ಗಿರಿಜಾ ಕಲ್ಯಾಣ

ನನ್ನ 'ಶಕುಂತಲೋಪಾಖ್ಯಾನ' ದುರಂತ ಕಂಡು ಐದು ವರ್ಷಗಳೇ ಕಳೆದಿದ್ದವು. 1973ರಲ್ಲಿ ಚಿಂತಾಮಣಿಯ ನಮ್ಮ ಶಾಲೆಯ ವಾರ್ಷಿಕೋತ್ಸವಕ್ಕೆ ಖ್ಯಾತ ಕವಿಗಳೂ, ನನಗೆ ಪ್ರಿಯರಾದ ಹಿರಿಯ ಮಿತ್ರರೂ ಆಗಿದ್ದ ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರು ಮುಖ್ಯ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮದ ನಂತರ ಅವರು ನಮ್ಮ ಮನೆಯಲ್ಲೇ ಒಂದು ದಿನದ ಮಟ್ಟಿಗೆ ಉಳಿದುಕೊಂಡಿದ್ದರು. ಆಗ ನನ್ನ ತಂದೆ ರಾಜಾರಾಯರು ಅವಿವಾಹಿತನಾಗಿದ್ದ ನನಗೊಂದು ಒಳ್ಳೆಯ ಕನ್ಯಾರತ್ನವನ್ನು ಹುಡುಕಿಕೊಡಲು ಅವರಲ್ಲಿ ವಿನಂತಿಸಿಕೊಂಡರು. ನನ್ನ ತಂದೆಯ ಮಟ್ಟಿಗೆ ಅದು ಮಾಮೂಲಾಗಿತ್ತು. ಏಕೆಂದರೆ, ಆ ವೇಳೆಗಾಗಲೇ ಅವರು ತೋರಿಸಿದ ಹಲವು ಹೆಣ್ಣುಗಳನ್ನು ನಾನು ಒಲ್ಲೆನೆಂದಿದ್ದೆ. ಅವರ ಮೇಲೆ ಪ್ರತೀಕಾರದ ಕ್ರಮವಾಗಿ, ಅವರು ತೋರಿಸಿದ ಹೆಣ್ಣುಗಳನ್ನೆಲ್ಲ ನಾನು ತಿರಸ್ಕರಿಸುತ್ತಿದ್ದೇನೆಂದು ಅವರು ಭಾವಿಸಿದ್ದರು. ಆದರೆ, ವಾಸ್ತವದಲ್ಲಿ ಆ ಹುಡುಗಿಯರು ಯಾರೂ ನನ್ನ ಮನಸ್ಸಿಗೆ ಬಂದಿರಲಿಲ್ಲ, ಅಷ್ಟೇ.
ನನ್ನ ತಂದೆಯ ವಿನಂತಿಯನ್ನು ಭಟ್ಟರು ಗಂಭೀರವಾಗಿ ಪರಿಗಣಿಸಬಹುದೆಂದು ನಾನೆಣಿಸಿರಲಿಲ್ಲ. ಆದರೆ, ಭಟ್ಟರ ಎಣಿಕೆ ಬೇರೆಯೇ ಇತ್ತು. ನನಗೊಂದು ಅಪ್ಪಟ ಕನ್ಯಾರತ್ನವನ್ನು ಅವರು ಹುಡುಕಿಯೇಬಿಟ್ಟರು. ಅವರ ಮನೆಯಲ್ಲೇ 'ಸಂದರ್ಶನ' ಏರ್ಪಡಿಸಿದರು. ಶಿವಮೊಗ್ಗದಿಂದ ಬೆಂಗಳೂರಿಗೆ ಅವರು ಕರೆಸಿಕೊಂಡಿದ್ದ ಸುಬ್ಬಾಭಟ್ಟರ ಮಗಳಾದ ಗಿರಿಜಾಳನ್ನು ಕಂಡ ಕ್ಷಣವೇ ಗೋಪಾಲಕೃಷ್ಣ ಅಡಿಗರ ಕವನದ ಸಾಲು ನನ್ನ ಹೃದಯದಲ್ಲಿ ಅನುರಣಿಸಿತು, 'ಓ ಇವಳೇ, ನನ್ನವಳೀ ಹೆಣ್ಣು!'. ಸುದೈವದಿಂದ ಗಿರಿಜಾಳೂ ನನ್ನನ್ನು ಒಪ್ಪಿದಳು. ಆದರೆ ಅನಿರೀಕ್ಷಿತ ತೊಡಕೊಂದು ಎದುರಾಯಿತು. ಗಿರಿಜಾಳ ಅಕ್ಕ ಅನಸೂಯಳಿಗೆ ಇನ್ನೂ ಮದುವೆಯಾಗಿರಲಿಲ್ಲ. ಆಕೆಯ ಮದುವೆ ಆಗುವ ತನಕ ನಾನು ಗಿರಿಜಾಳ ಕೈಹಿಡಿಯುವಂತಿರಲಿಲ್ಲ. ಹೀಗಾಗಿ ಅನಸೂಯಳಿಗೆ ಗಂಡು ಹುಡುಕುವ ಪ್ರಯತ್ನದಲ್ಲೂ ಭಟ್ಟರು ನನ್ನೊಂದಿಗೆ ಕೈಜೋಡಿಸಬೇಕಾಯಿತು. ಈ ನಡುವೆ ನನ್ನ ಮತ್ತು ಗಿರಿಜಾಳ ನಡುವೆ ಕಂತೆ ಕಂತೆ ಪ್ರೇಮಪತ್ರಗಳ ವಿನಿಮಯವಾಯಿತು. ನಾನು ಪರದೇಸಿ ಇಂಗ್ಲಿಷಿನಲ್ಲಿ ಬರೆದರೆ, ಅವಳು ಅಪ್ಪಟ ದೇಸಿ ಕನ್ನಡದಲ್ಲೇ ಉತ್ತರಿಸುತ್ತಿದ್ದಳು (ಆ ಪತ್ರಗಳ ನಿತ್ಯ ಸುಗಂಧದ ಹೂಗುಚ್ಛ ಈಗಲೂ ನನ್ನಲ್ಲಿ ಭದ್ರವಾಗಿದೆ!). ಸುಮಾರು ಎರಡು ವರ್ಷ ಈ ರೀತಿ ಬಾಯಲ್ಲಿ ಅಕ್ಕೀಕಾಳು ಹಾಕಿಕೊಂಡು ಕಾದ ನಂತರ ಅನಸೂಯಳಿಗೆ ಕಂಕಣಭಾಗ್ಯ ಒದಗಿತು. ಮುಂದಿನ ಒಂದೇ ತಿಂಗಳಲ್ಲಿ, ಡಿಸೆಂಬರ್ 26, 1975ರಂದು ನನ್ನ ಕೈಹಿಡಿದು, ಗಿರಿಜಾ ನನ್ನ ಮನೆ ತುಂಬಿದಳು. ಹೀಗೆ ಭಟ್ಟರ 'ಪೌರೋಹಿತ್ಯ'ದಲ್ಲಿ 'ಪೋಲಿಕವಿ'ಯೆಂದು ಖ್ಯಾತನಾಮನಾಗಿದ್ದ ನಾನು ಒಬ್ಬ 'ಸದ್ಗೃಹಸ್ಥ'ನಾದೆ. ನನ್ನಲ್ಲಿ, ನನ್ನ ಕಾವ್ಯದಲ್ಲಿ, ಇಂದಿಗೂ ಜೀವನೋಲ್ಲಾಸ, ಲವಲವಿಕೆ, ತಾರುಣ್ಯದ ಕಾವು ಉಳಿದಿದ್ದರೆ, ಅದಕ್ಕೆ ಕಾರಣ ನನ್ನ ಬಾಳ ಜೊತೆಗಾತಿ ಗಿರಿಜಾ.
ಹೀಗೆ ಹೇಳಿದ ಮಾತ್ರಕ್ಕೆ ಏನೂ ಹೇಳಿದಂತಾಗಲಿಲ್ಲ. ಏಕೆಂದರೆ, ನಮ್ಮ ದಾಂಪತ್ಯದ ಪ್ರಾರಂಭದ ದಿನಗಳಲ್ಲಿ ನನ್ನೊಂದಿಗೆ ಹೊಂದಿಕೊಳ್ಳಲು ಗಿರಿಜಾ ಪಟ್ಟ ಪಾಡು ಅಷ್ಟಿಷ್ಟಲ್ಲ. ಅವಳು ಹುಟ್ಟಿ ಬೆಳೆದದ್ದು, ಕಾಲೇಜಿನಲ್ಲಿ ಕಲಿತದ್ದು, ಎಲ್ಲ ಶಿವಮೊಗ್ಗದಂಥ ನಗರದಲ್ಲೇ ಆದರೂ ಅವಳದ್ದು ಸಂಪ್ರದಾಯಸ್ಥ, ಮಡಿವಂತ ಕುಟುಂಬ. ಪರಿಶುದ್ಧ, ಮುಗ್ಧ ಮನಸ್ಸು. ನನ್ನದೋ ಆಧುನಿಕ ಮನೋಭಾವ, ಮುಕ್ತ ಜೀವನಶೈಲಿ. ಪ್ರೀತಿ, ಪ್ರೇಮ, ಅದರ ಪರಿಶುದ್ಧತೆಯ ಬಗ್ಗೆ ಅವಳ ಕಲ್ಪನೆ, ಆದರ್ಶಗಳಿಗೂ, ನನ್ನ ರೀತಿ ನೀತಿಗೂ ಸುತರಾಂ ತಾಳೆಯಾಗುತ್ತಿರಲಿಲ್ಲ. ಆಗಿನ ನಮ್ಮ ಪಡಿಪಾಟಲುಗಳನ್ನು 'ಪಾತಾಳ ಗರಡಿ' ಎಂಬ ನನ್ನ ನಗೆಬರಹದಲ್ಲಿ ದಾಖಲಿಸಿದ್ದೇನೆ. ಮದುವೆಯ ನಂತರದ ನನ್ನ ಅವಾಂತರಗಳೂ ಅವಳ ಮನಸ್ಸನ್ನು ಸಾಕಷ್ಟು ಘಾಸಿಗೊಳಿಸಿವೆ.
ಇಷ್ಟಾಗಿ ನಮ್ಮ ದಾಂಪತ್ಯ ಬಿರಿಯದೆ ಇಡಿಗಾಳಾಗಿಯೇ ಉಳಿದಿರುವುದಕ್ಕೆ ಕಾರಣ ಗಿರಿಜಾಳ ಅಪಾರ ತಾಳ್ಮೆ ಮತ್ತು ಕ್ಷಮೆ. ಅದಕ್ಕಿಂತ ಮುಖ್ಯವಾಗಿ, ನಮಗೆ ಪರಸ್ಪರರಲ್ಲಿರುವ ಗಾಢ, ಅಚಲ ಪ್ರೀತಿ, ಅದ್ವೈತ ಭಾವನೆ. ನಮ್ಮ ದಾಂಪತ್ಯ ಹಾದು ಬಂದ ಹಾದಿ ಹಾಗೂ ಅದು ತಲುಪಿರುವ ನೆಲೆಯನ್ನು 'ದಯವಿಟ್ಟು', 'ದಾಂಪತ್ಯ' ಮತ್ತು 'ಪರಿಧಿ' ಕವಿತೆಗಳು ಸೂಚಿಸುತ್ತವೆ.
ಪರಿಧಿ
ಆದರ್ಶ ದಾಂಪತ್ಯವೆಂಬುದೊಂದಿದ್ದರೆ, ನಲ್ಲೆ
ಯಾರುಂಟು ಉದಾಹರಣೆ?
ಈ ಮಂಚದ ಮೇಲಾಡುವ ಜೋಡಿ ನಾಗರ ನಾವು
ಕಾಮರೂಪಿಗಳಲ್ಲವೇನೆ?
ಮಕರಂದದ ಹೂವಿಗೆಷ್ಟು ದುಂಬಿಗಳ ಪಾಳಿ!
ಅದರ ಶೀಲಕ್ಕುಂಟೆ ಧಕ್ಕೆ?
ಲಿಂಗಕ್ಕೆ ಕೊಡಗೂಸೇನು ಗಂಗೆ, ಗೌರಿ, ಅಕ್ಕನೇನು?
ಅದೇ ನಿಲುವು, ಅದಮ್ಯ ಬುಗ್ಗೆ.
ನನ್ನ ತೆಕ್ಕೆಗೆ ಬೋ ಡೆರೆಕ್, ನಿನ್ನ ಮಗ್ಗುಲಿಗೆ ಸ್ಟೆಲೋನ್,
ಕಲ್ಪನೆಯಿಂದ ಏನುಂಟು ತೊಂದರೆ?
ಇಷ್ಟು ಸಾಕು: ನೆರೆಹೊರೆಯ ಇಂದ್ರ, ಅಮೃತಮತಿ ಹೊಂಚಿ
ನಮ್ಮ ಮಂಚಕ್ಕೆ ಬರದಿದ್ದರೆ.
--
ಎಷ್ಟೊಂದು ಆಕರ್ಷಣೆಗಳಿದ್ದರೂ ಪ್ರತಿ ಗ್ರಹಕ್ಕೆ
ನಿಶ್ಚಿತ ಪರಿಧಿ, ಪಥ;
ಗ್ರಹದ ಪಾತ್ರ, ಗಾತ್ರದಂತೆ ಸುತ್ತ ಉಪಗ್ರಹಗಳು,
ಆಗಾಗ ಉಲ್ಕಾಪಾತ.
ಅದೃಷ್ಟಕ್ಕೆ ಈ ಗೋಳದ ಸುತ್ತ ವಾತಾವರಣದ ರಕ್ಷೆಯಿದೆ
ಉಲ್ಕೆಗಳು ಬಂದರೂ ತೂರಿ,
ನೆಲಕ್ಕೆ ಬಡಿಯುವ ಮೊದಲೇ ಉರಿದು ಬೂದಿಯಾಗುತ್ತವೆ
ಗಾಳಿಯೊಂದಿಗೆ ತಿಕ್ಕಾಡಿ.
ಹೀಗಿದ್ದೂ ಕೆಲ ಉಲ್ಕೆ ನೆಲಕ್ಕೆ ಬಡಿಯಬಹುದು,
ಅಂಥಲ್ಲಿ ಬೊಕ್ಕೆ, ಗಾಯ;
ಗುರುತು ಉಳಿದರೂ ಕ್ರಮೇಣ ಗಾಯವಾರಿ ಮಾಯುತ್ತವೆ,
ಪ್ರಕೃತಿಯ ವೈದ್ಯಕೀಯ.
--
ಸುಖ, ಸಖ್ಯದ ಸ್ವಾರ್ಥದಲ್ಲಿ ಒಂದುಗೂಡಿದರೂ ನಾವಿಂದು
ಹತ್ತಿದ್ದೇವೆ ಹಲವು ಮೆಟ್ಟಿಲು;
ವಿವಿಧ ರಾಗ ಭಾವ, ವಿಭಿನ್ನ ನಡೆ ಜೋಗುಳ ಹಾಡಿ,
ತೂಗಿದ್ದೇವೆ ಪ್ರೀತಿ ತೊಟ್ಟಿಲು.
ಶಿಥಿಲ ಚಾವಣಿ, ಬಿರುಕು ಗೋಡೆಗಳ ನೆಲಸಮ ಕೆಡವಿ,
ಹಳೆಯ ತಳಹದಿಯ ಮೇಲೆ,
ಹೊಸಮನೆ ಕಟ್ಟಿದ್ದೇವೆ ಮುದಿತನಕ್ಕೆಂದು, ನಮ್ಮ
ಮಕ್ಕಳುಮರಿಗೆಂದು ನಾಳೆ.
ಈ ನೆಲದ ಮೇಲೆ ಭದ್ರ ಕಾಲೂರಿ ನಡೆಯೋಣ
ಹಿಡಿದು ಹಿತಮಿತದ ಹಾದಿ
ಜಿಗಿದು ನಿರ್ವಾತಕ್ಕೆ, ಪ್ರೇತಗಳಂತೆ ಅಲೆದಾಟ ಬೇಡ,
ಈ ಬುವಿಯ ಅಂಕೆ ಮೀರಿ.
ದಯವಿಟ್ಟು
ಹಕ್ಕಿಗಳೆಲ್ಲ ಮರದಿಂದ ಹಾರಿಹೋದವು;
ನಾನು ಪ್ರೇಮಿಸಿದ ಹುಡುಗಿಯರಿಗೆಲ್ಲ
ಮದುವೆಯಾಯಿತು.
ಈಗ ನನಗೂ ಮದುವೆಯಾಗಿದೆ.
ಆದ್ದರಿಂದ ಅವರೆಲ್ಲ ಸುಖವಾಗಿರಲಿ.
ಆದರೆ ಬೆಳಕಿನ ಬಹಿರಂಗದಲ್ಲಿ
ನನ್ನೆದುರು,
ಅದರಲ್ಲೂ ನನ್ನ ಧರ್ಮಪತ್ನಿಯ ಎದುರು
ಸುಳಿಯದಿದ್ದರೆ,
ಅವಳ ಅಗಾಥಾ ಕ್ರಿಸ್ಟಿ ಗಮನ ಸೆಳೆಯದಿದ್ದರೆ
ಸಾಕು.
ಬರಲಿ ಬೇಕಾದರೆ
ಸಂಜೆಗೆ,
ನನ್ನ ಹೃದಯದ ತಮ್ಮ ತಮ್ಮ ಗೂಡುಗಳಿಗೆ,
ಅಂತರಂಗದ ಖಾಸಗಿ ಕತ್ತಲೆಗೆ,
ನಿರ್ಭಿಡೆಯ, ನಿರಾತಂಕ ಬೆತ್ತಲೆಗೆ,
ನಾನು ಗೊಮ್ಮಟನಾಗುವ
ನನ್ನ ಕಾವ್ಯದ ಕಮ್ಮಟಕ್ಕೆ.
ಬಂದು,
ಗೂಡುಗಳಲ್ಲಿಟ್ಟ ತಮ್ಮ ತತ್ತಿಗಳ ಮೇಲೆ
ಕಾವು ಕೂಡಲಿ,
ಮರಿ ಮಾಡಲಿ,
ಗುಟುಕು ನೀಡಲಿ,
ಜೋಗುಳ ಹಾಡಲಿ.
ಮರದ ಕೆಳಗಿನ ನನ್ನ ಕನಸಿನಂಗಳದಲ್ಲಿ
ಬೆಳದಿಂಗಳ ಹಸೆಯ ಮೇಲೆ,
ನನ್ನ ತೆಕ್ಕೆಗೆ ಬಂದು ಲಲ್ಲೆಗರೆಯಲಿ;
ಎಲ್ಲೆ ಮೀರಲಿ ಆ ಅಂದಿನಂತೆ
ಕುರುಡು ಪ್ರೇಮದ ಭಂಡಧೈರ್ಯದಲ್ಲಿ;
ಕನಸುಗಳ ಕಟ್ಟಲಿ
ಕನಸಿನಲ್ಲಿ.
ಆದರೆ,
ನನ್ನ ಹೆಂಡತಿಯೊಂದಿಗೆ ನಾನು ಏಕಾಂತದಲ್ಲಿರುವಾಗ
ನೆನಪಿನ ಕದ ತಟ್ಟಿ ಕರೆಯುವುದು ಬೇಡ;
ನನ್ನನ್ನು ಅವಳಿಂದ ವಿಮುಖನನ್ನಾಗಿಸುವ ಪ್ರಯತ್ನ
ಖಂಡಿತ ಬೇಡ;
ಅವಳ ಕಣ್ಣುಗಳಲ್ಲಿ ತಮ್ಮ ಕಣ್ಣು ಮಿಟುಕಿಸುವುದು,
ತುಟಿಯಲ್ಲಿ ತುಳುಕುವುದು,
ಕಟಿಯಲ್ಲಿ ಬಳುಕುವುದು
ದಯವಿಟ್ಟು ಬೇಡ.
ಏಕೆಂದರೆ,
ಎಷ್ಟಾದರೂ ನನ್ನ ಹೆಂಡತಿಯೂ
ಒಂದು ಹೆಣ್ಣು.
ಅವಳಿಗೆ ನನ್ನ ಅಂತರಂಗದ ಒಂದೊಂದೂ ಬೇರಿನ ಮೇಲೆ,
ಅವುಗಳಿಗೆ ಒದಗಿ ಬರುವ
ಗುಪ್ತಗಾಮಿನಿಯರ
ಚೈತನ್ಯದ ನೀರಿನ ಮೇಲೇ
ಸದಾ ಕಣ್ಣು.
ದಾಂಪತ್ಯ
ಬಾಳಗೆಳತಿಯೇ, ತರವೇ
ನನ್ನಲ್ಲಿ ಈ ಕೋಪ?
ಮೊದಲಿನಂತೆ ನಾನಿಲ್ಲ
ಎನ್ನುವ ಆರೋಪ?
ಮನೆಯ ತಲೆಬಾಗಿಲಲ್ಲಿ
ಒಣಗಿದ್ದರೆ ತೋರಣ,
ನಾನೊಬ್ಬನೆ ಅಲ್ಲ,
ನೀನೂ ಕಾರಣ.
ಅಕ್ಷಯಪಾತ್ರೆಯಲ್ಲ
ದಾಂಪತ್ಯದ ನಲಿವು,
ತಂದು ತುಂಬಬೇಕು
ನಾವೇ ಪ್ರತಿಸಲವೂ.
ನನ್ನ ನಿನ್ನ ಪ್ರೀತಿ
ಅಪ್ಪಟ ಚಿನ್ನವಾದರೇನು?
ಕೊಡದಿದ್ದರೆ ಮೆರುಗು
ಮಾಸುವುದು ಅದೂನೂ.
ದೇಹಕ್ಕಿಲ್ಲ ಹೊಸ ಹರೆಯ
ಪ್ರತಿ ವಸಂತದಲ್ಲಿ;
ಕೂಡಿ ಸಾಧಿಸೋಣ
ಜೋಡಿ ಹೃದಯದಲ್ಲಿ.
ಬಾಳಗೆಳತಿಯೇ, ಬಳಿ ಬಾ
ಮತ್ತೆ ವಧುವಿನಂತೆ;
ಹೊಸ ಸೀಸೆಯೊಳಿರುವ
ಹಳೆಯ ಮಧುವಿನಂತೆ.
-ಬಿ.ಆರ್.ಲಕ್ಷ್ಮಣ್ ರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


