ಕಲಾಧ್ಯಾನದಲ್ಲೊಂದು ಸಂಜೆ

ಇಡೀ ವೇದಿಕೆಯೇ ಒಂದು ಅಸಂಗತ ಕಲಾಕೃತಿ. ಅದಕ್ಕೆ ತಕ್ಕಂಥ ಬೆಳಕಿನ ವಿನ್ಯಾಸ. ವೇದಿಕೆಯ ಹಿಂಭಾಗದಲ್ಲಿ ಹೆಣೆದ ಬಲೆ. ಅದರೊಳಗೆ ಸಿಕ್ಕಿಬಿದ್ದ ಎರಡು ಕಾಲುಗಳು. ಮೇಲ್ನೋಟಕ್ಕೆ ಅನಾಮಿಕನೊಬ್ಬ ಬೀಸಿದ ಬಲೆಯೊಳಗೆ ಕಾಡುಮೃಗದ ಬದಲಿಗೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದು ವಿಲವಿಲ ಒದ್ದಾಡುತ್ತಿದ್ದಂತೆ. ಅದರ ಬೇರೆ ಬೇರೆ ಬದಿಗೆ ಜೋಡಿಸಿದ ಕೊಂಡಿಯಲ್ಲಿ ನೇತಾಡುತ್ತಿರುವ ಹಳೆಯ ಸೈಕಲ್ಗಳು...ಎಲ್ಲೋ ಯಂತ್ರಯುಗದ ಮಾಯಾಜಾಲದ ಸಾಂಕೇತಿಕ ರೂಪವಿರಬಹುದು. ಅಲ್ಲಲ್ಲಿ ಜೋಡಿಸಿದ ಮನುಷ್ಯನ ಕೈ, ಕಾಲು, ರುಂಡ ಮುಂಡಗಳು... ಅದರ ನಡುವೆ ಕೊಂಡಿಯೊಂದರಲ್ಲಿ ಸಿಕ್ಕಿ ನೇತಾಡುವ 'ಕಲಾಧ್ಯಾನ್' ಎಂಬ ಶೀರ್ಷಿಕೆ.
ಇನ್ನೊಂದು ಪಕ್ಕದಲ್ಲಿ ಮೇಲುಹಾಸು. ಅಲ್ಲಿ ಕುಳಿತು ಹಳ್ಳಿ ಸೊಗಡಿನಲ್ಲಿ ಮೈಮರೆತು ಹಾಡುತ್ತಿದ್ದ ಜನಪದ ಕಲಾವಿದರ ತಂಡ. ಅವರು ಕೋಲಾರದ ಜನಪದ ಹಾಡುಗಾರರು. ಮುಖ್ಯ ಹಾಡುಗಾರ ಮುನಿರೆಡ್ಡಿ ತೆಲುಗಿನ ಜನಪದ ಸೊಲ್ಲುಗಳನ್ನು ಕಂಚಿನ ಕಂಠದಲ್ಲಿ ಹಾಡುತ್ತಿದ್ದರೆ ಪ್ರೇಕ್ಷಕರು ಲಯಬದ್ಧವಾಗಿ ಚಪ್ಪಾಳೆ ತಟ್ಟುತ್ತಾ ಗಾಯಕರಿಗೆ ಸಾಥ್ ನೀಡುತ್ತಿದ್ದರು. ಹಾಗೆ ನೋಡಿದರೆ ಅಲ್ಲಿನ ಕೆಲವರಿಗೆ ತೆಲುಗು ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ ಆ ಹಾಡುಗಳು ನೇರ ಸಹೃದಯರ ಹೃದಯಕ್ಕಿಳಿಯುತ್ತಿದ್ದವು. ವೇದಿಕೆ, ಅಲ್ಲಿನ ಕಾರ್ಯಕ್ರಮಗಳು ಸ್ವಚ್ಛಂದ ಚಿತ್ರಗಳಂತೆ ಕಾಣುತ್ತಿದ್ದವು.
'ಕಲಾಧ್ಯಾನ್' ಎಂಬ, ಕಲಾವಿದರನ್ನು ಸತ್ಕರಿಸಿ ಸನ್ಮಾನಿಸುವ ಅಪರೂಪದ ಕಾರ್ಯಕ್ರಮ ಇತ್ತೀಚೆಗೆ ಕಲಾಕ್ಷೇತ್ರದಲ್ಲಿ ನಡೆದದ್ದು ಈ ಹಿನ್ನೆಲೆಯಲ್ಲಿ. ಹೇಳಿಕೇಳಿ ಇದು ಕಲಾವಿದರ ಪರಿಕಲ್ಪನೆಯಲ್ಲಿ ರೂಪ ತಳೆದ ಸಮಾರಂಭ. ಕಾರ್ಯಕ್ರಮದ ಉದ್ದೇಶವೂ ಕಲೆಯನ್ನು ಉತ್ಸವವಾಗಿಸುವುದು, ಜತೆಗೆ ಕಲಾವಿದರನ್ನು ಸತ್ಕರಿಸುವುದು.
ಕಲಾಧ್ಯಾನ್ ಕಾರ್ಯ ಕ್ರಮದ ರೂವಾರಿಗಳು ಒ. ವೆಂಕಟೇಶ್ ಮತ್ತು ಕಲಾವಿದ ಕೃಷ್ಣ ರಾಯಚೂರ್. ಸಂಘಟಕ ವೆಂಕಟೇಶ್ ಮತ್ತು ಕವಿ, ನಟನಾಗಿಯೂ ಗುರುತಿಸಿಕೊಂಡ ಕಲಾವಿದ ಕೃಷ್ಣ ಕಳೆದ ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಕಲಾಧ್ಯಾನ್, ನಾಡಿನ ಹಿರಿಯ ಕಲಾವಿದರನ್ನು ಗುರುತಿಸಿ ಸನ್ಮಾನಿಸುವ ಜತೆಗೆ, ಈಗಷ್ಟೇ ಅರಳುತ್ತಿರುವ ಉದಯೋನ್ಮುಖ ಕಲಾವಿದರನ್ನು ಗುರುತಿಸುವ ಕಾರ್ಯವನ್ನೂ ಮಾಡುತ್ತಿದೆ. ಕಲಾಧ್ಯಾನ್ ಅಂಗವಾಗಿ ಅಂದು ಬೆಳಗ್ಗೆ ನಡೆದ ಕಲಾಶಿಬಿರದಲ್ಲಿ ಹಲವಾರು ಯುವ ಕಲಾವಿದರು ಪಾಲ್ಗೊಂಡರು. ಬಣ್ಣಗಳೊಂದಿಗೆ ಸರಸವಾಡಿ ವಿಭಿನ್ನ ನೋಟಗಳ ಕಲಾಕೃತಿಗಳ ಮೂಲಕ ಗಮನ ಸೆಳೆದರು. ನೀವೀಗ ವೇದಿಕೆ ಮೇಲೆ ನೋಡಿದ್ದು ಈ ಮನಸ್ಸುಗಳ ಸೃಷ್ಟಿಯನ್ನೇ.
ಸಂಜೆ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಬಾರಿಯ ಕಲಾಧ್ಯಾನ್ ಪುರಸ್ಕಾರ ಪಡೆದು ಸನ್ಮಾನಿತರಾದವರು ಹಿರಿಯ ಕಲಾವಿದ, ಕೆನ್ ಕಲಾಶಾಲೆಯ ನಿವೃತ್ತ ಪ್ರಾಚಾರ್ಯ ಜೆ.ಎಂ.ಎಸ್.ಮಣಿ ಮತ್ತು ಇನ್ನೊಬ್ಬ ಸೃಜನಶೀಲ ಕಲಾಕಾರ ಕೆ.ಕೆ.ಮಕಾಳಿ. ಈ ಸಂದರ್ಭ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದ ಡಾ.ವಿಜಯಾ, ಮೌನದಲ್ಲಿ ಏಕಾಂಗಿಗಳಾಗಿ ಬದುಕುವ ಕಲಾವಿದರು ಈ ಒಂದು ದಿನವಾದರೂ ಹೊರ ಜಗತ್ತಿಗೆ ತೆರೆದುಕೊಂಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ನಾಟಕಕಾರ ಕೆ.ವೈ.ನಾರಾಯಣ ಸ್ವಾಮಿ, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಜತೆಗಿದ್ದರು.
-ಪ್ರಿಯಾ ಕೆರ್ವಾಶೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


