ಗುರು ಮಾಡಿದ ಜಾದೂ
ಬಹಳ ವರ್ಷಗಳ ಹಿಂದೆ ದಕ್ಷಿಣ ಭಾರತದ ಕಾವೇರಿ ನದಿ ದಂಡೆಯಲ್ಲಿ ಸನ್ಮತಿ ಎಂಬ ಗುರುವಿದ್ದ. ತನ್ನ ಆಶ್ರಮದಲ್ಲಿ ಆತ ಗಣಿತ, ಭೂಗೋಳ, ಚರಿತ್ರೆ, ನೀತಿಶಾಸ್ತ್ರ ಮುಂತಾದ ವಿಷಯಗಳನ್ನು ಮಕ್ಕಳಿಗೆ ಬೋಧಿಸುತ್ತಿದ್ದ. ನೆರೆಯ ರಾಜ್ಯಗಳಿಂದಲೂ ಪೋಷಕರು ಬಂದು ತಮ್ಮ ಮಕ್ಕಳನ್ನು ಅವರ ಆಶ್ರಮಕ್ಕೆ ಸೇರಿಸುತ್ತಿದ್ದರು. ಗುರು ಸನ್ಮತಿ ಸಮರ್ಥ ಬೋಧಕನೆಂದು ಹೆಸರುವಾಸಿಯಾಗಿದ್ದ. ಆದರೆ ಈಚೀಚೆಗೆ ಆಶ್ರಮದ ಮಕ್ಕಳು ಪಾಠಕ್ಕಿಂತ ಹೆಚ್ಚಾಗಿ ಆಟೋಟಗಳಲ್ಲೇ ಸಮಯ ವ್ಯಯಿಸುತ್ತಿದ್ದರು. ಸನ್ಮತಿ ಇದರಿಂದಾಗಿ ಕೊಂಚ ಬೇಸರಗೊಂಡಿದ್ದ. ನೀವು ಹೀಗೆ ಸದಾ ಚಿನ್ನಿಕೋಲು, ಜುಟಾಟ, ರಾಮನ ಚೆಂಡು, ಲಗೋರಿ, ಕೊಕ್ಕೊ ಆಡುತ್ತಿದ್ದರೆ ಮುಂದೆ ಹೇಗೆ ತಾನೇ ನಿಮ್ಮ ಜೀವನ ರೂಪುಗೊಂಡೀತು ಅಂತ ಪರಿಪರಿಯಾಗಿ ಮಕ್ಕಳಿಗೆ ಉಪದೇಶಿಸಿದರೂ ಪ್ರಯೋಜನವಾಗಿರಲಿಲ್ಲ. ಹೇಗಾದರೂ ಮಾಡಿ ಮಕ್ಕಳನ್ನು ಪಾಠದತ್ತ ಗಮನಹರಿಸುವಂತೆ ಉಪಾಯ ಹೂಡಬೇಕು ಎಂದು ಸನ್ಮತಿ ಆಲೋಚಿಸುತ್ತಲೇ ಇದ್ದ.
ಒಂದು ದಿನ ಬೆಳಗ್ಗೆ ಸೂರ್ಯ ನೆತ್ತಿಯ ಮೇಲೆ ಬರುವುದಕ್ಕೆ ಮುಂಚೆ ಸನ್ಮತಿ ಬಗೆಬಗೆ ಆಟೋಟಗಳಲ್ಲಿ ಮಗ್ನರಾಗಿದ್ದ ಮಕ್ಕಳಿಗೆ 'ಇದೋ ಹತ್ತು ನಿಮಿಷ ಎಲ್ಲರೂ ಪ್ರಾರ್ಥನಾ ಮಂದಿರಕ್ಕೆ ಬನ್ನಿ. ನೀವು ಎಂದೂ ಕಂಡಿರದ ಜಾದೂ ಮಾಡಿ ತೋರಿಸುತ್ತೇನೆ. ಬೇಗ ಬೇಗ ಬನ್ನಿ...' ಎಂದರು. ಕೂತೂಹಲದಿಂದ ಮಕ್ಕಳೆಲ್ಲ ಚೆಂಡು, ಕೋಲು, ಮಣೆ ಅಲ್ಲಲ್ಲೇ ಬಿಟ್ಟು ಪ್ರಾರ್ಥನಾ ಮಂದಿರಕ್ಕೆ ಧಾವಿಸಿದರು. ಸನ್ಮತಿ ಒಂದು ಗಾಜಿನ ಜಾಡಿ ತಂದು ಮೇಜಿನ ಮೇಲಿರಿಸಿದ. ಪಕ್ಕದಲ್ಲೇ ಮೂರು ತಟ್ಟೆಗಳು. ಒಂದರಲ್ಲಿ ಜಲ್ಲಿ ಕಲ್ಲುಗಳು, ಇನ್ನೊಂದರಲ್ಲಿ ಸಣ್ಣ ಸಣ್ಣ ಉರುಟು ಕಲ್ಲುಗಳು ಹಾಗೂ ಮತ್ತೊಂದರಲ್ಲಿ ಮರಳು. ಗುರುಗಳು ಏನು ಮಾಡುತ್ತಿರಬಹುದೆಂಬ ಕೂತೂಹಲ ಶಿಷ್ಯರಿಗೆ. ನೋಡಿ ಮಕ್ಕಳೇ, ನಾನು ಜಾಡಿಯಲ್ಲಿ ಜಲ್ಲಿ ತುಂಬುವೆ ಎಂದ ಸನ್ಮತಿ ಹಾಗೆ ಮಾಡಿದ ನಂತರ ಇದೋ ಈಗ ಸಣ್ಣ ಉರುಟು ಕಲ್ಲುಗಳನ್ನೂ ತುಂಬಿಸುವೆ ಅಂದ 'ಇದೋ ಗಮನಿಸಿ. ಉರುಟು ಕಲ್ಲುಗಳು ಸ್ಥಳವನ್ನು ಹೇಗೋ ಮಾಡಿಕೊಂಡು ಜಾಡಿಯಲ್ಲಿ ಸೇರಿದವು ತಾನೆ? ನೋಡಿ, ಈಗ ಜಾಡಿಯನ್ನು ಬರಿದು ಮಾಡುತ್ತೇನೆ' ಎಂದು ಸನ್ಮತಿ ಜಲ್ಲಿಕಲ್ಲು, ಸಣ್ಣ ಉರುಟು ಕಲ್ಲುಗಳನ್ನು ಹೊರಜೆಲ್ಲಿದ. ನಂತರ ಮರಳನ್ನು ಜಾಡಿಗೆ ತುಂಬಿದ. 'ಮಕ್ಕಳೆ, ಈಗ ಕಲ್ಲುಗಳನ್ನು ಜಾಡಿಗೆ ಹಾಕುವೆ. ಚೆನ್ನಾಗಿ ಗಮನಿಸಿ' ಎಂದವರೇ ಜಾಡಿಯನ್ನು ಶಕ್ತಿಮೀರಿ ಕುಲುಕಿದರು. ಏನಾಗುತ್ತಿದೆ ನೀವೇ ಹೇಳಿ ಅಂತ ಶಿಷ್ಯರನ್ನು ಕೇಳಿದಾಗ ಎಲ್ಲರೂ ಒಂದೇ ಧ್ವನಿಯಿಂದ ಗುರುಗಳೇ, ಒಂದೇ ಒಂದು ಕಲ್ಲೂ ಕೂಡ ಜಾಡಿಯೊಳಗೆ ಮರಳನ್ನು ದಾಟಿ ಹೋಗಲಿಲ್ಲ ಎಂದರು. ಸನ್ಮತಿಗೆ ಖುಷಿಯಾಯಿತು. ತನ್ನ ಪ್ರಯೋಗದಿಂದ ಕಲಿಯಬಹುದಾದ ತತ್ತ್ವವನ್ನು ಹೀಗೆ ಬಿಡಿಸಿಟ್ಟರು ಸನ್ಮತಿ-
'ಗಾಜಿನ ಜಾಡಿ ನಮ್ಮ ಜೀವನದಂತೆ. ಯಾವುದಕ್ಕೆ ಎಷ್ಟು ಆದ್ಯತೆ, ಮಹತ್ವ ಕೊಡಬೇಕೋ ಅಷ್ಟನ್ನು ಕೊಡದಿದ್ದರೆ ಖಂಡಿತ ಎಡವಟ್ಟು ಆದೀತು. ಕೇವಲ ಆಟೋಟಗಳಲ್ಲೇ ನೀವು ಕಾಲ ವ್ಯಯಿಸಿದರೆ ಪಾಠಕ್ಕೆ ಜಾಗವೇ ಇರದು. ನೀವು ಗುರುಕುಲಕ್ಕೆ ಬಂದಿದ್ದು ನಿರರ್ಥಕವಾಗುವುದು. ಜಾಡಿ ತುಂಬ ಮರಳು ಬೇಡ. ಕಲ್ಲುಗಳಿರಲಿ. ಈಗ ಅರ್ಥವಾಯಿತೆ ನಿಮಗೆ?'
ಅಂದಿನಿಂದ ಮಕ್ಕಳು ಪಾಠದ ಜೊತೆಗೆ ಇತಿಮಿತಿ ಅರಿತು ಆಟೋಟಗಳಲ್ಲಿ ಭಾಗಿಗಳಾಗಿ ಶಿಸ್ತನ್ನು ಪರಿಪಾಲಿಸತೊಡಗಿದರು.
- ಬಿಂಡಿಗನವಿಲೆ ಭಗವಾನ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

