ಸೂರ್ಯ ನಮಸ್ಕಾರ

ಇಂದಿನ ಎಲ್ಲ ಕ್ರಿಯೆಗಳೂ ತ್ವರಿತ. ನಿನ್ನೆಗಳನ್ನು ನೆನೆಯಲೂ ಇಂದಿಗೆ ಬಿಡುವಿಲ್ಲ. ನಾಳೆಗಳ ಬಗ್ಗೆ ಸ್ಪಷ್ಟ ನಿಲುವಿಲ್ಲ. ಹೀಗಿರುವಾಗ ಇತಿಹಾಸದ ಘಟನೆಗಳನ್ನು ಮೆಲುಕು ಹಾಕುವಂತೆ ಮಾಡಿದ್ದು ನಾಗನಾಥಪುರದ ಭಾಷ್ ಲಲಿತಕಲಾ ಸಂಘ. ಡಾ.ಎಸ್. ಸುಬ್ರಹ್ಮಣ್ಯರ ಸ್ಮರಣಾರ್ಥ 'ರಂಗಸುಗ್ಗಿ ನಾಟಕೋತ್ಸವ 2013'ರ ಅಡಿಯಲ್ಲಿ 'ಸೂರ್ಯ ಶಿಕಾರಿ' (ಬಂಗಾಲಿ ಮೂಲ- ಉತ್ಪಲ್ ದತ್, ಕನ್ನಡಕ್ಕೆ- ಎಂ.ಪಿ. ಪ್ರಕಾಶ್) ರಂಗಪ್ರಯೋಗ ನಡೆಯಿತು. ಸಮನ್ವಯ ತಂಡಕ್ಕಾಗಿ ಮಾಲತೇಶ ಬಡಿಗೇರ್ರ ರಂಗ ವಿನ್ಯಾಸ, ಪ್ರಸಾಧನ, ನಿರ್ದೇಶನ. ಧರ್ಮ ಮತ್ತು ವಿಜ್ಞಾನದ ನಡುವಿನ ಸಂಘರ್ಷದ ಈ ನಾಟಕ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ನಡೆಯಿತು.
ಇಲ್ಲಿನ ಐತಿಹಾಸಿಕ ವಿಷಯ ಮತ್ತು ಪಾತ್ರಗಳು ಸಮಕಾಲೀನ ನೆಲೆಗಟ್ಟಿನಲ್ಲೂ ಕಾಣಸಿಗುತ್ತವೆಯಾದ್ದರಿಂದ ಈ ನಾಟಕ ಪ್ರಸ್ತುತ ಎನಿಸುತ್ತದೆ. ಧರ್ಮ, ವೇದ ಪುರಾಣಗಳಲ್ಲಿ ಅಚಲ ವಿಶ್ವಾಸವನ್ನಿಟ್ಟು ತಾನೇ ದೇವರೆಂದು ತನ್ನಿಂದಲೇ ಸಕಲವೂ ಎಂದೂ ಪ್ರಚುರಪಡಿಸಿ ವಿಜ್ಞಾನ ಎಂಬುದು ಒಂದು ಕಟ್ಟುಕತೆಯೆಂದು ನಂಬಿಸಲು ನಡೆಸುವ ಹುನ್ನಾರವಿಲ್ಲಿದೆ. ಜ್ಞಾನ- ವಿಜ್ಞಾನದ ಬೆಳಕು ಮೂಢಾಂಧಕಾರದ ಮೇಲೆ ಪ್ರವೇಶಿಸದಂತೆ ಮಾಡಲು ಸೂರ್ಯನನ್ನೇ ಶಿಕಾರಿ ಮಾಡುವ ಸಮುದ್ರಗುಪ್ತನ ವ್ಯಕ್ತಿತ್ವ ಮತ್ತು ಅವನ ಕಾಲದ ಆಗುಹೋಗುಗಳ ಸ್ಪಷ್ಟ ಚಿತ್ರಣ ಈ ನಾಟಕ. ನಾಟಕ ಆರಂಭವಾಗುವುದೇ ಗುಲಾಮರನ್ನು ಬಹಿರಂಗ ಹರಾಜಿಗೆ ಒಡ್ಡುವ ದೃಶ್ಯದಿಂದ. ಇಲ್ಲಿ ಗುಲಾಮರನ್ನು ಪ್ರಾಣಿಗಳೆಂದು ಬಿಂಬಿಸುವ ದೃಶ್ಯಗಳಿಗೆ ಸಾಥ್ ಕೊಟ್ಟಿದ್ದು ಸುಶ್ರಾವ್ಯ ಹಾಡು; 'ಅರಮನೆಯ ಮೆಟ್ಟಿಲುಗಳು ನಾವು... ಮರದ ಕಂಬಗಳು ನಾವು..'. ಪ್ರತಿ ಪಾತ್ರ ರಂಗ ಪ್ರವೇಶಿಸಿದಾಗಲೂ ಅದೇ ಪಾತ್ರವೇ ಪ್ರಮುಖ ಪಾತ್ರವೆಂದು ಅನಿಸುವುದರೊಳಗೆ ಮತ್ತೊಂದು ಪಾತ್ರ ಆಗಮಸಿ, ವಿಜೃಂಭಿಸಿ ಬಿಡುತ್ತದೆ. ತದನಂತರ ಅದನ್ನು ಮೀರಿದ ಇನ್ನೊಂದು ಪಾತ್ರ ಪ್ರವೇಶಿಸಿ ಮುಂಚಿನ ಪಾತ್ರವನ್ನು ಆಪೋಶನ ತೆಗೆದುಕೊಳ್ಳುತ್ತದೆ. ಹೀಗೆ ಪ್ರತಿ ಪಾತ್ರವೂ ನಾಟಕದ ಮುನ್ನಡೆಗೆ ಕಾರಣವಾಗುತ್ತದೆ. ಬಹುಶಃ ನೋಡುಗನಿಗೆ ನಿರ್ದೇಶಕನ ಜಾಣ್ಮೆ ಕಾಣಸಿಗುವುದು ಇಲ್ಲೇ. ರಂಗದ ಹಿನ್ನೆಲೆಯಲ್ಲಿ ಸೂರ್ಯನ ಪಾತ್ರವಿದೆ. ಅದೇ ಇಲ್ಲಿ ಪ್ರಮುಖ ಆಕರ್ಷಣೆ. ಈ ಸೂರ್ಯನಿಗೆ ಹಲವು ಕೈಗಳಿವೆಯಲ್ಲದೆ ಸಿಂಹದಂಥ ಮುಖವಿದೆ. ಇದರ ಒಳಮರ್ಮ ನೋಡಗನಿಗೆ ಕಾಣಸಿಗಲಿಲ್ಲವಾದರೂ ನಿರ್ದೇಶಕನ ಕಲ್ಪನೆಗೆ ಸಿಕ್ಕಿರಬಹುದು.
ರಾಜ ಸಮುದ್ರಗುಪ್ತನು ರಥ ಓಡಿಸುವ ಮೂಕಾಭಿನಯದ ಸನ್ನಿವೇಶದಲ್ಲಿ ಗುಲಾಮರು ಕುದುರೆಗಳಂತೆ ರಾಜನ ಲಗಾಮಿನ ಹಿಡಿತ ಸಡಿಲಿಕೆಯ ಓಘದಲ್ಲಿ ಅಭಿನಯಿಸಿ ಭಲೇ ಎನಿಸಿಕೊಳ್ಳುತ್ತಾರೆ. ಹಯಗ್ರೀವ ಪಾತ್ರಧಾರಿಯು ಲೋಭ, ರಸಿಕತನ, ದರ್ಪದ ಮಾತಿನ ಶೈಲಿಗೆ ಒಪ್ಪುವಂತಿದ್ದರೆ, ಸಮುದ್ರಗುಪ್ತನ ಪಾತ್ರಧಾರಿ ಅಹಂ, ವ್ಯಂಗ್ಯದ ನಡೆ, ಆಡಂಬರಗಳ ರಾಯಭಾರಿ. ಬೌದ್ಧ ಭಿಕ್ಷುಗಳೂ ಅಷ್ಟೇ ಸಾಧು. ಜಗತ್ತಿಗೆ ವಿಜ್ಞಾನವನ್ನು ಸಾರಲು ಹೊರಟ ಬಾಲಕನ ಪಾತ್ರ ಅಮೋಘ. ಭೂಮಿ ಗುಂಡಗಿದೆ ಎಂಬುದನ್ನು ನಿರೂಪಿಸಲು ಬರುವ ಹಾಡು ಮತ್ತು ಅದರ ಅಭಿನಯ ಏಕತಾನತೆಯನ್ನು ಕಡಿದು ಲಘು ಲಾಸ್ಯದ ತೋರಣ ಕಟ್ಟಲಾಗಿದೆ. ಗಂಭೀರತೆಯ ನಡುವೆ ಹಾಸ್ಯದ ಅವಶ್ಯಕತೆಗಾಗಿಯೇ ಬರುತ್ತಾನೆ ವಿದೂಷಕ. ಅವನ ಟೀಕಾಪ್ರಹಾರವೂ ಒಪ್ಪುವಂಥದ್ದು. ಸೇನಾಧಿಕಾರಿ ತನ್ನ ಪ್ರೇಯಸಿಯ ಕಡೆ ದೃಷ್ಟಿ ನೆಟ್ಟನೆಂದು ಆತನ ತಲೆಕಡಿದು ಬರುವ ದೃಶ್ಯದಲ್ಲಿ ಗುಲಾಮರ ಬಳಕೆ, ಸಮುದ್ರ ಗುಪ್ತನ ಆಗಮನದಲ್ಲಿ ಗುಲಾಮರ ಬೆನ್ನನ್ನೇ ಮೆಟ್ಟಿಲಾಗಿ ಮಾಡಿಕೊಳ್ಳುವ ರೀತಿ ಸಫಲತೆ ಕಂಡಿದೆ. ಎಲ್ಲ ಮನುಷ್ಯರ ನಡುವಿನ ಸಮಾನತೆಯ ಅಡಿಪಾಯದ ಮೇಲೆ ಹೊಸ ಸಮಾಜ ಕಟ್ಟಬೇಕಾದ ಆದರ್ಶವನ್ನು ಈ ನಾಟಕ ಎತ್ತಿಹಿಡಿಯುತ್ತದೆ.
ಎಲ್ಲಾ ನಟರೂ ತಮ್ಮ ನಿರಂತರ ತಾಲೀಮಿನಿಂದ ನಿಬ್ಬೆರಗಾಗಿಸಿದ್ದಾರೆ. ವರ್ಣಮಯ ಪೋಷಾಕು, ಕಾಲ ಘಟ್ಟಕ್ಕೆ ಸರಿಹೊಂದುವ ರಂಗಸಜ್ಜಿಕೆಯ ಜೊತೆಗೆ ಆಯಾ ಪಾತ್ರಗಳಿಗೆ ಸರಿಹೊಂದುವ ಪ್ರಸಾಧನವು ನಾಟಕದ ತಾಜಾತನಕ್ಕೆ ಪೂರಕ. ಇಂದ್ರಾಣಿಯ ಪಾತ್ರಧಾರಿ ಅದ್ಭುತವಾಗಿ ನಟಿಸಿದ್ದಲ್ಲದೇ ವಸ್ತ್ರವಿನ್ಯಾಸದ ಹೊಣೆಯನ್ನೂ ಹೊತ್ತಿದ್ದಾರೆ. ಹಾಡು ಮತ್ತು ಮೇಳವನ್ನು ಪ್ರಕಾಶ್ ಜೈನ್ ಹೂವಿನಹಡಗಲಿ ಮತ್ತು ಸಂಗಡಿಗರು ಸೊಗಸಾಗಿ ಪೂರೈಸಿದ್ದಾರೆ. ಪುಟ್ಟಯ್ಯ ಚರಿತ್ರೆ ಪುಟಗಳ ಮೇಲೆ ಬೆಳಕು ಚೆಲ್ಲಿದ್ದಾರೆ.
-ಸಂಕೇತ್ ಗುರುದತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


