ಸಾಪ್ತಾಹಿಕಪ್ರಭ

ಸಾಹಿತ್ಯ ಬಿಸಿನೆಸ್ಸು (ವ್ಯಂಜನ)

Published On :



ಜೈಪುರ ಸಾಹಿತ್ಯೋತ್ಸವ, ಧಾರವಾಡ ಸಾಹಿತ್ಯ ಸಂಭ್ರಮ ಎರಡೂ ಮುಗಿದಿವೆ. ಎರಡರಿಂದಲೂ ನಾವು ಗಳಿಸಿದ್ದೆಷ್ಟು? ಕಳೆದುಕೊಂಡದ್ದೆಷ್ಟು? ಪ್ರಗತಿಪರರ ಹೀರೋ ಆಶಿಶ್ ನಂದಿ ವಿಲನ್ ಆದದ್ದು, ಸಂಘಟಕರ ಮೇಲೆ ಕೇಸು ಬಿದ್ದದ್ದು ಜೈಪುರ ಮೇಳದ ಫಲಶ್ರುತಿ. ಘಟಾನುಘಟಿಗಳೆಲ್ಲಾ 'ಸಂಭ್ರಮ'ದಲ್ಲಿ ಮಿಂಚಿ, ಭಿನ್ನ ಧ್ವನಿಗಳು ಹತಾಶೆಯಲ್ಲಿ ಅದ್ದಿಹೋಗುವಂತೆ ಮಾಡಿದ್ದು ಧಾರವಾಡದ ಫಲಿತ. ಒಟ್ಟಾರೆಯಾಗಿ, ಸಾಹಿತ್ಯದಲ್ಲಿ ಸಕ್ರಿಯರಾಗಿರುವವರೆಲ್ಲ ತಮ್ಮ ತಾತ್ತಿ ್ವಕ ನಿಲುವುಗಳನ್ನು ಮರು ವಿಮರ್ಶೆಗೊಳಪಡಿಸುವಂತೆ ಎರಡೂ ಪ್ರೇರಣೆ ನೀಡಿದವು ಎನ್ನೋಣವೆ?
ಭಾರತದಲ್ಲಿ ಸಾಹಿತ್ಯ, ಗಳಿಕೆಯ ಬಾಬ್ತಲ್ಲ ಎಂಬ ಮಾತಿದೆ. ಆದರೆ ಜೈಪುರ ಮೇಳ ಯಶಸ್ವಿಯಾಗುತ್ತಿರುವಂತೆ, ಅಂಥದೇ ಮೇಳಗಳು ದೇಶದೆಲ್ಲೆಡೆ ಚಿಗುರಿಕೊಳ್ಳುತ್ತಿವೆ. ನಿಖರ ಲೆಕ್ಕ ಸಿಗುತ್ತಿಲ್ಲವಾದರೂ, 25ಕ್ಕೂ ಹೆಚ್ಚು ಇಂಥ ಮೇಳಗಳಾಗುತ್ತಿವೆ.
ದೆಹಲಿ, ಮುಂಬಯಿ, ಕೋಲ್ಕತಾ, ಚೆನ್ನೈ, ಆಗ್ರಾ, ಭುವನೇಶ್ವರ, ತಿರುವನಂತಪುರಂಗಳ ಮಾತು ಬಿಡಿ, ನಕ್ಸಲ್ ಪೀಡಿತ ಪ್ರದೇಶ ದಾಂತೆವಾಡದಲ್ಲೂ ಕಳೆದ ವರ್ಷ ಸಾಹಿತ್ಯೋತ್ಸವ ಆಗಿದೆ ಎಂದರೆ ನಂಬ್ತೀರಾ? ಸಾಹಿತ್ಯ ಎಲ್ಲರಿಗೂ ಸಲ್ಲಬೇಕು ಎಂಬ ಮಾತನ್ನು ಒಪ್ಪುವ, ಆದರೆ ಖಾಸಗಿ ಸಾಹಿತ್ಯೋತ್ಸವಗಳು 'ಎಲ್ಲರಿಗೂ ಸಲ್ಲುವಂ'ಥ ಉತ್ಸವಗಳಾಗಿ ಉಳಿದಿಲ್ಲ.
ಅಂದರೇನರ್ಥ? ಸಾಹಿತ್ಯದಿಂದ ಲಾಭ ಮಾಡಿಕೊಳ್ಳುತ್ತಿರುವವರು ಯಾರೋ ಇದ್ದಾರೆ. ಅವರು ಬಹುಶಃ ನಿಜವಾದ ಸಾಹಿತಿಗಳಲ್ಲ, ಓದುಗರೂ ಆಗಿರಲಿಕ್ಕಿಲ್ಲ. ಲಾಭಕೋರರು ಬೇರೆಲ್ಲೋ ಇದ್ದಾರೆ. ಅವರು ನಮ್ಮ ಸಾಹಿತ್ಯವನ್ನೂ 'ನಿರ್ದೇಶಿಸುತ್ತಿದ್ದಾರೆ'.
=
ಇ ಬುಕ್, ಆ ಬುಕ್
ಇ-ಬುಕ್‌ಗಳು ಬಂದಾಗ, ಇನ್ನು ಮುದ್ರಿತ ಪುಸ್ತಕಗಳ ಯುಗ ಮುಗಿಯಿತೆಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದು ನಿಜವಲ್ಲ ಎಂಬುದು ಕಳೆದ ವರ್ಷದ ಮಟ್ಟಿಗಂತೂ ಸಾಬೀತಾಗಿದೆ. ಅಮೆರಿಕದ ಪ್ಯೂ ಅಧ್ಯಯನ ಸಂಸ್ಥೆ ಓದುಗರ ಮೇಲೆ ನಡೆಸಿದ ಸರ್ವೆಯಿಂದ ಗೊತ್ತಾದದ್ದು: 30 ಶೇಕಡ ಓದುಗರು ಮಾತ್ರ ಕಳೆದೊಂದು ವರ್ಷದಲ್ಲಿ ಕನಿಷ್ಠ ಒಂದು ಇ-ಬುಕ್ ಅನ್ನು ಓದಿದ್ದಾರೆ. ಉಳಿದವರು ಮುದ್ರಿತ ಪುಸ್ತಕಗಳ ಮೊರೆ ಹೋಗಿದ್ದಾರೆ. ಕಿಂಡಲ್‌ನಂತಹ ಇ-ರೀಡರ್‌ಗಳ ಮಾರಾಟ 36 ಶೇಕಡ ಕುಸಿದಿದೆ. ಇ-ಬುಕ್‌ಗಳ ಸೇಲು ಕೂಡ 34 ಶೇಕಡದಷ್ಟು ಇಳಿದಿದೆ. ಇದಕ್ಕೆ ಟ್ಯಾಬ್ಲೆಟ್‌ಗಳ ಮಾರಾಟ ಏರಿಕೆ ಕೂಡ ಒಂದು ಕಾರಣ. ಕೃತಿಗಳನ್ನು ಟ್ಯಾಬ್ಲೆಟ್‌ಗಳಿಗೆ ಡೌನ್‌ಲೋಡ್ ಮಾಡಿಕೊಂಡು ಓದುವವರ ಸಂಖ್ಯೆ ಏರುತ್ತಿದೆ. ಆದರೆ ಪುಸ್ತಕಗಳ ಮಾರಾಟದಲ್ಲಿ ಯಾವ ಇಳಿಕೆಯೂ ಆಗಿಲ್ಲ. ಬದಲು ಹೆಚ್ಚಳವೇ ಆಗುತ್ತಿದೆ. ಅದು ಒಳ್ಳೆಯ ಸೂಚನೆ.
=
ಶರತ್ಕಾಲ

ಇಷ್ಟರಲ್ಲೇ ನಾವು ಶೀತಲ
ಛಾಯೆಯಲಿ ಹುದುಗಲಿದ್ದೇವೆ
ಬೇಸಿಗೆಯ ನಿಬ್ಬೆರಗು
ಸಂಜೆಗಳು ಮಾಯವಾಗಲಿವೆ
ಸತ್ತ ಕೊಂಬೆಗಳು ಬೀಳುವ
ಸದ್ದುಗಳು ಕೇಳಿಸುತ್ತಿವೆ
ಕೆಳಗೆ ಅಮೃತಶಿಲೆಗಳ ಮೇಲೆ,
ಹುಲ್ಲುಹಾಸಿನ ಮೇಲೆ

ಯಾರೋ ಶವಪೆಟ್ಟಿಗೆಯನು
ಅವಸರದಿಂದ
ಕೆಳಗಿಳಿಸುತ್ತಿದ್ದಾರೆ. ಯಾರಿಗೆ?
ನಿನ್ನೆ ಬೇಸಿಗೆ, ಇಂದು ಶರತ್ಕಾಲ
ವಿದಾಯದ ಪ್ರತಿಧ್ವನಿ
ಅನುರಣಿಸುತ್ತಿದೆ ಹೀಗೆ.
- ಚಾರ್ಲ್ಸ್ ಬೋದಿಲೇರ್



= -ಕೇರ
harishkera@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.