ಸಾಪ್ತಾಹಿಕಪ್ರಭ

ಬಿಡುಗಡೆಯ ಲೇಡಿ

ಭಾರತಮುಕ್ತಿಯ ಹೋರಾಟದ ಯಶೋಗಾಥೆಯ ಹಿಂದೆ ಹೋರಾಟಗಾರ್ತಿಯರ ಬಹುದೊಡ್ಡ ಚರಿತ್ರೆಯೇ ಇದೆ. ಆದರೆ...

ಬಿಡುಗಡೆಯ ಲೇಡಿ
Published On :

'ನನಗೆ ಉಪವಾಸದ ಮೂಲಕ ಪ್ರತಿಭಟಿಸುವುದನ್ನು ಹೇಳಿಕೊಟ್ಟವಳೇ ನನ್ನ ಅಮ್ಮ. ಅವಳು ತನ್ನ ಬೇಡಿಕೆಗಳಿಗಾಗಿ ಕೆಲವೊಮ್ಮೆ ಅಪ್ಪನ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದುದಿತ್ತು' ಎಂದು ನೆನೆಯುತ್ತಾರೆ ಮಹಾತ್ಮ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ.
ಬ್ರಿಟಿಷರನ್ನು ಇಲ್ಲಿಂದ ಓಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿಗೆ, ಅವರ ಪ್ರಧಾನ ಆಯುಧವನ್ನು ನೀಡಿದ್ದೇ ಒಬ್ಬ ಮಹಿಳೆ! ಸ್ವಾತಂತ್ರ್ಯ ಹೋರಾಟದಲ್ಲಿ ಎಲೆಮರೆಯ ಕಾಯಿಗಳಾಗಿ ಜೀವ ತೇಯ್ದ ಸಾವಿರಾರು ಮಹಿಳೆಯರಿಗೆ ಈ ಮಾತು ಒಂದು ರೂಪಕದಂತಿದೆಯಲ್ಲವೆ? ಆದರೂ ಅವರು 'ಯೋಧೆ'ಯರೆಂದು ಅದೇಕೆ ಪರಿಗಣಿತರಾಗಿಲ್ಲವೋ!
ಪ್ರತಿ ಪುರುಷನ ಯಶಸ್ಸಿನ ಹಿಂದಿರುವ ಮಹಿಳೆ ಬೆಳಕಿಗೆ ಬರದೆ ಕತ್ತಲಲ್ಲೇ ಕರಗಿಹೋಗುತ್ತಾಳೆ. ಭಾರತಮುಕ್ತಿಯ ಹೋರಾಟದ ಯಶೋಗಾಥೆಯ ಹಿಂದೆಯೂ ಅಂತಹ ಹೋರಾಟಗಾರ್ತಿಯರ ಬಹುದೊಡ್ಡ ಚರಿತ್ರೆಯೇ ಇದೆ. ಆದರೆ ನಮಗೆ ತಿಳಿದಿರುವುದು ಮಾತ್ರ ಕೆಲವೇ ಕೆಲವು ಹೆಸರುಗಳು. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಸರೋಜಿನಿ ನಾಯ್ಡು, ಹೀಗೆ...
ಶಾಲಾ ಮಕ್ಕಳ ಸ್ವಾತಂತ್ರ್ಯೋತ್ಸವ ಭಾಷಣದಿಂದ ಒಂದೊಂದೇ ಹೋರಾಟಗಾರರ ಹೆಸರುಗಳು ಕಳಚಿ ವಿಸ್ಮೃತಿಗೆ ಸರಿಯುತ್ತಿರುವ ಸಮಯ ಇದು. 'ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸಿದರು, ಪ್ರಾಣತ್ಯಾಗ ಮಾಡಿದರು' ಎಂಬ ಮಾತುಗಳೆಲ್ಲಾ ಯಾವುದೋ ಹಳೆ ಸಿನಿಮಾದ ಶಿಳ್ಳೆ ಗಿಟ್ಟಿಸುವ ಡೈಲಾಗ್‌ಗಳಷ್ಟೇ ಆಗಿ ಕೇಳಿಸುವ ಈ ಕಾಲಮಾನದಲ್ಲಿ ದೇಶದ ಹೆಸರಿನಲ್ಲಿ ಎಲ್ಲವನ್ನೂ ಅರ್ಪಿಸಿದ್ದ, ಹಾಗಿದ್ದೂ ನಾವೆಲ್ಲ ಮರೆತುಬಿಟ್ಟಿರುವ ಧೀರೆಯರನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

ಬೇಗಂ ಹಜರತ್ ಮಹಲ್
ಬೇಗಂ ಹಜರತ್ ಮಹಲ್ ಅವಧ್‌ನ ನವಾಬ ವಜಿದ್ ಅಲಿ ಶಾನ ಹೆಂಡತಿ. ಈಸ್ಟ್ ಇಂಡಿಯಾ ಕಂಪನಿ ಗಂಡನನ್ನು ಕೋಲ್ಕತ್ತಾದಿಂದ ಗಡಿಪಾರು ಮಾಡಿದಾಗ ರಾಜ್ಯದ ಅಧಿಕಾರ ಚುಕ್ಕಾಣಿಯನ್ನು ತಾನೇ ಹಿಡಿದ ದಿಟ್ಟೆ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ದಿಟ್ಟವಾಗಿ ಹೋರಾಡಿ, ಲಖನೌವನ್ನು ವಶಪಡಿಸಿಕೊಂಡಿದ್ದಳು. ಸ್ವತಃ ಯುದ್ಧಭೂಮಿಯಲ್ಲಿ ನಿಂತು ಸೈನಿಕರನ್ನು ಹುರಿದುಂಬಿಸುತ್ತಿದ್ದಳು. ನಂತರ ಬ್ರಿಟಿಷ್ ಸೈನ್ಯ ಲಖನೌ ಮತ್ತು ಅವಧ್‌ನ ಪ್ರಮುಖ ಭಾಗಗಳನ್ನು ಸ್ವಾಧೀನಪಡಿಸಿಕೊಂಡಿತು. ಬೇಗಂಳನ್ನು ಬಲವಂತವಾಗಿ ನಿವೃತ್ತಿಗೊಳಿಸಲಾಯ್ತು. 1879ರಲ್ಲಿ ನೇಪಾಳದಲ್ಲಿ ಇವಳು ಕೊನೆಯುಸಿರೆಳೆದಳು.

ಕ್ರಾಂತಿಯ ತಾಯಿ ಮೇಡಂ ಕಾಮಾ
ಮೇಡಂ ಕಾಮಾ ಎಂಬ ಹೆಸರಿನಿಂದಲೇ ಪ್ರಸಿದ್ಧಳಾಗಿರುವ ಭಿಕಾಜಿ ಕಾಮಾ ಭಾರತ ರಾಷ್ಟ್ರೀಯ ಚಳುವಳಿಯ ನೇತಾರರಲ್ಲೊಬ್ಬರು. 1896ರಲ್ಲಿ ಮುಂಬೈ ಪ್ಲೇಗ್‌ನಿಂದ ತತ್ತರಿಸಿದಾಗ ಕಾಯಿಲೆ ಪೀಡಿತರ ನೆರವಿಗೆ ಧಾವಿಸಿ, ರೋಗಿಗಳ ಸೇವೆಯಲ್ಲಿ ತೊಡಗಿದರು. ಪರಿಣಾಮ ಅವರಿಗೂ ಸೋಂಕು ತಗುಲಿ ಹೆಚ್ಚಿನ ಚಿಕಿತ್ಸೆಗಾಗಿ ಯುರೋಪ್‌ಗೆ ತೆರಳಬೇಕಾಯ್ತು. ಅಲ್ಲಿಯೂ 'ಲಂಡನ್ ಇಂಡಿಯಾ ಸೊಸೈಟಿ' ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಭಾರತ ಧ್ವಜ ವಿನ್ಯಾಸಗೊಳಿಸಿ ಸ್ವಾತಂತ್ರ ಹೋರಾಟಕ್ಕೊಂದು ಅಸ್ಮಿತೆಯನ್ನು ರೂಪಿಸಿದ ಕಾರಣಕ್ಕೆ ಇವರು ಚಿರಸ್ಮರಣೀಯರು. 1907 ಆಗಸ್ಟ್ 21ರಂದು ಅಂತಾರಾಷ್ಟ್ರೀಯ ಸಮಾಜವಾದಿ ಸಮಾವೇಶದಲ್ಲಿ ಮೊದಲ ಬಾರಿಗೆ ರಾಷ್ಟಧ್ವಜವನ್ನು ಅನಾವರಣಗೊಳಿಸಿ ಅದರ ಬಣ್ಣಗಳು ಮತ್ತು ಚಿಹ್ನೆಗಳು ಏನನ್ನು ಸೂಚಿಸುತ್ತವೆ ಎಂಬುದನ್ನು ವಿವರಿಸಿದ್ದರು. ಭಾರತದ ಕ್ರಾಂತಿ ತಾಯಿ ಎಂದೇ ಕರೆಯಲ್ಪಡುವ ಕಾಮಾ 1936 ಆಗಸ್ಟ್ 13ರಂದು ಕೊನೆಯುಸಿರೆಳೆದರು. ಇವರು ಧ್ವಜ್ನ ಅನಾವರಣಗೊಳಿಸಿದ್ದು, ತೀರಿಕೊಂಡಿದ್ದೂ ಸ್ವಾತಂತ್ರ್ಯ ಬಂದ ಆಗಸ್ಟ್ ತಿಂಗಳಲ್ಲೇ!

ದುರ್ಗಾ ಭಾಭಿ
ದುರ್ಗಾವತಿ ದೇವಿ ಸ್ವಾತಂತ್ರ್ಯ ಹೋರಾಟಗಾರ ಭಗವತಿ ಚರಣ ವೋಹ್ರಾ ಅವರ ಹೆಂಡತಿ. ಪತಿಯ ಜೊತೆ ತಾನೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಪತಿಯ ಸಾವಿನ ನಂತರ ಅವರ ಮನೆ ಹೋರಾಟಗಾರರ ಪ್ರಮುಖ ಕೇಂದ್ರವಾಗಿತ್ತು. ಹೋರಾಟಗಾರರಿಗೆ ನೆಚ್ಚಿನ ದುರ್ಗಾ ಭಾಭಿ ಆಗಿದ್ದ ಇವರು ಮನೆಯಲ್ಲಿ ನಡೆಯುತ್ತಿದ್ದ ಹೋರಾಟದ ಚರ್ಚೆಗಳಲ್ಲಿ ಅತೀವ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದರು. ಬ್ರಿಟಿಷ್ ಅಧಿಕಾರಿ ಜಾನ್ ಸೈಂಡರ್‌ನನ್ನು ಕೊಂದ ನಂತರ ಭಗತ್ ಸಿಂಗ್ ಮತ್ತು ಸುಖದೇವ್ ದುರ್ಗಾಭಾಭಿ ಮನೆಗೇ ಬಂದಿದ್ದರು. ಅವರಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು. ದುರದೃಷ್ಟವಶಾತ್ ಪೊಲೀಸರಿಗೆ ಸೆರೆಸಿಕ್ಕರು. ಭಾಭಿಯವರನ್ನೂ ಬಂಧಿಸಿ ಮೂರು ವರ್ಷ ಸೆರೆವಾಸ ವಿಧಿಸಲಾಯ್ತು.

ಕುಟ್ಟಿಮಾಳು ಅಮ್ಮ
ಕೇರಳದವಳಾದ ಕುಟ್ಟಿಮಾಳು ಅಮ್ಮ ಚಿಕ್ಕ ವಯಸ್ಸಿನಲ್ಲೇ ಹೋರಾಟಕ್ಕೆ ಧುಮುಕಿದವರು. ಅವರು ಮತ್ತು ಅವರ ಗಂಡ ಮಹಾದೇವ್ ಮೆನನ್ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದರು. 1930ರಲ್ಲಿ ವ್ಯಾಪಕಗೊಂಡ ಖಾದಿ ಚಳವಳಿಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಮಹಿಳಾ ಕಾರ್ಯಕರ್ತರನ್ನು ಸಂಘಟಿಸಿ, ವಿದೇಶಿ ಬಟ್ಟೆ ಮಾರುವ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿದರು. ಅಸಹಕಾರ ಚಳವಳಿಯಲ್ಲೂ ತಮ್ಮ ಎರಡು ತಿಂಗಳ ಮಗುವನ್ನು ಕಟ್ಟಿಕೊಂಡೇ ಮೆರವಣಿಗೆ, ರ್ಯಾಲಿಗಳಲ್ಲಿ ಭಾಗವಹಿಸುತ್ತಿದ್ದರು. ಪೊಲೀಸರು ಇವರನ್ನು ಬಂಧಿಸಿದಾಗ ಜೈಲಿಗೂ ಮಗುವಿನ ಜೊತೆಗೇ ಹೋಗಿದ್ದರು. ಕ್ವಿಟ್ ಇಂಡಿಯಾ ಚಳವಳಿ ಸಮಯದಲ್ಲಿ ಪದೇ ಪದೆ ಬಂಧನಕ್ಕೊಳಗಾಗಬೇಕಾಯ್ತು. ಜೈಲುವಾಸ ಅವರ ಅಚಲ ದೇಶಭಕ್ತಿಯನ್ನು ಕುಂದಿಸಲಿಲ್ಲ.

ಅಕ್ಕಮ್ಮ ಚೆರಿಯನ್
ಅಕ್ಕಮ್ಮ ಚೆರಿಯನ್ ಕೇರಳದ ತಿರುವಾಂಕೂರಿನವರು. ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದ ಇವರು ಪ್ರಜಾಪ್ರಭುತ್ವಕ್ಕಾಗಿ ಆಗ್ರಹಿಸಿ ಬೃಹತ್ ರ್ಯಾಲಿ ಸಂಘಟಿಸಿದ್ದರು. ಶಾಂತಿಯುತವಾಗಿ ಸಾಗುತ್ತಿದ್ದ ರ್ಯಾಲಿಯ ಮೇಲೆ ಬ್ರಿಟಿಷ್ ಪೊಲೀಸರು ಗುಂಡು ಹಾರಿಸುವ ಬೆದರಿಕೆ ಒಡ್ಡಿದಾಗ 'ಕೊಲ್ಲುವುದಾದರೆ ಮೊದಲು ನನ್ನನ್ನೇ ಕೊಲ್ಲಿ' ಎಂದು ಬಂದೂಕಿಗೆ ಎದೆಯೊಡ್ಡಿ ಗರ್ಜಿಸಿದ್ದರು. ಪೊಲೀಸರು ಸುಮ್ಮನಾಗಬೇಕಾಯ್ತು. ಅಕ್ಕಮ್ಮನ ಈ ಕತೆ ಗಾಂಧೀಜಿಯವರೆಗೂ ತಲುಪಿ ಅವರು ಇವರಿಗೆ 'ತಿರುವಾಂಕೂರ್‌ನ ಝಾನ್ಸಿರಾಣಿ' ಎಂದು ಕರೆದಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಅಕ್ಕಮ್ಮ ಅಲ್ಲಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅರುಣಾ ಅಸಫ್ ಅಲಿ
ಶಿಕ್ಷಕಿಯಾಗಿದ್ದ ಅರುಣಾ ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಸಂಪೂರ್ಣವಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು. ಕಾಂಗ್ರೆಸ್‌ನ ಕ್ರಿಯಾಶೀಲ ಸದಸ್ಯರಾಗಿದ್ದರು. ಉಪ್ಪಿನ ಸತ್ಯಾಗ್ರಹ ಸಂದರ್ಭ ಅವರನ್ನು ಬಂಧಿಸಿ ತಿಹಾರ್ ಜೈಲ್‌ಗೆ ಕಳಿಸಲಾಯಿತು. ಅಲ್ಲಿಯೂ ಸುಮ್ಮನಿರದ ಅರುಣಾ ಖೈದಿಗಳನ್ನು ಸಂಘಟಿಸಿ, ರಾಜಕೀಯ ಖೈದಿಗಳನ್ನು ತಾರತಮ್ಯದಿಂದ ನೋಡುವುದನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಂಡರು. ಇದರಿಂದ ಜೈಲಿನ ವಾತಾವರಣ ಸುಧಾರಿಸಿತು. ಆದರೆ ಅರುಣಾ ಅವರನ್ನು ಅಂಬಲಾಕ್ಕೆ ಸಾಗಿಸಿ ಗೃಹಬಂಧನದಲ್ಲಿರಿಸಲಾಯ್ತು. 1942 ಅಗಸ್ಟ್8ರಂದು ಏಐಸಿಸಿ ಬಾಂಬೆ ವಿಭಾಗದಲ್ಲಿ 'ಕ್ವಿಟ್ ಇಂಡಿಯಾ ಚಳುವಳಿ' ಘೋಷಿಸಿದಾಗ ಸರ್ಕಾರ ಪ್ರಮುಖ ಮುಖಂಡರನ್ನು ಬಂಧಿಸಿತು. ಆಗ ಅರುಣಾ ಅಧ್ಯಕ್ಷತೆ ವಹಿಸಿಕೊಂಡು ಉಳಿದ ಅಧಿವೇಶನವನ್ನು ನಡೆಸಿದರು. ಪೊಲೀಸರು ಗುಂಡು ಹಾರಿಸುತ್ತಿದ್ದರೂ ಧೈರ್ಯದಿಂದ ಮುನ್ನುಗ್ಗಿ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿದ್ದರು. 'ಸ್ವಾತಂತ್ರ್ಯ ಸಂಗ್ರಾಮದ ಮಹಾತಾಯಿ' ಎಂದೇ ಕರೆಯಲ್ಪಡುವ ಈಕೆಗೆ 1964ರಲ್ಲಿ ಲೆನಿನ್ ಶಾಂತಿ ಪುರಸ್ಕಾರ ದೊರೆಯಿತು. ಮರಣೋತ್ತರ ಭಾರತರತ್ನ ಕೂಡ.

ಲಕ್ಷ್ಮಿ ಸ್ವಾಮಿನಾಥನ್
ಲಕ್ಷ್ಮಿ ಚಿಕ್ಕ ವಯಸ್ಸಿನಲ್ಲಿಯೇ ಚಳವಳಿಗಳಲ್ಲಿ ತೊಡಗಿಕೊಂಡಿದ್ದರು. ನಂತರ ಡಾಕ್ಟರ್ ಆಗಿ ಸಿಂಗಾಪುರಕ್ಕೆ ತೆರಳಿ ಆಸ್ಪತ್ರೆ ಪ್ರಾರಂಭಿಸಿ ಬಡಜನರಿಗೆ ಚಿಕಿತ್ಸೆ ನೀಡಲು ಆರಂಭಿಸಿದರು. 1942ರಲ್ಲಿ ಸಿಂಗಾಪುರ್‌ನಲ್ಲಿ ಭಾರತ ರಾಷ್ಟ್ರೀಯ ಸೈನ್ಯವನ್ನು ಕಟ್ಟುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದರು. ಇವರ ನೇತೃತ್ವದಲ್ಲಿ ಝಾನ್ಸಿರಾಣಿ ಲಕ್ಷ್ಮಿಬಾಯಿಯ ಹೆಸರಿನ ಮಹಿಳಾ ತುಕಡಿಯೊಂದು ಸೈನ್ಯಕ್ಕೆ ಸೇರ್ಪಡೆಯಾಗಿತ್ತು. ಅಲ್ಲಿಂದ ಇವರು ಕ್ಯಾಪ್ಟನ್ ಲಕ್ಷ್ಮಿ ಆದರು. ಲಕ್ಷ್ಮಿ ನೇತೃತ್ವದಲ್ಲಿ ಈ ತುಕಡಿ ಬ್ರಿಟಿಷರ ವಿರುದ್ಧ ಶೌರ್ಯದಿಂದ ಹೋರಾಡಿತು. ಕೊನೆಗೆ ಕ್ಯಾಪ್ಟನ್ ಲಕ್ಷ್ಮಿಯನ್ನು ಸೆರೆಹಿಡಿದು ಭಾರತಕ್ಕೆ ಕರೆತರಲಾಯಿತು. ಸ್ವಾತಂತ್ರ್ಯಾನಂತರವೂ ಕೂಡ ಮಹಿಳಾ ಚಳವಳಿ, ಸಾಮಾಜಿಕ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. 1998ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ.

ವಿಜಯಲಕ್ಷ್ಮಿ ಪಂಡಿತ್
ಜವಾಹರ್‌ಲಾಲ್ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ ಬೆಳೆದದ್ದು ಸ್ವಾತಂತ್ರ್ಯ ಹೋರಾಟದ ವಾತಾವರಣದಲ್ಲೇ.

ಕರ್ನಾಟಕದ ಕಲಿಗಳು
ಕರ್ನಾಟಕದ ದಿಟ್ಟ ನಾರಿಯರನ್ನು ನೆನೆಯುವಾಗ ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ಉಳ್ಳಾಲದ ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮರನ್ನು ನೆನೆಯದಿರಲು ಸಾಧ್ಯವೇ ಇಲ್ಲ. ಆಂಗ್ಲರ ಎದೆಯಲ್ಲಿ ಭಯದ ಬೀಜ ಬಿತ್ತಿ, ತನ್ನವರ ಮೋಸಕ್ಕೆ ಬಲಿಯಾದ ಕಿತ್ತೂರು ಚೆನ್ನಮ್ಮ ದಂತಕತೆಯೇ ಸೈ. ಹೋರಾಟದಿಂದಾಗಿ ಬಂಧುಬಾಧವರನ್ನು ಕಳೆದುಕೊಂಡ ಅಬ್ಬಕ್ಕ ರಾಣಿಯ ಸಾಹಸಗಾಥೆ ಕರಾವಳಿಗರ ನಾಲಿಗೆ ತುದಿಯಲ್ಲಿದೆ. ಮೊಗಲರನ್ನು ತಡೆಗಟ್ಟಿದ ಕೆಳದಿ ಚೆನ್ನಮ್ಮ, ಮರಾಠರ ಪಾರಮ್ಯವನ್ನು ವಿರೋಧಿಸಿದ ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯ ಹೋರಾಟಗಾರ್ತಿ ಅಲ್ಲವೆನ್ನಲು ಸಾಧ್ಯವೆ?
ಇನ್ನು ಅಪ್ಪಟ ಗಾಂಧಿವಾದಿಯಾಗಿದ್ದ ಶಿವಮೊಗ್ಗದ ಪೊನ್ನಮ್ಮಾಳ್, ಹರಿಜನ ಮಗುವನ್ನು ಸಾಕಿದ ಹರಿಹರದ ಜಯಲಕ್ಷ್ಮಿಬಾಯಿ, ಬಂಗಾಳದ ಸೊಸೆಯಾಗಿ ರಾಜಕೀಯ ಮೆಟ್ಟಿಲುಗಳನ್ನೇರಿದ ಕಮಲಾದೇವಿ ಚಟ್ಟೋಪಾಧ್ಯಾಯ, ಅಸಹಕಾರ ಚಳವಳಿಯ ಅಧ್ವರ್ಯುವಾಗಿದ್ದ ಉಮಾಬಾಯಿ ಕುಂದಾಪುರ, ಮಲೆನಾಡಿನಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಕೆ.ಪದ್ಮಾವತಮ್ಮ, ಕೃಷ್ಣಬಾಯಿ ಪಂಜೇಕರ್, ಮೀನಾಕ್ಷಿ ಗೋವಿಂದ ಭಟ್, ಸುಬ್ಬಮ್ಮ ಜೋಯಿಸ್, ಕುಂತಳಾ ಸೇತುರಾವ್, ಶಕುಂತಲಾ ದಾಬಡೆ, ಭವಾನಿಬಾಯಿ ಕಾನಗೋಡ, ಶಾಂತಾಬಾಯಿ ಕರಮಕರ, ಸುಗುಣಾ ಕಾರ್ನಾಡ್ ದೇಸಾಯಿ, ಬಿ.ಕಾಮಾಕ್ಷಮ್ಮ, ಅಂಬಾಬಾಯಿ ಪೈ, ಶಕುಂತಲಾ ಕುರ್ತಕೋಟಿ, ಜೆ.ಸಿ.ಭಾಗೀರಥಮ್ಮ, ಗಂಗೂಬಾಯಿ ಅಂಬಲಿ ಇವರೆಲ್ಲ ತಟ್ಟನೆ ನೆನಪಿಗೆ ಬರುವವರು.
ತಂದೆ, ಸಹೋದರ, ಗೆಳೆಯರಿಂದ ಸ್ಪೂರ್ತಿ ಪಡೆದ ಇವರೂ ಚಳವಳಿಯಲ್ಲಿ ಧುಮುಕಿದರು. ಅಸಹಕಾರ ಮತ್ತು ಕ್ವಿಟ್ ಇಂಡಿಯಾ ಚಳವಳಿಗಳಲ್ಲಿ ತಮ್ಮ ಸಂಪೂರ್ಣ ಜೀವನವನ್ನೆ ಮೀಸಲಿಟ್ಟರು. ಅನೇಕ ಸಲ ಜೈಲುವಾಸವನ್ನೂ ಅನುಭವಿಸಿದರು. ಅನಾರೋಗ್ಯದ ಕಾರಣದಿಂದ ಜೈಲಿನಿಂದ ಬಿಡುಗಡೆಯಾದಾಗ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ಆಲ್ ಇಂಡಿಯಾ ವುಮೆನ್ ಕಾನ್ಫರೆನ್ಸ್ ಆರಂಭಿಸಿ, ಸೇವ್ ದಿ ಚಿಲ್ಡ್ರನ್‌ಫಂಡ್ ಅಧ್ಯಕ್ಷರಾದರು. ಸ್ವಾತಂತ್ರ್ಯಾನಂತರ ಭಾರತದ ಮೊದಲ ರಾಯಭಾರಿಯಾಗಿ ಸೋವಿಯತ್ ಯೂನಿಯನ್‌ಗೆ ತೆರಳಿದರು. 1966ರಲ್ಲಿ ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದರು.

ಕಮಲಾದೇವಿ ಚಟ್ಟೋಪಾದ್ಯಾಯ
ಕಮಲಾದೇವಿ ಶಿಕ್ಷಣ ಪೂರೈಸಿದ್ದು ಲಂಡನ್‌ನಲ್ಲಿ. ನಂತರ ಮಹಾತ್ಮಾ ಗಾಂಧಿಯವರ ಅಸಹಕಾರ ಚಳವಳಿಯಿಂದ ಪ್ರೇರಿತಗೊಂಡು ಭಾರತಕ್ಕೆ ಮರಳಿದರು. ಮಹಿಳೆಯರನ್ನು ಸಂಘಟಿಸಿ, ಅವರಿಗೆ ತರಬೇತಿ ನೀಡಿ ಚಳವಳಿಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಉಪ್ಪಿನ ಸತ್ಯಾಗ್ರಹದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದರು. ಉಪ್ಪನ್ನು ತಯಾರಿಸಿ 'ಸ್ವಾತಂತ್ರ್ಯದ ಉಪ್ಪು' ಎಂದು ಕರೆದು ಮಾರಿದರು. ಸ್ವಾತಂತ್ರ್ಯಾನಂತರವೂ ನಿರಾಶ್ರಿತರಿಗೆ ಕೈಮಗ್ಗದ ಬಟ್ಟೆ ತಯಾರಿಕೆ, ಸ್ವಯಂ ಉದ್ಯೋಗದ ತರಬೇತಿ ನೀಡುತ್ತಿದ್ದರು.

ಸುಚೇತಾ ಕೃಪಲಾನಿ
ಸುಚೇತಾ ಕೃಪಲಾನಿ ಸಂಘಟನಾ ಕಾರ್ಯದೊಂದಿಗೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಸತ್ಯಾಗ್ರಹ ಕೈಗೊಂ ಡದ್ದಕ್ಕಾಗಿ ಇವರನ್ನು 1941ರಲ್ಲಿ ಬಂಧಿಸಲಾಯ್ತು. ಕ್ವಿಟ್ ಇಂಡಿಯಾ ಚಳುವಳಿಯಲ್ಲೂ ಕೂಡ ಭಾಗವಹಿಸಿದ್ದರು. ಯುದ್ಧದಲ್ಲಿ ಗಾಯಗೊಂಡ ಭಾರತೀಯರ ಸೇವೆಗಾಗಿ ಅವಿರತವಾಗಿ ಶ್ರಮಿಸಿದರು.
ಸ್ವಾತಂತ್ರ್ಯಾನಂತರವೂ ಹಿಂದುಳಿದ ವರ್ಗ, ಪ್ರದೇಶಗಳ ಏಳ್ಗೆಗಾಗಿ ಶ್ರಮಿಸಿದರು. 1952 ಮತ್ತು 1957ರಲ್ಲಿ ಲೋಕಸಭೆ ಸದಸ್ಯರಾಗಿ ಆಯ್ಕೆಯಾದರು. 1963ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಹೀಗೆ ಆಯ್ಕೆಯಾದ ಮೊದಲ ಮಹಿಳೆ ಸುಚೇತಾ ಕೃಪಲಾನಿ. 1971ರಲ್ಲಿ ರಾಜಕಾರಣದಿಂದ ಹಿಂದೆ ಸರಿದರು.

ಉಷಾ ಮೆಹ್ತಾ
1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದಾಗ ಉಷಾ ಮೆಹ್ತಾಗೆ ಕೇವಲ ಐದು ವರ್ಷ. ಅಹ್ಮದಾಬಾದ್‌ನ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭ ಗಾಂಧೀಜಿಯನ್ನು ನೋಡಿದ ಉಷಾ ಅವರ ಅನುಯಾಯಿಯಾದರು. ಬಹುಬೇಗ ಚಳವಳಿ ಮುಖಂಡೆಯಾದ ಇವರು 1942 ಆಗಸ್ಟ್ 9ರಂದು ಗುವಾಲಿಯಾ ಟ್ಯಾಂಕ್ ಮೈದಾನದಲ್ಲಿ ತ್ರಿವರ್ಣ ಧ್ವಜ್ನ ಹಾರಿಸಿದರು. ಆ ಮೈದಾನವನ್ನು ಈಗ 'ಆಗಸ್ಟ್ ಕ್ರಾಂತಿ ಮೈದಾನ' ಎಂದೇ ಕರೆಯಲಾಗುತ್ತದೆ. ಹೋರಾಟದ ಸಮಯದಲ್ಲಿ ರಹಸ್ಯ ಕಾಂಗ್ರೆಸ್ ರೇಡಿಯೋ ನಡೆಸುತ್ತಿದ್ದರು. ಇದು ಕ್ವಿಟ್ ಇಂಡಿಯಾ ಚಳವಳಿ ಸಂದರ್ಭ ಕೆಲವು ತಿಂಗಳು ನಡೆದ ಭೂಗತ ರೇಡಿಯೋ.

- ಪದ್ಮನಾಭ ಭಟ್ ಶೇವ್ಕಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.