ್ಯಾಖ್ಯಾನ ಎನ್ನುವಂತೆ ಅವರು ಗ್ರಹಿಸುತ್ತಾರೆ. ಅವರ ಕವಿತೆಗಳಲ್ಲಿ ಸಹಜ ಲಯವಿದೆ. ಜತೆಗೆ ಆಲೋಚನೆಗಳಿವೆ. ಮತ್ತು ರೂಪಕವಾಗಿ ಹೇಳುವ ಕಲೆ ಅವರಿಗೆ ಸಿದ್ಧಿಸಿದೆ. ಇಲ್ಲಿ ಅವರು ಹಚ್ಚಿರುವ 53 ಹಣತೆಗಳು ಅರಿವಿನ ಪ್ರಕಾಶವನ್ನು ಚೆಲ್ಲಿವೆ.
ಕೃತಿ: ಕಾರ್ತೀಕ., ಪ್ರಕಾರ: ಕವನ
ಪ್ರ: ಸುಮುಖ ಪ್ರಕಾಶನ, ಬೆಂಗಳೂರು.
ಪುಟಗಳು 72, ಬೆಲೆ ರು. 33
ಏಕೆ ಓದಬೇಕು?: ಬಿಗುವು ಕಳೆದುಕೊಂಡು ಹಗುರಾಗಲು

-ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.