ಸಾಪ್ತಾಹಿಕಪ್ರಭ

ಹಣ್ಣು ತಿಂದ ಸಿಪ್ಪೆ

Published On :

'ಸಿದ್ರಾಮಪ್ಪ ಎಂಬವರು, ವಿಷಪ್ರಾಶನದಿಂದ ಸತ್ತಿದ್ದಾರೆ' ಎಂಬುದನ್ನು ದೈನಂದಿಕದಲ್ಲಿ ನೋಡಿದಾಗ, ಅವನಿಗೇನಾಗಿತ್ತು ಬ್ಯಾನಿ, ಇನ್ನೆರಡು ತಿಂಗಳಲ್ಲಿ ರಿಟೈರ್ಮೆಂಟ್ ಇತ್ತು. ಕೆಲವು ವರ್ಷ ಒಂದೇ ಆಫೀಸಿನಲ್ಲಿ ಕೆಲಸ ಮಾಡಿದ್ದು ನೆನಪಾಗಿ, ಅವನ ಒಡನಾಟದ ಕೆಲವು ಘಟನೆಗಳು ಬೆಳಗಿನ ಬೆಡ್ ಕಾಫಿಯಂತಾಗಿ ನಿಧಾನವಾಗಿ ಗುಟುಕರಿಸಹತ್ತಿದೆ.
ಈ ಜೀವನ ನಿರ್ವಹಣೆಗಾಗಿ ಎಷ್ಟೊಂದು ಹೊಡೆದಾಟ, ಬಡಿದಾಟ ಮಾಡಬೇಕು? ಎಷ್ಟು ಸುಳ್ಳು, ಮೋಸ, ವಂಚನೆಗಳಿಗೆ ಮನುಷ್ಯತ್ವವನ್ನು ಬಲಿಕೊಡಬೇಕು? ಎಷ್ಟು ಜನರಿಗೆ ಎಲ್ಲೆಲ್ಲಿ ಮಸ್ಕಾ ಹೊಡೀಬೇಕು? ಯಾರಿಂದಲಾದರೂ ಪುಗಸಟ್ಟೆ ಸಿಗುವ ಎಂಜಲು ಕಾಸಿಗೆ ಕೈ ಕೈ ಹೊಸೆದು, ಉಗುಳು ನುಂಗಬೇಕು? ಹಲ್ಲುಗಿಂಜಬೇಕು? ಇಡಿಯಾಗಿರುವ ದೇಹವನ್ನು ಹಿಡಿಯಾಗಿಸಿಕೊಂಡು ಭೂಮಿ ಉದ್ದಕ್ಕೆ ಬಗ್ಗಿಸಬೇಕು. ಈ ಸಿದ್ರಾಮಪ್ಪ ಡಿದರ್ಜೆ ನೌಕರನಾಗಿ, ಹೆಚ್ಚು ಕಮ್ಮಿ ಇದನ್ನೇ ಮಾಡುತ್ತಿದ್ದ. ಉಸಿರು ಕಟ್ಟುವ ವಾತಾವರಣದಲ್ಲಿ ಮೂವತ್ತೆಂಟು ವರ್ಷ ಕೆಲಸ ಮಾಡಿ ಸೀಜ್ ಆಗಿದ್ದವ, ಈಗ್ಯಾಕೆ ಆತ್ಮಹತ್ಯೆ ಮಾಡಿಕೊಂಡ? ಅವನಿಗೆ ಅಂಥಾದ್ದೇನಾಗಿತ್ತು... ಎಂಬಿತ್ಯಾದಿ ಯೋಚನೆಗಳಿಂದ, ತಲೆ ಗಿರ್ರೆಂದಿತ್ತು.
ಆದರೂ, ಅವನ ನಿತ್ಯದ ಕೆಲಸಗಳನ್ನು ಮನಸ್ಸು ಹಿಂಜಹತ್ತಿತ್ತು.
ಸಾಧಾರಣ ಎತ್ತರದ ಆ ಸಿದ್ದರಾಮಪ್ಪ, ಇತರೆ ಜವಾನರಿಗಿಂತ ಹೆಚ್ಚು ವಿಶ್ವಾಸಿಕ ಮತ್ತು ವಿಧೇಯನಾಗಿದ್ದ. ಹೇಳಿದ ಎಲ್ಲ ಕೆಲಸವನ್ನು ಮರುಮಾತಾಡದೇ ಮಾಡುತ್ತಿದ್ದ. ಸೌಜನ್ಯಶೀಲ. ಈ ಕಾರಣದಿಂದ ಅವನು ಎಲ್ಲರಿಗೂ ಅಚ್ಚುಮೆಚ್ಚಿನವನಾಗಿದ್ದ. ನಾನೊಂದು ದಿನ ಅವನಿಗೆ,
'ಸಿದ್ರಾಮಪ್ಪ, ನಿನಗೆ ಮಕ್ಕಳೆಷ್ಟೋ...?' ಎಂದು ಕೇಳಿದ್ದೆ.
'ನಾಲ್ಕೇ ನಾಲ್ಕು ರೀ ಸಾಹೇಬ್ರ. ಅದರಲ್ಲಿ ಎರಡು ಗಂಡು ಎರಡು ಹೆಣ್ಣೂರಿ. ದೊಡ್ಡವನು ಗ್ರಾಜ್ಯುಯೇಟ್ ಆಗಿ ಕೆಲಸವಿಲ್ಲದೇ ಮನೆಯಲ್ಲಿ ಲಾಟ್ರೀ ಹೊಡೀತಾನ್ರಿ. ಎರಡನೇ ಗಂಡು ಎಲ್ಲರಿಗಿಂತ ಚಿಕ್ಕವನು. ಈ ವರ್ಷ ಕಾಲೇಜು ಫೈನಲ್ ಇಯರ್ರಿ. ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಕೊಟ್ಟೀನ್ರೀ...' ಎಂದು ಸಂಕ್ಷಿಪ್ತವಾಗಿ ಕೌಟುಂಬಿಕ ಚಿತ್ರಣವನ್ನು ಕೊಟ್ಟಿದ್ದ. ನಾನು ಸುಮ್ಮನಿರದೇ,
'ಮತ್ತೆ ದೊಡ್ಡಮಗನಿಗೆ ಏನಾದ್ರೂ ಮಾಡಬೇಕಿತ್ತು. ಯಾವುದೋ ಕೆಲಸವನ್ನಾಗಲೀ ಇಲ್ಲ ಒಂದು ಸಣ್ಣ ಬಿಜಿನೆಸ್ ಹಚ್ಚಿ ಕೂಡ್ರಿಸಬೇಕಿತ್ತು...' ಎಂದು ಹಲವರಂತೆ ಪುಕ್ಕಟೆ ಸಲಹೆ ಕೊಟ್ಟಿದ್ದೆ.
'ನಮ್ಮ ಕಾಲದಲ್ಲಾಗಿದ್ದರೆ, ಯಾರದಾದರೂ ಕೈಯನ್ನೋ ಕಾಲನ್ನೋ ಹಿಡಿದಿದ್ದರೆ ಕೆಲಸ ಸಿಗತ್ತಿತ್ರಿ. ಹಾಗೆ ಹಿಡಿಸಿಕೊಂಡವರು ಒಂದು ಬೈದಾದರೂ ಪುಣ್ಯದ ಕೆಲಸವೆಂದು ತಮ್ಮ ಅಧಿಕಾರ ಚಲಾಯಿಸಿ ಒಂದು ಕೆಲಸ ಕೊಟ್ಟು ಕೃತಕೃತ್ಯರಾಗುತ್ತಿದ್ದರು. ನಮ್ಮನ್ನು ಕೃತಜ್ಞರಾಗಿರುವಂತೆ ಮಾಡುತ್ತಿದ್ದರು. ಆದರೆ ನಿಮಗೆ ಕಂಡಂತೆ ಕಾಲ ಬದಲಾಗಿದೆ. ಕಲಿತವರು ಜಾಸ್ತಿಯಾಗಿದ್ದಾರೆ. ಒಂದು ಸಣ್ಣ ಕೆಲಸಕ್ಕೂ ಲಕ್ಷ ಲಕ್ಷ ಹಿಡಕೊಂಡು ತಿರುಗಿದರೂ ಕೆಲಸ ಎಲ್ಲಿ ಸಿಕ್ಕಾವು ಹೇಳ್ರಿ? ಇಂಥ ಪರಿಸ್ಥಿತಿಯಲ್ಲಿ, ನಾನು ಮನೆಗೆ ಹೋದರಾಯಿತು. ನಮ್ಮಾಕಿ ಮತ್ತು ಆ ಮಗ ಸೇರಿ, ಎಲ್ಲಾದರೂ ಕೆಲಸ ಕೊಡ್ಸು... ಅಂತ ಭಟ್ಟಿ ಹಿಂಡಿದಂತೆ ನನ್ನ ಪ್ರಾಣ ಹಿಂಡುತ್ತಾರ್ರಿ. ಸ್ವರ್ಗದಂತಿದ್ದ ಮನೆಯೀಗ ನರಕ ಆಗಿದೇರಿ. ನಿಮಗ ಗೊತ್ತಿದ್ದಂತೆ, ಸಣ್ಣ ಪಗಾರ ತೆಗೆದುಕೊಂಡು, ಇಷ್ಟು ಓದಿಸಿದೀನಿ. ಇಬ್ಬರ ಮದುವೆ ಮಾಡಿದೀನಿ. ಮ್ಯಾಗ ಸಂಸಾರದ ನೊಗಕ್ಕ ಹೆಗಲು ಕೊಟ್ಟೀನಿ. ಅದರಲ್ಲೇ ಕಾಲುಚಾಚಾಕ ಒಂದು ಮನಿ ಮಾಡಿಕೊಂಡಿದೀನಿ. ಇವು ನನ್ನ ಕಯ್ಯಾಗಿನ ಮಾತು. ಆದರ ನೌಕರಿ ನನ್ನ ಕೈಯಾಗಿದೇನ್ರಿ...?' ಎಂದು ಮುಖ ಕೆಳಗೆ ಹಾಕಿದ್ದ ಗಂಟಲುಬ್ಬಿಸಿಕೊಂಡು.
'ಕೈತುಂಬ ಪಗಾರ ತಗೊಳ್ಳೋ ನಾವೇ ಲಗಾಟಿ ಹೊಡಿತಿದ್ದೀವಿ. ನಮಗ ಹೋಲಿಸಿಕೊಂಡ್ರೆ, ನಿನ್ನದು ಭಾರಿ ಸಾಹಸಬಿಡು...' ಎಂದು ತಾರೀಫು ಮಾಡಿದ್ದೆ. ಒಂದು ಕ್ಷಣದ ಹುಮ್ಮಸ್ಸು ನೀಡಿದ್ದೆ. ಅಷ್ಟೊತ್ತಿಗೆ ಬಿಗ್‌ಬಾಸ್‌ನ ಬೆಲ್ ಗಂಟೆಯಂತೆ ಬಡಿದುಕೊಂಡಿತ್ತು. ಸಿದ್ರಾಮಪ್ಪ ಚೇಂಬರಿನತ್ತ ಓಡಿದ್ದ.
ಇನ್ನೊಂದು ದಿನ ನನಗೆ ಸ್ವಲ್ಪ ಬಿಡುವಾಗಿತ್ತು. ರಿಲ್ಯಾಕ್ಷಾಗಿ ಕಚೇರಿಯ ಬಾಗಿಲಿನ ಕಡೆಗೆ ನೋಡುತ್ತ ಕುಳಿತಿದ್ದೆ. ಟೀ ಶರ್ಟು ಹಾಕಿಕೊಂಡು ಟಿಪ್‌ಟಾಪಾಗಿದ್ದ ಯುವಕನೊಂದಿಗೆ ಸಿದ್ರಾಮಪ್ಪ ಪ್ರವೇಶಿಸಿದ್ದ. ನಾನು ಸ್ವಲ್ಪ ಕ್ಲೋಜಾಗಿದ್ದರಿಂದ ನಸುನಗುತ್ತಲೇ ನನ್ನತ್ತ ಬಂದ ಅವನು ಆ ಯುವಕನತ್ತ ತೋರಿಸುತ್ತ, 'ಇವನು ನನ್ನ ದೊಡ್ಡಮಗ. ಹೆಸರು ಚಂದ್ರು...' ಎಂದು ಪರಿಚಯಿಸಿ, 'ಇವನ ಉಪದ್ರವ ತಡೆಯಲಾರದೇ ಕರಕೊಂಬಂದೀನಿ ನೋಡ್ರಿ...' ಎಂದಿದ್ದ. ಆನಂತರ ಅಲ್ಲಿ ಇಲ್ಲಿ ಅವರಿವರಿಗೆ ಪರಿಚಯಿಸಿದ ನಂತರ ಏನು ಮಾಡಿದನೋ ನಾನು ಕೆಲಸದಲ್ಲಿ ಮಗ್ನನಾಗಿದ್ದೆ. ಆನಂತರ, ಆ ಚಂದ್ರು ಪ್ರತಿ ದಿನ ಬರಹತ್ತಿದ್ದ ಅವನಪ್ಪನ ಜೊತೆಗೆ. ಮತ್ತು ಅವನಪ್ಪನ ಕೆಲಸದಲ್ಲಿ ಭಾಗಿಯಾಗುತ್ತಿದ್ದ. ಲವಲವಿಕೆಯಿಂದ ಓಡಾಡಿಕೊಂಡಿದ್ದ. ಅವನಪ್ಪನ ಕೈಗೆ ಬೀಳೋ ಕಾಸು ಅವನ ಕೈಗೆ ಬೀಳಹತ್ತಿದ್ದವು. ಅವನೊಬ್ಬ ಖಾಯಂ ನೌಕರನೆಂದು ಭಾವಿಸಲಾಗಿತ್ತು. ನನ್ನವಳ ಕೂಗು ನನ್ನನ್ನು ಆ ಲೋಕದಿಂದೆಳೆದು ತಂದಿತ್ತು.
ಆ ಸಿದ್ರಾಮಪ್ಪನ ಗುಂಗಿನೊಳಗೆ ಸ್ನಾನಮಾಡಿ, ತಿಂಡಿ ತಿಂದು, ಆಫೀಸಿಗೆ ಹೊರಟೆ. ಕಚೇರಿ ತಲುಪಿ, ಸ್ವಸ್ಥಾನದಲ್ಲಿ ಕುಳಿತ ಬಳಿಕ, ನಿಂಗಪ್ಪ, ಇನ್ನೊಬ್ಬ ಜವಾನನನ್ನು ಕರೆದು, 'ಹೇ ನಿಂಗಪ್ಪ, ಸಿದ್ರಾಮಪ್ಪನ ಸಾವಿನ ಸುದ್ದಿಯನ್ನು ಪೇಪರಿನಲ್ಲಿ ಓದಿದೆ. ಅದೆಲ್ಲ ಹ್ಯಾಂಗಾತಂತೋ...' ಎಂದು ಪ್ರಶ್ನಿಸಿದ್ದೆ. ಅವನು ನಿಟ್ಟುಸಿರೊಂದನ್ನು ಬಿಟ್ಟ.
'ಅದೆಲ್ಲ ದೊಡ್ಡ ಕಥೆ. ಅದನ್ನೇನ್ ಕೇಳ್ತೀರಿ ಬಿಡ್ರಿ ಸಾಹೇಬ್ರೆ. ಹೇಳಲಿಕ್ಕೆ ಬೇಜಾರಾಗುತ್ತಿದೆ...' ಎಂದು ಅತ್ತಿತ್ತ ನೋಡಿ, ಮೆಲ್ಲಗೆ 'ಅವನ ಮಗ ಚಂದ್ರು ಬರ್ತಾ ಇದ್ನಲ್ರಿ...' ನಾನು ಹೌದೆಂದು ತಲೆ ಅಲ್ಲಾಡಿಸಿದೆ. 'ಅವನಿಗೆ ಇಲ್ಲಿಯ ಹರಾಮಿಯ ದುಡ್ಡು ರುಚಿ ಕಂಡಿದ್ದವು. ನಿತ್ಯ, ಅವರಪ್ಪನಿಗೆ ನೀ ಕೆಲ್ಸ ಕೊಡ್ಸು ಇಲ್ಲ ಸತ್ತುಹೋಗು. ನೀ ಸತ್ರ, ಅನುಕಂಪದ ಆಧಾರದ ಮೇಲೆ ನಿನ್ನ ನೌಕರಿ ನನಗೆ ಸಿಗುತ್ತೆ... ಎಂದು ಅವನಿಗೆ ಉಣ್ಣಲೂ, ನಿದ್ದೆ ಮಾಡಲೂ ಬಿಡದಂತೆ ಕಾಡುತ್ತಿದ್ದನಂತೆ. ಮತ್ತೆ ಇನ್ನು ನೀನು ರಿಟೈರ್ಡ್ ಆಗಲಿಕ್ಕೆ ಎರಡೇ ತಿಂಗಳು ಉಳಿದಿದೆ. ಆನಂತರ ನಿನ್ನನ್ನು ಯಾರು ಕೇಳ್ತಾರೆ... ಎಂದು ಅವನ ಹೆಂಡತಿ ಪ್ರಾಣ ಹಿಂಡುತ್ತಿದ್ದಳಂತೆ. ಈ ಮಧ್ಯದಲ್ಲಿ ಅವನು ಆಫೀಸಿಗೆ ಬಂದಿದ್ದ. ಆದರೆ, ಎಂದಿನಂತಿರಲಿಲ್ಲ. ನಾನೇ ಯಾಕೋ ಸಿದ್ರಾಮಣ್ಣ ಒಂಥರ ಇದ್ದೀಯಲ್ಲ. ಏನ್ಸಮಾಚಾರ... ಎಂದು ವಿಚಾರಿಸಿದೆ. ಕಣ್ಣೀರು ತಂದುಕೊಂಡು ತನ್ನ ಕಥೆಯನ್ನು ಹೇಳಿ ಮನಸ್ಸನ್ನು ಹಗುರ ಮಾಡಿಕೊಂಡ. ನಾನೆಷ್ಟೋ ಸಮಾಧಾನದ ಮಾತುಗಳನ್ನಾಡಿದೆ. ಕೊನೆಗೆ ನೀ ಸುಮ್ನೆ ಹ್ಞೂಂಗುಟ್ಟಿಕೊಂಡು ಬಾ. ಅವರು ಹೇಳಿದರೆಂದು ಕೋಟಿ ಕೊಟ್ಟರೂ ದುರ್ಲಭದ ಬದುಕಿಗೇನಾದ್ರೂ ಮಾಡಿಕೊಂಡುಬಿಟ್ಟೀಯಾ ಎಂದು ಧೈರ್ಯ ಹೇಳಿದ್ದೆ ಸಾಹೇಬ್ರೆ. ನನ್ನ ಮಾತಿನಿಂದ ಗೆಲುವಾಗಿದ್ದ. ಆದರೆ, ರಾತ್ರಿ ಮನೆಯೊಳಗೆ ತಾಯಿ ಮಗ ಸೇರಿ, ಏನೇನು ಮಾಡಿದರೋ ಏನೋ ಮೈತುಂಬ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಸತ್ತೇಹೊಗ್ಯಾನ್ರಿ. ನ್ಯಾಚುರಲ್ ಡೆಥ್ ಅಂತ ಸರ್ಟಿಫಿಕೇಟ್ ಕೊಟ್ಟಾರಂತ್ರಿ ಪೋಸ್ಟ್ ಮಾರ್ಟಂ ಮಾಡಿದ ಡಾಕ್ಟರ್. ಅತ್ಲಾಗ ಅವನೂ ಉಳಿಯಲಿಲ್ಲ. ಇತ್ಲಾಗ ಅವನ ಮಗನಿಗೂ ಕೆಲಸ ಸಿಗುವುದಿಲ್ಲ ಅಂತಾರ್ರಿ ಜನ...' ಎಂದು ಹೇಳುವಷ್ಟರಲ್ಲಿ ಬಿಗ್‌ಬಾಸ್ ಬಂದರು. ನಿಂಗಪ್ಪ ಚೇಂಬರತ್ತ ಓಡಿದ್ದ.
ನನಗೆ ಯೋಚನೆಗಿಟ್ಟುಕೊಂಡಿತು. ಜೀವನವೆಂದರೆ ಇಷ್ಟೇನಾ... ಎಂದು. ಯೌವನದಲ್ಲಿ ಹೆಂಡತಿ-ಮಕ್ಕಳು ಮತ್ತು ಸಮಾಜದ ಕಣ್ಣಲ್ಲಿ ಎದ್ದುಕಂಡು, ಎಲ್ಲರಿಂದ ಮಝೆ ಭಾಪರೇ ಎಂದು ಹೊಗಳಿಸಿಕೊಳ್ಳುವುದು. ಒಮ್ಮೆ ಮುಪ್ಪು ಬಂದು ಅಪ್ಪಿತೋ, ಎಲ್ಲರೂ ಕಾಲಕಸ ಮಾಡುತ್ತಾರೆ. ಬರೀ ಸಾಕುವುದರಿಂದ ಯಾರಿಗೆ ಉಪಯೋಗವಿದೆ? ಹಣ್ಣು ತಿಂದ ಸಿಪ್ಪೆಯಂತೆ ತಿಪ್ಪೆಗೆಸೆಯುತ್ತಾರೆ. ಹೀಗೆ, ವಿಚಾರಸರಣಿ ನಡೆಯುತ್ತಿದ್ದಾಗಲೇ, ಅದೇ ನಿಂಗಪ್ಪ, 'ಸಾಹೇಬ್ರ, ದೊಡ್ಡ ಸಾಹೇಬ್ರು ಕರಿತಿದಾರೆ ಬನ್ನಿ...' ಎಂದು ಕೂಗಿದಾಗಲೇ, ಆ ಯೋಚನಾ ಪ್ರಪಂಚದ ಬಲೆಹರಿದು, ವಾಸ್ತವಕ್ಕೆ ಬಂದು ಸಾಹೇಬರ ಚೇಂಬರತ್ತ ಹೆಜ್ಜೆಹಾಕಿದೆ.

-ಶರಣಗೌಡ ಎರಡೆತ್ತಿನ
sharanagoudaeradettin48
@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.