ಯಮನ್ ಲೋಕ

'ಯಮನ್' ಎಂಬುದು ಹಿಂದುಸ್ತಾನೀ ಸಂಗೀತದ ಪ್ರಸಿದ್ಧ ರಾಗ. 'ಯವನರು' ಅಂದರೆ ಅಫ್ಘನ್ನರು ಅಥವಾ ಮುಸ್ಲಿಮರಿಂದ ಬಂದ ರಾಗ ಎಂಬರ್ಥದಲ್ಲಿ ಇದಕ್ಕೆ ಈ ಹೆಸರು ಬಂತು ಎನ್ನುತ್ತಾರೆ. ಅಥವಾ ಅಫ್ಘನ್ ಭಾಷೆಯಲ್ಲಿ 'ಯಮಾನ್' ಎಂದರೆ 'ಸಮೃದ್ಧಿ' ಎಂದರ್ಥ. ಬಹುಶಃ ಎಷ್ಟು ಬೆಳೆಸಿದರೂ ಇನ್ನೂ ಬೆಳೆಯುವುದು - ಹೊಸತಾಗಿಯೇ ಇರುವುದು ಎಂದು ಇದಕ್ಕೆ 'ಯಮನ್' ಎನ್ನುವರೇನೋ.
ಯಾಕೆಂದರೆ ಈ ರಾಗವೇ ಹಾಗೆ. ಮೊದಲ ನೋಟಕ್ಕೆ, ಎಲ್ಲ ಶುದ್ಧ ಸ್ವರಗಳು, ಎಳೂ ಸ್ವರಗಳಿವೆ ಆದ್ದರಂದ ಕೋಮಲ ಸ್ವರಗಳಿವೆ ಎಂಬ ಚಿಂತೆಯಾಗಲಿ, ಒಂದನ್ನು ಬಿಟ್ಟು ಇನ್ನೊಂದು ಸ್ವರಕ್ಕೆ ಜಿಗಿಯಬೇಕು, ಸಾಗಬೇಕು ಎಂಬ ಕಠಿಣತೆಯಿಲ್ಲ, ರಾಗದ ನಿಯಮಗಳು ಕಠೋರವಾಗಿಲ್ಲ, ಸರಳ ಸುಲಭ ಎನಿಸುವುದೇನೋ ನಿಜ. ಅದಕ್ಕೇ ಸಂಗೀತ ಪಾಠದ ಪ್ರಾರಂಭದಲ್ಲಿ ಈ ರಾಗವನ್ನೇ ಕಲಿಸುತ್ತಾರೆ ಎಂಬುದೂ ನಿಜ.
ಆದರೆ, ಈ ರಾಗದ ವೈಶಿಷ್ಟ್ಯವೇನೆಂದರೆ ಇದು ಇವತ್ತಿಗೂ ಅತ್ಯಂತ ಕಠಿಣ ರಾಗ. ಏಕೆಂದರೆ, ಇದೇ ರಾಗವನ್ನು ನಮ್ಮ ಶಾಸ್ತ್ರೀಯ ಸಂಗೀತದ ಮಹಾನ್ ಮಹಾನ್ ಗಾಯಕರು ಎಷ್ಟು ಪ್ರಫುಲ್ಲವಾಗಿ- ಕ್ರಿಯಾಶೀಲವಾಗಿ ಬೆಳೆಸಿದ್ದಾರೆಂದರೆ, ಅದು ಸದಾ ಬೆಳೆಯುತ್ತಲೇ ಇದೆ... ನಿರಂತರವಾಗಿ, ವ್ಯಾಪಕವಾಗಿ. ನೂರಾರು ವರ್ಷಗಳಿಂದ ಯಮನ್ ಹಾಡುತ್ತಿದ್ದರೂ, ಇನ್ನೂ ಸಾವಿರಾರು ವರ್ಷ ಹಾಡಿದರೂ ಬಹುಶಃ ಯಮನ್ ಮುಗಿಯಿತು ಎಂದಾಗಲು ಸಾಧ್ಯವೇ ಇಲ್ಲವೇನೋ!?
ಈ ರಾಗವನ್ನು ಮಾಡಿದವರ ಶಕ್ತಿ ಅಂಥದ್ದು. ಇದರ ವ್ಯಾಪ್ತಿ ಅಂಥದ್ದು. ಅಂಥ ಅಪರಿಮಿತತೆಗೇ, ಆ ಅನಂತ ಅವಕಾಶಕ್ಕೇ ಇದು ಸಮೃದ್ಧ.
ಅಲ್ಲದೆ ಸಂಗೀತದ ದಿಗ್ಗಜರು, ಇದರ ಆಳ- ವೈಶಿಷ್ಟ್ಯಕ್ಕೆ ಆಕರ್ಷಿತರಾಗಿಯೋ ಏನೋ, ಶತ ಶತಮಾನಗಳಿಂದ ಅದನ್ನು ಹಾಡಿ, ನುಡಿಸಿ, ಅದನ್ನೊಂದು ವಿಶಿಷ್ಟವಾದ ಮಟ್ಟಕ್ಕೆ ಒಯ್ದಿದ್ದಾರೆ. ಮುಂದೆ ಅದನ್ನು ಹಾಡುವವರು ಆ ಕ್ರಿಯಾಶೀಲತೆಯ ಮಟ್ಟವನ್ನು ಅರಿತು, ಕಾಯ್ದುಕೊಂಡು, ಅದನ್ನು ಬೆಳೆಸಬೇಕಾದದ್ದರಿಂದ ಅದು ಇನ್ನೂ ಅನಂತವಾಗುತ್ತ ಹೋಗುತ್ತದೆ.
ಇದರ ಆಕರ್ಷಣೆ ಎಷ್ಟು ವಿಚಿತ್ರವಾಗಿದೆಯೆಂದರೆ, ಈಗತಾನೆ ಸಂಗೀತ ಕಲಿಯುವವರಿಂದ ಹಿಡಿದು ಸಂಗೀತದ ಮಹಾನ್ ದಿಗ್ಗಜರವರೆಗೂ ಇದು ತನ್ನನ್ನು ತೆರೆದುಕೊಳ್ಳುತ್ತದೆ. ಗಾಯನವೊಂದೇ ಅಲ್ಲ- ಎಲ್ಲ ವಾದ್ಯಗಳಲ್ಲೂ - ಸಿತಾರ್, ವೀಣೆ, ಸರೋದ್, ಸಾರಂಗಿ, ವಯೋಲಿನ್, ಕೊಳಲು- ಎಲ್ಲ ವಾದ್ಯಗಳಲ್ಲೂ ಸಮರ್ಥವಾಗಿ ಅರಳುತ್ತದೆ. ಹಿಂದಿ ಚಿತ್ರಗೀತೆಗಳಲ್ಲಂತೂ ಈ ರಾಗವನ್ನು ಎಷ್ಟು ಮಜಲುಗಳಿಂದ ಬಳಸಿದ್ದರೆಂದರೆ ಲೆಕ್ಕವೇ ಇಲ್ಲ. ಮುಖೇಶನ 'ಯೆ ಆಸೂ ಭರೀ ಹೈ...', ರಫಿಯ 'ಯೆ ಆಸೂ ಮೇರಿ ದಿಲ್ ಕಿ ಜುಬಾನ್ ಹೈ'- ಹೀಗೆ ಯಮನ್ ರಾಗದಲ್ಲಿರುವ ಇಂಥ ನೂರಾರು ಚಿತ್ರಗೀತೆಗಳು ಜನರ ಮನಸ್ಸನ್ನು ತಟ್ಟಿ ಇಂದಿಗೂ ಅಚ್ಚಳಿಯದೇ ಉಳಿದಿವೆ. ಈ ರಾಗದಿಂದ ಹೊರಡುವ ಭಾವಗಳೂ ವಿಶಿಷ್ಟ- ಭಕ್ತಿ, ಶೃಂಗಾರ ಸ್ವಲ್ಪ ವಿರಹ.
(ಮುಂದುವರಿಯುವುದು)
- ಶ್ರುತಿ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


