ಒಂಬತ್ತನೇ ಜ್ಞಾನಪೀಠ!
'ನಮಸ್ಕಾರ, ಕೀರ್ತಿ ಮಾತಾಡ್ತಿರೋದಾ?' ಒಂದು ಸಾಯಂಕಾಲದ ದನಿ. ಬೆಂಗಳೂರಿನ ಲ್ಯಾಂಡ್ಲೈನ್ನಿಂದ ಬಂದ ಕರೆ.'ಹೌದು...

'ನಮಸ್ಕಾರ, ಕೀರ್ತಿ ಮಾತಾಡ್ತಿರೋದಾ?' ಒಂದು ಸಾಯಂಕಾಲದ ದನಿ. ಬೆಂಗಳೂರಿನ ಲ್ಯಾಂಡ್ಲೈನ್ನಿಂದ ಬಂದ ಕರೆ.
'ಹೌದು, ತಾವ್ಯಾರಂತ ಗೊತ್ತಾಗ್ಲಿಲ್ಲ?' ಈ ಮುಂಗಾರು ಮಳೆಯಲಿ, ಯಾವ ಟವರಿಂದ ಯಾವ ಕರೆ ಬರುವುದೋ ಯಾರು ಬಲ್ಲರು! 'ನಾನಪ್ಪ ಜ್ಞಾನಯೋಗಿ (ಹೆಸರು ಬದಲಿಸಲಾಗಿದೆ). ಈಗಷ್ಟೇ ಸಾಪ್ತಾಹಿಕ ನೋಡಿದೆ. 'ದಾಸಸಾಹಿತ್ಯ' ಅಪರೂಪದ ಅಂಕಣ ಅಂತನ್ನಿಸ್ತು. ಜೋಗಿ, ವಸು, ಬಿಆರೆಲ್ಲು ಹೇಳಿದ್ಮೇಲೆ ನೋಡೋದಿಕ್ಕೆ ಶುರುಮಾಡಿದೆ. ನಾನೂ ಕಾದೆ. ನನ್ಗೇನಾದ್ರೂ ಫೋನ್ ಮಾಡ್ತೀಯಾ ಅಂತ. ಕೊನೆಗೆ ನಾನೇ ಕರೆ ಮಾಡ್ದೆ. ಭಟ್ರಿಗೆ ಹೇಳೋಣ ಮಾಡ್ದೆ, ಮತ್ತೆ ನಿನ್ನ ನಂಬರ್ರೇ ಸಿಕ್ತು. ಹ್ಞಾಂ, ನನ್ ಬಗ್ಗೆ ಯಾವತ್ ಬರೀತೀಯಪ್ಪಾ?'
ತುಸು ಅಚ್ಚರಿ ಮತ್ತು ಜಾಸ್ತಿ ಕಸಿವಿಸಿಯೇ ಆಯಿತು. ಸ್ಪೆಷಲ್ಲು ಕೇಸಿದು ಅಂತನ್ನಿಸಿತು. ಏಕೆಂದರೆ, ಪ್ರತಿಬಾರಿ ಲೇಖಕರಿಗೆ ನಾನೇ ಕರೆಮಾಡಿ, ಅವರು ಅಡಗಿಸಿಕೊಂಡ ಚಟಗಳ ಬಗ್ಗೆ ಕೇಳಬೇಕಿತ್ತಲ್ಲ!
'ನಿಮ್ಮ ವ್ಯಸನದ ಬಗ್ಗೆ ಪ್ರೀತಿಯಿಂದ, ಮುಕ್ತವಾಗಿ ಹೇಳ್ಕೊಂಡ್ರೆ ಈ ವಾರನೇ ಬರೆಯೋಣ ಸಾರ್, ಅದಕ್ಕೇನಂತೆ? ನಿಮ್ಮ ಚಟಗಳು ಯಾವುವು ಸರ್?' ಹೆಸರು ಮಾಡಿದ ಸಾಹಿತಿಗಳೂ ಆಗಿದ್ದರಿಂದ ಮಾತು ಮುಂದುವರಿಸಿದ್ದೆ.
'ಹೌದಪ್ಪ ಆ ಕೆಲ್ಸ ಮೊದ್ಲು ಮಾಡ್ಬೇಕು. ಕುಂವೀ, ಜೋಗೀ ಪಾಗಿ, ವಿವೇಕ ಶಾನಭಾಗರೆಲ್ಲ ಇನ್ನೂ ಗಟ್ಟಿ ಇದ್ದಾರೆ. ನಾವಿನ್ನು ಎಷ್ಟ್ ವರ್ಷ ಇರ್ತೀವೋ ಗೊತ್ತಿಲ್ಲ. ಜ್ಞಾನಪೀಠ ಅಂತೂ ಬರ್ಲಿಲ್ಲ...'
'ಅದಕ್ಕ್ಯಾಕೆ ಅಷ್ಟು ಬೇಸರ ಮಾಡ್ಕೋತ್ತೀರಾ ಸಾರ್. ಈ ಬಾರಿ ಮತ್ತೆ ಟ್ರೈ ಮಾಡಿ. 9ನೇ ಜ್ಞಾನಪೀಠ ನಿಮಗಲ್ಲದೆ ಇನ್ನ್ಯಾರಿಗೆ ಸಿಗ್ಬೇಕು ಹೇಳಿ...?' ಈ ಘನಸಾಹಿತಿಗಳೇ ಹಿಂದೊಮ್ಮೆ ಜ್ಞಾನಪೀಠಕ್ಕೆ ಲಾಬಿ ಮಾಡಿದ್ದರ ಬಗ್ಗೆ ಕೇಳಿದ್ದೆ. ಆ ಮಹೋನ್ನತ ಗರಿಯನ್ನು ಮುಡಿಯಲು ಯೋಗ್ಯರಲ್ಲ ಎಂದು ಗೊತ್ತಿದ್ದೂ, ಅದನ್ನು ಈ ಹಿರಿಯ ಸಾಹಿತಿಗಳಿಗೆ ಹೇಗೆ ನೇರವಾಗಿ ಹೇಳೋದು?
'ಹೌದಪ್ಪ ನಿಮ್ಮಂಥ ಹುಡುಗರು, ಅಭಿಮಾನಿಗಳೆಲ್ಲ ನನ್ನ ಹೆಸರನ್ನೇ ಶಿಫಾರಸು ಮಾಡ್ತಾರೆ. ವೋಟ್ ಹಾಕಿ ಆಯ್ಕೆಮಾಡಿಯೇ ಜ್ಞಾನಪೀಠ ಗೌರವ ಕೊಡ್ಬೇಕು. ಇಲ್ಲಾಂದ್ರೆ, ಈ ಲಾಬಿ ನಮ್ಮಂಥೋರಿಂದ ಸಾಧ್ಯನೇ ಇಲ್ಲ' ಅಷ್ಟರಲ್ಲೇ ನಗುವಿನ ಜೊತೆಗೆ ಕೆಮ್ಮೊಂದು ಅವರ ಗಂಟಲಿನಿಂದ ಹರಿದುಬಂತು.
'ಹೋಗ್ಲಿ ಬಿಡಿ ಸರ್, ನೀವು ಅತಿಯಾಗಿ ಪ್ರೀತಿಸಿದ ವ್ಯಸನದ ಬಗ್ಗೆ ಹೇಳಿ...' ವಿಧಿಯಿಲ್ಲದೆ ಕೇಳಬೇಕಾಯಿತು. ಅವರು ಮಾತು ಶುರುಮಾಡಿ ಹತ್ತು ನಿಮಿಷ ಆಗಿತ್ತಲ್ಲ!
'ನಿನ್ಗೆ ಗೊತ್ತಿಲ್ಲ ಕೀರ್ತಿ, ನಾನು ಅವರನ್ನು ದೂರೋದು ಅಂತಲ್ಲ. ಆ ಕಾರ್ನಾಡ, ಮೂರ್ತಿ, ತಿರುಮಲೇಶಂಗೆಲ್ಲ ಏನು ಇಂಗ್ಲಿಷು ಬರುತ್ತೆ? ನೆರೂಡನ ಒಂದು ಪೊಯೆಮ್ಮು ಕೊಟ್ಟು ಅನುವಾದಿಸಿ ಎಂದರೆ ಅದನ್ನು ತಮ್ಮ ಮೂಗಿನ ನೇರಕ್ಕೆ ಮಾಡಿಬಿಡ್ತಾರೆ. ಅಂಥವರು...'
'ಏನ್ ಸಾರ್, ಹೀಗೆ ಹೇಳ್ತೀರಾ? ಕಾರ್ನಾಡರು ಕನ್ನಡ ಪುಸ್ತಕವನ್ನು ಮೌನವಾಗಿ ಓದುತ್ತಲೇ, ಬಾಯಿಯಿಂದ ಇಂಗ್ಲಿಷಿಗೆ ತರ್ಜುಮೆ ಮಾಡ್ತಾರಂತೆ. "ಯಯಾತಿ" ನಾಟಕವನ್ನು ಸತ್ಯದೇವ ದುಬೇಗೆ ಹೀಗೆ ತಾನೆ ಅವರು ಓದಿಹೇಳಿದ್ದು? ಎಲಿಯಟ್, ಯೇಟ್ಸ್ ಬಗ್ಗೆ ವರ್ಷಗಟ್ಟಲೆ ಬೇಕಾದರೂ ಉಪನ್ಯಾಸ ಕೊಡಬಲ್ಲ ಮೂರ್ತಿ ಮೇಷ್ಟ್ರು ಅಷ್ಟು ವೀಕಾ? ಇನ್ನು ತಿರುಮಲೇಶ್...' ನನ್ನ ಮಾತನ್ನು ಅರ್ಧಕ್ಕೇ ತುಂಡರಿಸಿದರು.
ಅವರು ಶುರುಹಚ್ಚಿಕೊಂಡರು; 'ನೀನು ತಪ್ಪು ತಿಳಿದಿದ್ದೀಪ್ಪ. ಭಾಷಾಂತರ ಎಂಬುದು ಉಸಿರು. ತೋರಿಕೆ ಅಥವಾ ಕೃತಕ ಆಗಬಾರದು. ನಾನಿದ್ದೇನಲ್ಲ ನೋಡು...'
'ಮೂಲಕೃತಿಯ ಬಗ್ಗೆ ಹೊಟ್ಟೆಕಿಚ್ಚು ಉಂಟಾಗದಿದ್ದರೆ ಒಳ್ಳೆಯ ಅನುವಾದ ಸಾಧ್ಯವಿಲ್ಲ ಅಂತ ರಾಮಾನುಜನ್ ಹೇಳಿದ್ದಾರಲ್ಲ. ಬೇಜಾರು ಮಾಡ್ಕೋಬೇಡಿ... ಹಾಗಾದರೆ, ನಿಮ್ಗಿರೋದು ಹೊಟ್ಟೆಕಿಚ್ಚಿನ ಚಟವೇ?' ತಮಾಷೆಯಾಗಿ ಕೇಳಿದೆ.
'ಬಿಡಯ್ಯಾ, ಆ ರಾಮಾನುಜನ್ ಏನ್ ಕಿಸ್ದಿದ್ದಾನಂಥ ನನ್ಗೆ ಗೊತ್ತು. ಅವನಿಗೆ ನೆಟ್ಟಗೆ ಮಾತಾಡೋದಿಕ್ಕೇ ಬರ್ತಿರ್ಲಿಲ್ಲ. ಕೀಚು ಕೀಚು ದನಿ. ಬೆಳಗಾವೀಲಿ ಅವ್ನು ಲೆಕ್ಚರರ್ ಆಗಿದ್ದಾಗ ಎಷ್ಟು ಸ್ಟೂಡೆಂಟ್ಸು ಅವನನ್ನು ಗೇಲಿ ಮಾಡ್ಲಿಲ್ಲ? 'ಖಛಟಛಟ್ಡಿಞಛಟಿ ಡಠಜಛ್ಞಡ' ಎನ್ನುವುದರ ಬದಲಾಗಿ 'ಕಿ' ಜಾಗದಲ್ಲಿ '್ಕ' ಸೇರಿಸಿ, ಸ್ಕ್ವೀಕ್ಸ್ ಅಂತ ಬೋರ್ಡಿನ ಮೇಲೆ ಬರೆದು ಚಾಳಿಸುತ್ತಿದ್ದರು. ಒಂದು ಇಂಗ್ಲಿಷ್ ಪದವನ್ನೇ ಉಚ್ಚಾರಣೆ ಮಾಡಲಾಗದವನು ಇನ್ನೆಂಥ ಅನುವಾದದ ಬಗ್ಗೆ ಮಾತಾಡ್ತಾನೆ? ಇಂಥ ಟೈಮಲ್ಲಿ ಅಡಿಗರು, ಕೀರಂ ನಾಗರಾಜ ಇರ್ಬೇಕಿತ್ತು. ಬರವಣಿಗೆ, ಅನುವಾದಗಳಿಗೆ ಒಂದು ಪ್ರಣಾಳಿಕೆ ಹಾಕ್ಕೊಡೋರು.'
'ಇರಲಿ ಸಾರ್, ಈಗ ನಿಮ್ಮ ವ್ಯಸನದ ಬಗ್ಗೆ ಹೇಳಿ...' ಕೇಳುವುದು ನನಗೆ ಅನಿವಾರ್ಯವಾಯಿತು.
'ನನಗೆ ಬರೆಯೋದು, ಮೌನವಾಗಿರೋದೇ ಚಟ' ಎಂದು ನಗು ಹೊಮ್ಮಿಸಿ ಹೇಳಿದರು.
'ಬರೆಯುವ ಚಟ ಎಲ್ಲರಿಗೂ ಇದ್ದೇ ಇರುತ್ತೆ. ಅದು ವ್ಯಸನ ಅಲ್ಲ, ಪ್ರವೃತ್ತಿ. ಬೇರೆ ಏನಾದ್ರೂ... ಕುಡಿತ, ಸಿಗರೇಟಂತ...'
'ಆಗೆಲ್ಲ ಮಾಡಿದ್ದೆ. ಆದರೆ, ಯಾವ ಘಟನೆಯೂ ನೆನಪಿಲ್ಲ. ಲಂಕೇಶ್ ಸಿಕ್ಕಾಪಟ್ಟೆ ಕುಡಿಯೋನು, ಸಿಗರೇಟು ಸೇದೋನು. ಅದೊಂದು ಗೊತ್ತು. ಅವನ ಮುಂದೆ ಈಗಿನೋರು ಯಾರೂ ಚಟವಾದಿಗಳೇ ಅಲ್ಲ. ಪುಳಿಚಾರು ಅಂತಾರಲ್ಲ ಹಂಗೆ.'
'ಅವರು ಬಿಡಿ, ನಿಮ್ಮ ಕುಡಿತದ ಹಿನ್ನೆಲೆ ಹೇಳಿ...'
'ಇಲ್ಲಪ್ಪ ನನ್ಗೆ ಯಾವ ವ್ಯಸನವೂ ಇಲ್ಲ. ಕಮ್ಮಿ ಮಾತಾಡೋದೇ ನನ್ನ ಚಟ. ಸರಿ ಹಾಗಾದ್ರೆ ಸಿಗೋಣ, ಯಾವತ್ತಾದ್ರೂ ಮನೆಗೆ ಬನ್ನಿ'.
ಒಂದು ಧನ್ಯವಾದ ಹೇಳಿದೆ. ಅವರೂ ಫೋನಿಟ್ಟರು. ಈ ವೇಳೆ ಕಾರ್ನಾಡರು ನೆನಪಾದರು. ಅವರು ತಮ್ಮ ಮನೆಯ ಟೆಲಿಫೋನಿನ ಬಳಿ ಕುರ್ಚಿಯನ್ನೇ ಇಡುವುದಿಲ್ಲ. ಮಾತು ಚಟವಾಗಬಾರದು, ಕಡಿಮೆ ಮಾತಾಡಬೇಕೆನ್ನುವ ನಿಲುವಿನ ಹಿನ್ನೆಲೆಯಷ್ಟೇ. ಬಹುಶಃ ನನಗೆ ಕರೆ ಮಾಡಿದ ಸಾಹಿತಿಗಳ ಮನೆಯ ಫೋನಿನ ಪಕ್ಕದಲ್ಲಿ ಬಲವಾದ ಕುರ್ಚಿ ಇಟ್ಟಿದ್ದರು ಅಂತ ತೋರುತ್ತದೆ!
-ಕೀರ್ತಿ
kolgarkeerthi @gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


