ಸಾಪ್ತಾಹಿಕಪ್ರಭ

ಶ್ರದ್ಧಾರೂಪಕ

ಶ್ರದ್ಧಾರೂಪಕ
Published On :

ತುಳು ರಂಗಭೂಮಿಯನ್ನು ಕನ್ನಡದ ಭಾಗವಾಗಿಯೇ ನೋಡಬಹುದು; ಆದರೆ ಅದರ ಅಭಿವ್ಯಕ್ತಿ ವಿಧಾನ, ಭಾಷೆ, ವಸ್ತು, ಎತ್ತುವ ಪ್ರಶ್ನೆಗಳು ಭಿನ್ನ. 'ಶಿವಳ್ಳಿ ತುಳು' ಎಂಬ ಉಪಪ್ರಬೇಧದಲ್ಲಿ ಇದು ಇನ್ನೂ ಬೇರೆ. ಆದರೆ ಎಲ್ಲ ರಂಗಭೂಮಿಗಳ ಮೂಲ ಪ್ರತಿಮೆ ಮನುಷ್ಯನ ಸ್ಥಿತಿಯ ಹುಡುಕಾಟ. ಅದು 'ಶಾರ್ದೊ' ನಾಟಕದ ರೂಪಕ ಕೂಡ ಹೌದು.
ಶಿವಳ್ಳಿ ತುಳುವಿನಲ್ಲಿ ಪ್ರದರ್ಶನಗೊಂಡ 'ಶಾರ್ದೊ' ನಾಟಕದ ಮೂಲ ಕತೆಗಾರ ಪ್ರೊ.ಕೆ.ಇ.ರಾಧಾಕೃಷ್ಣ. ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿ ಜೀವ ತುಂಬಿದವರು ಕೃಷ್ಣಮೂರ್ತಿ ಕವತ್ತಾರು. ಸತ್ತುಹೋದ ಅಜ್ಜ ಬಾರಿತ್ತಾಯ ಮತ್ತು ಅವರ ಶಿಷ್ಯ ಶ್ರೀಕೃಷ್ಣನ ಮಧ್ಯೆ ನಡೆಯುವ ಶ್ರದ್ಧಾ ಸಂವಹನ ಕ್ರಿಯೆ ನಾಟಕದ ವಸ್ತು.
ಬಾರಿತ್ತಾಯರ ಶ್ರಾದ್ಧಕರ್ಮಕ್ಕೆ ಆಗಮಿಸುವ ಕೃಷ್ಣನ ನೆನಪಿನಲ್ಲಿ ನಾಟಕ ತೆರೆದುಕೊಳ್ಳುತ್ತದೆ. ಬಾರಿತ್ತಾಯರ ವಿಫಲ ದಾಂಪತ್ಯ, ಕೃಷ್ಣನ ಬಂಡಾಯಗಳ ನಡುವೆ ಒಂದಿಡೀ ಕಾಲದ ಬದುಕು ಇದೆ. ಅವರಿಬ್ಬರ ಮುಖಾಮುಖಿಯಲ್ಲಿ ಅದು ಹೊಸ ಅರ್ಥಗಳನ್ನು ಹೊಳೆಸುತ್ತದೆ.
ಐದು ದಶಕಗಳ ಹಿಂದೆ ಬಡ ಶಿವಳ್ಳಿ ಬ್ರಾಹ್ಮಣರಲ್ಲಿದ್ದ ಆಧುನಿಕ ಶಿಕ್ಷಣದ ಬಗೆಗಿನ ತುಡಿತ, ಆಧುನಿಕ ಕಲಿಕೆಗೆ ಮುಖಾಮುಖಿಯಾದಾಗ ಉಂಟಾಗುವ ಆಂತರಿಕ ಬಹಿರಂಗ ಪಲ್ಲಟಗಳು, ಬ್ರಾಹ್ಮಣರಲ್ಲೇ ಇದ್ದ ಒಳಪಂಗಡಗಳಲ್ಲಿನ ತರತಮಗಳು, ಬ್ರಾಹ್ಮಣ ಶೂದ್ರ ಮುಖಾಮುಖಿಗಳು ನಾಟಕದಲ್ಲಿ ಗುಪ್ತ ವಿದ್ಯುತ್‌ನಂತೆ ಪ್ರವಹಿಸುತ್ತವೆ. ತಲೆ ಕೆಳಗಾಗಿರುವ ಅಶ್ವತ್ಥಮರದ ಸಂಕೇತವನ್ನು ಉಪಯೋಗಿಸಿಕೊಳ್ಳುವ ನಾಟಕ ಬ್ರಾಹ್ಮಣ ಹಾಗೂ ಬ್ರಾಹ್ಮಣೇತರ ಎಂಬ ಮಿತಿಗಳನ್ನು ಮೀರುತ್ತದೆ.
ಯಕ್ಷಗಾನ, ದೈವನರ್ತನ, ವೈದಿಕ ಕ್ರಿಯೆಗಳು ಮುಂತಾದವನ್ನು ಹಿತಮಿತವಾಗಿ ಉಪಯೋಗಿಸಿಕೊಂಡಿರುವ ಕವತ್ತಾರು ನಿರ್ದೇಶನದಲ್ಲಿ ನಾಟಕವನ್ನು ನೋಡುವುದೇ ಒಂದು ಸೊಗಸು. ಶಿವಳ್ಳಿ ತುಳುವಿನ 'ಪಂಚಿಂಗ್‌' ಡಯಲಾಗ್‌ಗಳು ಮುದ ನೀಡುತ್ತಲೇ, ಒಂದು ಕಾಲದ ಜೀವನಕ್ರಮದ ಭಾಷಿಕ ರೂಪವನ್ನು ಕಣ್ಣಿಗೆ ಕಟ್ಟುತ್ತವೆ. ಸಮರ್ಥ ನಟರು ತಮ್ಮ ಪಾತ್ರಗಳನ್ನು ಜೀವಿಸಿ ನಾಟಕವನ್ನು ಮೇಲೆತ್ತಿರುವುದು ಗೊತ್ತಾಗುತ್ತದೆ.
ಇದುವರೆಗೆ ಸಾಂಸ್ಕೃತಿಕ ವಲಯದ ಅಂಚಿನಲ್ಲಿದ್ದ ಅನೇಕ ಸಮುದಾಯ, ಜಾತಿಗಳ ಅನುಭವಗಳು ಇತ್ತೀಚೆಗೆ ಕಾದಂಬರಿಗಳಾಗಿ, ನಾಟಕಗಳಾಗಿ ಹೊಮ್ಮುತ್ತಿರುವುದನ್ನು ಕಾಣಬಹುದಾಗಿದೆ. ಇದು ಅವುಗಳ ಆತ್ಮವಿಮರ್ಶೆ ಕೂಡ ಹೌದು. ಸ್ವಪ್ನ ಸಾರಸ್ವತ, ತಲೆಗಳಿ, ಹಳ್ಳ ಬಂತು ಹಳ್ಳಗಳು ಇಂಥವು. 'ಶಾರ್ದೊ' ಕೂಡ ಅಂಥದೊಂದು ಬೆಳವಣಿಗೆಯ ಫಲ. ಹಾಗೆಯೇ, ಭೂತಕಾಲವನ್ನು ವರ್ತಮಾನದ ಪಾತ್ರಗಳ ಮೂಲಕ ನೋಡಿ ವಿಮರ್ಶಿಸುವ ಕ್ರಮದ ಯಶಸ್ವಿ ಉದಾಹರಣೆಯೂ ಆಗಿದೆ.

-ಹರೀಶ್ ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.