ನಾವು ಹೇಗೆ ಬದುಕುತ್ತಿದ್ದೇವೆ? (ಹರಿವ ನದಿಯಂತೆ)
ಹಾಲಿಗೆ ಪರ್ಯಾಯವಾಗಬಹುದಾದಂಥ ಒಂದು ಉತ್ಪನ್ನದ ಮೂರು ಲೀಟರ್ ನನಗೆ ಅಂಚೆ ಮೂಲಕ ಬಂತು. ಈ ಹೊಸ ಆಹಾರೋತ್ಪನ್ನದಲ್ಲಿ ಹೂಡಿಕೆ ಮಾಡಲು ನನಗೆ ಆಸಕ್ತಿ ಇದೆಯೇ ಎಂದು ನಾರ್ವೆಯ ಒಂದು ಕಂಪನಿ ತಿಳಿಯಬಯಸಿತ್ತು. ಏಕೆಂದರೆ ತಜ್ಞರಾದ ಡೇವಿಡ್ ರೀಟ್ಜ್ ಪ್ರಕಾರ 'ಎಲ್ಲ ದನಗಳ ಹಾಲಿನಲ್ಲಿ ಇರುವುದು 59 ಸಕ್ರಿಯ ಹಾರ್ಮೋನುಗಳು, ಅಧಿಕ ಪ್ರಮಾಣದ ಕೊಬ್ಬು, ಕೊಲೆಸ್ಟರಾಲ್, ಡಯಾಕ್ಸಿನ್‌ಗಳು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು'
ನನಗೆ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರ ನೆನಪಾಯಿತು. ಚಿಕ್ಕವನಿದ್ದಾಗ ನನ್ನ ಎಲುಬುಗಳಿಗೆ ಅದು ತುಂಬಾ ಒಳ್ಳೆಯದೆಂದು ಅಮ್ಮ ಹೇಳುತ್ತಿದ್ದಳು. ಆದರೆ ಈ ತಜ್ಞರಾದರೋ ನನಗಿಂತಲೂ ಮುಂದೆ ಹೋಗಿ ಹೇಳುತ್ತಾರೆ 'ಕ್ಯಾಲ್ಸಿಯಂ? ದನಗಳಿಗೆ ತಮ್ಮ ದೊಡ್ಡ ಎಲುಬುಗಳಿಗೆ ಬೇಕಾಗುವ ಕ್ಯಾಲ್ಸಿಯಂ ಎಲ್ಲಿಂದ ಸಿಗುತ್ತದೆ? ಹೌದು, ಸಸ್ಯಗಳಿಂದ!' ಸಹಜವಾಗಿಯೇ ಈ ಹೊಸ ಉತ್ಪನ್ನವೂ ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿದೆ. ಜಗತ್ತಿನಾದ್ಯಂತ ಹರಡಿಕೊಂಡಿರುವ ವಿವಿಧ ಸಂಸ್ಥೆಗಳು ಕೈಗೊಂಡ ಲೆಕ್ಕವಿಲ್ಲದಷ್ಟು ಅಧ್ಯಯನಗಳಿಂದ ಹಾಲು ಬಳಕೆಗೆ ಯೋಗ್ಯವಲ್ಲ ಎನ್ನುವುದು ಸಾಬೀತಾಗಿದೆ.
ಮತ್ತೆ ಪ್ರೋಟೀನ್‌ಗಳು? ಅವರೆನ್ನುತ್ತಾರೆ 'ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೊಟೀನ್ ಇರುವುದರಿಂದ ಹಾಲನ್ನು ದ್ರವರೂಪದ ಮಾಂಸ ಎಂದು ಭಾವಿಸಬಹುದು. ಆದರೆ ವಾಸ್ತವವಾಗಿ ಇದು ಕ್ಯಾಲ್ಸಿಯಂ ದೇಹದಿಂದ ಸೋರಿ ಹೋಗುವಂತೆ ಮಾಡುವ ಪ್ರೊಟೀನ್, ಇದರಿಂದಾಗಿಯೇ ಅಧಿಕ ಪ್ರೊಟೀನ್‌ಯುಕ್ತ ಆಹಾರವನ್ನು ಸೇವಿಸುವ ದೇಶಗಳಲ್ಲಿ ಓಸ್ಟಿಯೋಪ್ರೋಸಿಸ್ ಗರಿಷ್ಠ ಪ್ರಮಾಣದಲ್ಲಿದೆ'
ಅದೇ ಮಧ್ಯಾಹ್ನ ನನ್ನ ಪತ್ನಿ ಅಂತರ್ಜಾಲದಲ್ಲಿ ನೋಡಿದ ಲೇಖನ ಒಂದನ್ನು ನನಗೆ ಮಿಂಚಂಚೆಯಲ್ಲಿ ಕಳುಹಿಸಿದಳು.
'ಈಗಿನ 40ರಿಂದ 60 ವರ್ಷ ವಯಸ್ಸಿನವರು ಹಿಂದೆ ಸೀಟ್‌ಬೆಲ್ಟ್, ತಲೆಗೆ ಆಧಾರ, ಏರ್‌ಬ್ಯಾಗ್ ಇಲ್ಲದೆ ಕಾರುಚಲಾಯಿಸುತ್ತಿದ್ದರು, ಮಕ್ಕಳು ಹಿಂಬದಿಯ ಆಸನದಲ್ಲಿ ಕುಳಿತು ಗಮ್ಮತ್ತು ಮಾಡುತ್ತಿದ್ದರು. ನಾನು ಸಣ್ಣವನಿದ್ದಾಗ ನಾವು ನಮ್ಮದೇ ಆದ ತಳ್ಳುಗಾಡಿಯನ್ನು ಮಾಡುತ್ತಿದ್ದೆವು. ಕಬ್ಬಿಣದ ಎರಡು ಗಾಲಿಗಳ ಒಳಗೆ ಬಾಲ್ ಬೇರಿಂಗ್‌ಗಳನ್ನು ಸಿಕ್ಕಿಸಿ ಈ ತಳ್ಳುಗಾಡಿಯನ್ನು ಮಾಡಲಾಗುತ್ತಿತ್ತು. ನಮ್ಮ ಪಾದಗಳನ್ನೇ ಬ್ರೇಕ್‌ಗಳಂತೆ ಉಪಯೋಗಿಸುತ್ತ ಗುಡ್ಡದಿಂದ ಕೆಳಗೆ ಓಡುತ್ತಿದ್ದವು. ಕೆಲವೊಮ್ಮೆ ಕೆಳಗೆ ಬಿದ್ದು ನೋವಾದರೂ ಅಧಿಕ ವೇಗದಲ್ಲಿ ಚಲಿಸುವ ನಮ್ಮ ಸಾಹಸದ ಬಗ್ಗೆ ಹೆಮ್ಮೆಪಡುತ್ತಿದ್ದೆವು.
ಆಗ ಮೊಬೈಲ್ ದೂರವಾಣಿಗಳಿರಲಿಲ್ಲ. ಆದುದರಿಂದ ಪೋಷಕರಿಗೆ ನಾವು ಎಲ್ಲಿದ್ದೇವೆಂದು ತಿಳಿಯಲು ಸಾಧ್ಯವಿರಲಿಲ್ಲ. ಮಕ್ಕಳಾದುದರಿಂದ ನಾವು ಯಾವಾಗಲೂ 'ಸರಿ' ಆಗಿರುತ್ತಿರಲಿಲ್ಲ ಮತ್ತು ಎಂದಾದರೊಮ್ಮೆ ನಮಗೆ ಶಿಕ್ಷೆಯನ್ನೂ ವಿಧಿಸಲಾಗುತ್ತಿತ್ತು. ಆದರೆ ತಾನು 'ತಿರಸ್ಕೃತ' ಅಥವಾ 'ಪ್ರೀತಿಸಲ್ಪಡದವನು' ಎಂಬ ಭಾವನೆಯಿಂದ ನಲುಗಿ ನಾವು ಎಂದೂ ಮಾನಸಿಕ ಸಮಸ್ಯೆಗಳಿಗೆ ತುತ್ತಾಗುತ್ತಿರಲಿಲ್ಲ. ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಗಳೂ, ಕೆಟ್ಟ ವಿದ್ಯಾರ್ಥಿಗಳೂ ಇದ್ದರು. ಒಳ್ಳೆಯ ವಿದ್ಯಾರ್ಥಿಗಳು ಮೇಲಿನ ತರಗತಿಗೆ ಹೋಗುತ್ತಿದ್ದರು, ಕೆಟ್ಟ ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಆದರೆ ಕೆಟ್ಟ ವಿದ್ಯಾರ್ಥಿಗಳ ಬಗ್ಗೆ ಅಧ್ಯಯನ ನಡೆಸಲು ತಜ್ಞರನ್ನು ಕರೆಸುತ್ತಿರಲಿಲ್ಲ. ಮತ್ತೊಂದು ವರ್ಷ ಅದೇ ತರಗತಿಯಲ್ಲಿ ಕಲಿಯಬೇಕಾಗುತ್ತಿತ್ತು, ಅಷ್ಟೇ.
ಹೀಗಿದ್ದರೂ ಒಂದಿಷ್ಟು ತರಚಿಕೊಂಡ ಮಂಡಿಗಳೊಂದಿಗೆ ನಾವು ಬದುಕುಳಿದೆವು. ಮಾತ್ರವಲ್ಲ, ಆ ಗತಕಾಲವನ್ನು ಭಾವುಕವಾಗಿ ಮೆಲುಕಾಡುತ್ತೇವೆ'
ಇನ್ನು ನನ್ನ ವಿಷಯಕ್ಕೆ ಮರಳೋಣ. ಮಾರಕವಾದ ಹಾಲಿಗೆ ಪರ್ಯಾಯವಾದ ಆ ಸೋಜಿಗದ ಹೊಸ ಉತ್ಪನ್ನದ ರುಚಿ ನೋಡಲು ನಾನು ನಿರ್ಧರಿಸಿದೆ. ಒಂದು ಸಲ ಬಾಯಿಗೆ ಹಾಕಿಕೊಂಡೆನಷ್ಟೇ. ಮುಂದೆ ತಿನ್ನಲಾಗಲಿಲ್ಲ. ನನ್ನ ಹೆಂಡತಿ ಮತ್ತು ಕೆಲಸದವಳಿಗೆ ಅದು ಏನೆಂದು ಹೇಳದೆ ರುಚಿ ನೋಡುವಂತೆ ಹೇಳಿದೆ. ಜೀವಮಾನದಲ್ಲಿಯೇ ಅಷ್ಟು ವಾಕರಿಕೆ ತರುವಂಥದ್ದನ್ನು ತಾವು ತಿಂದಿಲ್ಲವೆಂದು ಅವರಿಬ್ಬರೂ ಹೇಳಿದರು.
ನಾನು ಭವಿಷ್ಯದ ಮಕ್ಕಳ ಬಗ್ಗೆ ಚಿಂತಿತನಾಗಿದ್ದೇನೆ: ಕಂಪ್ಯೂಟರ್ ಆಟಗಳು, ಮೊಬೈಲ್ ಫೋನಿನೊಂದಿಗೆ ತಿರುಗುವ ಅವರ ಹೆತ್ತವರು, ಪ್ರತಿಯೊಂದು ಸೋಲನ್ನು ಅರಗಿಸಿಕೊಳ್ಳಲು ಅವರಿಗೆ ಸಹಾಯ ಮಾಡುವ ಮನೋಚಿಕಿತ್ಸಕರು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅವರನ್ನು ಕಾಡುವ ಕೊಲೆಸ್ಟರಾಲ್, ಅಸ್ಥಿಭಿದುರತೆ, 59 ಸಕ್ರಿಯ ಹಾರ್ಮೋನುಗಳು ಮತ್ತು ವಿಷಕಾರಕಗಳಿಂದ ಕಾಪಾಡಲು ಅವರಿಗೆ ಬಲವಂತವಾಗಿ ಕುಡಿಸಲಾಗುವಈ 'ಚಮತ್ಕಾರಿ ದ್ರವ!'
ಅವರು ಸಮತೂಕದವರೂ, ತುಂಬಾ ಆರೋಗ್ಯವಂತರೂ ಆಗುವರು ಮತ್ತು ದೊಡ್ಡವರಾದ ಮೇಲೆ ಅವರು ಹಾಲನ್ನು ಕಂಡುಹಿಡಿಯುವರು (ಅಷ್ಟರೊಳಗೆ ಅದು ನ್ಯಾಯ ಸಮ್ಮತವಾಗದಿರಲೂಬಹುದು). 2050ರಲ್ಲಿ ಬಹುಶಃ ಯಾರಾದರೂ ವಿಜ್ಞಾನಿ, ಜನರು ಅನಾದಿಕಾಲದಿಂದ ಕುಡಿಯುತ್ತಿದ್ದದ್ದನ್ನು ಸಂರಕ್ಷಿಸುವ ಕೆಲಸ ಕೈಗೊಳ್ಳಲೂಬಹುದು. ಅಥವಾ ಹಾಲು ಮಾದಕವಸ್ತು ವ್ಯಾಪಾರಿಗಳಲ್ಲಿ ಮಾತ್ರ ಸಿಗಬಹುದೇನೊ.
= -ಪೌಲೋ ಕೊಯೆಲೋ
= ಅನು: ನಂದಿನಿ ಡಿ.ಕಾಮತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

