ಭಾಷಾ ಕಲಿಕೆ ಪ್ರಯೋಗ
ಸ್ವತಃ ಜಿಲ್ಲಾಧಿಕಾರಿಯವರೇ ನಮ್ಮ ಮನೆಗೆ ಬಂದಿದ್ದರು. 'ಇಲ್ಲಿಗೆ ಬಂದು ಎರಡು ವರ್ಷಗಳ ಮೇಲಾಯ್ತು. ನಿಮ್ಮಂಥವರೊಬ್ಬರು ಇಲ್ಲೇ ಇದ್ದಾರೆಂದು ನನಗೆ ಗೊತ್ತಾದುದೇ ನಿನ್ನೆ ಸಂಜೆ- ರಾಜ್ಯ ಗೃಹಮಂತ್ರಿ ಅವರಿಂದ ಫೋನ್ ಬಂದ ಮೇಲೆ' ಎಂದರು ಮುಗುಳ್ನಗುತ್ತ.
ಸುಮ್ಮನೆ ನಾನೂ ಮುಗುಳ್ನಗೆ ಬೀರಿದೆ. ಹೆಚ್ಚಿಗೆ ಏನು ಹೇಳಲು ಸಾಧ್ಯವಿತ್ತು ಆಗ ನನಗೆ?
ಜರ್ಮನಿಯಲ್ಲಿ ಎಂಜಿನಿಯರ್ ಆಗಿರುವ ನಮ್ಮ ಮಗ ಈ ಬಗ್ಗೆ ಮೊದಲೇ ನನಗೆ ಹೇಳಿದ್ದ-
'ಬಹುಶಃ ಜಿಲ್ಲಾಧಿಕಾರಿಯವರೇ ಮನೆಗೆ ಬರಬಹುದು. ದೆಹಲಿ ವಿಮಾನಯಾನದ ವ್ಯವಸ್ಥೆ ಬಗ್ಗೆ ಅವರೇ ತಿಳಿಸುತ್ತಾರೆ' ಎಂದಿದ್ದ ಫೋನಿನಲ್ಲಿ.
ಹಾಗೇ ಆಯ್ತು. ಜಿಲ್ಲಾಧಿಕಾರಿ ಹೇಳಿದರು- 'ನಿಮ್ಮ ವಿಮಾನಯಾನದ ವ್ಯವಸ್ಥೆ ಆಗಿದೆ. ನಾಳೆ ಸಾಯಂಕಾಲ ಟಿಕೀಟು ಹಾಗೂ ಕಾರು ಕಳಿಸುತ್ತೇನೆ. ತಯಾರಾಗಿರಿ'.
ತಯಾರಾದೆ.
ದೆಹಲಿಗೆ ಹೋದ ಮೇಲೆ ಪೂರ್ವಯೋಜನೆಯಂತೆ ರಾಷ್ಟ್ರೀಯ ಪ್ರಯೋಗಾಲಯದವರೇ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಕಾರು ಕಳಿಸಿದ್ದರು. ಅದ್ದೂರಿ ಸ್ವಾಗತ ದೊರೆಯಿತು.
ಪ್ರಯೋಗಾಲಯದಲ್ಲೇ ನನಗೆ ಇಳಿದುಕೊಳ್ಳಲು ವ್ಯವಸ್ಥೆ ಆಗಿತ್ತು. ಡಾ. ಮೋಂಟೆಗೋ ಅವರು ಎರಡು ದಿನ ಮುಂಚೆಯೇ ಅಲ್ಲಿಗೆ ಬಂದು ತಮ್ಮ ತಯಾರಿಯಲ್ಲಿದ್ದರು. ನನ್ನ ರೂಮಿಗೆ ಬಂದು ಭೇಟಿಯಾಗಿ 'ವಿಶ್ರಾಂತಿ ತೆಗೆದುಕೊಳ್ಳಿ. ನಾಳೆ ಬೆಳಗ್ಗೆ ಒಂಬತ್ತು ಗಂಟೆಗೆ ತಯಾರಾಗಿರಿ. ನಮ್ಮ ಸರಾಯಕ ನಿಮ್ಮನ್ನು ಕರೆಯಲು ಬರುತ್ತಾನೆ' ಎಂದು ಹೇಳಿ ಹೋದರು.
ಅವರು ಮಾತಾಡಿದ್ದು ಹೀಗೆಯೇ ಶುದ್ಧ ಕನ್ನಡದಲ್ಲಿ! ಮೂಲತಃ ಅವರು ಜರ್ಮನ್ನಿನವರು!
ಬಹುಶಃ ನನ್ನಲ್ಲಿ ಒಂದು ಬಗೆಯ ಆತ್ಮವಿಶ್ವಾಸ ಹುಟ್ಟಲೆಂದು ಅವರು ಶುದ್ಧ-ಸ್ವಚ್ಛ ಕನ್ನಡದಲ್ಲಿ ಮಾತನಾಡಿರಬಹುದೆಂದು ನನ್ನ ಅಂದಾಜು. ಅವರ ಹಾಗೆಯೇ ನಾನೂ ಶುದ್ಧ-ಸ್ವಚ್ಛ ಜರ್ಮನಿ ಭಾಷೆ ಕಲಿಯಲೆಂಬುದು ಅವರ ಅಪೇಕ್ಷೆಯಾಗಿದ್ದಿರಬಹುದು.
ಜರ್ಮನಿಗೆ ನಾನು ಹೋಗುವುದಿತ್ತು- ಜೂನ್ ತಿಂಗಳಲ್ಲಿ ಮಗ, ಸೊಸೆ ಹಾಗೂ ನಾಲ್ಕು ತಿಂಗಳು ತುಂಬಿದ ನಮ್ಮ ಮೊಮ್ಮಗ ಅನಂತ ಅಲ್ಲಿದ್ದಾರೆ. ಅವರನ್ನು ಕಾಣುವ, ಅವರ ಕೂಡ ಉರುವ ತವಕ ನಮಗೆ- ಅಂದರೆ ನನಗೆ ಹಾಗೂ ನನ್ನವಳಿಗೆ. ಜರ್ಮನಿ ಕಲಿಯುವುದು ಅನಿವಾರ್ಯ ಎಂಬುದು ನನ್ನ ಅಭಿಪ್ರಾಯ, ಅಭಿಲಾಷೆ ಕೂಡ. ಆಕಸ್ಮಿಕವಾಗಿ ಬಂದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ನನ್ನ ಸ್ವಬಾವ. ಮಗನಿಗೆ ಸಮ್ಮತಿ ಸೂಚಿಸಿದ್ದೆ. ಮುಂದಿನದನೆಲ್ಲ ಅವನೇ ಏರ್ಪಾಡು ಮಾಡಿದ್ದ.
ಡಾ. ಮೋಂಟೆಗೋ ಮತ್ತು ನಮ್ಮ ಮಗ ಕೋಲೋನ್ನಿನಲ್ಲೇ ಅಕ್ಕಪಕ್ಕದ ಮನೆಗಳಲ್ಲಿದ್ದವರು. ಜರ್ಮನಿ ಭಾಷಾ ಕಲಿಕೆಯ ಕುರಿತು ನೀವು ಬೇರೆ ಯಾರನ್ನೂ ಹುಡುಕುವ ಅಗತ್ಯವಿಲ್ಲ. ನಮ್ಮ ತಂದೆಯವರಿಗೇ ಈಗ ಜರ್ಮನ್ ಕಲಿಯುವುದು ಬೇಕಾಗಿದೆ. ಅವರು ನಿಮ್ಮ ಪ್ರಯೋಗಕ್ಕೆ ಖಂಡಿತಾ ಸಿದ್ಧರಾಗುತ್ತಾರೆ ಎಂದು ನಮ್ಮ ಮಗ ಆಶ್ವಾಸನೆ ಕೊಟ್ಟಿದ್ದನಂತೆ. ನಾನೂ ಹೂಂ ಅಂದಿದ್ದೆ.
ಮುಂದಿನ ಕಾರ್ಯಾಚರಣೆಗಳೆಲ್ಲವೂ ಯಥಾಪ್ರಕಾರ ನಡೆದು ಹೋಗಿದ್ದವು. ಅವರು ನಮ್ಮ ಕೇಂದ್ರ ಸರ್ಕಾರಕ್ಕೆ, ಕೇಂದ್ರ ಸರ್ಕಾರದವರು ರಾಜ್ಯ ಸರ್ಕಾರಕ್ಕೆ, ಅವರು ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಭಾಷಾ ಕಲಿಕೆಯ ಪ್ರಯೋಗಕ್ಕೆ ನನ್ನನ್ನು ಸಿದ್ಧಗೊಳಿಸಿದ್ದರು.
ಮರುದಿವಸ ಒಂಬತ್ತು ಗಂಟೆಗೆ ತಯಾರಾಗಿ ಕುಳಿತಿದ್ದೆ. ಕರೆಯಲು ಬಂದರು. ಹೊರಟೆ. ಉಪಕರಣಗಳೆಲ್ಲವೂ ಸಜ್ಜಾಗಿದ್ದವು. ನನ್ನ ಬರುವಿಕೆಗಾಗಿಯೇ ದಾರಿ ಕಾಯುತ್ತಿದ್ದವು. ಎರಡು ತಾಸಿನ ಕಾರ್ಯಕ್ರಮವದು.
ಸುಷುಪ್ತಿ ಅವಸ್ಥೆಯಲ್ಲಿ ನನ್ನ ಮಿದುಳಿನಲ್ಲಿ ಜರ್ಮನ್ ಭಾಷಾ ಕಲಿಕೆಯ ದತ್ತಾಂಶ-ತಂತ್ರಾಂಶಗಳನ್ನು ತುಂಬುವವರು. ಡಾ. ಮೋಂಡೆಗೋ ಹಾಗೂ ಅವರ ನಾಲ್ವರು ಸದಸ್ಯರ ತಂಡ ನನ್ನ ಸುತ್ತಲೂ ಕಾರ್ಯಾಚರಣೆಗಾಗಿ ನಿಂತಿದ್ದರು.
ಕ್ರಮೇಣ ನಿದ್ದೆಗೆ ಜಾರಿದೆ. ಎಚ್ಚರವಾದಾಗಲೂ ಅವರೆಲ್ಲಾ ಅಲ್ಲೇ ಇದ್ದರು! ನಾನು ನುಡಿದ ಮೊದಲ ವಾಕ್ಯ- ಡಾ. ಮೋಂಟೆಗೋ ಅವರನ್ನು ನೋಡುತ್ತ- 'ವೀ ಗೇಟ್ಸ್ ಬರೂದರ್?' ಅಂದರೆ 'ಹೌ ಆರ್ ಯೂ ಬ್ರದರ್?' ಹೇಗಿದ್ದೀರಿ ಅಣ್ಣಾ?
ಜರ್ಮನಿಯ ಯಾವ ಶಬ್ದವೂ ಗೊತ್ತಿರದ ನಾನು ಜರ್ಮನಿಯಲ್ಲಿ ಮಾತಾಡಲು ಆರಂಭಿಸಿಬಿಟ್ಟೆ. ಬಹುಶಃ ಡಾ. ಮೋಂಟೆಗೋ ಅವರ ಹೃದಯ ತುಂಬಿಬಂದಿರಬಹುದು- ತಮ್ಮ ಪ್ರಯೋಗದ ಸಾಫಲ್ಯಕ್ಕಾಗಿ ಹಾಗೂ ನಾನು 'ಅಣ್ಣಾ' ಎಂದು ಸಂಬೋಧಿಸಿದ್ದಕ್ಕಾಗಿ. ಕರವಸ್ತ್ರ ತೆಗೆದು ಕಂಬನಿಯನ್ನು ಒರೆಸಿಕೊಂಡರು. ನಂತರ ನನಗೆ ತಿಳಿದುಬಂದ ವಿಷಯ: ನಮ್ಮ ದೇಶದ ಹನ್ನೆರಡು ಪ್ರಮುಖ ಪ್ರಾದೇಶಿಕ ಭಾಷೆಗಳ ತಂತ್ರಾಂಶಗಳನ್ನು ಈ ಕಲಿಕಾ ಕಾರ್ಯಕ್ರಮದಡಿ ಸಿದ್ಧಪಡಿಸಿಟ್ಟುಕೊಂಡಿದ್ದಾರಂತೆ. ಕನ್ನಡ ತಂತ್ರಾಂಶಕ್ಕೆ ನಮ್ಮ ಮಗನ ಕೊಡುಗೆಯದೇ ಸಿಂಹಪಾಲು ಅಂತೆ. ಕನ್ನಡ ಮಾಧ್ಯಮದಲ್ಲೇ ಅವನಿಗೆ ಪ್ರಾಧಮಿಕ ಶಿಕ್ಷಣ ಕೊಡಿಸಿದ್ದು ಸಾರ್ಥಕವಾಯಿತು ಎಂದುಕೊಂಡೆ.
ನಮ್ಮ ಮಗನ ಸೂಚನೆಯ ಮೇರೆಗೇ ನನ್ನ ಮೇಲೆ ನಡೆದದ್ದು ಮೊದಲ ಪ್ರಯೋಗ. ಉಳಿದ ಹನ್ನೊಂದು ಭಾಷೆಗಳ ಪ್ರಯೋಗಕ್ಕಾಗಿ ಅವರು ಸೂಕ್ತ ವ್ಯಕ್ತಿಗಳನ್ನು ಶೋಧಿಸುತ್ತಿದ್ದಾರಂತೆ.
2013ರ ಏಪ್ರಿಲ್ನಲ್ಲಿ ನನ್ನ ಮೇಲೆ ನಡೆದ ಈ ಪ್ರಯೋಗದ ಕುರಿತು ವರದಿಯನ್ನು ಸಿದ್ಧಪಡಿಸಿ ಪೂರ್ವಯೋಜನೆಯಂತೆ ನಮ್ಮ ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಿದೆ. ಇದಿಷ್ಟು ಇತಿಸಾಸ- ಹತ್ತು ವರ್ಷಗಳ ಹಿಂದಿನದು. ಈಗ ಅವಶ್ಯವಿರುವವರೆಲ್ಲ ಕನ್ನಡವನ್ನಷ್ಟೇ ಏಕೆ, ಇತರ ಭಾಷೆಗಳನ್ನೂ ಈ ಯೋಜನೆಯಡಿ ಕಲಿತು ಭಾಷಾ ಸಮಸ್ಯೆಯನ್ನು ಹೇಳಹೆಸರಿಲ್ಲದಂತೆ ಮಾಡಿಬಿಟ್ಟಿದ್ದಾರೆ. ಭಾಷಾವಾರು ರಾಜ್ಯ ರಚನೆಯೆಂಬುದು ಮೂಲ ಅರ್ಥ ಕಳೆದುಕೊಂಡು ಮೂಲೆಗುಂಪಾಗಿದೆ. ಇಡೀ ಭಾರತವೇ 'ಒಂದು' ಆಗಿದೆ. ರಾಜ್ಯಗಳೀಗ ಬರೀ ಆಡಳಿತಾತ್ಮಕ ಅನುಕೂಲತೆಗಾಗಿ ಮಾತ್ರ!
- ಹ.ಶಿ.ಭೈರನಟ್ಟಿ
8762102715
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

