ಗೊಂದಲದಲ್ಲಿರುವ ರಾಜ್ಯದ ಮತದಾರ
ಸ್ವತಂತ್ರ ಭಾರತದಲ್ಲಿ ಮುಕ್ತ, ಜನತಾಂತ್ರಿಕ ಚುನಾವಣೆಗೆ ಆರು ದಶಕಗಳ ಇತಿಹಾಸವಿದೆ. ಹಲವು ತಲೆಮಾರುಗಳ ಮತದಾರರು ಈಗಿನ ಸನ್ನಿವೇಶದಲ್ಲಿ ಅರಿವಿನ ಅಭಾವದ ...

ಸ್ವತಂತ್ರ ಭಾರತದಲ್ಲಿ ಮುಕ್ತ, ಜನತಾಂತ್ರಿಕ ಚುನಾವಣೆಗೆ ಆರು ದಶಕಗಳ ಇತಿಹಾಸವಿದೆ. ಹಲವು ತಲೆಮಾರುಗಳ ಮತದಾರರು ಈಗಿನ ಸನ್ನಿವೇಶದಲ್ಲಿ ಅರಿವಿನ ಅಭಾವದ ಸಬೂಬನ್ನು ಹೇಳುವಂತಿಲ್ಲ.
ನಿಮ್ಮ ಓಟು ಯಾರಿಗೆ?
ಆಗಿಂದ್ದಾಗ್ಗೆ ಆ ಪ್ರಶ್ನೆಯನ್ನು ಎದುರಿಸಿರುವ ಮತದಾರ ತನ್ನದೇ ಆದ ರೀತಿಯಲ್ಲಿ ಅದನ್ನು ಬಗೆಹರಿಸಿಕೊಂಡಿದ್ದಾನೆ. ಅದರ ಫಲವನ್ನು ಅನುಭವಿಸಿದ್ದಾನೆ. ಆದರೆ ಈಗಿನ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಎದುರಿಸುತ್ತಿರುವ ರೀತಿಯ ಗೊಂದಲವನ್ನು ಹಿಂದೆಂದೂ ಎದುರಿಸಿರಲಿಲ್ಲ. ಇದು ಹಿಂದಿನ ಚುನಾವಣೆಗಳಂತಲ್ಲ, ರಾಜ್ಯದ ಮುನ್ನಡೆ ಅಥವಾ ಹಿನ್ನಡೆಯ ಸಂಬಂಧದ ನಿರ್ಣಾಯಕವಾದ ಹಂತದ, ಪರ್ವ ಕಾಲದಲ್ಲಿ ನಡೆಯುತ್ತಿರುವ ಚುನಾವಣೆ ಇದು.
ಹಿಂದೆ ಇಲ್ಲದೇ ಇದ್ದ ಹಲವು ಹತ್ತು ರೀತಿಯ ಗೊಂದಲಗಳನ್ನು ಮತದಾರ ಎದುರಿಸಬೇಕಾಗಿದೆ. ಅದನ್ನು ತನ್ನದೇ ಆದ ರೀತಿಯಲ್ಲಿ ತಾನೇ ಬಗೆಹರಿಸಿಕೊಳ್ಳಬೇಕಾಗಿದೆ. ಯಾವ ದಿಕ್ಕಿನಿಂದಲೂ, ಯಾವ ಮೂಲದಿಂದಲೂ ಮತದಾರರಿಗೆ ಸೂಕ್ತ ರೀತಿಯ, ಪ್ರಾಂಜಲ ಮನೋಧರ್ಮದ ಮಾರ್ಗದರ್ಶನ ಸಿಗುತ್ತಿಲ್ಲ, ಸಿಗುವ ಭರವಸೆಯೂ ಇಲ್ಲ.
ನಿಜ. ಇದೆಲ್ಲವೂ ಹಿಂದೆ ಬಳಸಿ ಬಳಸಿ ರಾಜಾ ತಲೆಯ ಸವಕಲ ನಾಣ್ಯದಂತಿರುವ ಕ್ಲೀಷೆಗಳೇ ಆಗಿರಬಹುದು. ಆದರೆ ಅವು ಇಂದಿಗೂ ಪ್ರಸ್ತುತ. ಈಗಿನ ಮತದಾರರ ನಿಜವಾದ ಗೊಂದಲವೇನು? ಮೊಟ್ಟಮೊದಲನೆಯದು ತಾನು ಓಟು ಕೊಡುವುದು, ಕೊಡಬೇಕಾದ್ದು ಪಕ್ಷಕ್ಕೋ ಅಥವಾ ವ್ಯಕ್ತಿಗೋ ಎನ್ನುವುದು. ಹಿಂದೆ ಈ ಪ್ರಶ್ನೆಗೆ ಅನೇಕರು ಸಿದ್ಧಾಂತದ ಆಧಾರದ ಉತ್ತರವನ್ನು ಕೊಟ್ಟು ತಮ್ಮ ಕೈ ತೊಳೆದುಕೊಂಡು ಬಿಡುತ್ತಿದ್ದರು.
ನಮ್ಮವರಿಗೆ (ಜಾತಿ, ಊರು, ನಂಬಿಕೆ) ಮತ ಕೊಡುವುದು ಒಳ್ಳೆಯದೆನ್ನುವ ಭಾವನೆ ಎಲ್ಲರಲ್ಲೂ ಒಂದಲ್ಲ ಒಂದು ಹಂತದಲ್ಲಿ ಸರಿ ಎಂದು ಕಂಡುಬಂದಿರಬಹುದು. ವ್ಯಕ್ತಿ ಯಾರಾದರೇನಂತೆ? ಸರಿಯಾದ ಪಕ್ಷದ ಅಭ್ಯರ್ಥಿಗೆ ಮತ ನೀಡಿದರೆ, ಮುಂದೆ ಆ ಪಕ್ಷವೇ ತನ್ನ ಚುನಾಯಿತ ಪ್ರತಿನಿಧಿಯನ್ನು ನಿಯಂತ್ರಿಸುತ್ತದೆ ಎನ್ನುವ ನಂಬಿಕೆ ಅನೇಕರದ್ದು. ಆದರೆ ರಾಜಕೀಯ ಜೀವನದ ಹಲವು ಹತ್ತು ತಿರುವುಗಳನ್ನು ಕಣ್ಣಾರೆ ಕಂಡವರು ಈಗ ಪಕ್ಷದ ನಿಲವುಗಳನ್ನು ಪ್ರಾಮಾಣಿಕ ನಿಲವುಗಳೆಂದು ತಿಳಿದುಕೊಳ್ಳುವುದು ಕಷ್ಟ. ಯಾರೂ ಯಾರ ಮೇಲೂ ನಿಯಂತ್ರಣಾಧಿಕಾರವನ್ನು ಹೊಂದಿಲ್ಲ. ರಾಜಕೀಯ ಪಕ್ಷಗಳು ಚುನಾವಣೆಗೆ ಮುನ್ನ, ಚುನಾವಣೆಯ ಅನಂತರ ಅಪವಿತ್ರ ಮೈತ್ರಿಯನ್ನು ಕೇವಲ ಅಧಿಕಾರಕ್ಕಾಗಿಯೇ ಮಾಡಿಕೊಂಡಿರುವ ಉದಾಹರಣೆಗಳು ಕರ್ನಾಟಕದಲ್ಲೇ ಇದೆ.
ಪಕ್ಷವನ್ನು ಬದಲಾಯಿಸುವುದು ಚುನಾಯಿತ ವ್ಯಕ್ತಿಗಳಿಗೆ ಈಗ ಕಾಯಿದೆಯ ವಿಧಿ ನಿಯಮಗಳಿಂದ ಕಷ್ಟವಾಗಿದ್ದರೂ, ತಮ್ಮದೇ ಆದ (ಅಧಿಕಾರದ ಬಯಕೆ) ಕಾರಣಗಳಿಗಾಗಿ ಪರಸ್ಪರ ಪಕ್ಷದ್ರೋಹವನ್ನು ಸಹಿಸುವ ಪಕ್ಷಗಳೂ ಇವೆ. ಅವೆಲ್ಲವೂ ಗಂಭೀರವಾದ ಸಿದ್ಧಾಂತಗಳನ್ನು ಪ್ರತಿಪಾದಿಸುವ ಸಂಘಟನೆಗಳೇ. ಇದು ರಾಜ್ಯದ ಅನುಭವಾಮೃತ. ಪಕ್ಷಗಳು ಸದಸ್ಯರನ್ನು ನಿಯಂತ್ರಿಸುತ್ತವೋ ಅಥವಾ ವ್ಯಕ್ತಿಗಳು ಪಕ್ಷಗಳನ್ನು ನಿಯಂತ್ರಿಸುತ್ತಾರೋ ಎನ್ನುವುದು ಬೀಜವೃಕ್ಷದ ವಿವಾದದಂತೆ. ಬೀಜ ಮೊದಲೋ, ವೃಕ್ಷ ಮೊದಲೋ?
ಮತದಾರರು 'ನಾವೇನೋ ನಮ್ಮ ಕೆಲಸ ಮಾಡಿದ್ದೀವಿ, ಪ್ರತಿನಿಧಿಗಳು ದಾರಿ ತಪ್ಪಿದರೆ ನಾವೇನು ಮಾಡಲು ಸಾಧ್ಯ' ಎಂದು ಗೊಣಗಿ ಸುಮ್ಮನಾಗಬೇಕು. ಅದಕ್ಕಿಂತ ಹೆಚ್ಚಾಗಿ ಏನನ್ನೂ ಮಾಡುವ ಸ್ಥಿತಿಯಲ್ಲಿ ಜನರಿಲ್ಲ. ಜನಪರ, ಭೀಕರ ಹೋರಾಟಗಳ ಕಾಲ ಈಗ ಮುಗಿದು ಹೋಗಿದೆ. ಹೋರಾಟ ಇಲ್ಲವೇ ಇಲ್ಲ. ಅದು ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಹಾಗಿದ್ದರೆ ಜನರ ಹಕ್ಕುಗಳು ದಮನವಾದಾಗಲೂ ಸುಮ್ಮನಿರಬೇಕೆ? ಇದು ಮತದಾನಕ್ಕೆ, ಚುನಾವಣೆಯ ಕಾಲದ ಗೊಂದಲಕ್ಕೆ ನೇರವಾಗಿ ಸಂಬಂಧಪಡದೇ ಇದ್ದರೂ, ಜನರ ಹಕ್ಕುಗಳ ರಕ್ಷಣೆಗೆ ಆಳುವ ವರ್ಗಗಳು ಈಗ ಸಮುದಾಯಗಳ ಒತ್ತಡಗಳಿಗೆ ತಲೆ ಬಾಗಿ ಕಾಯಿದೆಗಳನ್ನೇ ರಚಿಸಿವೆ. ಆದ್ದರಿಂದ ಕಾಯಿದೆಯ ಹೋರಾಟಕ್ಕೆ ಅವಕಾಶವಿರುವುದರಿಂದ ಮಾತನಾಡಿದರೆ ಬೀದಿಗೆ ಬಿದ್ದು ಹೋರಾಟ ನಡೆಸಬೇಕಾದ ಸ್ಥಿತಿ ಈಗ ಬಹುತೇಕ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಹೋರಾಡಬೇಕಾದರೆ ಕಾಯಿದೆಯ ಮಾರ್ಗವನ್ನೇ ಹಿಡಿಯಬೇಕು.
ಈಗಾಗಲೇ ಸಾಕಷ್ಟು ಪ್ರಚಾರವಾಗಿರುವಂತೆ ರಾಜಕೀಯ ಪಕ್ಷಗಳ ಚುನಾವಣೆ ಕಾಲದ ಪ್ರಣಾಳಿಕೆಗಳಿಗೆ ಯಾವ ಮೌಲ್ಯವೂ ಇಲ್ಲ. ಚುನಾವಣೆ ಪ್ರಣಾಳಿಕೆಯ ವಾಗ್ದಾನಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದೀರಿ ಎಂದೋ ಅಥವಾ ಪ್ರಣಾಳಿಕೆಯ ವಾಗ್ದಾನದ ಪೂರೈಕೆಯ ವಿಚಾರದಲ್ಲಿ ನಿರ್ಲಕ್ಷ್ಯದಿಂದ ಇದ್ದೀರಿ ಎಂದೋ ಪಕ್ಷಗಳನ್ನು ಅಥವಾ ಅದರ ಅಪರಾಧಿಗಳನ್ನು ನ್ಯಾಯಾಲಯಗಳ ಮುಂದೆ ನಿಲ್ಲಿಸುವುದು ಸಾಧ್ಯವೇ?
ಚುನಾವಣೆ ಪ್ರಣಾಳಿಕೆ ಪಕ್ಷದ ಉದ್ದೇಶದ ಪ್ರಕಟಣೆ ಅಷ್ಟೇ. ಅದಕ್ಕೆ ಉದ್ದೇಶಕ್ಕಿಂತ (ಅದು ಪ್ರಾಮಾಣಿಕವೋ, ಅಪ್ರಮಾಣಿಕವೋ ಎನ್ನುವುದು ಬೇರೆ ಪ್ರಶ್ನೆ) ಹೆಚ್ಚಿನ ಮೌಲ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಇದುವರೆಗಿನ ಅನುಭವವನ್ನು ಪರಿಶೀಲಿಸುವುದು ಸೂಕ್ತ. ಈಗಿನ ಸನ್ನಿವೇಶದಲ್ಲಿ ಜನಸಾಮಾನ್ಯ ವರ್ಗಗಳನ್ನು ಪ್ರತಿನಿಧಿಸುವ ವ್ಯಕ್ತಿಗಳಲ್ಲಿ ಕೋಟ್ಯಾಧೀಶ್ವರರದ್ದೇ ಒಂದು ದೊಡ್ಡ ಪಾಲು. ಶತಕೋಟೀಶ್ವರರಿಗೂ ಜನಪ್ರತಿನಿಧಿಗಳ ಸ್ಥಾನ-ಮಾನ ಬೇಕಾಗಿದೆ. ಕಳೆದ 3 ಚುನಾವಣೆಗಳಲ್ಲಿ ಯಾವ ರಾಜಕೀಯ ಪಕ್ಷವೂ, ಪಕ್ಷದ ಅಭ್ಯರ್ಥಿಯೂ ವರ್ಗ ಸಂಘರ್ಷ, ವರ್ಣ ಸಂಘರ್ಷದ ಮಾತಾಡಿದ್ದು ಕೇಳಿ ಬರುತ್ತಿಲ್ಲ. ಸರ್ಕಾರದ ಹಣದಲ್ಲಿ (ಅದು ಸಾಲ ಮಾಡಿದ ಹಣ) ಬಡವರ ಹೆಸರಿನಲ್ಲಿ ಅಗ್ಗದ ಧಾನ್ಯದ ಪೂರೈಕೆಯ ಯೋಜನೆಗಳು ಕಾರ್ಯಗತವಾಗುತ್ತಿವೆ. ಜೀವಧಾರಣೆ ಸಾಧ್ಯ. ಆದರೆ ಅಲ್ಲಿನ ಭ್ರಷ್ಟಾಚಾರದ ಪ್ರಸ್ತಾಪವನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದು ಪ್ರತಿಷ್ಠಿತ ಸಮಾಜದ ಜನಾಭಿಪ್ರಾಯವನ್ನು ರೂಪಿಸುವವರಿಗೆ ಸಂಬಂಧಿಸಿದ್ದಲ್ಲ. ಹಾಗಿದ್ದರೆ ಜನ ಗಮನಿಸಬಹುದಾದ ವಿಷಯಗಳು ಯಾವವು? ನಿಸ್ಸಂದೇಹವಾಗಿ ಜಾತೀಯತೆಯ ಕ್ರೌರ್ಯ, ಭ್ರಷ್ಟಾಚಾರದ ಅಟ್ಟಹಾಸ ಹಾಗೂ ಕುಸಿದು ಬೀಳುತ್ತಿರುವ ಆಡಳಿತ ವ್ಯವಸ್ಥೆ.
ಈ ಪರಿಸ್ಥಿತಿಗೆ ಪಕ್ಷಗಳೂ ಜವಾಬ್ದಾರಿಯನ್ನು ಹೊರಬೇಕು. ಜನರೂ ತಮ್ಮ ಪಾಲಿನ ಹೊಣೆಯನ್ನು ಒಪ್ಪಿಕೊಳ್ಳಲು ಸಿದ್ಧರಾಗಬೇಕು. ಇದು ಸಾಧ್ಯವಾಗುವ ರೀತಿಯಲ್ಲಿ ಮತ ನೀಡಬೇಕು. ಅದೊಂದು ಆಸೆ ಅಷ್ಟೇ. ಕರ್ನಾಟಕದ ಜನ ಕಾಂಗ್ರೆಸ್, ಜನತಾ, ಬಿಜೆಪಿ ಪ್ರಭುತ್ವಗಳನ್ನು ಕಂಡಿದ್ದಾರೆ. ಅಧಿಕಾರ ಗಳಿಕೆಗೆಂದೇ ಒಂದಾಗಿ, ಅಧಿಕಾರ ಗ್ರಹಣ ಮಾಡಿದ ಪಕ್ಷಗಳ ಕೂಟಗಳ ಆಡಳಿತವನ್ನು ನೋಡಿದ್ದಾರೆ. ಇನ್ನು ಮುಂದೆ ಏನೇನನ್ನು ನೋಡಬೇಕೋ ಗೊತ್ತಿಲ್ಲ. ಪಕ್ಷಗಳನ್ನು ನಂಬುವಂತಿಲ್ಲ. ವ್ಯಕ್ತಿಗಳನ್ನು ನಂಬುವಂತಿಲ್ಲ. ಹಾಗಿದ್ದರೆ ಸಾಮಾನ್ಯ ಜನ ಏನು ಮಾಡಬೇಕು? ಆ ಪ್ರಶ್ನೆಗೆ ಕೊಡಬಹುದಾದ ಒಂದೇ ಒಂದು ಉತ್ತರ: ಪಕ್ಷಗಳಿಗೆ ವ್ಯಕ್ತಿಗಳಿಗೆ ಅವರಿವರು ಅಂಟಿಸುವ ಹಣೆ ಪಟ್ಟಿಯನ್ನು ನಿಮ್ಮ ಸಾಮಾನ್ಯ ಜ್ಞಾನದ ಒರೆಗಲ್ಲಿನ ಪರೀಕ್ಷೆಗೆ ಗುರಿಪಡಿಸಿದ ಅನಂತರ ನಿಮ್ಮ ಪ್ರಾಮಾಣಿಕತೆಯನ್ನು ಉಳಿಸಿಕೊಳ್ಳುವ ರೀತಿಯಲ್ಲಿ ಮತದಾನ ಮಾಡಿ. ಈ ವಿಚಾರದಲ್ಲಿ ಗೊಂದಲಗಳಿರಬಹುದು. ಆದರೆ ಪೂರ್ವಾಗ್ರಹವಿಲ್ಲದ ಚಿಂತನೆ ಆ ಗೊಂದಲವನ್ನು ಬಗೆಹರಿಸುತ್ತದೆ. ಎಷ್ಟೇ ಗೊಂದಲವಿದ್ದರೂ, ಮತದಾನ ಮಾಡದೇ ಇರುವುದಕ್ಕೆ ಅದೊಂದು ನೆಪವಾಗಬಾರದು. ಎಲ್ಲರೂ ಮತದಾನ ಮಾಡಲೇಬೇಕು.
-ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


