TECH ನಾಕ

ಮೊಬೈಲ್ನ ಸ್ಕ್ರೀನ್ ಕೆಳಗೆ ಮಾಡಿದರೆ ಸಾಕು, ರಿಂಗ್ ಆಗುತ್ತಿದ್ದ ಮೊಬೈಲ್ ಸುಮ್ಮನಾಗುತ್ತದೆ. ಕೆಲವು ಮೊಬೈಲ್ಗಳನ್ನು ರಿಂಗಾಗುತ್ತಿದ್ದಾಗ ನೀವು ಎತ್ತಿಕೊಂಡರೂ, ಎತ್ತಿಕೊಂಡ ಕೂಡಲೇ ಅಳು ನಿಲ್ಲಿಸುವ ಮಕ್ಕಳಂತೆ ಥಟ್ಟನೆ ಸುಮ್ಮನಾಗಿಬಿಡುತ್ತವೆ. ಅತ್ತಿತ್ತ ಅಲುಗಾಡಿಸಿದರೆ (ಶೇಕ್ ಮಾಡಿದರೆ) ಸಾಕು, ಹಾಡು ಬದಲಾಗುತ್ತದೆ. ಎಸ್ಎಂಎಸ್ ಓದಿ ಮೊಬೈಲನ್ನು ಕಿವಿಯ ಬಳಿ ತೆಗೆದುಕೊಂಡು ಹೋದರೆ ಸಾಕು, ಎಸ್ಎಂಎಸ್ ಮಾಡಿದವರ ಬಳಿ ಮಾತಾಡಬೇಕು ಅನ್ನಿಸಿದೆ ಎಂಬುದನ್ನು ನಿಮ್ಮ ಮೊಬೈಲ್ ಅರ್ಥಮಾಡಿಕೊಳ್ಳುತ್ತದೆ. ಕಿವಿಯ ಬಳಿ ಹಿಡಿದರೆ ಸಾಕು, ಸ್ಕ್ರೀನ್ ಆಫ್ ಆಗುತ್ತದೆ. ಇನ್ನೊಂದು ಮೊಬೈಲ್ಗೆ ಸಂಪರ್ಕ ಸಾಧಿಸಿ, ಬೆರಳಿನಿಂದ ಆ ಮೊಬೈಲ್ ಕಡೆಗೆ ಜಾರಿಸಿದರೆ (ಸ್ವೈಪ್ ಮಾಡಿದರೆ) ಮುಗಿಯಿತು ಚಿತ್ರ, ಹಾಡು ಇನ್ನೊಂದು ಮೊಬೈಲ್ಗೆ ವರ್ಗಾವಣೆಗೊಳ್ಳುತ್ತದೆ.
ನೀವಿರುವ ಪ್ರದೇಶದ ಬೆಳಕನ್ನು ಅರಿಯುವ ಜ್ಞಾನ ನಿಮ್ಮ ಫೋನಿಗೆ ಬಂದು ಅದ್ಯಾವುದೋ ಕಾಲವಾಯಿತು. ಈಗ ನೀವಿರುವ ಸ್ಥಳದ ಶಬ್ದದ ಪ್ರಮಾಣವನ್ನು ಅರಿತು ಸ್ಪೀಕರ್ ಶಬ್ದವನ್ನು ದೊಡ್ಡ- ಸಣ್ಣ ಮಾಡುವ ತಾಕತ್ತನ್ನೂ ನಿಮ್ಮ ಮೊಬೈಲ್ ಹೊಂದಿದೆ. ಒಂದು ಶಬ್ದ ಟೈಪ್ ಮಾಡಲು ಹೊರಟರೆ ಅದನ್ನು ಅರ್ಥಮಾಡಿಕೊಂಡು, ನೀವು ಯಾವ ಶಬ್ದ ಟೈಪ್ ಮಾಡಲು ಹೊರಟಿದ್ದೀರಿ ಎಂದು ಮೊಬೈಲ್ ಊಹಿಸಬಲ್ಲದು. ನೀವು ಮೊಬೈಲ್ನಿಂದ ಎಷ್ಟು ಹತ್ತಿರದಲ್ಲಿದ್ದೀರಿ, ಅದನ್ನು ಆಚೆ ಈಚೆ ಮಾಡುತ್ತಿದ್ದೀರಾ? ಹೀಗೆ ಪ್ರತಿಯೊಂದೂ ನಿಮ್ಮ ಮೊಬೈಲ್ಗೆ ಗೊತ್ತಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಅದೊಂದು ನಿರ್ಜೀವ ವಸ್ತು ಎಂದು ನಂಬುವುದು ಕೂಡ ಕಷ್ಟವಾಗಿಬಿಡುತ್ತದೆ!
ಆ್ಯಪಲ್ ಕಂಪನಿ ಹೊಸ ಅವಿಷ್ಕಾರಗಳನ್ನು ಮಾಡಿದಾಗ ಅಚ್ಚರಿಪಟ್ಟಿದ್ದ ಜನ, 'ಆಯ್ತು. ಇನ್ನೇನೂ ಹೊಸದು ಬರಲಿಕ್ಕೆ ಸಾಧ್ಯವಿಲ್ಲ. ಎಲ್ಲವನ್ನೂ ಆ್ಯಪಲ್ ಕಂಪನಿ ಮಾಡಿಬಿಟ್ಟಿದೆ' ಅಂದುಕೊಂಡಿದ್ದರು. ಆದರೆ ತಂತ್ರಜ್ಞಾನ ಜನರ ನಿರೀಕ್ಷೆಗಳನ್ನು ಮೀರಿ ಬೆಳೆಯುತ್ತಲೇ ಇದೆ. ಸ್ಯಾಮ್ಸಂಗ್ ಎಸ್4 ಎಂಬ ಹೊಸ ಮೊಬೈಲ್ನಲ್ಲಿ ನೀವು ಸ್ಕ್ರೀನ್ ಟಚ್ ಮಾಡದೇ, ಸ್ಕ್ರೀನ್ನಿಂದ ಕೊಂಚ ದೂರ ಬೆರಳು ಆಡಿಸಿದರೂ ಸಾಕು. ಅದು ನಿಮ್ಮ ಸೂಚನೆ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲದು. ಇದು ಬಹುಶಃ ಭವಿಷ್ಯದಲ್ಲಿ ಬರಲಿರುವ ಗೆಶ್ಚರ್ (ಸನ್ನೆ) ತಂತ್ರಜ್ಞಾನದ ಮೊದಲ ಹೆಜ್ಜೆ.
ಇಷ್ಟೆಲ್ಲ ಆದಮೇಲೆ ಇನ್ನೇನೂ ಹೊಸತು ಬರಲು ಸಾಧ್ಯವೇ ಇಲ್ಲ ಅಂದುಕೊಳ್ಳುವಷ್ಟು ಆಧುನಿಕ ತಂತ್ರಜ್ಞಾನಗಳು ಬಂದಾಗಿದೆ. ಆದರೂ ಮತ್ತಷ್ಟು ಹೊಸ ತಂತ್ರಜ್ಞಾನಗಳು ಬರಲಿವೆ ಅಂದರೆ ಅಚ್ಚರಿಯಾಗುತ್ತದೆ. ಭವಿಷ್ಯದ ಕೆಲವು ತಂತ್ರಜ್ಞಾನಗಳು ನಮ್ಮ ಊಹೆಗೆ ಕೂಡ ನಿಲುಕದ್ದು.
ಮೈ ಮುಟ್ಕೊಳಿ ಶೇರ್ ಮಾಡ್ಕೊಳಿ
ಬ್ಲೂಟೂತ್, ವೈಫೈ, ಇನ್ಫ್ರಾರೆಡ್ ಹೀಗೆ ಒಂದು ಮೊಬೈಲ್ನಿಂದ ಇನ್ನೊಂದು ಮೊಬೈಲ್ಗೆ ಡಾಟಾ ಕಳುಹಿಸಲು ಅವಕಾಶವಿದೆ. ಅದಕ್ಕೂ ಮೊದಲು ನೀವು ನಿಮ್ಮ ಬ್ಲೂಟೂತ್, ಇನ್ಫ್ರಾರೆಡ್ಗಳನ್ನು ಇನ್ನೊಂದು ಮೊಬೈಲ್ಗೆ ಸಂಪರ್ಕ ಕಲ್ಪಿಸಬೇಕು. ಆದರೆ ಭವಿಷ್ಯದಲ್ಲಿ ನೀವು ಪರಸ್ಪರ ಹಸ್ತಲಾಘವ ಮಾಡಿದಾಕ್ಷಣ ನಿಮ್ಮ ಹೆಸರು, ಫೋನ್ ನಂಬರ್ ಮುಂತಾದವನ್ನು ಶೇರ್ ಮಾಡಿಕೊಳ್ಳಬಹುದಂತೆ!
ನಿಮ್ಮ ಚರ್ಮದ ಮೂಲಕವೇ ಮಾಹಿತಿ ವಿನಿಮಯ ಮಾಡಿಕೊಳ್ಳುವ ತಂತ್ರಜ್ಞಾನವಿದು. 1 ಆ್ಯಂಪ್ಸ್ನ 10 ಲಕ್ಷ ಭಾಗ ಮಾಡಿದರೆ, ಅದರ ಒಂದು ಭಾಗದಷ್ಟು ಶಕ್ತಿಯ ಮೂಲಕ ಮಾಹಿತಿ ವಿನಿಮಯವಾಗುತ್ತದಂತೆ. ನಿಮಗೆ ಗೊತ್ತೇ ಆಗದೆ!
ಐಬಿಎಂ ಕಂಪನಿಯ ಸಂಶೋಧಕರು ಇಂತಹ ಸಾಧ್ಯತೆಯೊಂದನ್ನು ಆವಿಷ್ಕಾರಗೊಳಿಸಿದ್ದಾರೆ. ಪರ್ಸನಲ್ ಏರಿಯಾ ನೆಟ್ವರ್ಕ್ ತಂತ್ರಜ್ಞಾನದ ಸಹಾಯದಿಂದ ಕೇವಲ ಒಂದು ಟಚ್ ಮೂಲಕ ಒಬ್ಬ ಮನುಷ್ಯ ಹೊಂದಿರುವ ಮೊಬೈಲ್ನಿಂದ ಇನ್ನೊಬ್ಬರ ಮೊಬೈಲ್ಗೆ, ಮನುಷ್ಯನಿಂದ ಇನ್ನೊಂದು ಸಾಧನಕ್ಕೆ ಮಾಹಿತಿಯನ್ನು ರವಾನಿಸುವ ತಂತ್ರಜ್ಞಾನವಿದು.
ಒಂದು ಮೃದು ಸ್ಪರ್ಶ, ಕೈ ಕುಲುಕುವಿಕೆ ಸಾಕು ಮಾಹಿತಿ ವರ್ಗಾಯಿಸಿಕೊಳ್ಳಲು. ಈಗಲೂ ಸಾಕಷ್ಟು ಜನ ವಿಶೇಷವಾಗಿ ಚಳಿಗಾಲದಲ್ಲಿ ಇನ್ನೊಬ್ಬರನ್ನು ಸ್ಪರ್ಶಿಸಿದಾಗ, ಲೋಹದ ವಸ್ತುಗಳನ್ನು ಮುಟ್ಟಿದಾಗ ಶಾಕ್ ಹೊಡೆದಂತೆ ಆಗುತ್ತದೆ ಎಂಬುದನ್ನು ಕೇಳಿರಬಹುದು. ಅಥವಾ ಅನುಭವಿಸಿರಬಹುದು. ಅಂತಹುದೇ ಇದು ಕೂಡ.
ಆದರೆ ಇದರಲ್ಲಿ ಮಾಹಿತಿ ವಿನಿಮಯವಾಗುವ ಶಕ್ತಿಯ ಪ್ರಮಾಣ ನಮ್ಮ ಅರಿವಿಗೆ ಬಾರದಷ್ಟು ಕಡಿಮೆಯಾಗಿರುತ್ತದೆ. ಈ ತಂತ್ರಜ್ಞಾನವನ್ನು ಈಗಾಗಲೇ ತಪಾಸಣೆ ನಡೆಸಲಾಗಿದೆ. ದೊಡ್ಡದೊಡ್ಡ ಕಂಪನಿಗಳ ಸಿಇಒಗಳ ಮೂಲಕವೇ ಇದನ್ನು ಪ್ರಥಮ ಬಾರಿಗೆ ಪ್ರಯೋಗಿಸಲಾಯಿತು. ಲೋಹದ ಹಿಂಭಾಗ ಹೊಂದಿರುವ ಸಿಗರೇಟ್ ಪ್ಯಾಕ್ ಗಾತ್ರದ ಸಾಧನವೊಂದನ್ನು ಒಬ್ಬ ಸಿಇಒ ಕಿಸೆಯಲ್ಲಿ ಇಡಲಾಗಿತ್ತು. ಇನ್ನೊಂದು ಇಂತಹ ಸಾಧನವನ್ನು ಸಿಇಒಗಳ ಸಾಲಿನಲ್ಲಿ ಕೊನೆಯಲ್ಲಿರುವ ಸಿಇಒ ಕಿಸೆಯಲ್ಲಿ ಇಡಲಾಗಿತ್ತು. ಸಿಇಒಗಳು ಪರಸ್ಪರ ಕೈ ಹಿಡಿದು ನಿಂತಿದ್ದರು. ಒಂದು ಬದಿ ಕೊನೆಯಲ್ಲಿದ್ದ ಸಿಇಒನ ಡಿಜಿಟಲ್ ವಿಸಿಟಿಂಗ್ ಕಾರ್ಡನ್ನು ಇನ್ನೊಂದು ಬದಿಯ ಸಿಇಒನ ಕಿಸೆಯಲ್ಲಿದ್ದ ಯಂತ್ರ ಸ್ವೀಕರಿಸಿತ್ತು! ಈ ತಂತ್ರಜ್ಞಾನದಿಂದ ಹೆಸರು, ಫೋನ್ ನಂಬರ್, ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕ ಮಾಹಿತಿಗಳನ್ನು ರವಾನಿಸಬಹುದಂತೆ. ಸದ್ಯಕ್ಕೆ ವೀಡಿಯೊಗಳನ್ನು ರವಾನಿಸಲು ಸಾಧ್ಯವಿಲ್ಲ. ಮುಂದೆ ಅದೂ ಬರಬಹುದೇನೊ!
ವಯರ್ಲೆಸ್ ಚಾರ್ಜಿಂಗ್
ಮೊಬೈಲ್, ಕ್ಯಾಮೆರಾ, ಬ್ಯಾಟರಿ ಹೀಗೆ ಏನೇ ಚಾರ್ಜ್ ಮಾಡುವುದಿರಲಿ. ಅದನ್ನು ವಯರ್ಗೆ ಸಂಪರ್ಕಿಸಲೇಬೇಕು ಎಂಬುದು ನಮ್ಮ ನಂಬುಗೆ. ಅದಿಲ್ಲದೇ ಮೊಬೈಲ್ ಚಾರ್ಜ್ ಆಗುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ. ಸಾಮಾನ್ಯರೇನಾದರೂ ಹೀಗೆ ಹೇಳಿದರೆ 'ಒಂದು ಸ್ಕ್ರೂ ಲೂಸು' ಅಂದುಕೊಳ್ಳುವ ಸಂಗತಿ.
ಇಂಥ ನಂಬಲಸಾಧ್ಯ ಮತ್ತು ಊಹಾತೀತವಾದ ತಂತ್ರಜ್ಞಾನ ಆಗಲೇ ಆವಿಷ್ಕಾರಗೊಂಡಿದೆ. ಬಹುಶಃ ಇನ್ನು ಮುಂದೆ ಬರುವ ಸ್ಮಾರ್ಟ್ಫೋನ್ಗಳನ್ನು ನೀವು ವಯರ್ಗೆ ಸಂಪರ್ಕ ಕಲ್ಪಿಸಿಟ್ಟೇ ಚಾರ್ಜ್ ಮಾಡಬೇಕಾದ ಅಗತ್ಯ ಇಲ್ಲ. ಅಂತರ್ಜಾಲವನ್ನು ವಯರ್ಲೆಸ್ ಮೂಲಕ ಸಂಪರ್ಕಿಸುವುದಿಲ್ಲವೇ? ಅದೇ ಮಾದರಿಯಲ್ಲಿ ಮನೆಯ ಮೂಲೆಯಲ್ಲೆಲ್ಲೋ ಒಂದು ಚಾರ್ಜರ್ ಯಂತ್ರ ಇಟ್ಟರೆ ಸಾಕು. ಅದರ ವ್ಯಾಪ್ತಿಯಲ್ಲಿ ನಿಮ್ಮ ಮೊಬೈಲ್ ಇದ್ದರೆ ಅದು ತನ್ನಿಂದ ತಾನೇ ಚಾರ್ಜ್ ಆಗುತ್ತಿರುತ್ತದೆ. ನೀವು ಓಡಾಡುತ್ತಿರುವಾಗ, ಮಾತನಾಡುತ್ತಿರುವಾಗ ಸುಮ್ಮನೆ ಎಲ್ಲೋ ಇಟ್ಟಾಗ ಹೀಗೆ ಎಲ್ಲೆಂದರಲ್ಲಿ ಚಾರ್ಜ್ ಆಗುತ್ತಿರುತ್ತದೆ. ವಿಮಾನ ನಿಲ್ದಾಣ, ಕೆಫೆಟೇರಿಯಾ, ಹೋಟೆಲ್ ಮುಂತಾದೆಡೆ ವೈಫೈ ವ್ಯವಸ್ಥೆ ಇರುವಂತೆ ಇನ್ನು ಮುಂದೆ ವಯರ್ಲೆಸ್ ಚಾರ್ಜರ್ಗಳೂ ಬಂದಾವು.
ಹೀಗೇನಾದ್ರೂ ಆದ್ರೆ ಬ್ಯಾಟರಿ ಚಾರ್ಜ್ ಇರ್ಲಿಲ್ಲ ಅಂತ ಸುಳ್ಳು ಹೇಳೋ ಅವಕಾಶ ಇರೋದಿಲ್ಲ!
ಧರಿಸಬಲ್ಲ ಕಂಪ್ಯೂಟರ್
ಮನೆಯಲ್ಲಿ ಟೇಬಲ್ ಮೇಲೆ ಇಡುವ ಕಂಪ್ಯೂಟರ್ ಆಯ್ತು. ತೊಡೆ ಮೇಲಿಡೋ ಲ್ಯಾಪ್ಟಾಪೂ ಬಂತು. ಕೈಯಲ್ಲಿ ಹಿಡಿಯೋ ಟ್ಯಾಬ್ಲೆಟ್ಟೂ ಬಂದಾಯ್ತು. ಈಗ ನೀವು ಧರಿಬಲ್ಲಂಥ ಕಂಪ್ಯೂಟರ್ ಬರುವುದೊಂದೇ ಬಾಕಿ. ಈಗಾಗಲೇ ಗೂಗಲ್ ಕಂಪನಿ ಕನ್ನಡಕದ ಕಂಪ್ಯೂಟರ್ಗಳ ಮೂಲಕ ಸುದ್ದಿ ಮಾಡಿದೆ. ಅದಿನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲವಾದರೂ, ಸಾಧ್ಯತೆಗಳನ್ನು ತೆರೆದಿಟ್ಟಿದೆ. ಈಗಾಗಲೇ ವಾಚ್ ಮೊಬೈಲ್ಗಳು ಬಂದಿವೆ. ಅವು ಸಂಪೂರ್ಣವಾಗಿ ಮೊಬೈಲ್ ಮಾದರಿಯಲ್ಲಿ ಕೆಲಸ ನಿರ್ವಹಿಸುವಷ್ಟು ಇನ್ನೂ ಸಮರ್ಥವಾಗಿಲ್ಲವಾದರೂ ಎಸ್ಎಂಎಸ್ ಮತ್ತು ಕರೆಗಳನ್ನು ಸ್ವೀಕರಿಸಲು ಸಮರ್ಥವಾಗಿವೆ.
ಇದನ್ನೇ ಇನ್ನಷ್ಟು ಅಭಿವೃದ್ಧಿಪಡಿಸಿ ಸಂಪೂರ್ಣ ಪ್ರಮಾಣದ ಗ್ಯಾಜೆಟ್ಗಳಾಗಿ ರೂಪಿಸುವುದು ಕಂಪನಿಗಳ ಸದ್ಯದ ಗುರಿ. ಜರ್ಮನಿಯಲ್ಲಿ ವೋಕ್ಸ್ ವ್ಯಾಗನ್ ಕಂಪನಿಯು ಕಾರಿನ ಕಾರ್ಖಾನೆಯನ್ನೇ ಸಂಪೂರ್ಣ ಪಾರದರ್ಶಕವಾಗಿ ಮಾಡಿದೆ. ನಮ್ಮ ಸಿನಿಮಾಗಳಲ್ಲಿ ಸ್ವಲ್ಪಮಟ್ಟಿನ ಪಾರದರ್ಶಕತೆ ಬಂದಿದೆಯಾದರೂ, ಆಡಳಿತದಲ್ಲಿ ಪಾರದರ್ಶಕ ವ್ಯವಸ್ಥೆ ಇನ್ನೂ ಸಾಧ್ಯವಾಗಿಲ್ಲ. ಹೀಗೆ ಪಾರದರ್ಶಕ ಪ್ರಿಯರಿಗಾಗಿಯೇ ಪಾರದರ್ಶಕ ಮೊಬೈಲ್, ಪೆನ್ಡ್ರೈವ್, ಕಂಪ್ಯೂಟರ್ ವಾಚ್ಗಳು ಮಾರುಕಟ್ಟೆಗೆ ಬರಲಿವೆ. ಇದೇ ಪಾರದರ್ಶಕ ಗ್ಲಾಸ್, ಸ್ಕ್ರೀನ್ ರೀತಿಯಲ್ಲಿ ದ್ವಿಪಾತ್ರ ನಿರ್ವಹಿಸಲಿದೆ.
ಆರೋಗ್ಯ ಭಾಗ್ಯ
ಬರೀ ಮಾತು, ಎಸ್ಎಂಎಸ್, ಇಂಟರ್ನೆಟ್, ಚಾಟ್, ಆಟ ಇಷ್ಟಕ್ಕೇ ಮೊಬೈಲ್ ಸೀಮಿತವಲ್ಲ. ನಮ್ಮ ಆರೋಗ್ಯದ ಮೇಲೆ ನಿಗಾ ಇಡುವಲ್ಲಿ ಇನ್ನುಮುಂದೆ ಮೊಬೈಲ್ ಪ್ರಮುಖ ಪಾತ್ರ ವಹಿಸಲಿದೆ. ಮಧುಮೇಹ, ನಿದ್ರಾ ಸಂಬಂಧಿ ಕಾಯಿಲೆಗಳನ್ನು ಮೊಬೈಲ್ ಮೂಲಕವೇ ನಿಗಾ ಇಡಬಹುದು. ಮನುಷ್ಯನ ದೇಹದಲ್ಲಾಗುವ ಬದಲಾವಣೆಗಳನ್ನು ಗಮನಿಸಿ ಹೃದಯಾಘಾತದ ಮುನ್ಸೂಚನೆಯನ್ನು ನೀಡಬಲ್ಲದು. ಎಚ್ಚರವಿದ್ದಾಗ ಮತ್ತು ನಿದ್ರೆಯಲ್ಲಿದ್ದಾಗ ಮನುಷ್ಯನ ಮೆದುಳಿನ ಅಲೆಗಳನ್ನು ಗಮನಿಸಿ ಅದರ ಮೂಲಕ ದೇಹದಲ್ಲಾಗುವ ಬದಲಾವಣೆಗಳನ್ನು, ನಿದ್ರೆಯಲ್ಲಾಗುವ ತೊಂದರೆಗಳನ್ನು ಮೊಬೈಲ್ ಗಮನಿಸಬಲ್ಲದಂತೆ.
ಬಯೋಸೆನ್ಸರ್ಗಳ ಮೂಲಕ ನಿಮ್ಮ ಮಧುಮೇಹ ಮತ್ತು ರಕ್ತದೊತ್ತಡದ ಏರಿಳಿತವನ್ನು ನೀವೇ ಗಮನಿಸಿಕೊಳ್ಳಬಹುದು. ನಿಮ್ಮ ಕಣ್ಣಿಗೆ ಎಷ್ಟು ಒತ್ತಡವಿದೆ, ಸುಸ್ತಾಗಿದೆಯೇ? ಕಣ್ಣಿಗೆ ಕೊಂಚ ವಿರಾಮ ಬೇಕೆ ಮುಂತಾದವನ್ನು ಕೂಡ ನಿಮ್ಮ ಮೊಬೈಲ್ ಹೇಳಬಲ್ಲದು. ಹೆಲ್ತ್ ಕಾನ್ಷಿಯಸ್ (ಆರೋಗ್ಯದ ಬಗ್ಗೆ ಕಾಳಜಿಯುಳ್ಳ) ಜನರಿಗೆ ಇದು ಸಮಾಧಾನ ನೀಡಬಹುದು!
ಲೆಕ್ಕಕ್ಕುಂಟು ನೋಟಕ್ಕಿಲ್ಲ
ಕಾರ್ಡ್, ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಮುಂತಾದ ಆಯ್ಕೆಗಳಿಂದಾಗಿ ಲೆಕ್ಕಕ್ಕೆ ಮಾತ್ರ ಹಣ. ನೋಟು ಮುಟ್ಟದೇ ಎಂಥ ವ್ಯವಹಾರವನ್ನಾದರೂ ಮಾಡಿಬಿಡಬಹುದು. ಇದು ಒಂಥರಾ ಲೆಕ್ಕಕ್ಕುಂಟು ನೋಟಕ್ಕಿಲ್ಲ! ಭಾರತದಲ್ಲಿ ಮೊಬೈಲ್ ಬ್ಯಾಂಕಿಂಗ್ ಅಥವಾ ಮೊಬೈಲ್ ಮೂಲಕ ಹಣಕಾಸು ವ್ಯವಹಾರ ಇನ್ನೂ ಅಷ್ಟಾಗಿ ಚಾಲ್ತಿಯಲ್ಲಿಲ್ಲ. ಏರ್ಟೆಲ್ ಮನಿ ಮುಂತಾದವು ಈಗಷ್ಟೇ ಪರಿಚಿತವಾಗುತ್ತಿವೆ. ಆದರೆ ಈ ಡಿಜಿಟಲ್ ವ್ಯವಹಾರ ಅಥವಾ ಕ್ಯಾಶ್ಲೆಸ್ ವ್ಯವಹಾರ ಅಮೆರಿಕದಲ್ಲಿ ಶೇ.93ರಷ್ಟು, ಸ್ವೀಡನ್ನಲ್ಲಿ ಶೇ.97ರಷ್ಟು ವ್ಯಾಪಿಸಿಕೊಂಡಿದೆ. ಕಿನ್ಯಾದಂಥ ದೇಶದಲ್ಲಿ ಶೇ.83ರಷ್ಟು ವಯಸ್ಕರು ಎಂ-ಪೇಸಾ ಎಂಬ ಡಿಜಿಟಲ್ ವ್ಯವಹಾರದ ಸಾಧನವನ್ನು ಬಳಸುತ್ತಿದ್ದಾರೆ. ವಿಚಿತ್ರವೆಂದರೆ ಇದನ್ನು ಬಳಸುವ ಸಾಕಷ್ಟು ಮಂದಿಗೆ ಬ್ಯಾಂಕ್ ಖಾತೆ ಕೂಡ ಇಲ್ಲವಂತೆ!
-ವಿನಾಯಕ ಭಟ್ಟ ಮೂರೂರು
vakradanta@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


