'ನಾ.ಡಿ'ಮಿಡಿತ
ಮಲೆನಾಡಿನಮಳೆಯಂತೆ ನಾ. ಡಿಸೋಜಾ ಕನ್ನಡ ಸಾಹಿತ್ಯದಲ್ಲಿ ಸದಾ ಹಸಿರಿಗೆ ಕಾರಣರಾದವರು. ತಮ್ಮ ಕತೆಗಳು, ಕಾದಂಬರಿಗಳು, ಮಕ್ಕಳ ಸಾಹಿತ್ಯ ಇತ್ಯಾದಿಗಳಿಂದ ಸಾಹಿತ್ಯಾಸಕ್ತರಲ್ಲಿ ಓದಿನ ಬಗ್ಗೆ ಪ್ರೀತಿಯನ್ನು ಬೆಳೆಸಿದವರು. ಎಪ್ಪತ್ತೈದು ವರ್ಷಗಳ ತುಂಬು ಜೀವನವನ್ನು ಬದುಕಿರುವ ಅವರನ್ನು ಅಭಿನಂದಿಸಲು ಅವರ ಮಿತ್ರರು, ಅಭಿಮಾನಿಗಳು ನಾಡಿ ಅವರ ಸಾಹಿತ್ಯದ ಅಧ್ಯಯನ ಕೃತಿಯನ್ನು 'ಮಲೆನಾಡಿಗ' ಹೆಸರಿನಲ್ಲಿ ತಂದಿದ್ದಾರೆ. ಇದನ್ನು ಸಂಪಾದಿಸಿದವರು ಡಾ. ಗುರುರಾವ್ ಬಾಪಟ್, ವಿಲಿಯಂ, ಪ್ರೊ. ಮಾರ್ಷಲ್ ಶರಾಂ. ಕೃತಿಯಲ್ಲಿ ಒಡನಾಟ, ಕಳ್ಳುಬಳ್ಳಿ, ಕಥಾನಕ, ಮಕ್ಕಳಂಗಳ, ಹೊಸ ಆಯಾಮ, ಕವಿಸಮಯ ಮತ್ತು ಅನುಬಂಧ ಎಂಬ ವಿಭಾಗಗಳಿವೆ. ಒಡನಾಟದಲ್ಲಿ ನಾಡಿ ಅವರನ್ನು ಅತಿ ಹತ್ತಿರದಿಂದ ಬಲ್ಲವರು ಅವರ ಗುಣಸ್ವಭಾವ, ಅವರ ಸಾಹಿತ್ಯದ ಪ್ರೇರಣೆಗಳ ಬಗ್ಗೆ ಬರೆದಿದ್ದಾರೆ. ಇವರಲ್ಲಿ ಟಿ. ಮಹಾಬಲೇಶ್ವರ ಭಟ್ಟ, ಡಾ.ಎಂ.ಎಚ್. ಶ್ರೀನರಹರಿ, ಎನ್. ಹುಚ್ಚಪ್ಪ ಮಾಸ್ತರ, ಡಾ. ಚಂದ್ರಶೇಖರ ಕಂಬಾರ, ಪುರುಷೋತ್ತಮ ಬಿಳಿಮಲೆ, ಅಮೃತ ಸೋಮೇಶ್ವರ, ಚಿರಂಜೀವಿ ಮೊದಲಾದವರು ಇದ್ದಾರೆ. ಕಳ್ಳುಬಳ್ಳಿ ವಿಭಾಗದಲ್ಲಿ ಅವರ ಮಗಳು, ಪತ್ನಿ, ಅಳಿಯ, ಸಹೋದರ ಬರೆದಿದ್ದಾರೆ. ಕಥಾನಕ ವಿಭಾಗದಲ್ಲಿ ಅವರ ಕೃತಿಗಳ ವಿಮರ್ಶೆ ಇದೆ. ಮಕ್ಕಳಂಗಳದಲ್ಲಿ ಅವರು ರಚಿಸಿದ ಮಕ್ಕಳ ಸಾಹಿತ್ಯದ ಅವಲೋಕನವಿದೆ. ಹೊಸ ಆಯಾಮದಲ್ಲಿ ಅನ್ಯ ಲೇಖನಗಳು ಹಾಗೂ ಕವಿಸಮಯದಲ್ಲಿ ಅವರ ಬಗ್ಗೆ ಇತರರು ಬರೆದ ಕವಿತೆಗಳು ಇವೆ. ಚೆನ್ನವೀರ ಕಣವಿಯವರು ಬರೆದ ಒಂದು ಕವಿತೆ ಇದರಲ್ಲಿರುವುದು ವಿಶೇಷ. ಫಿಲೋಮಿನಾ ಡಿಸೋಜಾ ಅವರು ತಮ್ಮ ಪತಿಯ ಬಗ್ಗೆ ಎದೆಯಾಳದಿಂದ ಬರೆದಿದ್ದಾರೆ. ಅದರಲ್ಲಿಯ ಎರಡು ವಾಕ್ಯಗಳು ಹೀಗಿವೆ; 'ಇವರ ಮನೆಯ ಮುಂದೆ ಒಂದು ದೊಡ್ಡ ನೇರಲೇ ಹಣ್ಣಿನ ಮರ. ನೇರಲೇ ಹಣ್ಣಿನ ಕಾಲದಲ್ಲಿ ನಾನು ಸಾಗರದ ಕ್ರಿಶ್ಚಿಯನ್ ಕೇರಿಯಿಂದ ಅಲ್ಲಿಗೆ ಹೋಗುತ್ತಿದ್ದುದು ಕೇವಲ ನೇರಲೇ ಹಣ್ಣಿನ ಆಸೆಗೆ ಮಾತ್ರವಲ್ಲ ಅನ್ನುವುದನ್ನ ನೆನಪಿಸಿಕೊಂಡಾಗ ಈಗ ನಾಚಿಕೆಯಾಗುತ್ತದೆ.'
ಕೃತಿ: ಮಲೆನಾಡಿಗ , ಪ್ರಕಾರ: ವ್ಯಕ್ತಿ, ಕೃತಿ ಅಧ್ಯಯನ, ಏಕೆ ಓದಬೇಕು?: ನಾ.ಡಿಸೋಜಾ ಬಗ್ಗೆ ಅರಿಯಲು,
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ. ಪುಟಗಳು 384, ಬೆಲೆ ರು. 250
ಬೆಳಗೆರೆಯ ಬೆಳಕು
ಕನ್ನಡ ನಾಡಿನ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿ ಬಾಳಿ ಈಗ ನಮ್ಮನ್ನು ಅಗಲಿರುವ ಬೆಳಗೆರೆ ಕೃಷ್ಣಶಾಸ್ತ್ರಿಗಳ ಜೀವನ ಚರಿತ್ರೆಯನ್ನು ಶ್ರೀಪಾದ ಪೂಜಾರ್ 'ನಾನಿದ್ದೂ ನನ್ನದೇನಿಲ್ಲ' ಹೆಸರಿನಲ್ಲಿ ಪ್ರಕಟಿಸಿರುವರು. ಮೂರು ತಿಂಗಳಲ್ಲಿ ಇದು ಮೂರು ಮುದ್ರಣಗಳನ್ನು ಕಂಡಿರುವುದು ಕೃಷ್ಣಶಾಸ್ತ್ರಿಗಳ ಬಗ್ಗೆ ಜನರಲ್ಲಿರುವ ಗೌರವವನ್ನು ಸೂಚಿಸುತ್ತದೆ. ಶಾಸ್ತ್ರಿಗಳು 'ಯೇಗ್ದಾಗೆಲ್ಲಾ ಐತೆ' ಎಂಬ ಕೃತಿಯನ್ನು ರಚಿಸಿದ್ದರು. ಅದನ್ನು ಓದಿದವರು ಅದರಿಂದ ಪ್ರಭಾವಿತರಾಗದೇ ಇಲ್ಲ. ಸರಳ ಸುಂದರ ಜೀವನ ಪಾಠ ಅದು. ತಮ್ಮ ಬದುಕನ್ನು ಇತರರಿಗೆ ಮಾದರಿಯಾಗುವಂತೆ ಸವೆಸಿದವರು ಶಾಸ್ತ್ರಿಗಳು. ಬೆಳೆಗೆರೆ ಎಂಬ ಪುಟ್ಟ ಊರು ಶಾಸ್ತ್ರಿಗಳಿಂದಾಗಿ ದೇಶಕ್ಕೇ ಪರಿಚಿತವಾಯಿತು. ಅಲ್ಲಿ ಅವರು ಶಾಲೆ, ಕಾಲೇಜು ಸ್ಥಾಪಿಸಿದ್ದಾರೆ. ಸರ್ಕಾರದ ನೆರವಿಲ್ಲದೆ ಮುನ್ನೂರು ವಿದ್ಯಾರ್ಥಿಗಳಿಗೆ ಅನ್ನ ದಾಸೋಹ ನಡೆಸಿದ್ದಾರೆ. ಅವರು ಹಾಕಿದ ಬುನಾದಿಯ ಮೇಲೆ ಅದು ಈಗಲೂ ಮುಂದುವರಿದಿದೆ. ಬದುಕಿನ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಅದರ ವಶವಾಗದೆ ನಿರ್ಮಮಕಾರ ಹೊಂದಿದ್ದ ಅವರು ಲೌಕಿಕವನ್ನು ದೂರ ಮಾಡದೆ ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ಬದುಕಿದವರು. ನಾನಿದ್ದೂ ನನ್ನದೇನಿಲ್ಲ ಎಂಬುದು ಈ ಅರ್ಥದಲ್ಲಿ ನಿಜ.
ಕೃತಿ: ನಾನಿದ್ದೂ ನನ್ನದೇನಿಲ್ಲ, ಪ್ರಕಾರ: ನೆನಪು, ಏಕೆ ಓದಬೇಕು?: ಕೃಷ್ಣಶಾಸ್ತ್ರಿಗಳನ್ನು ಅರಿಯಲು, ಪ್ರ: ಕಾಮಧೇನು ಪುಸ್ತಕ ಭವನ, ಬೆಂಗಳೂರು. ಪುಟಗಳು 216, ಬೆಲೆ ರು. 100
ಚಿಕ್ಕಪ್ಪನೆಂಬ ಅಡ್ಡ ವ್ಯವಸ್ಥೆ
ಜೋಗಿ (ಗಿರೀಶ್ ಹತ್ವಾರ) ತಾವು ಹುಟ್ಟಿಬೆಳೆದ ದಕ್ಷಿಣ ಕನ್ನಡ ಪರಿಸರದ ಸದ್ಯದ ಜ್ವಲಂತ ಸಾಮಾಜಿಕ ಪಿಡುಗನ್ನು ವಸ್ತುವಾಗಿಟ್ಟುಕೊಂಡು 'ಚಿಕ್ಕಪ್ಪ' ಎಂಬ ಕಾದಂಬರಿಯನ್ನು ಬರೆದಿರುವರು. ಮತೀಯ ಅಸಹಿಷ್ಣುತೆಗೆ ಹೆಸರಾಗಿರುವ ಈಗಿನ ದಕ್ಷಿಣ ಕನ್ನಡದಲ್ಲಿ ನೈತಿಕ ಪೊಲೀಸ್‌ಗಿರಿ ಆಗಾಗ ವರದಿಯಾಗುತ್ತಲೇ ಇರುತ್ತದೆ. ಚಿಕ್ಕಪ್ಪನೆಂಬ ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಒಂದು ವ್ಯವಸ್ಥೆಯನ್ನು ತನ್ನ ಮೂಗಿನ ನೇರಕ್ಕೇ ನಿಭಾಯಿಸತೊಡಗಿದ ಎಂಬುದನ್ನು ನಿರುದ್ವಿಗ್ನವಾಗಿ ಹೇಳುತ್ತ ಹೋಗುವ ಜೋಗಿ ಹೀಗೆ ಬೆಳೆದ ಅವನನ್ನು ಆ ವ್ಯವಸ್ಥೆಯೇ ಹೇಗೆ ಉಪಯೋಗಿಸಿಕೊಳ್ಳತೊಡಗಿತು ಎಂಬುದನ್ನೂ ವಿವರಿಸುವರು. ಮಾನವೀಯತೆಯನ್ನೇ ಕಳೆದುಕೊಂಡವನಂತೆ ಇದ್ದ ಚಿಕ್ಕಪ್ಪ ಅನಿರೀಕ್ಷಿತವಾಗಿ ಹೇಗೆ ಬದಲಾಗುತ್ತ ಹೋದ, ಕೊನೆಗೆ ತನ್ನ ತಪ್ಪಿಗಾಗಿ ಕಣ್ಣೀರಿಟ್ಟುದಲ್ಲದೆ ತನ್ನಿಂದ ನೊಂದವರಿಗೆ ತನ್ನ ಆಸ್ತಿಯನ್ನೆಲ್ಲ ಬರೆದು ಸ್ಕೂಲು ಸ್ಥಾಪಿಸುವಂತೆ ಹೇಳಿದ್ದು, ತಾನು ದ್ವೇಷಿಸಿದ ವ್ಯಕ್ತಿಯ ಆರೈಕೆಯಲ್ಲಿಯೇ ತನ್ನ ಕೊನೆಗಾಲವನ್ನು ಕಳೆಯಬೇಕಾಗಿ ಬಂದದ್ದು ಎಲ್ಲವನ್ನೂ ತಣ್ಣಗಿನ ಭಾಷೆಯಲ್ಲಿ ಹೇಳುತ್ತಾರೆ. ವ್ಯವಸ್ಥೆಯನ್ನು ಬದಲಾಯಿಸುತ್ತೇನೆ ಎಂದು ಹೊರಡುವವರು ಅಂಕುಶವಿಲ್ಲದಿದ್ದರೆ ಹೇಗೆ ಭಸ್ಮಾಸುರರಂತಾಗಬಹುದು ಎಂಬುದಕ್ಕೆ ಚಿಕ್ಕಪ್ಪ ಒಂದು ಉದಾಹರಣೆ. ವ್ಯವಸ್ಥೆ ಸರಿ ಇಲ್ಲದಾದಾಗ ಹುಟ್ಟಿಕೊಂಡು ಅಡ್ಡ ವ್ಯವಸ್ಥೆ ಈ ಚಿಕ್ಕಪ್ಪ. ಇನ್ನೊಂದು ಕೃತಿ 'ನೋಟ್‌ಬುಕ್'. ಇದು ಅವರ ಅಂಕಣ ಬರೆಹ. ಇದಕ್ಕೊಂದು ಬಂಧ, ಕೇಂದ್ರ ಇಲ್ಲದೇ ಇರುವುದರಿಂದ 'ನೋಟ್ ಬುಕ್' ಎಂದು ಕರೆದಿದ್ದೇನೆ ಎಂದು ಅವರೇ ಹೇಳಿಕೊಂಡಿದ್ದಾರೆ. ಮನಸ್ಸಿಗೆ ತಟ್ಟಿದ ಸಮಕಾಲೀನ ವಿಚಾರಗಳ ಮಥನ ಇದರಲ್ಲಿದೆ.
ಕೃತಿ: ಚಿಕ್ಕಪ್ಪ , ಪ್ರಕಾರ: ಕಾದಂಬರಿ, ಏಕೆ ಓದಬೇಕು?: ಕರಾವಳಿ ತಲ್ಲಣ ಅರಿಯಲು
ಪ್ರ: ಅಂಕಿತ ಪುಸ್ತಕ. ಬೆಂಗಳೂರು, ಪುಟಗಳು 136, ಬೆಲೆ ರು. 120
ಮಕ್ಕಳ ನಾಟಕಗಳು
ಕೃಷ್ಣಮೂರ್ತಿ ಬೆಳೆಗೆರೆ ಅವರ ಮೂರು ಮಕ್ಕಳ ನಾಟಕಗಳನ್ನು ಒಳಗೊಂಡಿರುವ ಕೃತಿ ಈಗ ಹೊರಬಂದಿದೆ. ಇದರಲ್ಲಿ ಮಳೆಹುಚ್ಚ, ಅಗಲಕಿವಿಯ ಅರಿವುಗಾರ ಮತ್ತು ನವಿಲೂರಿನ ಕತೆ ಎಂಬ ಮೂರು ನಾಟಕಗಳಿವೆ. ಮಕ್ಕಳ ಕಲ್ಪನೆಗೆ ರೆಕ್ಕೆ ಹಚ್ಚಿ ಹಾರಾಡಿಸಬಲ್ಲ, ಕುತೂಹಲವನ್ನು ಕೆರಳಿಸಬಲ್ಲ ವಸ್ತುವನ್ನು ಇವು ಹೊಂದಿವೆ. ಮಕ್ಕಳ ನಾಟಕವನ್ನು ಬರೆಯುವವರು ಅಪರೂಪವಾಗಿದ್ದಾರೆ. ಶಾಲೆಗಳ ವಾರ್ಷಿಕೋತ್ಸವಗಳಲ್ಲಿ ಮಕ್ಕಳಿಗೆ ಆಡಬೇಕೆಂದರೆ ಒಳ್ಳೆಯ ನಾಟಕಗಳ ಬರ ಇದೆ. ಅದನ್ನು ಈ ಕೃತಿ ನೀಗಿಸಬಲ್ಲುದು. ಮಳೆಹುಚ್ಚ ನಾಟಕದಲ್ಲಿ ಮಳೆಗಾಗಿ ಪರಿಸರವನ್ನು ಹೇಗೆ ಕಾಪಾಡಬೇಕು ಎಂಬುದನ್ನು ಹೇಳುತ್ತಾರೆ. ಅಗಲಕಿವಿಯ ಅರಿವುಗಾರ ನಾಟಕದಲ್ಲಿಯೂ ನಮ್ಮ ನಿಸರ್ಗ ಸಂಪತ್ತನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುದನ್ನು ಹೇಳಿದ್ದಾರೆ. ನವಿಲೂರಿನ ಕತೆಯಲ್ಲಿ ಚಿನ್ನದ ನಾಣ್ಯದ ಆಸೆಗೆ ಮಣ್ಣಿನ ಹೊಲಗಳನ್ನು ಮಾರಿಕೊಳ್ಳುವ ದುರಾಸೆಯಿಂದ ಆಗುವ ಅನಾಹುತದ ಬಗ್ಗೆ ಹೇಳಿದ್ದಾರೆ.
ಕೃತಿ: 3 ಮಕ್ಕಳ ನಾಟಕಗಳು, ಪ್ರಕಾರ: ನಾಟಕ, ಏಕೆ ಓದಬೇಕು?: ಪರಿಸರ ರಕ್ಷಣೆಯ ಬಗ್ಗೆ ಅರಿಯಲು, ಪ್ರ: ಅಕ್ಕ ಪ್ರಕಾಶನ, ಕುಣಿಗಲ್, ಪುಟಗಳು 120, ಬೆಲೆ ರು. 70
-ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

