ಸಾಪ್ತಾಹಿಕಪ್ರಭ

ಸರಿಯಾದ ಮಾಹಿತಿ ನೀಡಿ

Published On :

ಎಸ್.ಎಲ್. ಪೋಳ, ಅಥಣಿ
ವಿಚ್ಛೇದಿತ ಪತ್ನಿಗೆ 20 ವರ್ಷದಿಂದ ಜೀವನಾಂಶ (ಪೋಟಗಿ)ವನ್ನು ತಿಂಗಳಿಗೆ ರೂ. 1000ದಂತೆ ಕೊಡುತ್ತಾ ಬಂದು ಈಗ ನಿವೃತ್ತಿಯಾಗಿದ್ದೇನೆ. ಈಗ ಆಕೆ ಹೈಕೋರ್ಟ್‌ನಲ್ಲಿ ತಿಂಗಳಿಗೆ 8000 ರೂ.ಗಳನ್ನು ಕೊಡಿಸಬೇಕೆಂದು ಅರ್ಜಿ ಹಾಕಿದ್ದಾಳೆ. ನನ್ನ ವಕೀಲರಿಗೆ ವಿವರಗಳನ್ನು ಒದಗಿಸಿದ್ದೇನೆ. ಮುಂದೇನು ಮಾಡಬೇಕು?
ಹಿಂದೂ ವಿವಾಹ ಕಾಯಿದೆ ಕಲಂ 25ರಂತೆ ನ್ಯಾಯಾಲಯವು ಕಾಲಕಾಲಕ್ಕೆ ಬದಲಾದ ಸನ್ನಿವೇಶ ಹಾಗೂ ಆದಾಯಕ್ಕೆ ತಕ್ಕಂತೆ ಜೀವನಾಂಶವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ನಿಮ್ಮ ವಕೀಲರು ಈ ಬಗ್ಗೆ ಕೋರ್ಟಿಗೆ ಸರಿಯಾದ ಮಾಹಿತಿ ನೀಡಿದರೆ ನಿಮಗೆ ಅನುಕೂಲವಾಗಬಹುದು.

ಮಾರಾಟ ಅಸಿಂಧು
ಊರು, ಹೆಸರು ಬೇಡ
ಜಾತಿಯಲ್ಲಿ ಮುಸಲ್ಮಾನ. ಅಜ್ಜಿಯು 1961ರಲ್ಲಿ ಖರೀದಿಸಿದ್ದ ಜಮೀನನ್ನು 1994ರಲ್ಲಿ ನನ್ನ ಹೆಸರಿಗೆ ಬಿಳಿ ಕಾಗದದ ಮೇಲೆ ಸಾಕ್ಷಿಗಳ ಎದುರು ನನಗೆ ವಿಲ್ ಮಾಡಿರುತ್ತಾರೆ. ಹೀಗಿದ್ದರೂ 1997ರಲ್ಲಿ ಅವರ ಮೊದಲಿನ ಹಾಗೂ 4ನೇ ಮಗ ಆಸ್ತಿ ವಿಭಾಗ ಮಾಡಿಕೊಂಡಂತೆ ಮಾಡಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಬೇರೆಯವರಿಗೆ ಮಾರಿರುತ್ತಾರೆ.  ಅಜ್ಜಿ ಸೆಪ್ಟೆಂಬರ್ 2011ರಲ್ಲಿ ನಿಧನವಾದ ನಂತರ ನನಗೆ ವಿಲ್ ವಿಷಯ ಗೊತ್ತಾಗಿರುತ್ತದೆ. ಇದಕ್ಕೆ ಪರಿಹಾರವೇನು?
ಮುಸ್ಲಿಮರ ಕಾನೂನಿನಂತೆ ತಾಯಿ ಬದುಕಿರುವವರೆಗೂ ಮಕ್ಕಳಿಗೆ ಆಕೆಯ ಆಸ್ತಿಯಲ್ಲಿ ಯಾವ ಹಕ್ಕೂ ಇಲ್ಲ. ಆದ್ದರಿಂದ ಅವರ ಮಕ್ಕಳು ಖಾತೆ ಬದಲಾಯಿಸಿಕೊಂಡಿರುವುದು ಹಾಗೂ ಮಾರಾಟ ಮಾಡಿರುವುದು ಕಾನೂನಿನಂತೆ ಅಸಿಂಧು. ಅದನ್ನು ರದ್ದುಪಡಿಸಲು ನೀವು ಕೋರ್ಟ್‌ನಲ್ಲಿ ದಾವಾ ಹಾಕಬಹುದು. ಇನ್ನು ವಿಲ್‌ನ ವಿಚಾರ. ನಿಮ್ಮ ಕಾನೂನಿನಂತೆ ನಿಮ್ಮ ಅಜ್ಜಿಯ ಒಟ್ಟು (ಎಲ್ಲ ಆಸ್ತಿಯೂ ಸೇರಿದಂತೆ) ಆಸ್ತಿಯಲ್ಲಿ 1/3 ಭಾಗವನ್ನಷ್ಟೇ ಆಕೆ ವಿಲ್ ಮಾಡಬಹುದು. ಆಕೆಯ ಮರಣಾನಂತರ ಆಕೆಯ ವಾರಸುದಾರರು ಅಂದರೆ ಇಲ್ಲಿ ಎಲ್ಲ ಮಕ್ಕಳು ಒಪ್ಪಿದರೆ ಮಾತ್ರ ಪೂರ್ತಿ ಜಮೀನು (ವಿಲ್‌ನಲ್ಲಿ ಬರೆದಂತೆ) ನಿಮ್ಮದಾಗುತ್ತದೆ.

ಪತ್ರಕ್ಕನುಗುಣವಾಗಿಲ್ಲ
ಸಣ್ಣಸೈದುಸಾಬ್ ಕಂಗ್ರಾಳಿ, ಬೆಳಗಾವಿ
ನನ್ನ ಜಮೀನನ್ನು ಬೇರೊಬ್ಬರಿಗೆ ಮಾರಾಟ ಮಾಡಲು ಒಪ್ಪಿ ರೂ. ಒಂದು ಲಕ್ಷ ಮುಂಗಡ ಪಡೆದಿದ್ದೇನೆ. ಒಪ್ಪಂದದಂತೆ ಖರೀದಿದಾರ ಒಂದು ವರ್ಷದೊಳಗೆ ನನ್ನ ಜಮೀನಿನ ದಾಖಲೆಗಳನ್ನು ಸರಿಪಡಿಸಿಕೊಳ್ಳುವಂತೆಯೂ, ಅದಾಗದಿದ್ದರೆ ಒಪ್ಪಂದ ರದ್ದಾಗುವುದಾಗಿಯೂ ಉಲ್ಲೇಖಿಸಿದೆ. ಈಗ ವರ್ಷದೊಳಗೆ ದಾಖಲೆ ಸರಿಯಾಗಲಿಲ್ಲವಾದ್ದರಿಂದ ಒಪ್ಪಂದ ರದ್ದಾದಂತೆಯೇ. ಆದ್ದರಿಂದ ಆತನಿಗೆ ಮುಂಗಡ ವಾಪಸ್ ಪಡೆಯಲು ತಿಳಿಸಿದರೂ ಆತ ಲಾಯರ್ ನೋಟೀಸ್ ನೀಡಿ ಜಮೀನು ನೋಂದಣಿ ಮಾಡಿಸಿ ಕೊಡುವಂತೆ ತಿಳಿಸಿದ್ದಾನೆ. ಜೊತೆಗೆ ಬೇಕೆಂದೇ ನನ್ನ ಜಮೀನನ್ನು ವ್ಯವಸಾಯ ಮಾಡುತ್ತಿದ್ದಾನೆ. ಇದಕ್ಕೆ ಪರಿಹಾರವೇನು?
ನಿಮ್ಮ ಒಪ್ಪಂದದಲ್ಲಿ ಭೂದಾಖಲೆಗಳನ್ನು ಸರಿಮಾಡಿಸಿ ನಂತರ ನೋಂದಣಿ ಮಾಡಿಸಿಕೊಡುತ್ತೇನೆ ಎಂದು ಬರೆದಿದ್ದೀರಿ. ಅಲ್ಲದೆ 11.5.12ರೊಳಗೆ ಭೂದಾಖಲೆ ಕಾಗದಪತ್ರ ಸರಿಯಾಗದಿದ್ದರೆ ಸದರಿ ಜಮೀನಿನ ವ್ಯವಹಾರ ರದ್ದಾಗುತ್ತದೆ ಎಂದು ತಿಳಿಸಿದೆ. ಭೂದಾಖಲೆ ಸರಿಪಡಿಸುವ ಜವಾಬ್ದಾರಿ ಖರೀದಿದಾರರದು ಎಂದು ಎಲ್ಲೂ ತಿಳಿಸಿಲ್ಲ. ಅಲ್ಲದೇ ಹಿರಿಯರ ಸಮಕ್ಷಮ ಜಮೀನಿನ ಸ್ವಾಧೀನವನ್ನು (ಕಬ್ಜ) ಅವರಿಗೆ ಹಿರಿಯರ ಸಮಕ್ಷಮದಲ್ಲಿ ಬಿಟ್ಟುಕೊಟ್ಟಿರುತ್ತೇನೆಂದು ತಿಳಿಸಿದ್ದೀರಿ. ಆದ್ದರಿಂದ ನಿಮ್ಮ ಈಗಿನ ಹೇಳಿಕೆ ಪತ್ರಕ್ಕೆ ಅನುಗುಣವಾಗಿಲ್ಲ. ಆದ್ದರಿಂದ ನಿಮ್ಮ ನಡತೆ ಕೋರ್ಟಿನಲ್ಲಿ ಸಿಂಧುವಾಗುವುದು ಕಷ್ಟ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.