ಹೊಸ ಅಲೆಮಾರಿ
ಎಲ್ಲ ರೀತಿಯ ಸೌಕರ್ಯಗಳೂ ಕೈಗೆಟುಕಿದರೆ ಯಾವ ಅದ್ಭುತಗಳೂ ನಡೆಯಲ್ಲ. ವಿರೋಧ ಇದ್ದಷ್ಟು ಪ್ರತಿರೋಧ ವ್ಯಕ್ತಗೊಳ್ಳುತ್ತದೆ ಎನ್ನುವ...

ಚಿತ್ರ: ದಿ 400 ಬ್ಲೋಸ್ (1959)
ಭಾಷೆ: ಫ್ರೆಂಚ್
ನಿರ್ದೇಶನ: ಫ್ರಾಕೊಯಿಸ್ ಟ್ರುಫಾಟ್
ಅವಧಿ: 99 ನಿಮಿಷ
ತಾರಾಗಣ: ಜಾನ್- ಪಿಯರ್ ಲಿಯಾಡ್, ಅಲ್ಬರ್ಟ್ ರಿಮಿ, ಕ್ಲೇರ್ ಮೌರೀರ್.
ಎಲ್ಲ ರೀತಿಯ ಸೌಕರ್ಯಗಳೂ ಕೈಗೆಟುಕಿದರೆ ಯಾವ ಅದ್ಭುತಗಳೂ ನಡೆಯಲ್ಲ. ವಿರೋಧ ಇದ್ದಷ್ಟು ಪ್ರತಿರೋಧ ವ್ಯಕ್ತಗೊಳ್ಳುತ್ತದೆ ಎನ್ನುವ ಹಾಗೆ, ಅಡೆತಡೆ-ಆತಂಕಗಳು ಎದುರಾದರೆ 'ಅಬ್ಬಾ...!' ಎನ್ನುವಂಥ ಪ್ರಯೋಗಗಳು ನಡೆದು ಹೊಸ ಆವಿಷ್ಕಾರಗಳಿಗೆ ದಾರಿಯಾಗುತ್ತದೆ. ಸಿನಿಮಾ ಕೂಡ ಜಾಗತಿಕ ವಿದ್ಯಮಾನಗಳಿಂದ ಸಾಕಷ್ಟು ಪ್ರಭಾವಿತಗೊಂಡಿದೆ ಎಂಬುದನ್ನು ಅಂತಾರಾಷ್ಟ್ರೀಯ ಸಿನಿಮಾ ದಿಗ್ಗಜರು ನಿರೂಪಿಸಿದ್ದಾರೆ. ಅದರಲ್ಲೂ ಎರಡನೇ ಪ್ರಪಂಚ ಯುದ್ಧದ ನಂತರ ಮೂಡಿಬಂದ ಜಾಗತಿಕ ಸಿನಿಮಾಗಳ ಮೇಲೆ ಕಣ್ಣಾಡಿಸಿದರೆ ಇದು ಸ್ಪಷ್ಟವಾಗುತ್ತದೆ. ಅಲ್ಲದೆ, ಈ ಹಿನ್ನೆಲೆಯಲ್ಲಿ ತಯಾರಾದ ಬಹಳಷ್ಟು ಸಿನಿಮಾಗಳು ಜಗತ್ತಿನ ಸಿನಿಮಾ ಗತಿಯನ್ನೇ ಬದಲಾಯಿಸಿವೆ. ಇದಕ್ಕೆ ಇಟಲಿಯ ನವ್ಯವಾಸ್ತವಿಕ ಸಿನಿಮಾಗಳು ಹಾಗೂ ಫ್ರೆಂಚ್ನ ಹೊಸ ಅಲೆಯ ಚಿತ್ರಗಳೇ ಸಾಕ್ಷಿ.
'ಸಿನಿಮಾ ವ್ಯಾಪಾರ ಅಲ್ಲ, ಅದು ಕಲೆ' ಎಂದು ಮೊದಲು ನಿರೂಪಿಸಿದ್ದು ಫ್ರೆಂಚ್ ಚಿತ್ರರಂಗ. ಇಲ್ಲುಂಟಾದ ಹೊಸ ಅಲೆ, ಚಿತ್ರಲೋಕದ ಬಹುದೊಡ್ಡ ಕ್ರಾಂತಿಕಾರಿ ಬದಲಾವಣೆ. ಎರಡನೇ ಜಾಗತಿಕ ಯುದ್ಧಕ್ಕೂ ಮುನ್ನ ಫ್ರಾನ್ಸ್, ಜರ್ಮನ್ ನಿಯಂತ್ರಣದಲ್ಲಿತ್ತು. ಅಮೆರಿಕದ ಹಾಲಿವುಡ್ ಗರ್ಭದಲ್ಲಿ ರೆಡಿಯಾಗುತ್ತಿದ್ದ ಸಿನಿಮಾಗಳದ್ದೇ ಹೆಚ್ಚುಗಾರಿಕೆ. ಫ್ರಾನ್ಸ್ ಪರರ ನೆಲೆಯಲ್ಲಿ ತನ್ನ ನೆಲೆ ಹುಡುಕುತ್ತಿದ್ದಾಗಲೇ ಎರಡನೇ ಮಹಾಯುದ್ಧ ನಡೆದು ಫ್ರಾನ್ಸ್, ಜರ್ಮನಿಯಿಂದ ಆಚೆ ಬಂತು. ಇದರ ಬೆನ್ನಲ್ಲೇ ಫ್ರೆಂಚ್ ಚಿತ್ರರಂಗವೂ ಯುದ್ಧ ನಂತರದ ತನ್ನ ದೇಶದ ಆರ್ಥಿಕ, ರಾಜಕೀಯ ಪರಿಸ್ಥಿತಿಗಳನ್ನು ನೆಚ್ಚಿಕೊಂಡಿತು. ಯಾವುದೇ ಗಿಮಿಕ್ಗಳಿಲ್ಲದೇ, 'ವಾಣಿಜ್ಯ' ದೃಷ್ಟಿಕೋನದಿಂದ ಹೊರಗೆ ನಿಂತ ಫ್ರೆಂಚ್ ಸಿನಿಮಾಗಳು ವಾಸ್ತವಕ್ಕೆ ಹತ್ತಿರವಾಗತೊಡಗಿದವು. ಹೀಗೆ ಯಾವುದನ್ನೂ ವೈಭವೀಕರಣ ಮಾಡದೆ ಯಥಾವತ್ತಾಗಿ ಕಥೆಗಳನ್ನು ತೆರೆಗೆ ತರುತ್ತಿದ್ದ ಕಾಲಘಟ್ಟದಲ್ಲಿ ಹೊಸ ಅಲೋಚನೆಯ ಯುವ ನಿರ್ದೇಶಕರ ದಂಡು ಹುಟ್ಟಿಕೊಂಡಿತು. ಆ ಸಾಲಿನಲ್ಲಿ ಕಾಣುವ ನಿರ್ದೇಶಕ ಫ್ರಾಕೊಯಿಸ್ ಟ್ರುಫಾಟ್. ಟ್ರುಫಾಟ್, ಮೂಲತಃ ಪತ್ರಕರ್ತ. ಸಿನಿಮಾ ಪತ್ರಿಕೆಯಲ್ಲಿ ನಿಷ್ಠುರವಾಗಿ ವಿಮರ್ಶೆ ಬರೆಯುತ್ತಿದ್ದವ. ತಾನು ನೋಡುತ್ತಿದ್ದ ಚಿತ್ರಗಳ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡುವಾಗ 'ನಾನು ಮುಂದೆ ಹೊಸ ರೀತಿಯ ಸಿನಿಮಾ ಮಾಡಬೇಕು' ಎಂದು ಹೇಳಿಕೊಳ್ಳುತ್ತಿದ್ದ. ಆದರೆ ಚಿತ್ರ ವಿಮರ್ಶಕ ಟ್ರುಫಾಟ್ಗೆ 1958ರ ಕ್ಯಾನ್ ಚಿತ್ರೋತ್ಸವದಲ್ಲಿ ಭಾಗವಹಿಸಲು ಅನುಮತಿ ಕೊಡಲಿಲ್ಲ. ಅಚ್ಚರಿ ಎಂದರೆ, ಮರುವರ್ಷ ನಡೆದ ಅದೇ ಕ್ಯಾನ್ ಚಿತ್ರೋತ್ಸವದಲ್ಲಿ ಒಬ್ಬ ನಿರ್ದೇಶಕನಾಗಿ ಟ್ರುಫಾಟ್ಗೆ ಉನ್ನತ ಗೌರವ ಸಿಕ್ಕಿತು. ಇದಕ್ಕೆ ಕಾರಣವಾಗಿದ್ದು ಈತನ ಮೊದಲ ನಿರ್ದೇಶನದ 'ದಿ 400 ಬ್ಲೊಸ್' ಚಿತ್ರ. ಸಾಕಷ್ಟು ಪ್ರಶಂಸೆಗೆ ಗಿಟ್ಟಿಸಿದ ಈ ಚಿತ್ರದ ಕೇಂದ್ರಬಿಂದು ಅಂತ್ವಾನ್ ದ್ವಾನೆಲ್.
ಪ್ರಾಯದಲ್ಲೇ ಅಲೆಮಾರಿತನದೊಂದಿಗೆ ನಂಟು ಬೆಳೆಸಿಕೊಂಡ ಚುರುಕು ಬುದ್ಧಿಯ ಅಂತ್ವಾನ್ ದ್ವಾನೆಲ್ನ ಸುತ್ತ ಕಥೆ ಸಾಗುತ್ತದೆ. ಸಾಕು ತಂದೆ ಮತ್ತು ಹೆತ್ತ ತಾಯಿಯೊಂದಿಗೆ ಇದ್ದರೂ ಈ ಹುಡುಗನಿಗೆ ಅಪ್ಪ, ಅಮ್ಮನೊಂದಿಗೆ ಸಂಬಂಧ ಅಷ್ಟಕಷ್ಟೇ. ಶಾಲೆಯಲ್ಲಿ ತಪ್ಪು ಮಾಡಿ ಸಿಕ್ಕಿಬಿದ್ದು ಶಿಕ್ಷೆ ಅನುಭವಿಸುವುದರೊಂದಿಗೆ ಅಂತ್ವಾನ್ ದ್ವಾನೆಲ್ ಕಥೆ ಶುರು. ಶಾಲೆಯ ಮೂಲೆಯಲ್ಲಿ ನಿಂತು ಶಿಕ್ಷೆ ಅನುಭವಿಸುವಾಗ ಗೋಡೆ ಮೇಲೆ ಕವಿತೆ ಬರೆಯುವ ಅಂತ್ವಾನ್, ಶಿಕ್ಷಕ ಕೊಟ್ಟ ಹೋಮ್ವರ್ಕ್ ಅನ್ನು ಮಾತ್ರ ಮಾಡಲ್ಲ. ಹೀಗಾಗಿ ತನ್ನ ಸ್ನೇಹಿತನ ಒತ್ತಾಯದಿಂದ ಮಾರನೇ ದಿನ ಕ್ಲಾಸ್ಗೆ ಚಕ್ಕರ್ ಹೊಡೆದು ಊರು ಅಲೆಯುವಾಗ ಬೀದಿ ಬದಿಯಲ್ಲಿ ಪರ ಪುರುಷನೊಂದಿಗೆ ತನ್ನ ತಾಯಿಯನ್ನು ಅಂತ್ವಾನ್ ನೋಡುತ್ತಾನೆ. ಮರುದಿನ ಶಾಲೆಗೆ ಬರುವ ಅಂತ್ವಾನ್, 'ನಿನ್ನೆ ನನ್ನ ತಾಯಿ ಸತ್ತಿದ್ದಕ್ಕೆ ಶಾಲೆಗೆ ಬರಲಿಲ್ಲ' ಎಂದು ಅಮ್ಮನ ಮೇಲೆ ತನ್ನ ಸಿಟ್ಟು ತೋಡಿಕೊಳ್ಳುತ್ತಾನೆ. ಒಮ್ಮೆ ಶಾಲೆಯಲ್ಲಿ ಅವರವರ ಜೀವನದಲ್ಲಿ ಕಂಡ ಮುಖ್ಯ ಘಟನೆ ಬಗ್ಗೆ ಪ್ರಬಂಧ ಬರೆಯಲು ಶಿಕ್ಷಕ ವಿದ್ಯಾರ್ಥಿಗಳಿಗೆಹೇಳುತ್ತಾನೆ. ಅಂತ್ವಾನ್, ತನ್ನ ಅಜ್ಜನ ಮರಣದ ಬಗ್ಗೆ ಬರೆಯುವಾಗ ಬೇರೊಬ್ಬರ ಪುಸ್ತಕದಒಂದು ಸಾಲನ್ನು ತನ್ನ ಲೇಖನಕ್ಕೆ ಸೇರಿಸುತ್ತಾನೆ. ಇದನ್ನು ಕಂಡ ಶಿಕ್ಷಕ ಕೃತಿಚೌರ್ಯ ಅರೋಪ ಹೊರಿಸಿ ಶಾಲೆಯಿಂದ ಹೊರದಬ್ಬುತ್ತಾನೆ. ಇವನಿಗೆ ಬೆಂಬಲವಾಗಿದ್ದ ಸ್ನೇಹಿತ ಕೂಡ ಶಿಕ್ಷೆಗೆ ಗುರಿಯಾಗುತ್ತಾನೆ. ಇವರಿಬ್ಬರ ಅಲೆಮಾರಿ ಜೀವನ ಇಲ್ಲಿಂದ ಜೋರಾಗುತ್ತದೆ. ಹಣಕ್ಕಾಗಿ ಅಡ್ಡ ದಾರಿ ಹಿಡಿಯುತ್ತಾರೆ. ಬಾಲಾಪರಾಧಿಗಳಾಗಿ ಜೈಲು ಸೇರುವುದು, ಅಲ್ಲಿಂದ ತಪ್ಪಿಸಿಕೊಳ್ಳುವುದು... ಹೀಗೆ ಸಾಗುವ ಕಪ್ಪುಬಿಳುಪಿನ ಚಿತ್ರ ನೋಡುವವರಿಗೆ ಟ್ರುಫಾಟ್ನ ಬಾಲ್ಯದ ದಿನಗಳನ್ನು ನೆನಪಿಸಿದರೂ ಅಚ್ಚರಿ ಇಲ್ಲ.
ಒಂದು ಹಂತದಲ್ಲಿ ಸಾಕ್ಷ್ಯಚಿತ್ರದಂತೆ ಕಂಡರೂ, ಸಿನಿಮಾ ನೈಜತೆಯ ಕನ್ನಡಿ ಎಂದುಕೊಂಡವರಿಗೆ 'ದಿ 400 ಬ್ಲೋಸ್' ಬೋರ್ ಆಗದು. ಚಿತ್ರದ ಆರಂಭದಿಂದ ಕೊನೆಯ ತನಕ ಯುವಕನೊಬ್ಬ ಹುಡುಕಲು ಹೊರಟಿರುವುದು ಏನನ್ನಾ? ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಅಂತ್ವಾಲ್, ತನ್ನ ಸ್ನೇಹಿತನೊಂದಿಗಿದ್ದಾಗ ಕಾಣುವ ಜೀವನೋತ್ಸಾಹ, ಅಪ್ಪ- ಅಮ್ಮನೊಂದಿಗಿದ್ದಾಗ ಮಾತ್ರ ಕಾಣಲ್ಲ. ಆದರೆ ಚಿತ್ರದ ಕೊನೆಯ ದೃಶ್ಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡು ಸಮುದ್ರತೀರಕ್ಕೆ ಬಂದಾಗ 'ಈತ ಇಲ್ಲಿವರೆಗೂ ಏಕಾಂಗಿತನವಿಲ್ಲದ ಸ್ವತಂತ್ರ ಜೀವನದ ಹುಡುಕಾಟದಲ್ಲಿದ್ದಾನೆ' ಎನ್ನುವ ಸಂದೇಶ ಪ್ರೇಕ್ಷಕನ ಯೋಚನೆಯ ಕದ ತಟ್ಟುತ್ತದೆ. ಅಂದರೆ ಸ್ವತಂತ್ರವಾಗಿರಬೇಕು ಎನ್ನುವುದರ ಅರ್ಥ ಏಕಾಂಗಿಯಾಗಿರುವುದಲ್ಲ. ಎಲ್ಲರೊಂದಿಗೆ ಇದ್ದೂ ಸ್ವತಂತ್ರ ಜೀವನ ಅನುಭವಿಸಬೇಕು ಎಂಬುದು ಚಿತ್ರದ ಒಳದನಿ. ಅದು ಸಾಮಾನ್ಯನ ದನಿಯೂ ಆಗುತ್ತದೆ.
- ಆರ್. ಕೇಶವಮೂರ್ತಿ
keshavarkm1@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


