ಟ್ರಿಪ್ಪು ಸುಲ್ತಾನ
ಸುತ್ತೋಣ ಬನ್ನಿ ದ್ರಾಕ್ಷಿಯ ನಾಡ...

'ಗುಮ್ಮಟ ನಗರಿ' ಎಂದೇ ಪ್ರಸಿದ್ಧಿ ಪಡೆದ ಬಿಜಾಪುರ ಐತಿಹಾಸಿಕ ನಗರ. 10-11ನೇ ಶತಮಾನದಲ್ಲಿ ಚಾಲುಕ್ಯರಿಂದ ಸ್ಥಾಪಿತವಾಯಿತು. 13ನೇ ಶತಮಾನದ ಕೊನೆಯ ಹೊತ್ತಿಗೆ ದೆಹಲಿಯ ಖಿಲ್ಜಿ ಸುಲ್ತಾನರ ಪ್ರಭಾವಕ್ಕೆ ಬಂದ ಬಿಜಾಪುರ, ಕ್ರಿ.ಶ. 1347ರಲ್ಲಿ ಬೀದರಿನ ಬಹುಮನಿ ಸುಲ್ತಾನರ ಆಳ್ವಿಕೆಗೆ ಒಳಗಾಯಿತು. ಕ್ರಿ.ಶ. 1489ರಿಂದ 1686ರ ಅವಧಿಯಲ್ಲಿ ರಾಜ್ಯಭಾರ ಮಾಡಿದ ಆದಿಲ್ ಶಾಹಿ ರಾಜವಂಶದ ಉನ್ನತಿಯ ದಿನಗಳನ್ನು ಮರೆಯುವಂತಿಲ್ಲ.
'ಪಂಚನದಿಗಳ ಬೀಡು' ಬಿಜಾಪುರ ಜಿಲ್ಲೆಯಲ್ಲಿ ಅನೇಕ ಚಾರಿತ್ರಿಕ ಆಕರ್ಷಕ ತಾಣಗಳಿವೆ. ಬಿಜಾಪುರ ಮುಸ್ಲಿಂ ಶೈಲಿಯ ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಜಿಲ್ಲೆಯ ಮುಖ್ಯ ಭಾಷೆ ಕನ್ನಡವಾದರೂ ಅದರೊಂದಿಗೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದ ಉರ್ದು, ಮರಾಠಿ ಮಿಳಿತಗೊಂಡಿವೆ. ಇಲ್ಲಿಯ ಭಾಷೆಯನ್ನು ವಿಶಿಷ್ಟವಾದ 'ಬಿಜಾಪುರ ಕನ್ನಡ'ವೆಂದೇ ಗುರುತಿಸಲಾಗುತ್ತದೆ.
ಗೋಲ್ ಗುಂಬಜ್
ಇದು ಮಹಮದ್ ಆದಿಲ್ ಶಾ (1627-1657) ಆಳ್ವಿಕೆಯಲ್ಲಿ ಗೋರಿಯಾಗಿ ಕಟ್ಟಲಾದ ಸ್ಮಾರಕ. ಇದರ ಉದ್ದ ಮತ್ತು ಆಗಲ 50 ಮೀಟರ್ ಇದ್ದು, ಮೇಲಿನ ಗೋಲಾಕಾರದ ಗುಂಬಜ್ 39 ಮೀಟರ್ ವ್ಯಾಸವನ್ನು ಹೊಂದಿದೆ. ಇದು ವಿಶ್ವದ ಎರಡನೇ ಅತಿ ದೊಡ್ಡ ಮಾನವ ನಿರ್ಮಿತ ಗುಂಬಜ್ (ಇಟಲಿಯ ರೋಮ್ ನಗರದ ಬೆಸಿಲಿಕಾ ಚರ್ಚ್- ವಿಶ್ವದ ಅತಿ ದೊಡ್ಡ ಮಾನವ ನಿರ್ಮಿತ ಗುಂಬಜ್). ಗುಂಬಜ್ ವಿಶೇಷ ಆಕರ್ಷಣೆಯೆಂದರೆ ಇದರೊಳಗಿನ ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿತವಾಗುತ್ತದೆ! ಹಾಗೆಯೇ ಇಲ್ಲಿರುವ 'ಪಿಸುಗುಟ್ಟುವ ಶಾಲೆ'ಯಲ್ಲಿ ಅತಿ ಸಣ್ಣ ಶಬ್ದವೂ 37 ಮೀಟರ್ ದೂರದಲ್ಲಿ ಸ್ಪಷ್ಟವಾಗಿ ಕೇಳಿಬರುತ್ತದೆ. ಇದರ ಮುಂಭಾಗದಲ್ಲಿ ಆದಿಲ್ ಶಾಹಿಗಳಿಗೆ ಸಂಬಂಧಿಸಿದ ವಸ್ತು ಸಂಗ್ರಹಾಲಯವೂ ಇದೆ.
ಕಪ್ಪು ತಾಜ್‌ಮಹಲ್!
ಇದು ಇಬ್ರಾಹಿಂ ಆದಿಲ್ ಶಾ (1580-1626)ನ ಗೋರಿ. ಒಂದೇ ಶಿಲೆಯಲ್ಲಿ ಕಟ್ಟಲಾದ ರೋಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲ್ಲಿಕ್ ಸಂದಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಇಲ್ಲಿಯೇ ಇದೆ! ಇದರ ವಿನ್ಯಾಸ ಪ್ರಸಿದ್ಧ ಆಗ್ರಾದ ತಾಜ್‌ಮಹಲ್‌ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ. ಇಬ್ರಾಹಿಂ ರೋಜಾ ಗುಮ್ಮಟ ನಗರಿಯ 'ಕಪ್ಪು ತಾಜ್‌ಮಹಲ್' ಎಂದೇ ಹೆಸರುವಾಸಿ.
ಮಲಿಕ್ ತೋಪ್
ಜಗತ್ತಿನ ಅತಿ ದೊಡ್ಡದಾದ ಫಿರಂಗಿಗಳಲ್ಲಿ ಇದೂ ಒಂದು. 14 ಅಡಿ ಉದ್ದ, 55 ಟನ್ ತೂಕ ಹೊಂದಿದೆ. ಈ ಫಿರಂಗಿಯನ್ನು ಯುದ್ಧಕ್ಕಾಗಿ ಬಳಸಲಾಗುತ್ತಿತ್ತು.
ಜುಮ್ಮಾ ಮಸೀದಿ
ಇಲ್ಲಿ ಮುಸ್ಲಿಂ ಧರ್ಮದ ಅನುಯಾಯಿಗಳು ಪ್ರಾರ್ಥನೆಗಾಗಿ ಉಪಯೋಗಿಸುತ್ತಿದ್ದರು. ಈ ಮಸೀದಿಯಲ್ಲಿ ಕುರಾನಿನ ಬಂಗಾರದ ಹೊತ್ತಿಗೆಯಿದೆ.
ನೋಡಬೇಕಾದ ಸ್ಥಳಗಳು
ಬಾರಾಹ ಕಮಾನ್, ಗಗನ್ ಮಹಲ್, ಉಪ್ಪಲಿ ಬುರುಜ್, ಜೋಡ ಗುಮ್ಮಟ, ಒಳಕೋಟೆಯಾದ ಅರಕಿಲ್ಲಾ, ಎರಡನೇ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದ್ ಮಹಲ್, ಹಳೆಯ ಹಿಂದೂ ದೇವಾಲಯ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತುರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್‌ಮಹಲ್.
ಹಿಂದೂ ಶೈಲಿಯ ದೇವಾಲಯ
ಶಿವನ ಪ್ರತಿಮೆ
ಭಾರತದಲ್ಲಿಯೇ ಮೂರನೇ ಬೃಹತ್ ಶಿವನ ಪ್ರತಿಮೆ ಉಕ್ಕಲಿ ರಸ್ತೆಗೆ ಹೊಂದಿಕೊಂಡಿರುವ ಶಿವಗಿರಿಯಲ್ಲಿದೆ. 85 ಅಡಿ ಎತ್ತರದ ಶಿವನ ಧ್ಯಾನಸ್ಥ ಮೂರ್ತಿಯನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ನಿರ್ಮಿಸಲಾಗಿದೆ. ಈ ಮೂರ್ತಿಯನ್ನು ಬಿ.ಕೆ. ಪಾಟೀಲ್ ಚಾರಿಟಬಲ್ ಟ್ರಸ್ಟ್‌ನವರು ಸ್ಥಾಪಿಸಿದ್ದಾರೆ.
ಲಿಂಗದ ಗುಡಿ
ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಕೇಂದ್ರವಾಗಿರುವ ಬಿಎಲ್‌ಡಿಇ ಸಂಸ್ಥೆ ಆವರಣದಲ್ಲಿ 1961ರಲ್ಲಿ ಬಂಥನಾಳ ಶಿವಯೋಗಿಗಳ ನೇತೃತ್ವದಲ್ಲಿ 770 ಅಮರಗಣಂಗಳ ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ.
ಜ್ಞಾನಯೋಗಾಶ್ರವು
ಮಲ್ಲಿಕಾರ್ಜುನ ಸ್ವಾಮೀಜಿ ಜ್ಞಾನಯೋಗಾಶ್ರವುದ ರೂವಾರಿಗಳು. ಇವರ ಶಿಷ್ಯರೇ ಯುಗದ ವ್ಯಕ್ತಿ, ದೊಡ್ಡ ಶಕ್ತಿ, ಚಾರಿತ್ರ್ಯವನ್ನು, ನೀತಿಯನ್ನು ಗೌರವಿಸುವ, ಆರಾಧಿಸುವ ಸಂತ ಸಿದ್ದೇಶ್ವರ ಸ್ವಾಮಿಗಳು. ಜ್ಞಾನಯೋಗಾಶ್ರವು ಮನಃಶಾಂತಿ ನೀಡುವ ಶಾಂತಿಧಾಮವಾಗಿದೆ.
ಕಲೆ, ಸಂಸ್ಕೃತಿ ತಾಣಗಳು
ಬಿಜಾಪುರ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಹೊಂದಿದೆ. ಪುರುಷರು ಧೋತ್ರ, ನೆಹರು ಅಂಗಿ ಮತ್ತು ರೇಷ್ಮೆ ಪಟಕ (ರುಮಾಲು) ಧರಿಸುತ್ತಾರೆ. ಮಹಿಳೆಯರು ಇಳಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ತೊಡುತ್ತಾರೆ. ಜಿಲ್ಲೆಯಲ್ಲಿ ಲಂಬಾಣಿ ಜನಾಂಗವೂ ವಿಶೇಷವಾಗಿದೆ. ಇನ್ನು ಊಟದ ವಿಷಯದಲ್ಲೂ ಅಷ್ಟೇ. 'ಜವಾರಿ' ಎಂದೇ ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಬಿಜಾಪುರದ ಜೋಳ ಮತ್ತು ಸಜ್ಜೆ ರೊಟ್ಟಿ, ಶೇಂಗಾ ಚಟ್ನಿ, ಎಣ್ಣಿಬದನೆಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಬಿಜಾಪುರ ತಲುಪುವುದು ಹೇಗೆ?
ರಾಜಧಾನಿ ಬೆಂಗಳೂರಿನಿಂದ ಬಸ್ ಪ್ರಯಾಣ ಮಾಡುವವರಿಗೆ, ಚಿತ್ರದುರ್ಗ-ಹೊಸಪೇಟೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಪ್ರಯಾಣಿಸಿದರೆ ಬಿಜಾಪುರ ಸಿಗುತ್ತದೆ (550 ಕಿ.ಮೀ.). ಬೆಳಗಾವಿಯಿಂದ ಬರುವವರಿಗೆ ಎರಡು ಬಸ್ ಮಾರ್ಗಗಳಿವೆ. ಮೊಲನೆಯದ್ದು, ಬೆಳಗಾವಿ-ಸಂಕೇಶ್ವರ-ಅಥಣಿ ಮಾರ್ಗವಾಗಿ ಬಿಜಾಪುರ ತಲುಪಬಹುದು (211 ಕಿ.ಮೀ.), ಎರಡನೆಯದ್ದು, ಬೆಳಗಾವಿ-ಯರಗಟ್ಟಿ-ಲೋಕಾಪುರ-ಮುಧೋಳ-ಜಮಖಂಡಿ ಮಾರ್ಗವಾಗಿ ಬಿಜಾಪುರ ತಲುಪಬಹುದು(275 ಕಿ.ಮೀ.). ಇನ್ನು ರೈಲ್ವೆ ಸೌಲಭ್ಯಗಳುಂಟು. ಬೆಂಗಳೂರಿನಿಂದ ಅರಸೀಕೆರೆ-ದಾವಣಗೆರೆ-ಹಾವೇರಿ-ಹುಬ್ಬಳ್ಳಿ-ಗದಗ-ಬಾದಾಮಿ-ಆಲಮಟ್ಟಿ ಮಾರ್ಗವಾಗಿ ಬಿಜಾಪುರ ತಲುಪಬಹುದು (650 ಕಿ.ಮೀ.).
ವಸತಿ
ರೇಲ್ವೆ ಸ್ಟೇಷನ್ ರಸ್ತೆಯಲ್ಲಿ ಜಾಸ್ತಿ ಲಾಡ್ಜ್‌ಗಳಿರುವುದು. ಕಾಮತ್ ಲಾಡ್ಜ್, ಶಶಿನಾಗ ರೆಸಿಡೆನ್ಸಿ ಹೋಟೆಲ್, ಹೋಟೆಲ್ ಮಧುವನ ಇಂಟರ್‌ನ್ಯಾಷನಲ್ (08352- 255573), ಹೋಟೆಲ್ ನವರತ್ನ ಇಂಟರ್‌ನ್ಯಾಷನಲ್ (08352- 222772), ಹೋಟೆಲ್ ಗೋಲ್ಡನ್ ಹೈಟ್ಸ್, ಹೋಟೆಲ್ ಪರ್ಲ್ (08352- 256003,4), ಸಂತೋಷ ಲಾಡ್ಜ್, ಲಲಿತ್ ಮಹಲ್, ಪ್ಲೀಸೆಂಟ್ ಸ್ಟೇ ಹೋಟೆಲ್, ಕೆಎಸ್‌ಟಿಡಿಸಿ ಮಯೂರ ಆದಿಲ್ ಶಾಹಿ ಹೋಟೆಲ್, ಕನಿಷ್ಕಾ ಇಂಟರ್‌ನ್ಯಾಷನಲ್ ಹೋಟೆಲ್(08352- 223789), ಸಾಗರ್ ಡಿಲಕ್ಸ್ ಹೋಟೆಲ್, ಮೈಸೂರು ಲಾಡ್ಜ್, ಸ್ವಗತ ಲಾಡ್ಜ್ (08352- 254925).
ಸಮೀಪದ ಪ್ರವಾಸಿ ಸ್ಥಳಗಳು
ಬಸವಣ್ಣನ ಐಕ್ಯಸ್ಥಳ ಕೂಡಲ ಸಂಗಮ (80 ಕಿ.ಮೀ.), ಆಲಮಟ್ಟಿ ಅಣೆಕಟ್ಟು (45 ಕಿ.ಮೀ.), ದೇವಾಲಯಗಳ ಸಮುಚ್ಛಯ ಪಟ್ಟದಕಲ್ಲು (131 ಕಿ.ಮೀ.), ಬಾದಾಮಿ ಗುಹೆಗಳು (121 ಕಿ.ಮೀ.), ಐಹೊಳೆ(110 ಕಿ.ಮೀ.), ಮಹಾಕೂಟ (100 ಕಿ.ಮೀ.), ಬಸವಣ್ಣನ ಜನ್ಮಸ್ಥಳ ಬಸವನ ಬಾಗೇವಾಡಿ (40 ಕಿ.ಮೀ.), ಯಲಗೂರು ಮಾರುತಿ ದೇವಸ್ಥಾನ (42 ಕಿ.ಮೀ.), ಬಸರಕೋಡ ಬಸವೇಶ್ವರ (75 ಕಿ.ಮೀ.). <
9ರ ಮಾಯೆ!
ಬಿಜಾಪುರಕ್ಕೂ, ಸಾಹಿತ್ಯ ಸಮ್ಮೇಳನಕ್ಕೂ ಒಂಬತ್ತರ ನಂಟು. 1923ರಲ್ಲಿ ಇಲ್ಲಿ ನಡೆದದ್ದು 9ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಈಗ ಒಂಬತ್ತು ದಶಕದ ಬಳಿಕ ಮತ್ತೊಮ್ಮೆ 'ಅಕ್ಷರ ಜಾತ್ರೆ' ನಡೆಯುತ್ತಿದೆ. ಇನ್ನೂ ಕಾಕತಾಳೀಯ ಎಂದರೆ ಸಮ್ಮೇಳನ ಶುರುವಾಗಿರುವುದು 9ರಂದೇ!
-ರುದ್ರಗೌಡ ಮುರಾಳ
pramaadaka@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


