ಚಿನ್ನದ ಮಳೆ

ಒಂದು ಸಾರಿ ಭೋಜರಾಜನ ರಾಜ್ಯದಲ್ಲಿ ಬರಗಾಲ ಬಂದಿತು. ಆಗ ರಾಜನು ಕೋಶಾಧಿಕಾರಿಯನ್ನು ಕರೆದು ಕಷ್ಟದಲ್ಲಿರುವ ಪ್ರಜೆಗಳಿಗೆ ಚಿನ್ನವನ್ನು ಹಂಚಿಕೊಡುವಂತೆ ಆಜ್ಞೆ ಮಾಡಿದನು. ಹಾಗಿದ್ದರೂ ಕೆಲವು ಪ್ರಜೆಗಳು ಬೇರೆ ದೇಶಗಳಿಗೆ ವಲಸೆಹೋಗತೊಡಗಿದರು. ಅದು ತನಗೆ ಅವಮಾನವೆಂದು ಭಾವಿಸಿ ಯಾರೂ ರಾಜ್ಯವನ್ನು ಬಿಟ್ಟು ಹೋಗಕೂಡದೆಂದು ಶಾಸನ ಮಾಡಿದನು ಭೋಜರಾಜ.
ತನ್ನ ಶಾಸನ ಸರಿಯಾಗಿ ಜಾರಿಯಾಗುತ್ತಿದೆಯೋ ಇಲ್ಲವೋ ಎಂದು ನೋಡಲು ರಾಜನು ವೇಷ ಬದಲಾಯಿಸಿಕೊಂಡು ಊರೊಳಗೆ ತಿರುಗಾಡಲು ಪ್ರಾರಂಭಿಸಿದನು. ಒಂದು ದಿನ ಬೆಳಗ್ಗೆ ರಾಜನು ನದಿ ತೀರಕ್ಕೆ ಹೋಗಿ, ಅಲ್ಲಿಂದ ದೋಣಿಯ ಮೇಲೆ ಯಾರಾದರೂ ತನ್ನ ರಾಜ್ಯದಿಂದ ಹೊರಟು ಹೋಗುವರೇನೋ ಎಂದು ನೋಡತೊಡಗಿದನು. ಕೆಲವು ಮಂದಿ ರೈತರು ಬಂದು ದೋಣಿಯನ್ನು ಏರಿದರು. ಭೋಜರಾಜನೂ ಅವರೊಂದಿಗೆ ದೋಣಿಯನ್ನೇರಿದನು. ಅವರ ಮಾತುಗಳಿಂದ ಅವರು ನದಿಯಲ್ಲಿರುವ ಯಾವುದೋ ಕುದಿರಿಗೆ ಕೆಲಸಕ್ಕೆ ಹೋಗುವವರೇ ಹೊರತು ರಾಜ್ಯ ಬಿಟ್ಟು ಹೋಗುವವರಲ್ಲವೆಂದು ತಿಳಿಯಿತು.
'ನಮ್ಮ ರಾಜ ದೇವರಂಥವನು. ಇಂಥವನ ರಾಜ್ಯದಲ್ಲಿ ಮಳೆ ಬೀಳುವುದಿಲ್ಲವೆಂದರೇನು?' ಎಂದ ಒಬ್ಬ ರೈತ.
'ಛೇ ಛೇ! ಅದೇನು ಮಾತು ಬಿಡು. ನಮ್ಮ ರಾಜನೇ ಮಳೆಯ ದೇವರು. ಇಂದ್ರನ ಹಾಗೇ ಮಳೆ ಸುರಿಸುತ್ತಲೇ ಇರುವನಲ್ಲಾ?' ಎಂದನು ಇನ್ನೊಬ್ಬ ರೈತ. 'ಅದು ಹೇಗೆ?' ಎಂದ ಅರ್ಥವಾಗದ ಮತ್ತೊಬ್ಬ ರೈತ.
'ಹೇಗೆಂದರೆ, ಇಂದ್ರನು ನೀರಿನ ಮಳೆ ಸುರಿಸುತ್ತಾನೆ. ನಮ್ಮ ಮಹಾರಾಜ ಚಿನ್ನದ ಹನಿಗಳನ್ನು ಸುರಿಸುತ್ತಾನೆ. ಇಂದ್ರನ ಮಳೆ ಗೊತ್ತುಮಾಡಿದ ಕಾಲದಲ್ಲಿ ಮಾತ್ರವೇ ಸುರಿಯುತ್ತದೆ. ನಮ್ಮ ರಾಜನು ಇಡೀ ವರ್ಷ ಚಿನ್ನದ ಮಳೆ ಸುರಿಸುತ್ತಾ ಇರುತ್ತಾನಲ್ಲ?' ಎಂದ ಆ ರೈತ.
ಅದನ್ನು ಕೇಳಿ ಎಲ್ಲರೂ 'ಭಲೇ ಭಲೆ' ಎಂದು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು.
ಸಾಧಾರಣ ರೈತರೂ, ಕಷ್ಟದ ಕೆಲಸ ಮಾಡುವವರೂ ಇಷ್ಟೊಂದು ಕಾವ್ಯಮಯವಾಗಿ ಮಾತಾಡಿಕೊಳ್ಳುವುದನ್ನು ಕೇಳಿ ಭೋಜರಾಜನ ಹೃದಯ ಸಂತೋಷದಿಂದ ಅರಳಿತು.
ಅವರಲ್ಲಿ ಕೃಷ್ಣದಾಸನೆಂಬ ರೈತನೊಬ್ಬನಿದ್ದ. ಅವನು ಮಾತ್ರ ಮುಖವನ್ನು ಬೇಸರದಲ್ಲಿಟ್ಟುಕೊಂಡು, ಉಳಿದ ರೈತರ ಮಾತಿಗೆ ತನ್ನ ಅಂಗೀಕಾರವಿಲ್ಲದವನಂತಿದ್ದ. ಆಮೇಲೆ ಸಾವಕಾಶವಾಗಿ 'ನೀವು ಹೇಳಿದಂತೆ ಮಹಾರಾಜರು ಮಳೆ ಸುರಿಸುವುದೇನೋ ನಿಜವೇ. ಆದರೆ ದೇವರ ಛತ್ರಿ ಇರುವವರನ್ನು ಮಾತ್ರ ಕೋಶಾಧಿಕಾರಿ ನೋಡುವುದಿಲ್ಲ. ಆದುದರಿಂದ ಅವರ ತಲೆಗೆ ಮಳೆಹನಿ ಬೀಳುವುದಿಲ್ಲ' ಎಂದನು ಕೃಷ್ಣದಾಸ. 'ಹಾಗಂದರೇನಪ್ಪಾ?' ಎಂದ ಒಬ್ಬ, 'ನಿನಗೆ ಹೇಗೆ ಗೊತ್ತು?' ಎಂದು ಇನ್ನೊಬ್ಬ ಕೇಳಿದ. 'ಇದೇ ನೋಡಿ, ನನ್ನ ತಲೆ ಮೇಲೆ ದೇವರ ಛತ್ರಿ ನಿಂತಿದೆ. ನಿಮಗೆ ಕಾಣುವುದಿಲ್ಲವೇನು?' ಎಂದನು ಕೃಷ್ಣದಾಸ. ಅವನ ಮಾತಿನ ಅರ್ಥ ತಿಳಿಯದೆ ಎಲ್ಲರೂ ಮುಖ ಮುಖ ನೋಡಿಕೊಂಡರು.
ಭೋಜರಾಜನಿಗೂ ಕೂತೂಹಲವೆನಿಸಿತು. 'ನೋಡಪ್ಪಾ, ನಾನೇ ಭೋಜರಾಜ. ನಿನ್ನ ತಲೆಯಲ್ಲಿ ದೇವರ ಛತ್ರಿ ಹೇಗೆ ಬಿದ್ದಿದೆ ಹೇಳು' ಎಂದನು.
ಆ ಮಾತು ಕೇಳಿ ದೋಣಿಯಲ್ಲಿದ್ದವರೆಲ್ಲಾ ಹೆದರಿ ನಡುಗಿದರು. ಕೃಷ್ಣದಾಸನು ಭಯದಿಂದ ರಾಜನ ಕಾಲು ಹಿಡಿದನು. ರಾಜನು ಅಭಯವಿತ್ತ ಮೇಲೆ ಕೃಷ್ಣದಾಸನು ಈ ಕೆಳಗಿನ ಶ್ಲೋಕ ಹೇಳಿದನು.
'ರಾಜನ್ ಕನಕಧಾರಾಭಿಸ್ತ್ವಯಿ ಸರ್ವತ್ರವರ್ಷತಿ ಅಭಾಗ್ಯಚ್ಛತ್ರಸಂಪನ್ನೇ ಮಯಿನಾಯಾಂತಿ ಬಿಂದವಃ' (ಇದರ ಅರ್ಥ, 'ಓ ರಾಜ, ನೀನು ದೇಶದಲ್ಲೆಲ್ಲಾ ಚಿನ್ನದ ಮಳೆ ಸುರಿಸುವುದು ನಿಜ. ದುರ್ಭಾಗ್ಯನಾದ ನನ್ನ ತಲೆಯ ಮೇಲೆ ಛತ್ರಿ ಇರುವುದರಿಂದ ಒಂದು ಹನಿಯೂ ನನ್ನ ತಲೆಗೆ ಬೀಳಲಿಲ್ಲ'. ಅಂದರೆ, ಕೋಶಾಧಿಕಾರಿ ಕೊಡಲಿಲ್ಲ ಎಂಬ ಭಾವ.)
ಚಿನ್ನದ ಹಂಚಿಕೆ ಯಾವ ರೀತಿಯಲ್ಲಿ ನಡೆಯುತ್ತಿದೆಯೆಂದು ಭೋಜರಾಜನು ತಿಳಿದುಕೊಂಡನು. ತಪ್ಪಾಗಿಯೋ, ಬುದ್ಧಿಪೂರ್ವಕವಾಗಿಯೋ ಕೋಶಾಧಿಕಾರಿ ಕೆಲವು ಬಡಜನರಿಗೆ ಸಹಾಯ ನೀಡಲಿಲ್ಲವೆಂದು ಅವನಿಗೆ ಗೊತ್ತಾಯಿತು.
'ಕೃಷ್ಣದಾಸಾ, ನನ್ನೊಂದಿಗೆ ಬಾ. ನಿನ್ನ ತಲೆಗೆ ನೂರು ದೇವರ ಛತ್ರಿ ಅಡ್ಡವಿದ್ದರೂ ಚಿಂತೆಯಿಲ್ಲ. ನಿನ್ನ ತಲೆ ಪೂರ್ತಿ ನೆನೆಯುವ ಹಾಗೆ ಅಭಿಷೇಕಿಸುತ್ತೇನೆ' ಎಂದು ಹೇಳಿ ರಾಜನು ಕೃಷ್ಣದಾಸನನ್ನು ಕರೆದೊಯ್ದು 'ಕನಕಾಭಿಷೇಕ' ಮಾಡಿಸಿದನು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


