ಜವಾರಿ ಕೋಳಿ
ಗ್ಲಾಸಿನಲ್ಲಿನ ಬೀರಿನಿಂದಾಗಿ ಜವಾರಿ ಕೋಳಿಯ ರುಚಿ ಇನ್ನಷ್ಟು ಹೆಚ್ಚಿತ್ತು. ಫಾರಂ ಕೋಳಿ ತಿಂದು-ತಿಂದು ರೂಢಿಯಲ್ಲಿದ್ದವರಿಗೆ, ಜವಾರಿ...

-ಸಣ್ಸ್ಟೋರಿ ಸ್ಪರ್ಧೆ 2013 ಮೆಚ್ಚುಗೆ ಬಹುಮಾನ ಪಡೆದ ಕಥೆ
ಗ್ಲಾಸಿನಲ್ಲಿನ ಬೀರಿನಿಂದಾಗಿ ಜವಾರಿ ಕೋಳಿಯ ರುಚಿ ಇನ್ನಷ್ಟು ಹೆಚ್ಚಿತ್ತು. ಫಾರಂ ಕೋಳಿ ತಿಂದು-ತಿಂದು ರೂಢಿಯಲ್ಲಿದ್ದವರಿಗೆ, ಜವಾರಿ ಕೋಳಿಯ ರುಚಿ ಹಬ್ಬದೂಟದಂತಿತ್ತು. ನಮಗಾಗೇ ರಾಮದುರ್ಗ ಡಾಬಾದಲ್ಲಿ ಪ್ರತ್ಯೇಕ ಸ್ಥಳದ ವ್ಯವಸ್ಥೆಯ ಜತೆಗೆ ಇತರೇ ವ್ಯವಸ್ಥೆಯು ಉಚಿತವಾಗಿದ್ದರಿಂದ ಹೃದಯದ ಮುಂದಿನ ಶರ್ಟಿನ ಭಾಗ ನಿರಮ್ಮಳವಾಗಿತ್ತು.
ಎರಡನೇ ಗ್ಲಾಸು ಭರ್ತಿಯಾದಾಗ ನನ್ನ ಯೋಚನೆ, ಮಾತು ನೇರವಾಗತೊಡಗಿತ್ತು. ಪೊಲೀಸ್ ಠಾಣೆಯಲ್ಲಿ ಮಾತ್ರ ನಮ್ಮಲ್ಲಿ ಅಂತರ. ಇಂತಹ ಸ್ಥಳದಲ್ಲಿ ಅದಕ್ಕೆಲ್ಲ ಬ್ರೇಕ್. ಕುಡಿಯುವುದು ಕಲಿತರೆ ಸಲೀಸಾಗಿ ಸರ್ವೀಸ್ ಸಾಗಿಸುತ್ತಾರೆ ಇಲ್ಲದಿದ್ದರೆ ಮಾನಸಿಕವಾಗುತ್ತಾರೆ ಎನ್ನುವ ನಮ್ಮಲ್ಲಿಯ ಹಿರಿಯರ ಉಪದೇಶದಿಂದ ನಾನೀಗ ಬೀರಿನ ಹಂತದಲ್ಲಿದ್ದೇನೆ ಅಷ್ಟೆ.
ಪ್ರಭು ಗ್ಲಾಸು ಖಾಲಿ ಮಾಡು ಅಂತ ಬೀರನಗೌಡ ಎ.ಎಸ್.ಐ. ಸಾಹೇಬರು ಅಂದಾಗಲೇ ಆದೇಶದಂತೆ ಗ್ಲಾಸು ಖಾಲಿ ಮಾಡಿದ್ದೆ. ಇಲ್ಲಿ ಇನ್ನೊಂದಿಷ್ಟು ಹೊಟ್ಟೆಗೆ ಇಳಿದ ಮೇಲೆ ಯಾರು-ಯಾರಿಗೆ ಆದೇಶ ಮಾಡಿದರೂ ಅಷ್ಟೆ. ಅಷ್ಟಕ್ಕೂ ಟೈಟಾದವರ ಆದೇಶವಂತೂ ಪಾಲಿಸಲೇಬೇಕು. ಗ್ಲಾಸು ತುಂಬ ಹಾಕಿಕೊಂಡ ಬೀರನ್ನು ಇನ್ನೊಂದಿಷ್ಟು ಚಪ್ಪರಿಸಿ 'ಲೆಗ್ ಪೀಸ್' ಹರಿದು ತಿನ್ನುತ್ತ ಈ ಜವಾರಿ ಕೋಳಿ 'ಲೆಗ್ ಪೀಸ್' ಆಗಿದ್ದರ ಹಿಂದಿನ ಘಟನೆಯ ನೆನಪು ಹರಿದುಬರಹತ್ತಿತು.
ಈ ವಾರ ನನ್ನದು ಸೆಂಟ್ರಿ ಡ್ಯೂಟಿ. ಹಳ್ಳಿ ಠಾಣೆಯಾಗಿದ್ದರಿಂದ ಅಷ್ಟೊಂದು ಜನರ ಗದ್ದಲ ಇರುವುದಿಲ್ಲ. ನಿನ್ನೆ ಸಂಜೆ ನನ್ನ ಡ್ಯೂಟಿಯ ಸಮಯಕ್ಕೆ ಒಬ್ಬ ಹೆಣ್ಣುಮಗಳು ನಿಧಾನವಾಗಿ ಠಾಣೆಯ ಗೇಟಿನ ಹತ್ತಿರ ಬಂದು ಕುಳಿತಳು. ಆಕೆಯನ್ನು ನೋಡಿದ ತಕ್ಷಣವೇ ತಾಂಡದಾಕಿಯೇ ಅಂತ ನಿರ್ಧರಿಸಿದ್ದೆ. ಗಂಡ-ಹೆಂಡತಿ ಜಗಳವಿರುತ್ತದೆ ಅಂತ ನನ್ನ ತೀರ್ಮಾನವು ಸರಿಯಾಗಿತ್ತು. ಅಲ್ಲಲ್ಲಿ ಆದ ಸಣ್ಣಪುಟ್ಟ ಗಾಯಗಳು ನನ್ನ ತೀರ್ಮಾನಕ್ಕೆ ಪುಷ್ಟಿ ನೀಡುವಂತಿದ್ದವು.
ಹಳ್ಳಿ ಠಾಣೆಗಳಲ್ಲಿ ದಿನಾಲೂ ಇದೇ ಕಥೆ. ದಿನಾ ಸಾಯುವವರಿಗೆ ಅಳುವವರು ಯಾರು? ಅಂದುಕೊಳ್ಳುತ್ತಲೇ, ಏನಮ್ಮ, ನಿನ್ನ ಗಂಡ ಹೊಡೆದನಾ? ಅಂದೆ. 'ಹೌದು ಸಾರ್' ಅಂತ ಸರ್ ಅಂತ ಸಣ್ಣ ಧ್ವನಿಯಲ್ಲಿ ಅಂದಳು. ನಿಮ್ಮದು ದಿನಾಲೂ ಇದೇ ಕಥೆ ಅನ್ನುತ್ತಲೇ, 'ಹೇಗಾದರೂ ಮಾಡಿ ನನ್ನ ಗಂಡನಿಗೆ ಬುದ್ಧಿಕಲಿಸಿ ಸರ್' ಅಂತಾ ಅಳುವುದು ಕರೆಯುವುದು ನಡೆಸಿದಳು.
ಸುಮಾರು ವರ್ಷಗಳಿಂದ ಇಲ್ಲೇ ಕೆಲಸ ಮಾಡಿದ ಇಂತಹ ಕೇಸುಗಳಿಗೆಂದೇ ಹೇಳಿಮಾಡಿಸಿದ ಬೀರನಗೌಡ ಸಾಹೇಬರಿಗೆ ಭೆಟ್ಟಿ ಮಾಡಿಸಿದ್ದೆ. ಅವರು ಆಕೆಯನ್ನು ನೋಡಿದ ತಕ್ಷಣವೇ ರೂಢಿಯಂತೆ ಏನೂ ಕೇಳದೇ ಆಯ್ತಮ್ಮ, ನಾಳೆ ಬಂದು ನಿನ್ನ ಗಂಡನ ಕೈ-ಕಾಲು ತಿರುವುತ್ತೇನೆ. ರಾತ್ರಿಯಾಗುತ್ತೆ ನೀನು ಹೋಗು ಅಂತಾ ಹೇಳಿ ಕಳುಹಿಸಿದರು. ನಾಳೆ ಹೋಗಿ ಬಗೆಹರಿಸಿಬಿಡೋಣ ಅಂತ ನನಗೂ ಹೇಳಿದರು.
ಸರಿ ಸುಮಾರು ಇಪ್ಪತ್ತೈದು ಗುಡಿಸಿಲುಗಳಿರುವ ತಾಂಡಾದಲ್ಲಿ ಸಂಜೆ ಹೊತ್ತಿಗೆ 'ಭಟ್ಟಿ ಸಾರಾಯಿ'ಯಿಂದಾಗಿ ಯಾರಿಗೆ-ಯಾರೂ ತಿಳಿಯದಂತಾಗಿರುತ್ತದೆ ಅಂತಲೇ, ಮಧ್ಯಾಹ್ನವೇ ಹೋಗಿದ್ದೆವು. ಗ್ರಾಮಪಂಚಾಯಿತಿ ಸದಸ್ಯ ಪೊಮಣ್ಣ ತಾಂಡದ ಏಕೈಕ ಮುಖಂಡ. ಈತನ ಮನೆಯ ಕಟ್ಟೆಯ ಮೇಲೆ ಚಾದರದ ಮೇಲೆ ಕುಳಿತೆವು. ಅಲ್ಲೇ ಇರುವ ಜಗಳ ಆಡಿದ ಗಂಡ-ಹೆಂಡತಿಯನ್ನು ಕೂಗಿ ಕರೆದ. ಆಕೆಯ ಗಂಡನಿಗೂ ಇದು ಮೊದಲಲ್ಲ. ಕುಡಿದಾಗ ಕಾರಣವಿಲ್ಲದೆ ಆಗುವ ಜಗಳಕ್ಕೆ ಕೊನೆಯಿಲ್ಲ. ರೂಢಿಯಂತೆ ಬೀರನಗೌಡ ಸಾಹೇಬರು ಏರುಧ್ವನಿಯಲ್ಲಿ ನಾಲ್ಕು ಬೈದು ಎರಡು-ಮೂರು ಏಟು ಹೊಡೆಯುತ್ತಿದ್ದಂತೆ ಹೆಂಡತಿಯೇ ಬಂದು ಇದೊಂದು ಸಲ ಬಿಡಿ ಸಾಹೇಬರೆ ಅಂತ ಬಿಡಿಸಿಕೊಂಡಳು. ಪೋಮಣ್ಣನು ಹಿರಿತನ ತೋರಿಸಿಕೊಳ್ಳಲು ಜೈಲಿಗೆ ಕಳಿಸಬೇಡಿ ಸರ್, ಮುಂದೆ ಹೀಗಾಗದಂತೆ ನಾನೇ ನೋಡಿಕೊಳ್ಳುತ್ತೇನೆ ಅಂತಾ ಸುತ್ತಲೂ ಸೇರಿದ ತಾಂಡಾದ ಜನರ ಕಡೆ ನೋಡಿ ಹೇಳುತ್ತಾ, ಬಿಳಿ ಹಾಳೆಯ ಮೇಲೆ ಹೆಬ್ಬೆಟ್ಟಿನ ಗುರುತು ಹಾಕಿಸಿ ತನ್ನ ಕೆಲಸವೆಂಬಂತೆ ಮಡಚಿ ಕೊಟ್ಟ.
ನಾವು ವಾಪಸು ಹೋಗುವುದಕ್ಕೆ ಅನುವಾದಾಗ, ಸ್ವಲ್ಪ ಇರಿ ಸರ್ ಅಂತಾ ಹೇಳಿದ ಪೋಮಣ್ಣ, ಅವರ ಹತ್ತಿರ ಹೋಗಿ ಏನೇನೋ ಹೇಳಿ-ಕೇಳಿ ಕೊನೆಗೆ ನಮ್ಮ ಹತ್ತಿರ ಬಂದು ಅವರ ಹತ್ತಿರ ರೊಕ್ಕ ಇಲ್ಲ ಸಾರ್, ನಾಳೆ ಬೆಳಗ್ಗೆ ನೂರು ರುಪಾಯಿ ಅಲ್ಲಿಗೆ ತಂದುಕೊಡುತ್ತಾರೆ ಅಂತಾ ಹೇಳಿ ತನ್ನ ತಾಂಡಾದ ಮಾಮೂಲೆಂಬಂತೆ ನೂರರ ಎರಡು ನೋಟುಗಳನ್ನು ಮಡಚಿ ಕೊಟ್ಟ. ಬೀರನಗೌಡ ಸಾಹೇಬರ ಕಣ್ಣು ಬೇರೆ ಕಡೆ ತಿರುಗಿದ್ದನ್ನು ತಟಕ್ಕನೆ ಗ್ರಹಿಸಿದ ಪೋಮಣ್ಣ, ಅದಕ್ಕೇನಂತೆ ತಗೊಂಡೋಗಿ ಸಾರ್ ಅಂತ ಅಂದವನೇ ಗಡಗಿಯ ಗೂಡಿನಲ್ಲಿ ಗುಟುರು ಹಾಕುತ್ತಾ ಕುಳಿತಿರುವ ಕೋಳಿಯನ್ನು ಹಿಡಿದು ಕಟ್ಟಿ ನಮ್ಮ ಮೋಟಾರ್ ಸೈಕಲ್ ಹಿಂದೆ ಕಟ್ಟಿ ಠೀವಿಯಿಂದ ಕೈಬೀಸುತ್ತಾ ಬೀಳ್ಕೊಟ್ಟ.
ಪ್ರಭು ಚಿಕನ್ ಜಾಸ್ತಿ ಇದೆ ತಗೋ ಅಂತ ಸಾಹೇಬರು ಅಂದಾಗಲೇ ನಾನು ವಾಸ್ತವಕ್ಕೆ ಬಂದಿದ್ದು. ಬೆಳಗ್ಗೆ ಸೆಂಟ್ರಿ ಡ್ಯೂಟಿ ಇದ್ದಿದ್ದರಿಂದ ಅದಾಗಲೇ ಜಾಸ್ತಿಯಾಗಿದ್ದರಿಂದ ಡಾಬಾದ ಹುಡುಗರು ತಿನ್ನುತ್ತಾರೆ ಬಿಡಿ ಸರ್ ಅಂತ ಹೇಳಿ ಹೊರಟನು.
ಬೆಳಗಿನ ಆರು ಗಂಟೆಗೆ ಸೆಂಟ್ರಿ ಚಾರ್ಜ್ ತೆಗೆದುಕೊಂಡ ಮೇಲೆ ಚಳಿಗೆ ಹಾಕಿದ್ದ ಬೆಂಕಿಯನ್ನು ಕೆದಕುತ್ತಾ ನಿಂತಿದ್ದೆ. ಯಾರೋ ಹೆಣ್ಣುಮಗಳು ಬರುವುದು ಕಾಣಿಸಿತು. ಸಮೀಪ ಬಂದಾಗ ಅದೇ ತಾಂಡದಾರಿಯೇ! ಇದು ಮುಗಿಯುವ ಕೇಸಲ್ಲ. ಪಿ.ಎಸ್.ಐ. ಸಾಹೇಬರಿಗೆ ಹೇಳಿ ಗಂಡನ ಮೇಲೆ ಕೇಸು ಮಾಡಿಸಲೇಬೇಕು ಅಂತ ಅಂದುಕೊಳ್ಳುತ್ತಾ.. ಏನಮ್ಮ ಮತ್ತೆ ಜಗಳ ಶುರುವಾಯ್ತ? ಅಂದೆ. 'ಇಲ್ಲ ಸರ್' ಅನ್ನುತ್ತಲೇ, ತನ್ನ ಬಲಗೈಯಲ್ಲಿ ಮಡಚಿದ್ದ ನೂರರ ನೋಟು ತೆಗೆದು ನನ್ನ ಮುಂದೆ ಇಟ್ಟಳು. ಸರ್, ನಮಗೆ ಇರೋದು ಅದೊಂದೇ ಕೋಳಿ. ಅದೂ ಈಗ 'ಗೂಡಿಗೆ' ಹಾಕಿದ್ದೇವೆ. ಇನ್ನೆರಡು ದಿನಗಳಲ್ಲಿ ಮರಿಗಳಾಗಬೇಕು. ಈ ಕೋಳಿ ಇಲ್ಲದಿದ್ದರೆ ಮರಿಗಳಾಗಲ್ಲ. ಒಂದಿಷ್ಟು ಮರಿಗಳು ದೊಡ್ಡವಾದರೆ ಸಂತೆಗೆ ಒಂದೊಂದು ಒಯ್ದರೂ ಉಪಜೀವನ ನಡೆಯುತ್ತೆ ಅಂತ ಕಣ್ಣಲ್ಲಿ ನೀರು ತೆಗೆದು ನೂರರ ನೋಟು ಕೈಯಲ್ಲಿಡುತ್ತಾ ನನ್ನ ಕೋಳಿ ಕೊಡಿ ಸರ್ ಅನ್ನುತ್ತಲೇ ನನ್ನ ಹೊಟ್ಟೆಯೊಳಗಿನ ಕೋಳಿ ಎದೆಗೆ ಕುಕ್ಕುವಂತೆ ಭಾಸವಾಗತೊಡಗಿತ್ತು. ಬಾಯಿ ಒಣಗಿತ್ತು.
-ಬಸವರಾಜ ಬೆರಕರ್
9900977140
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


