ಸಾಹಿತ್ಯದ ಹೊಸ ಚರಿತ್ರೆ
ಸಾಹಿತ್ಯ ಚರಿತ್ರೆಯೆಂದರೆ ನಮಗೆ ತಕ್ಷಣ ನೆನಪಾಗುವವರು ರಂ.ಶ್ರೀ.ಮುಗಳಿಯವರು. ಸಾಹಿತ್ಯದ ವಿದ್ಯಾರ್ಥಿಗಳೆಲ್ಲ ಅದನ್ನು ಓದಿಯೇ ಇದ್ದಾರೆ. ಇದೀಗ ಡಾ.ಎಸ್.ಪ್ರಸಾದಸ್ವಾಮಿಯವರು 'ಕನ್ನಡ ಸಾಹಿತ್ಯ ಪರಂಪರೆ' ಹೆಸರಿನಲ್ಲಿ ಸಾಹಿತ್ಯ ಚರಿತ್ರೆಯನ್ನು ಹೀಗೂ ನಿರ್ವಚಿಸಬಹುದು ಎಂದು ಹೊಸ ರೀತಿಯ ಅನುಸಂಧಾನ ಮಾಡಿದ್ದಾರೆ. ಸ್ಥಾಪಿತ ವಿಚಾರಗಳನ್ನು ಅವರು ತೀಕ್ಷ್ಣ ವಿಮರ್ಶೆಗೆ ಒಳಪಡಿಸಿದ್ದಾರೆ. ಇದುವರೆಗಿನ ಸಾಹಿತ್ಯ ಚರಿತ್ರೆ ಜನಪರ ನಿಲುವಿನೊಂದಿಗೆ ವಿಶ್ಲೇಷಣೆಯಾಗಿಲ್ಲ ಎಂಬ ಮಾತನ್ನು ಅವರು ಹೇಳುತ್ತಾರೆ. ಸಾಹಿತ್ಯ ಚರಿತ್ರೆ ಕವಿಯ ಕಾಲ, ಕೃತಿಯ ಸಾಹಿತ್ಯ ಸ್ವರೂಪವನ್ನು ಕಾಲಾನುಕ್ರಮದಲ್ಲಿ ನಿರೂಪಿಸುವ 'ಕ್ರಿಯೆ' ಆಗಬೇಕೇ ಹೊರತು ಕವಿಯ ಜಾತಿ, ಧರ್ಮ ಮುಖ್ಯ ಅಲ್ಲ ಎಂಬ ನಿಲವು ಇವರದ್ದು. ಸಾಹಿತ್ಯಕ್ಕೆ ಪ್ರಭುತ್ವ, ಧರ್ಮ ಪೋಷಕ ಎಂದು ಹೇಳುವುದಕ್ಕಿಂತಲೂ ಸಮಾಜ- ಸಂಸ್ಕೃತಿ- ಬದುಕು- ವ್ಯಕ್ತಿಪ್ರತಿಭೆಗಳೇ ಮುಖ್ಯನೆಲೆ ಎನ್ನುವುದು ಸರಿಯಾದ ಕ್ರಮ ಎಂಬ ಮಾತನ್ನೂ ಅವರು ಹೇಳಿದ್ದಾರೆ. ಈ ಆಲೋಚನೆಗಳ ಬುನಾದಿಯ ಮೇಲೆ ಈ ಕೃತಿ ನಿಂತಿದೆ.
ಕೃತಿ: ಕನ್ನಡ ಸಾಹಿತ್ಯ ಪರಂಪರೆ
ಪ್ರಕಾರ: ಸಾಹಿತ್ಯ ಚರಿತ್ರೆ, ಏಕೆ ಓದಬೇಕು?: ಸಾಹಿತ್ಯ ಪರಂಪರೆ, ಅರಿಯಲು
ಪ್ರ: ಕಣ್ವ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಪುಟಗಳು 384, ಬೆಲೆ ರು. 200
ಆಯಾಮಗಳಾಚೆ ಆಲೋಚನೆ
ಪದ್ಮರಾಜ ದಂಡಾವತಿಯವರಅಂಕಣ 'ನಾಲ್ಕನೇ ಆಯಾಮ'ದ 5ಮತ್ತು 6ನೆ ಸಂಪುಟಗಳು ಈಗ ಬಂದಿವೆ. 5ನೆ ಸಂಪುಟದಲ್ಲಿ ಸಾಂಕೃತಿಕ ವಿಷಯಗಳಿಗೆ ಸಂಬಂಧಿಸಿದ ಬರೆಹಗಳು ಮತ್ತು 6ನೆ ಸಂಪುಟದಲ್ಲಿ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದ ಬರೆಹಗಳು ಇವೆ. 'ಅಂಕಣ ಬರೆಯುವುದು ಎಂದರೆ ಪ್ರತಿವಾರ ಹೆರಿಗೆ ನೋವು ಅನುಭವಿಸಿದಂತೆ. ಅಂಕಣಕಾರ ತನ್ನ ಬರವಣಿಗೆಯಲ್ಲಿ ಪ್ರಸ್ತುತವಾಗಿರಬೇಕು ಮತ್ತು ಆಸಕ್ತಿದಾಯಕವೂ ಆಗಿರಬೇಕು. ಇಲ್ಲವಾದರೆ ಯಾರೂ ಅದನ್ನು ಓದುವುದಿಲ್ಲ. ಯಾರೂ ಓದದ ಬರವಣಿಗೆ ನಿರುಪಯುಕ್ತವಾದುದು. ಹಾಗಾಗಿ ಈ ಬರವಣಿಗೆ ನಮ್ಮ ಮೇಲೆ ಹೇರುವ ಜವಾಬ್ದಾರಿ ಬಹಳ ದೊಡ್ಡದು ಎಂದು ನನಗೆ ಪ್ರತಿನಿತ್ಯ ಅನಿಸಿದೆ.' ಹೀಗೆಂದು ದಂಡಾವತಿಯವರೇ ತಮ್ಮ ಮಾತಿನಲ್ಲಿ ಹೇಳಿದ್ದಾರೆ.ಒಬ್ಬ ಪತ್ರಕರ್ತನಾಗಿ ದಂಡಾವತಿಯವರಿಗೆ ಸೂಕ್ಷ್ಮ ನಿರೀಕ್ಷಣ ಸಾಮರ್ಥ್ಯವಿದೆ. ಸಂಗತಿಗಳನ್ನು ಒರೆಗೆ ಹಚ್ಚಬಲ್ಲರು. ಅವರ ವಿಚಾರಗಳ ಮಥನದಿಂದ ಉದ್ಭವವಾದ ನವನೀತ ಒಂದು ಅಜ್ಞಾತ ಲೋಕಕ್ಕೆ ಅರಿವಿನ ಬೆಳಕನ್ನು ನೀಡಬಲ್ಲಂಥದ್ದು. ಸಂಸ್ಕೃತಿ ಸಂಬಂಧವಾಗಿ ಅವರ ಬರೆಹಗಳಲ್ಲಿ ಸಾರ್ವಕಾಲಿಕ ಮೌಲ್ಯಗಳ ಪ್ರತಿಪಾದನೆ ಇದೆ. ಸಂಗತಿಗಳ ಜೊತೆ ವ್ಯಕ್ತಿಗಳನ್ನೂ ಅವರು ಇಲ್ಲಿ ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಹಲವರಿಗೆ ಪ್ರೇರಣೆಯನ್ನು ಒದಗಿಸಬಲ್ಲುದು. ಸಮಕಾಲೀನ ರಾಜಕೀಯದ ಬಗ್ಗೆ ಬರೆಯುವುದಕ್ಕೆ ಎದೆಗಾರಿಕೆ ಬೇಕು. ಜೊತೆಗೆ ನಿಷ್ಪಕ್ಷಪಾತದ ದೃಷ್ಟಿಕೋನ ಇರಬೇಕು. ಇವೆರಡೂ ದಂಡಾವತಿಯವರಲ್ಲಿದೆ. ಧರ್ಮದಂಡ ಹಿಡಿದವರಂತೆ ಅವರು ರಾಜಕೀಯ ವಿಶ್ಲೇಷಣೆ ಮಾಡಿದ್ದಾರೆ. ರಾಜ್ಯ ರಾಜಕಾರಣದ ಮಹತ್ವದ ತಿರುವುಗಳಲ್ಲಿ ಇವರ ಅಂಕಣ ಪ್ರಭಾವ ಬೀರಿರಬಹುದು. ರಾಜಕೀಯ ವಿದ್ಯಮಾನದ ಅಭ್ಯಾಸಿಗಳಿಗೆ ಇದೊಂದು ಒಳ್ಳೆಯ ಆಕರ ಗ್ರಂಥವಾಗಿದೆ.
ಕೃತಿ: ನಾಲ್ಕನೇ ಆಯಾಮ (ಸಂಪುಟ 5, 6)
ಪ್ರಕಾರ: ಅಂಕಣ
ಏಕೆ ಓದಬೇಕು?: ಸಮಕಾಲೀನ ಕರ್ನಾಟಕದ ಅರಿವಿಗೆ
ಪ್ರ: ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 150/144, ಬೆಲೆ ರು. 95
ಭಲೇ ಮಹಾಬಲ
ತಮ್ಮ ಬರೆಹಗಳಲ್ಲಿ ವ್ಯಂಗ್ಯದ ಮೊನಚನ್ನು ಇರಿಸಿಕೊಂಡು ಬರೆಯುತ್ತಿರುವವರಲ್ಲಿ ಪತ್ರಕರ್ತ ಮಹಾಬಲ ಸೀತಾಳಭಾವಿ ಒಬ್ಬರು. ಅವರ ಮೂರು ಕೃತಿಗಳು ಈಗ ಬಂದಿವೆ. ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲ ನಾಟಕವನ್ನು ಅವರು ಕನ್ನಡಿಸಿದ್ದಾರೆ. ಶಾಕುಂತಲವನ್ನು ಈಗಾಗಲೆ ಹಲವರು ಕನ್ನಡಿಸಿದ್ದಾರೆ. ಹೀಗಿದ್ದೂ ತಾನೇಕೆ ಮತ್ತೆ ಇದನ್ನು ಅನುವಾದಿಸಿದೆ ಎಂಬುದನ್ನು ಮಹಾಬಲ ಹೀಗೆ ಹೇಳಿದ್ದಾರೆ. ಹಿಂದೆ ಅನುವಾದ ಮಾಡಿದವರಲ್ಲಿ 'ಹೆಚ್ಚಿನವರು ಶಾಕುಂತಲದ ಶ್ಲೋಕಗಳನ್ನು ಹಳೆಗನ್ನಡದ ಪದ್ಯವಾಗಿ ಅನುವಾದಿಸಿದ್ದಾರೆ. ಇಂದಿನ ನನ್ನ ತಲೆಮಾರಿನವರಿಗೆ ಹಳೆಗನ್ನಡದ ಪದ್ಯಗಳು ಸಂಸ್ಕೃತದಷ್ಟೇ ಕಷ್ಟ! ನನಗೂ ಹಳಗನ್ನಡ ಅರ್ಥವಾಗುವುದಿಲ್ಲ. ಶಾಕುಂತಲವನ್ನು ಇಡಿಯಾಗಿ ಹೊಸಗನ್ನಡದಲ್ಲಿ ಓದಬೇಕು ಹಾಗೂ ಓದಿಸಬೇಕೆಂಬ ಹಂಬಲ ನನ್ನನ್ನು ಈ ಅನುವಾದಕ್ಕೆ ಕೂರಿಸಿತು.' ಭಾರತೀಯ ಸಂಸ್ಕೃತಿಯಲ್ಲಿ ಶಾಕುಂತಲ ನಾಟಕದಲ್ಲಿಯ ತಾತ್ವಿಕತೆಗೆ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ಮಹಾಬಲರ ಅನುವಾದ ಸಕಾಲಿಕವಾಗಿದೆ.
'ಚಾಟು ಕವಿತೆಗೆ ಚುಟುಕು ಕತೆ' ಅವರ ಇನ್ನೊಂದು ಕೃತಿ. ಸಂಸ್ಕೃತ ಸಾಹಿತ್ಯದಲ್ಲಿ ಗಂಭೀರವಾದ ಸಾಹಿತ್ಯದ ಹಾಗೆಯೇ ಹಾಸ್ಯ, ಶ್ಲೇಷೆ, ವಿಡಂಬನೆಗಳ ಸಾಹಿತ್ಯವೂ ಇದೆ. ಅದರ ಜೊತೆಗೆ ಚಾಟು ಪ್ರಕಾರವೂ ಇದೆ. ಇದು ಒಂದರ್ಥದಲ್ಲಿ ಹಗುರ ಸಾಹಿತ್ಯ. ಓದಿದವರು ಕೇಳಿದವರು ನಕ್ಕು ಹಗುರಾಗುವಂತೆ ಇದು ಮಾಡುತ್ತದೆ. ಇಂಥ ಶ್ಲೋಕಗಳನ್ನು ಆಯ್ದುಕೊಂಡು ಪುಟ್ಟ ಕತೆಯ ರೂಪದಲ್ಲಿ ಅವುಗಳ ಅರ್ಥವನ್ನು ಸ್ವಾರಸ್ಯವಾಗಿ ವಿವರಿಸಿದ್ದಾರೆ. ಇದು ಬಹಳ ಪ್ರಚಲಿತದಲ್ಲಿದ್ದರೆ ಸಂಸ್ಕೃತ ಮೃತಭಾಷೆ ಎಂಬ ಪಟ್ಟವನ್ನು ಪಡೆಯುತ್ತಿರಲಿಲ್ಲ ಎಂಬ ಅವರ ಮಾತನ್ನು ಒಪ್ಪಬಹುದು. ಮತ್ತೊಂದು ಕೃತಿ 'ಮ್ಯಾನೇಜ್ಮೆಂಟ್ ಭಗವದ್ಗೀತೆ'. ಇಂದಿನ ವ್ಯಾವಹಾರಿಕ ಜಗತ್ತಿನಲ್ಲಿ ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆ ಹೇಗೆ ಅನ್ವಯವಾಗುತ್ತದೆ ಎಂಬುದನ್ನು ಇದರಲ್ಲಿ ಉದಾಹರಣೆಗಳೊಂದಿಗೆ ವಿವರಿಸಿದ್ದಾರೆ. ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಕಾಲೇಜುಗಳಲ್ಲಿ ಭಗವದ್ಗೀತೆಯನ್ನು ಇಂದು ಪಾಠಮಾಡುತ್ತಾರೆ. ನಿತ್ಯದ ಬದುಕಿಗೆ ಹಾಗೂ ಬಿಸಿನೆಸ್ಗೆ ಭಗವದ್ಗೀತೆ ಹೇಗೆ ಉಪಯುಕ್ತ ಎಂಬುದನ್ನು ಅರಿಯಬೇಕಾದರೆ ಈ ಕೃತಿ ಓದಬೇಕು.
ಕೃತಿ: ಅಭಿಜ್ಞಾನ ಶಾಕುಂತಲ, ಚಾಟು ಕವಿತೆಗೆ ಚುಟುಕು ಕತೆ, ಮ್ಯಾನೇಜ್ಮೆಂಟ್ ಭಗವದ್ಗೀತೆ, ಪ್ರಕಾರ: ವೈವಿಧ್ಯ, ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಮೊದಲ ಎರಡು ಪುಸ್ತಕ ಅಂಕಿತ ಪುಸ್ತಕ, 3ನೆಯದು ವಸಂತ ಪ್ರಕಾಶನ ಬೆಂಗಳೂರು
ಮಿದುಳಿನ ಮಾತು
ಮನುಷ್ಯರಲ್ಲಿ ಎಲ್ಲ ಅಂಗಗಳು ಸರಿ ಇದ್ದು ಮಿದುಳು ಮಾತ್ರ ಸರಿ ಇಲ್ಲದಿದ್ದರೆ ಆತ ಇದ್ದೂ ಇಲ್ಲದಂತೆ. ನಮ್ಮ ಮಿದುಳಿನಲ್ಲಿ ಶತಕೋಟಿ ಮಿದುಳಿನ ಕಣ(ನ್ಯೂರಾನ್)ಗಳಿವೆ. ಅವು ಲೆಕ್ಕಾಚಾರ ಮತ್ತು ಮಾಹಿತಿ ವಿಶ್ಲೇಷಣೆಯನ್ನು ನಡೆಸುತ್ತವೆ. ನೀವು ನಿಮ್ಮ ಮಿದುಳನ್ನು ಎಷ್ಟು ಉಪಯೋಗಿಸುತ್ತೀರಿ? ನಿಮ್ಮ ಮಿದುಳಿನ ಸಾಮರ್ಥ್ಯದ ಶೇ.4-10ರಷ್ಟು ಮಾತ್ರ ಎಂದರೆ ಆಶ್ಚರ್ಯವಾಗಬಹುದು. ಮಿದುಳಿನ ಕುರಿತು ಬಹಳಷ್ಟು ಸಂಶೋಧನೆಗಳು ನಡೆದರೂ ಜನಸಾಮಾನ್ಯರು ಅರಿತುಕೊಳ್ಳಬೇಕಾದ ಹಲವು ವಿಷಯಗಳು ಇವೆ. ಅವುಗಳನ್ನು ಸರಳವಾಗಿ ವಿವರಿಸಬೇಕಾಗುತ್ತದೆ. ಡಾ.ಜಿ.ಫ್ರಾನ್ಸಿಸ್ ಜ್ಸೇವಿಯರ್ ಅವರ ಮೂಲ ಕೃತಿಯನ್ನು ಡಾ.ಕೆ.ಎಂ.ರಾಘವ ನಂಬಿಯಾರ್ ಅವರು 'ನಿಮ್ಮ ಮಿದುಳಿನ ಶಕ್ತಿ ಹೆಚ್ಚಿಸುವ ಯುಕ್ತಿ' ಹೆಸರಿನಲ್ಲಿ ಅನುವಾದಿಸಿದ್ದಾರೆ. ಮಿದುಳಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಹಲವಾರು ಸರಳ ಉಪಾಯಗಳು ಈ ಕೃತಿಯಲ್ಲಿವೆ. ಉತ್ತಮ ಪೋಷಕಾಂಶಗಳನ್ನು ಒದಗಿಸುವ ಸರಿಯಾದ ಆಹಾರ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳಿಂದ ಮಿದುಳಿನ ಶಕ್ತಿ ವರ್ಧಿಸುತ್ತವೆ. ಪೂರ್ತಿ ಅರಿಯಲು ಕೃತಿಯನ್ನು ಓದಬೇಕು.
ಕೃತಿ: ನಿಮ್ಮ ಮೆದುಳಿನ ಶಕ್ತಿ ಹೆಚ್ಚಿಸುವ ಯುಕ್ತಿ
ಪ್ರಕಾರ: ವಿಜ್ಞಾನ
ಏಕೆ ಓದಬೇಕು?: ಮಿದುಳು ತಿಳಿಯಲು
ಪ್ರ: ವಸಂತ ಪ್ರಕಾಶನ, ಬೆಂಗಳೂರು, ಪುಟಗಳು 152, ಬೆಲೆ ರು. 95
ಕಡಮೆ ಕಾದಂಬರಿ
ಸುನಂದಾ ಪ್ರಕಾಶ ಕಡಮೆಯವರು ಈಗಾಗಲೆ ತಮ್ಮ ಕತೆ, ಕಾದಂಬರಿ, ಕವನಗಳಿಂದ ಹೆಸರು ಮಾಡಿದ್ದಾರೆ. ಅವರ ಈ 'ದೋಣಿ ನಡೆಸೋ ಹುಟ್ಟು' ಕಾದಂಬರಿಯು ಪುಟ್ಟ ಪಟ್ಟಣದ ಮಧ್ಯಮ ವರ್ಗದ ಆಶೆ ಆಕಾಂಕ್ಷೆಗಳು, ಅದನ್ನು ಈಡೇರಿಸಿಕೊಳ್ಳುವಲ್ಲಿ ಪಡುವ ಕಷ್ಟಗಳು, ಸಂಕೀರ್ಣ ಸ್ವರೂಪದ ಸಂಬಂಧಗಳನ್ನು ಉಳಿಸಿಕೊಳ್ಳಲು ಅವರು ಪಡುವ ಕಷ್ಟಗಳು, ಎಲ್ಲ ಸ್ವಾರ್ಥದ ಆಚೆಗೆ ಮಾನವೀಯತೆಗೆ ಅವರು ನೀಡುವ ಬೆಲೆ ಇತ್ಯಾದಿಯನ್ನು ಹೇಳುತ್ತದೆ. ಪಾತ್ರಗಳಿಗೆ ಘಟನೆಗಳಿಗೆ ಪೋಷಕವಾಗಿ ಚಿಕ್ಕಚಿಕ್ಕ ವಿವರಗಳನ್ನೂ ತುಂಬ ಆಸ್ಥೆಯಿಂದ ಕಟ್ಟಿಕೊಡುವ ಅವರ ಶೈಲಿ ಕಾದಂಬರಿಯ ಜೀವ. ಮಧ್ಯಮ ವರ್ಗದ ಶ್ರೀಕಾಂತ, ಮಾನಸಿಕವಾಗಿ ದುರ್ಬಲಳಾಗಿರುವ ಆತನ ಪತ್ನಿ ಅಶ್ವಿನಿ, ಆತನ ತಾಯಿ ಇಂದಿರಮ್ಮ ಅವಳ ಬೀಗತಿ ಮೇಧಕ್ಕ, ಅವರಿಬ್ಬರ ಜಗಳಗಳು, ಸಂಬಂಧಿಕನಾದರೂ ಸೈಟಿನ ವಿಷಯದಲ್ಲಿ ಶ್ರೀಕಾಂತನಿಗೆ ಮೋಸ ಮಾಡುವ ದಯಾನಂದ, ಶ್ರೀಕಾಂತನ ಸಹೋದ್ಯೋಗಿ ಪಲ್ಲವಿ ಇವರೆಲ್ಲರನ್ನು ಹಿಡಿದಿಟ್ಟು ಸುನಂದಾ ಒಂದು ಉತ್ತಮ ಕತೆಯನ್ನು ಹೆಣೆದಿದ್ದಾರೆ.
ಕೃತಿ: ದೋಣಿ ನಡೆಸೋ ಹುಟ್ಟು
ಪ್ರಕಾರ: ಕಾದಂಬರಿ
ಏಕೆ ಓದಬೇಕು?: ಓದುವ ಖುಷಿಗೆ
ಪ್ರ: ಕನ್ನಡನಾಡು ಪ್ರಕಾಶನ, ಗುಲ್ಬರ್ಗಾ. ಪುಟಗಳು 122, ಬೆಲೆ ರು. 100
- ಡಾ. ವಾಸುದೇವ ಶೆಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

