ಸಾಪ್ತಾಹಿಕಪ್ರಭ

ಬಂಜರಾಗದ ಬಯಲು...

ಅವತ್ತು ನಾನು ಕೈಗೊಂಡ ನಿರ್ಧಾರ ಅದೆಷ್ಟು ಸೂಕ್ತವಾದುದೆಂದು ನೆನೆಸಿಕೊಂಡಾಗಲೆಲ್ಲಾ ಹೆಮ್ಮೆಯಾಗುತ್ತದೆ. ಇವತ್ತುಗಳಿಂದ ಹೊರತಾದ ನಾಳೆಗಳ ಕನಸಿಗೆ ಕೈಹಾಕಿ ನಿಂತ ಗಳಿಗೆ....

ಬಂಜರಾಗದ ಬಯಲು...
Published On :

ಅವತ್ತು ನಾನು ಕೈಗೊಂಡ ನಿರ್ಧಾರ ಅದೆಷ್ಟು ಸೂಕ್ತವಾದುದೆಂದು ನೆನೆಸಿಕೊಂಡಾಗಲೆಲ್ಲಾ ಹೆಮ್ಮೆಯಾಗುತ್ತದೆ. ಇವತ್ತುಗಳಿಂದ ಹೊರತಾದ ನಾಳೆಗಳ ಕನಸಿಗೆ ಕೈಹಾಕಿ ನಿಂತ ಗಳಿಗೆ. ಬದುಕೆಂದರೆ ಅದಂಥದ್ದೇ ಬಿಗಿತ. ಬೇಕೆಂದಾಗಲೆಲ್ಲ ಬೇಕಾದಂತೆ ಬಿಗಿತ ಸಡಿಲಗೊಳ್ಳಲು ಮನಸ್ಸು ನಾವು ಹಾಕಿಟ್ಟ ಗಂಟೇನೂ ಅಲ್ಲವಲ್ಲ? ವರ್ತಮಾನದ ತುಡಿತವನ್ನು ಅರಿತು ಅರಳಬೇಕಲ್ಲಾ? ಕಸುವು ಕರಿಗಟ್ಟಿ ಕುಳಿತಾಗಲೆಲ್ಲ ಹಂಬಲ ಹಾದು ಹೋಗುತ್ತಿದ್ದುದೇನೋ ನಿಜ.
ಇವತ್ತು ಆ ಕ್ಷಣ ಕೂಡಿ ಬಂದೀತೇ? ಮತ್ತದೇ ನೆವಕ್ಕೆ ಸೋತದ್ದು ಹೊಸದೇನಲ್ಲ. ಉದ್ದೇಶಗಳ ಅರಿವೂ ಸ್ಪಷ್ಟವಿದೆ. ಹಬ್ಬಬೇಕಲ್ಲಾ ಬಳ್ಳಿ. ಬಳಸಿ ತಬ್ಬಿಕೊಂಡರಲ್ಲದೇ ತೆವಳುವುದು? ತೆವಳಿದ ಬಳಿಕವಲ್ಲವೇ ನೀಕುವುದು?  ನೀಕಿ- ಜೀಕಿದ ಕೊನೆಯಲ್ಲಿ ತೇವದ ಸಿಂಚನವಾಗಬೇಕು. ಎರಡು ಒಂದಾಗಬೇಕು. ಒಂದು ಬೆಸೆದು ಬೆರೆತ ಬಳಿಕ, ಮತ್ತೆ ಮೇಲ್ಮುಖ, ಕೆಳಮುಖವಾಗಿ ಹರಡಿ ಹೊರಳಾಡಿ ಕೊನೆಗೊಮ್ಮೆ ಪಲ್ಲವಿಸ ಹೊರಟಾಗಲೇ ಒಟ್ಟೊಟ್ಟಿಗೆ ಸ್ಖಲಿಸಬೇಕು. ಹಾಗಾದಾಗಲೇ ಒಂದೊಂದು ಬೆವರ ಹನಿಯೂ ತಂಪುತಂಪಾಗಿ, ಹಣೆ, ಬಗಲು, ಎದೆ- ಮುಗಿಲು ಉದರದ ಕೆಳಗಿನ ಪದರುಗಳಿಂದ ಜಾರಿ ಕೆಂಪೇರಿದ ಕೆನ್ನೆಗೆ, ಬಸವಳಿದ ತೋಳಿಗೆ, ದಣಿದ ಸೊಂಟಕ್ಕೆ ತಂಪನ್ನೀಯುವುದು. ಮತ್ತೆ ಮತ್ತೆ ಬಯಕೆಗಳು ಮುತ್ತಿ ಮನದಂಗಳದಲ್ಲೆಲ್ಲಾ ಹರಿದಾಡಿ ಕೊಸರಾಟಕ್ಕೆ ಕೆಸರಾಗಿ ಮೆತ್ತಿಕೊಳ್ಳುತ್ತಲೇ ಇವೆ. ಮನದ ಮೂಲೆಯಲ್ಲಿ ಹುಟ್ಟಿದ ಕನಸಿಗೆ ಹಂದರ ಕಟ್ಟಿ, ಚಪ್ಪರ ಬಿಗಿದು, ಕಂಬಗಳೆಲ್ಲ ಕಂಗೊಳಿಸುವಂತೆ ಸಿಂಗರಿಸಿ ನನಗೆ ನಾನೇ ದೂರಕ್ಕೆ ನಿಂತು ನಿರುಕಿಸಿ ಸಂಭ್ರಮಿಸಿದ್ದೇನು ಕಡಿಮೆಯೇ? ಇವತ್ತು ಹೂದಲಾದೀತೆಂದು ಕಾದದ್ದೇನು ಕನಿಷ್ಠವೇ? ಅದೇ ಸಂಭ್ರಮದಲ್ಲಿ ಹುಚ್ಚೆದ್ದು ಕುಣಿದ ಭರಕ್ಕೆ ಹಾಸಿಗೆಯಿಂದ ಎಗರಿ ಪಕ್ಕದ ನೆಲಕ್ಕುರುಳಿ, ಬೆನ್ನೆಲ್ಲ ತಣ್ಣಗಾದಂತಾಗಿ ಎಚ್ಚರಾಗಿ ನೋಡಿದರೆ ಆತ ಅದೇ ದಿವ್ಯ ನಿದ್ದೆಯಲ್ಲಿ ಮುಗ್ಧವಾಗಿ ಮಲಗಿದ್ದಾನೆ. ಇನ್ನು ಮುಲುಗುವ ಮಾತೆಲ್ಲಿಯದು? ಮುಗಿಲ ಮಲ್ಲಿಗೆಯ ಮುಡಿಗೇರಿಸಿ ನಿಲ್ಲಿಸಿ, ಸಿಹಿವಣ್ಣ ತಂದು ಬಾಯಿಗಿಟ್ಟು ಬಕ್ಕಣೆಯ ಮಾಡಿ, ಮಧುರ ಮಾತುಗಳ ಹೂಡಿ, ಪಲ್ಲಂಗಕ್ಕೆ ತಂದರೂ ಅಲ್ಲಿಯವರೆಗೆ ಎಲ್ಲವೂ ಸರಿಯೇ. ಆದರೆ ಮುಂದಿನದಕ್ಕೆ ಸ್ಪಂದಿಸಬೇಕಲ್ಲ? ಅಲ್ಲಿ ಒಂದಿನಿತೂ ತೇವದ ಸುಳಿವೇ ಇಲ್ಲ.
ಅಂತರಂಗದ ಸ್ವರೂಪವೇ ಯಾವತ್ತೂ ಬಹಿರಂಗದ ಆಕಾರವನ್ನು ಮೆಟ್ಟಿ ನಿಲ್ಲುತ್ತವಂತೆ. ಹಾಗಾದರೆ ಆತ ಆಂತರಂಗದಲ್ಲೂ ಹೀಗೆಯೇ? ಕಲ್ಲಿನಂತೆಯೇ ಆಗಿದ್ದರೆ ಅದು ಮೆದುವಾಗುವುದು ಯಾವಾಗ ಕಲ್ಲು ಕರಗುವ ಸಮಯಕ್ಕೆ ಇನ್ನೆಷ್ಟು ಕಾಯಬೇಕು. ಎಂಥೆಂಥಾ ಬಂಡೆಗಳ ಪರ್ವತವೇ ಸಿಡಿದು ಸಣ್ಣಗಾಗಿವೆ. ಮರಳಿ ಮರಳಾಗಿ, ಅದು ಮಣ್ಣಾಗಿ ಮಣ್ಣು ಮೆತ್ತಗಾಗಿ, ಅದರಲ್ಲಿ ಬೀಜ ಒಂದಾಗಿ, ಬಿತ್ತದ್ದೆಲ್ಲಾ ಬೆಳೆಯಾಗಿ ಮತ್ತೆ ಅಲ್ಲೇ ಹೂತು ಹೊರಹೊಮ್ಮಿ, ಬಿದ್ದು ಮೊಳೆತು... ಇಷ್ಟೆಲ್ಲಾ ಆಗಿರುವಾಗ ಇಲ್ಲೇಕೆ ಹೀಗೆ? ಹಣ್ಣೊಳಗಿನ ಸಣ್ಣ ಕ್ರಿಮಿಯೂ ಇಡೀ ಹಣ್ಣನ್ನು ಕೊಳೆಸಿಬಿಡಬಹುದು. ಬಿಟ್ಟರೆ ಮಾಗಿದ ಹಣ್ಣು ಸಹ ಹಾಗೆಯೇ ಚಿರುಟಿ, ಮುರುಟಿ, ಸುರುಟಿ ನಿಲ್ಲಬಹುದು. ಎಂತೋ ಅಂತೂ ಬಿಡುವ ಪ್ರಶ್ನೆಯೇ ಇಲ್ಲ. ಏನಾದರೊಂದು ಮಾಡಲೇಬೇಕು. ಹಾಗೆ ಮಾಡಲು ಮೊದಲು ಎಲ್ಲವೂ ಸಜ್ಜಾಗಬೇಕು. ನಾನು ಇನ್ನಷ್ಟು ಅನುಕೂಲೆಯಾಗಿ ವರ್ತಿಸಬೇಕು. ಫಲ, ಫಲಿತದ ಮಾತು ನಂತರದ್ದು.
ಕೊರಡನ್ನು ಹಾಗೇ ಬಿಟ್ಟರೆ ಗೆದ್ದಲು ಹಿಡಿದೀತೇ ವಿನಃ ವರ್ಷಗಳವರೆಗೆ ಬಿಟ್ಟರೂ ಚಿಗಿಯುವ ಪ್ರಶ್ನೆ ಇಲ್ಲವೇ ಇಲ್ಲ. ನೆಲ ನೀರಿಗೆ ತಾಗದ ಕೊರಡು ಕೊನರೀತು ಹೇಗೆ? ನೀರಾಗುವ ಮುನ್ನ ನೇರವಾಗಿ ನುಗ್ಗುವ ಗೂಳಿಗೆ ಸಿಗ್ಗುವುದು ಧೂಳಿನ ದಿಬ್ಬವಷ್ಟೇ. ಕಾದು ಕಂಗಾಲಾಗಿ ನಿಂತು ಕೊನೆಗೊಮ್ಮೆ ನೀರ ಅರಸಿ ಹೊರಟವಳಿಗೆ ಕಂಡದ್ದು ಕರಿಮೋಡಗಳ ಸಾಲು. ಇನ್ನು ತಡಮಾಡುವುದು ತರವಲ್ಲ. ನಿರ್ಧರಿಸಿ ನೊಗವನ್ನು ಹೆಗಲಿಗೇರಿಸಿಕೊಳ್ಳಲು, ಗಳೆಯ ಹೊಡೆಯ ಹೊರಟವಳಿಗೆ ಅನ್ನಿಸಿದ್ದಷ್ಟೇ. ಭೂಮಿ ಬಂಜರಲ್ಲವೇ ಅಲ್ಲ. ಅಲ್ಲಿ ಪ್ರಯತ್ನಗಳೇ ಆಗಿಲ್ಲ. ವರ್ತಮಾನದ ಬಿಗಿತವನ್ನು ನೊಗವೂರಿಸಿಕೊಂಡು ಭೇದಿಸಿಬಿಡಬೇಕು. ಹೆಂಟೆಯೊಡೆದು ಹರವುವ ಮೊದಲು ಮಳೆ ಬಂದೇ ಬರುತ್ತದೆ. ಮೊದಲ ಮಳೆಗೆ ಹದ ಹರಿದಾಡದಿದ್ದೀತು, ಪ್ರಯತ್ನಗಳ ನಿಲ್ಲಿಸಬೇಡೆಂದು ಹೇಳುತ್ತೇನೆ. ಭೂಮಿ ಹದವಾಗಲು ಹೊಸಬೀಜ ಬಿತ್ತಬೇಕು. ಅದರಲ್ಲಿ ಕೆಲವು ಮೊಳೆತಾವು. ಅವನ್ನೇ ಬೀಜಕ್ಕೆ ಬಿಟ್ಟೇನು! ಅದರ ಜೀವ ಶಕ್ತಿಗಳೇ ಫಲ ನೀಡಿಯಾವು. ಮತ್ತೆ ಮತ್ತೆ ಹೊಸ ಬೀಜ ಸೃಷ್ಟಿಯಾಗುತ್ತಲೇ ಹೋದಾವು. ನಾಳೆಗಳ ಕನಸುಗಳಿಗೆ ಇದೇ ಕಸುವು ತುಂಬಿಸುವ ಉತ್ಸಾಹದಲ್ಲಿ ಆತನನ್ನು ಹುರುದುಂಬಿಸಿದೆ. ನೈಜ ಪ್ರೀತಿಯ ಪ್ರಯತ್ನ ಫಲಕೊಟ್ಟೇ ಕೊಡುತ್ತದೆಂಬ ನಂಬಿಕೆ ಸುಳ್ಳಾಗಲಿಲ್ಲ. ವರ್ಷಗಳವರೆಗೆ ಕಾದದ್ದು ವ್ಯರ್ಥವಾಗಲಿಲ್ಲ. ಕೊನೆಗೂ ಆ ರಾತ್ರಿ ಸುರಿದಿತ್ತು ಮಳೆ. ನನಗೀಗ ದಣಿವಿನೊಂದಿಗೆ ನೆಮ್ಮದಿಯ ನಿದ್ದೆ.


 -ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.