ಸಾಪ್ತಾಹಿಕಪ್ರಭ

ಸುದ್ದಿ ಸೂರಪ್ಪನಿಗೆ 60!

Published On :

ಪತ್ರಿಕಾ ಪ್ರಪಂಚದಲ್ಲಿ ನಾಲ್ಕು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಶಿವಕುಮಾರ ಭೋಜಶೆಟ್ಟರ ನಾಡಿನ ಉದ್ದಗಲಕ್ಕೂ ಸಂಚರಿಸಿ ಕಷ್ಟ, ನಷ್ಟ, ಸಮಸ್ಯೆಗಳನ್ನೆದುರಿಸಿಯೇ ಬೆಳೆದಿದ್ದಾರೆ. 60ರ ಗಡಿ  ದಾಟಿದರೂ ಇನ್ನೂ ಅದೇ ಉತ್ಸಾಹ, ಅದೇ ಹುಮ್ಮಸ್ಸು, ಅದೇ ಲವಲವಿಕೆ. ಅವರ ಕಾರ್ಯಗಳು ನಿರಂತರವಾಗಿ ಸಾಗಿಯೇ ಇವೆ.
ಶಿವಕುಮಾರ ಅವರು 40 ವರ್ಷಕ್ಕೂ ಅಧಿಕ ಕಾಲದಿಂದ ಪತ್ರಿಕಾ ರಂಗದಲ್ಲಿದ್ದರೂ ಬಹುಪಾಲು ಸೇವೆ 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ. 1970ರಲ್ಲಿ ಬಿಡಿ ವರದಿಗಾರ ಕೆಲಸದಿಂದ  ಪ್ರಾರಂಭಗೊಂಡ ಸೇವೆ ಹಂತ ಹಂತವಾಗಿ ಬಡ್ತಿ ಪಡೆಯುತ್ತಾ ಈಗ ಜನರಲ್ ಮ್ಯಾನೇಜರ್ ಆಗಿದ್ದಾರೆ. ಅವರು ನಡೆದು ಬಂದ ದಾರಿ ಸುಗಮ, ರಾಜಮಾರ್ಗವಲ್ಲ. ಕಲ್ಲು, ಮುಳ್ಳುಗಳಿಂದ, ತಗ್ಗು  ದಿಣ್ಣೆಗಳಿಂದ ಕೂಡಿದಾಗಿತ್ತು. ಅಂಥ ದಾರಿಯಲ್ಲೇ ನಡೆದು ಗುರಿ ತಲುಪಿದ್ದಾರೆ. ಪರಿಶ್ರಮದಿಂದ, ಕಠಿಣ ಪ್ರಸಂಗಗಳಿಂದ ಜೀವನದ ಸಾರ್ಥಕತೆ ಪಡೆದಿದ್ದಾರೆ. ಅವರು ಪತ್ರಿಕಾರಂಗ ಪ್ರವೇಶಿಸಿದ್ದಾಗ  ಈಗಿನಂತೆ ಸೌಲಭ್ಯಗಳಿರಲಿಲ್ಲ. ವಾಹನಗಳ ಅನುಕೂಲತೆಗಳಿರಲಿಲ್ಲ. ಹತ್ತಾರು ಕಿ.ಮೀ. ನಡೆದುಕೊಂಡು ಹೋಗಿ ಸುದ್ದಿ ಸಂಗ್ರಹಿಸಿಕೊಂಡು ಬಂದು ವರದಿ ಸಿದ್ಧಗೊಳಿಸಿ ರಾತ್ರಿಯೆನ್ನುವಷ್ಟರಲ್ಲಿ  ತಲುಪಿಸಿ ಮಾರನೇ ದಿನ ಪ್ರಕಟಗೊಂಡಾಗಲೇ ಅವರಿಗೆ ಸಮಾಧಾನ. ಹಾಗೆ ಶ್ರಮ ವಹಿಸುತ್ತಿದ್ದರು. ಆಗ ಅವರು ನೀಡಿದ ವರದಿಗಳು ಆದ್ಭುತ. ತನಿಖಾ ವರದಿಗಳೇ ಆಗಲಿ, ಅತಿವೃಷ್ಟಿ-ಅನಾವೃಷ್ಟಿ  ಕುರಿತ ವರದಿಗಳೇ ಆಗಲಿ, ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳೇ ಆಗಲಿ ವಿಶೇಷತೆ ಪಡೆದುಕೊಂಡು ಓದುಗರ ಗಮನ ಸೆಳೆಯುತ್ತಿದ್ದವು.
ಇಂಥ ಶ್ರೇಷ್ಠ ವರದಿಗಾರ, ಶ್ರಮಜೀವಿ, ನಿಷ್ಠಾವಂತ ತನ್ನ ಬದುಕಿನಲ್ಲಿ ನ್ಯಾಯ, ಧರ್ಮಗಳನ್ನು ಅಳವಡಿಸಿಕೊಂಡು ಬಂದವರು. ಅವರ ಗುಣ ಸ್ವಾಭಾವದ ಬಗ್ಗೆ ಹೇಳುವುದಾದರೆ ನೇರ  ನಡೆ-ನುಡಿಯ ವ್ಯಕ್ತಿ. ನಿಷ್ಠುರವಾದಿ. ಯಾರ ಮುಲಾಜಿಲ್ಲದೇ, ಯಾವ ಹಂಗೂ ಇಲ್ಲದೇ ಮನಸ್ಸಿನಲ್ಲಿದ್ದುದನ್ನು ಮುಖಕ್ಕೆ ಹೊಡೆದಂತೆ ಹೇಳಿಬಿಡುವುದು. ಅವರ ಅಂಥ ಮಾತುಗಳೂ ಮೊದಲ  ಅಸಮಾಧಾನ ಉಂಟು ಮಾಡಿದರೂ ಸ್ವಲ್ಪ ಸಮಯದ ನಂತರ ಅವರ ಬಗೆಗೆ ಸದಭಿಪ್ರಾಯವನ್ನೇ ಮೂಡಿಸುತ್ತವೆ. ನೇರ ಮಾತುಗಳಲ್ಲಿ ಸತ್ಯಾಂಶವಿರುತ್ತದೆ, ಅವರ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ  ಎನ್ನುವುದು ಗೊತ್ತಾಗುತ್ತದೆ.
ಶಿವಕುಮಾರ ಸ್ನೇಹಜೀವಿ. ಸಾಮಾನ್ಯರಿಂದ ಅಸಾಮಾನ್ಯರವರೆಗೂ ಸ್ನೇಹಿತರಿದ್ದಾರೆ. ಒಮ್ಮೆ ಪರಿಚಯವಾಗಿ ಅವರ ಸ್ನೇಹ ವಲಯದಲ್ಲಿ ಬಂದರೆ ಅವರಿಂದ ದೂರವಾಗಲು ಆಗದು, ದೂರವಾಗಲು  ಅವರು ಬಿಡುವುದಿಲ್ಲ. ಇನ್ನೊಬ್ಬರ ಬಗ್ಗೆ ಹೆಚ್ಚಿನ ಆಸಕ್ತಿ ಉಳ್ಳವರಿಗೆ, ಹೆಚ್ಚಿನ ಸ್ನೇಹಿತರನ್ನು ಪಡೆಯಲು ಸಾಧ್ಯವಾಗುತ್ತದೆ. ಇಂಥ ಸ್ನೇಹಗುಣ, ಮಾನವೀಯ ಸಂಬಂಧಗಳು ಅವರ ಸಂತೃಪ್ತಿಯ  ಬದುಕಿಗೆ ಕಾರಣವಾಗಿವೆ.
ಶಿವಕುಮಾರ ಭೋಜಶೆಟ್ಟರ ಅವರಿಗೆ 60 ತುಂಬಿರುವ ಸಂದರ್ಭದಲ್ಲಿ ಅವರ ಆತ್ಮೀಯರೆಲ್ಲ ಸೇರಿ ಶ್ರೀ ಶಿವಕುಮಾರ ಭೋಜಶೆಟ್ಟರ ಷಷ್ಟಬ್ದಿ ಅಭಿನಂದನಾ ಸಮಿತಿ ರಚಿಸಿಕೊಂಡು ಸನ್ಮಾನ  ಸಮಾರಂಭ ಹಮ್ಮಿಕೊಂಡಿದ್ದಾರೆ.  'ಸಂತೃಪ್ತಿ'  ಎನ್ನುವ ಅಭಿನಂದನಾ ಗ್ರಂಥವನ್ನು ಹೊರತಂದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಅಭಿನಂದನಾ ಸಮಾರಂಭ ಮತ್ತು ಗ್ರಂಥ ಬಿಡುಗಡೆ. ಎನ್.ವಿ.  ಜೋಶಿ ಮತ್ತು ಗುಡಿಹಳ್ಳಿ ನಾಗರಾಜ ಗೌರವ ಸಂಪಾದಕರಾಗಿದ್ದು, ಗವೀಶ ಹಿರೇಮಠ ಮತ್ತು ಮನೋಜ್ ಪಾಟೀಲ್ ಗ್ರಂಥವನ್ನು ಸಂಪಾದಿಸಿದ್ದಾರೆ. 498 ಪುಟಗಳ ಗ್ರಂಥ ನಾಲ್ಕು ಭಾಗಗಳನ್ನು  ಒಳಗೊಂಡಿದೆ. ಭಾಗ-1ರಲ್ಲಿ ಶಿವಕುಮಾರ ಮತ್ತು ಅವರ ವ್ಯಕ್ತಿತ್ವವನ್ನು ಕುರಿತು 108 ಲೇಖನಗಳಿವೆ. ಇವು  ಶಿವಕುಮಾರ ಭೋಜಶೆಟ್ಟರ ನಡೆದು ಬಂದ ದಾರಿ ಮತ್ತು ಅವರ ವ್ಯಕ್ತಿತ್ವದ ಹಲವು  ಮಜಲುಗಳನ್ನು ತೆರೆದಿಡುತ್ತವೆ. ಅವರ ಒಡನಾಡಿಗಳು, ಸಹೋದ್ಯೋಗಿಗಳು ಅವರ ಕುರಿತು ಬರೆದಿದ್ದಾರೆ. ಭಾಗ-2ರಲ್ಲಿ ಶಿವಕುಮಾರ ಅವರು ಬರೆದಿರುವ ಪ್ರಮುಖ ವರದಿಗಳನ್ನು ಯಥಾವತ್ತಾಗಿ  ಪ್ರಕಟಿಸಲಾಗಿದೆ. ಭಾಗ-3ರಲ್ಲಿ ಮಾಧ್ಯಮಕ್ಕೆ ಸಂಬಂಧಿಸಿದ ಲೇಖನಗಳಿವೆ. ಭಾಗ-4ರಲ್ಲಿ ಅವರ ವಿವಿಧ ಭಾವಚಿತ್ರಗಳ ಸಂಗ್ರಹವಿದೆ. 


ಬೇಂದ್ರೆ ಅಂದದ್ದು ಆಡಿದ್ದು


ಆಧುನಿಕ ಕನ್ನಡ ಸಾಹಿತ್ಯದ ಸೀಮಾಪುರುಷರಲ್ಲಿ ಒಬ್ಬರಾಗಿರುವ ದ.ರಾ. ಬೇಂದ್ರಯವರ ಬಗ್ಗೆ ವಿವಿಧ ಲೇಖಕರು ಬರೆದಿರುವ ವೈಯಕ್ತಿಕ ನೆನಪುಗಳ ಸಂಪುಟ 'ಬೇಂದ್ರೆ ಅಂದದ್ದು ಆಡಿದ್ದು' ಹೊರಬಂದಿದೆ. ಇಲ್ಲಿಯ ನೆನಪುಗಳ ಮಾಲೆಯಲ್ಲಿ ಬೇಂದ್ರೆಯವರ ಮಾತುಗಳನ್ನು ಹಾಗೆಯೇ ಹಿಡಿದಿಡಲು ಪ್ರಯತ್ನಿಸಲಾಗಿದೆ. ಇದರಲ್ಲಿ ಬಸವರಾಜ ಕಟ್ಟೀಮನಿಯವರು ಬರೆದ ಲೇಖನವೂ ಇದೆ. ಕಟ್ಟೀಮನಿಯವರು ಒಂದೆಡೆ ನಿಂತಲ್ಲಿ ನಿಲ್ಲುವವರಲ್ಲ. ಆಗಾಗ ಊರೂರು ಬದಲಿಸುತ್ತ ಇರುತ್ತಿದ್ದರು. ಬೇಂದ್ರೆಯವರು ಒಮ್ಮೆ ಇವರ ಮನೆಗೆ ಬಂದಿದ್ದರು. ಇವರು ಒಂದು ಕಾದಂಬರಿ ಕೊಟ್ಟರು. ಓದಿ ತಿಳಿಸುತ್ತೇನೆ ಎಂದ ಬೇಂದ್ರೆಯವರು, 'ಇರತೀ ಹೌದಲ್ಲೋ ಒಂದೆರಡು ತಿಂಗಳಾದರೂ?' ಎಂದು ನಕ್ಕರು. ಮಕ್ಕಳ ವಿದ್ಯಾಭ್ಯಾಸಕ್ಕೆ ಬಂದದ್ದು ಎಂದು ಇವರು ಹೇಳಿದರು. 'ವಿದ್ಯಾಭ್ಯಾಸ? ಅದೇನು ಬ್ಯಾರೆ ಊರಾಗ ಆಗೂದಿಲ್ಲೇನ? ನಿನ್ನ ತಲೀನ ವಿಚಿತ್ರ ಐತಿ. ಎದ್ದಾ, ಗಂಟು ಕಟ್ಟಿದಾ, ಹೊಂಟಾ!' ಎಂದು ನಗುತ್ತಾರೆ. ಒಳಗೊಂದು ಇಟ್ಟುಕೊಂಡು ಹೊರಗೊಂದು ಮಾತನಾಡುವುದು ಅವರ ಜಾಯಮಾನವೇ ಅಲ್ಲ ಎಂದು ಕಟ್ಟೀಮನಿಯವರು ಬರೆದಿದ್ದಾರೆ. ಇಂಥ ಅಪರೂಪದ ಬೇಂದ್ರೆಯವರ ಹಲವು ಚಿತ್ರಣ ಇಲ್ಲಿದೆ. ಎಚ್.ಬಿ.ಪೂಜಾರ ಇದನ್ನು ಸಂಪಾದಿಸಿದ್ದಾರೆ.
ಕೃತಿ: ಬೇಂದ್ರೆ ಅಂದದ್ದು ಆಡಿದು.
ಪ್ರಕಾರ: ಸಂಪಾದನೆ.
ಪ್ರ: ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್,
ಧಾರವಾಡ.
ಪುಟಗಳು 112, ಬೆಲೆ 60.
ಏಕೆ ಓದಬೇಕು?: 'ಮತ್ತಷ್ಟು ಬೇಂದ್ರೆ' ಇಲ್ಲಿ ಸಿಗುತ್ತಾರೆ.


ತಾಮ್ರವರ್ಣದ ತಾಯಿ
'ಗಂಧರ್ವರು ತಂದಿದ್ದಾರೆ/ ಆ ಹೂಗಳನ್ನ ಒಪ್ಪಿಸಿಕೋ ಅನ್ನುವಾಗ/ ನನ್ನೊಳಗೆ ನಿನ್ನೊಳಗೆ ಸಣ್ಣ ಮಿಡುಕಾಟ/ ಮೈಚಾಚಿದ ನೆಲದ ಮೇಲೆ ಬಾಗಿದ ಬರಿಯ ಬಾನು/-
 ಹೀಗೆ ಸಾಗುವ ಪಿ.ಚಂದ್ರಿಕಾ ಅವರ ಕವಿತೆ 'ಗಂಧರ್ವರು ತಂದಿದ್ದಾರೆ ಹೂಗಳ' ಮುಗಿಯುವುದು ಹೀಗೆ- 'ಸೂರ್ಯನಿಗೂ ಹೊಟ್ಟೆಯುರಿ/ ಬಿಸಿಲ ತಾಪಕ್ಕೆ/ ಹೂಗಳ ಮುದುರಿಸಲು ನೋಡುತ್ತಾನೆ/ ಅದು ಗಂಧರ್ವರು ತಂದ ದೇವಲೋಕದ ಹೂವು/ ಮರಣವಿಲ್ಲದ ಕವಿತೆ./
 ಅಜರಾಮರ ಕವಿತೆ ಗಂಧರ್ವರು ತಂದ ಹೂವಿನಂತೆ ಎನ್ನುವ ಪಿ.ಚಂದ್ರಿಕಾ ತಮ್ಮ ಕವಿತೆಗಳ ಹೊಸ ಸಂಕಲನ, 'ತಾಮ್ರವರ್ಣದ ತಾಯಿ'ಯಲ್ಲಿ ಹಲವು ಉತ್ತಮ ಕವಿತೆಗಳನ್ನು ನೀಡಿದ್ದಾರೆ. ದಟ್ಟವಾದ ತಮ್ಮ ಅನುಭವಗಳನ್ನ ಅಭಿವ್ಯಕ್ತಿಸುವಾಗ ಅವರು ಪ್ರತಿಮೆಗಳ ಮೊರೆಹೋಗುತ್ತಾರೆ. ಆ ಮೂಲಕ ಇಂದಿನ ಮನಸ್ಥಿತಿಯನ್ನು ಸೆರೆಹಿಡಿಯುವ ಪ್ರಯತ್ನ ಮಾಡುತ್ತಾರೆ. ಇವರನ್ನು ಯಾವುದೇ ಒಂದು ಸಿದ್ಧಾಂತಕ್ಕೆ ಮಿತಿಗೊಳಿಸಿ ಆ ವರ್ಗದ ಕವಿಯೆಂದು ಹೇಳುವ ಹಾಗೆ ಇಲ್ಲ. ಇವರಿಗೆ ಕವಿತೆಯ ರಚನೆ ಭಾವಗಳ ವಿರೇಚನಕ್ಕೆ ದಾರಿಮಾಡಿ ಹಗುರಾಗುವ ಮಾರ್ಗ. ಈ ಕಾರಣಕ್ಕಾಗಿಯೇ ಅಂತರಂಗ ತಟ್ಟುವ ಹಲವು ಸಾಲುಗಳು ಈ ಕೃತಿಯಲ್ಲಿವೆ.
ಕೃತಿ: ತಾಮ್ರವರ್ಣದ ತಾಯಿ.
ಪ್ರಕಾರ: ಕವನ ಸಂಕಲನ.
ಪ್ರ: ಅಕ್ಷರ ಪ್ರಕಾಶನ, ಹೆಗ್ಗೋಡು.
ಪುಟಗಳು 104, ಬೆಲೆ ರು. 75.
ಏಕೆ ಓದಬೇಕು?:  ಮತ್ತೆ ಮತ್ತೆ ಚಪ್ಪರಿಸಬಹುದಾದ ಸಾಲುಗಳು.

ಕನ್ನಡದ ದಾರಿ

ಡಾ. ಸಂಗಮೇಶ ಸವದತ್ತಿಮಠ ಅವರು ಬರೆದಿರುವ 'ಕನ್ನಡ ಭಾಷಾವಿಜ್ಞಾನ ನಡೆದುಬಂದ ದಾರಿ' ಆಧುನಿಕ ಭಾಷಾ ವಿಜ್ಞಾನದ ಹಿನ್ನೆಲೆಯಲ್ಲಿ ಕನ್ನಡವನ್ನು ಕುರಿತು ಇಲ್ಲಿಯ ವರೆಗೆ ಏನು ಅಧ್ಯಯನ ನಡೆದಿದೆ ಎಂಬುದನ್ನು ವಿವರಿಸುವ ಸಮಗ್ರ ಕೃತಿಯಾಗಿದೆ. ಭಾಷೆ, ಲಿಪಿ ಮುಂದೆ ಹೇಗಿರಬೇಕೆಂಬ ಚರ್ಚೆಯೂ ಇದೆ. ಕನ್ನಡ ಭಾಷೆಯ ಅಧ್ಯಯನ ನಡೆದುಬಂದ ದಾರಿಯ ಸ್ಥೂಲವಾದ ಪರಿಚಯವಲ್ಲದೆ ನಲವತ್ತಕ್ಕೂ ಅಧಿಕ ವಿದ್ವಾಂಸರ ಲೇಖನಗಳೂ ಇದರಲ್ಲಿವೆ. ಕೃತಿಯ ಮೊದಲ ಭಾಗದಲ್ಲಿ ಕನ್ನಡ ನಾಡು ನುಡಿಯ ಪರಿಚಯ, ಕನ್ನಡ ಭಾಷೆಯ ಅಧ್ಯಯನದ ಇತಿಹಾಸ, ಸವಾಲುಗಳು, ಸ್ಥಿತಿಗತಿ ವಿಷಯವನ್ನು ಒಳಗೊಂಡಿದೆ. ಎರಡನೆ ಭಾಗದಲ್ಲಿ ಅಧುನಿಕ ಭಾಷಾ ವಿಜ್ಞಾನ ಕ್ಷೇತ್ರಕ್ಕೆ ವಿವಿಧ ವಿದ್ವಾಂಸರ ಕಾಣಿಕೆ ದಾಖಲಾಗಿದೆ. ಕೊನೆಯಲ್ಲಿ ವ್ಯಾಕರಣ, ಭಾಷಾಶಾಸ್ತ್ರಕ್ಕೆ ವಿದ್ವಾಂಸರ ಕೊಡುಗೆಯನ್ನು ವಿವರಿಸುವ ಬರೆಹಗಳಿವೆ. ಆಧುನಿಕ ಕಾಲದ ಅನುಕೂಲಕ್ಕೆ ತಕ್ಕಂತೆ ಕನ್ನಡ ಭಾಷೆಯನ್ನು ಹೇಗೆ ಲಿಪಿಯಲ್ಲಿ ಬದಲಿಸಿಕೊಳ್ಳಬಹುದು ಎಂಬ ವಿಚಾರಗಳೂ ಇಲ್ಲಿ ಪ್ರಸ್ತಾಪವಾಗಿವೆ. ಕನ್ನಡದ ಅಭ್ಯಾಸಿಗಳಿಗೆ ಇದೊಂದು ಅಪರೂಪದ ಕೃತಿ.
ಕೃತಿ: ಕನ್ನಡ ಭಾಷಾವಿಜ್ಞಾನ ನಡೆದುಬಂದ ದಾರಿ.
ಪ್ರಕಾರ: ಲೇಖನ ಸಂಗ್ರಹ.
ಪ್ರ: ಶ್ರೀಚನ್ನಬಸವೇಶ್ವರ ಸಂಸ್ಥಾನ ಹಿರೇಮಠ ಸುಕ್ಷೇತ್ರ ಹಾರಕೋಡ, ಬೀದರ. ಪುಟಗಳು 512. ಬೆಲೆ ರು. 300.
ಏಕೆ ಓದಬೇಕು?: ಆಧುನಿಕ ಭಾಷಾವಿಜ್ಞಾನದ ಹಿನ್ನೆಲೆಯಲ್ಲಿ ಕನ್ನಡದ ಅಧ್ಯಯನಕ್ಕಾಗಿ.


 ಬಿಳಿಬಿಳಿ ಬದುಕು
ಅಪ್ಪಟ ಗಾಂಧೀವಾದಿ ಬೆಳೆಗೆರೆ ಕೃಷ್ಣಶಾಸ್ತ್ರೀಗಳ ಕುರಿತು ಅವರನ್ನು ಹತ್ತಿರದಿಂದ ಬಲ್ಲವರು ಆತ್ಮೀಯವಾಗಿ ದಾಖಲಿಸಿರುವ ಟಿಪ್ಪಣಿಗಳು 'ಆಕಾಶದಗಲ ನಗುವಿನ ಅವಧೂತ' ಕೃತಿಯಲ್ಲಿ ಸಂಕಲನಗೊಂಡಿವೆ. ಪಿ.ಚಂದ್ರಿಕಾ ಮತ್ತು ವಂದನಾ ಸತೀಶ್ ಇದನ್ನು ಸಂಪಾದಿಸಿದ್ದಾರೆ. ಪತ್ನಿ ಪುತ್ರರ ಅಕಾಲ ಮರಣದಿಂದ ನೆಮ್ಮದಿಗೆಟ್ಟು ಹಿಮಾಲಯಕ್ಕೆ ಹೋಗಿದ್ದ ಶಾಸ್ತ್ರಿಗಳು ದೇಶ ಸುತ್ತುವಾಗ ಗಾಂಧೀಜಿಯವರ ಭೇಟಿ ಆಯಿತು. ಸನ್ಯಾಸ ಮೈಮೇಲೆ ಎಳೆದುಕೊಂಡು ಏನು ಮಾಡ್ತೀಯಾ? ಮೊದಲು ಊರಿಗೆ ಹೋಗು. ಮಕ್ಕಳಿಗೆ ನಾಲ್ಕು ಅಕ್ಷರ ಕಲಿಸಿ ಸೇವೆ ಮಾಡು ಎಂದು ಹೇಳಿದರಂತೆ. ಆಗ ಶಾಸ್ತ್ರಿಗಳು ತಮ್ಮೂರಿಗೆ ಮರಳಿದರು. ಶಾಸ್ತ್ರಿಗಳು ಸಾಹಿತಿಗಳೂ ಹೌದು. ತಮ್ಮೂರಿನಲ್ಲಿ ಶಾಲೆ ನಿರ್ಮಿಸಿ ನೂರಾರು ಮಕ್ಕಳಿಗೆ ಉಚಿತ ಹಾಸ್ಟೆಲ್ ಸೌಲಭ್ಯವನ್ನೂ ಇವರು ಕಲ್ಪಿಸಿದ್ದಾರೆ. ಹೊಸ ತಲೆಮಾರಿನ ಹುಡುಗರಿಗೆ ಪ್ರೇರಣೆಯಾಗಬಲ್ಲ ಶಾಸ್ತ್ರಿಗಳ ಬಗ್ಗೆ ತ.ಸು. ಶಾಮರಾಯರು, ಸಾ.ಶಿ. ಮರುಳಯ್ಯನವರು, ವಿಶ್ವೇಶ್ವರ ಭಟ್ ಅವರು, ಅನಂತಮೂರ್ತಿ, ಎಚ್.ಎಸ್. ಶಿವಪ್ರಕಾಶ್, ಚಂದ್ರಶೇಖರ ಕಂಬಾರ, ರಹಮತ್ ತರೀಕೆರೆ, ಮಲ್ಲೇಪುರಂ ಜಿ. ವೆಂಕಟೇಶ್ ಮೊದಲಾದವರು ತುಂಬಿದ ಪ್ರೀತಿಯಿಂದ ಬರೆದಿದ್ದಾರೆ.
ಕೃತಿ: ಆಕಾಶದಗಲ ನಗುವಿನ ಅವಧೂತ.
ಪ್ರಕಾರ: ವ್ಯಕ್ತಿಚಿತ್ರ ಸಂಪಾದನೆ.
ಪ್ರ: ಅಭಿನವ, ಬೆಂಗಳೂರು. ಪುಟಗಳು 132, ಬೆಲೆ ರು. 75.
ಏಕೆ ಓದಬೇಕು?:  ಬೆಳೆಗೆರೆ ಕೃಷ್ಣಶಾಸ್ತ್ರಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು.

ಕಂಬಾರಾಭಿನಂದನ
ಡಾ. ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದಲ್ಲಿ ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ವ್ಯಕ್ತಿತ್ವ, ಬರೆಹಗಳನ್ನು ಪರಿಚಯಿಸುವ ಲೇಖನಗಳು, ಸಂದರ್ಶನಗಳು ಬಂದವು. ಅವುಗಳನ್ನೆಲ್ಲ ಡಾ. ಜಯಪ್ರಕಾಶ ಮಾವಿನಕುಳಿಯವರು ಸಂಪಾದಿಸಿ 'ಶಿಖರ ಶೇಖರ ಕಂಬಾರ' ಎಂಬ ಕೃತಿಯನ್ನು ಹೊರತಂದಿದ್ದಾರೆ. ಕಂಬಾರರ ಸಾಹಿತ್ಯ ಸತ್ವ, ಅವರ ವ್ಯಕ್ತಿತ್ವದ ಅನನ್ಯತೆಗಳೆಲ್ಲ ದಾಖಲಾಗುವುದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದದ್ದು ಒಂದು ನೆಪ ಮಾತ್ರ. ಕಂಬಾರರು ಕನ್ನಡದ ವಿಶಿಷ್ಟ ಸಾಹಿತಿ. ಅವರಿಗೆ ಹೋಲಿಸಬಹುದಾದ ಬೇರೆ ಸಾಹಿತಿಗಳು ಇಲ್ಲ. ಜಾನಪದ ಮತ್ತು ಶಿಷ್ಟ, ದೇಸೀ ಮತ್ತು ನಗರ ಪ್ರಜ್ಞೆಯ ಹದವಾದ ಮಿಳಿತ ಕಂಬಾರರ ಶೈಲಿ. ತಮ್ಮ ಸುತ್ತಮುತ್ತಲ ಸಮಾಜದ ಓರೆಕೋರೆಗಳನ್ನು ಕಟ್ಟಿಕೊಡುತ್ತ ಅದರ ಸುಧಾರಣೆಯ ಸಾಧ್ಯತೆಗಳ ತಮ್ಮ ಕನಸನ್ನು ಅವರು ಬಿಚ್ಚಿಡುತ್ತಾರೆ. ಇಂಥ ಕಂಬಾರರ ಬಗ್ಗೆ ಅನಂತಮೂರ್ತಿ, ಎಂ.ಎಂ.ಕಲಬುರ್ಗಿ, ಗಿರೀಶ್ ಕಾರ್ನಾಡ, ಟಿ.ಪಿ. ಅಶೋಕ, ಸಿ.ಎನ್. ರಾಮಚಂದ್ರನ್, ಸರಜೂ ಕಾಟ್ಕರ್, ಮಾಧವ ಕುಲಕರ್ಣಿ, ಜ.ನಾ. ತೇಜಶ್ರೀ, ಶೂದ್ರ ಶ್ರೀನಿವಾಸ, ಕ.ವೆಂ. ರಾಜಗೋಪಾಲ, ಮೊದಲಾದವರೆಲ್ಲ ಬರೆದಿದ್ದಾರೆ. ಪ್ರಮುಖ ಪತ್ರಿಕೆಗಳ ಸಂಪಾದಕೀಯಗಳೂ ಇಲ್ಲಿವೆ. ಕಂಬಾರರನ್ನು ಕೆಲವರು ಬೇಂದ್ರೆಗೆ ಹೋಲಿಸುತ್ತಾರೆ. ಆದರೆ ಅದು ಸರಿಯಲ್ಲವೆಂದು ಅನಂತಮೂರ್ತಿ ಇಲ್ಲಿ ಹೇಳಿದ್ದಾರೆ. ಕಂಬಾರರು ಮೈ ಮರೆತು ಆಧ್ಯಾತ್ಮಿಕವಾದ ತುಡಿತದಲ್ಲಿ ಬರೆಯುವವರಲ್ಲ. ಅವರಿಗೆ ಆತ್ಮದಷ್ಟೇ ದೇಹವೂ ನಿಜ. ಆದರೆ ಜಡವೆಂದು ನಾವು ತಿಳಿಯುವ ಜಗತ್ತು ಇವರ ಕಾವ್ಯದೊಳಗೆ ಕುಣಿದಾಡಿಕೊಂಡು ಪ್ರವೇಶಿಸುತ್ತದೆ. ಬೇಂದ್ರೆಯಲ್ಲಿ- ಹಿನ್ನೆಲೆಯಲ್ಲಿ ಹೊಳೆಯುತ್ತದೆ ಎಂದು ವಿವರಿಸುತ್ತಾರೆ. ಹೀಗೆ ಕಂಬಾರರ ಇದುವರೆಗೆ ಪ್ರಚಾರಕ್ಕೆ ಬರದೇ ಇದ್ದ ಗುಣಗಳು ಇಲ್ಲಿಯ ಬರೆಹಗಳಲ್ಲಿ ಅನಾವರಣಗೊಂಡಿವೆ.
ಕೃತಿ: ಶಿಖರ ಶೇಖರ ಕಂಬಾರ. ಪ್ರಕಾರ: ಲೇಖನ ಸಂಪಾದನೆ.
ಪ್ರ: ಅಂಕಿತ ಪ್ರಕಾಶನ, ಬೆಂಗಳೂರು. ಪುಟಗಳು 272, ಬೆಲೆ ರು. 225.
ಏಕೆ ಓದಬೇಕು?: ಕಂಬಾರರ ಸುಪ್ತ ಗುಣಗಳ ಅನಾವರಣ ಅಪರೂಪವೆನ್ನಿಸುತ್ತದೆ.


'ಚೈತ್ರಾ' ಮಾಸ
ತಂದೆ ಕೊಟ್ಟ ಕೃಷ್ಣನ ಮೂರ್ತಿ, ಗಂಡ ಪತ್ರದಲ್ಲಿ ನಿಗ್ರೋಗಳು ಕೆಟ್ಟವರು, ಅವರ ಸಹವಾಸ ಮಾಡಬೇಡ ಎಂದು ಹೇಳಿದ್ದು, ವಿಮಾನದಲ್ಲಿ ಒಬ್ಬ ನಿಗ್ರೋ, ಅವನ ಬಗ್ಗೆ ಒಳಗೊಳಗೇ ಭಯ. ಅಟ್ಲಾಂಟಾದಲ್ಲಿ ವಿಮಾನ ಇಳಿದ ಸಾಂಚಿತಾಗೆ ಬೆಲ್ಟ್ ಮೇಲಿನ ಲಗ್ಗೇಜ್ ಸೂಟ್‌ಕೇಸ್ ಎತ್ತಲಾಗದಷ್ಟು ಭಾರ. ಆಗ ನೆರವಿಗೆ ಬಂದವನು ಅದೇ ನಿಗ್ರೋ. 'ಯು ಡೋಂಟ್ ಹ್ಯಾವ್ ಟು ಸೇ ಥ್ಯಾಂಕ್ಸ್‌' ಎಂದು ನಡದೇಬಿಟ್ಟ ಆ ಕೃಷ್ಣ.
- ಇದು ಡಾ.ಕೆ.ಎಸ್. ಚೈತ್ರಾ ಅವರ ಮೊದಲ ಕಥಾ ಸಂಕಲನ 'ಗರಾಜ್ ಸೇಲ್‌'ನ ಮೊದಲ ಕಥೆ 'ಕೃಷ್ಣ'ದ ತಿರುಳು. ಅಪರಿಚಿತ ಕರಿಯನಲ್ಲಿ ಕೃಷ್ಣನನ್ನು ಸಾಕ್ಷಾತ್ಕರಿಸಿಕೊಳ್ಳುವ ಈ ಅಧ್ಯಾತ್ಮ ಅತ್ಯಂತ ಕಲಾತ್ಮಕವಾಗಿ ಇಲ್ಲಿ ಮೂಡಿ ಬಂದಿದೆ. ವೃತ್ತಿಯಲ್ಲಿ ದಂತ ವೈದ್ಯರಾಗಿರುವ ಚೈತ್ರಾ ಈಗಾಗಲೇ ನಾಲ್ಕೈದು ಕೃತಿಗಳನ್ನು ಪ್ರಕಟಿಸಿದ್ದಾರಾದರೂ ಅವರ ಮೊದಲ ಕಥಾ ಸಂಕಲನ ಇದು. ಸುಮಾರು ಇಪ್ಪತ್ತು ವರ್ಷಗಳಲ್ಲಿ ಬರೆದ ಇಪ್ಪತ್ತು ಕಥೆಗಳು ಈ ಸಂಕಲನದಲ್ಲಿವೆ.
ಕೆಲವು ಕಥೆಗಳಲ್ಲಿ ಚೈತ್ರಾ ಭಾರತೀಯ ಮತ್ತು ಅಮೆರಿಕದ ನಾಗರಿಕತೆಗಳನ್ನು ಮುಖಾಮುಖಿಯಾಗಿಸುತ್ತಾರೆ. ಕೆಲವು ವರ್ಷ ಅಮೆರಿಕದಲ್ಲಿ ವಾಸವಾಗಿದ್ದ ಅವರು ಕಟ್ಟಿಕೊಡುವ ವಿವರಗಳು ಅವುಗಳ ತಾಜಾತನದಿಂದಾಗಿ ಅನನ್ಯವೆನಿಸುತ್ತವೆ. ಅಮೆರಿಕದ ಯಾಂತ್ರಿಕ ಬದುಕು ಮನುಷ್ಯ ಗುಣಗಳಿಗೆ ಹೇಗೆ ಗ್ರಹಣ ಹಿಡಿಸಿಬಿಟ್ಟದೆ ಎಂಬುದನ್ನು ಇಲ್ಲಿಯ 'ಗುರು' ಕಥೆ ಪರಿಣಾಮಕಾರಿಯಾಗಿ ಹೇಳುತ್ತದೆ. ಕಂಪ್ಯೂಟರ್ ತಜ್ಞ ಜೆರ್ರಿ ವೃದ್ಧಾಪ್ಯದಿಂದ ಅನಾಥನಂತೆ ಸಾವಿಗೀಡಾಗುತ್ತಾನೆ. ಆತನ ಮಗನಿಗೆ ಸಾವಿನ ಸುದ್ದಿ ಬರುತ್ತದೆ. ಮಗ, 'ಸಾರಿ, ಬಿಜಿ ಇದ್ದೇನೆ. ಸರ್ವಿಸ್ ಮಾಡಿಸಿ. ಖರ್ಚು ನನ್ನದು' ಎಂಬ ಸಂದೇಶ ಕಳುಹಿಸಿ ತನ್ನ ಕೆಲಸದಲ್ಲಿ ಕಳೆದುಹೋಗುತ್ತಾನೆ. ಶ್ರಮ ಸಂಸ್ಕೃತಿಯ ಅತಿರೇಕದ ಒಂದು ಮುಖ ಇದು. ಇದನ್ನು ಭಗವದ್ಗೀತೆಯ 'ನೈನಂ ಚಿಂದಂತಿ ಶಸ್ತ್ರಾಣಿ...' ತತ್ವದೊಂದಿಗೆ ಸಮೀಕರಿಸಿದಾಗ ಜೆರ್ರಿಯ ಮಗನನ್ನು ನಾವು ಟೀಕಿಸಬಹುದೆ? ನಾವು ಕಷ್ಟಪಟ್ಟು ಸಾಧಿಸಬೇಕಾದದ್ದು ಅವನ ನಿತ್ಯದ ಸಹಜ ಬದುಕು ಆಗಿದೆ ಎಂದು ವ್ಯಾಖ್ಯಾನಿಸಬಹುದೆ?
ಮಾನವೀಯ ಸಂಬಂಧಗಳು ಸಹಜ ನೆಲೆಯಿಂದ ದೂರವಾದಾಗ ಒಂದು ಕಾಲಘಟ್ಟದಲ್ಲಿ ಅದಕ್ಕಾಗಿ ಹಪಹಪಿಸುವ ಸ್ಥಿತಿಗೆ ತಲುಪುವುದನ್ನು ಚೈತ್ರಾ 'ಮದರ್ಸ್ ಡೇ' ಕಥೆಯಲ್ಲಿ ಹೇಳುತ್ತಾರೆ. ನಮ್ಮಲ್ಲಿ ಸತ್ತ ಮೇಲೆ ಮಾಡುವ ಶ್ರಾದ್ಧ, ಅಮೆರಿಕದಲ್ಲಿ ಜೀವಂತ ಇದ್ದಾಗ ಮಾಡುವ 'ಮದರ್ಸ್ ಡೇ' ಎರಡೂ ಅರ್ಥವಿಲ್ಲದ್ದು ಈ ಆಚರಣೆಗಳ ಆಚೆಗಿನ ಕ್ರಿಯೆ ಮುಖ್ಯವಾದದ್ದು ಎಂಬುದನ್ನು ಅವರು ಹೇಳಲು ಪ್ರಯತ್ನಿಸಿದ್ದಾರೆ. ಕಥೆಯೆಂಬುದು ಇವರಿಗೆ ತಮ್ಮತನವನ್ನು ಉತ್ತಮಗೊಳಿಸಿಕೊಳ್ಳುವ ಇರುವ ಒಂದು ಸಾಧನ. ಇಲ್ಲಿಯ ಎಲ್ಲ ಸಣ್ಣ ಕಥೆಗಳ ಮುಖ್ಯ ಗುಣ 'ಸಣ್ಣ' ಎಂಬುದಕ್ಕೆ ನ್ಯಾಯ ಒದಗಿಸಿದ್ದು. ನಿಜ ಅರ್ಥದಲ್ಲಿ ಸಣ್ಣ ಕಥೆಗಳಾದರೂ ಇವು ಪರಿಣಾಮದಲ್ಲಿ ಅಗಾಧವಾದದ್ದು. ಚೈತ್ರಾ ಇನ್ನಷ್ಟು ಬರೆಯಲಿ.
ಕೃತಿ: 'ಗರಾಜ್ ಸೇಲ್‌'.  ಪ್ರಕಾರ: ಕಥಾಸಂಕಲನ.
ಪ್ರ: ಶ್ರೀವಿಜಯ ಪ್ರಕಾಶನ, ಶಿವಮೊಗ್ಗ.
ಪುಟಗಳು: 100, ಬೆಲೆ: ರು. 60.
ಏಕೆ ಓದಬೇಕು?: ಭಾರತ ಮತ್ತು ಅಮೆರಿಕ ನಾಗರಿಕತೆಗಳ ಮುಖಾಮುಖಿ ವ್ಯಕ್ತಿತ್ವ ಅರಿಯಲು...

ಹನಿಗಳಿಗೆ ಕಟ್ಟಿದ ಕೋಟೆ

ನಾಗರಾಜ ಕೋಟೆಯವರು 'ಹನಿ ಹನಿ ಕಹಾನಿ'ಯಲ್ಲಿ ಹಲವು ಹಾಸ್ಯ ಲಹರಿಗಳಿಗೆ ಕೋಟೆ ಕಟ್ಟಿದ್ದಾರೆ. ಅವರು ದೇವರು ಮಾಡುವ 'ತಾರತಮ್ಯ'ವನ್ನು ಗುರುತಿಸುವ ಪರಿ ನೋಡಿ: 'ಮಕ್ಕಳು ಬೇಕೆನ್ನುವವರು ಸುತ್ತುತ್ತಲೇ ಇರುತ್ತಾರೆ ಮರಳಿ ಮರಳಿ ಅರಳಿ. ಬೇಡವೆನ್ನುವವರಿಗೆ ದೇವರು ಕರುಣಿಸುತ್ತಾನೆ ಅವಳಿ-ಜವಳಿ.' ಇಂಥ ನೂರಾರು ನಗೆಹನಿಗಳು ಈ ಸಂಕಲನದಲ್ಲಿವೆ. ಅತಿ ಒತ್ತಡದಲ್ಲಿರುವವರಿಗೆ ಅದರಿಂದ ಬಿಡುಗಡೆ ಪಡೆಯಲು ಇವು ಸಹಕಾರಿಯಾಗುತ್ತವೆ. ಗಂಭೀರವಾದ ಸಂಗತಿಗಳನ್ನು ಕೋಟೆಯವರು ಹನಿಗಳಲ್ಲಿಯೇ ನೀಡಲು ಯತ್ನಿಸಿದ್ದಾರೆ. ಅವರು ಹೇಳುವ 'ಅಸ್ತ್ರ' ನೋಡಿ: 'ರಾಜಕಾರಣಿಗಳನ್ನು ಹೆದರಿಸಲು ಸಾಧ್ಯವಿಲ್ಲ ಯಾವುದೇ ಏಟಿನಲ್ಲಿ. ಆದರೆ ಬೆದರಿಸಿ ಬೆಂಡಾಗಿಸಬಹುದು ಒಂದೇ ಓಟಿನಲ್ಲಿ.' ಈ ಹನಿಯ ಪರಿಣಾಮ ಬೊಗಸೆಯಷ್ಟು. 'ಮಂತ್ರಿಗಳು ಸರ್ಕಾರಿ ಶಾಲೆಗಳನ್ನು ಮುಚ್ಚುವುದಕ್ಕೆ ಸಾಧ್ಯವೇ ಇಲ್ಲ. ಏಕೆಂದರೆ ಸುಮಾರು ಸರ್ಕಾರಿ ಶಾಲೆಗಳಿಗೆ ಬಾಗಿಲುಗಳೇ ಇಲ್ಲ'- ಎಂಥ ಚಾಟಿ ಇದು ನೋಡಿ. ಸಮಾಜದಲ್ಲಿ ಒಳ್ಳೆಯದನ್ನು ತರುವುದು ಸಾಹಿತ್ಯದ ಜವಾಬ್ದಾರಿಗಳಲ್ಲಿ ಒಂದು. ಅದಕ್ಕಾಗಿ ದೊಡ್ಡ ಕಾವ್ಯವನ್ನೇ ಬರೆಯಬೇಕಾಗಿಲ್ಲ. ಇಂಥ ಹನಿಗಳೂ ಆ ಪರಿಣಾಮ ಸಾಧಿಸಬಹುದು ಎಂಬುದನ್ನು ನಾಗರಾಜ ಕೋಟೆ ಇಲ್ಲಿ ತೋರಿಸಿಕೊಟ್ಟಿದ್ದಾರೆ.
ಕೃತಿ: ಹನಿ ಹನಿ ಕಹಾನಿ.  ಪ್ರಕಾರ: ನಗೆಹನಿಗಳ ಸಂಕಲನ.
ಪ್ರ: ಸಪ್ನ ಬುಕ್ ಹೌಸ್, ಬೆಂಗಳೂರು. ಪುಟಗಳು: 88, ಬೆಲೆ: ರು. 50.
ಏಕೆ ಓದಬೇಕು?:  ಅತಿ ಒತ್ತಡದ ಬದುಕಿನಲ್ಲಿ ಒಂದು ರಿಲ್ಯಾಕ್ಸ್ ಪಡೆಯಲು.

ಬಾವನ್ನ ತೀಡಿದಂಗ

ಆನಂದ ಝಂಜರವಾಡ ಅವರ ಕವಿತೆಗಳ ಹೊಸ ಸಂಕಲನ 'ಬಾವನ್ನ' ಬಂದಿದೆ. ಇದರಲ್ಲಿ 52 ಕವಿತೆಗಳಿವೆ. ಕಾವ್ಯವನ್ನು ಗಂಭೀರ ಉದ್ಯೋಗವೆಂದು ಪರಿಗಣಿಸಿರುವ ಆನಂದ ಅವರು, ಕವಿತೆಯ ಚರಿತ್ರೆ ಎಂದರೇನೇ ಕಾವ್ಯ ವಿರೋಧೀ ನಾಗರಿಕ- ಚರಿತ್ರೆಯೊಂದಿಗಿನ ಅದರ ಸಂಘರ್ಷ ಎಂದು ತಿಳಿಯುತ್ತಾರೆ. 'ಕಾವ್ಯಾನುಭವ' ಎನ್ನುವುದು ಅವರ ದೃಷ್ಟಿಯಲ್ಲಿ ಸುಲಭವಾಗಿ ಅರ್ಥವಾಗುವಂಥದಲ್ಲ. ಕವಿ ಕಷ್ಟಪಟ್ಟು ಕಾವ್ಯ ರಚಿಸಿದ ಮೇಲೆ ಅವನ ಮನಸ್ಸು ಸೂತಕದ ಮನೆ. ಇಷ್ಟೊಂದು ನೋವಿನ ಹೆರಿಗೆಯಲ್ಲಿ 'ಕೆಲವು ಒಗರು, ಕೆಲವು ಹುಳಿ, ಸಿಹಿ, ಕೆಲವು ಕೊಳೆತದ್ದೂ ಇವೆ' ಎಂದು ಹೇಳುವಲ್ಲಿ ಅವರ ನಿರಹಂಕಾರ ಕಾಣುತ್ತದೆ. ಆನಂದ ಅವರು ಚಿತ್ರ- ರೂಪಕ- ಸಂಕೇತ- ಪ್ರತಿಮೆಗಳ ಮೂಲಕ ಕಾವ್ಯವನ್ನು ಕಟ್ಟಲು ಯತ್ನಿಸುತ್ತಾರೆ. ಸರಳ ಓದಿಗೆ ಇದು ಅರ್ಥವಾಗುವುದು ಕಷ್ಟ. 'ಖುಲಖುಳಿ- ಗಿಲಗಿಲಕಿ- ಒಡೆಯಲೆಂದೇ ಉಬ್ಬಿಸುವ ಬಣ್ಣದ ಬಲೂನುಗಳ ಜೀವಯಾನ' ಎಂಬಂಥ ಸಾಲುಗಳು ಅಡಿಗಡಿಗೆ ದಟ್ಟೈಸಿ ವಿಮರ್ಶಕನ ನೆರವಿನ ಹಸ್ತವನ್ನು ಇವು ಯಾಚಿಸುತ್ತವೆ. ಅಡಿಗರ ಕಾಲದ ಕಾವ್ಯವನ್ನು ಇವು ನೆನಪಿಸುತ್ತವೆ.

- ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.