ಸಾಪ್ತಾಹಿಕಪ್ರಭ

ಗೂಡು ಬಿಡುವ ಮುನ್ನ...

ಗೂಡು ಬಿಡುವ ಮುನ್ನ...
Published On :

ನನಗೆ ಈಗಲೂ ನೆನಪಿದೆ. ಎಪ್ಪತ್ತೈದು ಚಿಲ್ಲರೆ ಮನೆಗಳಿರುವ ಸಣ್ಣೂರು ನಮ್ಮದು... ಪುಲಿಪಾಪೇನಹಳ್ಳಿ. ಊರಿಗಂಟಿಕೊಂಡು ಎರಡು ಹುಣಸೆಮರ. ಈ ಮರದ ಕೆಳಗೆ ಗೋಲಿ ಆಟ, ಟೈಂಪಾಸ್‌ಗೆ. ಆ ಮರಗಳ ಕೆಳಗೆ ಕೂರುವಾಗಲೆಲ್ಲ ಗಾಳಿಗೆ ಹಾರಿ ಹೋಗುವ ಗುಡಿಸಿಲಿನಲ್ಲಿ ದಿನಾಪೂರ್ತಿ 'ಹೇ ಗೋಪಿ, ನಂಜುಂಡ, ಪಾರ್ವತಿ...' ಎಂದು ಒಂದೇ ಸಮನೆ ಕೂಗಿಕೊಳ್ಳುತ್ತಿದ್ದ ಮುದುಕಿ ಕಣ್ಣಿಗೆ ಬೀಳುತ್ತಿದ್ದಳು. ಈಕೆಯ ಕೂಗಾಟಕ್ಕೆ 'ಏನ್ ನಿನ್ಗೆ ರೋಗ? ಸುಮ್ನೆ ಬಿದ್ದಿರು' ಎಂದು ಗುಡಿಸಿಲಿನ ಪಕ್ಕದ ಮನೆಯಿಂದ ಗದರುವ ದನಿ. 'ನಮ್ಗೆ ನೆಮ್ಮದಿಯೇ ಇಲ್ಲ, ಈ ದರಿದ್ರ ಯಾವಾಗ್ ತೊಲಗುತ್ತೋ' ಎಂದು ಗೊಣಗುತ್ತಿದ್ದವರು ಬೇರ್ಯಾರೂ ಅಲ್ಲ, ಆಕೆ ಹೆತ್ತಮಕ್ಕಳು. ಕೂಗಿ ಕೂಗಿ ಸುಸ್ತಾಗಿ ಒಮೊಮ್ಮೆ ಮೆಲ್ಲನೆ ದೇಕಿಕೊಂಡು ಹೊರಗೆ ಬರುತ್ತಿದ್ದ ಆ ಮುದುಕಿಯ ಆಕೃತಿಯನ್ನು ವರ್ಣಿಸಲು ಪದಗಳಿಲ್ಲ. ಸಾವಿಗಾಗಿ ಕಾಯುತ್ತಿರುವ ಮೂಳೆ ದೇಹಕ್ಕೆ ಹೆದರಿ ಯಮ ಕೂಡ ಹತ್ತಿರ ಬಂದಿಲ್ಲವೇನೋ ಅನ್ನಿಸುತ್ತದೆ. ಒಂದು ದಿನ ಆ ಮುದುಕಿ ತೀರಿಕೊಂಡಾಗ ಆಕೆಯನ್ನು ಗೋಣಿ ಚೀಲದ ಮೇಲೆ ಮಲಗಿಸಿ ಆ ಕಡೆ, ಈ ಕಡೆ ಇಬ್ಬರು ಹಿಡಿದುಕೊಂಡು ಕೆರೆ ಪಕ್ಕದಲ್ಲಿ ಮಣ್ಣು ಮಾಡಿದರು ಅವರ ಮಕ್ಕಳು. ಕ್ಷಮಿಸಿ ಅದನ್ನು ಅಂತ್ಯಸಂಸ್ಕಾರ ಎನ್ನಲಾಗದು. ಮುಪ್ಪು ಆವರಿಸಿ ಕೊನೆಗಾಲದಲ್ಲಿ ಹೆತ್ತ ಮಕ್ಕಳಿಂದಲೇ ಹೀಗೆ ತಿರಸ್ಕೃತಗೊಂಡು ಒಳ್ಳೆಯ ಸಾವೂ ಕಾಣದ ಆ ಮುದುಕಿಯ ಹೆಸರು ಮುನಿಯಮ್ಮ. ಇಬ್ಬರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳಿಗೆ ಜನ್ಮ ಕೊಟ್ಟು ಸಾಕಿ ಸಲುಹಿದ ಜೀವ ಹೀಗೆ ಕೆಟ್ಟ ಸಾವು ಕಾಣಬೇಕಾಯಿತು.

ನಮ್ಮ ಮನೆಯಲ್ಲೂ ಇಂಥದೇ ಹಿರಿಯ ಜೀವ ಇತ್ತು. ಅದು ನಮ್ಮ ಅಜ್ಜ. ನಮ್ಮ ಅಪ್ಪನ ತಂದೆ ಹಾಸಿಗೆ ಹಿಡಿದಿದ್ದಾಗ ಅವರ ಕೂಗಾಟಕ್ಕೆ ನಮಗೆ ನಿದ್ದೆನೇ ಬರುತ್ತಿರಲಿಲ್ಲ. ರಾತ್ರಿಯಾದರೆ ಸಾಕು ಮೂಲೆಯಲ್ಲಿ ಬಿದ್ದಿಕೊಂಡಿದ್ದ ಅಜ್ಜ ವೆಂಕಟಮುನಿಯಪ್ಪ 'ರಾಮ ರಾಮ...' ಎಂದು ಕೂಗಿಕೊಳ್ಳುತ್ತಿದ್ದರು. ರಾಮಪ್ಪ ನನ್ನ ಅಪ್ಪ. ದೇವರು, ಧರ್ಮ, ಗುಡಿ, ಗೋಪುರ, ರಾಜಕೀಯ ಅಂತ ಮನೆ ಬಿಟ್ಟು ಹೊರ ಜಗತ್ತಿನಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ ನಮ್ಮ ತಂದೆಗೆ ಅವರ ಜನ್ಮದಾತನನ್ನು ಕೊನೆಗಾಲದಲ್ಲಿ ನೋಡಿಕೊಳ್ಳುವ ಪುರುಸೊತ್ತು ಇರಲಿಲ್ಲ! ಮನೆಯಲ್ಲಿರದ ಅಪ್ಪನನ್ನು ತಾತ ಕೂಗುತ್ತಿದ್ದರೆ ಚಿಕ್ಕಪ್ಪ ಸಿಟ್ಟುಮಾಡಿಕೊಂಡು, ಗದರುತ್ತಿದ್ದರು. ಇದು ನನ್ನೂರಿನ, ನನ್ನ ಮನೆಯ ಹಿರಿಯ ಜೀವಗಳ ಮುಪ್ಪಿನ ಕಾಲದ ಬದುಕಿನ ಒಂದೆರಡು ಚಿತ್ರಣ.
ಮಗ, ಮಗಳು, ಸೊಸೆ, ಮೊಮ್ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಸ್ವಾಭಿಮಾನಕ್ಕೆ ಕಟ್ಟು ಬಿದ್ದು ಸಾಯುವ ಅಥವಾ ಸಾವಿಗಾಗಿ ವೃದ್ಧಾಶ್ರಮಗಳಲ್ಲಿ ಜೀವಿಸುತ್ತಿರುವವರನ್ನು ನೋಡಿದಾಗ ಜೀವನಾಭಿಲಾಷೆಗೆ ತಮ್ಮನ್ನು ಮಾರಿಕೊಂಡು ಯಾಂತ್ರಿಕ ಜೀವನದ ಯಂತ್ರಗಳಾಗಿರುವವರಿಗೆ ಅಸಹಾಯಕ ವೃದ್ಧರು ಈ ಪಾಟಿ ಬಾರವಾಗುತ್ತಿದ್ದಾರೆಯೇ? ನಮ್ಮನ್ನು ಹೆತ್ತು, ಹೊತ್ತು ಸಾಕಿ ಬೆಳೆಸಿದ ಮುಪ್ಪಿನ ಚೇತನಗಳು ನಮ್ಮಿಂದಲೇ ತಿರಸ್ಕೃತಗೊಳ್ಳುತ್ತಿರುವುದು ಯಾಕೆ? ವೈಯಕ್ತಿಕ ಆಸೆ, ಆಕಾಂಕ್ಷೆಗಳೇ ಪ್ರಧಾನವಾಗಿ ಸಂಬಂಧಗಳು ಬೇಡವೆಂದು ಕೃತಕ ಜೀವನವನ್ನು ನಮ್ಮ ಕೈಗಿಟ್ಟು ಒಂದಿಷ್ಟು ಮುಖವಾಡಗಳು ಆಧುನಿಕತೆಯ ಹಿಂದೆ ನಿಂತು ನಗುತ್ತಿವೆ.

ಅಕ್ಷರಶಃ ಈಗಿನ ನಮ್ಮ ಜನರೇಷನ್ ಮತ್ತು ನಾವು ಸೃಷ್ಟಿಸಿಕೊಂಡಿರುವ ಜೀವನ ಶೈಲಿ 'ವೃದ್ಧರಿಗೆ ಇದು ಕಾಲವಲ್ಲ' ಎನ್ನುತ್ತಿರುವಾಗಲೇ ಕ್ಯಾಮೆರಾ ಕಣ್ಣು ಮುಪ್ಪಿನ ಜೀವಗಳ ಬದುಕಿಗೆ ಹತ್ತಿರವಾಗಿದೆ. ಆ ಮೂಲಕ ಸಿನಿಮಾ ಕನ್ನಡಿಯಲ್ಲಿ 'ವಾಸ್ತವದ ಪ್ರತಿಬಿಂಬಗಳು' ನಳನಳಿಸಿವೆ. ಕಾಲನ ಅಹ್ವಾನಕ್ಕೆ ಕಾಯುತ್ತಿರುವ ವೃದ್ಧರ ಬದುಕಿನ ತಾಕಲಾಟ, ತಳಮಳ, ನೋವಿನ ರಾಗಗಳನ್ನು ಹತ್ತಾರು ಚಿತ್ರಗಳು ತೆರೆದಿಟ್ಟಿವೆ. ನಮ್ಮೂರು, ನಮ್ಮನೆ, ನಮ್ಮ ರಾಜ್ಯ- ದೇಶದಲ್ಲಿ ಕಾಣುವ ವೃದ್ಧರು ಆಸ್ಟ್ರಿಯದ 'ಮೈಕೆಲ್ ಹನೇಕೆ'ರಿಗೂ ಕಂಡಿದ್ದು, ಆತನ ನಿರ್ದೇಶನದಲ್ಲಿ 'ಅಮೌರ್‌' ಚಿತ್ರ ಮೂಡಿಬಂದಿದೆ. 2013ನೇ ಸಾಲಿನ ಆಸ್ಕರ್‌ನಲ್ಲಿ ಬಹುತೇಕ ಎಲ್ಲ ವಿಭಾಗಳಲ್ಲೂ ನಾಮನಿರ್ದೇಶನಗೊಂಡು ಸದ್ದು ಮಾಡುತ್ತಿರುವ ಚಿತ್ರವಿದು. ಕೌಟುಂಬಿಕತೆಯ ಆಚೆ ಬಂದು ಜಗತ್ತಿನ ಬಹು ದೊಡ್ಡ ಸಮಸ್ಯೆಯಾಗಿರುವ ವೃದ್ಧರ ನಿರ್ಲಕ್ಷ್ಯವನ್ನು ಎರಡೇ ಪಾತ್ರಗಳಲ್ಲಿ 'ಅಮೌರ್‌' ವಿವರಿಸುತ್ತದೆ. ಇಳಿವಯಸ್ಸಿನಲ್ಲೂ ಆದರ್ಶ ಪ್ರೇಮಿಗಳಂತೆ ಬದುಕುತ್ತಲೇ ಅಪಾರವಾಗಿ ಪ್ರೀತಿಸುವ ಎರಡು ಹೃದಯಗಳು. ಆನ್ನೆ ಮತ್ತು ಜಾರ್ಜಸ್. ಸಂಗೀತ ಗುರುಗಳಾದ ಇವರು ಮುಪ್ಪಿನಲ್ಲಿ ಮಾಗಿದ ಜೀವಗಳು. ಇವರ ಒಬ್ಬಳೇ ಮಗಳು ವೈಯಕ್ತಿಕ ಆಸೆ, ಆಕಾಂಕ್ಷೆಗಳೇ ಪ್ರಗತಿ ಎಂದುಕೊಂಡು ಹೆತ್ತವರನ್ನು ಬಿಟ್ಟು ಹೊರ ದೇಶದಲ್ಲಿ ಸಂಗೀತ ಕಲಿಯುತ್ತಿದ್ದಾಳೆ.

ಎಲ್ಲದಕ್ಕೂ ಗಂಡನನ್ನೇ ಅವಲಂಬಿಸಿರುವ ಅನ್ನೆ, ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದಾಳೆ. ಜಾರ್ಜಸ್‌ಗೆ ಎದ್ದರೇ ಕೂರಲು ಕಷ್ಟ. ಸರಸರನೆ ಹೆಜ್ಜೆ ಹಾಕಲು ಆಗದು. ಅಂಥ ಪರಿಸ್ಥಿತಿಯಲ್ಲೂ ಪತ್ನಿಯನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ಆದರೆ ಆನ್ನೆಳ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಮಗಳು ಅಪ್ಪನಿಗೆ ಉಚಿತ ಸಲಹೆ ಕೊಡುತ್ತಾಳೆ ಹೊರತು ಹೆತ್ತವರಿಗೆ ಆಸರೆಯಾಗಲ್ಲ. ಮಗಳ ಸಲಹೆಗಳಿಂದ ಅಪ್ಪ ರೋಸಿ ಹೋಗುತ್ತಾನೆ. ಸಾವಿನ ಹಾಸಿಗೆಯಲ್ಲಿ ಮಲಗಿರುವ ತನ್ನ ಪತ್ನಿಯ ಸ್ಥಿತಿ ನೋಡಿ ಹತಾಶನಾಗುತ್ತಾನೆ. 'ಇಂಥ ಹೀನಾಯ ಬದುಕು ನನ್ನವಳಿಗೆ ಬೇಕೆ?' ಎಂದು ಪತ್ನಿಯ ಜೀವನ ತೆಗೆಯುತ್ತಾನೆ ಜಾರ್ಜಸ್. ಹೀನಾಯ ಜೀವನದಿಂದ ಆಕೆಗೆ ಮುಕ್ತಿ ಸಿಕ್ಕಿದೆ. ಆದರೆ ಕೈ ಹಿಡಿದವಳನ್ನೇ ಕೊಳ್ಳುವ ಅಸಹಾಯಕ ಜಾರ್ಜಸ್, ವೃದ್ಧರನ್ನು ಅನಾಥರನ್ನಾಗಿಸಿರುವ ರೋಗಿಷ್ಟ ಸಮಾಜವನ್ನು ವ್ಯಂಗ್ಯ ಮಾಡಿದ್ದಾನೆ. 'ನಿಮಗೆ ನಾವು ಬೇಡ. ನಿಮ್ಮ ಸಹವಾಸವೂ ನಮಗೆ ಬೇಡ' ಎನ್ನುವ ಜಾರ್ಜಸ್‌ನ ಅಸಹಾಯಕ ಸಿಟ್ಟು, ಸಂಬಂಧಗಳನ್ನು ತೊರೆದು ಸಂಪಾದನೆಯ ಹಿಂದೆ ಹೊರಟಿರುವ ನಮ್ಮ ಬದುಕಿನ ಶೈಲಿಯನ್ನು ಬೆತ್ತಲಾಗಿಸುತ್ತಾನೆ. ಹಲವು ಚಿತ್ರಗಳು ವೃದ್ಧರ ಮನಸ್ಥಿತಿಯನ್ನು ಗಾಢವಾಗಿ ಹೀಗೆ ಚರ್ಚಿಸಿವೆ. ಆದರೆ ಜಗತ್ತಿನ ಯಾವ ಚಿತ್ರಗಳಲ್ಲೂ ವೃದ್ಧರ ನೆಮ್ಮದಿ ಬದುಕಿಗೆ ಪರಿಹಾರವಿಲ್ಲ. ಹೀಗಾಗಿ ಸಿನಿಮಾ ಕನ್ನಡಿಯೂ 'ವೃದ್ಧರಿಗೆ ಬದುಕುವ ಹಕ್ಕು ಇಲ್ಲ' ಎಂದಿದೆಯೇ? ಗೊತ್ತಿಲ್ಲ, ಆದರೆ ಈ ಚಿತ್ರ ನೋಡಿದ ಮೇಲೆ ಹೆತ್ತವರನ್ನೇ ಬೇಡ ಎನ್ನುವ ನಾವು,  ಜೀವನದಲ್ಲಿ ಯಾರಿಗೆ ಋಣಿಯಾಗಿರಬೇಕು? ಪ್ರಶ್ನೆಯನ್ನು ಕೇಳಿಕೊಳ್ಳುವಂತೆ ಮಾಡು ತ್ತದೆ.

-ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.