ಸಾಪ್ತಾಹಿಕಪ್ರಭ

ಮತ್ತೆ ನೆರೂಡ

ಮತ್ತೆ ನೆರೂಡ
Published On :

ಹಳೆಯ ಕವಿಗಳನ್ನೂ ಅವರ ಕವಿತೆಗಳನ್ನೂ ಮತ್ತೆ ಮತ್ತೆ ನೆನಪಿನ ಗಣಿಯಿಂದ ಅಗೆದು ತೆಗೆಯುವುದು ಒಳ್ಳೆಯದು. ಆದರೆ ಕವಿಯ ಹೆಣವನ್ನೇ ಅಗೆದು ತೆಗೆಯುವಂತಾದರೆ ಕಷ್ಟ. ಚಿಲಿ ದೇಶದಲ್ಲಿ ಹಾಗಾಗಿದೆ. ಚಿಲಿಯ, ಅಷ್ಟೇ ಏಕೆ, ಜಗದ್ವಿಖ್ಯಾತ ಕವಿ ಪಾಬ್ಲೊ ನೆರೂಡನ ಶವವನ್ನು ಈಗ ಅಗೆದು ಮೇಲಕ್ಕೆತ್ತಲಾಗಿದೆ. ಕಾರಣ: ಅವರ ಸಾವಿನ ಬಗ್ಗೆ ತಲೆದೋರಿರುವ ಗುಮಾನಿ.
1973ರಲ್ಲಿ ಚಿಲಿಯಲ್ಲಿ ನಡೆದ ಮಿಲಿಟರಿ ಕ್ಷಿಪ್ರಕ್ರಾಂತಿಯಲ್ಲಿ ಆಗಸ್ಟೋ ಪಿನೋಶೆ ಎಂಬಾತ ಗದ್ದುಗೆ ಹಿಡಿದಿದ್ದ. ಆದಾಗಿ ಹನ್ನೆರಡೇ ದಿನಗಳಲ್ಲಿ ನೆರೂಡ ಅಸುನೀಗಿದ್ದರು. ಅವರನ್ನು ಬಹುಕಾಲದಿಂದ ಬಾಧಿಸುತ್ತಿದ್ದ ಪ್ರಾಸ್ಟೇಟ್ ಕ್ಯಾನ್ಸರ್ ಅದಕ್ಕೆ ಕಾರಣ ಎನ್ನಲಾಗಿತ್ತು. ಆದರೆ ನೆರೂಡನ ಡ್ರೈವರ್ ಮತ್ತು ಬಾಡಿಗಾರ್ಡ್ ಆಗಿದ್ದ ಮ್ಯಾನಿಯೆಲ್ ಅರಯ ಎಂಬಾತ, ಕವಿಗೆ ವಿಷವುಣಿಸಿ ಕೊಂದಿರುವ ಸಾಧ್ಯತೆಗಳಿವೆ ಎಂದು ಅನುಮಾನಪಟ್ಟಿದ್ದ.
ಅದಕ್ಕೂ ಕಾರಣಗಳಿದ್ದವು. ನೆರೂಡ, ಪಿನೋಶೆಗೆ ಮುನ್ನ ಚಿಲಿಯ ಅಧ್ಯಕ್ಷನಾಗಿದ್ದ ಸಾಲ್ವಡೋರ್ ಅಲಂಡೆಗೆ ಆಪ್ತನಾಗಿದ್ದವನು. ಅಲಂಡೆಯ ನಿಕಟವರ್ತಿಗಳೆಲ್ಲ ಕ್ರಾಂತಿಯ ಬಳಿಕ ಒಬ್ಬೊಬ್ಬರಾಗಿ ನಾಪತ್ತೆಯಾಗಿದ್ದರು ಇಲ್ಲವೇ ಸಾವಿಗೀಡಾಗಿದ್ದರು. ಅಂತಾರಾಷ್ಟ್ರೀಯ ವಲಯದಲ್ಲಿ ವರ್ಚಸ್ವಿಯಾಗಿದ್ದ ನೆರೂಡನನ್ನೂ ಸಂಭಾವ್ಯ ಪ್ರತಿಸ್ಪರ್ಧಿ ಎಂದು ಪಿನೋಶೆ ಭಾವಿಸಿರಬಾರದೇಕೆ?
ಅದಕ್ಕೇ ಈಗ ಕವಿಯ ದೇಹಾವಶೇಷವನ್ನು ಸಂಗ್ರಹಿಸಿ, ವಿಷಪ್ರಾಶನದ ಸಾಧ್ಯತೆ ಪತ್ತೆಹಚ್ಚಲು ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ. 'ನೋಡಿ, ರಕ್ತವಿದೆ ಬೀದಿಗಳಲ್ಲಿ' ಎಂದಿದ್ದ ನೆರೂಡ. ಸಂಶಯ ನಿಜವಾದರೆ, 'ನೋಡಿ, ವಿಷವಿದೆ ಕವಿಯ ಮೂಳೆಗಳಲ್ಲಿ' ಎಂದು ಹೇಳಬೇಕಾದೀತೇನೋ.

ಒಂದು ಹಾಡಿಗಾಗಿ
ಅವನು ಕವಿಯಲ್ಲ. ಪ್ರಜಾತಂತ್ರ, ಚಳವಳಿಗಳ ಬಗ್ಗೆ ಯಾವುದೇ ಅನಿಸಿಕೆಗಳಿರಲಿಲ್ಲ. ಆದರೆ, 1990ರಲ್ಲಿ ತಿಯನಾನ್ಮೆನ್ ಚೌಕದಲ್ಲಿ ವಿದ್ಯಾರ್ಥಿಗಳ ಚಳವಳಿಯನ್ನು ಕ್ರೂರವಾಗಿ ಹೊಸಕಿ ಹಾಕಿದ ಚೀನಾ ಸರಕಾರದ ಕ್ರಮ ಆತನನ್ನು ಕೆರಳಿಸಿತು. ಅದನ್ನು ವಿರೋಧಿಸಿ ಪದ್ಯ ಬರೆದ. ಆತನನ್ನು ಬಂಧಿಸಿ ನಾಲ್ಕು ವರ್ಷ ಜೈಲಿಗೆ ಹಾಕಿತು ಚೀನಾ ಸರಕಾರ.
ನಾಲ್ಕ ವರ್ಷಗಳ ಚಿತ್ರಹಿಂಸೆಯನ್ನು ಅನುಭವಿಸಿ ಹೊರಗೆ ಬಂದಾಗ ಆತ ಹೊಸ ಮನುಷ್ಯನಾಗಿದ್ದ, ಬರಹಗಾರನಾಗಿದ್ದ. ಜೈಲಿನಲ್ಲಿ ಸಿಗುತ್ತಿದ್ದ ಶೌಚಕಾಗದದಲ್ಲಿ ತನ್ನ ಅನುಭವಗಳನ್ನು ಬರೆದು, ತನ್ನ ಭೇಟಿಗ ಬರುತ್ತಿದ್ದ ಕುಟುಂಬಸ್ಥರ ಮೂಲಕ ಕಳುಹಿಸುತ್ತಿದ್ದ. ಅದೂ ಸಿಕ್ಕಿಬಿದ್ದು ಜಪ್ತಿಯಾಯಿತು.ಅಷ್ಟನ್ನೂ ಪುನಃ ನೆನಪಿನಿಂದಲೇ ಬರೆದ. ಚೀನಾದಿಂದ ಕದ್ದು ವಿಯೆಟ್ನಾಮ್‌ಗೆ ಓಡಿ, ಅಲ್ಲಿಂದ ಜರ್ಮನಿಗೆ ಬಂದು ನೆಲೆಸಿದ್ದಾನೆ.
ಆದೀಗ 'ಫಾರ್ ಎ ಸಾಂಗ್ ಆ್ಯಂಡ್ ಹಂಡ್ರಡ್ ಸಾಂಗ್ಸ್: ಎ ಪೋಯೆಟ್ಸ್  ಜರ್ನಿ ತ್ರೂ ಚೈನೀಸ್ ಪ್ರಿಸನ್‌' ಎಂಬ ಕೃತಿಯಾಗಿ ಹೊರಬಂದಿದೆ. ನಿರೀಕ್ಷಿಸಿದಂತೆ, ಚೀನಾದಲ್ಲಿ ಬ್ಯಾನ್. ಉಳಿದೆಡೆ ಬೆಸ್ಟ್‌ಸೆಲ್ಲರ್. ಆತನ ಹೆಸರು ಲಿಯಾವೊ ಯಿವು.
ಸೆಲ್‌ನಲ್ಲಿ ಒಂದು ಹಾಡು ಹಾಡಿದ್ದಕ್ಕಾಗಿ ಆತನಿಗೆ ಕೊಟ್ಟ ಶಿಕ್ಷೆಯಿದು: ನೂರು ಹಾಡು ಹಾಡಬೇಕು. ಕಂಠ ಬಿದ್ದುಹೋದಾಗ, ಗುದದ್ವಾರಕ್ಕೆ ಲೋಹದ ಲಾಠಿ ತೂರಿಸಿ, ಅದರ ಮೂಲಕ ಕರೆಂಟ್ ಶಾಕ್.
ಚೀನಾದ 'ಅಬ್ರುದ್ದಿ'ಯನ್ನೂ ಅಲ್ಲಿನ ಆಡಳಿತವನ್ನೂ ಶ್ಲಾಘಿಸುವವರು ಈ ಕೃತಿಯನ್ನು ಅವಶ್ಯ ಓದಬೇಕು. ನಾವು ಎಷ್ಟು ಸುರಕ್ಷಿತ ವಲಯದಲ್ಲಿದ್ದೇವೆ ಅಲ್ವಾ?
ನಾಕದ ಸಾಲು
ಅದೇನೋ ಹುಟ್ಟಿತು
ನನ್ನ ಆತ್ಮದಲ್ಲಿ
ಜ್ವರವೋ ಅಲ್ಲ ಮರೆತ ರೆಕ್ಕೆಗಳೋ
ಆ ಜ್ವಾಲೆಯ ಅರ್ಥ ಭೇದಿಸುತ್ತ
ಸೃಷ್ಟಿಸಿಕೊಂಡೆ ನನ್ನದೇ ದಾರಿಯ
ಮೊದಲ ಪೆದ್ದು ಸಾಲನು ಬರೆದೆ.
ಸ್ವರ್ಗ ಇದ್ದಕ್ಕಿದ್ದಂತೆ
ತೆರೆದುಕೊಂಡದ್ದ ಕಂಡೆ.
- ಪಾಬ್ಲೊ ನೆರೂಡ

-ಕೇರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.