ಬೆಳಕಿಲ್ಲದ ಹಾದಿ
ಮಂಜ ತನ್ನ ಸೈಕಲ್ಲೇರಿ ನಿಧಾನವಾಗಿ ಪೆಡಲ್ ಮಾಡುತ್ತಾ ಪೇಟೆ ಕಡೆಗೆ ಸಾಗುತ್ತಿದ್ದ. ಮಧ್ಯೆ ಮಧ್ಯೆ ತನ್ನನ್ನು ಹೊತ್ತೊಯ್ಯುವ ಸೈಕಲನ್ನು ಪ್ರೀತಿಯಿಂದೆಂಬಂತೆ ಸವರುತ್ತಿದ್ದ. ಪೇಟೆಯ ಕಡೆಗೆ ಎತ್ತಿನ ಗಾಡಿಯಲ್ಲೋ, ಬಸ್ಸಿನಲ್ಲೋ ಹಲವು ಬಾರಿ ಹೋಗಿದ್ದರೂ ಸೈಕಲ್ ಮೇಲೆ ಹೋಗುತ್ತಿರುವುದು ಇದು ಮೊದಲ ಅನುಭವ.
ಬೆಳಗ್ಗೆ ಬೆಳಗ್ಗೆ ಎದ್ದು ಮನೆ ಮನೆಗೆ ಪೇಪರ್ ತಲುಪಿಸುವುದು ಮಂಜನ ಕೆಲಸ. ಅದೂ ಒಂದು ಮನೆಯಿಂದ ಇನ್ನೊಂದು ಮನೆಗೆ ಕಡಿಮೆಯೆಂದರೂ ಫರ್ಲಾಂಗ್ ದೂರವಾದರೂ ಇರುವ ಹಳ್ಳಿ. ನಡೆದು ಹೋಗಿ ಈ ಕೆಲ್ಸ ಮಾಡಹೊರಟರೆ ಮಧ್ಯಾಹ್ನ ಆದರೂ ಕೆಲಸ ಮುಗಿಯುವಂತಹುದಲ್ಲ. ಅದಕ್ಕೆಂದೇ ಪೇಪರ್ ಏಜಂಟ್ ವಿಶ್ವಣ್ಣನ ಸಲಹೆಯಂತೆ ದುಡಿದ ಹಣವನ್ನೆಲ್ಲಾ ಈ ಸೈಕಲ್ಲಿಗೆ ಹಾಕಿ ತಾನೇ ಹೊಸ ಸೈಕಲ್ ಕೊಂಡುಕೊಂಡಿದ್ದ. ಸೈಕಲ್ ಈಗ ಅವನ ಶರೀರದ ಒಂದು ಭಾಗವೇನೋ ಎಂಬಂತೆ ಆಗಿತ್ತು. ಅದೂ ಹಳ್ಳಿಯಲ್ಲಿ ಸೈಕಲ್ ಹೊಂದಿರುವ ಕೆಲವೇ ಜನರಲ್ಲಿ ತಾನೂ ಒಬ್ಬನಾಗಿದ್ದು ಮಂಜನ ಹೆಮ್ಮೆಗೂ ಕಾರಣವಾಗಿತ್ತು.
ಈಗೊಂದೆರಡು ದಿನಗಳಿಂದ ಸುರಿಯುತ್ತಿರುವ ಇಬ್ಬನಿಯಿಂದಾಗಿ ರಸ್ತೆ ಕಾಣದೆ ಅಲ್ಲಿಲ್ಲಿ ಮಲಗಿರುವ ಬೀಡಾಡಿ ಹಸುಗಳಿಗೋ, ನಾಯಿಗಳಿಗೋ ಸೈಕಲ್ ಗುದ್ದುವಂತಾಗುತ್ತಿತ್ತು. ಇಂದಂತೂ ಮೇಲಿನ ಮನೆ ರಂಗಯ್ಯನವರ ದೈತ್ಯಾಕಾರದ ಕಪ್ಪು ನಾಯಿ ರಸ್ತೆ ಮಧ್ಯದಲ್ಲಿದ್ದುದು ಕಾಣದೆ, ಅದರ ಬಾಲ ಚಕ್ರದಡಿಗೆ ಸಿಕ್ಕಿ ಅದು ಸಿಟ್ಟಿನಲ್ಲಿ ಎದ್ದು ಬೊಗಳುತ್ತಲೇ ಇವನನ್ನು ಬಹುದೂರ ಅಟ್ಟಿಸಿಕೊಂಡು ಬಂದಿತ್ತು.
ಇದಕ್ಕೆಲ್ಲ ಮಂಗಳವನ್ನು ಹಾಡಬೇಕೆಂದೇ ಮಂಜ ಸೈಕಲ್ಲಿಗೆ ಒಂದು ಹೆಡ್ಲೈಟ್ ಹಾಕಿಸಬೇಕೆಂದುಕೊಂಡ. ಪಕ್ಕದ ಮನೆಯ ಮಾದು ಪೇಟೆಯ ಶಾಲೆಯಲ್ಲೇ ಕಲಿಯುವವನು. ಅವನ ಹತ್ತಿರ ತಂದುಕೊಡೋ ಎಂದರೆ ನಿನ್ನ ಸೈಕಲ್ ಕೊಟ್ರೆ ಹಾಕಿಸಿಕೊಂಡೇ ಬರ್ತೀನಿ. ಅದನ್ನು ತಂದ್ರೆ ಇಲ್ಲಿ ಫಿಟ್ ಮಾಡಕ್ಕೆ ಆಗಲ್ಲ ಅಂದಿದ್ದ. ಆದ್ರೆ ಮಂಜನಿಗೆ ತನ್ನ ಸೈಕಲ್ ಬೇರೆಯವರಿಗೆ ಕೊಡಲು ಏನೇನೂ ಮನಸ್ಸಿಲ್ಲ. ಬೇಡ ನಾನೇ ಹೋಗ್ತೀನಿ.ಅವ್ವನಿಗೆ ಕಾಲು ನೋವಿನ ಎಣ್ಣೆ ಕೂಡಾ ಬೇಕೆಂದಿದ್ದಾಳೆ ಎಂದು ಹೇಳಿ ತನ್ನಲ್ಲಿ ಇದ್ದೆಲ್ಲ ಚಿಲ್ಲರೆ ಹಣವನ್ನು ಚಡ್ಡಿ ಕಿಸೆಯೊಳಗೆ ತುರುಕಿಕೊಂಡ.
'ಮಧ್ಯಾಹ್ನ ಇಷ್ಟೊತ್ತಿಗೆ ಹೊರಟರೆ ವಾಪಾಸ್ಸು ಬರುವಾಗ ರಾತ್ರಿ ಆಗುತ್ತಲ್ಲೋ.. ಕತ್ಲೇಲಿ ಹೆಂಗೋ ಬರ್ತೀಯಾ' ಎಂಬ ಅವ್ವನ ಕಾಳಜಿಗೆ 'ಮ್ಯಾಜಿಕ್ ಮಾಡ್ತೀನಿ ಅವ್ವಾ ನನ್ನ ಸೈಕಲ್ಲಿಗೆ. ಬಸ್ಸು ಕಾರು ಎಲ್ಲಾ ರಾತ್ರಿ ಹೋಗಲ್ಲವಾ. ಹಂಗೇ ಇನ್ನು ನನ್ನ ಸೈಕಲ್ಲು ಹೋಗುತ್ತೆ ನೋಡ್ತಾ ಇರು' ಎಂದು ನಗುತ್ತಾ ಕೈ ಬೀಸಿ ಮನೆಯಿಂದ ಹೊರಟಿದ್ದ.
ಗಾಳಿಯನ್ನು ಸೀಳಿಕೊಂಡು ಹೋಗುವ ಸೈಕಲ್ಲಿನಂತೆ ಅವನ ಮನವು ಆನಂದದಾಯಕವಾಗಿ ಹೊಸ ಬೆರಗನ್ನು ಕಾಣುವ ಆಸೆಯಲ್ಲಿತ್ತು. ಪೇಟೆ ಹತ್ತಿರ ಬಂದಂತೆ ಜನಜಂಗುಳಿ, ಬಸ್ಸು ಕಾರು ಜೀಪುಗಳಿಂದ ಸೈಕಲ್ಲಿಗೆ ತಾಗದಂತೆ ತಪ್ಪಿಸಿಕೊಳ್ಳುವುದೇ ಸಮಸ್ಯೆಯಾಯಿತು ಮಂಜನಿಗೆ. ಮೊದಲೇ ಗಿಜಿಗುಡುವ ಪೇಟೆ ಅದು. ಸಾಲದ್ದಕ್ಕೆ ಇಂದು ಸಂತೆ ಬೇರೆ... ಮೆಲ್ಲನೆ ಇಳಿದು ದೂಡಿಕೊಂಡೇ ಹೋಗುವುದು ಎಂದು ಕಾಲು ಇಳಿಸಿದ್ದನಷ್ಟೇ. ಫ್ರೀಂ ಎಂಬ ಜೋರಾದ ವಿಸಿಲ್ ಸದ್ದು ಕೇಳಿಸಿತು. ಎಲ್ಲಿ ಎಂದು ತಿರುಗಿ ನೋಡಿದರೆ ಮಂಜನಿಗೆ ಕಂಡಿದ್ದು ತನ್ನನ್ನೇ ಸನ್ನೆ ಮಾಡಿ ಬಳಿಗೆ ಕರೆಯುತ್ತಿರುವ ಪೋಲೀಸಪ್ಪ.
ಎದೆ ಡವ ಡವ ಎಂದಿತು ಮಂಜನದು. ತನ್ನೂರಿಗೆ ಯಾವುದಾದರು ಜಗಳವೋ ಖೂನಿಯೋ ಆದರೆ ಮಾತ್ರ ಬರುವ ಪೋಲಿಸರ ಖಾಕಿ ಅವನಿಗ್ಯಾಕೋ ಹಿತವಲ್ಲ. ಸ್ವಲ್ಪ ಅಳುಕಿದರೂ, ತಾನೇನು ತಪ್ಪು ಮಾಡಿಲ್ಲ ಎಂಬುದು ತಿಳಿದಿದ್ದರಿಂದ ಸೈಕಲ್ಲಿನ ಬಾರ್ ಹಿಡಿದು ದೂಡಿಕೊಂಡು ಅವನೆದುರು ನಿಂತ.
ಪೋಲಿಸ್ ಇವನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿ, ಸೈಕಲ್ಲಿನ ಸೀಟ್ ಮೇಲೆ ಕೈಯಲ್ಲಿದ್ದ ಬೆತ್ತದಿಂದ ಎರಡೇಟು ಹಾಕಿ 'ಯಾರ್ದೊ ಸೈಕಲ್ಲು..? ಕದ್ದ ಮಾಲಲ್ಲ ತಾನೇ?' ಎಂದ. ತನ್ನ ಸೈಕಲ್ಲಿಗೆ ಅವನ ಬೆತ್ತ ತಾಗಿದ್ದು ಮಂಜನಿಗೆ ತನಗೇ ಹೊಡೆದಷ್ಟು ನೋವಾಯಿತು. 'ಹೇ ಅಲ್ಲಲ್ಲ... ಇದು ನಂದೇ ಸೈಕಲ್' ಎಂದು ಎದೆಯುಬ್ಬಿಸಿ ನುಡಿದ.
'ಮತ್ತೇ.. ಎಲ್ಲಿದೆ ಹೆಡ್ಲೈಟ್? ಗೊತ್ತಿಲ್ವಾ ರೂಲ್ಸ್? ಬಂದಾ ಮಾರಾಜನಂಗೆ... ತೆಗೀ ಫೈನ್.. ಏನ್ ನೋಡ್ತಿದ್ದೀಯಾ.. ತೆಗಿ ತೆಗಿ' ಎಂದ.
'ಹೆಡ್ಲೈಟ್ ಹಾಕಕ್ಕೇ ಸೈಕಲ್ ತಗೊಂಡು ಹಳ್ಳಿಯಿಂದ ಬಂದೆ ಅಣ್ಣಾ. ಈಗ ಹಾಕಿಸ್ಕೊಳ್ತಿನಿ' ಅಂದ ಮಂಜ.
'ಓಹೋಹೋ, ಈ ಕಾಗಕ್ಕ ಗುಬ್ಬಕ್ಕನ ಕಥೆಯೆಲ್ಲಾ ಕಟ್ಟಿಡು. ನೀ ಹೇಳ್ದೆ ಅಂದ್ರೆ, ನಾ ಹೂಂ ಅಂತ ನಂಬಿ ಬಿಟ್ಬಿಡ್ತೀನಾ? ಭಾರೀ ಸತ್ಯ ಹರಿಶ್ಚಂದ್ರನ ವಂಶವೇನೋ ನಿಂದು. ಹೇಳ್ದಷ್ಟು ಕೇಳು. ಮೊದ್ಲು ಫೈನ್ ಮಡ್ಗು. ಇಲ್ಲಾಂದ್ರೆ ದೊಡ್ಡ ಸಾಹೇಬ್ರತ್ರ ಕರ್ಕೊಂಡೋಗ್ತೀನಿ. ಅವ್ರು ಲಾಕಪ್ಪಿಗೆ ಹಾಕಿ ನಾಲ್ಕು ಒದ್ರೆ ಬುದ್ಧಿ ಬರುತ್ತೆ ನಿಂಗೆ. ಒಳ್ಳೆ ಮಾತೆಲ್ಲ ಎಲ್ಲಿ ಅರ್ಥ ಆಗುತ್ತೆ...?'
ಅತ್ತಿತ್ತ ಇದ್ದವರೂ ಮಂಜ ಏನೋ ಬಾರೀ ಅಪರಾಧ ಮಾಡಿದ್ದಾನೆಂಬಂತೆ ಅವನ ಕಡೆ ನೋಡುತ್ತಾ ಬೇಗನೆ ಅಲ್ಲಿಂದ ಜಾರಿಕೊಳ್ಳತೊಡಗಿದರು. ಮಂಜ ನಿಸ್ಸಹಾಯಕನಾಗಿ ತನ್ನ ಚಡ್ಡಿ ಜೇಬಿನಿಂದ ಚಿಲ್ಲರೆ ಹಣವನ್ನೆಲ್ಲ ಚಾಚಿದ ಪೋಲೀಸಪ್ಪನ ಕೈಗೆ ವರ್ಗಾಯಿಸಿದ. 'ಹೋ ಇದು ಬೇರೆ.. ಕೊಟ್ಟಿದ್ದು ಮೂರು ಕಾಸು. ಇದನ್ನ ಲೆಕ್ಕ ಹಾಕ್ಬೇಕಾದ್ರೆ ಮೂರು ದಿನ ಬೇಕು. ಒಳ್ಳೇ ತಿರುಪೆ ಎತ್ತೋವ್ನ ಸಾವಾಸ..ಹೂಂ.. ನಡಿ ನಡೀ ಬೇಗ' ಎಂದು ಸೈಕಲನ್ನು ದೂಡಿದ.
ಉಮ್ಮಳಿಸಿದ ದುಃಖ ಕಣ್ಣೊಳಗೆ ಕೂಡಿ ಕಣ್ಣುಗಳಲ್ಲಿ ತುಂಬುತ್ತಿದ್ದ ನೀರಿನಿಂದಾಗಿ ಮುಂದಿನ ದಾರಿ ಕಾಣದಂತಾಯಿತು. ಪೇಟೆಗೆ ಹೋಗಿ ಮಾಡುವುದಾದರೂ ಏನನ್ನು...? ಸುತ್ತ ತುಂಬಿದ ಸಂತೆಯಿದ್ದರೂ ಅಳುತ್ತಿದ್ದ ಒಂಟಿ ಮನವನ್ನು ಸಂತೈಸಲು ಮಂಜನಿಂದಾಗಲಿಲ್ಲ. ಇನ್ನೊಮ್ಮೆ ಹಣ ಕೂಡಿ ಹಾಕಿ ಸೈಕಲ್ಲಿನ ಹೆಡ್ಲೈಟ್ ಹಾಕಿಸಿ ಬೆಳಕು ಮೂಡಿಸಬಹುದು. ಆದರೆ ಎದೆಯೊಳಗೆ ಈಗ ತುಂಬಿದ ನಿರಾಸೆಯ ಕತ್ತಲು ಕರಗಲು ಯಾವ ಬೆಳಕಿನ ಕಿರಣವೂ ಅವನಿಗೆ ಗೋಚರಿಸಲೇ ಇಲ್ಲ.
= ಅನಿತಾ ನರೇಶ್ ಮಂಚಿ
aninaresh.manchi760
@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

