ಚಿತ್ರವಸಂತ
ಬಣ್ಣಬಣ್ಣದ ಲೋಕ ಬಣ್ಣಿಸಲು ಸಾಲದು

ಚಿತ್ರಪ್ರೇಮಿಗಳಿಗೆ ಚಲನಚಿತ್ರೋತ್ಸವ, ಅಕ್ಷರಪ್ರೇಮಿಗಳಿಗೆ ಸಾಹಿತ್ಯೋತ್ಸವ ಇರುವಂತೆ, ಬೆಂಗಳೂರಿನ ಕಲಾಪ್ರೇಮಿಗಳಿಗೆ ಚಿತ್ರಸಂತೆ. ಜನವರಿ ತಿಂಗಳ ಕೊನೆಯ ಭಾನುವಾರ ನಡೆದ ಚಿತ್ರಸಂತೆಗೆ ಕಲಾವಿದರ, ಕಲಾಪ್ರೇಮಿಗಳ ದಂಡೇ ಹರಿದು ಬಂದಿತ್ತು.
ತೈಲಚಿತ್ರ, ಜಲವರ್ಣ, ಆ್ಯಕ್ರಿಲಿಕ್, ಕೊಲಾಜ್, ಲಿಥೋಗ್ರಾಫ್, ಅಬ್‌ಸ್ಟ್ರಾಕ್ಟ್, ಸಾಂಪ್ರದಾಯಿಕ ಮೈಸೂರು ಶೈಲಿ, ತಂಜಾವೂರು, ರಾಜಸ್ಥಾನಿ, ವರ್ಲಿ, ಮಧುಬನಿ ಶೈಲಿ ಜತೆಗೆ ಗಾಜಿನ ಮೇಲೆ ಬಿಡಿಸಿದ ಕಲಾಕೃತಿಗಳು... ಗ್ರಾಮೀಣ ಜನಜೀವನ, ಪ್ರಾಕೃತಿಕ ಸೌಂದರ್ಯ, ನೆಟ್, ಬೋಲ್ಟ್, ಗೇರ್‌ಬಾಕ್ಸ್‌ಗಳನ್ನು ಬಳಸಿದ ಕಲಾಕೃತಿ, ಸಾಮಾಜಿಕ ಸಂದೇಶಗಳನ್ನು ಸಾರುವ ರಂಗ್‌ಬಿರಂಗಿ ಚಿತ್ರಗಳು... ಮನಸನ್ನು ಸೂರೆಗೊಂಡವು. ಒಡೆದ ಗಾಜಿನ ಬಳೆಗಳಿಂದ ಮಾಡಿದ ಕಲಾಕೃತಿ, ಬಾಟಲಿ, ರೀಫಿಲ್‌ಗಳ ಮೇಲೆ ಬಿಡಿಸಿದ ಚಿತ್ತಾರಗಳು, ಬರೀ ಬೆಂಕಿಕಡ್ಡಿಯಿಂದ ತಯಾರಿಸಿದ ಮೈಸೂರು ಅರಮನೆ, ಮಾಡರ್ನ್ ಸ್ಟುಡಿಯೋದಲ್ಲಿ ಗಾಂಧಿ ವೇಷಧಾರಿಯೊಂದಿಗೆ ನಿಂತು ಫೋಟೋ ತೆಗೆಯುವ ಸಂಭ್ರಮ... ಮನದಲ್ಲಿ ಉಳಿಯುವ ಬಿಂಬಗಳು.
ಇವರೇನಂತಾರೆ?
ಹಲವಾರು ಕಲಾವಿದರು ಮಹಾನ್ ಕಲಾವಿದರ ಚಿತ್ರಗಳನ್ನು ನಕಲು ಮಾಡಿದ್ದಾರೆ. ಒಂದು ಚಿತ್ರದಿಂದ ಸ್ಫೂರ್ತಿ ಪಡೆಯುವುದು ಒಳ್ಳೆಯ ಬೆಳವಣಿಗೆ. ಆದರೆ ನಕಲು ಮಾಡುವುದರಿಂದ ಅವರ ಕ್ರಿಯೇಟಿವಿಟಿ ಬೆಳಕಿಗೆ ಬರಲ್ಲ.
-ರವಿಕುಮಾರ್ ಕಾಶಿ, ಕಲಾವಿಮರ್ಶಕ
ಬೆಂಗಳೂರಿನಲ್ಲಿ ಕಲಾಪ್ರೇಮಿಗಳ ಸಂಖ್ಯೆ ಜಾಸ್ತಿಯಾಗಿದೆ. ಅದೇ ವೇಳೆ ಆ್ಯಕ್ಟಿವ್ ಗ್ಯಾಲರಿಗಳ ಸಂಖ್ಯೆಯೂ ಬೆಳೆಯುತ್ತಿದೆ. ಇದೊಂದು ಉತ್ತಮ ಬೆಳವಣಿಗೆ. ಚಿತ್ರ ಸಂತೆಯನ್ನು ಆಯೋಜಿಸುವ ಮೂಲಕ ನಾವು ಕಲೆಯನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುತ್ತಿದ್ದೇವೆ.
-ಕೃಷ್ಣರಾಜೇಂದ್ರ ಕುಮಾರ್,
ಪೇಂಟಿಂಗ್ ಪ್ರಾಧ್ಯಾಪಕ, ಚಿತ್ರಕಲಾ ಪರಿಷತ್ತು
ಭಾರತದ ವೈವಿಧ್ಯಮಯ ಶೈಲಿಯ ಪೇಂಟಿಂಗ್‌ಗಳ ಜತೆ ಭಾರತೀಯ ಇತಿಹಾಸವೂ ಮಿಳಿತಗೊಂಡಿರುವುದರಿಂದ ಇಲ್ಲಿನ ಸಂಸ್ಕೃತಿಯ ಬಗ್ಗೆ ಅರಿಯಲು ಇದು ಸಹಕಾರಿ. ಜಪಾನ್‌ನಲ್ಲಿ ಪೇಂಟಿಂಗ್‌ಗಳನ್ನು ಮ್ಯೂಸಿಯಂನಲ್ಲಿ ಮಾತ್ರ ಕಾಣಬಹುದು. ಆದರೆ ಭಾರತದಲ್ಲಿ ಎಲ್ಲೆಲ್ಲೂ ಕಲಾಕೃತಿಗಳನ್ನು ಕಾಣಬಹುದು.
-ಮಗುಮಿ(ಜಪಾನ್), ಚಿತ್ರಕಲಾ ವಿದ್ಯಾರ್ಥಿ
ಚಿತ್ರಸಂತೆಯಲ್ಲಿ ವಿವಿಧ ಕಲಾಕೃತಿಗಳನ್ನು ಒಟ್ಟಿಗೆ ಒಂದೇ ಪ್ಲಾಟ್‌ಫಾರಂನಲ್ಲಿ ವೀಕ್ಷಿಸಲು ಹಾಗು ಅವುಗಳ ಬಗ್ಗೆ ಅರಿಯಲು ಸಾಧ್ಯವಾಗುತ್ತದೆ. ಕಲಾವಿದರಿಗೆ ಇದೊಂದು ಉತ್ತಮ ಅನುಭವ.
-ರಾಧಿಕಾ ಪ್ರಭು,
ಹವ್ಯಾಸಿ ಚಿತ್ರಕಲಾವಿದೆ, ನೃತ್ಯಗಾರ್ತಿ
ಕಲಾವಿದರ ಮಾತು
ಮೊದಲ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸಿದ್ದೇನೆ. ತುಂಬಾ ಖುಷಿಯಾಗುತ್ತದೆ. ನಾನು ರಚಿಸಿದ ಕಲಾಕೃತಿಗಳ ಬಗ್ಗೆ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದು, ಇದರಿಂದ ಪ್ರೋತ್ಸಾಹ ಸಿಕ್ಕಂತಾಗಿದೆ.
-ಆಶಾ ಭಟ್, ಶಿರಸಿ
ಒಡೆದ ಗಾಜಿನ ಬಳೆಗಳಿಂದ ಕಲಾಕೃತಿಯನ್ನು ತಯಾರಿಸುವ ಮೂಲಕ ನೂತನ ಪ್ರಯೋಗಕ್ಕೆ ಕೈ ಹಾಕಿದ್ದೇನೆ. ಚಂಡೀಗಢದ ರಾಕ್ ಗಾರ್ಡನ್‌ನಲ್ಲಿ ವೇಸ್ಟ್ ಮೆಟೀರಿಯಲ್‌ಗಳಿಂದ ತಯಾರಿಸಿದ ಕಲಾಕೃತಿಗಳನ್ನು ನೋಡಿ ಸ್ಫೂರ್ತಿ ಪಡೆದು ಈ ಕಲಾಕೃತಿಗಳನ್ನು ರಚಿಸಿದ್ದೇನೆ.
-ಸವಿತಾ ಎಸ್, ಆರ್. ಬೆಂಗಳೂರು.
= ರಶ್ಮಿ ಕಾಸರಗೋಡು
ಚಿತ್ರಗಳು: ಪ್ರಕಾಶ್ ಹೆಗ್ಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


