ಮುಬಾರಕ್ರ ಮಿಂಚಿನ ತಾನ್

ಜೈಪುರ- ಅತ್ರೋಲಿ ಘರಾಣೆಯ ಮೂಲ ಪುರುಷ ಉಸ್ತಾದ್ ಅಲ್ಲಾದಿಯಾ ಖಾನ್ ಮೂಲತಃ ರಾಜಸ್ಥಾನದವರು. ಸಂಗೀತ ಮನೆತನದವರು. ಅವರ ತಂದೆ, ಚಿಕ್ಕಪ್ಪ ಎಲ್ಲರೂ ಉತ್ತಮ ಧ್ರುಪದ್ ಗಾಯಕರಾಗಿದ್ದರು. ಗ್ವಾಲಿಯರ್ ಶೈಲಿ ಅವರದ್ದು. ಹೀಗಾಗಿ ಸಹಜವಾಗಿ ಅಲ್ಲಾದಿಯಾ ಖಾನ್ ತಮ್ಮ ಬಾಲ್ಯದಿಂದಲೇ ಇವರಿಬ್ಬರ ಬಳಿ ಸಂಗೀತ ಅಭ್ಯಾಸ ಮಾಡತೊಡಗಿದರು. ನೂರಾರು ಧ್ರುಪದ್ಗಳನ್ನು ಕಲಿತರು. ಆದರೆ ವಸ್ತುತಃ ಉಸ್ತಾದ್ ಅಲ್ಲಾದಿಯಾ ಖಾನರಿಗೆ ಖಯಾಲ್ ಗಾಯನದ ಮೇಲೆ ಬಹಳ ಪ್ರೀತಿ ಇತ್ತು. ಆದ್ದರಿಂದ
ತಾವು ಕಲಿತಿದ್ದು ಧ್ರುಪದ್ ಆದರೂ ತಮ್ಮ ಪರಿಶ್ರಮದಿಂದ ಉತ್ತಮ 'ಖಯಾಲಿಯಾ' ಆಗಿ ಬೆಳೆದರು.
ಅವರದ್ದು ಒಳ್ಳೇ ತೇಜಸ್ವಿಯಾದ, ಶಕ್ತಿಯುತ ಕಂಠಶ್ರೀ. ಎರಡೂ ಕಡೆ ಸಾಣೆ ಹಿಡಿದ ಕತ್ತಿಯ ಅಲಗಿನಂತೆ ಹರಿತವಾದ ಧ್ವನಿ. ಅವರು ಹಾಡಿದರೆ ಕೋಲ್ಮಿಂಚಿನ ಬಳ್ಳಿಯೊಂದು ಹರಿದು ಬಂದಂತೆ ಭಾಸವಾಗುತ್ತಿತ್ತು. ಹೀಗೆ ದೇಶದ ವಿವಿಧ ಭಾಗಗಳಲ್ಲಿ ಹಾಡುತ್ತ ಹಾಡುತ್ತ ಅವರು ಜೈಪುರದ ರಾಜ ದರ್ಬಾರಿನಲ್ಲಿ ಹಾಡಿದರು. ಜೈಪುರದ ರಾಜ ಇವರ ತಾಕತ್ತು, ಶಕ್ತಿಯುತ ಕಂಠ, ತಾಲೀಮು ಎಲ್ಲವನ್ನು ನೋಡಿ ಇವರನ್ನು ಪ್ರೀತಿ ಆದರದಿಂದ ಬರಮಾಡಿಕೊಂಡು ತನ್ನ ದರಬಾರಿನಲ್ಲಿ ಖಾಯಂ ಆಗಿ ಅವರನ್ನು ಆಸ್ಥಾನ ಗಾಯಕರನ್ನಾಗಿಸಿಕೊಂಡ. ಇದೇ ಆಸ್ಥಾನದಲ್ಲಿ ಉಸ್ತಾದ್ ನತ್ತನ್ ಖಾನ್ ಕೂಡ ಗಾಯಕರು. ಇಬ್ಬರೂ ನವ ಯುವಕರು. ಹುರುಪಿನ ಗಾಯಕರು. ಜೈಪುರದ ರಾಜನಿಗೆ ಇವರಿಬ್ಬರ ಜುಗಲ್ಬಂದಿ ಎಂದರೂ ಬಹು ಪ್ರೀತಿ. ಆಗಾಗ್ಗೆ ಇಬ್ಬರನ್ನೂ ಜೊತೆಗೂಡಿಸಿ ಜುಗಲ್ಬಂದಿಯ ಸವಿ ಸವಿಯುತ್ತಿದ್ದ. ಆಸ್ಥಾನದ ಕೇಳುಗರಿಗೂ ಇವರ ಹಾಡು ಎಂದರೆ ಆನಂದದ ರಸದೌತಣ.
ಹೀಗಿರುವಾಗ ಒಮ್ಮೆ ದರಬಾರಿನಲ್ಲಿ ಎಂದಿನಂತೆ ಉಸ್ತಾದ್ ಅಲ್ಲಾದಿಯಾ ಖಾನ್ ಹಾಗೂ ನತ್ತನ್ ಖಾನ್ ಇಬ್ಬರ ಜಬರ್ದಸ್ತ್ ಜುಗಲ್ಬಂದಿ ನಡೆಯುತ್ತಿತ್ತು. ಇಬ್ಬರೂ ಬಿಸಿರಕ್ತದ ತರುಣರು, ಉತ್ಸಾಹದಿಂದ ಹಾಡುತ್ತಿದ್ದರು. ಅಷ್ಟರಲ್ಲಿ ಅದೇ ದರಬಾರದ ಹಿರಿಯ, ಪ್ರಸಿದ್ಧ ಹಾಗೂ ಮಹಾರಾಜರ ಇನ್ನೋರ್ವ ಪ್ರೀತಿಯ ಗಾಯಕರಾದ ಉಸ್ತಾದ್ ಮುಬಾರಕ್ ಅಲಿ ನಿಧಾನಕ್ಕೆ ಕೋಲೂರುತ್ತ ಅಲ್ಲಿಗೆ ಬಂದರು. ಅವರಿಗೆ ಆಗ ಎಂಭತ್ತರ ಪ್ರಾಯ. 'ಕವ್ವಾಲ್ ಬಚ್ಚೋಂಕಿ ಘರಾನಾ' ಎಂಬ ವಿಶಿಷ್ಟ ಘರಾಣೆಯ ಧೀಮಂತರಾದ ಅವರು ಅದ್ಭುತ ಕಲಾವಿದರು. ಅವರ ಮುಪ್ಪು ಶರೀರಕ್ಕೆ ಮಾತ್ರವಿತ್ತೇ ಹೊರತು ಅವರ ಗಾಯನಕ್ಕೇನೂ ಅದರ ಛಾಯೆ ಉಂಟಾಗಿರಲಿಲ್ಲ. ಆದರೆ ಆ ದಿನ ಅವರಿಗೆ ಸ್ವಲ್ಪ ಅನಾರೋಗ್ಯದಿಂದ ಬಳಲಿಕೆಯಾಗಿತ್ತು. ಹಾಗಾಗಿ ತಡವಾಗಿ, ನಿಧಾನವಾಗಿ ಅವರು ದರಬಾರಿಗೆ ಬಂದಿದ್ದರು. ಆದರೆ ಅವರನ್ನು ನೋಡುತ್ತಲೇ ಜೈಪುರದ ಮಹಾರಾಜರಿಗೆ ಏನಾಯಿತೋ ಏನೋ. 'ಉಸ್ತಾದ್ ಮುಬಾರಕ್ಜಿ, ಆಪ್ಕಾ ಗಾನಾ ಸುನ್ನೇ ಕೆ ಲಿಯೆ ಮನ್ ಕರ್ ರಹಿ ಹೈ , ಗಾಯಿಯೇ' ಎಂದುಬಿಟ್ಟ.
ಉಸ್ತಾದರು ತನ್ನ ಅನಾರೋಗ್ಯವನ್ನು ರಾಜನಿಗೆ ವಿವರಿಸಿ, ತನಗೆ ಅತಿಸಾರದಿಂದ ಬಳಲಿಕೆ ಆಗಿದೆಯೆಂದೂ, ಕ್ಷಮಿಸಬೇಕೆಂದೂ ಕೇಳಿಕೊಂಡರು. ಆದರೆ ಮಹಾರಾಜರು ಅವರನ್ನು ಬಿಡಲೇ ಇಲ್ಲ. ಸ್ವಲ್ಪ ಹೊತ್ತು ಹಾಡಿರಿ ಸಾಕು ಎಂದು ಒತ್ತಾಯಿಸಿದ. ಸರಿ, ಮುಬಾರಕ್ ವೇದಿಕೆಗೆ ಬಂದರು. ಜುಗಲ್ಬಂದಿ ಹಾಡುತ್ತಿದ್ದ ಅವರಿಬ್ಬರನ್ನೇ ಹಿಂದೆ ತಂಬೂರಿಗೆ ಸಾಥ್ಗೆ ಕುಳ್ಳಿರಿಸಿಕೊಂಡು, ಗಾಯನ ಪ್ರಾರಂಭಿಸಿದರು. ಸ್ವಲ್ಪ ಬಳಲಿಕೆಯಾಗಿತ್ತೇನೋ, ನಿಧಾನವಾಗಿ ಹಾಡತೊಡಗಿದರು. ಹಾಡುತ್ತ ಹಾಡುತ್ತ ನಡು ನಡುವೆ ಹಿಂದೆ ಕುಳಿತ ಇಬ್ಬರಿಗೂ ಹಾಡಲು ಹೇಳುತ್ತಿದ್ದರು. ಅವರಿಗೋ ಯೌವನದ ಹುರುಪು, ಬಿಸಿರಕ್ತ, ಸ್ವಲ್ಪ ಹುಡುಗಾಟ. ಉಸ್ತಾದರ ಮೇಲೆ ಅಭಿಮಾನ ಆದರ ಇದ್ದರೂ, ಉತ್ಸಾಹದಲ್ಲಿ ಇಬ್ಬರೂ, ಮುಬಾರಕ್ ಅಲಿ ಹಾಡಲು ಬಿಟ್ಟ ತಕ್ಷಣ ನಿಧಾನಗತಿಯಲ್ಲಿ ಆಲಾಪನೆ ಹಾಡುವುದನ್ನು ಬಿಟ್ಟು ಜೋರಾಗಿ ತಾನ್ಗಳನ್ನು ಹಾಡಿಬಿಡುತ್ತಿದ್ದರು. ಉಸ್ತಾದರು ಎರಡು ಮೂರು ಬಾರಿ ಹಿಂದೆ ತಿರುಗಿ 'ಅರೇ, ಬಚ್ಚೇ ಥೋಡೆ ಹೋಲೆ ಹೋಲೆ ಗಾಯಿಯೆ, ಮೈ ಬಿಮಾರ್ ಹುಂ' ಎಂದು ಹೇಳಿದ್ದೂ ಆಯಿತು. ಇವರು ಕೇಳಬೇಕಲ್ಲ. ಆ ಜೋಶ್ನಲ್ಲಿ, ತುಂಟತನದ ಭಾವದಲ್ಲಿ... ಇವರು ತಮ್ಮ ತಾನ್ಬಾಜಿ ಬಿಡಲೇ ಇಲ್ಲ.
ಮೂರು ಬಾರಿ, ನಾಲ್ಕು ಬಾರಿ, ಐದು ಬಾರಿ. ಊಹುಂ. ಇವರು ಹುಡುಗಾಟ ಬಿಡಲೇ ಇಲ್ಲ. ಉಸ್ತಾದ್ ಜೋರಾಗಿ ಒಮ್ಮೆ ಉಸಿರೆಳೆದುಕೊಂಡು, ಒಂದು ಬಲವಾದ ಧಕ್ಕಾದೊಂದಿಗೆ(ಧಕ್ಕಾ ಎಂದರೆ ಧ್ವನಿಗೆ ಜೋರು ಕೊಟ್ಟು ಹಾಡುವುದು) ಒಂದು ಉದ್ದವಾದ ತಾನ್ ಅನ್ನು ಹಾಡಿದರು. ಎಂಥ ಅಪ್ರತಿಮ ಆವೇಶದಲ್ಲಿ ಅವರು ಅದನ್ನು ಹಾಡಿದರೆಂದರೆ, ಆ ಶಕ್ತಿಗೆ, ರಭಸಕ್ಕೆ ಹಿಂದೆ ಕುಳಿತಿದ್ದ ನತ್ತನ್ ಖಾನ ಅರೆಕ್ಷಣ ಬೆಚ್ಚಿಬಿದ್ದಂತಾಗಿ ಅವರ ಕೈಯಲ್ಲಿದ್ದ ತಂಬೂರಿ ಜಾರಿ ಬಿದ್ದುಬಿಟ್ಟಿತು. ಇಡೀ ದರಬಾರ್ ಮಿಂಚು ಸಂಚಾರವಾದಂತಾಗಿ ನಿಂತುಬಿಟ್ಟಿತು.
ಈ ಉಸ್ತಾದ್ ಮುಬಾರಕ್ ಅಲಿ ಹಾಗೂ ಈ ಘಟನೆಯೇ ಉಸ್ತಾದ್ ಅಲ್ಲಾದಿಯಾ ಖಾನ್ ಮುಂದೆ ವಿಶಿಷ್ಟವಾದ ತಾನ್ ಹಾಗೂ ಪಲಟಗಳಿಂದ ಸಮೃದ್ಧವಾದ ಜೈಪುರ್ ಘರಾಣೆಯನ್ನು ಹುಟ್ಟುಹಾಕಲು ಪ್ರೇರಣೆಯಾಯಿತಂತೆ.
(ಮುಂದುವರಿಯುತ್ತದೆ)
-ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


