ಆಚಾರ್ ವಿಚಾರ

ಇತ್ತೀಚೆಗೆ ಕಲಾಲೋಕ ಇಬ್ಬರು ಗುರುಗಳನ್ನು ಕಳೆದುಕೊಂಡಿದೆ. ಎನ್. ಮರಿಶಾಮಾಚಾರ್ ಮತ್ತು ಡಾ.ಅ.ಲ. ನರಸಿಂಹಾಚಾರ್. ಕ್ರಿಕೆಟ್ಟಿನಲ್ಲಿ ಇಬ್ಬರು ಓಪನರ್ಗಳೂ ಒಮ್ಮೆಲೆ ನಿವೃತ್ತರಾದಂತೆ! ಈಗೊಂದು ಪ್ರಶ್ನೆ ಹುಟ್ಟಿದೆ ಇವರಿಬ್ಬರೂ ಇಲ್ಲಿಯವರೆಗೂ ಮಾಡಿರುವ ಕಲಾಕೈಂಕರ್ಯವನ್ನೇ ದಾಖಲಿಸುವವರಾರು ಎಂಬುದು...
ಎರಡು ದಿನಗಳ ವ್ಯತ್ಯಾಸದಲ್ಲಿ ತೀರಿಕೊಂಡ ಎನ್. ಮರಿಶಾಮಾಚಾರ್ (3ನೇ ಏಪ್ರಿಲ್ ಮತ್ತು ಡಾ. ಅ.ಲ.ನರಸಿಂಹನ್ (5ನೇ ಏಪ್ರಿಲ್, 2013) ಇವರಿಬ್ಬರೂ ಕೆನ್ ಕಲಾಶಾಲೆಯಲ್ಲಿ ಒಟ್ಟಿಗೆ ಓದಿದವರು. ಆರ್.ಎಂ. ಹಡಪದ್ ಅವರ ಶಿಷ್ಯರು. ತದನಂತರ ವಿಭಿನ್ನ ಹಾದಿಗಳನ್ನು ತುಳಿದರೂ, ಅನೇಕ ಇತರೆ ದೃಶ್ಯಕಲಾ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಮುಖ್ಯವಾಗಿ ಇಬ್ಬರೂ ಕನ್ನಡದ ಕಲಾಸಾಹಿತಿಗಳಾಗಿಯೇ ಜನಪ್ರಿಯರಾದವರು. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ತಾರ್ಕಿಕತೆಗಿಂತಲೂ ಇಂದಿಗೂ ಜನಪ್ರಿಯದ್ದೇ ಮಾನದಂಡ. ಈ ಮಾತಿಗೆ ಶೈಕ್ಷಣಿಕ ಕ್ಷೇತ್ರವೂ ಹೊರತಲ್ಲ. ಹಾಗಿದ್ದರೂ ಪರಸ್ಪರರ ಸ್ನೇಹವನ್ನು ಹಾಗೆಯೇ ಉಳಿಸಿಕೊಂಡಿದ್ದರು ಸಹ. ಜೊತೆಯಾಗಿ ಮರಿ ಮತ್ತು ಅಲನ ಅವರು ಅನೇಕ ಬೃಹತ್ ಕಲಾಹೊತ್ತಗೆಗಳನ್ನು ಸಂಪಾದಿಸಿದ್ದಿದೆ. ಬೃಹತ್ ಹೊತ್ತಗೆಗಳಾದ 'ಚಿತ್ರಕಲಾ ಪ್ರಪಂಚ', 'ಶಿಲ್ಪಪ್ರಪಂಚ', 'ಕಲಾಕೋಶ' ಇತ್ಯಾದಿಗಳೇ ಅದಕ್ಕೆ ಸಾಕ್ಷಿ.
ಮರಿಯವರು ಕೆ.ಕೆ. ಹೆಬ್ಬಾರ್ ಮತ್ತು ಕೆ.ಜಿ. ಸುಬ್ರಹ್ಮಣ್ಯನ್ರ ಬಳಿ ಮತ್ತು ಬರೋಡದ ಕಲಾಶಾಲೆಯಲ್ಲಿ ಶಿಷ್ಯವೃತ್ತಿ ಕೈಗೊಂಡು ಬೆಂಗಳೂರಿಗೆ ಹಿಂದಿರುಗಿದರೆ, ಅ.ಲ.ನ ಅವರು ಬೆಂಗಳೂರಿನಲ್ಲಿ ನೆಲೆಸಿ ಇತಿಹಾಸ ಮತ್ತು ಗೆಜೆಟಿಯರ್ ಕೆಲಸದ ಮೇಲೆ ಬೆಂಗಳೂರಿನಿಂದ ಹೊರಗೆಲ್ಲಾ ಸುತ್ತಾಡುವ ವೃತ್ತಿಯನ್ನು ಕೈಗೊಂಡಿದ್ದರು. ಇಷ್ಟಾದರೂ ಇಬ್ಬರೂ ಭಾರತದ ಗಡಿಯೊಳಗಿನ ಕಲೆಯ ಬಗ್ಗೆಯೇ ಅಧಿಕಾರಯುತವಾಗಿ ಬರೆದರು ಮತ್ತು ದೇಶದ ಗಡಿಯನ್ನು ಕೊನೆಗೂ ಭೌತಿಕವಾಗಿ ಅಥವಾ ಅನುಭವಾತ್ಮಕವಾಗಿ ದಾಟದೇ ಹೋದರು. ಬದಲಿಗೆ ಕೋಶ ಓದುವುದರಲ್ಲಿ ಮತ್ತು ದೃಶ್ಯಸಾಹಿತ್ಯವನ್ನು ಸೃಷ್ಟಿಸುವಲ್ಲಿ ನಿರತರಾದರು. ಕಳೆದ ನಾಲ್ಕು ದಶಕಗಳಿಂದ ದೃಶ್ಯಕಲೆಯನ್ನು ಕುರಿತಾದ ಕರ್ನಾಟಕದ ಸರ್ಕಾರದ ನಿಲುವನ್ನು ಹೆಚ್ಚೂಕಡಿಮೇ ಏಕಾಂಗಿಯಾಗಿ ನಿರ್ಧರಿಸಿದವರೂ ಇವರಿಬ್ಬರೇ! ಕ್ಲೀಷೆಯೊಂದನ್ನು ಬಳಸಿ ಹೇಳಬಹುದಾದರೆ ಸ್ವಾತಂತ್ರ್ಯೋತ್ತರ ಕರ್ನಾಟಕ ಸರ್ಕಾರದ ದೃಶ್ಯಕಲಾ ಗ್ರಹಿಕೆಯ ನಿಯಮಾವಳಿಗಳ ಸಾಧಕಬಾಧಕಗಳಿಗೆ ಹೆಚ್ಚೂಕಡಿಮೆ ಇವರಿಬ್ಬರೇ ಹೊಣೆ.
-----
ಲಲಿತಕಲೆ, ಶಿಲ್ಪಕಲೆ ಮುಂತಾದ ವಿವಿಧ ಸಾಂಸ್ಕೃತಿಕ ಅಕಾಡೆಮಿಗಳಲ್ಲಿ ಗುರುತರ ಜವಾಬ್ದಾರಿಯ ಕೆಲಸ ಮಾಡಿದರೂ ಮರಿಯಾಗಿಯೇ ಕರ್ನಾಟಕದಾದ್ಯಂತ ಗುರುತಿಸಿಕೊಂಡಿದ್ದವರು ಮರಿ. ಸಮಗ್ರ ರಾಜ್ಯದಾದ್ಯಂತದ ದೃಶ್ಯಕಲಾವಿದರಿಗೆ ಆಡಳಿತಾತ್ಮಕ ವಿಷಯಗಳೇನೇ ಇದ್ದರೂ ಅವರೆಲ್ಲಾ ಸಂಪರ್ಕಿಸುತ್ತಿದ್ದುದು ಇವರನ್ನು. ಮತ್ತು ಅವರ ಎಲ್ಲ ಸಮಸ್ಯೆಗಳಿಗೂ ಇವರ ಬಳಿ, ಇವರದ್ದೇ ಆದ ಪರಿಹಾರವೂ ದೊರಕುತ್ತಿತ್ತು. ಆದ್ದರಿಂದ ಮರಿಶಾಮಾಚಾರರು ಯಾವ್ಯಾವ ಅಕಾಡೆಮಿಗಳಲ್ಲಿ ಯಾವ್ಯಾವ ಹುದ್ದೆಯಲ್ಲಿದ್ದರು ಎಂದು ಯಾರನ್ನೂ ಕೇಳಿದರೂ ದೊರಕುವುದು ಒಂದೇ ಉತ್ತರ, ಅವರು ಜೀವನ ಪರ್ಯಂತ 'ಮರಿ' ಎಂಬ ಹುದ್ದೆಯನ್ನು ರಿಜಿಸ್ಟ್ರಾರ್ ಆಗಿ, ಪ್ರದರ್ಶನಾಧಿಕಾರಿಯಾಗಿ ವಹಿಸಿದ್ದರು ಎಂದು! ಜತೆಗೆ ಅವರು ಚಿತ್ರಕಾರ, ಶಿಲ್ಪಿ, ಛಾಯಾಚಿತ್ರಗ್ರಾಹಕ, ಕಲಾಬರಹಗಾರರಾಗಿಯೂ ಸಾಧ್ಯಂತವಾಗಿ 'ಮರಿ'ಯ ಪಾತ್ರವಹಿಸಿದ್ದರು.
ದೃಶ್ಯಕಲೆಯಲ್ಲಿ ನಿರ್ದಿಷ್ಟ ನವನವೀನ ಕ್ಷೇತ್ರವ್ಯಾಪ್ತಿಯನ್ನು ಅವರ ಗುರುಗಳು ರೂಪಿಸಿದಂತೆ ಇವರೂ ರೂಪಿಸದೇ ಸ್ವತಃ ಒಂದು ಕ್ಷೇತ್ರವಾಗಲು ಹೊರಟಿದ್ದು ಒಂದು ಸಾಧನೆಯೂ ಹೌದು, ಸರ್ಕಾರಿ ಅಧಿಕಾರಿ- ಕಲಾವಿದರಾಗಿ ಸ್ವತಃ ತಮಗೆ ತಾವೇ ಹಾಕಿಕೊಂಡ ಇತಿಮಿತಿಯೂ ಹೌದು. ತದ್ವಿರುದ್ಧವಾಗಿ ಅಲನ ಅವರು ಕೆನ್ ಕಲಾಶಾಲೆಯಿಂದ ಪ್ರಕಟವಾಗುತ್ತಿದ್ದ 'ಕಲಾವಿಕಾಸ'ದಂಥ ಸಣ್ಣ ಪತ್ರಿಕೆಯ ಸಂಪಾದಕತ್ವವನ್ನೂ ಹಲವು ವರ್ಷವಹಿಸಿಕೊಂಡಿದ್ದರು. 1970ರ ದಶಕದಿಂದ ಕನ್ನಡದಲ್ಲಿ ಕಲೆಯನ್ನು ಕುರಿತ ಸಣ್ಣಪುಟ್ಟ ಪತ್ರಿಕಾ ಬರವಣಿಗೆಯ ಸಂಗ್ರಹವನ್ನೂ ಅಲನ ನಿರ್ವಹಿಸಿದ್ದರು. ಅವರ ಮನೆಯ ಅಡುಗಮನೆ, ಬಚ್ಚಲು ಮನೆಯಲ್ಲೂ ಕಲಾಪುಸ್ತಕಗಳ,ಪುಸ್ತಕಗಳ ಸಂಗ್ರಹ ರಾಶಿ ಇರುತ್ತಿತ್ತು, ಈಗಲೂ ಹಾಗೆಯೇ ಇದೆ. 'ನಾನು ತೀರಿಕೊಂಡ ಮೇಲೆ ಅದನ್ನು ಏನಾದರೂ ಮಾಡಿಕೋ ಎಂದು ಮಗನಿಗೆ ಹೇಳಿದ್ದೇನೆ, ಅಥವಾ ನಿಮ್ಮ ಚಿತ್ರಕಲಾ ಪರಿಷತ್ತಿನ ಗ್ರಂಥಾಲಯಕ್ಕೆ ಬಿಟ್ಟಿಯಾಗಿ ತೆಗೆದುಕೊಳ್ಳಿ. ಇಲ್ಲದಿದ್ದರೆ ನನ್ನ ಮಗ ಅದನ್ನು ರದ್ದಿಗೆ ಹಾಕುವುದಾಗಿ ಬೆದರಿಸಿದ್ದಾನೆ' ಎಂದಿದ್ದರು. 'ಹಾಗಿದ್ದರೆ ನಾವು ಚಿಂದಿ ಆಯುವವರ ವೇಷದಲ್ಲಿ ನಿಮ್ಮ ಮನೆಗೆ ಬರ್ತೇವೆ' ಎಂದಿದ್ದೆ. ಅಲನ ಕೇವಲ ಕಲಾಸಾಹಿತ್ಯವನ್ನು ಸಂಗ್ರಹಿಸಿರಲಿಲ್ಲ, ಬದಲಿಗೆ ಸಂಗ್ರಹಕಾರ್ಯದ ಹಳೆಯ ಸಂಪ್ರದಾಯವೊಂದಕ್ಕೆ ಹೊಸ ರೂಪ ನೀಡುವ ಯತ್ನದಲ್ಲಿದ್ದರು. ಅವರ ವಸತಿ ಒಂದು ವಿಕ್ಷಿಪ್ತ ಕಲಾಪುಸ್ತಕ-ಮನೆಯಾಗಿತ್ತು.
ಮರಿಯವರ ಪುಸ್ತಕಗಳನ್ನು ವಿವಿಯವರು ಅನೌಪಚಾರಿಕ ಪಠ್ಯಪುಸ್ತಕಗಳನ್ನಾಗಿ ಪರಿಗಣಿಸುವ ಅನಿವಾರ್ಯವೂ ಉಂಟಾದುದಿದೆ. ಸ್ವತಃ ಮರಿಯವರ ಬಗ್ಗೆ ಹಂಪಿ ವಿವಿಯ ವಿದ್ಯಾರ್ಥಿನಿಯೊಬ್ಬರು ಎಂ.ಫಿಲ್. ಸಂಶೋಧನೆಯನ್ನೂ ನಡೆಸಿದ್ದು, ಅವರ ತಲೆಮಾರಿನಲ್ಲಿ ಅಂಥ ಮನ್ನಣೆಗೆ ಪಾತ್ರರಾದ ಮೊದಲಿಗರು ಅವರು. ಸಂಯೋಜಿತ ಕಲಾತಂಡವನ್ನು ಕಟ್ಟಿ ಮೂರ್ನಾಲ್ಕು ದಶಕಗಳಿಂದ ಅದರ ಮೂಲಕ ಏಕವ್ಯಕ್ತಿ ಪ್ರದರ್ಶನದಂತೆ ತಮ್ಮದೇ ಶೈಲಿಯಲ್ಲಿ ಚಟುವಟಿಕೆಗಳನ್ನು ನಡೆಸಿದ್ದಿದೆ. ಪದವಿ, ಪಕ್ಷ, ಸಂಘಟನೆ ಇವೆಲ್ಲಕ್ಕೂ ತಮ್ಮನ್ನೇ ಪರ್ಯಾಯವನ್ನಾಗಿಸಿಕೊಂಡದ್ದು, ಮರಿಯವರು ಉದ್ದೇಶಪೂರ್ವಕವಾಗಿ ರೂಪಿಸಿಕೊಂಡ ಜೀವನಶೈಲಿ. ಕಲಾಸಂಸ್ಥೆಗಳು ತಮ್ಮನ್ನು ಕಟ್ಟಿಬೆಳೆಸಿದವರ ಕಾಲಾನಂತರ ಅನಾಥವಾಗಿಬಿಡುವುದು ಸ್ವಾತಂತ್ರ್ಯೋತ್ತರ ಕರ್ನಾಟಕದ ಕಲಾಶಾಲೆಗಳ ಇತಿಹಾಸ. ಈ ಹಿನ್ನೆಲೆಯನ್ನು ಅರಿತಂತೆ ಮರಿಶಾಮಾಚಾರರು ಭೌತಿಕವಾದ ಸಂಘಟನೆಗೆ ಪರ್ಯಾಯವಾಗಿ ಬೆಳೆಸಿದ್ದೇ ಸಂಯೋಜಿತವೆಂಬ ಪರಿಕಲ್ಪನೆ ಮತ್ತು ಸಿಎನ್ಎನ್ ಪ್ರಕಾಶನವನ್ನು. ಅಲನ ಸಹ ಅದರ ಭಾಗವಾಗಿದ್ದರು. ಇಬ್ಬರೂ ಶೈಕ್ಷಣಿಕ ಸಾಂಸ್ಥೀಕರಣದಿಂದ ದೂರವಿದ್ದದ್ದು ಉದ್ದೇಶಪೂರ್ವಕ.
ಒಂದೆರಡು ತಿಂಗಳ ಹಿಂದೆ ಕನ್ನಡದಲ್ಲಿ ನಭೂತೋ ಎಂಬಷ್ಟು ವೆಚ್ಚದ, ಮುನ್ನೂರು ವರ್ಣಪುಟಗಳ ಏಕಕಲಾವಿದರ ಪುಸ್ತಕವನ್ನು (ಎಸ್.ಜಿ. ವಾಸುದೇವ್ ಕುರಿತದ್ದು) ಸಂಪಾದಿಸಿ, ಅನಂತಮೂರ್ತಿ, ಕಾರ್ನಾಡರಂಥವರ ಕೈಯಲ್ಲಿಯೂ ಬರೆಸಿ ಬಿಡುಗಡೆ ಮಾಡಿದ್ದರು ಮರಿ. ಅಕಾಡೆಮಿ, ಯುನಿವರ್ಸಿಟಿಗಳಿರಲಿ, ಕಲಾವಿದರ ಶತಮಾನೋತ್ಸವ ಆಚರಿಸಿದಾಗಲೂ ಅವರ ಬಗ್ಗೆ ಸರ್ಕಾರಕ್ಕೂ ಇಂಥ ಒಂದು ಪುಸ್ತಕವನ್ನು ಇಲ್ಲಿಯವರೆಗೂ ಹೊರತರಲಾಗಿಲ್ಲವೆಂದರೆ, ಮರಿಯವರ ಸಂಘಟನಾ ಸಾಹಸದ ಒಂದು ಅಂದಾಜು ಸಿಕ್ಕೀತು. ತದ್ವಿರುದ್ಧವಾಗಿ ಅಲನರ ಬರಹ ಅಪರೂಪ ಹಾಗೂ ಸಂಶೋಧನಾತ್ಮಕವಾಗಿರುತ್ತಿತ್ತು. ಓದಿನಷ್ಟು ಸುಲಭವಾಗಿ ಬರೆಯಲಾಗದ ಬಗ್ಗೆ ಪಾಪಪ್ರಜ್ಞೆ ಇಲ್ಲದ ಅಭಿಮಾನವೂ ಅವರಲ್ಲಿದ್ದಿತು (ಕೀರಂ, ಕೈಲಾಸಂ ಮಾದರಿಯಲ್ಲಿ). 'ಅಲೇಖ್ಯ' ಅಲನರ ಒಂದು ಗುರುತರವಾದ ಕೃತಿ. 'ಗುರುಗಳ ತರಹ ಬರೆದಿದ್ದೀರಿ ಅದನ್ನು' ಎಂದು ಆ ಪುಸ್ತಕವನ್ನು ಕುರಿತು ಸಾಹಿತಿ- ಗೆಳೆಯರು ಅವರನ್ನು ತಮಾಷೆ ಮಾಡುತ್ತಿದ್ದರು.
ಮರಿಯವರಿಗೂ ಅಲನರಿಗೂ ಇರುವ ವ್ಯತ್ಯಾಸ ಇದೇ. ಒಬ್ಬರು ಗುಣಾತ್ಮಕತೆಯ ಬದಲು ನಿಯಮಿತ ಕಲಾಪುಸ್ತಕ ಪ್ರಕಟಣೆಯತ್ತ ಮುಖ ಮಾಡಿದ್ದರೆ, ಮತ್ತೊಬ್ಬರು ಪ್ರಕಟಿತವಾದುದನ್ನು ಸಂಗ್ರಹಿಸುವ ನೆಲೆಯಲ್ಲಿ ಕಾರ್ಯನಿರತರಾಗಿದ್ದರು. ಹೆಚ್ಚೂಕಡಿಮೆ ಒಂದೇ ವಯಸ್ಸಿನ ಇವರಿಬ್ಬರೂ ಸಾಂಸ್ಥೀಕರಣ, ಅಂದರೆ ಕಲೆಗೆ ಸಂಬಂಧಿಸಿದ ಸಂಸ್ಥೆಗಳು, ವಿವಿಗಳು ಯಾವುದನ್ನು ಮಾಡಬೇಕಿತ್ತೋ, ಆದರೆ ಮಾಡುತ್ತಿಲ್ಲವೋ, ಅವುಗಳನ್ನೇ ಪಟ್ಟಿಮಾಡಿ, ಅದರ ತುರ್ತನ್ನು ಪೂರೈಸುತ್ತಿದ್ದರು. ಇದು ಅವರಿಬ್ಬರಿಗೂ ಅವರ ಗುರುಗಳಾದ ಹಡಪದರದ್ದೇ ಆದ ನಿರ್ದಿಷ್ಟ ಕೊಡುಗೆ.
ಇಂಗ್ಲಿಷ್ ಬಾರದ ಕೀಳರಿಮೆಯನ್ನೂ ಇವರು ಇತ್ಯಾತ್ಮಕವಾಗಿ ದುಡಿಸಿಕೊಂಡಿದ್ದರು. ಆದ್ದರಿಂದಲೇ ಇವರಿಬ್ಬರ ಬರಹಗಳು ಅನ್ಯದಿಂದ ಕನ್ನಡಕ್ಕೆ ಬಂದವೇ ಹೊರತು ಇಲ್ಲಿಂದ ಅಲ್ಲಿಗೆ ಹೋಗಲಿಲ್ಲ. ಇವರಿಬ್ಬರೂ ಕಾರ್ಯನಿರತರಾಗಿದ್ದ ಕಾಲಘಟ್ಟದಲ್ಲಿ ಕರ್ನಾಟಕದ ದೃಶ್ಯಕಲೆಯಲ್ಲಿ ಒಬ್ಬ ಹೆಬ್ಬಾರ್, ಕೆ.ಜಿ. ಸುಬ್ರಹ್ಮಣ್ಯನ್, ರಾಜ್ಕುಮಾರ್, ಶಂಕರನಾಗ್, ಬಂಡಾಯ ಚಳವಳಿ, ಜಾತಿ ಸಂವಾದ, ಬೂಸಾ ಚಳುವಳಿಯ ವಾಗ್ವಾದ, ಗೋಕಾಕ್ ಚಳವಳಿಯ ಪ್ರಭಾವಳಿ, ಕಾಸರವಳ್ಳಿ, ಜ್ಞಾನಪೀಠಗಳು, ಹಂಪಿ ಕನ್ನಡ ವಿವಿಗಳೆಲ್ಲವೂ ಆಗುತ್ತಿದ್ದರೂ, ಅವುಗಳಿಗೆ ಸ್ಪಂದಿಸಿದ ಇವರಿಬ್ಬರ ಪ್ರತಿಕ್ರಿಯೆಗಳು ಏಕಪ್ರಕಾರವಾಗಿರುತ್ತಿದ್ದವು; ಭೌತಿಕ ಅವಕಾಶಗಳನ್ನು ಕಲಾವಿದರು, ಕಲಾಸಾಹಿತಿಗಳಿಗೆ ಮರಿ ನೀಡುತ್ತಿದ್ದರೆ, ಅಂಥವರ ಭೌತಿಕ ಬೆಳವಣಿಗೆಗಳನ್ನು ತೀಕ್ಷ್ಣವಾಗಿ ಅಲನ ನಿರುಕಿಸುತ್ತಿದ್ದರು. ಇವರಿಬ್ಬರೂ 'ದೃಶ್ಯಕಲೆ ಎಂಬುದು ಒಂದು ಪವಿತ್ರ ಕ್ಷೇತ್ರವಾಗಿದ್ದು, ಅವುಗಳಿಗೆ ಅಂತರ್ ಶಿಸ್ತೀಯತೆ ಅಪಾಯಕಾರಿ' ಎಂಬರ್ಥದ 'ಕಲೆಗಾಗಿ ಕಲೆ' ಎಂಬ ನಂಬಿಕೆಯನ್ನು ಆಳವಾಗಿ ಅಪ್ಪಿಕೊಂಡಿದ್ದರು. ಇತರೆ ರಂಗದವರೊಡನೆ ಅತಿಯಾಗಿ ಬೆರೆತವರೂ ಇವರಿಬ್ಬರೇ (ಮರಿ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿದ್ದರೆ ಅಲನ ಇತಿಹಾಸ, ಪ್ರಾಗೈತಿಹಾಸ, ಗೆಜೆಟಿಯರ್ ಮುಂತಾದ ರಂಗಗಳ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು). ಅರ್ಥಾತ್, ಇವರಿಬ್ಬರ ಬರವಣಿಗೆಯಲ್ಲಿ ಸೌಂದರ್ಯಶಾಸ್ತ್ರೀಯ ನೆಲೆಯೇ ದೃಶ್ಯಕಲೆಗೆ ಪ್ರಶಸ್ತ ಎಂಬ ತತ್ವವನ್ನು ಸಾರಿ ಸಾರಿ ಹೇಳಿದ್ದಾರೆ. ಇವರ ನಿಲುವುಗಳನ್ನು ಚರ್ಚಿಸುವ ಬದಲು, ಅವುಗಳ ಆಳ ಅರಿವುಗಳನ್ನಷ್ಟೇ ನಾವೀಗ ಶೋಧಿಸಬೇಕಿರುವುದು. ದೃಶ್ಯಕಲೆಯ ಸ್ವಾಯತ್ತತೆಯ ಸಾಧ್ಯತೆಗಳ ಕಡೆಗೆ ಇರುತ್ತಿತ್ತು ಇವರ ಕಲಾಚಟುವಟಿಕೆಗಳು (ಚಿತ್ರರಚನೆ, ಛಾಯಾಗ್ರಹಣ, ಸಾಹಿತ್ಯ ಸೃಷ್ಟಿ, ಖ್ಯಾತ ಕಲಾವಿದರ, ಹೊತ್ತಗೆಗಳ ಸಂಗ್ರಹ, ಸಾಂಸ್ಕೃತಿಕ ಸಂಪಾದನೆ ಸಾಮಾನ್ಯ ಅಂಶಗಳು).
ಇಂದು ಇವರಿಬ್ಬರೂ ಅಕಾಲಿಕ ಮರಣವನ್ನಪ್ಪಿದ್ದಾರೆ, ಕ್ರಿಕೆಟ್ಟಿನಲ್ಲಿ ಇಬ್ಬರು ಓಪನರ್ಗಳೂ ಒಮ್ಮೆಲೆ ನಿವೃತ್ತರಾದಂತೆ! ಕನ್ನಡಿಗರಿಗೆ ಕಲಾಗ್ರಾಮ, ದೃಶ್ಯಕಲೆಗೇ ಒಂದು ಸ್ವಾಯತ್ತ ವಿಶ್ವವಿದ್ಯಾಲಯ ಮುಂತಾದ ಯೋಜನೆಗಳು ಈಗಷ್ಟೇ ಆರಂಭಗೊಳ್ಳುವ ಹೊತ್ತಿಗೆ, ಸಾಧಾರಣವಾಗಿ ಒಟ್ಟಿಗಿರಲೊಲ್ಲದ ಕಲಾವಿದರನ್ನೆಲ್ಲ ಒಂದರ್ಥದಲ್ಲಿ, ಆದರೆ ಎರಡು ವಿಧದಲ್ಲಿ ಒಂದೆಡೆ ಅರ್ಥಪೂರ್ಣವಾಗಿ ಸೇರಿಸುವ ಛಾತಿಯುಳ್ಳ ಕೆಲವೇ ಸಾಮೂಹಿಕ ಪ್ರಜ್ಞೆಯ ಕಲಾವಿದರಲ್ಲಿ ಇಬ್ಬರು ಇಲ್ಲವಾಗಿದ್ದಾರೆ. ಇದು ಒಟ್ಟಿಗೆ ತಂದೊಡ್ಡಿರುವ ಸಮಸ್ಯೆಗಳು ಎರಡು; ಇವರಿಬ್ಬರೂ ತಮ್ಮದೇ ನಿರ್ದಿಷ್ಟ ಶೈಲಿಯಲ್ಲಿ ನಿರ್ವಹಿಸುತ್ತಿದ್ದ ಕಲಾಕಾಯಕವನ್ನು ಮುಂದುವರಿಸುವವರು ಯಾರು? ಮತ್ತು ಇವರಿಬ್ಬರೂ ಇಲ್ಲಿಯವರೆಗೂ ಮಾಡಿರುವ ಕಲಾಕೈಂಕರ್ಯವನ್ನೇ ದಾಖಲಿಸುವವರಾರು? ಮತ್ತೆ ಹಾಗೆ ಮಾಡುವಾಗ, ಇವರಿಬ್ಬರೂ ಹಾಕಿಕೊಟ್ಟಿರುವ ಮಾದರಿಗಳನ್ನು ಮೀರುವುದೆಂತು?
'ನಡೆದಾಡುವ ಕಲಾಕೋಶ' ಎಂಬ ಅಭಿನಂದನ ಗ್ರಂಥವನ್ನು ಮರಿಯವರ ಬಗ್ಗೆ ಈಗಾಗಲೇ ಪ್ರಕಟಿಸಿದ್ದಾಗಿದೆ. ಅಲನರ ಬಗ್ಗೆ ಓ. ವೆಂಕಟೇಶ್ ಇಂಥದ್ದೇ ಪುಸ್ತಕವನ್ನು ತರಬೇಕು ಎಂದಾಗ, ಅದರ ಸಂಪಾದಕ ಗೆಳೆಯ ಕಲಾ ಇತಿಹಾಸಕಾರ ಆರ್.ಎಚ್. ಕುಲಕರ್ಣಿ ತಮಾಷೆ ಮಾಡಿದ್ದು ಹೀಗೆ, 'ಎಲ್ಲರ ಕೈಲೂ ಅಲನರ ಬಗ್ಗೆ ಬರೆಸುವಷ್ಟರಲ್ಲಿ ಅಭಿನಂದನ ಗ್ರಂಥವು ಸ್ಮರಣ ಸಂಚಿಕೆಯಾದೀತು'. ಹಾಸ್ಯ ಸಾವಿನಲ್ಲಿ ಸತ್ಯವನ್ನು ಕಂಡುಕೊಳ್ಳುವುದಕ್ಕೆ ದೃಶ್ಯಕಲಾ ರಂಗದ ನಡಾವಳಿಯೇ ಕಾರಣವಿರಬಹುದು, ಅದೂ ಮರಿ ಮತ್ತು ಅಲನ ಅವರಿಬ್ಬರೂ ಬಿಟ್ಟುಹೋದ ಮಾದರಿಯ ನಡಾವಳಿಯೇ ಇದಕ್ಕೆ ಕಾರಣವಾಗಿರಬಹುದು.
= ಎಚ್.ಎ. ಅನಿಲ್ ಕುಮಾರ್
haanilkumar@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


