ಮುತ್ತಿ ಬನ್ನಿ

ಚೈತ್ರ ಕಾಲಿಡುತ್ತಿದ್ದಂತೆ ನದಿಗಳೆಲ್ಲ ಬರಿದು. ಜಲಪಾತಗಳ ತೊರೆಯೂ ಬತ್ತಿರುತ್ತದೆ. ಆದರೆ ಮತ್ತಿಘಟ್ಟ ಜಲಪಾತ ಕಡುಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತದೆ.
ಶಿರಸಿಯಿಂದ ಬರೋಬ್ಬರಿ 42 ಕಿಲೋ ಮೀಟರ್ ದೂರದಲ್ಲಿದೆ ಮತ್ತಿಘಟ್ಟ. ಸಾರಿಗೆ ಸಂಸ್ಥೆ ಬಸ್ನಲ್ಲಿ ಅಲ್ಲಿಗೆ ತಲುಪಿ, ಆ ಹಳ್ಳಿಯ ಸರ್ಕಾರಿ ಶಾಲೆಯ ಹತ್ತಿರ ಹೋಗಬೇಕು. ಅಲ್ಲಿಂದ ಕೆಲವು ಮಾರು ಸಾಗಿದರೆ ಹಸೇಹಳ್ಳ ಸಿಗುತ್ತದೆ. ಆಮೇಲೆ ದಟ್ಟಕಾಡಿನ ಮಧ್ಯೆ ಹಾದು ಹೋದ ಟಾರ್ ರಸ್ತೆಯ ಮೂಲಕ ಸಾಗಿದಾಗ ಬಲ ಭಾಗದಲ್ಲಿ ಅಡಿಕೆ ತೋಟ ಸಿಗುತ್ತದೆ. ಆ ತೋಟದ ಅಂಚಿನಲ್ಲಿ ನಿಂತು ನೋಡಿದರೆ ಜಲಪಾತದ ಒಂದು ಪಾರ್ಶ್ವವನ್ನು ವೀಕ್ಷಿಸಬಹುದು. ಭೋರ್ಗರೆವ ಸದ್ದುಗಳನ್ನು ಕೇಳುವುದೇ ಒಂದು ರೋಮಾಂಚನ. ಹಾಲು ನೊರೆಯಂತೆ ಧುಮುಕುವ ಈ ಜಲಪಾತದ ವೈಭವವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲು ಅಲ್ಲಿಂದ ಅಸಾಧ್ಯ.
ಈ ತೋಟದಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರ ಪಾದಯಾತ್ರೆಯ ಮೂಲಕ ಸಾಗಿದರೆ ಈ ಜಲಪಾತವನ್ನು ಎದುರು ಭಾಗದಿಂದ ವೀಕ್ಷಿಸಲು ಸಾಧ್ಯ. ಸುಂದರ ಪರಿಸರದ ಮಧ್ಯೆ ಸುಮಾರು 600 ಅಡಿ ಎತ್ತರದಿಂದ ಧುಮುಕುವ ಈ ಜಲಪಾತ ಅದೆಷ್ಟು ರುದ್ರ ರಮಣೀಯ! ದಟ್ಟ ಹಸುರಿನ ನಡುವಿನಿಂದ ಕಲ್ಲಿನ ಶಿಲೆಯಿಂದ ಹಾಲಿನ ಹೊಳೆಯಂತೆ ಹರಿಯುತ್ತ, ಮಂಜಿನ ಹನಿಯನ್ನು ಸೀಳಿಕೊಂಡು ಭೋರ್ಗರೆವ ಈ ಜಲಧಾರೆಯನ್ನು ನೋಡಲು ಎರಡು ಕಣ್ಣುಗಳು ಸಾಲದು.
ಉಳಿದ ಜಲಪಾತಗಳಿಗೆ ಹೋಲಿಸಿದರೆ ಈ ಜಲಪಾತ ಕಡು ಬೇಸಿಗೆಯಲ್ಲಿಯೂ ಬರಿದಾಗದೇ ಧುಮ್ಮಿಕ್ಕಿ ಹರಿಯುತ್ತದೆ. ಜಲಪಾತದಿಂದ ಹರಿದು ಹೋಗುವ ಜಲಧಾರೆಯು ರಾಮನಗುಳಿ ಹತ್ತಿರ ಗಂಗಾವಳಿ ನದಿಯನ್ನು ಸೇರುತ್ತದೆ. ಜಲಪಾತದ ಸುತ್ತಮುತ್ತ ಗಿಡಗಂಟಿಗಳು ಮುಗಿಲೆತ್ತರಕ್ಕೆ ಬಲಿತು ನಿಂತಿವೆ. ತಳಭಾಗಕ್ಕೆ ಹೋಗಲು ಸರಿಯಾದ ದಾರಿಯಿಲ್ಲದೇ ಇರುವ ಕಾರಣ ಗುಡ್ಡದ ಮೇಲಿಂದ ಜಲಧಾರೆಯ ಸೊಬಗನ್ನು ವೀಕ್ಷಿಸಿ ಕಣ್ಣು ತುಂಬಿಸಿಕೊಳ್ಳಬಹುದು.
ದಟ್ಟ ಕಾಡಿನ ಮಧ್ಯೆ ಈ ಜಲಪಾತ ಇರುವುದರಿಂದ ಹಾಗೂ ಹಸೆಹಳ್ಳಕ್ಕೆ ಸೇತುವೆ ಆಗದೇ ಇರುವ ಕಾರಣ ಪ್ರವಾಸಿಗರು ಅಲ್ಲಿಗೆ ಅಷ್ಟಾಗಿ ಬರುವುದಿಲ್ಲ. ಆದರೆ ಒಮ್ಮೆ ಬಂದವರು ಮತ್ತೆ ಬರುವಂತೆ ಆಕರ್ಷಿಸುವ ವಿಸ್ಮಯಕರ ಶಕ್ತಿಯನ್ನು ಈ ಜಲಪಾತ ಹೊಂದಿದೆ.
-ಚಿತ್ರ - ಬರಹ: ಗಣಪತಿ ಹಾಸ್ಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


