ಆಸ್ಕರ್ ಆಸೆ
ಪೈಪೋಟಿಯ ಚಿತ್ರಗಳಲ್ಲಿ ಭಾರತೀಯ ಛಾಯೆ!

ಇದೇ ತಿಂಗಳ 24ಕ್ಕೆ ಈ ಬಾರಿಯ ಆಸ್ಕರ್ ವಿಜಯಿಗಳ್ಯಾರೆಂಬುದು ಬಯಲಾಗಲಿದೆ. ಆದರೆ ಈಗಾಗಲೇ ಕುತೂಹಲದ ಚರ್ಚೆ ಮಾತ್ರ ಆರಂಭವಾಗಿಬಿಟ್ಟಿದೆ. ವಿವಿಧ ವಿಭಾಗಗಳಲ್ಲಿ ಪೈಪೋಟಿ ನಡೆಸುವವರ ವಿವರ ಹೊರಬಿದ್ದ ಕ್ಷಣದಿಂದ ಊಹಾಪೋಹಗಳು ಜೋರಾಗಿವೆ. ಯಾವ ಚಿತ್ರಕ್ಕೆ ಆಸ್ಕರ್ ಗೌರವ? ಯಾವ ನಿರ್ದೇಶಕ ಆ ಪ್ರತಿಮೆಯನ್ನು ಮುದ್ದಾಡುತ್ತಾನೆ? ಎಂಬ ಕುರಿತು ಬಿಸಿ ಬಿಸಿ ಚರ್ಚೆಗಳು ಮುಗಿಲು ಮುಟ್ಟಿವೆ.
ಎರಡು ಚಿತ್ರಗಳು
ಅಂಥ ಚರ್ಚೆಗಳನ್ನೇ ಆಧರಿಸಿ ಹೇಳುವುದಾದರೆ ಈ ಬಾರಿ ಪ್ರಮುಖವಾಗಿ ಎರಡು ಚಿತ್ರಗಳ ಮಧ್ಯೆ ಪೈಪೋಟಿ. ಸ್ಟೀವೆನ್ ಸ್ಪೀಲ್‌ಬರ್ಗ್ ನಿರ್ದೇಶನದ 'ಲಿಂಕನ್' ಚಿತ್ರ 12 ವಿಭಾಗಗಳಲ್ಲಿ ನಾಮಿನೇಷನ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಆಂಗ್ ಲೀ ನಿರ್ಮಾಣದ 'ಲೈಫ್ ಆಫ್ ಪೈ' 11 ನಾಮಿನೇಷನ್ ಹೊಂದಿ ಎರಡನೇ ಸ್ಥಾನದಲ್ಲಿದೆ. ಸಾಮ್ಯತೆಯೆಂದರೆ ಈ ಎರಡೂ ಚಿತ್ರಗಳಲ್ಲಿಯೂ ಯಾವುದೋ ಒಂದು ರೂಪದಲ್ಲಿ ಭಾರತೀಯರ ಕೆಲಸವಿದೆ. ಹೀಗಾಗಿ ಆಸ್ಕರ್ ವೇದಿಕೆ ಮೇಲೆ ನಮ್ಮ ದೇಶದ ಘನತೆಗೂ ಗರಿ ಮೂಡಲಿದೆ. ಇವುಗಳ ಮಧ್ಯೆ ಇರುವ ಇನ್ನೊಂದು ಸಂಗತಿ ಎರಡೂ ಚಿತ್ರಗಳು ಕಾದಂಬರಿ ಆಧಾರಿತ.
ಇಷ್ಟಕ್ಕೂ ಈ ಚಿತ್ರಗಳು ಆಸ್ಕರ್ ಹಾದಿಯಲ್ಲಿ ಸಾಗಲು ಕಾರಣವೇನು? ಅಸಲಿಗೆ ಈ ಚಿತ್ರಗಳ ಕಥೆಯೇನು? ಎಂಬುದನ್ನು ಪರಿಶೀಲಿಸಿದರೆ... ಸೂಕ್ಷ್ಮ ಕಥೆಗಳಿಗೆ ಈ ಬಾರಿ ಆಸ್ಕರ್ ನಾಮಿನೇಷನ್ ಪಟ್ಟಕಟ್ಟಿದ್ದಾರೆ. 'ಲಿಂಕನ್', 'ಲೈಫ್ ಆಫ್ ಪೈ' ಚಿತ್ರಗಳೆರಡೂ ನಿಜ ಜೀವನ ಆಧರಿತ ಕಥೆಗಳಿಂದಲೇ ರೂಪುಗೊಂಡಿರುವುದು ವಿಶೇಷ.
ಜೀವನ ಚರಿತ್ರೆ
ಸ್ಪಿಲ್ ಬರ್ಗ್ ನಿರ್ಮಾಣದ 'ಲಿಂಕನ್' ಚಿತ್ರಕ್ಕೆ ಒಂದು ಪುಸ್ತಕ ಆಧಾರ. ಡೋರಿನ್ ಕರ್ನ್ಸ್ ಗುಡ್‌ವಿನ್- 'ಟೀಮ್ ಆಫ್ ರೈಪಲ್ಸ್: ದಿ ಪೊಲಿಟಿಕಲ್ ಜೀನಿಯಸ್ ಆಫ್ ಅಬ್ರಹಾಮ್ ಲಿಂಕನ್' ಎಂಬ ರಚನೆ ಮಾಡಿದರು.
ಇದು ಲಿಂಕನ್ ಜೀವನದ ಬಿಂಬವಾಗಿದೆ. ಲಿಂಕನ್ ಕೊನೆಯ ನಾಲ್ಕು ತಿಂಗಳ ಜೀವನವನ್ನು ಪ್ರಮುಖವಾಗಿಸಿಕೊಂಡು ಸ್ಕ್ರೀನ್‌ಪ್ಲೇ ಮಾಡಿದ್ದಾರೆ ಟೋನಿ ಕುಷ್ನರ್. ಕಾಥೋಲಿನ್ ಕೆನಡಿ ಜೊತೆ ಸೇರಿ ಸ್ಪಿಲ್ ಬರ್ಗ್ ನಿರ್ಮಿಸಿದ್ದಾರೆ.
ಚಿತ್ರ ನಿರ್ಮಾಣದಲ್ಲಿ ಅನಿಲ್ ಅಂಬಾನಿ ಡ್ರೀಮ್ ವರ್ಕ್ಸ್ ಸ್ಟುಡಿಯೋಸ್ ಕೂಡ ಪಾಲು ಹಂಚಿಕೊಂಡಿದೆ. 1865 ಜನವರಿಯಲ್ಲಿ ಅಮೆರಿಕ ಸಂವಿಧಾನದ 13ನೇ ಕಾಯ್ದೆಗೆ ತಿದ್ದುಪಡಿಗಾಗಿ ಲಿಂಕನ್ ಏನೆಲ್ಲ ಕಷ್ಟಪಟ್ಟರು ಎಂಬುದು ಇದರಲ್ಲಿ ಪ್ರಮುಖವಾಗಿ ಚರ್ಚಿಸಲ್ಪಟ್ಟಿದೆ. ದೇಶದಲ್ಲಿ ಜೀತ ಪದ್ಧತಿ ನಿರ್ಮೂಲನೆಗೆ ಈ ಮೂಲಕ ಆವರು ಮಾಡಿದ ಪ್ರಯತ್ನಗಳನ್ನು ಅವರ ವಿರೋಧಿಗಳು ಹೇಗೆ ವ್ಯೂಹದ ಮೂಲಕ ಹಣಿಯಲು ಯತ್ನಿಸಿದರು? ಅದಕ್ಕೆ ಎದುರು ನಿಂತ ಲಿಂಕನ್ ಯಾವ ರೀತಿ ಸಮಾಧಾನ ನೀಡಿದರು? ಕೊನೆಗೆ ತಾವು ಅಂದುಕೊಂಡ ಲಕ್ಷ್ಯವನ್ನು ಲಿಂಕನ್ ಹೇಗೆ ಸಾಧಿಸಿದರು? ಎಂಬ ಸೂಕ್ಷ್ಮ ಕಥಾ ಹಂದರವುಳ್ಳ 'ಲಿಂಕನ್' ಚಿತ್ರ ತೆರೆ ಕಂಡಿದೆ.
ಇದರಲ್ಲಿ ಲಿಂಕನ್ ಪಾತ್ರದಲ್ಲಿ ಡೇನಿಯಲ್ ಡೇ-ಲೆವಿನ್ ಅಭಿನಯ ಚಿತ್ರದ ಪ್ರಮುಖ ಆಕರ್ಷಣೆ. ಉತ್ತಮ ನಟ ವಿಭಾಗದಲ್ಲಿ ಅವರು ಕೂಡ ಆಸ್ಕರ್ ನಾಮಿನೇಷನ್ ದಕ್ಕಿಸಿಕೊಂಡಿದ್ದಾರೆ. ಅವರ ಜೊತೆಗೆ ಅಭಿನಯಿಸಿದ ಸಾಲ್ಲಿ ಫೀಲ್ಡ್ ತನ್ನದೇ ಶೈಲಿಯಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಇವರು ಉತ್ತಮ ಸಹಾಯಕ ನಟಿ ವಿಭಾಗದಲ್ಲಿ ನಾಮಿನೇಷನ್ ದಕ್ಕಿಸಿಕೊಂಡಿದ್ದಾರೆ. ಅಲ್ಲದೆ ಉತ್ತಮ ಚಿತ್ರ, ಉತ್ತಮ ನಿರ್ದೇಶಕ (ಸ್ಟೀಪನ್ ಸ್ಪಲ್ ಬರ್ಗ್), ಉತ್ತಮ ಸಹಾಯಕ ನಟ (ಟಾಮಿ ಲೀ ಜೋನ್ಸ್), ಉತ್ತಮ ಛಾಯಾಗ್ರಹಣ (ಜಾನನ್ಜ್ ಕಮಿನ್ಸ್ಕಿ), ಉತ್ತಮ ಕಾಸ್ಟ್ಯೂಮ್ ಡಿಸೈನರ್ (ಜೊನ್ನಾ ಜಾನ್‌ಸ್ಟನ್), ಉತ್ತಮ ಎಡಿಟರ್ (ಮೈಕೆಲ್‌ಖಾನ್), ಉತ್ತಮ ಸಂಗೀತ-ಒರಿಜಿನಲ್ ಸ್ಕೋರ್ (ಜಾನ್ ವಿಲಿಯಮ್ಸ್), ಉತ್ತಮ ಪ್ರೊಡೆಕ್ಷನ್ ಡಿಸೈನ್ (ರಿಕ್ ಕಾರ್ಟರ್- ಸೆಟ್ ಡೆಕೋರೇಷನ್: ಜಿಮ್ ಎರಿಕ್ಸನ್), ಉತ್ತಮ ಸಾಹಿತ್ಯ- ಅಡಾಪ್ಟೆಡ್ ಸ್ಕ್ರೀನ್‌ಪ್ಲೇ (ಕುಷ್ನರ್), ಉತ್ತಮ ಸೌಂಡ್ ಮಿಕ್ಸಿಂಗ್ ವಿಭಾಗಗಳಲ್ಲಿಯೂ ಈ ಚಿತ್ರ ನಾಮಿನೇಷನ್ ಹೊಂದಿದೆ.
ಎರಡನೇ ಚಿತ್ರ
'ಲೈಫ್ ಆಫ್ ಪೈ' ಆಂಗ್ ಲೀ ನಿರ್ದೇಶನದಲ್ಲಿ ಮೂಡಿ ಬಂದಿದೆ. ಪೈ ಪಟೇಲ್ ಎಂಬ ಹದಿನಾರು ವರ್ಷದ ಬಾಲಕನ ಸುತ್ತ ಕಥೆ ಸುತ್ತುತ್ತದೆ. ಇದು ಯಾನ್ ಮಾರ್ಟೆಲ್ ಬರೆದ 'ಲೈಫ್ ಆಫ್ ಪೈ' ಎಂಬ ಕಾದಂಬರಿ ಆಧರಿತ ಚಿತ್ರ. ಡೇವಿಡ್ ಮ್ಯಾಗಿ ಸ್ಕ್ರೀನ್‌ಪ್ಲೇ ಮಾಡಿದ್ದಾರೆ. ಪುಸ್ತಕದ ಕಥೆಯನ್ನು ಆಸಕ್ತಿದಾಯಕವಾಗಿ ನಿರೂಪಿಸಿದ್ದಕ್ಕೆ ಅವರಿಗೆ ಉತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ ವಿಭಾಗದಲ್ಲಿ ಆಸ್ಕರ್ ನಾಮಿನೇಷನ್ ಲಭಿಸಿದೆ. ಇದರಲ್ಲಿ ಭಾರತೀಯ ನಟಿ ಟಬು, ನಟ ಇರ್ಫಾನ್ ಖಾನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪೈ ಪಟೇಲ್‌ಗೆ ತಾಯಿ ಪಾತ್ರದಲ್ಲಿ ಟಬು, ಹಿರಿಯನಾದ ಮೇಲಿನ ಪೈ ಪಟೇಲ್ ಪಾತ್ರದಲ್ಲಿ ಇರ್ಪಾನ್‌ಖಾನ್, ತಂದೆಯ ಪಾತ್ರದಲ್ಲಿ ಅದಿಲ್ ಹುಸೇನ್ ಕಾಣಿಸಿದ್ದಾರೆ.
ಕಥೆಯ ವಿಚಾರಕ್ಕೆ ಬಂದರೆ, ಒಬ್ಬ ಬೆಂಗಾಲಿ ಹುಲಿಯ ಜತೆ ಪೈ ಪಟೇಲ್ ಪೆಸಿಫಿಕ್ ಮಹಾಸಾಗರದಲ್ಲಿ ಒಂದು ಚಿಕ್ಕ ದೋಣಿಯಲ್ಲಿ ನಡೆಸುವ ಬದುಕಿ ಹೋರಾಟ. ತಂದೆ- ತಾಯಿ, ಕೆಲ ಪ್ರಾಣಿಗಳೊಂದಿಗೆ ಹಡಗಿನಲ್ಲಿ ಹೊರಟ ಆತ ಚಂಡಮಾರುತಕ್ಕೆ ಸಿಲುಕಿ ಎಲ್ಲರಿಂದ ದೂರವಾಗುತ್ತಾನೆ. ಆಸರೆಯಾದ ಲೈಫ್‌ಬೋಟ್‌ನಲ್ಲಿ ಒಂದು ಹುಲಿಯೂ ಸೇರಿಕೊಂಡಿರುತ್ತದೆ. ಅದರಿಂದ ತನ್ನನ್ನು ತಾನು ಕಾಪಾಡಿಕೊಳ್ಳುವ ಜತೆಗೆ ಅದರ ಪ್ರಾಣವನ್ನೂ ಉಳಿಸುವ ಸಂಗತಿಗಳು ಆಸಕ್ತಿದಾಯಕ.
ಮೀನು ಹಿಡಿದು ಅದಕ್ಕೆ ಆಹಾರವಾಗಿ ಹಾಕುವುದು, ಮಳೆ ಬಂದಾಗ ಕುಡಿಯುವ ನೀರು ಶೇಖರಿಸುವುದು, ಹುಲಿಯನ್ನು ಮಾತು ಕೇಳಿಸುವುದು... ಹೀಗೆ ಪ್ರತಿ ಸನ್ನಿವೇಶವೂ ಹೃದ್ಯ. ಪೈ ಪಾತ್ರದಲ್ಲಿ ಸೂರಜ್ ಶರ್ಮ ಹಾವ ಭಾವಗಳು ತುಂಬಾ ಗಮನಾರ್ಹ. ಈ ಪಾತ್ರಕ್ಕಾಗಿ 3ಸಾವಿರ ಜನರ ಆಡಿಷನ್ಸ್ ಮಾಡಿ ಸೂರಜ್‌ರನ್ನು ಆಯ್ಕೆ ಮಾಡಿದ್ದರು. ಆಂಗ್ ಲೀ ನಂತರ ಆತನಿಗೆ ಯೋಗ, ಧ್ಯಾನದ ಜೊತೆಗೆ ಸಮುದ್ರದಲ್ಲಿ ಪ್ರಯಾಣ ಹೇಗಿರುತ್ತೆ ಎಂಬ ವಿಚಾರವಾಗಿ ಶಿಕ್ಷಣ ನೀಡಿ ಚಿತ್ರೀಕರಣ ಮಾಡಿದರು. 'ಲೈಫ್ ಆಫ್ ಪೈ'... ಉತ್ತಮ ಚಿತ್ರ, ಉತ್ತಮ ನಿರ್ದೇಶಕ (ಆಂಗ್ ಲೀ), ಉತ್ತಮ ಛಾಯಾಗ್ರಹಣ (ಕ್ಲೌಡಿಯಾ ಮಿರಂಡ), ಉತ್ತಮ ಎಡಿಟಿಂಗ್ (ಟೀಮ್ ಸ್ಕ್ವೀರ್ಸ್), ಉತ್ತಮ ಸಂಗೀತ- ಒರಿಜಿನಲ್ ಸಾಂಗ್ (ಮೈಕೇಲ್ ಡನ್ನಾ/ಬಾಂಬೇ ಜಯಶ್ರೀ), ಉತ್ತಮ ಪ್ರೊಡಕ್ಷನ್ ಡಿಸೈನ್ (ಡೇವಿಡ್ ಗ್ರಾವ್‌ಮಾನ್) ಸೆಟ್ ಡೆಕೊರೇಷನ್(ಅನ್ನಾ ಪಿನ್ನಾಕ್) ಜೊತೆಗೆ ಸೌಂಡ್ ಎಡಿಟಿಂಗ್, ಸೌಂಡ್ ಮಿಕ್ಸಿಂಗ್, ಲಿಷುವಲ್ ಎಫೆಕ್ಟ್ಸ್, ಅಡಾಪ್ಟೆಡ್ ಸ್ಕ್ರೀನ್‌ಪ್ಲೇ ವಿಭಾಗಗಳಲ್ಲಿಯೂ ಆಸ್ಕರ್ ಪೈಪೋಟಿಯಲ್ಲಿ ನಿಂತಿದೆ.
ಸಾವಿರ ಮಂದಿಯಿಂದ ನಿರ್ಧಾರ!
ವಿಶ್ವದ ಶ್ರೇಷ್ಠ ಚಿತ್ರ ಯಾವುದು ಎನ್ನುವುದನ್ನು ನಿರ್ಧರಿಸುವವರು ಎಷ್ಟು ಜನ ಗೊತ್ತಾ? 6,000 ಮಂದಿ! ಇವರೆಲ್ಲ ವಿವಿಧ ದೇಶಗಳ ನಟ, ನಿರ್ದೇಶಕ, ಬರಹಗಾರರ, ತಂತ್ರಜ್ಞರು. ತಮ್ಮತಮ್ಮ ವಿಭಾಗದಲ್ಲಿ ನಾಮನಿದೇಶನಗೊಂಡವರನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ. ಅತ್ಯುತ್ತಮ ಸಿನಿಮಾ (ವಿದೇಶಿ ಭಾಷೆ ಚಿತ್ರ ಹೊರತುಪಡಿಸಿ) ಆಯ್ಕೆಗಾಗಿ ಎಲ್ಲರೂ ಮತದಾನ ಮಾಡುತ್ತಾರೆ. ಗರಿಷ್ಠ ಮತ ಪಡೆಯುವ ಚಿತ್ರಕ್ಕೆ ಪ್ರಶಸ್ತಿ. ಈ ಸದಸ್ಯರಲ್ಲಿ ಹೆಚ್ಚಿನವರು ಪ್ರತಿವರ್ಷವೂ ಆಯ್ಕೆ ಸಮಿತಿಗೆ ಆಯ್ಕೆಯಾಗುತ್ತಾರೆ ಎನ್ನುವ ಆರೋಪವೂ ಇದೆ. ಅತ್ಯುತ್ತಮ ನಿರ್ದೇಶಕ ಯಾರು ಎನ್ನುವುದನ್ನು ಒಂದಷ್ಟು ನಿರ್ದೇಶಕರೇ ನಿರ್ಧರಿಸುವುದರಿಂದ 'ಲಾಬಿ' ಕಷ್ಟವೇನಲ್ಲ!
ಲಾಬಿಯೇ ಮುಖ್ಯ
ಮೂರೇ ಮೂರು ವರ್ಷ ಹಿಂದೆ. 2010ರ ನವೆಂಬರ್. 2011ರ ಆಸ್ಕರ್ ಪ್ರಶಸ್ತಿ ಕಾವು ಮೆಲ್ಲಗೆ ಏರುತ್ತಿತ್ತು. ವಾಲ್ಟ್ ಡಿಸ್ನಿ ಸ್ಟುಡಿಯೋ ರಿಚ್ ರಾಸ್ ಘಂಟಾಘೋಷವಾಗಿ ಹೇಳಿಬಿಟ್ಟರು, "ನಮ್ಮ 'ಟಾಯ್ ಸ್ಟೋರಿ 3' ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಳ್ಳಲು ಅಗತ್ಯವಿರುವ ಲಾಬಿ ಮಾಡುತ್ತೇವೆ!" ಅಚ್ಚರಿ ಎಂಬಂತೆ ಆ ವರ್ಷದ ಐದು ವಿಭಾಗಗಲ್ಲಿ ಸಿನಿಮಾ ನಾಮನಿರ್ದೇಶನಗೊಂಡಿತು. ತಮಗೆ ಬೇಕಾದುದನ್ನು ಪಡೆಯುವಲ್ಲಿ ರಾಸ್ ಯಶಸ್ವಿಯಾಗಿದ್ದರು! ನಿಸ್ಸಂದೇಹವಾಗಿ ಅದು ಅತ್ಯುತ್ತಮ ಸಿನಿಮಾ. ಆದರೆ ಆಸ್ಕರ್‌ಗೆ ನಾಮಿನೇಟ್ ಆಗುವಲ್ಲಿ 'ಲಾಬಿ' ಪಾತ್ರ ವಹಿಸಿತ್ತು ಎನ್ನುವುದೂ ಅಷ್ಟೇ 'ಬಹಿರಂಗ ರಹಸ್ಯ'.
ಅಮೆರಿಕದ ಅಕಾಡೆಮಿ ಆಫ್ ಮೋಶನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‌ನ ನೀಡುವ ಜಗತ್ತಿನ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿ 'ಆಸ್ಕರ್' ಪರಂಪರೆ ಶುರುವಾದದ್ದು 1929ರಲ್ಲಿ. ವಿವಾದಗಳ ಪರ್ವ ಶುರುವಾದದ್ದೂ ಹೆಚ್ಚುಕಡಿಮೆ ಆಗಿನಿಂದಲೇ. 1935ರಲ್ಲಿಯೇ 'ದಿ ಇನ್‌ಫಾರ್ಮರ್' ಚಿತ್ರದ ಕಥೆಗಾರ ಡಲ್ಲೆ ನಿಕೋಲಸ್ ಪ್ರಶಸ್ತಿ ಪ್ರದಾನ ಸಮಾರಂಭ ಬಹಿಷ್ಕರಿಸಿದ್ದರು. 1970ರಲ್ಲಿ ಜಾರ್ಜ್ ಸಿ. ಸ್ಕಾಟ್ ತನಗೆ ನೀಡಿದ್ದ 'ಅತ್ಯುತ್ತಮ ನಟ' ಪ್ರಶಸ್ತಿ ತಿರಸ್ಕರಿಸಿದ್ದರು. ಲಾಗಾಯ್ತಿನಿಂದಲೂ ಆಸ್ಕರ್ ಎಂಬ ಕಪ್ಪುಸುಂದರಿಯ ಬಗ್ಗೆ ವಿವಾದ, ಟೀಕೆಗಳು ಇದ್ದೇಇವೆ.
ಇತ್ತೀಚಿನ ಆರೋಪ ಎಂದರೆ ಆಸ್ಕರ್ ಗೆಲ್ಲುವಲ್ಲಿ ಚಿತ್ರದ ಗುಣಮಟ್ಟಕ್ಕಿಂತ 'ಮಾರ್ಕೆಟಿಂಗ್' ಮುಖ್ಯವಾಗುತ್ತಿದೆ ಎನ್ನುವುದು. ಹೀಗಾಗಿಯೇ ಪಾಶ್ಚಾತ್ಯ ರಾಷ್ಟ್ರಗಳ, ವಿಶೇಷವಾಗಿ ಇಂಗ್ಲಿಷ್ ಸಿನಿಮಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿ ಗೆಲ್ಲುತ್ತಿವೆ; ಲಾಬಿ ಮತ್ತು 'ಮಾರ್ಕೆಟಿಂಗ್' ಮಾಡುವಲ್ಲಿ ಸೋಲುತ್ತಿರುವುದರಿಂದ ಭಾರತೀಯ ಸಿನಿಮಾಗಳೂ ಸೇರಿದಂತೆ ಏಷ್ಯದ ಚಿತ್ರಗಳು ಗುಣಮಟ್ಟದಲ್ಲಿ ಚೆನ್ನಾಗಿದ್ದರೂ, ಪ್ರಶಸ್ತಿಗೆ ಅರ್ಹವಾಗಿದ್ದರೂ ನಾಮನಿರ್ದೇಶನದ ಅರ್ಹತೆಗೂ ಭಾಜನವಾಗುತ್ತಿಲ್ಲ ಎನ್ನುವುದು ಪ್ರಮುಖವಾಗಿ ಕೇಳಿಬರುತ್ತಿರುವ ಮಾತು. ಈಗೀಗ ಪ್ರಶಸ್ತಿ ಗೆಲ್ಲುವ ಸಿನಿಮಾಗಳ ಬಗ್ಗೆ ಭಾರಿ ವಹಿವಾಟಿನ ಬೆಟ್ಟಿಂಗ್ ಕೂಡ ಸಾಮಾನ್ಯ.
- ಅಶ್ವತ್ಥನಾರಾಯಣ ಎಲ್.
sathyajns@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


