ಸಾಪ್ತಾಹಿಕಪ್ರಭ

ಕಲಾ ಕಿರೀಟ

ಕಲಾ ಕಿರೀಟ
Published On :

ಕಲಾಮಾಧ್ಯಮದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಕಲಾವಿದರನ್ನು ಗುರುತಿಸಿ, ಸತ್ಕರಿಸಿ ಅವರಿಗೆ 'ಕಲಾಧ್ಯಾನ್‌' ಬಿರುದನ್ನಿತ್ತು ಗೌರವಿಸುವ ಕಾರ್ಯವನ್ನು 2004ರಲ್ಲಿ ಸ್ಥಾಪಿತವಾದ ಬೆಂಗಳೂರು ಆರ್ಟ್ ಫೌಂಡೇಶನ್ ನಡೆಸಿಕೊಂಡುಬರುತ್ತಿದೆ.
ಅಂದಹಾಗೆ, ಈ ಗೌರವ 7ನೇಯದ್ದು. ಇಂದು (ಏ.7) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಸಂಜೆ 7ಕ್ಕೆ ನಾಡಿನ ಹಿರಿಯ ಕಲಾವಿದರಾದ ಜೆ.ಎಂ.ಎಸ್. ಮಣಿ ಮತ್ತು ಕೆ.ಕೆ. ಮಕಾಳಿ ಅವರಿಗೆ ಈ ಬಾರಿಯ 'ಕಲಾಧ್ಯಾನ್‌' ಪುರಸ್ಕಾರ ನೀಡಲಾಗುತ್ತಿದೆ. ಕಲಾವಿದ ಚಂದ್ರಕಾಂತ್ ಕುಸನೂರು, ರಂಗಚಿಂತಕ ವಿಜಯಾ, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್ ಮತ್ತು ನಾಟಕಕಾರ ಕೆ.ವೈ.  ನಾರಾಯಣಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.
ಈ ಕಾರ್ಯಕ್ರಮದ ಜೊತೆಗೆ ಬೆಳಗ್ಗೆ 10ಕ್ಕೆ ನಾಡಿನ 25 ಹೆಸರಾಂತ ಕಲಾವಿದರಿಂದ ಕಲಾಶಿಬಿರವನ್ನೂ ಏರ್ಪಡಿಸಲಾಗಿದೆ. ಧಾರವಾಡ ಸರ್ಕಾರಿ ಕಲಾ ಮಹಾವಿದ್ಯಾಲಯದ ಎನ್.ಎಂ. ದಾಟನಾಳ್, ಲಲಿತ ಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಕೆ. ಸುಧೀಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಸಂಜೆ 6ಕ್ಕೆ ಚಿಂತಾಮಣಿ ಮುನಿರೆಡ್ಡಿ ಮತ್ತು ಗೆಳೆಯರಿಂದ ದೇಸಿ ಹಾಡುಗಳು ಕಲಾ ರಸಿಕರನ್ನು ರಂಜಿಸಲಿವೆ. ಈ ಸಂಸ್ಥೆಯ ಅಧ್ಯಕ್ಷರಾದ ಕೃಷ್ಣ ರಾಯಚೂರು ಮತ್ತು ಕಾರ್ಯದರ್ಶಿ ಓ. ವೆಂಕಟೇಶ್ ಶ್ರಮ ಸಾರ್ಥಕವಾಗಲಿ ಎಂಬುದು ಕಲಾವಿದರ ಅಂಬೋಣ.
ಜೆ.ಎಂ.ಎಸ್. ಮಣಿ
ಮಣಿ ನಾಡಿನ ಪ್ರಮುಖ ಕಲಾವಿದರು. ವಿದ್ಯಾಭ್ಯಾಸ ಮಾಡಿದ ಗುರುಕುಲ ಮಾದರಿ ಶಾಲೆ ಎಂದೇ ಖ್ಯಾತವಾದ ಕೆನ್ ಕಲಾ ಶಾಲೆಯಲ್ಲಿ ಕಲಾಗುರು ಆರ್.ಎಂ. ಹಡಪದ್‌ರಲ್ಲಿ ವ್ಯಾಸಂಗ ಮಾಡಿ ಅಲ್ಲೇ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. ಈಗ ನಿವೃತ್ತ ಜೀವನದಲ್ಲಿದ್ದರೂ ಕಲಾರಂಗದಲ್ಲಿ ನಿವೃತ್ತಿ ಬಯಸದೇ ತಮ್ಮ ಅದಮ್ಯ ಕನಸುಗಳನ್ನು ಸಾಕಾರಗೊಳಿಸುವಲ್ಲಿ ನಿರತರಾಗಿದ್ದಾರೆ. ಮೂರು ಬಾರಿ ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಲ್ಲದೆ ರಾಜ್ಯ ಹಾಗೂ ರಾಷ್ಟ್ರ ಕಲಾಶಿಬಿರಗಳಲ್ಲಿ ಕಲಾರಸಿಕರನ್ನು ತಣಿಸುವಂಥ ಚಿತ್ರಗಳನ್ನು ತೆರೆದಿಟ್ಟವರು. ಇವರ ಕೃತಿಗಳು ಹೊರ ರಾಷ್ಟ್ರಗಳಲ್ಲಿ ಪ್ರದರ್ಶನಗೊಂಡು ಹೊರನಾಡ ರಸಿಕರ ಸಂಗ್ರಹದಲ್ಲಿ ಚಿರಸ್ಥಾಯಿಯಾಗಿ ಪ್ರದರ್ಶನಗೊಳ್ಳುತ್ತಿವೆ.
ಕೆ.ಕೆ. ಮಕಾಳಿ
ಕೊರಟಿ ಗ್ರಾಮದಿಂದ ಬಂದು ಧಾರವಾಡದಲ್ಲಿ ಆರ್ಟ್ ಮಾಸ್ಟರ್ ಮುಗಿಸಿ ನಾಡಿನೆಲ್ಲರ ಗಮನ ಸೆಳೆದವರು. ಗ್ರಾಮೀಣ ಬದುಕು ಮತ್ತು ದೃಶ್ಯಗಳನ್ನು ವರ್ಣರಂಜಿತವಾಗಿ ಹಿಡಿದಿಡಬಲ್ಲ ಬಣ್ಣದ ಹೊಡೆತ ಮತ್ತು ಖಚಿತವಾದ ಭಾಷ್ಯ ಬರೆವ ಕಲಾವಿದರು. ಹಿಂದೂಸ್ಥಾನ್ ಟೈಮ್ಸ್‌ರವರ ರಾಷ್ಟ್ರಮಟ್ಟದ ವ್ಯಂಗ್ಯ ಭಾವಚಿತ್ರಕ್ಕೆ ಬಹುಮಾನ ಪಡೆದಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ 'ಅತ್ಯುತ್ತಮ ಮುಖಪುಟ ವಿನ್ಯಾಸ' ಪ್ರಶಸ್ತಿಗೆ ಭಾಜನರು. 20 ಸಾವಿರಕ್ಕೂ ಅಧಿಕ ಮುಖಪುಟ ಚಿತ್ರ ರಚಿಸಿದ್ದಾರೆ. ನೂರಕ್ಕೂ ಅಧಿಕ ರಂಗನಜ್ಜಿಕೆಗೆ ಕಲಾ ಮೆರಗನ್ನು ಕೊಟ್ಟಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾ ಶಿಬಿರಗಳಲ್ಲಿ ಭಾಗವಹಿಸಿದ್ದಲ್ಲದೆ ಹಲವು ಪತ್ರಿಕೆಗಳಿಗೆ ರೇಖಾಚಿತ್ರಗಳನ್ನು ರಚಿಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಈಗವರು ಹಂಪೆಯ ಕನ್ನಡ ವಿವಿಯ ಮುಖ್ಯ ಕಲಾವಿದರು. ಇವರ ಕಲೆಯಷ್ಟೇ ಇವರ ಸ್ವಭಾವವೂ ಸಜ್ಜನಿಕೆಯ ದ್ಯೋತಕ.

 -ಸಂಕೇತ್ ಗುರುದತ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.