ಸಾಪ್ತಾಹಿಕಪ್ರಭ

ಅಂಕಿತ 500

ಭಾರತೀಯ ಕಾವ್ಯ ಚಿಂತನೆಯಲ್ಲಿ ಕವಿಯಷ್ಟೇ ಸಹೃದಯನಿಗೂ ಮಹತ್ವವಿದೆ. ಸರಸ್ವತೀತತ್ವದ ಪರಿಕಲ್ಪನೆಯ ಪ್ರಕಾರ ಕಾವ್ಯಪ್ರಕ್ರಿಯೆಯ...

ಅಂಕಿತ 500
Published On :

ಭಾರತೀಯ ಕಾವ್ಯ ಚಿಂತನೆಯಲ್ಲಿ ಕವಿಯಷ್ಟೇ ಸಹೃದಯನಿಗೂ ಮಹತ್ವವಿದೆ. ಸರಸ್ವತೀತತ್ವದ ಪರಿಕಲ್ಪನೆಯ ಪ್ರಕಾರ ಕಾವ್ಯಪ್ರಕ್ರಿಯೆಯ ಒಂದು ತುದಿಯಲ್ಲಿ ಕವಿ ಇದ್ದರೆ ಮತ್ತೊಂದು ತುದಿಯಲ್ಲಿ ಸಹೃದಯನಿದ್ದಾನೆ. ಇವರಿಬ್ಬರ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯಿಂದಲೇ ಸರಸ್ವತೀತತ್ವ ಪೂರ್ಣತ್ವ ಪಡೆಯುವುದು.  
ಆಧುನಿಕ ಸಂದರ್ಭದಲ್ಲಿ ಸರಸ್ವತಿ ತತ್ವವನ್ನು ಪುನರ್ ವ್ಯಾಖ್ಯಾನಿಸಬೇಕಾಗಿದೆ. ಇದನ್ನು ಪುಸ್ತಕ ಸಂಸ್ಕೃತಿ ಎಂದು ಕರೆದು ವಿವರಿಸುವುದಾದರೆ ಕವಿ, ಸಹೃದಯನ ಜೊತೆಗೆ ಇಲ್ಲಿ ಪ್ರಕಾಶಕನಿಗೂ ಮಹತ್ವದ ಪಾತ್ರವಿದೆ. ಪುಸ್ತಕ ಸಂಸ್ಕೃತಿಯ ಒಂದು ತುದಿಯಲ್ಲಿ ಲೇಖಕನಿದ್ದರೆ, ಅದರ ಮತ್ತೊಂದು ತುದಿ ಓದುಗ. ಇವರಿಬ್ಬರ ನಡುವೆ ಕೊಂಡಿಯಂತೆ ಕ್ರಿಯಾಶೀಲನಾಗಿರುವವನು ಪ್ರಕಾಶಕ. ಹೀಗಾಗಿ ಪುಸ್ತಕ ಸಂಸ್ಕೃತಿಯ ಮೂರು ಪ್ರಮುಖ ಅಂಗಗಳು ಲೇಖಕ-ಪ್ರಕಾಶಕ-ಓದುಗ.
ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಅವರಲ್ಲಿ ಪುಸ್ತಕ ಸಂಸ್ಕೃತಿಯ ಈ ಮೂರೂ ವ್ಯಕ್ತಿತ್ವಗಳು ಒಂದು ಹದದಲ್ಲಿ ಬೆರೆತಿವೆ. ಕಂಬತ್ತಳ್ಳಿ ಸ್ವತಃ ಲೇಖಕರು, ಅತ್ಯುತ್ತಮ ಪ್ರಕಾಶಕರು, ಸಾಹಿತ್ಯಸೂಕ್ಷ್ಮಗಳನ್ನು ಬಲ್ಲ ಸಹೃದಯಿ. ಹೀಗಾಗಿಯೇ ಕನ್ನಡದಲ್ಲಿ ಪುಸ್ತಕ ಸಂಸ್ಕೃತಿ ಬೆಳೆಸುವಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದು. ಅಂಕಿತ ಪುಸ್ತಕದ ಬಗ್ಗೆ ಮಾತನಾಡುವಾಗ ಪ್ರಕಾಶ್ ಅವರ ಜೊತೆಗೆ ಪ್ರಭಾ ಅವರ ಹೆಸರನ್ನು ನಾವು ಪ್ರಸ್ತಾಪಿಸಲೇಬೇಕು ಅಥವಾ ಅವರ ಹೆಸರೇ ಮೊದಲು ಬರಬೇಕು. ಸಾಹಿತ್ಯವನ್ನು ಪ್ರೀತಿಯಿಂದ ಅಧ್ಯಯನ ಮಾಡಿರುವ ಪ್ರಭಾ, ಪ್ರಕಾಶ್ ಅವರಂತೆಯೇ ಸ್ವತಃ ಲೇಖಕಿ, ಅಂಕಿತ ಪುಸ್ತಕದ ಬೆನ್ನೆಲುಬು. ಅನುರೂಪ ದಂಪತಿಗಳಾದ ಇವರಿಬ್ಬರ ಸತತ ಪರಿಶ್ರಮ, ನಿಷ್ಠೆ, ಪುಸ್ತಕಪ್ರೀತಿ, ಸಜ್ಜನಿಕೆಯ ಸ್ನೇಹಶೀಲ ಸ್ವಭಾವ ಅಂಕಿತ ಪುಸ್ತಕವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದೆ. ಇವರ ಮಗ ಪ್ರದೀಪ್ ಸಹ ಪ್ರತಿಭಾವಂತ ಚಿತ್ರ ಕಲಾವಿದ. ಈ ಸಂದರ್ಭದಲ್ಲಿ ಸಹಜವಾಗಿಯೇ ಅಭಿನವದ ರವಿಕುಮಾರ್- ಚಂದ್ರಿಕಾ ದಂಪತಿ ನನಗೆ ನೆನಪಾಗುತ್ತಾರೆ.
ರಂಗಭೂಮಿಯ ಶಿಕ್ಷಣ ಪಡೆದಿದ್ದ ಪ್ರಕಾಶ್ ಕಂಬತ್ತಳ್ಳಿ 1995ರ ವೇಳೆಗೆ ರಂಗಭೂಮಿಗೆ ಸಂಬಂಧಿಸಿದ ಒಂದು ಕೃತಿ ರಚಿಸುತ್ತಾರೆ. ಪ್ರಕಟಣೆಯ ಸಮಸ್ಯೆ ಎದುರಾಗುತ್ತದೆ. ಆಗ ತಾವೇ ಏಕೆ ಪ್ರಕಟಿಸಬಾರದು ಎಂದು ಆಲೋಚಿಸಿ ಅಂಕಿತ ಪುಸ್ತಕ ಪ್ರಕಾಶನ ಸಂಸ್ಥೆ ಆರಂಭಿಸಿದರು. ನಂತರ ಎದುರಾದದ್ದು ಪುಸ್ತಕ ವಿತರಣೆಯ ಸವಾಲು. ಆ ಸವಾಲನ್ನು ಸ್ವೀಕರಿಸಿದ ಪ್ರಕಾಶ್ 1998ರಲ್ಲಿ ತಮ್ಮದೇ ಪುಸ್ತಕ ಮಳಿಗೆ ತೆರೆದರು. ಆ ಕಾಲಕ್ಕೆ, ಯಾವ ಕಾಲಕ್ಕೂ ಸಹ ಪುಸ್ತಕ ಪ್ರಕಟಣೆ ಹಾಗೂ ಮಾರಾಟ ಲಾಭದಾಯಕ ಉದ್ಯಮವೇನೂ ಅಲ್ಲ. ನಿಶ್ಚಿತ ಆದಾಯದ ಉದ್ಯೋಗವನ್ನು ಬಿಟ್ಟು ಪ್ರಕಾಶ್ ಹಾಗೂ ಪ್ರಭಾ ಆತ್ಮವಿಶ್ವಾಸವನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಅಂಕಿತ ಪುಸ್ತಕ ಆರಂಭಿಸಿದ್ದು ಈಗ ಒಂದು ಮುಖ್ಯ ಘಟನೆಯೆಂಬಂತೆ ತೋರುತ್ತಿದೆ.
ಪ್ರಕಾಶ್ ವೃತ್ತಿಪರ ಉದ್ಯಮಿಯಲ್ಲ. ಆದರೆ ಉದ್ಯಮದ ಸೂಕ್ಷ್ಮಗಳನ್ನು ಚೆನ್ನಾಗಿ ಬಲ್ಲವರು. ಹಾಗಾಗಿ ಅಂಕಿತ ಪುಸ್ತಕ ಅವರ ಕೈ ಹಿಡಿದಿದೆ. ಆ ಯಶಸ್ಸನ್ನು ಅವರು ಕನ್ನಡದಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಬಲಗೊಳಿಸಲು ಹಲವು ನೆಲೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ.
ಪ್ರಕಾಶಕರಲ್ಲಿ ಎರಡು ಬಗೆ. ಒಂದು ಅದನ್ನು ಒಂದು ಉದ್ಯಮವಾಗಿ ಕೈಗೊಂಡು ವೃತ್ತಿಪರವಾಗಿ ನಡೆಸುವಂಥವರು. ಮತ್ತೊಂದು ಪ್ರಕಾಶನ ಸಂಸ್ಥೆಯನ್ನು ಒಂದು ಸಂಸ್ಕೃತಿ ಕೇಂದ್ರವಾಗಿ ರೂಪಾಂತರಿಸಿದವರು. ಪ್ರಕಾಶ್ ಎರಡನೆಯ ಗುಂಪಿಗೆ ಸೇರುತ್ತಾರೆ. ಕನ್ನಡ ಸಂಸ್ಕೃತಿಯಲ್ಲಿ ಇಂಥವರ ಒಂದು ಪರಂಪರೆಯೇ ಇದೆ.
ಕೆಲವು ಜಾಗಗಳಿಗೆ ಸಾಂಸ್ಕೃತಿಕ ಮಹತ್ವವಿರುತ್ತದೆ. ಧಾರವಾಡದ ಮನೋಹರ ಗ್ರಂಥಮಾಲಾದ ಅಟ್ಟ, ಮೈಸೂರಿನ ಕಾಫಿ ಹೌಸ್, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪಿಪಿ ಕಟ್ಟೆ, ಗಾಂಧಿಬಜಾರಿನ ಸುಮತೀಂದ್ರನಾಡಿಗರ ಕರ್ನಾಟಕ ಬುಕ್‌ಹೌಸ್, ಬಾಕಿನ ಅವರ ಲಿಪಿಮುದ್ರಣ ಇತ್ಯಾದಿ. ಇವುಗಳು ಲೇಖಕರ, ಕಲಾವಿದರ, ಚಿಂತಕರ ಕೂಡುದಾಣಗಳು. ಇಂಥವನ್ನು ಜಯಂತ ಕಾಯ್ಕಿಣಿ ಜಾಗೃತ ಜಾಗಗಳು ಎಂದು ಕರೆಯುತ್ತಾರೆ. ಅಂಕಿತ ಪುಸ್ತಕ ಸಹ ಇಂಥ ಒಂದು ಜಾಗೃತ ಜಾಗ. ಅನೇಕ ಲೇಖಕರಿಗೆ, ಕಲಾವಿದರಿಗೆ, ಚಿಂತಕರಿಗೆ ಒಂದು ಮೀಟಿಂಗ್‌ಪಾಯಿಂಟ್. ನಾವು ಗೆಳೆಯರು ಒಟ್ಟಿಗೇ ಸೇರಬೇಕೆಂದಾಗ ಅಂಕಿತದಲ್ಲಿ ಸೇರೋಣವೇ ಎಂದು ಕೇಳುವುದು ತೀರ ಸಹಜ. ಪ್ರಕಾಶ್ ದಂಪತಿಗಳು ಇಂಥ ಭೇಟಿಗಳಿಗೆ ಪ್ರೀತಿಯಿಂದಲೇ ಸ್ಥಳಾವಕಾಶ ಕಲ್ಪಿಸುತ್ತಾರೆ.
ಮೊದಲಿನಿಂದಲೂ ಯಾವುದೇ ನಿರ್ದಿಷ್ಟ ವಿಚಾರ, ಚಳುವಳಿಗೆ ಅಂಟಿಕೊಳ್ಳದೆ ಎಲ್ಲ ಬಗೆಯ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸುತ್ತಾ ಬಂದಿರುವುದು ಅಂಕಿತದ ವಿಶೇಷ. ಆದರೆ ಗುಣಮಟ್ಟದಲ್ಲಿ ಎಂದೂ ಅಂಕಿತ ರಾಜಿ ಮಾಡಿಕೊಂಡಿಲ್ಲ. ಸುಂದರ ಮುಖಪುಟ, ಉತ್ತಮ ವಿನ್ಯಾಸ, ಸಾಧ್ಯವಾದಷ್ಟು ಕಡಿಮೆ ಬೆಲೆ, ಉತ್ತಮ ಕಾಗದ ಬಳಕೆ, ಅಚ್ಚಿನ ದೋಷಗಳಿಲ್ಲದಂತೆ ವಹಿಸುವ ವೈಯಕ್ತಿಕ ಕಾಳಜಿ- ಇವುಗಳಿಂದಾಗಿ ಅಂಕಿತದ ಪಸ್ತಕಗಳು ಮಾದರಿ ಪ್ರಕಟಣೆಗಳಾಗಿವೆ.
ಅಂಕಿತ ಪುಸ್ತಕ ಸಂಸ್ಕೃತಿಯ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ. ಹಿರಿಯ ಲೇಖಕರ ಜೊತೆಗೆ ಪ್ರತಿಭಾವಂತ ಹೊಸ ಬರಹಗಾರರನ್ನು ಗುರ್ತಿಸಿ, ಅವರ ಕೃತಿಗಳನ್ನು ಪ್ರಕಟಿಸುತ್ತಿದೆ. ಪತ್ರಿಕೆಗಳ ಸಹಯೋಗದಲ್ಲಿ ಕಥಾಸ್ಪರ್ಧೆಗಳನ್ನು ಏರ್ಪಡಿಸಿ, ಬಹುಮಾನಿತ ಕತೆಗಳ ಸಂಕಲನ ಪ್ರಕಟಿಸುತ್ತಿದೆ. ಪುಸ್ತಕ ಪ್ರಚಾರಕ್ಕಾಗಿ ಟಾಪ್‌ಟೆನ್ ಎಂಬ ಪರಿಕಲ್ಪನೆಯನ್ನು ರೂಪಿಸಿ ಗಮನಾರ್ಹ ಪುಸ್ತಕಗಳನ್ನು ಓದುಗರ ಗಮನಕ್ಕೆ ತರುತ್ತಿದೆ. ಲೇಖಕರ ಜೊತೆ ಸಂವಾದ ಏರ್ಪಡಿಸಿ ಓದುಗ-ಲೇಖಕರ ನಡುವೆ ಅರ್ಥಪೂರ್ಣ ಸಂಬಂಧ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಆಯೋಜಿಸಿ, ಲೇಖಕರನ್ನು ಸತ್ಕರಿಸಿ, ಅಂದೇ ಲೇಖಕರಿಗೆ ಗೌರವಪ್ರತಿ, ರಾಯಧನ ನೀಡುವ ಸಂಪ್ರದಾಯವನ್ನು ನಿರಂತರವಾಗಿ ಮಾಡುತ್ತ ಬಂದಿದೆ. ಪುಸ್ತಕೋದ್ಯಮದಲ್ಲಿ ಪ್ರಕಾಶಕರಿಗೆ ಯಾವುದೇ ಪ್ರಶಸ್ತಿ- ಪುರಸ್ಕಾರ ಇಲ್ಲದಿರುವುದನ್ನು ಮನಗಂಡು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಅಂಕಿತ ಪುಸ್ತಕ ಪ್ರಶಸ್ತಿಯನ್ನು ಅತ್ಯುತ್ತಮ ಪ್ರಕಾಶಕರಿಗೆ ನೀಡುತ್ತಿದೆ. ನವಕರ್ನಾಟಕ ಪಬ್ಲಿಕೇಷನ್ಸ್, ಮನೋಹರ ಗ್ರಂಥಮಾಲಾ, ಅಕ್ಷರ ಪ್ರಕಾಶನ- ಈ ಪ್ರಶಸ್ತಿಗೆ ಪಾತ್ರವಾಗಿವೆ. ಅಂಕಿತದ ಸಾಧನೆಗೆ ಅನೇಕ ಪ್ರಶಸ್ತಿಗಳೂ ಸಂದಿವೆ. ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಶಸ್ತಿ, ಕಸಾಪದ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪುರಸ್ಕಾರ, ಎಸ್ವಿಪಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ- ಇವುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದೀಗ ಅಂಕಿತಕ್ಕೆ ಐದುನೂರು ಪುಸ್ತಕಗಳ ಪ್ರಕಟಣೆಯ ಸಂಭ್ರಮ. ಎರಡು ದಶಕಗಳಿಗೂ ಕಡಿಮೆ ಅವಧಿಯಲ್ಲಿ ಉತ್ತಮ ಗುಣಮಟ್ಟದ ಐದುನೂರು ಪುಸ್ತಕ ಪ್ರಕಟಿಸುವುದು ನಿಜಕ್ಕೂ ಸಾಹಸವೇ ಸರಿ. ಪ್ರಕಾಶ್ - ಪ್ರಭಾ ದಂಪತಿ ಈ ಸಾಧನೆ ಮಾಡಿದ್ದಾರೆ. ಅವರಿಗೆ ಎಲ್ಲ ಸಹೃದಯರ ಪರವಾಗಿ ಅಭಿನಂದನೆಗಳು.ಟಿ



'ಅಂಕಿತ'ದ 'ಐನೂರರ ಸಂಭ್ರಮ'  ಮತ್ತು ಎನ್‌ಎಸ್‌ಎಲ್ ಅವರ 'ರಮಣ ಮಹರ್ಷಿ' ಕೃತಿ ಬಿಡುಗಡೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಅಫ್ ವರ್ಲ್ಡ್ ಕಲ್ಚರ್‌ನಲ್ಲಿ ಇಂದು (ಏ.28) ಬೆಳಗ್ಗೆ .
-ನರಹಳ್ಳಿ ಬಾಲಸುಬ್ರಹ್ಮಣ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.