ಸಾಪ್ತಾಹಿಕಪ್ರಭ

ಮದಿವಿ

Published On :

ಶಿವಾಪೂರದಾಗ ಶೀನಿಂಗವ್ವ ಸಂಜಿ ಐದರ ಬಸ್ಸ ಇಳಿದಾಗ ಜಿಬರ ಜಿಬರ ಮಳೆ ಹನಿಯುತ್ತಿತ್ತು, ಮೋಡ ಕವಿದುಕೊಂಡು ಬೆಳಕು ಕಳೆಗುಂದಿತ್ತು. ಗೆಳತಿ ಊರು ಇನ್ನು ಹಾಂಗೆ ಐತೆಲ್ಲಾ ಶಿವನ ಎನೊಂದು ಬದಲ ಆಗಿಲ್ಲ ಅಂತ ಅಂದುಕೊಂಡಳು ಶೀನಿಂಗವ್ವ. ಮೂರ ವರ್ಷದ ಹಿಂದ ಒಮ್ಮಿ ಈ ಊರಿಗಿ ಬಂದಿದ್ದಳು ಅಷ್ಟ. ಕುರುಬರ ದಡ್ಡಿಗೋಳ, ಪಿಂಜಾರ ಸಾಬನ  ಗುಡಿಸಲಾ, ದುರಗವ್ವನ ಗುಡಿ ಮುಂದಿನ ಬಿದ್ದ ಕಟ್ಟಿ, ಕ್ಷತ್ರಿಯರ ಆಡಿನ ಮನಿಗೊಳು, ಊರಮುಂದಿನ ಗೌಡರ ಬೀಳ ಬಿದ್ದ ಹೊಲಾ, ಹದೆಗೆಟ್ಟ ರಸ್ತಾಗೊಳು, ಅದರಲ್ಲಿ ಒರತಿ ತೋಡಿದಂಗ ಹೊಂಡಗಳು, ನಿಂತ ಮಳೆನೀರಲ್ಲಿ ಆಟಾ ಆಡುವ ಓಣಿಯ ಹುಡಗರು, ಎತ್ತು, ಎಮ್ಮೆ, ರಾಡಿ. ಎಲ್ಲವು ಮೊದಲಿನ ಹಾಂಗ ಇತ್ತು. ಯಾವದು ಬದಲಿಲ್ಲ. ಶೀನಿಂಗವ್ವದು ವಾರದ ಹಿಂದಷ್ಟ ಮದಿವಿ ಆಗಿತ್ತು. ಇಲ್ಲಿ ಅಕೀಗಿ ಗೆಳತಿ ಅಂದ್ರ ಸಂಗೀತಾ ಒಬ್ಬಾಕಿನ. ತನ್ನ ಮದಿವಿ ಹಂದ್ರಾ ಹಾಕಿ ಸಡಗರದಿಂದ ಆಗಲಿಲ್ಲ ಅನ್ನುವ ಖೇದ ಅವಳಲಿತ್ತು, ಕೊನಿ ಪಕ್ಷ ಗೆಳತಿ ಸಂಗೀತಾಳ ಮದಿವಿಲಾದ್ರು ಈ ಸಂಭ್ರಮ ಅನುಭವಿಸಬೇಕು ಅಂತಾ ಒಂದ ದಿನಾ ಮುಂದಿರತ ಬಂದಿದ್ಳು.  ಸಂಗೀತಾ ಮದುವೆಲಿ ಸಂಭ್ರಮದಿಂದ ಓಡಾಡುತ್ತಿರಬಹುದು, ಕೈಗಿ ಮೆಂದಿ ಹಚ್ಚಕೊಳಾತಾಳೊ ಎನೋ. ಮನೇ ತುಂಬ ಜನಸಂದನಿ, ಜಗಳ ಮಾಡುವ ಮಕ್ಕಳು, ಮನೆ ಮುಂದೆ ಹಂದರ, ವಾಲಗದವರು ಎಲ್ಲ ಕೂಡಿರತಾರ. ಸಂಗೀತಾ ತನ್ನ ಬಾವಿ ಗಂಡನ ನೆನೆಸಿಗೊಂತ ಒಳಗೊಳಗ ಖುಷಿಯಿಂದಲೆ ಕೆಲಸ ಮಾಡುತ್ತಿರಬಹುದು. ಹಿಂಗ ಮನಸ್ಸಿಗಿ ದೇನಿಸಿದನ್ನ ಊಹಿಸಿಕೊಳ್ಳುತ ಶೀನಿಂಗವ್ವ ಲಗ್ಗ ಲಗ್ಗ ಹೆಜ್ಜೆಹಾಕಿದಳು. ಸ್ವಲ್ಪ ದೂರ ಹೋದ ಮೇಲೆ ಹಲಗೆ ಬಾರಿಸುವ ಸಪ್ಪಳ ಕೇಳಿ ಬಂತು. ಯಾರೋ ಸತ್ತಿರಬಹುದು. ಸದ್ಯ ಮದುವೆಯ ದಿನ ಸಾಯಲಿಲ್ಲವಲ್ಲ. ಇಲ್ಲದಿದ್ದರೆ ಎಲ್ಲ ಅಮಂಗಳ ಅಪಶಕುನವಾಗತಿತ್ತ. ಯಾರಾದರು ಎದುರಿಗೆ ಬಂದರೆ ಕೇಳಬೇಕೆಂದುಕೊಂಡ ಹಿಂಗ ಮುಂದೆ ದಾಟಿ ಗೌಡರ ಮನೆ ಪಕ್ಕ ತಿರಿಗಿದರೆ ದೂರದಲ್ಲಿಯೆ ಸಂಗೀತಾಳ ಮನಿ ಕಾಣಿಸಿತು. ಅರೇ... ಸಂಗೀತಾಗೊಳ ಮನಿ ಮುಂದ ಮಂದಿ ಸೇರಿದಾರ. ಅವ್ವಾ... ಇದೇನಾತ... ಯಾರಿಗಿ... ಅಂತ ಆತಂಕವನ್ನು ಎದಿ ತುಂಬ ತುಂಬಿಕೊಂಡು ಓಡುವ ಧಾಟಿಯೊಳಗ ಕಾಲಕಿತ್ತಳು. ಅಂಗಳದಲ್ಲಿ ಹಿರೆಯರು ಇಬ್ಬರು ಕೂಡಿ ಚಟ್ಟ ಬಿಗಿತಿದ್ದರು. ಸಾವು ಸಂಗೀತಾಳ ಮನಿಯೊಳಗ ಬಂದೈತೇನು ಮತ್ತ? ಅಂತ ನೆನಿಸಿಕೊಂಡು ಎದಿ ಹಿಡಿದು ನಿಲ್ಲಿಸಿದಂಗಾತು ಶೀನಿಂಗವ್ವಳಿಗಿ, ಎದಿ ಒಮ್ಮಿ ನಡಿಗಿ ನಿಂತಂಗಾಗಿ. ಕೆಸರು ಮಳೆನೀರು ಅನದೆ ಮನಿಕಡೀಗಿ ಓಟಕ್ಕಿತ್ತಳು. ಸಂಗೀತಾ ಮನಿ ಮುಂದಿನ ಕಟ್ಟಿಮ್ಯಾಲ ಎದಿ ಎದಿ ಬಡಕೊಂತ ಜೋರಾಗಿ ಅಳುತಿದ್ದಳು. ಅವರವ್ವ ಸತ್ತಿದ್ದಳು. ಅದನ ನೋಡಿದ ಕೂಡ್ಲೆ ದುಕ್ಕ ತಡಿಯಕ್ಕಾಗದೆ ಓಡಿ ಹೋಗಿ ಸಂಗೀತಾಳನ ತೆಕ್ಕಿ ಹಾದು ಶೀನಿಂಗವ್ವ ಜೊರದನಿ ಮಾಡಿ ಅಳತೊಡಗಿದಳು. ಸಂಗಿತಾಳಿಗೆ ಇನ್ನು ದುಕ್ಕ ಒತ್ತರಿಸಿ ಬಂದು ಇಬ್ಬರು ಒಟ್ಟಿಗೆ ದುಕ್ಕದ ಕಟ್ಟೊಡೆದಂತೆ ಬಿಕ್ಕಳಿಸಿ ಅಳತೊಡಗಿದರು. ಆಜೂ ಬಾಜೂ ಹೆಣಮಕ್ಕಳು ಇಬ್ಬರನ್ನು ಸಮಾಧಾನ ಮಾಡಿದರು. ಅವರ ದುಕ್ಕ ನಿಲ್ಲಲಿಲ್ಲ. ಆಮ್ಯಾಲ ಒಂದ ತಾಸಿನ ಮ್ಯಾಲ ಸ್ವಲ್ಪ ಸಮಾಧನ ಆದರು. ಅವಳ ವ್ಯವಸ್ಥೆ, ಪರಿಶ್ಥಿತಿ ನೋಡಿ ಕರಳ ಚುರ್ರೆಂದಿತು ಶೀನಿಂಗವ್ವಗ.
ಮಳಿ ಮೊದಲಿಗಿಂತಲು ಹೆಚ್ಚಾಯಿತು. ಇನ್ನು ಹೆಚ್ಚಾಗಬಹುದೆಂದು ಅಂದಾಜಿಸಿ ಹೆಣಾ ಬೇಗನೆ ಎತ್ತಿದರು. ಮಣ್ಣು ಮಾಡಿ ಬರಬೇಕಾದರೆ ಕತ್ತಲಾಯಿತು. ಮರುದಿವಸ...
'ಇದೆಲ್ಲ ಎನ ಸಂಗೀತಾ? ಅವ್ವಗೆ ಜಡ್ಡಂತ ಹೇಳಲಿಲ್ಲ ಹೋಗ್ಲಿ ಜಾಸ್ತಯಿದ್ದರೆ ಬೆಳಗಾವಿಗಾದರು ಕರಕೊಂಡ ಬರಾಂಗಿಲ್ಲೆನು...' ಅತೀ ಕಕ್ಕುಲಾತಿಯಿಂದ ಕೇಳಿದಳು ಶೀನಿಂಗವ್ವ.
'ಅವಳಿಗೆಂತ ಜಡ್ಡ... ನನ್ನ ಮದುವೆ ಸುದ್ದಿ ತಿಳಿದ ಮ್ಯಾಲ ಅಕಿ ಎಲ್ಲ ರೋಗ ಬಿಟ್ಟೊಗಿದ್ದವು. ತಾನೆ ಓಡಾಡಿಕೊಂಡು ಕೆಲಸ ಮಾಡುತ್ತಿದ್ದಳು'
'ಮತ್ತೇ ಇದ್ದಕಿದ್ದಂತೆ ಎನಾಯ್ತು?'
'ನಾನು ಮೊನ್ನೆ ನಿನಗ ನನ್ನ ಲಗ್ನ ಪತ್ರಿಕಿ ಕೊಡಾಕ ಊರಿಂದ ಬಂದ ದಿನಾನ ಆ ಹುಡುಗ ಅಂದರೆ ನನ್ನ ಮದಿವಿ ಆಗುವ ಹುಡುಗ ಓಡಿಹೊದಂತ. ಚೀಟಿ ಬರಿದಿಟ್ಟು ಹೋಗಿದಾನಂತ, ನನಗೆ ಈ ಮದುವೆ ಇಷ್ಟವಿಲ್ಲ ನಾನು ನನ್ನ ಹಾದಿ ನೋಡ್ಕೊಂಡಿದಿನಿ, ನನ್ನ ಹುಡುಕುವ ಪ್ರಯತ್ನ ಮಾಡಬ್ಯಾಡ್ರಿ , ಸಾಯುವುದರೊಳಗೆ ನಿಮ್ಮ ಮನಸ್ಸು ಬದಲಾಗಿದ್ದರೆ ಒಮ್ಮೆ ಬಂದು ಹೊಗುತೇನು, ನನ್ನ ತಪ್ಪ ಕ್ಷಮಿಸಿ ಅಂತ ಬರೆದಿಟ್ಟು ಹೋಗಿದಾನ. ಅವರು ಮೊನ್ನೆ ಮನೆಗೆ ಸುದ್ದಿ ಮುಟ್ಟಿಸಿದ್ದಾರೆ. ಮಗಳ ಬಾಳು ಹೀಂಗಾತಲ್ಲ ಶಿವನ ಅಂತ ಕೊರಗಿ ಕೊರಗಿ ಮನಸ್ಸಿಗೆ ಹಚ್ಚಿಕೊಂಡು ನೀರ, ಊಟ ಬಿಟ್ಟು ಹಾಸಿಗೆ ಹಿಡಿದವಳು ಬೆಳಿಗ್ಗೆ ಹೋದಳು' ಎನುತ ಸಂಗೀತಾ ಬಿಕ್ಕಳಿಸಿದಳು.
'ನೀರಾಗ ಹೋಮ ಮಾಡಿದಂಗಾಯ್ತಲ್ಲಗ...ಹೋಗ್ಲಿ ಆ ನನ್ನ ಬಾಡ್ಯಾಗೋಳ್ನ ಸುಮ್ನೆ ಯಾಕೆ ಬಿಟ್ಟೆ? ಬಿಡಬ್ಯಾಡ, ಮದಿವಿಗಿ ಖಂಡಾಪಟ್ಟಿ ಖರ್ಚ ಮಾಡಿದಿರಿ, ಇದರ ಖರ್ಚ ಕೊಡಬೇಕಂತ ಹೇಳ. ಇಲ್ಲದಿರ ಪೋಲಿಷ ಕಂಪ್ಲೀಟ ಕೊಡೊನು. ಯಾರ ಅವರ ಹೀರೇರ ಅದಾರಿಲ್ಲ...' ದಬಾಯಿಸಿ ಕೇಳಿದಳು ಶೀನಿಂಗವ್ವ. ಅವಳಿಗಿ ಕೆಂಡಾಮಂಡಲ ಸಿಟ್ಟ ಬಂದಿತ್ತು.
'ಎನ ಖರ್ಚ ತಗೊಂಡ ಎನ ಮಾಡತಿ... ನಮ್ಮ ನಸೀಬ ಖೊಟ್ಟಿ ಇರಬೇಕಾದ್ರ...'
'ಯಾಕಾ... ಹಂಗ್ಯಾಕ ಅನತಿ? ಅವರ ಮಾಡಿದ್ದ ಆಟಾ, ಹೇಳಿದ್ದ ಮಾತೇನು...? ನೀ ಸುಮ್ನಿದ್ದರು ನಾ ಬಿಡಾಂಗಿಲ್ಲ ಅವರನ್ನ' ಅಂತ ಕೋಪದಿಂದ ಕೂಗಾಡಿದಳು.
'ಬ್ಯಾಡ ಸುಮ್ನಿರವ್ವ ಅದೆಲ್ಲಾ ಮುಗದ ಕತಿ. ನೋವಿನಮ್ಯಾಲ ಯಾಕ ಬರಿ ಹಾಕೊಬೇಕು, ಬಿಟ್ಟ ಬಿಡ ಅದನ...' ಸಂಗೀತಾ ವಿಶಾದದಿಂದ ನುಡಿದಳು.
'ಎನ ಹುಚ್ಚ ಅದಿ ನೀ... ತಲಿ ಸುದ್ದ್ಯಾಗೈತಿಲ್ಲ... ಆ ಬಾಡ್ಯಾನ ಕೈ ಕಾಲ ಮುರದ ತರಬೇಕಿತ್ತ. ಗಂಡ ದಿಕ್ಕಿಲ್ಲದ ಮನಿ ಅಂತ ಆಟಾ ಆಡಾತಾರ ಹುಚ್ಚ ನನ್ನ ಹಾಂಟ್ಯಾಗೋಳ. ಅವರ ಮನಿ ತೋರಿಸ ನಡಿ, ನಾ ಮಾತಾಡತೇನ ಅವರ ಜೋಡ' ಅಂತ ಮತ್ತ ಗರ್ಜಿಸಿದಳು ಶೀನಿಂಗವ್ವ.
'ಬ್ಯಾಡ ಅಂದ್ರ ಯಾಕ ಕೇಳವಲ್ಲಿ ನೀ...ಹೋಗ್ಲಿ ಬಿಡವಾ' ಅಂತ ಸಂಗೀತಾ ಸಮಜಾಯಿಸಿದಳು. ಆದರೆ ಶೀನಿಂಗವ್ವ ಅವಳ ಮಾತನ್ನು ಕೇಳುವ ತಾಳ್ಮೆಯಲ್ಲಿ ಇರಲಿಲ್ಲ.
'ಎಳ ನಡಿ ಅವರ ಮನಿ ತೋರಿಸ ನಡಿ ಸಾಕ ನಾ ಮತಾಡತೇನ' ಅಂತ ಆತುರ ಮಾಡಿದಾಗ ಸಂಗೀತಾ ಕ್ಷೀಣಳಾದಳು.
'ಅವ ಓಡಿಹೋಗಿ ಮದುವೆಯಾದದ್ದು ಬೇರೆ ಯಾರನ್ನು ಅಲ್ಲ, ನಿನ್ನನ್ನೆ...ಹ್ಯಾಂಗ ದುಡ್ಡ ಕೇಳಲಿ ಹೇಳು? ರೊಕ್ಕಾ ಹೆಂಗ ಕೇಳಾಕ ಬರತೈತಿ?' ಅಂದಳು. ಕಿವಿಯೊಳಗ ಕಾದ ಕಬ್ಬಿನಾ ಚುಚ್ಚಿದಂಗಾಯ್ತು, ಎದಿಗಿ ಝಾಡಿಸಿ ಒದ್ದಂಗಾಯ್ತು. ಅಧೀರಳಾದ ಶೀನಿಂಗವ್ವ ಹಿಂದಕ್ಕ ಸರಿದಳು. ಬಾಗಿಲ ದಾಟಿ ಅಂಗಳಕ ಬಂದಳು. ಹೊರಗ ಮಳಿ ಹಿಡದಿತ್ತು. ಒಳಗಡಿ ಸಂಗೀತಾ ಬಿಕ್ಕುತಿದ್ದಳು. ಇನ್ನು ಜೋರ ಬರತೀನಿ ಅಂತ ಮುಗಿಲ ಮಿಂಚು ಮುಂದೆ ಬಿಟ್ಟು ಗಡಗಡ ಸದ್ದು ಮಾಡಿತು...

- ಬಸವಣ್ಣೆಪ್ಪ ಪ.ಕಂಬಾರ
ganeshkambar@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.