ದೃಷ್ಟಿ
ಪ್ರೀತಿಸುವುದು ಸಾಕಾಗುವುದೆ ಇಲ್ಲ ಈ ಎರಡು ಕಣ್ಣುಗಳು ಕೊಡುವ
ಲೋಕಾನುಭವವ, ಆ ಲೋಕ ಈ ಲೋಕದಲ್ಲಿ ಸಿಗುವ
ವಾಹನವೇರಿ ಓಡಾಡುವ ಸುಖವ
ಅಹಹಾ! ಎನ್ನುವಂತೆ, ಓಹೊಹೊ! ಆಗುವಂತೆ.
ಇದು ಬೇರೆ ಅದು ಬೇರೆ ಆಗಿ ಅನುಭವಕ್ಕೆ
ಯೌವನದಲ್ಲಿ ಕಂಡದ್ದನ್ನು ಧಿಕ್ಕರಿಸಿ ವೃದ್ಧಾಪ್ಯದಲ್ಲಿ
ಒಪ್ಪುವುದು ಒಪ್ಪದಿರುವುದು ಎಲ್ಲ ಕಣ್ಣೇ ತಾನೇ?
ಸತ್ಯದರ್ಶನ ಎನ್ನುವುದು ಕಾಲಕಾಲಕ್ಕೆ ಬದಲಾಗುತ್ತಿರುವ
ಹವಾಮಾನದಂತಿದ್ದರೂ ಅದನ್ನು ಕಾಲಾತೀತಗೊಳಿಸುವುದು
ಇದೇ ಕಣ್ಣು! ದಿಲ್ಲಿಯಲ್ಲೂ ಅಷ್ಟೇ ಹಳ್ಳಿಯಲ್ಲೂ ಅಷ್ಟೆ
ನಳ್ಳಿಯಲ್ಲಿ ಬರುವ ನೀರೆಲ್ಲ ಒಂದೇ ಆಗಿ,
ಯಾರು ಬಯಸುವುದಿಲ್ಲ ಹೇಳಿ
ತಮ್ಮ ಕಣ್ಣುಗಳು ಈ ಪ್ರಕೃತಿಯನ್ನು ಅದು ಇರುವ ಹಾಗೇ
ನೋಡುವುದಕ್ಕೆ?
ಹುಟ್ಟುಕಣ್ಣಿಲ್ಲದವರಿಗೆ ಮಾತ್ರ
ಬಾಲ್ಯ ಯೌವನ ಮುಪ್ಪು ಒಂದೆ ಆಗಿರಬಹುದು
ಹೊರನೋಟಕ್ಕೆ! ಆದರೆ ಎಲ್ಲವೂ ಒಂದೇ ಒಳಗೆ!
ಇರುವುದು ಅದ್ವೈತದ ಹಾಗೆ ಒಳಗೆ
ದ್ವೈತವು ಯಾವತ್ತೂ ಹೊರಗೆ
ಇರುವಂತೆ
ಈ ಎರಡನ್ನೂ ಮೀರಬೇಕೆಂಬಂತೆ ಸದಾ ತುಡಿಯುವ ಹೃದಯ
ತಟ್ಟಿಕೊಳ್ಳುತ್ತದೆ ತನ್ನದೇ ತೊಡೆ ತೋಳುಗಳನ್ನು ಇದಿರಾಳಿ ಇರದೇ!
ಓದಿದರೆ ಸುಮ್ಮನೇ ಕುಳಿತು ಇತಿಹಾಸವನ್ನು ಆಮೇಲೆ ಮಡಚಿಟ್ಟ ಮೇಲೆ ಅದೂ
ಆಗುವುದು ವರ್ತಮಾನ! ಸುಖಾಸೀನ (ಇಸೀಚಯರು) ಬಿಟ್ಟೆದ್ದು
ಕೂಚುಪಡೆ ಕವಾಯತು ನಡೆಸು ಎಂಬಂತೆ ನಡೆದರೆ
ಜಂಬುನೇರಳೆ ಪೇರಳೆ ಮರಗಳ ಹಾಗೆ ಕಾಣುವುದು
ಅಥವಾ ಬರುವುದು ಅಂತರಂಗಕ್ಕೆ ಆ ಕಾಲದ ಜಂಬೂದ್ವೀಪ
ಈ ಕಾಲದಲ್ಲಿ ಭರತವರ್ಷ ಭಾರತ ಅಥವಾ ಇಂಡಿಯಾ ಆಗಿ
ಇಡೀ ಭೂಮಿಯನ್ನು ಮಡಚಿ ಕಂಕುಳಲ್ಲಿಟ್ಟು
ಸುಖಉಂಡ ಖಳನಾಯಕರ ದೇಶವಲ್ಲವೇ ಇದು?
ಕಾಣದಿರಬಹುದೀಗ ಹೊರಗೆ ಸುಲಭವಾಗಿ
ಆದರೆ ಒಳಗೊಳಗೆ ಸಂಭವಿಸುತ್ತಿರುವುದು ಇದೇ ನಮ್ಮನ್ನು ಮೀರಿ
ಅದಾಗ್ಯೂ ದೂರದೃಷ್ಟಿ ಸಮೀಪದೃಷ್ಟಿ ಇರುವುದು ಸುಳ್ಳಲ್ಲ ಮಾರಾಯರೇ
ಸಮದೃಷ್ಟಿ ಎನ್ನುವುದು ಬರೇ ಕಲ್ಪನೆಯಾಗಿ ಇದ್ದೂ ಈಗ
ಬದಲಾಯಿಸುತ್ತಿರುವೆ ಮತ್ತೆ ಮತ್ತೆ ಕನ್ನಡಕವ
ಹೋಗಲಿ ಬಿಡಿ ಎಂದು ಈಗ
ದಿನಾ ಒರಸಬೇಕಾಗಿದೆ ಕನ್ನಡಕವ;
ಹಿಕ್ಕೆ ತೆಗೆದು ತೊಳೆಯುತ್ತಿದ್ದೇನೆ ಕಣ್ಣುಗಳ ಬೆಳ್ಳಂಬೆಳಗ್ಗೆ;
ಮೂಲಮೂರ್ತಿ ಮಾತ್ರ
ಬತ್ತಲೆಯಾಗಿ ಕಾಣುವುದಿಲ್ಲ ಎಲ್ಲೂ
ವಜ್ರಕಿರೀಟ ತೊಡೆಸಿದರೆ ಮಾತ್ರ
ಮಿರಿಮಿರಿ ಮಿಂಚಿ ನೀಡುತ್ತಾನೆ ದರ್ಶನವ
ತಿರುಪತಿಯಲ್ಲಿ!
ಸಿಗಬಹುದೆ ಕೈಗೆ ಇವೆಲ್ಲವನ್ನು ಮೀರಿ ಇರಬಹುದಾದ ಆತ
ಕೊಡಬಲ್ಲವನಾಗಿ ನನ್ನ ಕಣ್ಣಿಗೆ ವಿಶ್ವರೂಪ?
ಅಥವಾ
ಅದಕ್ಕಿಂತ ಮೊದಲು ಅವನೇ ಅವತರಿಸಿದ್ದ
ಮತ್ಸ್ಯ ಕೂರ್ಮ ವರಾಹ ಅವತಾರಗಳಲ್ಲಿ ಹುಟ್ಟಿ ಮತ್ತೆ?
-ಡಾ.ನಾ. ಮೊಗಸಾಲೆ
ಮೊ. 9900701666
E-mail: na.moasale@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

