ನಾದ ಹೊಸತು
ಸುಗುಣ ಮತ್ತು ನಿರ್ಗುಣ ಉಪಾಸನೆ
ಒಂದು ಚಲನಚಿತ್ರದಲ್ಲಿ ತುಂಬ ದುಃಖದ ಸನ್ನಿವೇಶ ನಡೆಯುತ್ತಿರುತ್ತದೆ. ನಾಯಕಿ ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾಳೆ... ಹಿನ್ನೆಲೆಯಲ್ಲಿ ಕೀ ಬೋರ್ಡ್ನಲ್ಲೋ, ವಯೋಲಿನ್ನಲ್ಲೋ ದುಃಖದ ರಾಗ ನುಡಿಸುವ ಬದಲು ಯಾವುದಾದರೂ ಒಳ್ಳೆ ಟಪೋರಿ ಹಾಡಿನಂಥ ಸಂಗೀತ ಬಂದುಬಿಟ್ಟರೆ ಹೇಗಿರುತ್ತೆ?
ಆ ದುಃಖದ ನಟನೆ, ಸನ್ನಿವೇಶ ಯಾವುದೂ ಮನಸ್ಸಿಗೆ ತಟ್ಟುವುದೇ ಇಲ್ಲ! ಬುದ್ಧಿಗೇನೋ ಅರ್ಥವಾಗಬಹುದು- ಓಹ್ ಇದು ದುಖದ ಸನ್ನಿವೇಶ ಅಂತ ಆದರೆ ನಾವೂ ದುಃಖದಲ್ಲಿ ಭಾಗವಹಿಸಬೇಕಾದರೆ, ನಮ್ಮ ಹೃದಯದಲ್ಲಿ ಭಾವನೆಗಳು ಹೊಮ್ಮಬೇಕಾದರೆ 'ಸೌಂಡ್ ಇಫೆಕ್ಟ್' ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ನಾವು ಧಾರಾವಹಿಯನ್ನೋ, ಚಲನಚಿತ್ರವನ್ನೋ ಟಿವಿಯಲ್ಲಿ ನೋಡುವಾಗಲೂ ಧ್ವನಿಯನ್ನು ಮ್ಯೂಟ್ ಮಾಡಿದರೆ ಅದರ ಪರಿಣಾಮ ಆಗುವುದೇ ಇಲ್ಲ! ಸಿನಿಮಾ ನೃತ್ಯ ನಡೆದಾಗ ಮ್ಯೂಟ್ ಮಾಡಿದರಂತೂ ಇವರೇಕೆ ಹೀಗೆ ಹುಚ್ಚು ಹುಚ್ಚಾಗಿ ಕೈ-ಕಾಲು ಆಡಿಸುತ್ತಿದ್ದಾರೆ ಎನಿಸುತ್ತದೆ!
ಅಷ್ಟು ಆಳವಾಗಿ ನಾದಕ್ಕೂ - ಭಾವನೆಗಳಿಗೂ ನೇರವಾದ ಸಂಬಂಧವಿದೆ. ಒಬ್ಬ ಪ್ರವಚನಗಾರನಾದರೂ ಉತ್ತಮ ವಾಗ್ಮಿ ಎನ್ನಿಸಿಕೊಳ್ಳಬೇಕಾದರೆ ಆತನ ಧ್ವನಿಯಲ್ಲಿ ಏರಿಳಿತ, ಸ್ವರ ಮಾಧುರ್ಯ ಅಡಕವಾಗಿರುತ್ತದೆ. ಆಗ ಮಾತ್ರ ಆ ಮಾತು ಭಾವವನ್ನು ತೀವ್ರವಾಗಿ ಬಡಿದೆಬ್ಬಿಸಬಲ್ಲದು.
ನಾದದ ಈ ಮಹತ್ವವನ್ನು ಅರಿತೇ ನಮ್ಮ ದೇಶದ ಮಹಾನ್ ಮಹಾನ್ ಸಂತರೂ, ದಾಸರೂ, ಭಕ್ತಿ ಪಂಥದ ಹರಿಕಾರರು ಶಬ್ದಾರ್ಥವನ್ನು ಹೃದಯಕ್ಕೆ ತಲುಪಿಸಲು ಭಕ್ತಿ ಸಂಗೀತವನ್ನು ಬಹಳ ಅರ್ಥಪೂರ್ಣವಾಗಿ ಬಳಸಿಕೊಂಡರು. ಭಜನ, ಕೀರ್ತನ, ಅಭಂಗ, ದೇವರನಾಮ, ಗಮಕ, ದಾಸರಪದಗಳು ಇತ್ಯಾದಿ ಗಾಯನ ಪ್ರಕಾರಗಳಿಂದ ಸಾಹಿತ್ಯದ ಭಾವವನ್ನು ಸ್ವರಗಳ ಬಟ್ಟಲಲ್ಲಿ ತುಂಬಿ ರಸಾಮೃತವನ್ನು ಉಣಬಡಿಸಿದರು.
ಹೀಗೆ ಭಜನೆ- ಕೀರ್ತನೆಗಳಲ್ಲಿ ಸಾಹಿತ್ಯದ ಭಾವವನ್ನು ಹೆಚ್ಚಿಸಲು ಸಂಗೀತದ ಬಳಕೆಯಾಗಿ, ಸಾಮಾನ್ಯ ಕೇಳುಗನಿಗೆ ಅಥವಾ ಪ್ರಥಮ ಹಂತದಲ್ಲಿ, ಸುಲಭವಾಗಿ ಅರ್ಥವಾಗುವುದರಿಂದ ಹೆಚ್ಚು ಪ್ರಭಾವ ಭೀರಿ ಕ್ರಮೇಣ ಶಾಸ್ತ್ರೀಯ ಸಂಗೀತದೆಡೆಗೆ ಅದು ಕೇಳುಗನನ್ನು ಸೆಳೆಯುತ್ತದೆ. ಏಕೆಂದರೆ ಅಲ್ಲಿ ಸ್ವರಸಮೂಹದ ಭಾವನೆಯನ್ನು ವ್ಯಕ್ತಪಡಿಸಲು ಸಾಹಿತ್ಯದ ಸಹಾಯವಿರುತ್ತದೆ. ಆದರೆ ಶಾಸ್ತ್ರೀಯ ಸಂಗೀತದಲ್ಲಿ ಸ್ವರಗಳ ಭಾವವನ್ನು ಸ್ವರಗಳೊಳಗೆ ಮುಳುಗಿಯೇ ತಿಳಿಯಬಲ್ಲ ಸೂಕ್ಷ್ಮತೆ ಕೇಳುಗನಿಗೂ, ಹಾಡುವವನಿಗೂ ಇಬ್ಬರಿಗೂ ಇರಬೇಕಾಗುತ್ತದೆ. ಭಜನೆ ಕೀರ್ತನೆಗಳು ನಾದಬ್ರಹ್ಮನ ಸಗುಣ ಉಪಾಸನೆಯಾದರೆ ಶಾಸ್ತ್ರೀಯ ಸಂಗೀತ ನಿರ್ಗುಣ ಉಪಾಸನೆ.
ಹೀಗಾಗಿಯೇ ಗ್ವಾಲಿಯರ್ ಘರಾಣೆಯಲ್ಲಿ ಶಾಸ್ತ್ರೀಯ ಸಂಗೀತ ಕಲಿಯಲು ಹೋದರೆ ಮೊದಲು ಕೀರ್ತನೆ ಕಲಿಸುತ್ತಿದ್ದರು! ನಿರ್ಗುಣೋಪಾಸನೆಗೆ ಮೊದಲು ಸಗುಣೋಪಾಸನೆ ಹೆಚ್ಚು ಸುಲಭವಲ್ಲವೇ, ಹಾಗೆ... ಹೀಗಾಗಿ ಗ್ವಾಲಿಯರ್ ಘರಾಣೆಯ ಎಷ್ಟೋ ಪ್ರಸಿದ್ಧ ಮುಸಲ್ಮಾನ್ ಗಾಯಕರೂ ಒಳ್ಳೆಯ ಕೀರ್ತನಕಾರರಾಗಿದ್ದರು!!
-ಶ್ರುತಿ ಭಟ್
shrutikbhat@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

