ಸದ್ಯ
ಆಫೀಸಿನಿಂದ ಹೊರಬಂದ ಕೂಡಲೇ ಲ್ಯಾಪ್ಟಾಪ್ ಬ್ಯಾಗಿನ ವಜ್ಜೆಯಿಂದ ಭುಜ ನೋಯತೊಡಗಿದರೂ ಅದರ ಸಂದೇಶ ಮಿದುಳನ್ನು ತಲುಪುವುದಿಲ್ಲ. ಮಿದುಳಿನ ಸೂಕ್ಷ್ಮ ಸೆಲ್ಗಳಲ್ಲಿ ಸಂವೇದನೆಗಳ ಶಾಂತ ಅಲೆ ಪ್ರವಹಿಸುವುದಿಲ್ಲ. ಮಂಡಲವೇ ಕ್ರೆಡಿಟ್ಟಿಗೋಸ್ಕರ ಕೊತಕೊತನೆ ಕುದಿಯತೊಡಗಿ ಮೈಮನಗಳ ನೋವು ಆವಿಯಾಗಿಬಿಡುತ್ತದೆ. ನರಕೋಶಗಳನ್ನೆಲ್ಲ ಚಿಕ್ಕಚಿಕ್ಕದಾಗಿ ಕತ್ತರಿಸಿ ಪರ್ಸನಾಲಿಟಿ ಡೆವಲಪ್ಮೆಂಟ್, ಜಾಬ್ಸ್ಕಿಲ್ಲು, ಸಾಫ್ಟ್ಸ್ಕಿಲ್ಲುಗಳನ್ನೆಲ್ಲ ಕಸಿ ಮಾಡಿ ಹೊಸ ಪ್ರಜಾತಿಯ ಬುದ್ಧಿ ಭಾವಗಳ ಬೋನ್ಸಾಯ್ಗಳನ್ನು ಛೇಂಬರುಗಳಲ್ಲೆಲ್ಲ ಬೆಳೆಯಲಾಗಿದೆ.
ಕುಳಿತು ಗಾಡಿ ಸ್ಟಾರ್ಟ್ ಮಾಡಿದ ಬಳಿಕ ಅದು ಟು ಡು ಲಿಸ್ಟ್ ಜತೆಗೆ ಸಂಚರಿಸತೊಡಗಿತು. ಡಿನ್ನರ್ಗೆ ವೆಜಿಟೇಬಲ್ ಸೂಪ್ ಮಾಡಬೇಕು. ಹನ್ನೆರಡು ಇ-ಮೇಲ್ ಕಳುಹಿಸಬೇಕು. ಒಂದು ಪಿ.ಪಿಟಿ ಪ್ರೆಸೆಂಟೇಶನ್ ರೆಡಿ ಮಾಡಿಕೊಳ್ಳಬೇಕು. ನಾಲ್ಕು ಅತಿ ಅರ್ಜೆಂಟ್ ಕಾಲ್ಗಳು. ಅದರಲ್ಲಿ ಒಂದು ಕಲೀಗ್ಗೆ, ಪ್ರಮೋಷನ್ ಪಡೆದು ಸೊಫಿಸ್ಟಿಕೇಟೆಡ್ ಹಿಪೊಕ್ರಸಿ ಪ್ರದರ್ಶಿಸುತ್ತಿರುವ ಅವಳ ಮರ್ಮಕ್ಕೆ ತಾಗುವಂತಹ ಒಂದು ಡೈಲಾಗ್ ಕೂಡ ನೆನಪಿನಲ್ಲಿ ಸ್ಟೋರ್ ಆಗಿದೆ. ತಾನು ಹೇಳಲಿರುವ ಆ ಮಾತಿಗೆ ನಗು ಮೂಡಿ ತಂಪಾದಂತಾಯಿತು. ಸಿಕ್ಕಾಪಟ್ಟೆ ಬಿಸಿಲಿದೆ. ಮುಂದಿನ ತಿರುವಿನಲ್ಲಿ ಹೂದಾನಿಗೆ ಹಾಕಲು ತಾಜಾ ವೈಟ್ ಆರ್ಕಿಡ್ ಖರೀದಿಸಬೇಕು. ಅವನ ಜತೆಗೊಂದು ಜಗಳ ಸರಿಯಾಗಿ ಸಿಗ್ನಲ್ ಬೀಳುವ ಹೊತ್ತಿಗೆ ನೆನಪಾಯ್ತು. ಎದುರಿಗೆ ಪವರ್ ಯೋಗಾದ ಹೋರ್ಡಿಂಗ್ ನೋಡಿದ ಕೂಡಲೇ ಅತಿಮುಖ್ಯವಾಗಿರುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಗಿಲ್ಟ್ ಕಾಡಿತು. ರೆಗ್ಯುಲರ್ ಎಕ್ಸರ್ಸೈಜ್ ಜತೆಗೆ ಸಮಯ ಹೊಂದಿಸಿ ಇದನ್ನು ರೂಢಿಸಿಕೊಂಡರೆ ಮತ್ತಷ್ಟು ಆಕ್ಟಿವ್ ಆಗಿ ಪರ್ಫಾರ್ಮ್ ಮಾಡಲು ಸಾಧ್ಯ. ಆಫೀಸಿನ ಕೆಲಸದಲ್ಲಿ ಬೆಸ್ಟ್ ಆಗಿರುವವರೆಲ್ಲರೂ ಯಾವುದಾದರೂ ಒಂದು ಕಲೆಯಲ್ಲಿ ಗುಡ್ ಆಗಿರಲು ಶ್ರಮಿಸುತ್ತಿದ್ದಾರೆ. ಸೋನು ಗಿಟಾರ್ ಕಲಿಯುತ್ತಿದ್ದಾಳೆ. ಶ್ರೇಯಾ ಆಗಾಗ ಕ್ಲಾಸಿಕಲ್ ಡ್ಯಾನ್ಸಿನ ಇನ್ವಿಟೇಶನ್ ಹಿಡಿದು ಎದುರಿಗೆ ನಿಲ್ಲುತ್ತಾಳೆ. ಅಷ್ಟೇ ಅಲ್ಲ ನಿಮಿಷಗಟ್ಟಲೆ ಕಾರ್ಯಕ್ರಮಕ್ಕೆ ಬರಲಿರುವ ಗಣ್ಯರ ಪರಿಚಯ ನಾಟ್ಯದ ರೀತಿಯಲ್ಲಿ ಕಣ್ಣರಿಳಿಸಿ ಕತ್ತು ಹುಬ್ಬು ಕೊಂಕಿಸಿ ಹೇಳುವುದನ್ನು ಕೇಳುವಾಗಲೆಲ್ಲ ಹೊಟ್ಟೆಯಲ್ಲಿ ಹೇಗೋ ಆಗುತ್ತದೆ. ನೂರ್ ಕೋನ್ ಹಿಡಿದು ಯಾರು ಕೈಮುಂದೆ ಮಾಡಿದರೂ ಮೆಹಂದಿ ಹಾಕಿ ಹೊಗಳಿಕೆಗೆ ಕೆಂಪಾಗಿಬಿಡುತ್ತಾಳೆ. ರಿತೇಶ್ ದಿನವೂ ಧ್ಯಾನ ಮಾಡಿ ಸ್ಥಿತಪ್ರಜ್ಞನಂತೆ ಪೋಸು ಕೊಡುತ್ತಿದ್ದಾನೆ. ಆಗೆಲ್ಲ ತಾನು ಸುಮ್ಮನೆ ಎಸ್ಸೆಮ್ಮೆಸ್ ನೋಡುವುದೋ, ಅನಗತ್ಯ ಕಾಲ್ ಮಾಡಲು ಎದ್ದು ಹೋಗುವುದೋ ಮಾಡಬೇಕಾಗುತ್ತದೆ. ಅದೇ ಡಿಪ್ರೆಸ್ಡ್ ಮೂಡಿನಲ್ಲಿರುವಾಗ ಸಿಗ್ನಲ್ ತೆರವಾಗಿದ್ದಕ್ಕೆ ಗಾಡಿ ಓಡಿಸಿದಳು. ಮುಂದಿನ ತಿಂಗಳ ಸುಹಾನಿಯ ಮದುವೆಗೆ ಅವಳ ರಾಜಸ್ಥಾನಿ ಉಡುಗೆಯಲ್ಲೇ ಹೋಗಿ ಸರ್ಪ್ರೈಸ್ ಕೊಡಬೇಕೆಂದು ಪಾರ್ಕ್ ಮಾಡುವಾಗ ಅಂದುಕೊಂಡಳು.
ಬಹಳ ಕಂಫರ್ಟಬಲ್ ಟೀ ಶರ್ಟ್ ಹಾಕಿಕೊಂಡಿದ್ದರೂ ಒಂಥರಾ ಕಿರಿಕಿರಿ. ಕುಮಟೆಯ ಸೆಖೆಗೆ ತಾನೂ ಹೀಗೇ ಒದ್ದಾಡುತ್ತಿದ್ದೆ. ಆದರೆ ಹೊಟ್ಟೆತುಂಬ ಊಟ ಮಾಡಿ ಹೊರಗಿನ ಗಾಳಿಗೆ ಮಲಗಿಬಿಟ್ಟರೆ ಅದೆಂಥ ಆರಾಮು. ಕುಮಟೆ ನೆನಪಾಗಿದ್ದೇ ಸಮುದ್ರ ತೀರ ಮತ್ತು ಮೀನು ನೆನಪಾಯ್ತು. ಮನೆಗೆ ಒಂದು ದಿನದ ಮಟ್ಟಿಗಾದರೂ ಹೋಗಿ ಬರಬೇಕೆನಿಸುತ್ತಿದೆ. ಆಯಿ ಫೋನ್ ಮಾಡಿದಾಗಲೂ ಆರೋಗ್ಯವನ್ನಷ್ಟೇ ವಿಚಾರಿಸುತ್ತಾಳೆ. ಅವಳ ಕಾಳಜಿಯ ಆರ್ದ್ರ ದನಿ ಕೇಳಲು ಮತ್ತೇನು ವಿಷಯ, ಮತ್ತೇನು ವಿಷಯ ಎಂದು ಮಾತು ಮುಂದುವರಿಸಿದಾಗಲೂ ಅವಳು ಹೆಚ್ಚಿಗೆ ಏನೂ ಹೇಳುವುದೇ ಇಲ್ಲ. ನನ್ನ ಮದುವೆ ತಡವಾಗುತ್ತಿದೆ ಎಂದು ಬಯ್ಯುತ್ತಿದ್ದವಳು. ಈಗ ತಾನು ಈ ಲಿವ್ ಇನ್ ಸಂಬಂಧದಿಂದ ಹೊರಬಂದು ಮದುವೆಯಾಗುವುದು ಮತ್ತಷ್ಟು ತಡವಾಗುತ್ತದೆ ಎಂದು ಅಂದಾಜಿಸಿದ ಅವಳು ನಿರ್ಲಿಪ್ತಳಾಗಿಬಿಟ್ಟಿದ್ದಾಳೆ. ಏಳಲೂ ಮನಸ್ಸಾಗುತ್ತಿಲ್ಲ. ಕುಸಿದುಬಿದ್ದ ಭಂಗಿಯಲ್ಲೇ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಾರಂಭಿಸಿ ಎಷ್ಟೋ ವರ್ಷಗಳಾಗಿವೆ. ಜಿಮ್, ಟ್ರಕ್ಕಿಂಗ್, ಸ್ವಿಮ್ಮಿಂಗ್ ಹೀಗೆ ಬಂದು ಹಾಗೆ ಹೋಗುತ್ತವೆ. ಸ್ವಲ್ಪ ದಪ್ಪಗಾಗಿದ್ದೇನೆ ಎಂದು ತಿಳಿದು ಸ್ವತಃ ಸಮಾಧಾನ ಮಾಡಿಕೊಳ್ಳುವುದು ಒಳ್ಳೆಯದು. ಬೇರೆಯವರಿಗೆ ಕೇಳಿದರೆ ಬೊಜ್ಜು ಎಂದು ಡಿಫೈನ್ ಮಾಡಿಬಿಡುತ್ತಾರೆ. ಇಲ್ಲಿ ಸುಸ್ತೆನಿಸಿದರೆ ಮನೆ ತಲುಪಿದ ಮೇಲೆ ಮತ್ತಷ್ಟು ನಿತ್ರಾಣ. ಅವಳ ಜತೆ ಜಗಳವೇನು ಮಾತನಾಡುವ ಉಮೇದೂ ಇರುವುದಿಲ್ಲ. ಆದರಿವತ್ತು ಅವಳಿಗೆ ಸರಿಯಾಗಿ ವಿವರಿಸಬೇಕು.
'ಅವಳಿನ್ನೂ ಚಿಕ್ಕ ಹುಡುಗಿ' ತನ್ನ ಧ್ವನಿಯನ್ನು ಅದ್ಯಾಕೋ ಅವನು ಸ್ವಲ್ಪ ಮೃದುವಾಗಿಸಿ ಹೇಳಿದ್ದ.
'ಈ ಚಿಕ್ಕ ಹುಡುಗಿಯರಿಗೆಲ್ಲ ಹಾಸಿಗೆಯಲ್ಲಿ ದೊಡ್ಡವರಾಗುವುದಕ್ಕೆ ತಿಳಿದಿರುತ್ತದೆ' ಅವಳು ದನಿ ಎತ್ತರಿಸಿ ಮಾತನಾಡಿದಳು. ತಾನು ಸರಿಯಾಗಿ ಮಾತನಾಡುತ್ತಿದ್ದೇನೆ ಎಂಬ ನಂಬಿಕೆಯಿಂದ.
'ಡಿಸ್ಗಸ್ಟಿಂಗ್, ಈ ರೀತಿಯಲ್ಲಿ ಯೋಚಿಸುತ್ತೀಯಾ. ನಾನು ಮಾತ್ರ ನಿನ್ನ ವರ್ತನೆ ನಡವಳಿಕೆಗಳನ್ನು ಕೇವಲ ಸೋಶಿಯಲ್ ಎಂದು ಒಪ್ಪಿಕೊಂಡು ಸುಮ್ಮನಿರಬೇಕು.'
'ಓ ಗಾಡ್ ನೀನು ಸಾಮಾನ್ಯ ಗಂಡಸೆ. ನೀನು ಪಕ್ಕಾ ಹೆಂಡತಿಯ ತರಹ ಮಾತನಾಡುತ್ತಿದ್ದಿ' ಅವಳು ತಡಬಡಾಯಿಸಿದಳು.
'ಅಷ್ಟೇ ಅಲ್ಲ ಒಮ್ಮೊಮ್ಮೆ ಪ್ರೀತಿಸಿ ಮದುವೆಯಾಗು ಎಂದು ಪೀಡಿಸುವ ಹುಡುಗಿಯರ ತರಹ ಮೂರ್ಖತನದಿಂದ ವರ್ತಿಸುತ್ತಿ. ಕಡಿಮೆ ಬುದ್ಧಿಯ ಹುಡುಗಿಯರ ತರಹ'
'ಆಯ್ ಹೇಟ್ ಇಟ್'. ಅವಳೂ ಅವನಿಗೆ ಗಂಡಸಿನ, ಪ್ರೇಮಿಯ, ಗಂಡನ ಮತ್ತೊಂದರ ವರ್ತನೆಗಳನ್ನೆಲ್ಲ ಆರೋಪಿಸಿದಳು.
ಇಬ್ಬರೂ ಸ್ವಲ್ಪ ಹೊತ್ತು ಮೌನವಾದ ಮೇಲೆ ಇಬ್ಬರಿಗೂ ತಮ್ಮ ತಪ್ಪು ಕ್ಲಿಯರ್ ಆಯಿತು. ಮಾತನಾಡುತ್ತಲೇ ಇರುವವರಲ್ಲಿ ಏನಾದರೂ ವಿಷಯ ನಿಖಾಲಿಯಾಗುವುದು ಅವರು ಮೌನವಾದರೆ ಮಾತ್ರ.
'ನಾವು ಅದೆಷ್ಟು ಅನ್ಕಲ್ಚರ್ಡ್ ಆಗಿ ಅನಾಗರಿಕರ ತರಹ ವರ್ತಿಸಿದ್ವಿ' ಅವಳೆಂದಳು. ಅವನು ಮೌನವಾಗಿದ್ದ. ಅದನ್ನವಳು ಸಮ್ಮತಿ ಎಂದು ತಿಳಿದುಕೊಂಡರೆ ಅದವನ ಆಲಸ್ಯವಾಗಿತ್ತು. ನಂತರ ಸ್ವಲ್ಪಹೊತ್ತು ಕುಳಿತು ಡಿಸ್ಕಶನ್ ಮಾಡಿದ ನಂತರ ಏಕೆಂದರೆ ಕುಳಿತು ಮಾತನಾಡುವುದೆಂದರೆ ಅತ್ಯಂತ ವಿವೇಕಯುತವಾಗಿ ಮಾತನಾಡುತ್ತೇವೆ ಎಂಬ ನಂಬಿಕೆ ಇರುವುದರಿಂದ ಅವರೊಂದು ತೀರ್ಮಾನಕ್ಕೆ ಬಂದರು. ಒಬ್ಬರನ್ನೊಬ್ಬರು ಬಿಟ್ಟುಹೋಗುವವರೆಗೆ ಒಂದೇ ಸಲ ಅಥವಾ ಮೊದಲು ಯಾರಾದರೂ ಈ ಸ್ವಾತಂತ್ರ್ಯ ಪಡೆದು ಕೊಟ್ಟು ಹೋಗುವವರೆಗೆ ತಾವು ಮದುವೆಯಾಗಿರುವವರಲ್ಲ. ಪ್ರೀತಿಸುವವರೂ ಅಲ್ಲ. ಲಿವ್ ಇನ್ ಅಷ್ಟೇ ಎಂಬು ಆಗಾಗ ಒಬ್ಬರಿಗೊಬ್ಬರು ನೆನಪು ಮಾಡಿಕೊಡುತ್ತ ಇರುವುದು ಎಂಬ ಒಪ್ಪಂದವಾಯ್ತು ಸದ್ಯ!ಟ
-ಮಮತಾ ಆರ್.
9449628457
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

